ಆರ್ದ ಮಳೆಯ ಆರ್ಭಟಕ್ಕೆ, ಅಂಗಳದ ತುಂಬೆಲ್ಲಾ ಹರಡಿ ಹಿಪ್ಪೆಯಾದ ಪಾರಿಜಾತ,ಹೆಂಚಿನ ಛಾವಣಿಯಿಂದ ಬೆಳ್ಳಿ ತಂತಿಯಂತೆ ಧೋ ಬೀಳೋ ಮಳೆಸಾಲು, ಪಡಸಾಲೆಯ ಮಧ್ಯದಲ್ಲಿ ನೀಲಾಂಜನ,ಅಲ್ಲೇ ಪಕ್ಕದಲ್ಲಿ ಉಸಿರು ಮರೆತು ಮಲಗಿದ ದೇಹ, ಗುಸುಗುಸು ಮಾತಿನೊಂದಿಗೆ ಅತ್ತಿಂದಿತ್ತ ಸುಳಿದಾಡುತ್ತಾ ಶವ ಸಂಸ್ಕಾರಕ್ಕೆ ತಯಾರಿಯಲ್ಲಿರುವ ಮನೆಯವರು. ಅಷ್ಟರಲ್ಲಿ ಮನೆಯ ಹಿರಿಯರೊಬ್ಬರು ನಿರ್ಧಾರದ ದನಿಯಲ್ಲಿ, ಏನೇ ಆಗಲಿ, ಶಂಕರಪ್ಪ ಕೊನೆಗಾಲದಲ್ಲಿ ಅಂತ ಖರೀದಿ ಮಾಡಿದ್ದ ಜಮೀನಲ್ಲೆ ಶವ ಸಂಸ್ಕಾರ ಮಾಡೋಣ, ಅವನ ಆತ್ಮಕ್ಕೂ ಶಾಂತಿ ಸಿಗತ್ತೆ ಅಂತ ಅನ್ನಿಸತ್ತೆ, ಏನಂತೀರಿ? ಅಂತ ಶಂಕರಪ್ಪನ ಮಗಳ ಮುಖವನ್ನ ಪ್ರಶ್ನಾರ್ಥಕವಾಗಿ ನೋಡಿದವರೆ ಉತ್ತರಕ್ಕೂ ಕಾಯದೆ ಮುಂದಿನ ತಯಾರಿಗೆ ಅಣಿಯಾಗೇಬಿಟ್ಟರು.
“ಬದುಕಿದ್ದಾಗ ಗೌರವಕ್ಕೆ ಅಪಾತ್ರರು ಎಂದನಿಸಿಕೊಂಡವರು, ಸತ್ತ ಮರುಕ್ಷಣವೇ ದೇವರೇನೊ ಎಂಬಂತೆ ಬಿಂಬಿತವಾಗಲು ಕಾರಣವೇ ಬೇಕಿಲ್ಲವೇನೊ?” ಎಂದುಕೊಂಡಿದ್ದು ಶಂಕರಪ್ಪನ ಮಗಳು ಕೋಮಲ. ಬಂದವರೆಲ್ಲಾ ಒಂದರೆಕ್ಷಣ ನಿಂತು,ಪಾದ ಮುಟ್ಟಿ ನಮಸ್ಕರಿಸಿ ಸರಿದು ನಿಂತರು. ಕೊನೆಯದಾಗಿ ಕರೆತಂದಿದ್ದು ಶಂಕ್ರಪ್ಪನ ಹೆಂಡತಿ ಜಲಜಮ್ಮನ್ನ. ಧು:ಖ, ನೋವು, ಸಂಕಟ ಇದ್ಯಾವುದೂ ಬಾಧಿಸದ ಒಂದು ನಿರ್ಲಿಪ್ತ ಸ್ಥಿತಿ ಆಕೆಯದು. ಲೋಕದ ಕಣ್ಣಿಗೆ ಮಾತ್ರ ಅತೀವ ನೋವನ್ನ ಅನುಭವಿಸುತ್ತಿರುವ ಗಂಡನ ಕಳೆದುಕೊಂಡ ಪತ್ನಿ.
ಚಟ್ಟದ ಮೇಲೆ ನಿಶ್ಚಲವಾಗಿ ಮಲಗಿರೋ ಗಂಡನ ಮುಖವನ್ನೊಮ್ಮೆ ನೋಡಿ, ನಿಡುಸುಯ್ದ ಬರೋಬ್ಬರಿ ಮೂವತ್ತು ವರುಷಗಳ ಕಾಲ ಗಂಡನೆಂಬ ಹಣೆಪಟ್ಟಿಗಷ್ಟೇ ಸೀಮಿತವಾಗಿ ತನ್ನಿಡೀ ಜೀವನವನ್ನ ನಿರರ್ಥಕವಾಗಿ ಕಳೆದ ಜೀವವೊಂದು ಶಾಶ್ವತವಾಗಿ ಮರೆಯಾಗ್ತಿದೆ. ಆದರೂ ಈ ಹೊತ್ತಲ್ಲಿ ತನ್ನ ಕಣ್ಣಿಂದ ಒಂದ್ ಹನಿ ಕಣ್ಣೀರು ಜಿನುಗುತ್ತಿಲ್ಲ ಅಂದರೆ….. ಮನಸ್ಸು ಕೊನೆಗೂ ಕಲ್ಲಾಗಿಹೋಯ್ತಾ ?! ಎಂಬ ಹತ್ತಾರು ಪ್ರಶ್ನೆಗಳ ನಡುವೆ ಜಲಜಮ್ಮ ಗಂಡನ ಪಾದಕ್ಕೆ ನಮಿಸಿ ಸೆರಗು ಹೊದ್ದು ಬದಿಗೆ ಸರಿದಳು. ಇದೆಲ್ಲವನ್ನ ಗಮನಿಸುತ್ತಿದ್ದ ಮಗಳು ಕೋಮಲ, ಅಮ್ಮನ ಕೈ ಹಿಡಿದು ನಿಧಾನಕ್ಕೆ ಮನೆಯ ಒಳಗೆ ಕರೆದೊಯ್ದಳು. ಕೆಲವೊಮ್ಮೆ ಕ್ಲಿಷ್ಟ ಸನ್ನಿವೇಶಗಳನ್ನ ಎದುರಿಸಲಾಗದಿದ್ದಲ್ಲಿ ಪಲಾಯನವಾದವನ್ನ ಪಾಲಿಸೋದು ಜಾಣತನ ಅಂತ ಕೋಮಲ ಅಂದುಕೊಳ್ಳುತ್ತಾ ಒಳನಡೆದಳು.
ದೂರದಲ್ಲಿ ಶವ ಸಂಸ್ಕಾರದ ಬೆಂಕಿಯ ಕೆನ್ನಾಲಗೆ ಕಣ್ಣಿಗೆ ರಾಚಿದ್ದೇ ತಡ, ದಡಬಡ ಸ್ನಾನ ಮಾಡಿ ಅಡುಗೆ ತಯಾರಿಗೆ ಸಿದ್ಧತೆ ಮಾಡ್ತಿರೋ ಮಾಯಿ, ಮತ್ತಾಕೆಯ ಮಕ್ಕಳು, ಮನೆಯವರು. ಸ್ವಲ್ಲ ಹೊತ್ತಲ್ಲೆ ಊಟ ಬಡಿಸಿದ್ದೇ ತಡ ಅದೆಷ್ಟೋ ದಿನಗಳಿಂದ ಉಪವಾಸ ಮಾಡಿದವರಂತೆ ಗಬಗಬನೆ ತಿನ್ನುವಾಗ ಕೋಮಲಗನ್ನಿಸಿದ್ದಿಷ್ಟೇ ; ಸಾವು ನೋವು ಸಂಕಟಕ್ಕಿಂತ ಒಂದ್ ಹೆಜ್ಜೆ ಮುಂದೆ ನಿಂತು ಕಾಡೊ ಹಸಿವು, ಮನುಷ್ಯನ ನಿಜವಾದ ಸೋಲು ಮತ್ತು ಸವಾಲು.
ರಾತ್ರಿಯ ನೀರವ ಮೌನ, ಮತ್ತೆ ರಚ್ಚೆ ಹಿಡಿದ ಮಳೆ, ಬೆಳಗಾಗೆದ್ದು ಅಸ್ಥಿ ಸಂಗ್ರಹಿಸಿ ತಂದು, ಗೋಕರ್ಣಕ್ಕೆ ಹೋಗಿ ಅರಬ್ಬೀ ಸಮುದ್ರದಲ್ಲಿ ವಿಸರ್ಜಿಸಿ ಬಂದರೆ ಅಲ್ಲಿಗೆ ಒಂಥರಾ ಕೆಲಸ ಮುಗಿದಂತೆ, ನಂತರ ಹೇಗೂ ಸಮಾರಾಧನೆ ಮುಗಿಸಿ ಈ ಮನೆಯಿಂದ ಹೊರಟುಬಿಟ್ಟರೆ ಈ ಎಲ್ಲಾ ಸಂಬಂಧಗಳಿಗೆ ಶಾಶ್ವತ ವಿದಾಯ ಹೇಳಬಹುದು, ಅಲ್ವಮ್ಮಾ ಅಂತ ಕೇಳಬೇಕೆಂದು ಕೋಮಲ ಜಲಜಮ್ಮನ್ನತ್ತ ಹೊರಳಿದರೆ ಅದಾಗಲೇ ನಿದ್ದೆಗೆ ಜಾರಿ ಬಿಟ್ಟಿದ್ದಳು. ಗುಡುಗು, ಮಿಂಚು, ಸಿಡಿಲಿನಾರ್ಭಟದಲ್ಲಿ ಕಣ್ಣಿಗೆ ನಿದ್ದೆ ಹತ್ತದ್ದರಿಂದ ಎದ್ದು ಬಂದು ಕಿಟಕಿ ಪಕ್ಕ ನೋಡುತ್ತಾ ನಿಂತವಳಿಗೆ ಅಪ್ಪನ ಕುರಿತಾದ ಯೋಚನೆಯೇ ಕಾಡಲಾರಂಭಿಸಿತ್ತು.
ಹುಟ್ಟಿದ್ದು ಹೆಣ್ಣು ಮಗು ಎಂದೋ, ಅಥವಾ ನಾ ಬದುಕೋದೆ ಹೀಗೆ ಎಂದೋ, ಒಟ್ಟಾರೆ ಜೀವನವಿಡಿ ಆದರ್ಶದ ಮಾತುಗಳನ್ನಾಡುತ್ತಾ, ಮೌಲ್ಯಗಳ ಪ್ರತಿಪಾದಿಸುತ್ತಾ ಹೆಂಡತಿ, ಮಗು, ಮನೆ, ಸಂಸಾರ ಎಂಬ ಯಾವ ಚೌಕಟ್ಟಿಗೂ ಸಿಕ್ಕದೆ, ಯಾರ ಪ್ರಶ್ನೆಗೂ ನಿಲುಕದೆ, ಬದುಕಿ ತೋರಿಸಿದ ಏಕೈಕ ವ್ಯಕ್ತಿ ಅಂದರೆ ಅದು ಮೇಲ್ಮನೆ ಶೇಷಪ್ಪನ ಮಗ ಶಂಕ್ರಪ್ಪ ಮಾತ್ರ. ಎತ್ತಿ ಆಡಿಸದೆ, ತೊದಲು ಮಾತಿಗೆ ಮರುಳಾಗದೆ, ನನ್ನದೆಂಬ ಒಂದಿನಿತೂ ಭಾವವಿಲ್ಲದೆ ಮಗುವಿನ ಅಪ್ಪನಾದ ಶಂಕ್ರಪ್ಪ ಹೆಂಡತಿ ಜಲಜನ ಪಾಲಿಗೆ ಅರ್ಥವಾಗದ ಒಗಟಾಗೇ ಉಳಿದುಬಿಟ್ಟ. ಅಂದು ಬಾಲ್ಯದ ದಿನಗಳಲ್ಲಿ ಇದೇ ಸಿಡಿಲ ಅಬ್ಬರಕ್ಕೆ ಬೆಚ್ಚಿ ಮಗಳು ಕೋಮಲ ಚಾವಡಿಯಲ್ಲಿ ಮಲಗಿದ್ದ ಅಪ್ಪನ ಓಡಿ ತಬ್ಬಿಕೊಂಡರೆ ಕೊಸರಿ, ಕೊರಡಂತೆ ಉಳಿದುಹೋದ ಆತ ತನ್ನ ಅಪ್ಪನೇನಾ ಅನ್ನಿಸಿದ್ದು ಅದೆಷ್ಟು ಬಾರಿ? ಮಲೆನಾಡಿನ ಜಡಿ ಮಳೆ, ಸೋರೊ ಹೆಂಚಿನ ಮಾಡು, ಭೀಕರ ಏಕಾಂತ, ಹಸಿವು, ಬಡತನ ಎಲ್ಲದರ ನಡುವೆ ಕಂಠ ಮಟ್ಟ ಶರಾಬು ಕುಡಿದು, ಪಡಸಾಲೆಯಲ್ಲಿ ಬಿದ್ದು ಎದ್ದು, ಅಲ್ಲೆ ಮೂತ್ರ ಮಾಡಿಕೊಂಡು, ಮೋಟು ಬೀಡಿಗೆ ತುಟಿ ತಾಗಿಸಿ ಕೂರಲು, ನಿಲ್ಲಲೂ ಆಗದೆ ಹೆಂಡತಿಗಾಗಿ ಕಣ್ಣುಹಾಯಿಸುವ ಅಪ್ಪನೆಂಬ ಆಕೃತಿ ಕೋಮಲಳ ಪಾಲಿಗೆ ಯಾವಾಗಲೂ ಅಗುಂತಕನೇ!
ಮುಂಜಾನೆದ್ದು ಬೆನ್ನಿಗೆ ಗೊರಬು ಹೇರಿಕೊಂಡು ಒಂದೇ ಸಮ ಮುಗಿಲ ಸೀಳಿ ಬಂದ ಪ್ರವಾಹ ಅನ್ನಿಸುವಂತ ಮಳೆಗೆ ಪಾದ, ಕಾಲ ಬೆರಳು, ಕೈ ಎಲ್ಲವೂ ಸೆಟೆದುಕೊಂಡು ದೇಹ ನಿರ್ಜೀವವಾಗಿದೆಯೇನೊ ಎಂಬಂತೆ ಮನೆಗೆ ಬಂದು ಉಸ್ಸಪ್ಪಾ ಅಂತ ಬಿಸಿ ನೀರಿಗೆ ಮೈಯೊಡ್ಡೊ ಜಲಜ ತನ್ನ ಬದುಕಿನ ದುರ್ಭರತೆಯನ್ನ ದೇವರ ಮುಂದೆ ನಿಂತು ಕೈ ಜೋಡಿಸಿ ಬೇಡುತ್ತಾಬಡಬಡಿಸುತ್ತಲೇ, ಕಲ್ಲಾದವಳು.
ಹೇಗಾದರೂ ಸರಿ, ಗಂಡನನ್ನ ದಾರಿಗೆ ತಂದು, ಮಗಳನ್ನ ಓದಿಸಿ, ಎದುರು ಮನೆ ಕನಕನ ತರ ನೆಮ್ಮದಿಯ ಉಸಿರು ಬಿಡಬೇಕು ಎಂದುಕೊಂಡು ಅದೆಷ್ಟು ಬಾರಿ ಘಟ್ಟದ ಮೇಲಿನ ಜ್ಯೋತಿಷಿಗಳ ಮನೆ ಬಾಗಿಲು ತಟ್ಟಿಲ್ಲ! ಅದ್ ಹೇಗೋ ಕೂಡಿಟ್ಟ ಪುಡಿಗಾಸು ಹರಕೆ, ಪೂಜೆ, ಮಂತ್ರ, ತಂತ್ರ ಮುಂತಾದ ನೆಪದಲ್ಲಿ ಅವಕಾಶವಾದಿಗಳ ಪಾಲಾಯ್ತೇ ವಿನಹ ಶಂಕ್ರಪ್ಪ ಸರಿದಾರಿಗೆ ಬರಲೇ ಇಲ್ಲ.
ಇದೆಲ್ಲವನ್ನ ತುಂಬಾ ಸೂಕ್ಶ್ಮವಾಗಿ ಗಮನಿಸುತ್ತಿದ್ದ ಮಗಳು ಕೋಮಲ ಚಿಕ್ಕಂದಿನಿಂದಲೇ ತುಂಬಾ ಒರಟಾಗಿ, ಹೇಗೆಂದರೆ ಹಾಗೆ ಬೆಳೆಯುತ್ತಾ ಹೋಗಿದ್ದು ಜಲಜಮ್ಮನ ಪಾಲಿಗೆ ನಿಭಾಯಿಸಲಾಗದ ಸನ್ನಿವೇಶವನ್ನ ತಂದಿಟ್ಟಿದ್ದು ಹಲವು ಬಾರಿ. ಅಪ್ಪನ ಭಯ ಇಲ್ಲದ ಮಕ್ಕಳು ಹೀಗೆ! ವಕ್ರ,ವಕ್ರ ! ಎಂದು ಜರೆದ ನೆರೆಹೊರೆಯವರ ಮುಂದೆ ತಲೆತಗ್ಗಿಸಿ ನಿಂತ ಮಗಳು ಬರುಬರುತ್ತಾ ಎಲ್ಲವನ್ನ ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ಬೆಳೆಯುತ್ತಾ ಹೋದಳು.
ಅಲ್ಲೊಂದು, ಇಲ್ಲೊಂದು ಮನೆಯಿರುವ ಮಲೆನಾಡಿನ ಹಳ್ಳಿಗಳಲ್ಲಿ ಬುಡ್ಡಿದೀಪ ಮರೆಯಾಗಿ ವಿದ್ಯುತ್ ಸಂಪರ್ಕ ಬಂದು ಮನೆಯೊಳ್ಗೆ ಹರಡೋ ಬೆಳಕಲ್ಲಿ ಕೋಮಲ ಅದೆಷ್ಟು ದೈರ್ಯ ತಂದುಕೊಂಡಳು. ಹಾದಿ ಬೀದಿಯ ಸುತ್ತ ಕಣ್ಣು ಹಾಯಿಸುವ ವಿಟರ ನಡುವೆ ಬದುಕಿ ತೋರಿಸಬೇಕೆಂದು ಅಮ್ಮ ಮಗಳು ಬಾಗಿಲ ಅಗಳಿಯನ್ನ ಅದೆಷ್ಟು ಬಾರಿ ಜಗ್ಗಿ ಜಗ್ಗಿ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು! ಇದೆಲ್ಲದರ ನಡುವೆ ಎರಡು ದಶಕಗಳೇ ಕಳೆದು ಹೋಯ್ತು. ಪಿತ್ರಾರ್ಜಿತದಿಂದ ಬಂದ ಪಾಲಿನ ಜಮೀನಿನಲ್ಲೆ ಅನ್ನ ಕಂಡುಕೊಂಡ ಜಲಜಮ್ಮ ಮಗಳ ಓದಿಗೆ ಅಂತ ಅದರಲ್ಲಿ ಒಂದಷ್ಟು ಭಾಗವನ್ನ ಮಾರಿ ಪಟ್ಟಣದ ಹೈಸ್ಕೂಲಿಗೆ ಸೇರಿಸಿ ಅಲ್ಲೇ ಹಾಸ್ಟೆಲ್ ಗೂ ಸೇರಿಸಿ ಜವಾಬ್ದಾರಿಯ ನೊಗವನ್ನ ಯೋಚಿಸಿಯೇ ಎತ್ತಿ ಹಿಡಿದಿದ್ದಳು. ಎಷ್ಟಾದರೂ ನಮಗಿಬ್ಬರಿಗೆ ನಾವಿಬ್ಬರೇ ಅಂತಿದ್ದ ಅಮ್ಮ ಮಗಳು, ದೂರವಿರೋ ಸಂಕಟವನ್ನ ಅನುಭವಿಸುತ್ತಲೇ ನಾಳಿನ ಬಗ್ಗೆ ಕನಸ ಮೂಟೆಯನ್ನ ಎತ್ತಿ ಎತ್ತಿ ರಾಶಿ ಹಾಕಿಕೊಂಡಿದ್ದರು ಕಣ್ಣು ಸುಸ್ತಾಗುವವರೆಗೆ!
ಸಿಡಿಲಾರ್ಭಟಕ್ಕೆ ಬೆಚ್ಚಿ ತಾಯಿಯ ಮಡಿಲೊಳಗೆ ಬಚ್ಚಿಟ್ಟುಕೊಳ್ಳುವ ಮಗಳು ಕೋಮಲ ಪದವಿ ಶಿಕ್ಷಣ ಮುಗಿಸಿ ಮನೆಗೆ ಬಂದರೆ ಅಮ್ಮ ಜಲಜಮ್ಮನಿಗೆ ಅಪಾರ ನಿಧಿ ಸಿಕ್ಕಿದ ಸಂತಸ. ವಯಸ್ಸು ಕಳೆದಂತೆ ದೇಹವೂ ತನ್ನ ಮಾತನ್ನ ಕೇಳುವುದಿಲ್ಲ ಎನ್ನುವಂತೆ ಶಂಕ್ರಪ್ಪ ತನ್ನೆಲ್ಲಾ ಅವಗುಣಗಳನ್ನ ಆದಷ್ಟು ಕಡಿಮೆ ಮಾಡಿಕೊಂಡು ಹೆಂಡತಿ ಜಲಜಮ್ಮ ತಂದು ಹಾಕಿ, ಬೇಯಿಸಿದ್ದರಲ್ಲೆ ತಾನುಂಡು ತನ್ನಷ್ಟು ನೆಮ್ಮದಿಯಿಂದಿರೋರು ಈ ಊರಲ್ಲಿ ಯಾರೂ ಇಲ್ಲ ಅಂತ ಹೇಳಿಕೊಂಡು ಬೀಗುತ್ತಿದ್ದ ಆಸಾಮಿ. ಹಗಲಿಡಿ ದುಡಿದು ಹೈರಾಣಾದ ಹೆಂಡತಿಯನ್ನ ಕತ್ತಲೆಯಲ್ಲಿ ಕಾಡುವ ಶಂಕ್ರಪ್ಪನ ತೆವಲಿಗೆ ಅಂತ್ಯವೇ ಇದ್ದಿರಲಿಲ್ಲ. ಅದೊಂದು ದಿನ ಬೇಸಿಗೆ ರಜೆಗೆ ಮನೆಗೆ ಬಂದ ಮಗಳ ಜೊತೆ ಮಾತನಾಡುತ್ತಾ ಕುಳಿತ ಜಲಜಮ್ಮ, ಮಗಳ ನೆತ್ತಿ ಸವರಿ, ನಿನ್ನ ಅಪ್ಪನನ್ನ ಇಷ್ಟು ವರುಷಗಳ ಕಾಲ ಸಹಿಸಿಕೊಂಡು ಬದುಕಿದ್ದಿನೆಂದರೆ ಅದು ಕೇವಲ ನಿನಗಾಗಿ ಮಗಳೇ, ಅಪ್ಪ ಸರಿ ಇಲ್ಲದ ಹೆಣ್ಣು ಮಕ್ಕಳನ್ನ ಪೊರೆಯೋದು ತುಂಬಾ ಕಷ್ಟ ಈಗಿನ ಕಾಲದಲ್ಲಿ, ಆದರೂ ನಾ ಎಲ್ಲವನ್ನ ನಿಭಾಯಿಸಿದೀನಿ ಯಾಕೆಂದರೆ ನಾಳೆ ನನ್ನಿಂದಾಗಿ ನೀ ಮಾತು ಕೇಳಬಾರದು ನೋಡು ಅಂದಿದ್ದಳು ಜಲಜಮ್ಮ.
ಕೋಮಲ ಯಾವತ್ತೂ ಅಪ್ಪನ ಬಗ್ಗೆ ಯೋಚಿಸಿದವಳೂ ಅಲ್ಲ. ಅವಳ ಪ್ರಪಂಚದಲ್ಲಿ ಅಮ್ಮನ ಹೊರತಾಗಿ ತುಂಬಿದ್ದು ನಾಳೆಯೆಡೆಗಿನ ಗುರಿ ಮಾತ್ರ! ಅದಕ್ಕೆ ಪಟ್ಟು ಹಿಡಿದು ಓದಿ, ಎಫ್ ಡಿ ಎ ಪಾಸು ಮಾಡಿ ಸರಕಾರಿ ಕೆಲಸ ಗಿಟ್ಟಿಸಿಕೊಂಡು ತಾಯಿಯನ್ನ ತಾನಿರುವ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಳು. ಆದರಿಲ್ಲಿ ತನ್ನವರ್ಯಾರು ಇಲ್ಲದೆ, ಕೈಯಲ್ಲಿ ಕಾಸಿಲ್ಲದೆ ಅತಂತ್ರನಾದ ಶಂಕ್ರಪ್ಪ ಉಬ್ಬಸದಿಂದ ನರಳುತ್ತ ಮಗಳು ಬಂದಾಳೇನೊ ಅಂತ ಕಾಯುತ್ತಲೇ ಪ್ರಾಣ ಬಿಟ್ಟಿದ್ದ.
“ಅಮ್ಮ ಅಪ್ಯಾಯತೆಯಾದರೆ, ಅಪ್ಪ ನಂಬಿಕೆಯಾಗಬೇಕು” ಆಗಲೇ ಬದುಕಿಗೊಂದು ಅರ್ಥ ಎಂದುಕೊಂಡಿದ್ದ ಕೋಮಲ ತಾನು, ತನ್ನ ತಾಯಿ ಪಟ್ಟ ಕಷ್ಟದ ಪ್ರತಿ ಎಳೆಯನ್ನೂ ನೆನಪಿನಲ್ಲಿಟ್ಟುಕೊಂಡು ಅಪ್ಪನ ಉಸಿರಿರೋ ತನಕ ಅಪ್ಪಿ ತಪ್ಪಿಯೂ ಹತ್ತಿರ ಸುಳಿಯಲೇ ಇಲ್ಲ. ಈಗ ಅಪ್ಪನೆಂದು ಕರೆಯುತ್ತಿದ್ದ ವ್ಯಕ್ತಿ ಶಂಕ್ರಪ್ಪ ಬೆಂಕಿಯ ಕೆನ್ನಾಲಗೆಯಲ್ಲಿ ಕರಗಿ ಹೋಗುವಾಗ, ಅರಿಯದೆ ಒದ್ದೆಯಾಗಿದ್ದು ಕೋಮಲಳ ಕಣ್ಣು ! ಶಾಸ್ತ್ರ ಪ್ರಕಾರ ಜಲಜಮ್ಮನವರ ಮೂಗುತಿ, ಮಾಂಗಲ್ಯ. ಕಾಲುಂಗುರ, ಹಣೆಯ ಕುಂಕುಮ ತೆಗಿಬೇಕ್ತು, ಕೋಮಲ, ನಾಳೆ ಬೆಳಿಗ್ಗೆ ಬೇಗ ಅಮ್ಮಂಗೆ ಏಳೋಕೆ ಹೇಳು, ಇದೆಲ್ಲಾ ಬೇಗ ಮುಗಿಸಿದರೆ ಒಳ್ಳೇದು ಅಂದ ಮಾಯಿಯ ಮಾತಿಗೆ ಬೆಚ್ಚಿ ಬಿದ್ದಿದ್ದು ಮಗಳು ಕೋಮಲ!
ಹುಟ್ಟಿದಂದಿನಿಂದ ಇಂದಿನ ತನಕ ಕಳೆ ಕಳೆಯಾಗಿ ಹೆರಳ ತುಂಬಾ ಹೂ ಮುಡಿದು ಲಕ್ಷಣವಾಗಿ ಕಾಣಿಸೋ ಅಮ್ಮ ವಿಧವೆ ಪಟ್ಟಕ್ಕೆ ತಯಾರಿ ಮಾಡ್ಕೋಬೇಕಾ? ಅದು ಇಷ್ಟು ವರುಷಗಳ ನಂತರ ? ಈ ತನಕ ಜೀವನದಲ್ಲಿ ಸುಖ, ನೆಮ್ಮದಿಯನ್ನ ಗಂಡನಿಂದ ಕಾಣದ, ಪಡೆಯದ ನನ್ನ ತಾಯಿ, ನಮ್ಮ ಯಾವುದೇ ಕಷ್ಟಕ್ಕೆ ಕಿವಿಯಾಗದ ಸಂಬಂಧಿಕರು, ಬಗ್ಗಿದಾಗ ಇನ್ನಷ್ಟು ಬಗ್ಗಿಸಿ ತುಳಿದ ನೆರೆಹೊರೆಯವರು ಈಗ ಪದ್ಧತಿಯ ಬಗ್ಗೆ ಮಾತಾಡಿ, ಸಂಪ್ರದಾಯದ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಾರೆಂದರೆ ಅದಕ್ಕೆ ನಾವ್ಯಾಕೆ ಬಾಗಬೇಕು? ಎನ್ನುವ ಪ್ರಶ್ನೆಯನ್ನ ತನಗೆ ತಾನೆ ಕೇಳಿಕೊಳ್ಳುತ್ತಾ ಕೋಣೆ ಹೊಕ್ಕ ಕೋಮಲ ತಾಯಿ ಜಲಜಮ್ಮನ ಕೈ ಹಿಡಿದು ಹೊರನಡೆದೇ ಬಿಟ್ಟಳು. ಎಲ್ಲರ ಪ್ರಶ್ನೆಗೆ ನೀಡಬೇಕಾದ ಉತ್ತರವನ್ನ ನೀಡಿ ಅದೆಲ್ಲವನ್ನ ಅಲ್ಲೇ ಸಮಾಧಿ ಮಾಡಿ ಮುಂದಡಿಯಿಟ್ಟಳು
–ರೇವತಿ ಶೆಟ್ಟಿ
ಕಥೆ ಇಷ್ಟವಾಯ್ತು.
TUMBA SUNDARAVAGI HENED ARTHA GARBITA KATHE
estu bari odidaru matte matte odabekennuva baraha matte munduvaresi plz