ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು ಕುಗ್ಗುತ್ತದೆ.
'ನಾನು ಅಂಗ ವಿಕಲನಾಗಿ ಬದುಕುವುದಕ್ಕಿಂತ ಸಾವನ್ನು ಬಯಸುತ್ತೇನೆ '. ಇಂತಹ ಪ್ರತಿಕ್ರಿಯೆ ವಿಚಿತ್ರವೆನ್ನಿಸಿದರೂ ಸತ್ಯ. ಪ್ರತಿನಿತ್ಯ ಇಂಚಿಂಚು ನೋವನ್ನುಂಡು ಸೋಲೆದುರಿಸುತ್ತಾ ಪರಾವಲಂಬಿಗಳಾಗಿ ಅಸಹನೀಯ ಬದುಕನ್ನು ಬದುಕುವವರ ಬಗ್ಗೆ ಸಾಮಾನ್ಯರಿಗೆ ಸಹಾನುಭೂತಿಯಾಗುವುದು. ಆದರೆ ವಾಸ್ತವದಲ್ಲಿ ಸಾಮಾನ್ಯ ಜನರು ಜೀವನ ನಡೆಸುವ ರೀತಿಗಿಂತ ಭಿನ್ನವಾಗಿ ಹೆಚ್ಚು ದಕ್ಷತೆಯಿಂದ ಜೀವನ ನಿರ್ವಹಣೆ ಮಾಡುತ್ತಾರೆ ಎಂಬುದುಸಂಶೋದನೆಗಳಿಂದ ಸಾಬೀತಾಗಿದೆ.
ಡಿಸೆಂಬರ್ ೩ ೨೦೧೪ ಅಂತರರಾಷ್ಟ್ರೀಯ ಅಂಗ ವಿಕಲರ ದಿನವನ್ನು ಆಚರಿಸುವ ಸಂದರ್ಭದಲ್ಲಿ ಅವರ ಬದುಕು-ಬವಣೆಗಳನ್ನು ಅರಿಯುವ ಪ್ರಯತ್ನ ಮಾಡೋಣ. ನೋವಿನ ನೆರಳಿನಿಂದ ಹೊರತರುವ ಮತ್ತು ಅವರ ಜೀವನವನ್ನು ಹಸನುಗೊಳಿಸುವ ನಿಟ್ಟಿನಲ್ಲಿ ದೇಶ-ವಿದೇಶಗಳ ಸಂಘ-ಸಂಸ್ಥೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗಿದೆ.
ನಮ್ಮೆಲ್ಲರಂತೆ ವಿಕಲ ಚೇತನರಿಗೂ ಒಂದು ಸುಂದರ ಸುಭದ್ರ ಬದುಕನ್ನು ಕಟ್ಟಿಕೊಳ್ಳುವ ಹಕ್ಕಿದೆ. ಅವರಿಗೂ ಕನಸು ಕಾಣುವ ಮನಸಿದೆ. ಒಳ್ಳೆಯ ವಿದ್ಯಾಭ್ಯಾಸ ,ಸುಂದರ ಮನೆ ಪರಿಸರ ,ವೈದ್ಯಕೀಯ ಸೌಲಭ್ಯ, ಉದ್ಯೋಗ ಪಡೆಯುವ ಹಕ್ಕಿದೆ. ಈ ಆಸೆಗಳೆಲ್ಲ ಬರೀ ಕನಸಾಗಬಾರದು; ಅವರ ನಿಟ್ಟುಸಿರಾಗಬಾರದು . ಈ ಕನಸುಗಳನ್ನು ಸಾಕಾರಗೊಳಿಸುವಲ್ಲಿ,ಅವರ ದೈಹಿಕ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಲ್ಲಿ ಮಾನಸಿಕವಾಗಿ ಕುಗ್ಗದಂತೆ ಅವರ ಜೊತೆಯಲ್ಲಿ ಸಹಾರ ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಹೆಚ್ಚಿನವರಿಗೆ ವಿಕಲ ಚೇತನರ ಬದುಕಿನ ನೋವು ಸಮಸ್ಯೆಗಳ ಅರಿವಿರುವುದಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಘ-ಸಂಸ್ಥೆಗಳಿಂದ ಅಗಬೇಕಿದೆ.
೧೯೮೧ ರಲ್ಲಿ ವಿಕಲ ಚೇತನರ ವರ್ಷ ಆಚರಿಸಿದ ನಂತರ ಭಾರತ ಸರ್ಕಾರವು ಅವರ. ಏಳಿಗೆಗಾಗಿ ಅವರ ಹಕ್ಕುಗಳ. ಸಂರಕ್ಷಣೆಗಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಲು ಬದ್ಧವಾಗಿದೆ. ಅಂಗವಿಕಲರ ಆರೋಗ್ಯ ತಪಾಸಣೆ, ಉದ್ಯೋಗ, ವಸತಿ ಸೌಕರ್ಯ ಇತ್ಯಾದಿ ಸಮಸ್ಯೆ ಪರಿಹರಿಸಲು ಸಂಘಸಂಸ್ಥೆಗಳ ನೆರವು ಪಡೆಯಲು ಮುಂದಾಗಿದ್ದು ಈ ದಿಶೆಯಲ್ಲಿ ಶ್ರಮಿಸಿದ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ರಾಷ್ಟ್ರೀಯ ಪುರಸ್ಕಾರವನ್ನು ಘೋಷಿಸಿದೆ.
ವಿಕಲ ಚೇತನರಿಗೆ ವಿದ್ಯೆ ಅನಿವಾರ್ಯ. ಅವರಿಗೆ ಉತ್ತಮ ಶಿಕ್ಷಣ, ಪ್ರೋತ್ಸಾಹ ಧನ, ಸ್ವಾವಲಂಬಿಗಳಾಗಿ ಬದುಕಲು ಸಾಲಸೌಲಭ್ಯ, ಶಿಕ್ಷಣಕ್ಕೆ ಅಗತ್ಯವಿರುವ ವಿಶೇಷ ಪುಸ್ತಕ ಸಲಕರಣೆಗಳನ್ನು ಒದಗಿಸುವ ಕೆಲಸವನ್ನು ಸಂಘಸಂಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ.
ವಿಕಲತೆ ದೈಹಿಕ ಇಲ್ಲವೇ ಮಾನಸಿಕ ಅಥವಾ ಬೌಧ್ಧಿಕವಾಗಿರಬಹುದು . ಕೆಲವರು ಹುಟ್ಟಿನಿಂದಲೇ ವಿಕಲಾಂಗರಾಗಿರಬಹುದು. ಮತ್ತೆ ಕೆಲವರು ಆಕಸ್ಮಿಕ ಅಪಘಾತಗಳಿಂದ ರೋಗಗಳಿಂದ ಅಂಗವಿಹೀನರಾಗಿರ ಬಹುದು.
ತಮ್ಮದಲ್ಲದ ತಪ್ಪಿನಿಂದಾಗಿ ಜೀವನ ಪರ್ಯಂತ ಪರಿತಪಿಸುವ ಆ ಮುಗ್ಧ ಜೀವಗಳು ನಮ್ಮಿಂದ ಬಯಸುವುದು ಕನಿಕರ, ಸಹಾನುಭೂತಿ ಅಲ್ಲ. ಅವರಿಗೆ ಬೇಕಾಗಿರುವುದು ಹಿಡಿಯಷ್ಟು ಪ್ರೀತಿ, ಸ್ನೇಹ ನಡವಳಿಕೆ, ಮಾನವಾಗಿ ಬದುಕು ಕಟ್ಟಿಕೊಳ್ಳುವಲ್ಲಿ ನಮ್ಮೆಲ್ಲರ ಸಹಕಾರ. ರೆಕ್ಕೆ ಇಲ್ಲದಿದ್ದರೇನಂತೆ ಮನದಲ್ಲಿದೆ ಅಕಾಶವೇರುವ ಹಂಬಲ.ಬೇಕಿರುವುದು ಶುಭ್ರ ಆಕಾಶ ,ಆತ್ಮವಿಶ್ವಾಸ ಅಷ್ಟೇ .
ಪ್ರಪಂಚದಲ್ಲಿ ಮಿಲಿಯನ್ಗಳಷ್ಟು ಸಂಖ್ಯೆಯಲ್ಲಿ ವಿಕಲ ಚೇತನರಿದ್ದಾರೆ. ಎಲ್ಲರೂ ಸಾಧಕರಲ್ಲದಿದ್ದರೂ ತಮ್ಮ ತಮ್ಮ ಕೊರತೆಯನ್ನು ಮೆಟ್ಟಿ ನಿಲ್ಲುತ್ತಾ ಬದುಕಿನಲ್ಲಿ ಹೋರಾಟ ನಡೆಸಿಯೇ ಇದ್ದಾರೆ. ವಿಕಲತೆಯನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆಯ ಹಾದಿಯನ್ನು ತುಳಿದವರು ಹಲವರು ಜಗತ್ತಿಗೇ ಮಾದರಿಯಾದವರು. ನಮ್ಮ ಹೆಮ್ಮೆಯ ಇಂಡಿಯನ್ ಡ್ಯಾನ್ಸರ್ ಸುಧಾ ಚಂದ್ರನ್ ಆಕ್ಸಿಡೆಂಟ್ನಲ್ಲಿ ಕಾಲು ಕಳೆದುಕೊಂಡರೂ ಧೃತಿಗೆಡದೆ ಕೃತಕ ಕಾಲು ಜೋಡಣೆ ಯಿಂದ ತಮ್ಮ ವೃತ್ತಿ ಜೀವನದಲ್ಲಿ ಮುಂದುವರಿದಿದ್ದಾರೆ ಮತ್ತು 'ನಾಚೆ ಮಯೂರಿ' ಯ ನಟನೆಗಾಗಿ ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸಿಧ್ಧ ವಿಜ್ಞಾನಿ 'A SHORT HISTORY OF THE UNIVERSE' ಕೃತಿಯ ಲೇಖಕ STEPHEN HAWKINGS ತಮ್ಮ ಇಡೀ ದೇಹ ಪಾರ್ಶ್ವವಾಯುಪೀಡಿತವಾಗಿ ಅವರ ಹಿಡಿತದಲ್ಲಿ ಇರದಿದ್ದರೂ computer supported machine ಸಹಾಯದಿಂದ ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದಾರೆ.
ಥಾಮಸ್ ಆಳ್ವ ಎಡಿಸನ್ ಚಿಕ್ಕಂದಿನಲ್ಲಿ ಯಾವ ಪ್ರಾಬ್ಲಂ ಅನ್ನೂ ಸಾಲ್ವ್ ಮಾಡಲಾಗದವನು, ನಿದಾನ ಕಲಿಕೆಯವನು ಎಂದು ಅವನ ಟೀಚರ್ ಟೀಕಿಸಿದ್ದರು. ಗ್ರೇಟ್ ಚಾರ್ಲ್ಸ್ ಡಾರ್ವಿನ್ ನ ತಂದೆ ಅವನನ್ನು 'ಬಹಳ ಆರ್ಡಿನರಿ' ಎಂದು ಅಭಿಪ್ರಾಯಪಟ್ಟಿದ್ದರು. ಹೆಸರಾಂತ ಸಿನಿಮ ನಿರ್ದೇಶಕ 'ಸ್ಟೀವನ್ ಸ್ಟೀಲಬರ್ಗ್ ' ಕಲಿತದ್ದು 'ಲರ್ನಿಂಗ್ ಡಿಸಾಬಲ್ದ್' ಕ್ಲಾಸಿನಲ್ಲಿ.
"ಬದುಕು ಅನಿವಾರ್ಯ ಎಲ್ಲರಿಗೂ
ದೂರುತ್ತಲೇ ಸಾಗುವ
ಭೋಗಿಗೂ, ಬದುಕಿಂದ
ದೂರ ಸರಿದ ಯೋಗಿಗೂ…
ಬದುಕಿನ ಗತಿಯ ಬದಲಿಸಿ
ತನ್ನ ಪಥವಾಗಿಸಿ ಕೊಂಡವ
ನಿಜಯೋಗಿ ……
–ಕಮಲ ಬೆಲಗೂರ್