ನಗರದ ದೊಡ್ಡ ಆಸ್ಪತ್ರೆ ಎಂದೇ ಖ್ಯಾತ ಜಗರಾಂ ಆಸ್ಪತ್ರೆಯ ಡಾ|| ಜಗರಾಂಗೆ ರಾತ್ರಿ ನಿದ್ದೆಯಲ್ಲೆಲ್ಲಾ ಏನೋ ಕಸಿವಿಸಿ. ನಿದ್ದೆಯಲ್ಲೆಲ್ಲಾ ಮೈಮೇಲೆ ಬಿದ್ದಂತೆ ಬಂದು ಕಾಡಿದ ದುಸ್ವಪ್ನಗಳಿಂದ ನಾಳೆ ಏನೋ ಗಂಡಾಂತರ ಕಾದಿದೆ ಎಂದೇ ಅಂಜಿಕೆ ಶುರುವಾಯ್ತು. Dreams are modified versions of memory ಎನ್ನುತ್ತಾರೆ. ಅಂದರೆ ನಾವು ನೋಡಿದ್ದು, ಯೋಚಿಸಿದ್ದೇ ರೂಪಾಂತರವಾಗಿ ಕನಸಾಗುತ್ತೆ ಅಂತ.. ಆದರೆ ತಾವು ನೋಡದ್ದು ಯಾಕೆ ಕನಸಾಗ್ತಿದೆ ಅಂತ ನಿದ್ದೆ ಬಾರದೇ ಎದ್ದು ಕುಳಿತ ಜಗರಾಂ ಯೋಚಿಸುತ್ತಾ ಕುಳಿತು ,ಕುಳಿತಲ್ಲಿಯೇ ತೂಕಡಿಸಿ ಅಲ್ಲೇ ನಿದ್ದೆ ಹತ್ತಿ ಅವರಿಗೆ ಇದ್ಯಾವುದರ ಅರಿವಾಗೋದ್ರೊಳಗೇ ನಸುಕಾಯ್ತು..
*******
ಸರ್, ಈ ಗೋಡೌನ್ ನಾನು ವಾಚ್ಮನ್ನಾದಾಗಿಂದ ಮುಚ್ಚೇ ಇದೆ ಸರ್. ನೋಡಿ ಬೀಗ ಕೂಡ ಹಾಕಿದೆ.. ಇದ್ರ ಕೀ ಎಲ್ಲಿದೆ ಅಂತ್ಲೂ ಗೊತ್ತಿಲ್ಲ ಸಾರ್..
ಅಂತ ರಾಗ ಎಳೀತಿದ್ದ ವಾಚ್ಮನ್ನಿನ ಮಾತನ್ನು ಅರ್ಧದಲ್ಲೇ ತಡೆದ ಇನ್ಸಪೆಕ್ಟರ್ ವಿನೀತ್. "ರೀ, ಹೆಚ್ಗೆ ಮಾತು ಬೇಡ. ಈಗಾಗ್ಲೇ ನಾಲ್ಕು ಗೌಡೌನ್ ಬಾಗ್ಲು ತೆಗ್ದು ತೋರ್ಸಿದೀಯ. ಇದ್ರ ಬಾಗಿಲು ತೆಗ್ಯೋಕೆ ಯಾಕಿಷ್ಟು ಪಿರಿಪಿರಿ ?. ಬೇಗ ತೆಗೀರಿ ಬಾಗ್ಲು ..ಎಂದ್ರು ತಮ್ಮ ಎಂದಿನ ಪೋಲೀಸ್ ಗತ್ತಿನಲ್ಲೇ.
ಹೌದು ಸರ್.. ಇದು ನಮಗೆ ಗೊತ್ತಿರೋ ಮಟ್ಟಿಗೆ ಯಾವಾಗಿಂದ್ಲೂ ಮುಚ್ಚೇ ಇದೆ ಅಂದ್ಲು ರಾಗಿಣಿ… ಏ, ನಿನ್ನ ಕೀ ಗೊಂಚಲು ಕೊಡಪ್ಪ. ನಾನೇ ತೆಗೀತೀನಿ ಅಂತ ಇನಸ್ಪೆಕ್ಟರ್ರೇ ಬಂದಾಗ ಬೇಡ ಸರ್ ನಾನೇ ಟ್ರೈ ಮಾಡ್ತೀನಿ ಅಂತ ವಾಚ್ಮನ್ನೇ ಬೀಗ ತೆಗಿಯೋಕೆ ಮುಂದೆ ಬಂದ. ವಾಚ್ಮನ್ ಒಂದೊಂದೇ ಕೀಯನ್ನು ಹಾಕಿ ತೆಗಿಯೋಕೆ ಪ್ರಯತ್ನ ಪಡ್ತಾ ಇದಾನೆ. ಆದ್ರೆ ಬರ್ತಾ ಇಲ್ಲ. ಈ ವ್ಯರ್ಥ ಪ್ರಯತ್ನಗಳ ನಡುವೆ ರಾಗಿಣಿಗೆ ಇಂದು ಬೆಳಗ್ಗೆಯ ಅನಿರೀಕ್ಷಿತ ಘಟನೆ ನೆನಪಾಯ್ತು. ಬೆಳಬೆಳಗ್ಗೆಯೇ ಆಸ್ಪತ್ರೆಗೆ ಪೋಲಿಸ್ರು ಬಂದಿದಾರೆ.ಸಾಧಾರಣವಾಗಿ ಆಕ್ಸಿಡೆಂಟ್ ಕೇಸುಗಳ ವಿಚಾರಣೆಗೆ ಅಂತ ಪೋಲಿಸ್ರು ಬರ್ತಿದ್ರೂ ಬೆಳಬೆಳಗ್ಗೆಯೇ ಬರ್ತಿರಲಿಲ್ಲ. ಬಂದವ್ರು ಜಗರಾಂರನ್ನೋ ಇಲ್ಲ ಅವರ ಇನ್ಚಾರ್ಚ್ ಆಗಿದ್ದ ರಾಗಿಣಿಯವರನ್ನೋ ಭೇಟಿಯಾಗೇ ಹೋಗ್ತಿದ್ರು. ಆದ್ರೆ ಈ ಸಲ ಯಾರ್ನೂ ಭೇಟಿಯಾಗದೇ ಸೀದಾ ಆಸ್ಪತ್ರೆಯ ಸೆಕ್ಯೂರಿಟಿ ಸಿಬ್ಬಂದಿಯನ್ನ ವಿಚಾರಣೆ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ತಿಳಿದ ರಾಗಿಣಿಗೆ ಏನೋ ಎಡವಟ್ಟಾಗಿದೆ ಅನಿಸೋಕೆ ಶುರು ಆಗಿ ತಕ್ಷಣ ಪೋಲಿಸರಿದ್ದ ಜಾಗಕ್ಕೆ ಓಡಿ ಬಂದಿದ್ರು. ಅವರು ಬರೋ ಹೊತ್ತಿಗೆ ಪೋಲಿಸ್ರು ಗೇಟಿಂದ ಸೀದಾ ಆಸ್ಪತ್ರೆ ಆವರಣದ ಮೂಲೆಯಲ್ಲಿದ್ದ ಗೋಡೌನಿನ ಹತ್ರ ಬಂದಿದ್ರು. ಎಲ್ಲಾ ಬಿಟ್ಟು ಈ ಗೋಡೌನುಗಳನ್ನ ಯಾಕೆ ಹುಡುಕ್ತಾ ಇದ್ದಾರೆ ಅನ್ನೋ ಕುತೂಹಲದಲ್ಲೇ ಕಳೆದು ಹೋಗಿದ್ದ ರಾಗಿಣಿ ಕೀಗಳ ಸೌಂಡಿಂದ ಮತ್ತೆ ವಾಸ್ತವಕ್ಕೆ ವಾಪಾಸಾದ್ರು.
ವಾಚ್ಮನ್ನಿನ ಕೀ ಬಂಚಿನ ಕೀಗಳೆಲ್ಲಾ ಮುಗೀತಾ ಬಂದಿದ್ವು. ಯಾವುದ್ರಲ್ಲೂ ಬೀಗ ತೆಗೆಯೋ ತರ ಕಾಣ್ತಿರಲಿಲ್ಲ. ಇನಸ್ಪೆಕ್ಟರ್ ಆ ಬಾಗಿಲನ್ನೇ ಹಾಗೇ ನೋಡ್ತಾ ಇದ್ರು. ಸುಮಾರು ಹೊತ್ತಿನಿಂದ ಹಾಗೇ ನೋಡ್ತಾ ಇದ್ದ ಅವರಿಗೆ ಬಾಗಿಲಲ್ಲಿ ಏನೋ ಬದಲಾವಣೆ ಇದೆ ಅನಿಸ್ತಾ ಇತ್ತು. ಆದ್ರೆ ಏನು ಅಂತ ಗೊತ್ತಾಗ್ತಾ ಇರ್ಲಿಲ್ಲ.ತನ್ನಲ್ಲಿದ್ದ ಕೀಗಳೆಲ್ಲಾ ಮುಗೀತು ಅಂತ ವಾಚ್ಮನ್ನು ಹೇಳೋ ಮೊದಲೇ ಹೋಗ್ಲಿ ಬಿಡು, ನೀನು ನಿಜನೇ ಹೇಳ್ತಿದೀಯ. ಇದ್ರ ಬೀಗದ ಕೀ ನಿನಗೆ ಕೊಟ್ಟಿಲ್ಲ ಅವ್ರು ಅಂತ ಹೇಳಿದ್ರು ವಿನೀತ್.. ಏನನ್ನೋ ಲೆಕ್ಕ ಹಾಕಿದವರಂತೆ. ಬಾಗಿಲು ಡೋರ್ ಲಾಕ್ ಮಾಡುವಂತಹ ಒಂದೇ ದಿಮ್ಮಿಯ ಬಾಗಿಲಾಗಿರದೇ, ಚೀಲಕ ಹಾಕಿ ಬೀಗ ಹಾಕುವಂತಹ ಎರಡು ದಿಮ್ಮಿಗಳ ಬಾಗಿಲಾಗಿತ್ತು. ಬೀಗ ಎಷ್ಟೇ ಬಲವಾಗಿದ್ದಾದ್ರೂ ಸ್ವಲ್ಪ ಮಧ್ಯದಲ್ಲಿ ತಳ್ಳಿದ್ರೆ ಬಾಗಿಲು ಮಧ್ಯದಲ್ಲಿ ಸ್ವಲ್ಪ ಹಿಂದೆ ಹೋಗಿ ಮತ್ತೆ ಸ್ವಸ್ಥಾನಕ್ಕೆ ಬಂದು ಕೂರತ್ತೆ. ಆದ್ರೆ ಇಲ್ಲಿ ಹಾಗಾಗ್ಲಿಲ್ಲ. ಮತ್ತೊಮ್ಮೆ ಸ್ವಲ್ಪ ಬಲ ಹಾಕಿ ತಳ್ಳಿದ್ರು. ಊಹೂಂ. ಏನೂ ಚಲನೆಯಿಲ್ಲ. ಮೂರನೇ ಬಾರಿ ತಳ್ಳಿ ಬೇಜಾರಾದ ಇನ್ಸಪೆಕ್ಟರ್ ಮುಂದೇನು ಎಂಬಂತೆ ಬಾಗಿಲಿನ ಎಡಹೊಸ್ತಿಲಿಗೂ, ಬಾಗಿಲಿಗೂ ತಾಗುವಂತೆ ಒರಗಿದ್ರು. ಏನೋ ಸರಿದಂತಾಯ್ತು. ಆದ್ರೆ ಏನು ಅಂತ ಸರಿಯಾಗಿ ಗೊತ್ತಾಗ್ಲಿಲ್ಲ. ಈ ಬಾರಿ ಬಾಗಿಲಿನ ಎಡಮೂಲೆಯಲ್ಲಿ ತಳ್ಳಿದಾಗ ಬಾಗಿಲು ಎಡಕ್ಕೆ ಸ್ವಲ್ಪ ತೆರೆಯಿತು ! ಈ ಸಲ ಎಡಭಾಗದಲ್ಲಿ ಮತ್ತಷ್ಟು ಬಲ ಹಾಕಿ ಒತ್ತಿದಾಗ ಕಿರ್ರೆಂಬ ಶಬ್ದದೊಂದಿಗೆ ಇನ್ನೊಂದು ಸ್ವಲ್ಪ ಜರುಗಿತು !! ಬಾಗಿಲು ಒಂದು ದಿಮ್ಮಿಯ ಡೋರ್ಲಾಕಿನ ಬಾಗಿಲಿನಂತೆ ಒಂದು ಭಾಗದಿಂದ ತೆಗೆಯುವಂತಹದ್ದೆ. ಆದ್ರೆ ನೋಡೋರನ್ನ ಕನಫ್ಯೂಸ್ ಮಾಡುವಂತೆ ಎರಡು ದಿಮ್ಮಿಯ ಹೊರರಚನೆ ಮಾಡಿ ಅದನ್ನು ಬಲಪಡಿಸುವಂತೆ ಅದಕ್ಕೆ ಡಮ್ಮಿ ಬೀಗವನ್ನೂ ಹಾಕಿದ್ದಾರೆ !. ಯಾವುದೇ ಬೀಗವನ್ನೂ ಹಾಕದೇ ಎಡಹೊಸ್ತಿಲಿನ ಯಾವುದೋ ಭಾಗವನ್ನು ಒತ್ತಿದರೆ ತಾನಾಗೇ ಒಳಗಿರೋ ಬೀಗ ತೆಗೆಯುವಂತೆ.. ಅಬ್ಬಾ ಎಂತಹ ಮಾಸ್ಟರ್ ಮೈಂಡ್ ಅಂದ್ಕೊಂಡ್ರು ವಿನೀತ್. ಆದ್ರೆ ಯಾಕೆ ? ಒಂದು ಆಸ್ಪತ್ರೆಯ ಸಾಮಾನ್ಯ ಗೋಡೌನಿಗೆ ಇಷ್ಟೆಲ್ಲಾ ಭದ್ರತೆ ಯಾಕೆ…?
*************
ಶನಿವಾರ ರಾತ್ರೆ ಕುಡಿದ ಅಮಲಿನಲ್ಲಿ ಫ್ಲೈ ಓವರ್ ಕೆಳಗೆ ಮಲಗಿದ್ದ ಜನರ ಮೇಲೆಲ್ಲಾ ಗಾಡಿ ಓಡಿಸಿ ಅದೆಷ್ಟೋ ಜನರ ಜೀವ ತೆಗೆದ ಇನ್ನು ಕೆಲವರನ್ನು ಅರ್ಧ ಜೀವ ಮಾಡಿದ ಯಾವುದೋ ಶ್ರೀಮಂತ ಮನೆಯ ಹುಡುಗ ಕಾರಿನೊಂದಿಗೆ ಪರಾರಿಯಾಗಿದ್ದ. ಅರ್ಧ ಜೀವವಾಗಿ ನರಳುತ್ತಿದ್ದ ಜನರನ್ನು ಎಷ್ಟು ಹೊತ್ತಿನ ನಂತರವೋ ನೋಡಿದ ಯಾರೋ ಪುಣ್ಯಾತ್ಮರು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಸೇರಿಸಿದ್ದರು. ಮಾರನೇ ದಿನ ಬೆಳಗಾಗೋ ಹೊತ್ತಿಗೆ ಈ ನತದೃಷ್ಟರೂ ಸಹ ಇಹಲೋಕ ತ್ಯಜಿಸಿ ಪರಲೋಕದಲ್ಲಿದ್ದ ತಮ್ಮ ಕುಟುಂಬದವರನ್ನು ಸೇರಿದ್ದರು. ಕುಟುಂಬಕ್ಕೆ ಕುಟುಂಬವೇ ಖಾಲಿಯಾಗಿ ಗೋಳಿಡುವವರು ಯಾರೂ ಇಲ್ಲದಿದ್ದರೂ ಈ ಸಾವುಗಳಿಂದ ಕೆಲವು ಜೀವಗಳಿಗೆ ಮಾತ್ರ ಅಮಿತಾನಂದವಾಗಿತ್ತು !!
*********
ಬಾಗಿಲು ತೆಗೆದು ಒಳಗೆ ಕಾಲಿಟ್ಟ ಇನಸ್ಪೆಕ್ಟರ್ ಮತ್ತು ತಂಡದವರು ಎದುರು ಕಂಡ ದೃಶ್ಯದಿಂದ ದಂಗಾಗಿ ಹೋದರು. ಎದುರಿಗೆ ಸಣ್ಣ ಗೋಡೌನಿನಂತೆ ಕಾಣೋ ಕೋಣೆಯೊಳಗೆ ಹೋದಂತೆ ಒಳಗೆ ತೆರೆದುಕೊಂಡ ದೊಡ್ಡ ಹಾಲು. ಹಾಲು ಅಲ್ಲಲ್ಲ ಹಾಲಾಹಲಕ್ಕೆ ತುತ್ತಾಗಿ ಸಾಲಾಗಿ ಮಲಗಿದಂತಹ ಮುಗ್ದ ಜೀವಗಳ ಸಾಲುಗಳು. ಅರ್ಥಾತ್ ಅದೊಂದು ಶವಾಗಾರ. ಆದರೆ ಶವಾಗಾರಕ್ಕೆ ಇಷ್ಟೆಲ್ಲಾ ಗೌಪ್ಯತೆ ಏಕೆ ಎಂದು ಅರ್ಥ ಆಗಲಿಲ್ಲ. ಅಲ್ಲಿದ್ದ ಕವಾಟಗಳನ್ನೆಲ್ಲಾ ಜಾಲಾಡುವಂತೆ, ಎಲ್ಲಾದರೂ ಇನ್ನೂ ಹೆಚ್ಚು ಗುಪ್ತ ಕೋಣೆಗಳಿಗೆ ದ್ವಾರಗಳಿರಬಹುದಾಗ ಬಗ್ಗೆಯೂ ಸೂಕ್ಷ್ಮವಾಗಿ ಜಾಲಾಡುವಂತೆ ತಮ್ಮ ತಂಡದ ಕೆಲ ಸಿಬ್ಬಂದಿಗೆ ಆದೇಶವಿತ್ತ ಇನ್ಸ್ಪೆಪೆಕ್ಟರ್ ಶವಗಳಿದ್ದ ಜಾಗಕ್ಕೆ ನಡೆದರು. ಒಂದು ಶವದ ಮೇಲಿದ್ದ ಬಟ್ಟೆಯನ್ನು ತೆಗೆದ ಧೈರ್ಯಶಾಲಿ ಇನ್ಸಪೆಕ್ಟರಿಗೂ ಒಮ್ಮೆ ಮುಖ ಕಿವುಚಿ ಹೋಯ್ತು. ಅದರ ಮೈಮೇಲೆಲ್ಲಾ ಹೊಲಿಗೆಗಳು!! ಕೊನೆಗೆ ಎಲ್ಲಾ ಪೋಸ್ಟಮಾರ್ಟಮ್ !!! ನೋಡನೋಡುತ್ತಿದ್ದಂತೆಯೇ ಇನ್ಸಪೆಕ್ಟರಿಗೆ ಅಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಸುಳಿವು ಸಿಕ್ಕಿ ಹೋಯ್ತು..
*************
ಮಾರನೇ ದಿನ ನಗರದ ಪೇಪರುಗಳಲ್ಲೆಲ್ಲಾ ಒಂದೇ ಸುದ್ದಿ. ಡಾ|| ರಾಗಿಣಿಯವರ ಆಸ್ಪತ್ರೆಯ ಮೇಲೆ ದಾಳಿ. ಡ್ರಗ್ಸ್ ಮಾಫಿಯಾ ಮತ್ತು ಅಂಗಾಂಗ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ರಾಗಿಣಿ ಆಸ್ಪತ್ರೆಯ ರಹಸ್ಯತಾಣವಾಗಿದ್ದ ಒಂದು ಗೋಡೌನನ್ನು ಪತ್ತೆ ಹಚ್ಚುವಲ್ಲಿ ಮುಖ್ಯ ಪಾತ್ರವಹಿಸಿದ ಆಸ್ಪತ್ರೆಯ ವಾಚ್ಮನ್ ಜಗರಾಂಗೆ ಪೋಲಿಸರ ಪ್ರಶಂಸೆ…ಮುಖ್ಯಮಂತ್ರಿಗಳಿಂದ ವಾಚ್ನನ್ ಜಗರಾಂ ಅವರಿಗೆ ಮತ್ತು ಪೋಲಿಸ್ ತಂಡದ ಈ ಸಾಹಸಕ್ಕೆ ೧ ಲಕ್ಷ ರೂಗಳ ಬಹುಮಾನ ಘೋಷಣೆ..
Nice.. just like a press report