ಅನಿರೀಕ್ಷಿತ: ಪ್ರಶಸ್ತಿ ಅಂಕಣ

ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋದು ಮುಂಚಿನ ಮಾತಾದರೆ ಬರೆದರೆ ವಾವ್ ವಾ ಅಂತಿರಬೇಕು ಅನ್ನೋದು ನಮ್ಮ ಇಂದಿನ ಸಾಹಿತಿ ಸಾಕಣ್ಣನ ತತ್ವ. ಈ ಸಾಕಣ್ಣ ಯಾರು ಅಂದ್ರಾ ? ಯಾರೋ ಕೊಡಿಸುತ್ತಾರೆ ಅಂದ್ರೆ ಬೇಕರೀಲಿ ಕಂಡಿದ್ದೆಲ್ಲಾ ಬೇಕೆನ್ನೋ ಬೇಕಣ್ಣನ ತಮ್ಮನಾ ? ಅಲ್ಲ. ಫೇಸ್ಬುಕ್ಕಲ್ಲಿ ಹಾಯೆಂದವರೆಲ್ಲಾ ಬಂದುಗಳೆನ್ನೋ ಪಾಪಣ್ಣನ ತಮ್ಮನಾ ? ಅಲ್ಲ. ಜೀವನವೇ ಒಂದು ನಶ್ವರ. ಗುಳ್ಳೇಯಂತಿರೋ ಈ ಬದುಕಲಿ ನನಗ್ಯಾರೂ ಇಲ್ಲ. ಬೇಕಾದವರಿಗೆಲ್ಲಾ ನಾ ಬೇಕು. ನಾನೆಷ್ಟು ಅತ್ತರೂ ಬಳಿ ಬರುವವರೇ ಇಲ್ಲವೆಂದು ಕಣ್ಣೀರಿಡೋ ನಾರಾಣಿಯ ನೆಂಟನಾ ? ಅಲ್ಲ. ಸ್ವಾತಂತ್ರ್ಯವಿದೆಯೆಂದು ಆಸೇತು ಹಿಮಾಚಲದವೆರೆಗೆ, ತಮ್ಮೆದುರು ಸಿಕ್ಕ, ಮಾತಾಡಿದ, ಕದ್ದು ಕೇಳಿದ ಗೆಳೆಯ ಗೆಳತಿಯರ ಮಾತನ್ನೆಲ್ಲಾ ಕತೆಯಾಗಿಸಿ ಓದುಗರ ಕೈಯಲ್ಲಿ ವಾವೆನ್ನಿಸಿಕೊಂಡು ಬರೆಸಿಕೊಂಡವರ ಮಾನ ಮೂರಾಬಟ್ಟೆಯಾಗಿಸುವ ಕಥೆಗಾರ ಕಪ್ಪಣ್ಣನಿಗೂ ಇವನಿಗೂ.. ಊಹೂಂ ಲಿಂಕೇ ಇಲ್ಲ. ಯಾವ ದೋಸ್ತಿ ರಾಜಕಾರಣಕ್ಕೂ, ಟೋಪಿ ಸಮಾರಂಭಗಳಲ್ಲಿ ಮೈಕು, ಸನ್ಮಾನ ಬಯಸೋ ಕನಿಷ್ಟ ಆಸೆಯೂ ಇಲ್ಲದ ಈ ಯುಗದ ವಿಚಿತ್ರ ಸಾಹಿತಿಯೇ ನಮ್ಮೀ ಸಾಕಣ್ಣ.

ಸಾಕಣ್ಣ ಹೊಸ ವರ್ಷಕ್ಕೊಂದು ಲೇಖನ ಬರೆಯೋ ಉಮೇದಿನಲ್ಲಿದ್ದ. ಬರೆಯಬೇಕು ಸರಿ. ಆದರೆ ಏನು ಬರೆಯೋದು ? ಕತೆಯಾ, ಲೇಖನವಾ, ಲಲಿತ ಪ್ರಬಂಧವಾ, ವಿಡಂಬನೆಯಾ, ಹಾಸ್ಯವಾ.. ಗೊತ್ತಿದ್ದು ನಾಲ್ಕೈದೇ ಪ್ರಕಾರಗಳಾದ್ರೂ ಅದರಲ್ಲೇ ಏನು ಬರೆಯೋದು ? ಕವಿತೆ ಬರೆಯದೇ ಸುಮಾರು ದಿನವಾಗಿದೆಯಲ್ಲಾ ಅದೇ ಸುಲಭವೆಂದು ಬರೆಯಲು ಕೂತ.ಹೊಸ ವರ್ಷ ಅಂತಂದ್ರೆ ಕುಡಿತ, ಪಾರ್ಟಿ, ಮಸ್ತಿ ಅನ್ನೋ ಹಲವು ಕಲ್ಪನೆಗಳು ಬಂದವು. ಆದರೆ ಒಂದು ದಿನದ ದುಂದು ಸರಿಯಲ್ಲ. ಅದರಿಂದ ಸಮಾಜಕ್ಕೇನಾದ್ರೂ ಒಳ್ಳೇದಾಗಬೇಕೆನ್ನೋ ಸಂದೇಶವನ್ನೂ ಕವಿತೆಯಲ್ಲೇ ನೀಡಬೇಕೆಂದುಕೊಂಡ. ಧುಮ್ಮಿಕ್ಕೋ ಜಲಪಾತದಂತೆ ಕಲ್ಪನೆಗಳು , ಭಾವಗಳು ಭೋರ್ಗತೆಯುತ್ತಿದ್ದರೂ ಪದಗಳ ತೆಕ್ಕೆಗೆ ಅವು ದಕ್ಕುತ್ತಿರಲಿಲ್ಲ. ಅಗೋ ನೋಡು ಬಾರು, ಬಂದಿತೊಂದು ಕಾರು.. ಬೆರೆಸುತ್ತಿದ್ದ ಬಾರಿನಲ್ಲಿ ಪೆಗ್ಗಿನಲ್ಲಿ ನೀರು.. ಅಂತೋನೂ ಗೀಚಿದ್ದು ಶುರುವಿನಲ್ಲಿ ವಾವೆನಿಸಿದ್ರೂ ಕಡೆಗೆ ಅವನಿಗೇ ನಾಚಿಕೆ ತರಿಸಿತು. ನೀ, ಮೆಚ್ಚಿದರೆ ಕಾವ್ಯ. ಮೆಚ್ಚದಿದ್ದರೆ, ಅದೇ ರಮ್ಯ ಅಂತ ಪ್ರತೀ ಪದವನ್ನು ಒಂದೊಂದು ಸಾಲಲ್ಲಿ ಬರೆಯುತ್ತಿದ್ದ ತನ್ನ ಶುರುವಿನ ಕಾವ್ಯ ರಚನೆ ನೆನಪಿಗೆ ಬಂದು ಆ ತರಹ ಮತ್ತೆ ಪ್ರಯತ್ನಿಸಲೇ ಎನಿಸಿತು. ಆದರೆ ನಂತರದ ತನ್ನ ಓದುವಿಕೆಯ ಸಮಯದಲ್ಲಿ ತನ್ನ ಮೊದಲ ಕವನಗಳು ಮೂಡಿಸಿದ್ದ ನಾಚಿಕೆ ಮತ್ತು ಅದರಿಂದ ಕವನ ರಚನೆಯನ್ನೇ ನಿಲ್ಲಿಸಿಬಿಡೋಕೆ ಮುಂದಾಗಿದ್ದ ದುಸ್ವಪ್ನಗಳು ನೆನಪಾದವು.ಸರಿ , ಇದಲ್ಲದಿದ್ದರೆ ಯಾವುದು ಎಂದು ಪ್ರಶ್ನಿಸಿದ ಮನಸ್ಸಿಗೆ. ಕತೆ, ಲೇಖನ, ಪ್ರಬಂಧಗಳು ನಾಮುಂದು , ತಾಮುಂದು ಎಂದು ಜಗಳಕ್ಕೆ ನಿಂತು ಅರ್ಧ ಘಂಟೆಯಾದರೂ ಬಗೆಹರಿಯಲಿಲ್ಲ. ಆದರ್ಶ ಸಾಹಿತ್ಯದ ರಚನೆ, ಹುಮ್ಮಸ್ಸಿದ್ದರೂ ಚುರುಗುಟ್ಟುತ್ತಿದ್ದ ಹೊಟ್ಟೆಯನ್ನು ತಡೆಯೋ ಸಾಮರ್ಥ್ಯ ಅವಕ್ಕಿರಲಿಲ್ಲ. ಚೆನ್ನಾಗಿ ಉಂಡು ಬಂದವನಿಗೆ ನಿದ್ದೆ ಎಳೆಯಹತ್ತಿತು. ಕಣ್ಣು ರೆಪ್ಪೆಗಳನ್ನು ಹಗ್ಗ ಹಾಕಿ ಎಳೆದಂತಾಗಲು ಶುರುವಾಗಿ ತೂಕಡಿಸಿ ತೂಕಡಿಸಿ ಎದುರಿಗಿದ್ದ ಪೆನ್ನಿನ ಮೇಲೇ ಬೀಳೋ ಬದಲು ಎಲ್ಲಾದರೂ ಮಲಗೋದು ವಾಸಿ ಎನ್ನಿಸತೊಡಗಿತು.

ಎಷ್ಟೋ ಹೊತ್ತಿನ ನಂತರ ಎದ್ದು ಕಣ್ಣುಬಿಡುತ್ತಾನೆ. ಸುತ್ತೆಲ್ಲಾ ಕತ್ತಲು. ಎಷ್ಟೊತ್ತು ಮಲಗಿದ್ದೆನೋ ಏನೋ ? ಇಷ್ಟು ಬೇಗ ಕತ್ತಲಾಗಿ ಹೋಯ್ತಾ ಅನಿಸಿತು. ಅರೆ, ಕತ್ತಲನ್ನೋದ್ರಲ್ಲಿ ಗಮನಿಸೇ ಇರಲಿಲ್ಲ. ಬಲಗೈ ಚಾಚಿದ್ರೆ ತಡರುತ್ತಿದ್ದ ಗೋಡೆ, ದಪ್ಪ ಜಾಸ್ತಿಯಾಗಿ ಕುತ್ತಿಗೆ ಒತ್ತುತ್ತಿದ್ದ ಹಾಸಿಗೆಯ ದಿಂಬುಗಳಿಲ್ಲ. ಕೈಚಾಚಿದ್ರೆ ಕೈ ಮುಂದೆ ಮುಂದೇ ಹೋಗುತ್ತಿದೆ. ದಿಂಬಿರಲಿ ದಿನಾ ಮಲಗುತ್ತಿದ್ದ ಹಾಸಿಗೆಯಂತಿರದೇ ಎಲ್ಲೋ ತರಗೆಲೆಗಳ ಮೇಲೆ ಮಲಗಿದಂತಿದೆ.. ಫ್ಯಾನ್ ಹಾಕ್ಬೇಡ ಅಂತ ಹೇಳಿದ್ರೂ ರೂಂ ಮೇಟ್ ಫ್ಯಾನ್ ಹಾಕಿಟ್ಟು ಹೊರಗೆಲ್ಲೋ ಹೋಗಿ ಬಿಟ್ಟಿದ್ದಾನಾ ? ಅರೆ ಫ್ಯಾನ ಸೌಂಡೂ ಇಲ್ಲ. ಆದ್ರೂ ತಣ್ಣನೆಯ ಗಾಳಿ.. ಎಲ್ಲಾ ವಿಚಿತ್ರವಾಗಿದೆಯಲ್ಲಾ ಅನಿಸತೊಡಗಿತು. ಜೊತೆ ಜೊತೆಗೇ ನಾನು ಎಲ್ಲಿದ್ದೇನೆ ಅನ್ನೋ ಆಶ್ಚರ್ಯ, ಅಳುಕು ಕಾಡತೊಡಗಿತು. ಕಣ್ಣು ಕತ್ತಲೆಗೆ ಒಗ್ಗತೊಡಗಿದಂತೆ ಮಲಗಿದ್ದ ವಿಶಾಲಮರದ ಬುಡ, ಮರದ ಆಕಾರಕ್ಕೆ ಹೆದರಿ ಬಳಿ ಬರಲೇ ಹೆದರಿದಂತೆ ಅನತಿ ದೂರದಲ್ಲೇ ಹರಿದುಹೋಗಿದ್ದ ರಸ್ತೆ, ಕಪ್ಪು ರಸ್ತೆಯಾಚೆಗೆ ಹಬ್ಬಿಕೊಂಡಿದ್ದ ದಿಗಂತ, ದಿಗಂತದಲ್ಲಿ ಮುಳುಗಿದ ಸೂರ್ಯನ ಕೆಂಪನ್ನು ತೊಳೆಯಲು ತಮ್ಮ ನೀಲಿ, ಕಪ್ಪು ಬಕೆಟ್ ನೀರಿನೊಂದಿಗೆ ತಯಾರಾದಂತಿರೋ ನಕ್ಷತ್ರಗಳು ತಮ್ಮ ಕೆಲಸದ ಮಧ್ಯೆಯೂ ಇವನನ್ನೇ ನೋಡಿ ಕಣ್ಣು ಹೊಡೆದಂತೆ!.., ತಮ್ಮ ಕೆಲಸದಲ್ಲಿ ತೊಡಗಿ ಇಲ್ಲಿ ಮರೆಯಾಗಿ ಇನ್ನೆಲ್ಲೋ ಕಂಡಂತೆ ಮಿನುಗುತ್ತಿದ್ದ ನಕ್ಷತ್ರಗಳು ಚುರುಕಾಗೇ ಕೆಲಸ ಮಾಡುತ್ತಿರಬೇಕು. ನೋಡ ನೋಡುತ್ತಿದ್ದಂತೇ ಆಗಸದ ಕಡುಗೆಂಪು ನೀಲಿಯಾಗಿ, ಕಪ್ಪಾಗತೊಡಗಿತು.

ಹಾಗೇ ಎದ್ದು ಕುಳಿತ. ಪೇಟೆಯಲ್ಲಿ ದಿನಾ ಕಣ್ಣು ಕೋರೈಸುತ್ತಿದ್ದ ಜಗಮಗವಿಲ್ಲ. ಬದಲು ದಿನಾ ಅರಸುತ್ತಿದ್ದ ಶಾಂತಿ, ನಿಶ್ಯಬ್ದತೆ ಇವನನ್ನೇ ಅರಸಿ ಬಂದಂತೆ. ನಿಶ್ಯಬ್ದತೆಯೆಲ್ಲಾ ತನ್ನದೇ ಎಂದು ಹಕ್ಕು ಚಲಾಯಿಸಿ ಕೂಗುತ್ತಿದ್ದ ಕೀಟಗಳ ವಿಚಿತ್ರ ಸದ್ದು ಮೊದಲು ಕಿರಿಕಿರಿಯೆನಿಸಿದರೂ ಅದೇ ಒಂದು ತರಹ ಖುಷಿ ಕೊಡತೊಡಗಿದವು. ಇನ್ನೊಂದು ಸ್ವಲ್ಪ ಹೊತ್ತು ಹೀಗೇ ಮಲಗಿರೋಣ ಎಂಬ ಎಂದಿನ ಆಲಸ್ಯ ಕಾಡಿದರೂ, ಮಲಗಿ ಬೇಸರವೆನಿಸಿ ಎದ್ದು ಕುಳಿತ. ಕಾಣದ ದೀಪಗಳ ಬೆಳಕು, ಗಿಜಿಗುಟ್ಟೊ ಹಾರ್ನು , ಮೈಕುಗಳಿಲ್ಲದ ಪರಿಸರ ತಾನು ಪೇಟೆಯಲ್ಲೆಂತೂ ಇಲ್ಲ. ಯಾವುದೋ ಹಳ್ಳಿಯ ಮೂಲೆಯಲ್ಲೋ ಕಾಡ ಮಧ್ಯೆದಲ್ಲೋ ಇದ್ದೇನೆಂಬ ಭಾವವನ್ನು ಗಟ್ಟಿಗೊಳಿಸತೊಡಗಿದವು. ಜೇಬ ತಡಕಿದರೆ ಮೊಬೈಲಿಲ್ಲ. ನಿಧಾನಕ್ಕೆ ಹೊಟ್ಟೆ ತಾಳ ಹಾಕತೊಡಗಿದ್ದಾಗ ಎಂದೂ ಜೊತೆಗಿರುತ್ತಿದ್ದ ಬ್ಯಾಗು ನೆನಪಾಯ್ತು.  ಸುತ್ತೆಲ್ಲಾ ತಡಕಿದರೂ ಅದು ಸಿಗದಿದ್ದಾಗ ಎಲ್ಲಿ ಕಳೆದುಹೋಗಿದೀನಪ್ಪಾ ನಾನು , ಹೇಗೆ ಇಲ್ಲಿಂದ ಹೊರಬರೋದು ಅಂತ ಅನಿಸೋಕೆ ಶುರು ಆಯ್ತು. ಹತ್ತಿರದಲ್ಲೇ ಯಾವುದಾದರೂ ಒಂದು ಹಳ್ಳಿ ಕಾಣಬಹುದೇನೋ ಅಂತ ಎದ್ದು ಕತ್ತು ನಿರುಕಿಸಿದ. ಊಹೂಂ. ಏನೂ ಇಲ್ಲ. ಎದುರು ಕಂಡ ರಸ್ತೆಯನ್ನೇ ಹಿಡಿದು ಹೊರಟರೆ ಯಾವುದಾದ್ರೂ ಹಳ್ಳಿಯೋ ಪೇಟೆಯೋ ಸಿಕ್ಕೇ ಸಿಗುತ್ತೆ. ಆದ್ರೆ ಯಾವ ಕಡೆ ಹೋಗೋದು ? ಎಡಕ್ಕೋ, ಬಲಕ್ಕೋ? ಜೀವನದಲ್ಲಿ ಪ್ರತೀ ಹೆಜ್ಜೆಯನ್ನೂ , ದಾರಿಯನ್ನೂ ದೊಡ್ಡವರು ಮಾರ್ಗದರ್ಶಿಸುತ್ತಲೇ ಬಂದಿದ್ರಿಂದ ಈ ತರಹದ ಹೊಸ, ವಿಚಿತ್ರ ಆಯ್ಕೆ ಎದುರಾಗಬಹುದಾದ ಕುರಿತು ಯೋಚನೆಯೇ ಬಂದಿರಲಿಲ್ಲ. ಏನಾದರಾಗಲಿ ಎಂದು  ಮನಸ್ಸು ಗಟ್ಟಿ ಮಾಡಿ ರಸ್ತೆಯಲ್ಲಿ ಎಡಕ್ಕೆ ಹೊರಟ..

ಸ್ಚಲ್ಪ ದೂರ ನಡೆಯುವಷ್ಟರಲ್ಲೇ ಬಾಯಾರಿಕೆಯಾಗತೊಡಗಿತು. ಆದರೆ ಆ ಗೊತ್ತಿಲ್ಲದ ರಸ್ತೆಯಲ್ಲಿ ಇವನಿಗೆ ನಿತ್ಯದ ಬಿಸ್ಲೇರಿ ಬಾಟಲಿಯನ್ಯಾರು ಮಾರಬೇಕು ? ಸ್ವಲ್ಪ ಮುಂಚೆ ಕಂಡ ರಸ್ತೆಯಿಂದ ಸ್ವಲ್ಪ ದೂರದಲ್ಲಿ  ಆಕಾಶಕ್ಕೊಂದು ಕನ್ನಡಿಯಿಟ್ಟಂತೆ ಆಗಸದ ತಾರೆಗಳನ್ನು, ಸುತ್ತಲಿನ ಮರಗಳನ್ನೂ ಪ್ರತಿಬಿಂಬಿಸುತ್ತಿದ್ದ ಕೆರೆಯ ನೆನಪಾಯ್ತು.ಅಲ್ಲಿಗೇ ಮರಳಿ ಸ್ವಲ್ಪ ನೀರು ಕುಡಿದುಬಿಡಲಾ ಎನಿಸಿಬಿಟ್ಟಿತು. ಆದರೆ ಹಾಗೆಲ್ಲಾ ಕೆರೆ, ಬಾವಿಗಳ ನೀರು ಕುಡಿಯಬಾರದಂತೆ! ಮೊನ್ನೆಯಷ್ಟೇ ಹೋಟೇಲಿನ ನೀರು ಕುಡಿದು ಜಾಂಡೀಸ್ ಬಂದ ಫ್ರೆಂಡು, ಮತ್ತೆಲ್ಲೋ ಹಾದಿಬದಿಯ ನೀರು ಕುಡಿದು ವೈರಲ್ ಫೀವರ್ ಬಂದ ಮತ್ತೊಬ್ಬ ನೆನಪಾದರು. ನೀರಿಲ್ಲದೇ ಗಂಟಲೊಣಗಿ ಸಾಯೋದಕ್ಕಿಂತ ಕೆರೆ ನೀರು ಕುಡಿದು ಕಾಯಿಲೆ ಬೀಳೋದು ವಾಸಿ ಅನಿಸಿತು. ಅಷ್ಟಕ್ಕೂ ಕೆರೆ ನೀರು ಕುಡಿದ ತಕ್ಷಣ ಕಾಯಿಲೆ ಬರುತ್ತಾ ? ಏನೋ ತಿಂದು ಏನೋ ಕಾಯಿಲೆ ತಂದುಕೊಂಡು ಹೋಟೇಲಿನ ಕಾಯದ ನೀರು ಅಂತ ಕಾರಣ ಹೇಳಿರಬಹುದೇ ಅಂತಲೂ ಪ್ರಶ್ನಿಸಿತು ವಿವೇಕ ಒಮ್ಮೆ. ಕೆರೆಯಲ್ಲಿ ನೀರನ್ನು ಬೊಗಸೆ ತುಂಬಿ ಕುಡಿಯಲು ಮುಂದಾದಾಗ ಕೆರೆಯಲ್ಲಿ ಸಾವಿರಾರು ಬಿಸ್ಲೇರಿ ಬಾಟಲಿಗಳು ತೇಲಿದಂತೆ ಕಂಡು, ಅವುಗಳಲ್ಲೊಂದು ಪ್ಲಾಸ್ಟಿಕ್ ತುಂಡು ಕೈಗೆ ಬಂದಂತಾಗಿ ನೀರನ್ನು ಚೆಲ್ಲಿ ಬಿಟ್ಟ. ಮತ್ತೆ ನೋಡಿದರೆ ಎಲ್ಲಾ ಭ್ರಮೆ. ಅಲ್ಲಿದ್ದಿದ್ದು ಸ್ವಚ್ಛ ನೀರಷ್ಟೇ. ತನ್ನ ಭ್ರಮೆಗೆ ಬೆಚ್ಚಿ ಎರಡನೇ ಬಾರಿ ಬೊಗಸೆಯಲ್ಲಿ ನೀರು ಬಗೆದಾಗ ಹಳೆಯ ನೆನಪುಗಳು ಮರುಕಳಿಸಿದವು. ಹೋದಲ್ಲೆಲ್ಲಾ ನನಗೆ ಬಿಸ್ಲೇರಿಯೇ ಬೇಕು ಎಂದು ಹಟ ಬೀಳುತ್ತಿದ್ದ ತನಗೆ ಬಿಸ್ಲೇರಿ ಬಾಟಲಿ ತಂದುಕೊಡಲು ಅವರು ಎಷ್ಟು ಕಷ್ಟಪಟ್ಟಿರಬಹುದು ? ಹುಚ್ಚು ಹಟ ತಂದಿರಬಹುದಾದ ನೂರು  ನೋವು ನಾಚಿಕೆ ಹುಟ್ಟಿಸಿತು. ನಾನು ಸೇಫಾಗಿ ಪಟ್ಟಣ ಸೇರಿದರೆ ಸಿಕ್ಕೋ ಸ್ವಚ್ಚ ನೀರನ್ನೇ ಕುಡಿತೇನೆ. ಕಾದ ನೀರು , ಬಿಸ್ಲೇರಿ, ಮಿನರಲ್ ವಾಟರ್ರೇ ಬೇಕೆನ್ನೋ  ಹುಚ್ಚುತನ ಬಿಡುತ್ತೇನೆ ಅಂದುಕೊಂಡ.
ಕೆರೆಯ ನೀರು ಕುಡಿದು ಹಾಗೇ ರಸ್ತೆಗೆ ಮರಳುತ್ತಿದ್ದವನಿಗೆ ಕೆರೆಯ ದಂಡೆಯಲ್ಲಿದ್ದ ಪೇರಲೆ ಮರವೊಂದು ಕಾಣಿಸಿತು. ನೆಲಕ್ಕೆ ಬಿದ್ದಿದ್ದ ಹಕ್ಕಿ ಕಚ್ಚಿದ್ದ ಪೇರಲೇ ಹಣ್ಣುಗಳೂ ಇವನಿಗೆ ಪೇಟೆಯ ಫಿಜ್ಜಾ ಬರ್ಗರಿನಂತೆ ಕಂಡವು. ಬರ್ಗರ್ ಕಂಡು ಖುಷಿಯಾಗಿ ಕೈ ಹಾಕಿದವನಿಗೆ ಸಿಕ್ಕಿದ್ದು ಅರೆ ತಿಂದ ಪೇರಲೇ ಕಾಯಿ! ಛೇ, ನೆಲಕ್ಕೆ ಬಿದ್ದಿದ್ದು ಮಣ್ಣು, ಹಕ್ಕಿ ತಿಂದಿದ್ದು. ಇದನ್ನೆಲ್ಲಾ ತಿಂದರೆ ಏನಾಗುತ್ತೋ, ಕೊಳಕು ಅಂದಿತು ಮನಸ್ಸು. ಏನೂ ಆಗಲ್ಲ. ಹಸಿವಿಂದ ಆಯೋ ಬದ್ಲು ಇದನ್ನ ತಿಂದು ಕಾಯಿಲೆ ಬರಿಸ್ಕೊಂಡ್ರೂ ಪರವಾಗಿಲ್ಲ. ಪಕ್ಕದಲ್ಲೇ ಕೆರೆಯ ಸ್ವಚ್ಛ ನೀರಿದೆ. ಬೇಕಾದ್ರೆ ತೊಳೆದುಕೋ ಎಂದಿತು ವಿವೇಕ. ಮೊದಲ ಪೇರಲೇ ಹಣ್ಣನ್ನ ಮತ್ತೆ ಕೆರೆಯ ನೀರಿನಲ್ಲಿ ತೊಳೆದುಕೊಂಡು ಗಬಗಬನೆ ತಿಂದ. ಎರಡನೆಯದನ್ನು ತೊಳೆಯುವಷ್ಟೂ ವ್ಯವಧಾನವಿರಲಿಲ್ಲ. ನೋಡಿದ, ಧೂಳೇನೂ ಕಾಣಲಿಲ್ಲ. ಧೂಳು ಕಾಣುವಷ್ಟು ಬೆಳಕಿರದ ಕತ್ತಲೆಯಾಗಿತ್ತು ,  ಚಂದ್ರನ ಬೆಳಕೂ ಅಷ್ಟು ಪ್ರಕರವಾಗಿರಲಿಲ್ಲ. ಕಂಡಿದ್ದರೂ ಪೇರಲೇ ಹಣ್ಣು ದೂರಕ್ಕೆಸೆಯುವಷ್ಟು ಹೊಟ್ಟೆ ತುಂಬಿದಂತ ಸ್ಥಿತಿ ಅವನದಾಗಿರಲಿಲ್ಲ. ಏನು ಸಿಕ್ಕಿದರೂ ತಿನ್ನುವಂತಾಗಿದ್ದ ಅವ.. ಎರಡು ಪೇರಲೇ ಹಣ್ಣು ತಿನ್ನುವಷ್ಟರ ಹೊತ್ತಿಗೆ ಕತ್ತಲು ಬರುವಂತಾಗಿದ್ದ ಕಣ್ಣು, ಹಸಿದಸಿದು ತಿರುಗುವಂತಾಗಿದ್ದ ತಲೆ ಸ್ವಲ್ಪ ಸ್ಥಿಮಿತಕ್ಕೆ ಬಂತು. ಸುತ್ತ ಬಿದ್ದಿದ್ದ ಅನೇಕ ಪೇರಲೇ ಹಣ್ಣುಗಳು ಕಂಡವು. ತಾನು ತರಿಸಿ ತಿನ್ನದೇ ಅರ್ಧ ಎಸೆಯುತ್ತಿದ್ದ ಬರ್ಗರು, ಫಿಜ್ಜಾಗಳೂ , ದಿನಾ ಊಟದಲ್ಲಿ ಬಡಿಸಿಕೊಂಡು ತಿನ್ನದೇ ಚೆಲ್ಲುತ್ತಿದ್ದ ಅನ್ನ, ಪಲ್ಯಗಳು ನೆನಾಪಾದವು. ಹೊತ್ತು ತುತ್ತಿಗಾಗಿ ದೇವಸ್ಥಾನದವರು ಕೊಡುತ್ತಿದ್ದ ಬೊಗಸೆ ಮೊಸರನ್ನಕ್ಕೆ ಜಗಳವಾಡುತ್ತಿದ್ದ ಭಿಕ್ಷುಕರ ಮಕ್ಕಳು, ತಾನು ಬೇಕರಿಯಲ್ಲಿ ಕೇಕು , ಬನ್ನುಗಳನ್ನು ತಗೊಂಡು ತಿನ್ನುವಾಗ ನನಗೂ ಒಂಚೂರು ಕೊಡಿ ಅಣ್ಣಾ .ಊಟವಿಲ್ಲದೇ ಮೂರು ದಿನವಾಯಿತು ಅಂತ ಬೇಡುತ್ತಿದ್ದ ಮಕ್ಕಳನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದುದು ನೆನಪಾಯಿತು. ಹಸಿವಿನ ಬೆಲೆ ಅರಿತಿದ್ದರಿಂದ ಸುರಕ್ಷಿತವಾಗಿ ಊರು ಸೇರಿದ್ರೆ ಮಾಡಬೇಕೆನ್ನೋ ಹೊಸವರ್ಷದ ಎರಡನೇ ಪ್ರತಿಜ್ನೆ ರೆಡಿಯಾಯ್ತು. ಅಗತ್ಯವಿದ್ದಷ್ಟು ಮಾತ್ರ ಬಡಿಸಿಕೊಂಡು ಒಂದಗುಳು ಅನ್ನವನ್ನೂ ಚೆಲ್ಲೊಲ್ಲ. ಹೊಟ್ಟೆಗಿಲ್ಲದಿರೋ ಜನರನ್ನ ಕಂಡಾಗ ಕೈಲಾದಷ್ಟು ಸಹಾಯ ಮಾಡ್ತೇನೆ. ಅನ್ನೋ ಪರಬ್ರಹ್ಮ ಅಂತ ತೀರ್ಮಾನಕ್ಕೆ ಬಂದ.

ರಸ್ತೆಗೆ ಮರಳಿ ಸುಮಾರು ಹೊತ್ತು ಹಾಗೇ ನಡೆದ, ಊರು ಹುಡುಕಿ. ಊರಿನ ಯಾವ ಬೆಳಕು ಕಾಣದಿದ್ದರೂ ಯಾರೋ ಕೆಮ್ಮುತ್ತಿದ್ದಂತೆ ಸದ್ದು ಕೇಳಿತು. ಕೊನೆಗೂ ಯಾವುದೋ ಮನುಷ್ಯ ದನಿ ಕೇಳಿತಲ್ಲಾ ಅಂತ ಸದ್ದು ಬಂದ ಕಡೆಗೆ ಲಗುಬಗೆಯಿಂದ ಹೆಜ್ಜೆ ಹಾಕಿದ. ನೋಡಿದರೆ ಒಬ್ಬ ಮುದುಕ ಮರದ ಬುಡದಲ್ಲಿ ಸಣ್ಣಗೆ ಬೆಂಕಿ ಹಾಕಿ ಅದರಲ್ಲೇ ಚಳಿ ಕಾಯಿಸುತ್ತಾ, ಬೀಡಿ ಹಿಡಿದು ಕೆಮ್ಮುತ್ತಾ ಕೂತಿದ್ದಾನೆ. ಕೆಮ್ಮಿ ಕೆಮ್ಮಿ ಹೈರಾಣಾಗಿ ಹೋದಂತಿದ್ದರೂ ಆತ ಬೀಡಿ ಬಿಡಲೊಲ್ಲ. ಅತನನ್ನು ನೋಡಿ ಏನೋ ಕೇಳಬೇಕೆನಿಸಿದವನಿಗೆ  ಸಿಗರೇಟು ಬಿಡಲೊಲ್ಲದೇ ಒದ್ದಾಡಬೇಕಾದ ತನ್ನ ವೃದ್ದಾಪ್ಯ ಕಣ್ಣ ಮುಂದೆ ಬಂದತಾಗಿ ಬೆಚ್ಚಿ ಬಿದ್ದ. ಬೀಸಲಾರಂಬಿಸಿದ ತಣ್ಣನೆಯ ಗಾಳಿಗೋ, ತನ್ನ ವೃದ್ದಾಪ್ಯದ ನರಳಾಟದ ಕಲ್ಪನೆಗೋ ಮೈಯೆಲ್ಲಾ ನಡುಗಲಾರಂಭಿಸಿತು.  ಚಳಿಗೆ ಶಿಕಾಪಟೆ ನಡುಗ್ತಿದಿ. ತಗಾ, ಈ ಕಂಬ್ಳಿ ಹೊದ್ಕ. ಆಮೇಲೆ ಮಾತಾಡೋವಂತಿ ಅಂತ ಆ ಮುದುಕ ಒಂದು ಕಂಬಳಿ ತನ್ನ ಮೈಮೇಲೆ ಹೊಚ್ಚಿದಾಗಲೇ ಇವ ವಾಸ್ತವಕ್ಕೆ ಬಂದಿದ್ದು. ಯಾರಪ್ಪಾ ನೀ, ಎಲ್ಲಿಂದ ಬಂದಿ ಅಂದ ಆ ಮುದುಕ. ಹೌದು .ಯಾರು ನಾನು ? ಬಂದಿದ್ದಾದ್ರೂ  ಎಲ್ಲಿಂದ ? ಹೋಗ್ತಿರೋದು ಎಲ್ಲಿಗೆ ಅಂತ ಇವನಿಗೇ ಗೊಂದಲವಾಯ್ತು. ಒಂದು ಮರದ ಬುಡದಲ್ಲಿ ಮಲಗಿದ್ದೆ . ಕಣ್ಣು ತೆರೆದು ನೋಡುವಷ್ಟರಲ್ಲಿ ಕತ್ತಲಾಗಿತ್ತು. ನನ್ನದು ಯಾವ ಊರೋ, ಯಾವ ಕೇರಿಯೋ ನೆನಪಾಗ್ತಾ ಇಲ್ಲ. ನನ್ನವರ ಹುಡುಕಿಕೊಂಡು ಮುಂದೆ ಸಿಗೋ ಹಳ್ಳಿಗೆ ಹೊರಟಿದ್ದೇನೆ ಅಂದ ಇವ. ಆ ಮುದುಕ ಒಮ್ಮೆ ನಸುನಕ್ಕ. ಯಾಕೆ ನಗ್ತಿದಿ ಅಜ್ಜಾ ಅಂದ ಇವ. ತಾಯೆಂಬೋ ಹೆಮ್ಮರದ ನೆರಳಲ್ಲಿ ಹುಟ್ಟಿ ಬೆಳೆದು , ಆಕಿ ಕೊಟ್ಟ ಹಣ್ಣೇ ಹೊಟ್ಟಿ ತುಂಬಿಸಿದ್ರೂ ಸಮಾಧಾನಿಲ್ಲ. ಅವಳನ್ನೇ ಅಡ್ಡಡ್ಡ ಸಿಗಿದು ಮಾರಿ ದುಡ್ಡು ಮಾಡೋಕೆ ಹೊಂಟಿ ನೀ. ಇನ್ನು ಆ ಮರ ಯಾವುದು ಅಂತ ನಿಂಗೆ ತಿಳಿಯೋದ್ ಹೆಂಗೆ ? ರ್ಆಕಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ, ಅಮ್ಮಾ ಅಂತ ಒಂದ್ ಮಾತು ಕರೆದಿದ್ರೆ ಗೊತ್ತಾಗಿಹೋಗ್ತಿತ್ತು ಅಂತ ಅಜ್ಜ ಹೇಳ್ತಿದ್ದರೆ ಒಂದು ಕ್ಷಣವೂ ಬೇರೆಯವರ .. ಹೋಗಲಿ ಹೆತ್ತಮ್ಮನ ಬಗ್ಗೆಯೇ ಯೋಚಿಸಲು ಸಮಯವಿಲ್ಲದಂತಾಗಿರೋ ಅಥವಾ ಹಾಗೆ ನಟಿಸ್ತಾ ಇರೋ ತನ್ನ ಬಗ್ಗೆನೇ ಜಿಗುಪ್ಸೆ ಹುಟ್ಟೋಕೆ ಶುರು ಆಯ್ತು.

ಹೊಸ ವರ್ಷದಲ್ಲಿ ತಾನು ಮಾಡಬೇಕಾದ ಮೂರನೇ ಮತ್ತು ನಾಲ್ಕನೇ ಕೆಲಸಗಳೂ ನೆನಪಾಗಿದ್ವು. ಮತ್ತೆ ಅಜ್ಜ, ಆ ಕೆರೆ, ಪೇರಲೇ ಹಣ್ಣು ಅಂದ. ಆ ಕೆರೆ ಹೆಸ್ರು ದಯಾಸಾಗರ. ದೇಹಿ ಅಂತ ಬಂದವ್ರಿಗೆ ಎಂದೂ ನಾಸ್ತಿ ಅಂದೋರಲ್ಲ ನಿನ್ನಪ್ಪ. ನೀ ಈಗ ಹೊದ್ದಿದೀಯಲ್ಲ ಕಂಬಳಿ. ಅದನ್ನು ಈ ಹದಿಮೂರಜ್ಜಂಗೆ ಕೊಟ್ಟೋರೂ ನಿನ್ನಪ್ಪನೇ. ಎಲ್ಲರ ಕಷ್ಟಕ್ಕೆ ನೆರವಾಗ್ತಿದ್ದ ಅವರ ಪುಣ್ಯವೇ ಒಂದು ಬೊಗಸೆ ನೀರಾಗಿ ನಿನ್ನ ಜೀವ ಉಳಿಸಿದ್ದು ಅಂತ ಜಾರಿದ್ದ ಕಂಬಳಿಯನ್ನ ಹಿಂಬಂದಿಗೆ ಬಂದು ತಲೆಯ ತನಕ ಹೊದಿಸಿದ  ಅಜ್ಜ. ನನ್ನ ತಾಯಿ ಮಾಡಿದ ಅನ್ನ ಸಂತರ್ಪಣೆನೇ ಪೇರಳೆ ಹಣ್ಣಾಗಿ ನನ್ನ ಹಸಿವಿಂಗಿಸಿದ್ದ ಹಾಂಗಾರೆ ? ಹೌ ರಿಡಿಕ್ಯುಲಸ್ ಅಂತ ಕಂಬಳಿ ಹೊದೆಸಿದ್ದ ಅಜ್ಜನಿಗಾಗಿ ಹಿಂದೆ ತಿರುಗಿ ನೋಡಿದ. ಅಲ್ಲಿ ಅಜ್ಜನಿಲ್ಲ! ದಾನ, ಧರ್ಮ, ಪಾಪ, ಪುಣ್ಯ ಎಲ್ಲಾ ಮೂಢನಂಬಿಕೆ . ಈ ವೈಜ್ನಾನಿಕ ಯುಗದಲ್ಲೂ ಅದನ್ನೆಲ್ಲಾ ನಂಬೋದೇ ಅಂತಿತ್ತು ವಿವೇಕ. ಹೌದು. ಆದ್ರೆ ಹೊಟ್ಟೆ ತುಂಬಿದ್ದೆಂತೂ ಹೌದು. ಬಾಯಾರಿದ್ದೂ ಹೌದು. ದಾನ ಧರ್ಮಗಳೆಲ್ಲಾ ಸುಳ್ಳೋ ಸತ್ಯವೋ ಅನ್ನೋ ವಾದ ಇತ್ತಟ್ಟಿಗಿಟ್ಟರೂ ನಾನು ಮಾಡಿದ್ದ ನಾಲ್ಕು ಪ್ರತಿಜ್ನೆ ಮಾತ್ರ ನಿಜ ಅಂತು ಮನಸ್ಸು. ಅಂದ ಹಾಗೆ ಈ ಹದಿಮೂರಜ್ಜ ಯಾರು ಅನ್ನೋ ಪ್ರಶ್ನೆ ಹಲವು ಸಲ ಕಾಡಿದ್ರೂ ಇಲ್ಲೇ ಎಲ್ಲೋ ಹೋಗಿರಬಹುದಾದ ಅವನು ಬಂದಾಗ ಕೇಳೇ ಮುಂದೆ ಹೋಗ್ಬೇಕು ಅಂತ ಬೆಂಕಿ ಕಾಯಿಸುತ್ತಾ ಅಲ್ಲೇ ಕೂತ. ಹಾಗೇ ಯಾವಾಗ ಕಣ್ಣಿಗೆ ನಿದ್ದೆ ಹತ್ತಿತೋ ಗೊತ್ತಿಲ್ಲ.. ಮೊಬೈಲಿನ ಧೂಮ್ ಮಚಾಲೇ ಹಾಡು ಯಾರದೋ ಕರೆ ಬರ್ತಿದೆ. ಬೇಗ ಬಂದು ಎತ್ತೋ ಅಂತ ಬೈದು ಬೈದು ಎಬ್ಬಿಸಿದ್ದು, ಕಣ್ಣು ಬಿಟ್ಟರೆ ಎಂದಿನ ಹಾಸಿಗೆಯಲ್ಲೇ ಮತ್ತೆ ಪವಡಿಸಿರೋದು ಮಾತ್ರ ಅರಿವಿಗೆ ಬಂದಿತ್ತು..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Badarinath Palavalli
10 years ago

ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ. ಪಂಜು 100ಗಳ ದಾಟಲಿ.

ತಾಯೆಂಬೋ ಹೆಮ್ಮರದ ನೆರಳಲ್ಲಿ ಹುಟ್ಟಿ ಬೆಳೆದು , ಆಕಿ ಕೊಟ್ಟ ಹಣ್ಣೇ ಹೊಟ್ಟಿ ತುಂಬಿಸಿದ್ರೂ ಸಮಾಧಾನಿಲ್ಲ. ಅವಳನ್ನೇ ಅಡ್ಡಡ್ಡ ಸಿಗಿದು ಮಾರಿ ದುಡ್ಡು ಮಾಡೋಕೆ ಹೊಂಟಿ ನೀ. ಇನ್ನು ಆ ಮರ ಯಾವುದು ಅಂತ ನಿಂಗೆ ತಿಳಿಯೋದ್ ಹೆಂಗೆ ? ರ್ಆಕಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ, ಅಮ್ಮಾ ಅಂತ ಒಂದ್ ಮಾತು ಕರೆದಿದ್ರೆ ಗೊತ್ತಾಗಿಹೋಗ್ತಿತ್ತು – ಎನ್ನುವ ಅಜ್ಜನ ಮಾತು ಮನಸ್ಸಿಗೆ ನಾಟಿತು.

ಪದ್ಮಾ ಭಟ್

ಚನ್ನಾಗಿದೆ ಬರಹ.. 🙂  ಮತ್ತೊಮ್ಮೆ ಓದಬೇಕೆನ್ನಿಸುವಷ್ಟು….

2
0
Would love your thoughts, please comment.x
()
x