[ಕನ್ನಡ ಸಾಹಿತ್ಯಾಕಾಶದ ಕೃಷಿಋಷಿಮಂಡಲದಲ್ಲಿ ತಮ್ಮ ವಿದ್ವಚ್ಛಕ್ತಿಪ್ರಭೆಯಿಂದ ವಿರಾಜಮಾನರಾಗಿರುವ, ಮತ್ತು ವಾತ್ಸಲ್ಯಾದಿ ಗುಣೋಜ್ವಲತೆಗಳಿಂದ ತಮ್ಮ ಅಭಿಮಾನಿಗಳ ಹೃದಯಾಕಾಶದಲ್ಲಿಯೂ ಅಂತೆಯೇ ಶೋಭಿಸುತ್ತಿರುವ, ಮೈಸೂರಿನ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಈಗ ಸಹಸ್ರ ಪೂರ್ಣಚಂದ್ರ ದರ್ಶನ ಪ್ರತಿಫಲನದಿಂದ ಮತ್ತಷ್ಟು ಕಾಂತಿಯುತರಾಗಿದ್ದಾರೆ. ಮಾರ್ಚ್-೨೦೧೫ರಲ್ಲಿ ಜರುಗಿದ ಅವರ ಸಹಸ್ರ ಚಂದ್ರ ದರ್ಶನೋತ್ಸವ ಸಂದರ್ಭದಲ್ಲಿ ಅವರಿಗಿಲ್ಲೊಂದು ಬರಹಮಣಿಹ.]
ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಸಾಹಿತ್ಯಶಾಸ್ತ್ರಗಳಲ್ಲಿ ವೆಂಕಟಾಚಲಸದೃಶರೇ ಸರಿ. ಆ ದೊಡ್ಡಬೆಟ್ಟದ ದಾರಿಯಲ್ಲಿ ಸುಳಿಯುವ ಸಂಭವವೂ ಇಲ್ಲದ ನನಗೂ-ಅವರಿಗೂ ನಡುವೆ ಇರುವ ಒಡನಾಟವು, ಇಬ್ರಾಹಿಂನಿಗೂ-ಬ್ರಹ್ಮೋತ್ಸವಕ್ಕೂ ಇರುವ ಸಂಬಂಧಕ್ಕಿಂತ ಹೆಚ್ಚೇನೂ ಅಲ್ಲವೆಂದು ಹೊರನೋಟಕ್ಕೆನಿಸುವುದು. ಆದರೆ, ಶಾಸ್ತ್ರಿಗಳ ಅರಿವು-ಅನುಭವಗಳ ಹರಹು-ಹಿರಿಮೆ ಹಾಗೂ ಅವನ್ನು ಹಂಚಿಕೊಳ್ಳಬೇಕೆನ್ನುವ ಅವರ ತುಡಿತ, ಮತ್ತು ಅವರ ಒಲುಮೆಯ ಚಿಲುಮೆ ಎಂತಿವೆಯೆಂದರೆ, ಪಂಡಿತರಷ್ಟೇ ಪಾಮರರೂ ಅವರಿಗೆ ಸರಾಗವಾಗಿ ಸಮೀಪವಾಗುತ್ತಾರೆ. ಸಾಹಿತ್ಯ-ಸಂಶೋಧನೆ-ಶಿಕ್ಷಣ ಕ್ಷೇತ್ರಗಳ ಗಾಳಿಗಂಧವೂ ಇಲ್ಲದ ನನಗೆ ಅವರೊಡನೆ ಹೊಕ್ಕುಬಳಕೆ ಬೆಳೆದದ್ದು ಅವರ ಈ ಪ್ರಕೃತಿಯಿಂದಾಗಿಯೇ. ವಸ್ತುತಃ, ನನ್ನನ್ನು ಅವರೆಡೆಗೆ ಎಳೆತಂದದ್ದು ನಾನು ಅವರಲ್ಲಿ ಕಂಡ ವಿಶಿಷ್ಟ ಇತಿಹಾಸಪ್ರಜ್ಞೆ. ಸಾಹಿತ್ಯ ಶಿಲ್ಪಿಗಳು, ಆಪ್ತರು-ಆಚಾರ್ಯರು, ಮಾರ್ಗದರ್ಶಕ ಮಹನೀಯರು, ಉದಾರಚರಿತರು- ಉದಾತ್ತಪ್ರಸಂಗಗಳು ರೀತಿಯ ಅನೇಕ ಪುಸ್ತಕಗಳಲ್ಲಿ ಅವರು ಮಾಡಿರುವ ವ್ಯಕ್ತಿಚಿತ್ರಣದ ಸೊಗಸು-ಸೊಗಡು, ವಿಧವಿಧ ರಂಗಗಳಲ್ಲಿನ ವಿಖ್ಯಾತ ಹಾಗೂ ಅಜ್ಞಾತ ಸಾಧಕರ ಜೀವನವನ್ನು ಕುರಿತಂತೆ ನನಗಿದ್ದ ಕುತೂಹಲವನ್ನು ಕೆರಳಿಸಿ, ನನ್ನನ್ನು ವೆಂಕಟಾಚಲನಿಲಯ ಕಾಂತಕ್ಷೇತ್ರಕ್ಕೊಯ್ದಿತು. ಈ ಅಂತರಂಗಪ್ರವೇಶ ದೊರಕಿದ ತರುವಾಯ, ನನ್ನ ಕಥನಕುತೂಹಲವನ್ನು ನಾನು ತಣಿಸಿಕೊಳ್ಳುತ್ತಾ ಹೋದಂತೆ, ನನಗೆ ಅವರ ವ್ಯಕ್ತಿತ್ವದ ವಿಶಿಷ್ಟ ಪರಿಮಾಣ ಮತ್ತು ಪರಿಣಾಮಶಕ್ತಿಗಳು ಗೋಚರಿಸುತ್ತಾಹೋದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸುವುದು ಪ್ರಸ್ತುತವಾಗಬಹುದು.
ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ
ತಮ್ಮ ದೇಹಾರೋಗ್ಯ ಮತ್ತು ವಯೋಮಿತಿಯನ್ನು ಲೆಕ್ಕಿಸದೆ, ಅಧಿಕೃತ ಮಾಹಿತಿಗಾಗಿ-ದಾಖಲೆಗಳಿಗಾಗಿ ಊರೂರು ಸುತ್ತಾಡಿ, ಕಥಾನಾಯಕರನ್ನು ಕುರಿತ ಸಂಗತಿಗಳ ಬಗ್ಗೆ ನೇರ ಸಂಬಂಧಿಗಳೇ ಅನಾದರ ತೋರಿರುವ ಸಂದರ್ಭಗಳಲ್ಲೂ ಪಟ್ಟಿನಿಂದ ಮುಂದುವರೆದು, ಅವಶ್ಯ ಮಾಹಿತಿಯನ್ನು ತಮ್ಮ ಖರ್ಚಿನಲ್ಲೇ ವಿದೇಶಿ ಮೂಲಗಳಿಂದಾದರೂ ಸಂಪಾದಿಸಿ, ಪ್ರಕಟಿಸುವ ಶಾಸ್ತ್ರಿಗಳ ಅನುಪಮ ಅನ್ವೇಷಕ ಪ್ರವೃತ್ತಿ; ದಣಿವರಿಯದ ಬೌದ್ಧಿಕೋತ್ಸಾಹ; ಮತ್ತು ಕುಂದದ ಲೇಖನಿಫಲವತ್ತತೆ. [ಅವರ ಸಾಹಿತ್ಯ ಕಾಣಿಕೆಗಳು ವೆಂಕಟಾಚಲ ಸದೃಶ ಆಗಿರುವಷ್ಟೇ, ಅವರ ಭೌತಿಕ-ಬೌದ್ಧಿಕ ಚೇತನವು ಹೇಗೆ ಚಲನಶೀಲವೂ ಆಗಿದೆ ಎಂಬುದು ಇಲ್ಲಿ ವಿಶದವಾಗುತ್ತದೆ. ]
ಎಂದೋ-ಎಲ್ಲೋ ಕಂಡ ಅಥವಾ ಇಂದಿನವರು ಯಾರೂ ಕಂಡರಿಯದ ವ್ಯಕ್ತಿಗಳ ಹೆಸರುಗಳನ್ನು ಕೇಳಿದೊಡನೆಯೇ, ಅಂಥವರ ಸಂಪೂರ್ಣ ಪ್ರವರವನ್ನೀಯುವ, ತತ್ಸಂಬಂಧಿತ ಮಾಹಿತಿಯು ಯಾವಯಾವ ಆಕರಗಳಲ್ಲಿ ಸಿಗಬಹುದು ಎಂಬುದನ್ನು ಥಟ್! ಎಂದು ಸುರುಳಿಬಿಚ್ಚಿಡುವ, ಶಾಸ್ತ್ರಿಗಳ ಕಂಪ್ಯೂಟರ್-ಸಮಾನ ನೆನಪಿನ ಶಕ್ತಿ. [ಕಳೆದ ೨೦೦ ವರ್ಷಗಳನ್ನು ಒಳಗೊಳ್ಳುವ, ಮೈಸೂರು ಸಂಸ್ಥಾನದ ಪ್ರಮುಖ ವ್ಯಕ್ತಿಗಳನ್ನು-ಘಟನೆಗಳನ್ನು ಕುರಿತ ನನ್ನ ಕೇಳ್ವೆಗಳಿಗೆ, ನನಗೆ ಗೊತ್ತಿಲ್ಲ ಎಂಬ ಮಾರ್ನುಡಿಯನ್ನು ನಾನು ಅವರಿಂದ ಕೇಳಿರುವುದು ಬಹುವಿರಳ. ಸಾಮಾನ್ಯಜನಜೀವನವನ್ನು ಕುರಿತಂತೆ ಅವರಿಗಿರುವ ಆಸಕ್ತಿ ಮತ್ತು ದಾಖಲಿಸುವ ಸಾಮರ್ಥ್ಯದಲ್ಲಿ ಅವರನ್ನು ನವಮೈಸೂರಿನ ಡಿ.ವಿ.ಜಿ. ಎಂದೇ ಕರೆಯಬಹುದು. ಅವರಂತೆಯೇ ಮಾಹಿತಿಯ ಭೂರಿಬೊಕ್ಕಸವಾಗಿದ್ದವರು, ಸಂಸ್ಕೃತ ವಿದ್ವಾಂಸ, ಕೀರ್ತಿಶೇಷ ಕೌಲಗಿ ಶೇಷಾಚಾರ್ ಅವರು. ಶೇಷಾಚಾರ್ ಅವರನ್ನು ನನಗೆ ಪರಿಚಯಿಸಿ, ಅವರ ಅಮೌಲ್ಯ ಸ್ನೇಹ-ಪ್ರೇಮಗಳಿಗೆ ನನ್ನನ್ನು ಪಾತ್ರವಾಗಿಸಿದವರು ಶಾಸ್ತ್ರಿಗಳೇ.]
ವೇದಿಕೆಯ ಮೇಲಿಂದಾಗಲೀ ಅಥವಾ ಖಾಸಗಿ ಸಂಭಾಷಣೆಗಳಲ್ಲಾಗಲೀ, ಭಾರತ ಕಣ್ಣಲಿ ಕುಣಿಯುವುದು ಎಂಬ ಸುಕವಿಯುಲಿವಿನಂತೆ, ತಮ್ಮ ಶ್ರೋತೃಗಳಿಗೆ ವಿಚಾರವಸ್ತುವನ್ನು ಪ್ರತ್ಯಕ್ಷ ದರ್ಶನ ಮಾಡಿಸುವ, ಟಿ.ವಿ.ಯ ಠೀವಿಯನ್ನು ಮಂಕಾಗಿಸುವ, ಟಿ.ವಿ.ವಿ. ನಿರೂಪಣಾ ಪ್ರತಿಭೆ.
ಕನ್ನಡ-ಸಂಸ್ಕೃತ ಇವುಗಳಲ್ಲಿ ಪ್ರಕಾಂಡ ಪಾಂಡಿತ್ಯವಿದ್ದಾಗ್ಯೂ, ಇಂಗ್ಲಿಷ್ ವಿರುದ್ಧ ಯಾವ ಮಡಿವಂತಿಕೆ-ದ್ವೇಷ ತೋರದೆ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಸಂವಾದ ನಡೆಸುವ, ಇಂಗ್ಲಿಷ್ ಆಕರಗಳನ್ನು ಲೀಲಾಜಾಲವಾಗಿ ಜಾಲಾಡುವ ಅವರ ನಿಷ್ಪಕ್ಷ, ಶುದ್ಧ ಜ್ಞಾನಾಸಕ್ತಿ. [ಹೀಗಾಗಿಯೇ ಅವರು ತಮ್ಮ ವ್ಯಾಪಕ ಸಂಪರ್ಕಜಾಲದಲ್ಲಿ ಹಲವಾರು ವಿಶ್ವಪ್ರಸಿದ್ಧ ವಿದೇಶಿ ವಿದ್ವಾಂಸರನ್ನು ಎಣಿಸಲು ಸಾಧ್ಯವಾಗಿದೆ.]
ಜಾತಿ, ಮತ, ಲಿಂಗ, ವಯಸ್ಸು, ರಾಜಕೀಯ-ಧಾರ್ಮಿಕ-ಸಾಹಿತ್ಯಕ-ಸೈದ್ಧಾಂತಿಕ ನಂಬಿಕೆಗಳು ಇವುಗಳೆಲ್ಲದರ ಮಿತಿಗಳನ್ನು ಮೀರಿ, ಯಾವ ಜ್ಞಾನಾರ್ಥಿಗಾದರೂ ಮಾರ್ಗದರ್ಶನ ಮಾಡುವ, ಯಾವ ಪ್ರಮುಖರೊಡನಾದರೂ ವೇದಿಕೆಯನ್ನು ಹಂಚಿಕೊಳ್ಳುವ, ಅವರ ಮುಕ್ತಮನಸ್ಕ-ವಿವಾದಾತೀತ ವ್ಯಕ್ತಿತ್ವ. ಯಾರೊಡನಾಗಲೀ, ಅವರ ಹತ್ತಿರದ-ಹಳೆಯ ಸಂಬಂಧಿಯೇ ತಾವೇನೋ ಎಂಬ ಸ್ನೇಹ-ಸೌಖ್ಯ ಕೊಡುವ ಸಹಜಗುಣ. [ಈ ಕಾರಣಕ್ಕೇ, ಅವರ ಅಭಿಮಾನಿಗಳ ಬಳಗವು ಬೆರಗುಗೊಳಿಸುವಂತೆ ಹಬ್ಬಿದೆ.]
ಮೊದಲೇ ತಿಳಿಸಿದಂತೆ, ಶಾಸ್ತ್ರಿಗಳ ಸಾಹಿತ್ಯವೆಂಕಟಾಚಲದ ಎತ್ತರವನ್ನು ನಿಟ್ಟಿಸುವ ನೋಟಶಕ್ತಿ ನನ್ನಲ್ಲಿಲ್ಲವಾದ್ದರಿಂದ, ನಾನು ಆ ಬಗ್ಗೆ ಏನನ್ನೂ ಹೇಳಲಾರೆನಾದರೂ, ಕನ್ನಡದ ’ಐತಿಹಾಸಿಕವ್ಯಕ್ತಿಚಿತ್ರಕ’ ಪಾತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಮಾತ್ರ ಅನನ್ಯ ಎಂದು ಗಟ್ಟಿಯಾಗಿ ಉಗ್ಗಡಿಸಬಲ್ಲೆ. ನಿಜಕ್ಕೂ, ಇತಿಹಾಸ ಋಣ ತೀರಿಸುವಲ್ಲಿ ಅವರೊಂದು ಹೊಸ ಮೇಲ್ಪಂಕ್ತಿಯನ್ನೇ ಹಾಕಿಕೊಟ್ಟಿದ್ದಾರೆಂದರೆ ಅತಿಶಯವಾಗದು.
ಶಾಸ್ತ್ರಿಗಳೊಡನೆ ನಾನು ಆನಂದಿಸಿರುವ ಕಾಲಾವಧಿಯತ್ತಲೊಮ್ಮೆ ಹಿನ್ನೋಟಕನ್ನಡಿಯಲ್ಲಿ ಇಣುಕಿದರೆ, ನಾನೂ ಅವರ ಸಾಹಿತ್ಯವಿದ್ಯಾರ್ಥಿ ಆಗಬಾರದಿತ್ತೇ? ಅವರ ಪರಿಚಯವು ನನಗೆ ಐದಾರೇಳು ವರ್ಷಗಳಿಗಿಂತಲೂ ಹಿಂದೆಯೇ ಲಭಿಸಬಾರದಿತ್ತೇ? ಎಂಬ ಹಂಬಲು ಈಗ ಸುಳಿದರೂ, ಅವರ ನಂಟು ನನ್ನನ್ನು ಈ ಮಟ್ಟಿಗಾದರೂ ಅಂಟಿತಲ್ಲ ಎಂಬ ನೆಮ್ಮದಿಯು ನನ್ನ ಖಿನ್ನ ಭಾವನೆಗಳನ್ನು ಒಡನೆಯೇ ಅಡಗಿಸುತ್ತದೆ.
ಪ್ರೊ. ವೆಂಕಟಾಚಲ ಶಾಸ್ತ್ರಿಗಳು ತಾವಷ್ಟೇ ಸಹಸ್ರಚಂದ್ರದರ್ಶನವನ್ನು ಮಾಡಿಲ್ಲ; ತಮ್ಮ ಸಾಹಿತ್ಯದರ್ಶನ-ಜೀವನದರ್ಶನಗಳ ಬೆಳ್ದಿಂಗಳನ್ನು-ತಂಪನ್ನು-ಸೌಂದರ್ಯವನ್ನು ಸಹಸ್ರಾರು ಶಿಷ್ಯರಿಗೆ, ಮಿತ್ರರಿಗೆ, ಕನ್ನಡಮಹಾಜನತೆಗೆ ಧಾರೆಯೆರೆದಿದ್ದಾರೆ. ಛಂದೋವಿಲಾಸದ ಛಂದವನ್ನು ಕಾಣದಿರುವವರಿಗೂ, ಚಂದ-ಚೆಂದ-ಮಾಮನಾಗಿ ಪ್ರೇಮ-ಪ್ರೇರಣೆಗಳನ್ನಿತ್ತು ಧನ್ಯರಾಗಿದ್ದಾರೆ. ಇದರಿಂದಾಗಿ ಕನ್ನಡ ನಾಡು-ನುಡಿ-ನಾಡಿ-ನಾಡಿಗ ಎಲ್ಲಕ್ಕೂ ಮತ್ತು ಅವರಿಗೂ ನಿಲುಕಿರುವ ನಲ್ಮೆ-ನಲವು-ನರುಗು ನಿಡುಗಾಲವೂ ನಿರುಮ್ಮಳ ನಡಗೆಯಲ್ಲಿರಲಿ!
*****