ಅನಕೃ ಮಹಾನ್ ಮೇರು ಕಾದಂಬರಿ ಸಾರ್ವಭೌಮರು: ಹೊರಾ.ಪರಮೇಶ್ ಹೊಡೇನೂರು

ಸಂಗೀತ, ನಾಡು ನುಡಿಗೆ ಅನಕೃ ಕೊಡುಗೆ

“ಅನಕೃ”ಎಂಬ ಹೃಸ್ವ ಪದಪುಂಜದಲ್ಲಿಯೇ ಅಗಾಧವಾದ ಸಾಹಿತ್ಯ ಅನಾವರಣಗೊಳ್ಳುತ್ತದೆ. ಕನ್ನಡ ಸಾಹಿತ್ಯದ ಕೃಷಿಯ ಜೊತೆಗೆ ಕನ್ನಡ ಭಾಷೆಯ ಬಳಕೆ-ಉಳಿಕೆಗೆ ಅಕ್ಷರಶಃ ಶ್ರಮಿಸಿದ ಅಪೂರ್ವ ಸಾಹಿತಿ ಅ.ನ.ಕೃಷ್ಣರಾಯರು. ಹುಟ್ಟಿದ್ದು ಕೋಲಾರವೇ ಆದರೂ ತಂದೆ ನರಸಿಂಗರಾಯರು-ತಾಯಿ ಅನ್ನಪೂರ್ಣಮ್ಮನವರು ಮೂಲತಃ ಅರಕಲಗೂಡಿನವರಾದುದರಿಂದ ಅನಕೃ ಅವರು ಅರಕಲಗೂಡಿನವರೇ ಎಂಬುದಾಗಿ ಪರಿಭಾವಿಸಲ್ಪಟ್ಟಿದ್ದಾರೆ. ಬಳ್ಳಿಯು ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಅದರ ಹುಟ್ಟಿದ ಜಾಗವೇ ಅಸ್ತಿತ್ವವನ್ನು ಹೇಳುವಂತೆ ಅನಕೃ ಅರಕಲಗೂಡು ಭಾಗದವರೇ ಎಂಬುದಾಗಿ ಪರಿಗಣಿತವಾಗಿದ್ದಾರೆ.

190೮ ರ ಮೇ 9 ರಂದು ಭುವಿಗವತರಿಸಿದ ಅನಕೃ ಅವರು ಮಹಾನ್ ಕನ್ನಡಾಭಿಮಾನಿಯಾಗಿದ್ದರು ಎಂಬುದಕ್ಕೆ ಅನೇಕ ಅಂಶಗಳು ಸಾಕ್ಷಿಯಾಗಿ ಉಳಿದಿವೆ.
“ಕನ್ನಡ ಭಾಷೆಗೆ ನನ್ನಂಥವರು ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ” ಎಂಬ ಅವರ ಹೇಳಿಕೆಯ ಕನ್ನಡ ಸಾಹಿತ್ಯದ ಚರಿತ್ರೆಯೊಳಗೆ ಅಮೂಲ್ಯವಾದ ಸುಭಾಷಿತದಂತೆ ಉಳಿದುಕೊಂಡಿದೆ. ಅವರ ಭಾಷಾ ಸೌಹಾರ್ದತೆಯ ಭಾವ ಹೇಗಿತ್ತು ಎಂದರೆ “ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಹಿಮ್ಮೆಟ್ಟಿಸಿ ಮುನ್ನುಗ್ಗುವುದು ಸರಿಯಲ್ಲ” ಎಂಬ ಅವರ ನಿಲುವು ಕನ್ನಡದ ಉಳಿವಿನ ಪರವಾದ ತತ್ವವಾಗಿತ್ತು.

ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದ ಅವರು ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿ, ಸಂದೇಶ, ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಅಪಾರ ಅಭಿಮಾನಿ ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ನೆಲದಲ್ಲಿಯೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ವಿಲಕ್ಷಣ ಸಂದರ್ಭದಲ್ಲಿ ಅನಕೃ ಅದಕ್ಕಾಗಿ ದಿಟ್ಟ ಹೋರಾಟವನ್ನೇ ನಡೆಸಿದರು. ಅವರ ಅಚಲವಾದ ಕನ್ನಡಾಭಿಮಾನದ ಹೋರಾಟ, ಚಳುವಳಿಗಳ ಪ್ರಭಾವದಿಂದ ಬೆಂಗಳೂರಿನ ‘ಅಲಂಕಾರ್ ‘ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ೧೯೬೩ರಲ್ಲಿ ಜಿ.ವಿ.ಅಯ್ಯರ್ ನಿರ್ದೇಶನದ ‘ಬಂಗಾರಿ’ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಇನ್ನೊಂದು  ವಿಶೇಷವೆಂದರೆ “ತುಂಬಿದ ಕೊಡ” ಚಿತ್ರದಲ್ಲಿ ಸಾಹಿತಿ ಅ.ನ.ಕೃ.ಸಣ್ಣ ಪಾತ್ರವೊಂದರಲ್ಲಿಯೂ ಅಭಿನಯಿಸಿ ಚಿತ್ರ ನಟರಾಗಿಯೂ ಗುರ್ತಿಸಿಕೊಂಡರು.

ಸಂಗೀತ ಲೋಕಕ್ಕೆ ಅನಕೃ ಕೊಡುಗೆ

ಆಗಿನ ಕಾಲದಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಸಂಘ ಸಂಸ್ಥೆಗಳು ನಮ್ಮ ಕನ್ನಡ ನೆಲದ ಸಂಗೀತ ಪ್ರತಿಭೆಗಳಿಗೆ ಅವಕಾಶ ನೀಡದೆ, ಅಲಕ್ಷ್ಯ ಭಾವನೆ ತೋರಿಸುತ್ತ, ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, ಮದರಾಸಿನಿಂದ ಗಾಯಕರನ್ನು ಕರೆಸಿ ಹಾಡಿಸುತ್ತಿದ್ದವು. ಇದು ಅನಕೃ ಅವರ ಅಪ್ಪಟ ಕನ್ನಡಾಭಿಮಾನದ ಅಸ್ಮಿತೆಯ ಭಾವಕ್ಕೆ ಧಕ್ಕೆ ಉಂಟುಮಾಡಿದುದರಿಂದ ಈ ದಯನೀಯ ಬೆಳವಣಿಗೆಯನ್ನು ಬಲವಾಗಿ ವಿರೋಧಿಸಿದರು. ಹೀಗೆ ಒಮ್ಮೆ ಮದರಾಸಿನಿಂದ ಖ್ಯಾತ ಗಾಯಕಿ ಎಮ್. ಎಸ್. ಸುಬ್ಬುಲಕ್ಷ್ಮಿಯವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಾಡಲು ಬಂದಿದ್ದಾಗ ಅನಕೃ ಅವರು , ಅವರ ಬಳಿ ಹೋಗಿ
ಕನ್ನಡ ಪ್ರತಿಭೆಗಳಿಗೆ ಅವಕಾಶಗಳ ಕೊರತೆ, ಅವರಿಗೆ ಸಿಗಬೇಕಾದ ಮಾನ್ಯತೆಯ ಮೇಲಿನ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು. ಆಗ ಸುಬ್ಬುಲಕ್ಶ್ಮಿಯವರು ಚಳುವಳಿಯ ಸದುದ್ದೇಶದ ಇಂಗಿತವನ್ನು ಒಪ್ಪಿಕೊಂಡು, ತಮ್ಮ ಸಂಗೀತ ಕಾರ್ಯಕ್ರಮವನ್ನು ರದ್ದುಮಾಡಿ ಹಿಂತಿರುಗಿದ್ದರು. ಈ ವಿಷಯ ಅನೇಕ ಕನ್ನಡಿಗರಲ್ಲಿ ಆತ್ಮಾಭಿಮಾನದ ಸರಕಾಗಿ, ತಾಯ್ನಾಡಿನ ಬಗೆಗಿನ ಅನಕೃ ರವರ ಕಳಕಳಿಗಾಗಿ ಬಹಳ ಚರ್ಚೆಯಾಗುವ ಮೂಲಕ ಹೋರಾಟಕ್ಕೆ ಸ್ಪೂರ್ತಿಯಾಯಿತು.

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಒಂದು ಸಭೆಯಲ್ಲಿ ಅನಕೃ ಕುರಿತು ಹೇಳಿದ ಮಾತೊಂದು ಹೀಗಿದೆ, “ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲ್ ಅವರು ಮುಸ್ಲಿಂ ಕನ್ನಡಿಗರು, ಅನಕೃ ಅಚ್ಚ ಕನ್ನಡಿಗರು “. ಈ ನುಡಿ ಅನಕೃ ಅವರ ಕನ್ನಡದ ಬಗೆಗಿನ ಅಂತರಂಗದ ಮಿಡಿತವನ್ನು ಬಿಂಬಿಸುತ್ತದೆ.

೧೯೪೧ರಲ್ಲಿ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವ ಸಂದರ್ಭದಲ್ಲಿ ಜರುಗಿದ ಕನ್ನಡ ನಾಡಿನ ವಿದ್ವಾಂಸರ ಸಮ್ಮೇಳನದಲ್ಲಿ ತಮಿಳುನಾಡಿನ ನಿರ್ಣಯವನ್ನು ವಿರೋಧಿಸಿ, “ಸಂಗೀತಕ್ಕೆ ಭಾಷೆ ಮುಖ್ಯವಲ್ಲ”ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಆಗ ಕರ್ನಾಟಕ ಸಂಗೀತದಲ್ಲಿ ಕನ್ನಡಕ್ಕೆ ಕೊಂಚ ಮಟ್ಟಿಗಾದರೂ ಸ್ಥಾನಮಾನ ಸಿಗುವ ವಿಚಾರ ನೆನೆಗುದಿಗೆ ಬಿದ್ದಂತಾದಾಗ, ಅನಕೃ ಅಷ್ಟಕ್ಕೇ ಬಿಡಲಿಲ್ಲ. ಮೊದಲಿಗೆ ದಾಸರ ಪದಗಳನ್ನು, ಶಿವಶರಣರ ವಚನಗಳನ್ನು ಸಂಗೀತಕ್ಕೆ ಅಳವಡಿಸುವಂತೆ ವೀಣೆ ರಾಜಾರಾಯರು ಮತ್ತು ಇತರ ಗೆಳೆಯರನ್ನು ಹುರಿದುಂಬಿಸಿ ಅವುಗಳನ್ನು ಕನ್ನಡ ಸಾಹಿತ್ಯ ಪರಿಷತ್ತು 1942ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ನೆರವಾದರು. ಇಷ್ಟಾದರೂ ಮುಂದಿನ ವರ್ಷಗಳಲ್ಲೂ ಸಂಗೀತ ಕಛೇರಿಗಳಲ್ಲಿ ಕನ್ನಡದ ಕೃತಿಗಳು ವೇದಿಕೆ ಹತ್ತಲಿಲ್ಲ. ೧೯೫೬ರಲ್ಲಿ ಕರ್ನಾಟಕ ಏಕೀಕರಣವಾಗಿ “ಕನ್ನಡನಾಡು” ಉದಯವಾದರೂ ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡಕ್ಕೆ ಮೌಲ್ಯ ಹೆಚ್ಚಾಗಲೇ ಇಲ್ಲ. ಯಾರ ಬೆಂಬಲವೂ ಇಲ್ಲದೆ ಅನಕೃ ಅವರು ಸಂಗೀತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ದೊರೆಯಲೇಬೇಕೆಂದು ಅರವತ್ತರ ದಶಕದಲ್ಲಿ ಹೋರಾಟ ಆರಂಭಿಸಿದರು. ಇದು ಅವರ ಪ್ರಕಾರ ‘ಕನ್ನಡ ಅಸ್ಮಿತೆ’ಯ ಪ್ರಶ್ನೆಯಾಗಿತ್ತು. ಆಗಿನ ಕನ್ನಡ ಸಂಘಟನೆಗಳು ಸೇರಿಕೊಂಡಿದ್ದ ‘ಕರ್ನಾಟಕ ಸಂಯುಕ್ತ ರಂಗ’ ದ ಅಧ್ಯಕ್ಷರಾದ ಅವರು ಸಂಗೀತ ಲೋಕವೇ ಬೆಚ್ಚಿಬೀಳುವಂಥ ಪ್ರತಿಭಟನೆಯನ್ನು ರೂಪಿಸಿದರು.

೧೯೬೩ರಲ್ಲಿ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯ ರಾಮೋತ್ಸವದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಸಂಗೀತ ಇತ್ತು. ಅನಕೃ, ವೀರಕೇಸರಿ, ಮ.ರಾಮಮೂರ್ತಿ ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ವೇದಿಕೆಯನ್ನು ಮುತ್ತಿದರು. ಆ ಸಂದರ್ಭದಲ್ಲಿ ಅನಕೃ ಅವರ ಅಣ್ಣ ಅ.ನ.ರಾಮರಾವ್ ಅವರು ಉತ್ಸವ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಈ ದೊಡ್ಡ ಪ್ರತಿಭಟನೆಯೇ ಕನ್ನಡದ ಕೃತಿಗಳನ್ನು ಸಂಗೀತದ ವೇದಿಕೆಗೆ ತಂದಿತು.
ಎಂ.ಎಸ್., ವಸಂತಕೋಕಿಲ, ಅವರ ಮಗಳು ಎಂ.ಎಲ್. ವಸಂತಕುಮಾರಿ ಮತ್ತು ಅನೇಕರು ಹಾಡಿದ ಕನ್ನಡದ ದೇವರನಾಮಗಳು ಮನೆಮನಗಳನ್ನು ಬೆಳಗಿದವು, ವಿಶ್ವಸಂಸ್ಥೆಯ ವೇದಿಕೆಯಲ್ಲೂ ಮೆರೆದವು. ಕರ್ನಾಟಕದ ಹಿಂದೂಸ್ತಾನಿ ವಿದ್ವಾಂಸರು ತಮ್ಮ ಕಛೇರಿಗಳಲ್ಲಿ ಮರಾಠಿ ಅಭಂಗಗಳನ್ನು, ರಂಗಗೀತೆಗಳನ್ನು ಹಾಡುತ್ತಿದ್ದರೇ ಹೊರತು ಕನ್ನಡದ ಸೊಲ್ಲೆತ್ತುತ್ತಿರಲಿಲ್ಲ. ಒಮ್ಮೆ ತಮ್ಮ ಗೆಳೆಯ ಮಲ್ಲಿಕಾರ್ಜುನ ಮನ್ಸೂರರಿಗೆ ಶಿವ¬ಶರಣರ ವಚನಗಳನ್ನು ಹಾಡುವಂತೆ ಅನಕೃ ಒತ್ತಾಯಿಸಿದಾಗ ಅವರು ‘ಏನು ಚ್ಯಾಷ್ಟಿ ಮಾಡ್ತೀರಾ’ ಎಂದು ನಕ್ಕರಂತೆ. ಖಂಡಿತಾ ಇಲ್ಲ ಎಂದ ಅನಕೃ ‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ವಚನವನ್ನು ತಾವೇ ಹಾಡಿ ತೋರಿಸಿದರಂತೆ. ಅದರಿಂದ ಪ್ರಭಾವಿತರಾದ ಮನ್ಸೂರರು ವಚನಗಳಿಗೆ ಪ್ರಾಶಸ್ತ್ಯ ಕೊಟ್ಟರು. ಹಿಂದೂಸ್ತಾನಿ ಸಂಗೀತದಲ್ಲಿ ವಚನ ಗಾಯನದ ಪರಂಪರೆಯೇ ಬೆಳೆಯಿತು. ರಾಜಯ್ಯಂಗಾರ್‌ ಹಾಡಿದ, ಅವರಿಗಿಂತ ಭಿನ್ನವಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ‘ಜಗದೋದ್ಧಾರನಾ ಆಡಿಸಿದಳೆ ಯಶೋದಾ’, ಮನ್ಸೂರರ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ಮುಂತಾದ ಕನ್ನಡ ಹಾಡುಗಳು ಮಾನವ ಕಂಠದ ಅತ್ಯುನ್ನತ ಅಭಿವ್ಯಕ್ತಿಗಳಾಗಿ ಹೊಳೆಯುತ್ತಿವೆ.

ಇಂದು ಕರ್ನಾಟಕ ಸಂಗೀತದ ಕಾರ್ಯಕ್ರಮಗಳಲ್ಲಿ  ಒಂದಿಷ್ಟಾದರೂ ಕನ್ನಡದ ಕೃತಿಗಳಿಗೆ ಪ್ರಾಮುಖ್ಯ ಸಿಕ್ಕಿದ್ದರೆ, ಹಲವಾರು ವಿದ್ವಾಂಸರು ಕನ್ನಡದಲ್ಲಿ ಕೃತಿಗಳನ್ನು ಸ್ವತಃ ರಚಿಸಿ ಹಾಡುತ್ತಿದ್ದರೆ, ಕನ್ನಡ ಸುಗಮ ಸಂಗೀತ ವಿಸ್ತಾರವಾಗಿ ಬೆಳೆದಿದ್ದರೆ, ಅದರ ಹಿಂದೆ ಅನಕೃ ಇದ್ದಾರೆ ಎಂದರೆ ಉತ್ಪ್ರೇಕ್ಷೆ ಆಗಲಾರದು.

ಸಾಹಿತ್ಯ ಕ್ಷೇತ್ರದಲ್ಲಿ ಅನಕೃ ಸಾಧನೆ

ಅನಕೃ ಅವರು ತಮ್ಮ ಬಾಲ್ಯದ ಶಾಲಾ ದಿನಗಳಿಂದಲೂ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದರು. ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಉತ್ತರವಾಗಿ ಒಂದೇ ರಾತ್ರಿಯಲ್ಲಿ “ಮದುವೆಯೋ ಮನೆಹಾಳೋ” ಎಂಬ ನಾಟಕವನ್ನು  ರಚಿಸುವ ಮೂಲಕ ಸಾಹಿತ್ಯ ಲೋಕವನ್ನು ಅಧಿಕೃತವಾಗಿ ಪ್ರವೇಶಿಸಿದರು. ಮುಂದೆ ಬರಹವನ್ನೇ ಜೀವನೋಪಾಯವಾಗಿ ಮಾಡಿಕೊಂಡ ಅನಕೃ ಅವರು ರಚಿಸಿರುವ ಸಾಹಿತ್ಯ ೮೦,೦೦೦ ಪುಟಗಳಿಗೂ ಅಧಿಕವೆಂದು ಅಂದಾಜಿಸಲಾಗಿದೆ. ಅದರಲ್ಲಿ ಅಕ್ಕಯ್ಯ, ಅಣ್ಣ-ತಂಗಿ, ಅದೃಷ್ಟನಕ್ಷತ್ರ,ಅನ್ನದಾತ, ಅನುಗ್ರಹ, ಅಪರಂಜಿ, ಅಭಿಮಾನ, ಅಮೃತಮಂಥನ, ಅರಳು ಮರುಳು ಸೇರಿದಂತೆ 110 ಕಾದಂಬರಿಗಳು, ಮದುವೆಯೋ ಮನೆಹಾಳೋ?, ಆದದ್ದೇನು?, ಜ್ವಾಲಾಮುಖಿ, ಗೋಮುಖ ವ್ಯಾಘ್ರ, ಸೂತಪುತ್ರ, ಕರ್ಣ, ಮಾಗಡಿ ಕೆಂಪೇಗೌಡ ಮುಂತಾದ೧೫ ನಾಟಕಗಳು, ಅಗ್ನಿಕನ್ಯೆ, ಕಾಮನ ಸೋಲು, ಕಣ್ಣುಮುಚ್ಚಾಲೆ, ಕಿಡಿ, ಶಿಲ್ಪಿ, ಮಿಂಚು, ಸಮರ ಸುಂದರಿ, ಪಾಪ ಪುಣ್ಯ ಮೊದಲಾದ  ಕಥಾ ಸಂಕಲನಗಳು, ಕಲೆ,ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು, ಅಲ್ಲಮಪ್ರಭು, ಕನ್ನಡ ಕುಲರಸಿಕರು, ಕೈಲಾಸಂ, ದೀನಬಂಧು ಕಬೀರ, ಸ್ವಾಮಿ ವಿವೇಕಾನಂದ, ನಿಡುಮಾಮಿಡಿ ಸನ್ನಿಧಿಯವರು ಸೇರಿದಂತೆ 8 ಜೀವನ ಚರಿತ್ರೆಗಳು, ೩ ಅನುವಾದ, ೧೨ ಸಂಪಾದಿತ ಕೃತಿಗಳು, ಅಲ್ಲದೆ ಪ್ರಬಂಧ,ಹರಟೆಗಳೂ ಸೇರಿವೆ. ೧೯೩೪-೧೯೬೪ ರ ಅವಧಿಯಲ್ಲಿ ೧೦೦ ಕಾದಂಬರಿಗಳನ್ನು ರಚಿಸಿರುವ , ಅನಕೃ ಅವರ ಮೊದಲನೆಯ ಕಾದಂಬರಿ ‘ಜೀವನ ಯಾತ್ರೆ’ಯಾದರೆ ನೂರನೆಯ ಕಾದಂಬರಿ ‘ಗರುಡ ಮಚ್ಚೆ’ಯಾಗಿದೆ.

ಅನಕೃ ಅವರಿಗೆ ಸಂದ ಗೌರವ ಪ್ರಶಸ್ತಿ ಪುರಸ್ಕಾರಗಳು

ಹೀಗೆ ಕನ್ನಡತನವನ್ನೇ ಉಸಿರಾಡಿದ ಅನಕೃ ಅವರಿಗೆ ಹಲವಾರು ಅರ್ಹ ಗೌರವ ಪುರಸ್ಕಾರಗಳು ಪ್ರಾಪ್ತವಾಗಿವೆ. ಮಣಿಪಾಲದಲ್ಲಿ ನಡೆದ ೪೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಇವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದ ಅನಕೃ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಸಚೇತನ ಎಂಬ ಅಭಿನಂದನಾ ಗ್ರಂಥವು ಅನಕೃ ಅವರಿಗೆ ಅರ್ಪಿತವಾಗಿದೆ. ಸಾಹಿತಿಗಳಾದ ಶಾ.ಮಂ.ಕೃಷ್ಣರಾಯ , ಜಿ.ಎಸ್. ಅಮೂರ, ಸೇವಾನಮಿ ರಾಜಾಮಲ್ಲ ಮುಂತಾದವರು ಅನಕೃ ಕುರಿತು ಗ್ರಂಥ ರಚಿಸಿ ಗೌರವ ಸಲ್ಲಿಸಿದ್ದಾರೆ.

ಇವರ ಅನನ್ಯ ಕನ್ನಡ ಸೇವೆ, ಸಾಹಿತ್ಯದ ಸಾಧನೆಯನ್ನು ಗಮನಿಸಿದ ಸಾಹಿತಿ, ಕಾದಂಬರಿಕಾರರಾದ ನಿರಂಜನ ಅವರು “ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ”ವೆಂದು ಹೇಳುವ ಮೂಲಕ ಅವರ ಘನ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಇಂತಹ ಮಹಾನ್ ಕಾದಂಬರಿಕಾರರು 1971 ರ ಜುಲೈ 8 ರಂದು ಇಹಲೋಕವನ್ನು ಭೌತಿಕವಾಗಿ ತ್ಯಜಿಸಿದರೂ, ಕನ್ನಡ ಸಾಹಿತ್ಯ ಲೋಕದ ಧೃವತಾರೆಯಾಗಿ ಇಂದಿಗೂ ಬೆಳಗುತ್ತಿದ್ದಾರೆ. ಇವರ ಮಹಾ ಸೇವೆಯನ್ನು ಮುಂದಿನ ಪೀಳಿಗೆಗೂ ತಿಳಿಸುವ, ಉಳಿಸುವ ಸದುದ್ದೇಶದಿಂದ ಅರಕಲಗೂಡಿನ ಕನ್ನಡ ಪರವಾದ ಸಂಘ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳ ಮೂಲಕ ಅನಕೃ ಅವರ ಸಾಧನೆಯನ್ನು ಜೀವಂತವಾಗಿರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿವರ್ಷವೂ “ಅನಕೃ ಸಾಹಿತ್ಯ ಸಂಭ್ರಮ”ವನ್ನು ಆಯೋಜಿಸಿ ಹೆಸರಾಂತ ಸಾಹಿತಿಗಳ ಸಮಕ್ಷಮದಲ್ಲಿ, ಅನಕೃ ಅವರ ಸಾಹಿತ್ಯದ ಕೊಡುಗೆಯನ್ನು ಅವಲೋಕನ ಮಾಡುವ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಗೌರವ ಸಲ್ಲಿಸುತ್ತಿದೆ. ಹಾಗೆಯೇ ಅರಕಲಗೂಡಿನ ಡಾ.ಆರ್. ಕೆ.ಪದ್ಮನಾಭ ಅವರ ಅಭಿಮಾನಿಗಳ ಬಳಗವು ಪ್ರತಿವರ್ಷವೂ “ಅನಕೃ-ಒಂದು ನೆನಪು” ಎಂಬ ಕಾರ್ಯಕ್ರಮವನ್ನು ಆಯೋಜಿಸಿ, ಅವರ ಹೆಸರಿನಲ್ಲಿ “ಅನಕೃ ಪ್ರಶಸ್ತಿ” ಯನ್ನು ನಾಡಿನ ಹೆಸರಾಂತ ಸಾಧಕರಿಗೆ ನೀಡುವ ಮೂಲಕ ಅವರ ಸಾಹಿತ್ಯ ಸಾಧನೆಯನ್ನು ಜೀವಂತವಾಗಿರಿಸಿದೆ. ಹೀಗೆ ಇನ್ನೂ ಅನೇಕ ಸೇವಾ ಸಂಘಟನೆಗಳು ಆಗಾಗ ಇವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಧನ್ಯತೆಯನ್ನು ಪಡೆಯುತ್ತ, ಅವರ ಹೆಸರುಳಿಸುವ ನಿಟ್ಟಿನಲ್ಲಿ ಸಾಗಿವೆ.

ಇಂತಹ ಮಹಾನ್ ಮೇರು ಕಾದಂಬರಿ ಸಾರ್ವಭೌಮರು ನಮ್ಮ ಹಾಸನ ಜಿಲ್ಲೆಯ ಅರಕಲಗೂಡಿನವರು ಎಂಬುದು ಈ ಭಾಗದ ಎಲ್ಲಾ ಕನ್ನಡ ಮನಸ್ಸುಗಳಿಗೂ ಹೆಮ್ಮೆಯನ್ನು ಉಂಟು ಮಾಡುತ್ತದೆ.
-ಹೊರಾ.ಪರಮೇಶ್ ಹೊಡೇನೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x