ಹೇ. ಯಾವ್ದಾದ್ರೂ ಮೂವಿಗೆ ಹೋಗನ ಕಣೋ ಸುಮಾರು ದಿನ ಆಯ್ತು . ಸರಿ, ಸಿಂಗಂ ರಿಟರ್ನ್ಸ್ ಗೆ ಹೋಗೋಣ್ವಾ ? ಇಲ್ಲಪ್ಪ. ನಾ ಬರೋಲ್ಲ. ಎಕ್ಸ್ ಪ್ಯಾಂಡಬಲ್ ೩ ? ಇಲ್ಲೋ. ಅಂಜಾನ ? ಊಹೂಂ. ಮತ್ಯಾವ ಮೂವಿಗೆ ಬರ್ತಿಯೋ ನೀನು ? ನಾನು ಥಿಯೇಟ್ರಿಗೆ ಹೋಗಿ ನೋಡೋದು ಅಂದ್ರೆ ಕನ್ನಡ ಮೂವಿಗಳ್ನ ಮಾತ್ರ ಕಣ್ರೋ. ಹೋ. ಕನ್ನಡ ಇಂಡಸ್ಟ್ರಿ ಉದ್ದಾರ ಮಾಡ್ತಿದೀಯ ಅನ್ನು ಅನ್ನೋ ಕಾಲೆಳತದ ದಾಟಿ ಮುಗಿಯೋ ಮೊದ್ಲೇ ಅದಕ್ಕೊಂದು ತೇಪೆ ಹಚ್ಚಿದೆ. ಅಧ್ಯಕ್ಷಕ್ಕೆ ಹೋಗೋಣ್ವಾ ? ಚೆನ್ನಾಗಿದ್ಯಂತೆ. ಇಲ್ಲೇ ಹತ್ತಿರದಲ್ಲೇ ಇದ್ಯಂತೆ ಅದು ಅಂತ . ಅಯ್ಯೋ ಅದ್ರ ತಮಿಳಿನ ಒರಿಜಿನಲನ್ನೇ ನಾನು ನೋಡಿದೀನಿ. ಇನ್ನು ಅದ್ರ ರಿಮೇಕ್ ಬೇರೆ ನೋಡ್ಬೇಕಾ ಅಂದ ರೂಂ ಮೇಟಿಗೆ ಏನನ್ಬೇಕು ಅಂತ ಗೊತ್ತಾಗ್ಲಿಲ್ಲ. ಹೇ. ಮಾಣಿಕ್ಯ ಅಂತ ಮಿರ್ಚಿ ಚಿತ್ರದ ರಿಮೇಕ್ ಮಾಡಿಲ್ವಾ ? ಒರಿಜಿನಲ್ಲಿಗಿಂತ ಚೆನ್ನಾಗಿದೆ ಅಂತಿದ್ರಲ್ಲೋ ಎಲ್ಲಾ. ನೂರು ದಿನ ಆಯ್ತು ಆಗ್ಲೇ.. ಹೂ. ಆದ್ರೂ .. ಹೆ, ಶರಣ್ ಮೂವಿ ಅಂದ್ರೆ ಏನೋ ಒಂದು ಕಾಮಿಡಿ ಇದ್ದೇ ಇರತ್ತೆ. ಅವ್ರ ವಿಕ್ಟರಿ, ರಾಂಬೋ ನೋಡಿಲ್ವಾ ? ಬರ್ರೋ ನೋಡೋಣ ಏನಾಗಲ್ಲ ಅಂದೆ. ನನ್ನ ಒತ್ತಾಯಕ್ಕೋ ವಿಕ್ಟರಿಯ ನಿರ್ದೇಶಕ ನಂದ ಕಿಶೋರರ ಎರಡನೇ ಸಿನಿಮಾ ಅನ್ನೋ ಕಾರಣಕ್ಕೋ ಗೊತ್ತಿಲ್ಲ. ಅಂತೂ ನನ್ನಿಬ್ರು ಗೆಳೆಯರು ರೆಡಿಯಾಗಿ ಅಂತು ಮೂರು ಜನ ಗೆಳೆಯರ ದಂಡು ವರ್ತೂರಿಗೆ ದಾಳಿಯಿಟ್ತು.
ಶರಣ್- ಚಿಕ್ಕಣ್ಣ- ಹೆಬಾ ಪಟೇಲ್-ರಕ್ಷ-ರವಿಶಂಕರ್- ಮಾಳವಿಕಾ-ರಮೇಶ್ ಭಟ್ ಮುಖ್ಯ ತಾರಾಗಣದಲ್ಲಿದ್ರೂ ಅದೆಷ್ಟೋ ಜನ ಕಲಾವಿದ್ರು ಬಂದ್ಬಂದು ಹೋಗ್ತಾರೆ. ಒಂದು ನೃತ್ಯದಲ್ಲಿ ಬಂದ ಪ್ರೇಮ್, ಶ್ರೀನಗರ ಕಿಟ್ಟಿ, ಶ್ರೀ ಮುರಳಿ ಆಗಿರ್ಬೋದು, ಚಿತ್ರಗಳಾಗಿ ಬಳಕೆಯಾದ ಯಶ್, ಸುದೀಪ್, ದರ್ಶನ್ ಆಗಿರ್ಬೋದು, ಧ್ವನಿಯಾದ ದಿ||ಸುಧೀರ್, ರವಿಚಂದ್ರನ್ ಆಗಿರ್ಬೋದು , ಆಂಗಿಕವಾದ ರಾಜಣ್ಣನಾಗಿರ್ಬೋದು, ಹಾಡೊಂದರಲ್ಲಿ ಬರೋ ಹರಿಕೃಷ್ಣ, ಭಟ್ಟರು, ಕವಿರಾಜ್, ಕಲ್ಯಾಣ್ ಆಗಿರ್ಬೋದು, ಇನ್ಯಾರದೋ ಚಿತ್ರಕ್ಕೆ ಬಂದು ಹಾಡಿದ ಪುನೀತ್ ಆಗಿರ್ಬೋದು .. ಮಧ್ಯ ಮಧ್ಯ ಬರೋ ಹಾಸ್ಯ ಕಲಾವಿದರಾಗಿರ್ಬೋದು. ಬಂದು ಹೋಗೋರ್ನ ಹೆಸರಿಸ್ತಾ ಹೋದ್ರೆ ಅದೇ ಒಂದು ಲೇಖನವಾಗಬಹುದೇನೋ ! ರಿಮೇಕಂದಾಗ ಚಿತ್ರದ ಇಂಚಿಂಚು ದೃಶ್ಯವನ್ನೂ ಬಿಡದೇ ಕಾಪಿ ಮಾಡೋ ಜನರಿರ್ವೋಗ ನಮ್ಮ ಇಷ್ಟೆಲ್ಲಾ ಕನ್ನಡಿಗರನ್ನು ತಂದು ತೋರಿಸೋ ಅನಿವಾರ್ಯತೆಯೇನಿರಲಿಲ್ಲ ಅಂದ್ಕೋತೀನಿ ನಿರ್ದೇಶಕರಿಗೆ. ಉಳಿದವರು ಕಂಡಂತೆ, ಎದ್ದೇಳು ಮಂಜುನಾಥ, ಮಠ, ಮನಸಾರೆಯಂತಹ ಸ್ವಮೇಕ್ ಚಿತ್ರಗಳು ಬಂದಾಗ ಸಹಜವಾಗೇ ಖುಷಿಯಾಗತ್ತೆ. ಆದ್ರೆ ಇನ್ನೆಲ್ಲೋ ಹಿಟ್ ಆದ ಕತೆಗಳ್ನ ಬಳಸಿಕೊಂಡು ನಮ್ಮ ಪರಿಸರಕ್ಕೆ ಒಗ್ಗಿಸೋ ಕಲೆಯಿದ್ಯಲ್ಲ.. ಅದು ತೀರಾ ಕಳಪೆಯಲ್ಲವೆಂದೇ ಅನಿಸತ್ತೆ ಅಧ್ಯಕ್ಷ, ಹುಡುಗರುನಂತಹ ಸಿನಿಮಾಗಳನ್ನು ನೋಡಿದಾಗ. ಉದಾಹರಣೆಗೆ ಮೇಲುಕೋಟೆಯ ಒಂದೇ ಮಂಟಪವನ್ನ ಮೂರು ವಿಭಿನ್ನ ಹಾಡಿನ ಸನ್ನಿವೇಶಗಳಲ್ಲಿ ಬಳಸಿದ್ದಾರೆ. ಮೊದಲ ಬಾರಿ ಮಂಟಪಕ್ಕೊಂದು ಕೆಂಪನೆ ರಿಬ್ಬನ್. ಎರಡನೇ ಬಾರಿ ಅದರ ಒಂದು ಕೋನದಿಂದ ಕ್ಯಾಮೆರಾ, ಮತ್ತೊಂದು ಬಾರಿ ಮಗದೊಂದು ಕೋನ. ಮೇಲುಕೋಟೆಯ ಕಲ್ಯಾಣಿಯ ಕಂಬಗಳ ಪಕ್ಕದ್ದೊಂದು ಡ್ಯೂಯಟ್ಟು, ಕಂಬಗಳ ಮೇಲೂ ಹೆಂಗೋ ಹೀರೋ ಹೀರೋಯಿನ್ನನ್ನ ಹತ್ತಿಸಿ ಅಲ್ಲೊಂದು ಸೀನು !, ಅಕ್ಕ ತಂಗಿ ಕೆರೆ, ರಸ್ತೆ.. ಹಿಂಗೆ ಇಂಚಿಂಚೂ ಬಿಡದೇ ಚಿತ್ರಿಸಿದ್ದಾರಲ್ಲಿ. ಇನ್ನು ಚಾಮುಂಡಿ ಬೆಟ್ಟವನ್ನು ಹೋಲುವ ದೃಸ್ಯವಿರಬಹುದು, ಸ್ಕಂಧಗಿರಿಯ ಹೋಲುವ ಕೊನೆಯ ಕ್ಲೈಮಾಕ್ಸಿನ ದೃಶ್ಯಗಳಿರ್ಬೋದು .. ಎಲ್ಲೂ ಇದು ನಮ್ಮ ನಾಡಿನ ಕತೆಯಲ್ಲ. ಎಲ್ಲಿಂದಲೋ ತಂದು ಭಟ್ಟಿ ಇಳಿಸಿದ್ದು ಅನಿಸೋಲ್ಲ. ಜಾತ್ರೆ ಜಾತ್ರೆ ಸ್ಟೆಪ್ಪು, ಹಾಡಿಂದ ಹಿಡಿದು ಮಾತುಕತೆವರ್ಗೆ, ದೃಶ್ಯ ಸಂಯೋಜನೆವರ್ಗೆ ಇದು ನಂದೇ ಕತೆಯೆನಿಸೋ ಭಾವ.
ಮೊದಲೇ ಅಂದಂತೆ ಶರಣ್ ಅಂದ್ರೆ ಕಾಮಿಡಿಗೇನು ಕೊರತೆಯಿಲ್ಲ ಅಂತ. ಕೆಲೋ ಕಡೆ ಡಬ್ಬಲ್ ಮೀನಿಂಗುಗಳ ಪ್ರಯೋಗವಿದ್ರೂ ಅದ್ನೇ ನಗಿಸೋ ಸಕಲ ಸಾಮಗ್ರಿಯಾಗಿಸೋ ಪ್ರಯತ್ನದಲ್ಲಿ ನಿರ್ದೇಶಕ ನಂದ ಕಿಶೋರ್ ಕಂಡಿತಾ ಇರಲಿಕ್ಕಿಲ್ಲ ಅನಿಸುತ್ತೆ ಅನೇಕ ಕಡೆ. ರವಿಶಂಕರರ ಡ್ಯಾನ್ಸು, ಶರಣ್ ಚಿಕ್ಕಣ್ಣರ ಜುಗಲ್ಬಂದಿ ಅದೆಷ್ಟೋ ಸಲ ಮಾತಿಲ್ಲದೆ ನಗಿಸಿಬಿಡುತ್ತೆ. ಇನ್ನು ಕತೆಯ ವಿಷಯಕ್ಕೆ ಬರೋದಾದ್ರೆ ತೀರಾ ಗಟ್ಟಿ ಕತೆಯೇನಲ್ಲ ಇದು. ಈಗ ಇಂಟರ್ವಲ್ ಬರುತ್ತೆ ನೋಡು ಅನ್ನೋ ಹೊತ್ತಿಗೆ ಇಂಟರ್ವಲ್ ಬಂದು ಬಿಡುತ್ತೆ. ಮೊದಲಾರ್ಧದಲ್ಲಿ ಕೊನೆಗೇನಾಗಬಹುದು ಅಂತ ೯೦% ಅಂದುಕೊಳ್ಳಲೂ ಬಹುದು. ಹಾಗಾಗಿ ಮೊದಲಾರ್ಧದಲ್ಲೇ ಎದ್ದು ಬರೋಕೆ ಹೋದ ಗೆಳೆಯರೂ ಇದ್ರಂತೆ. ಆದ್ರೆ ಮಳೆಯ ಮಧ್ಯವೂ ನಾಲ್ಕೂ ಕಾಲಿನ ಚಿತ್ರಕ್ಕೆ ನಾಲ್ಕೂ ಇಪ್ಪತ್ತರವರೆಗೂ ಕ್ಯೂ ನಲ್ಲಿ ಕಾದು ಟಿಕೇಟ್ ಪಡೀತಿದ್ದ ಜನರು ಕೊಟ್ಟ ಸಮಗ್ರ ಅಭಿಪ್ರಾಯ ಬೇರೇನೆ.
ಬಯ್ಯೋಕೆ ಹೋದ್ರೆ ಇದ್ರ ಬಗ್ಗೆ ವಿಪರೀತ ವಿಷ್ಯಗಳು ಸಿಗಬಹುದು. ಮೊದಲ ಚಿತ್ರ ಹಿಟ್ಟಾದ್ರೂ ಎರಡನೇದಕ್ಕೆ ರಿಮೇಕಿಗೆ ಕೈಹಾಕಿದ್ಯಾಕೆ ನಂದ ಕಿಶೋರ್ ಅನ್ನೋ ಪ್ರಶ್ನೆಯಿಂದ, ರೈಮಿಂಗ್ ಗಾಗಿ ಕೋರ್ಟಿನ ಟೈಮಿಂಗ್ ವೇಸ್ಟ್ ಮಾಡಿದ್ರಿ ಅಂತ ದಂಡಕ್ಕೊಳಗಾಗೋ ಲಾಯರ್ವರೆಗೆ ಅಲ್ಲಲ್ಲಿ ಕೆಲವೊಂದು ಕಾಡುತ್ವೆ. ಆದ್ರೆ ನಾಲ್ಕು ಜನ ಮಾತಾಡ್ತಾರೆ ಅನ್ನೋ ದೃಶ್ಯದಲ್ಲಿ, ಇನ್ನೂ ಹಲವೆಡೆ ಸಮಾಜಕ್ಕೊಂದು ಸಂದೇಶ ಕೊಡೋಕೆ ಮಾಡಿದ ಪ್ರಯತ್ನಗಳು, ಡ್ಯಾನ್ಸಲ್ಲಿ ಬಲ್ಬುಗಳ ಪ್ರಯೋಗ ಎಲ್ಲಾ ಒಂಥರ ಹೊಸತನವನ್ನು ಕಂಡ ಖುಷಿ ಕೊಡತ್ತೆ. ಅದೆಲ್ಲಾ ಓಕೆ. ಕತೆಯೇನಪ್ಪಾ ಚಿತ್ರದ್ದು ಅಂದ್ರಾ ? ಅದನ್ನೂ ನಾನೇ ಹೇಳಿದ್ರೆ ನೀವೇನು ನೊಡ್ತೀರ ಚಿತ್ರವನ್ನು ಸಾರ್.. ಒಮ್ಮೆ ನೋಡ್ಬನ್ನಿ ಚಿತ್ರಾನ. ಇವಿಷ್ಟು ಅಂಶಗಳಲ್ಲಿ ತೊಂಭತ್ತೊಂಬತ್ತನ್ನು ನೀವು ಒಪ್ಪದಿದ್ರೂ ಒಂದೆರಡಾದ್ರೂ ಒಪ್ಪೇ ಒಪ್ತೀರ ಅನ್ನೋ ನಂಬಿಕೆಯಲ್ಲಿ..
ಕೊನೆಹನಿ: ಚಿತ್ರಕ್ಕೆಷ್ಟು ರೇಟಿಂಗ್ ಅಂದ್ರಾ ?
🙂 ಚಿತ್ರ ಮುಗಿಸಿ ಬಂದ ಮೂರು ಘಂಟೆ ಆದ್ರೂ ಮನಸ್ಸಲ್ಲಿ ಕಥೆಯಿಲ್ಲ. ದೃಶ್ಯವಿಲ್ಲ. ಗುನುಗುತ್ತಿರೋ ಟ್ಯೂನೊಂದೇ.. ಟಾಂ, ಟಾಂ, ಟಾಂ. ಟಾಂ. ಟಿಟ ಟ ಟಾಂ, ಟಿಟ ಟಾಂ..ಅಧ್ಯಕ್ಷ ಅಧ್ಯಕ್ಷ.. ಅರ್ಥ ಆಗಿರ್ಬೇಕಲ್ವಾ ?
*****
ಸಿನೆಮಾ ನೋಡೋದು ಬ್ಯಾಡ
ಅಂತಾತು. ಚೆನ್ನಾಗಿದೆ ಪ್ರಶಸ್ತಿ.
He He no comments 🙂 Thank you 🙂
ಇನ್ನು ಚಾಮುಂಡಿ ಬೆಟ್ಟವನ್ನು ಹೋಲುವ ದೃಶ್ಯವಿರಬಹುದು, ಅಂತಾಗಬೇಕಿತ್ತು.. ತಪ್ಪಾಗಿ "ದೃಸ್ಯ" ಆಗಿದೆ.. ಮುದ್ರಣದೋಷಕ್ಕೆ ಕ್ಷಣೆಯಿರಲಿ 🙁
ಓದುವಾಗ ಗ್ರಹಿಸಿ ತಿಳಿಸಿದ ಗೆಳೆಯ ಜೇಪಿಗೆ ವಂದನೆಗಳು..