ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ ಬಹಳ ಸಲ ಬಿಡಿಗಾಸನ್ನು ಮನೆಗೆ ಕೊಡದೆ ಮನೆಯಲ್ಲಿ ಉಂಡು ಮಲಗುವ ದಂಡಪಿಂಡ. ಆಕೆ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾಳೆ. ದಿನವೂ ಐದಾರು ಮನೆಗಳ ಕಸ ಮುಸುರೆ ತಿಕ್ಕಿ ತಿಂಗಳೊಂದಕ್ಕೆ ಐದಾರು ಸಾವಿರ ಗಳಿಸುವ ಆಕೆಯ ಕುಟುಂಬಕ್ಕೆ ಸಿಗುವ ಪಡಿತರ ಅಕ್ಕಿ ಕಾಳುಗಳು ಹೇಗೋ ಜೀವನ ನಡೆಸಲು ಸಹಾಯವಾಗಿವೆ. ಇಲ್ಲದಿದ್ದ ಪಕ್ಷದಲ್ಲಿ ಅದೆಷ್ಟು ದಿನಗಳು ಆಕೆ ಮತ್ತಾಕೆಯ ಕುಟುಂಬ ಉಪವಾಸ ಮಾಡಬೇಕಿತ್ತೋ?
ಆದರೂ ಆಕೆ ಆಗಾಗ ಮನೆ ಸಂಭಾಳಿಸುವ ಮಕ್ಕಳ ಸ್ಕೂಲು ಕಾಲೇಜು ಫೀಸು, ಪಠ್ಯ ಪುಸ್ತಕ ಒದಗಿಸುವ, ದಿನನಿತ್ಯದ ಪ್ರತಿ ಜವಾಬ್ದಾರಿಗಳನ್ನು ನಿಭಾಯಿಸಲಾಗದೇ ಆಗಾಗ ಕುಸಿದು ಹೋಗುತ್ತಾಳೆ. ಮನೆಯ ಜವಾಬ್ದಾರಿಗಳ ಹೊತ್ತುಕೊಳ್ಳದೇ ಇರುವ ಆಕೆಯ ಪತಿ ನೆಪಕ್ಕೆ ಮಾತ್ರ ಗಂಡ. ಆದರೆ ಹೆಂಡತಿಯನ್ನು ಹಂಗಿಸುವ ಜರಿಸುವ ಹಿಂಸಿಸುವ ವಿಚಾರದಲ್ಲಿ ಮಾತ್ರ ಆತ ಪಕ್ಕಾ ಗಂಡ. ಆಕೆಯ ಶೀಲವನ್ನು ಶಂಕಿಸುವ ಅನ್ಯರೊಂದಿಗೆ ಸಂಬಂಧವನ್ನು ಕಲ್ಪಿಸುವ ಆ ಮೂಲಕ ತನ್ನ ಬೇಜವಾಬ್ದಾರಿ ವರ್ತನೆಯನ್ನು ಸಮರ್ಥಿಸಿಕೊಳ್ಳುವ ಆತ ಆ ಅಧಿಕಾರವನ್ನು ಕಳೆದುಕೊಳ್ಳಲು ಸುತಾರಾಂ ತಯಾರಿಲ್ಲ. ಜವಾಬ್ದಾರಿಯನ್ನು ನಿಭಾಯಿಸಲಾಗದ ಗಂಡನೊಬ್ಬನ ಅಧಿಕಾರದ ವ್ಯಾಪ್ತಿ ಇಂತಹ ಹಲವು ಕುಟುಂಬಗಳಲ್ಲಿ ಏಕರೂಪತೆಯನ್ನು ಹೊಂದಿದೆ ಎಂಬುದು ಸತ್ಯ.
ಆದರೆ ತಾಯಿಯಾದ ಆಕೆ ಮಾತ್ರ ತನ್ನ ಕರ್ತವ್ಯಗಳ ನಿಭಾಯಿಸುತ್ತ ಆತನ ಸಹಿಸಿ ಬದುಕುತ್ತಿದ್ದಾಳೆ. ಕಾರಣ ಸಮಾಜ. ತನ್ನ ಮಕ್ಕಳ ಬದುಕಿಗೆ ತನ್ನಿಂದ ಎರವಾಗಬಾರದೆಂಬ ಮಾತೃ ಪ್ರಜ್ಞೆ. ಮಕ್ಕಳು ತಂದೆಯಿಲ್ಲದೇ ಅನಾಥರಾಗುವರೆಂಬ ಕಾಳಜಿ. ಗಂಡನ ತ್ಯಜಿಸಿ ಹೋದರೆ ಸಮಾಜ ತನಗೆ ಹೊರೆಸುವ ಅಪವಾದ ಎಲ್ಲವನ್ನೂ ಸಹಿಸಬೇಕಾದವಳು ಅವಳು. ಗಂಡನ ತೊರೆದು ಹೋದರೂ ಮುಂದೆ ಏಕಾಂಗಿಯಾದ ಆಕೆಯ ಮೇಲೆರಬಹುದಾದ ಕಾಕದೃಷ್ಟಿಗಳು ಇವೆಲ್ಲಕ್ಕೂ ಹೆಣ್ಣು ಬದುಕಿನ ಸಾಮೂಹಿಕ ನೆಲೆಯಲ್ಲಿ ಯೋಚಿಸುತ್ತಾಳೆ. ಹೀಗಾಗಿ ಆಕೆಗೆ ಇಷ್ಟವಿಲ್ಲದೆಯೋ ಆಕೆ ಆ ಬದುಕಿನೊಂದಿಗೆ ಏಗುತ್ತಾಳೆ. ಉದ್ಯಮ ನಗರಿಗಳ ಪೇಟೆ ಬದುಕಿನ ಹಲವು ಕಾರ್ಮಿಕ ಕುಟುಂಬಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಿದು. ಬೇರೆ ಉತ್ಪಾದನೆ ಇಲ್ಲದ ಹೊಟ್ಟೆ ಪಾಡಿಗೆ ಬರಿಯ ಕೂಲಿಯನ್ನೆ ಆಧರಿಸಿದ ಅದೆಷ್ಟೋ ಕುಟುಂಬಗಳು ಇಂತಹ ಊರುಗಳಲ್ಲಿ ಕಾಣಸಿಗುತ್ತಾರೆ. ಅಲ್ಲಿಯ ಹೆಣ್ಣು ಮಕ್ಕಳ ಪಾಡು ಕಂಡಾಗ ವ್ಯವಸ್ಥೆಯ ಕಥೆ ವ್ಯಥೆ ಎಂದೆನ್ನಿಸುತ್ತದೆ. ಇದೆಂದಿಗೆ ಕೊನೆಗೊಳ್ಳುವುದೆಂಬ ಪ್ರಶ್ನೆ ನಿರಂತರ ಹೋರಾಟದ ನಂತರವೂ ಕಾಣುವ ಈ ಸಂದಿಗ್ಧತೆಗಳು ಉತ್ತರ ಸಿಗದೇ ಹಾಗೇ ಉಳಿದಿವೆ.
ನೊಂದ ಸ್ತ್ರೀಯರ ಬವಣೆಗಳನ್ನು ಕೇಳಿದಾಗ ಇಂತಹ ಪ್ರಶ್ನೆಗಳಿಗೆ ದಶಕಗಳಿಂದಲೂ ಉತ್ತರ ಸಿಗದೇ ಇದ್ದರೂ ಮೂಲದಲ್ಲಿ ಘನಿಕರಿಸಿದ ಸಂಗತಿ ಎಂದರೆ ಆಕೆ ಸಹಿಸಿಕೊಳ್ಳುವ ಮಿತಿಗಳಲ್ಲೇ ಇರುವುದು. ಮೂಲತಃ ತಾನು ಹೆಣ್ಣು ಎಂಬ ಕ್ಷುಲಕ ಮನೋಭಾವ. ಪುರುಷ ಶ್ರೇಷ್ಟನೆಂಬ ಮೇಲರಿಮೆಯ ಭಾವ ಹೆಣ್ಣಿನ ಮನೋವಲಯದಲ್ಲಿ ತಾನೇ ತಾನಾಗಿ ಮೂಡಿಸಿಕೊಂಡಿರುವುದೇ ಆಗಿದೆ. ಇನ್ನೊಂದು ವಿಶಿಷ್ಟ ಸಂಗತಿ ಎಂದರೆ ಆಕೆ ತಾಯ್ತನವನ್ನು ತನ್ನ ನೈತಿಕ ಹಿರಿಮೆಯೆಂದು ಗೃಹಿಸುವ ಆ ಮೂಲಕ ಜಗತ್ತಿಗೆ ಪ್ರಕಟಗೊಳ್ಳುವ ಇತ್ಯಾತ್ಮಕ ನಿಲುವು. ಗಂಡ ಸಂಸಾರವನ್ನು ಕಡೆಗಣಿಸಿದರೂ ಅದನ್ನು ಮುನ್ನೆಡೆಸುವ ಸ್ತ್ರೀ ಧನಾತ್ಮಕ ಗುಣ.
ಇದರೊಂದಿಗೆ ಸ್ತ್ರೀ ಪ್ರಜ್ಞೆ ಇಂದು ವ್ಯಾಪಕವಾಗಿ ಬೆಳೆದು ಬರುತ್ತಿದೆ. ಪುರುಷ ವ್ಯವಸ್ಥೆಗೆ ಸಮವಾದ ಸ್ತ್ರೀ ಶ್ರೇಷ್ಟತೆಯ ಕಟ್ಟುವ ಅರಿವು ಜಾಗೃತಿ ಇಂದಿನ ಶಿಕ್ಷಿತ ಸ್ತ್ರೀ ಸಮುದಾಯದ ಕನಸು. ಸಾಮಾಜಿಕ ವರ್ಗಿಕೃತ ವ್ಯವಸ್ಥೆಯಲ್ಲಿ ತನ್ನ ನೆಲೆಬೆಲೆಯನ್ನು ಅರಿತು ಸ್ಫಾಪಿತ ಮೌಲ್ಯಗಳ ಅವಲೋಕಿಸುತ್ತ, ಅವುಗಳ ಪುನರ್ ವಿಶ್ಲೇಷಣೆ ವಿಮರ್ಶೆಗೆ ತೊಡಗಿಕೊಂಡ, ತೊಡಗಿಕೊಳ್ಳುತ್ತಿರುವ ಸ್ತ್ರೀ ರತ್ನಗಳು ಅಸಮಾನತೆಯ ಮೂಲವನ್ನು ಹುಡುಕಹತ್ತಿವೆ.ಇದು ಇಂದಿನ ಕಾರ್ಯವಲ್ಲ. ದಶಕಗಳ ಹಿಂದಿನ ಕಾರ್ಯವೂ ಅಲ್ಲ. ಶತಮಾನಗಳ ಇತಿಹಾಸ ಹೊಂದಿದ ಕಾರ್ಯ. ಚರಿತ್ರೆಯಲ್ಲಿ ಹೆಣ್ಣು ಪದೇ ಪದೇ ಅದೃಶ್ಯಳಾಗಿದ್ದಾಳೆ. ಆಕೆಯ ಸ್ವತಂತ್ರ ಅಸ್ಥಿತ್ವದ ಕನಸು ಹಲವಾರು ಬಾರಿ ಪ್ರಕಟಗೊಳ್ಳುತ್ತಲೇ ಮತ್ತೆ ಮತ್ತೆ ಸೊರಗಿ ಕೊರಗಿ ಹೋಗಿದೆ. ಆದರೂ ಮತ್ತೆ ಆಕೆ ಸ್ತ್ರೀ ಸಮುದಾಯದ ಮೇಲಾದ ಎಲ್ಲ ದೌರ್ಜನ್ಯಗಳಿಗೆ ಅವುಗಳ ಸಕಾರಣ ಕಾರಕಗಳ ಒರೆಗೆ ಹಚ್ಚುತ್ತಾ, ದುರ್ಬೀನು ಹಾಕಿ ಹುಡುಕಿ ತೆಗೆಯುತ್ತಾ. ತೇಪೆ ಹಚ್ಚುತ್ತಾ ತೆವಳುತ್ತಾ ಸಾಗುತ್ತಿದ್ದಾಳೆ.
ಮೇಲಿನ ಉದಾಹರಣೆ ಆಧುನಿಕ ಜಗತ್ತಿನ ಒಂದು ಮಾದರಿ. ಒಂದೆಡೆ ಸ್ತ್ರೀ ಪ್ರಜ್ಞೆ ಬಲಿತು ಹೆಮ್ಮರವಾಗುತ್ತಿದ್ದರೆ ಇನ್ನೊಂದೆಡೆ ಆಕೆ ನಿರಂತರ ಬಲಿಯಾಗುತ್ತಲೇ ಹೋಗುತ್ತಿದ್ದಾಳೆ. ಇಪ್ಪತ್ತನೇ ಶತಮಾನದ ಎಂಬತ್ತರ ದಶಕದಿಂದ ಈಚೆಗೆ ಅದೆಷ್ಟೋ ಮಹಿಳಾವಾದಿಗಳು ಧ್ವನಿ ಎತ್ತಿ ನುಡಿಯುತ್ತಿದ್ದರೂ, ಹೋರಾಟಗಳು ಸಂಘರ್ಷಗಳು ನಡೆಯುತ್ತಿದ್ದರೂ ಇನ್ನೊಂದೆಡೆ ಇದ್ಯಾವುದರ ಪರಿವೆಯಿಲ್ಲದೇ ನಿತ್ಯ ಶೋಷಿತ ವರ್ಗವಾಗಿ ಮಹಿಳಾ ಜಗತ್ತು ನವೆದುಹೋಗುತ್ತಿದೆ.
ಸ್ತ್ರೀಯ ಸ್ವತಂತ್ರ ಅಸ್ಥಿತ್ವದ ರೂಹುಗಳು ಗೋಚರವಾದದ್ದು ಅಪರೂಪದಲ್ಲಿ ಅಪರೂಪ. 12ನೇ ಶತಮಾನದಿಂದ ಸುಮಾರು 15ನೇ ಶತಮಾನದವರೆಗೂ ದಕ್ಷಿಣ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಗಳಿಸಿದ ಮಹಿಳಾ ಶ್ರೇಷ್ಟರು ಕಂಡುಬರುತ್ತಾರೆ. ಆದರೆ ಮುಂದೆ ಪರಕೀಯರ ಆಕ್ರಮಣ ಪುನಃ ಜೀವನ ವಿಧಾನವನ್ನು ಬದಲಾಯಿಸಿರಬಹುದು. ಕುಸಿದ ನೈತಿಕತೆ, ಜೀವನ ವಿಧಾನದಲ್ಲಾದ ಬದಲಾವಣೆಗಳೂ ಕೂಡಾ ಹೆಣ್ಣು ತನ್ನತನವನ್ನು ಮಾರಿಕೊಳ್ಳಲು ಗಂಡಿನ ಅಡಿಯಾಲಾಗಲು ಕಾರಣವಾಗಿರಬಹುದು. ಆಕೆಯ ರಕ್ಷಣೆಯ ನೆಪದಲ್ಲಿ ಸಾಮಾಜಿಕ ಅಸ್ಥಿರತೆಯ ಕಾಲದಲ್ಲಿ ಹತ್ತು ಹಲವು ಮಹಿಳಾ ಪರವಾದ ದೃಷ್ಟಿಕೋನದಲ್ಲಿಯೇ ಆಕೆಯ ಸ್ವಾತಂತ್ರ್ಯ ಹರಣದ ಬೇಲಿಯನ್ನು ಸೃಷ್ಟಿಸಿದಂತೆ ಕಾಣುತ್ತದೆ.. ಅಷ್ಟೇ ಅಲ್ಲದೇ ಸ್ತ್ರೀಗೆ ಸಾಮಾಜಿಕ ಆರ್ಥಿಕ ಹಕ್ಕುಗಳಿಲ್ಲದ ಕಾರಣ ಕೀಳಾಗಿ ಪರಿಗಣಿಸಲ್ಪಡುತ್ತಾ ಸಾಗಿದಳು.
ಇಂದು ಇಪ್ಪತ್ತೊಂದನೇ ಶತಮಾನದಲ್ಲಿಯೂ ಸ್ತ್ರೀ ದೌರ್ಜನ್ಯದ ಸಂಖ್ಯೆಗಳನ್ನು ಲಕ್ಷಿಸಿದರೆ ಗಾಬರಿಯಾಗುತ್ತದೆ. ಆಧುನಿಕರಣದ ಇನ್ನೊಂದು ಬೃಹತ್ ಜಾಲದಲ್ಲಿ ಪುನಃ ಹೆಣ್ಣು ಮತ್ತೆ ಬಂಧಿಯಾಗುತ್ತಿದ್ದಾಳೆ. ಹೊಸ ನವನವೀನ ತಂತ್ರಜ್ಞಾನದ ದುರುಪಯೋಗ ಅಲ್ಲಿಯ ಅಶ್ಲೀಲ ಚಿತ್ರಗಳ ವೀಕ್ಷಣೆ ಯುವ ಸಮುದಾಯದ ಮನಸ್ಸನ್ನು ಕೆರಳಿಸಿ ಮಾನಸಿಕ ವಿಕಲ್ಪಗಳಿಗೆ ದಾರಿ ಮಾಡಿಕೊಡುತ್ತಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಇಂತಹ ಪ್ರಚೋದನಾತ್ಮಕತೆ ನಿರ್ಮಾತೃ ಇಂದಿನ ಶಿಕ್ಷಿತ ಕಾರ್ಪೋರೆಟ್ ಜಗತ್ತೇ ಎಂಬುದು ಇನ್ನೊಂದು ವಿಪರ್ಯಾಸ.
-ನಾಗರೇಖಾ ಗಾಂವಕರ