ಅತೀ ವಿನಯಂ ಧೂರ್ತ ಲಕ್ಷಣಂ: ಪಿ.ಎಸ್. ಅಮರದೀಪ್

Amardeep

ವಾಟ್ಸಪ್ ನಲ್ಲಿ ಎಂಥೆಂಥ ಮೆಸೇಜ್ ಗಳು ಬರುತ್ತವೆಂದರೆ, ಅವುಗಳನ್ನು ನಂಬದೇ ಇರಲಾಗುವುದಿಲ್ಲ.   ಕೆಲ ತಿಂಗಳುಗಳ ಹಿಂದೆ ಅಮಿತಾಬ್ ಬಚ್ಚನ್, ವಿನೋದ್ ಖನ್ನಾ, ಹೀಗೆ ಅನೇಕರಿಗೆ ಹಾರ ಹಾಕಿ ಸಂತಾಪ ಸೂಚಿಸುತ್ತಿರುವ ಫೋಟೋ, ಅವರಷ್ಟರದೇ ಅಲ್ಲ,ಸೆಲೆಬ್ರಿಟಿಗಳ, ಕ್ರೀಡಾಪಟುಗಳ, ಸಿನಿಮಾ ನಟರ, ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಬರುತ್ತಿರುವ ಟ್ರಾಲ್ಸ್, ಕಿಂಡ್ಲಿಂಗ್ ಮೆಸೇಜ್ ಗಳನ್ನು ನೋಡಿದ್ರೆ ಅವುಗಳಿಗೆ ರೆಸ್ಪಾಂಡ್ ಮಾಡುವುದೂ ಕೆಲವೊಮ್ಮೆ  ಸೈಬರ್ ಕ್ರೈಂ  ಆಗುವ ಸಂಭವವಿರುತ್ತದೆ.    “ಕರಗ್ರೇ ವಸತೇ…….. ಎಂದು ಶುರುವಾಗುವ ಬೆಳಿಗ್ಗೆ ಕಣ್ಣು ಬಿಟ್ಟರೇ ಸಾಕು ಮೊಬೈಲ್ ಇಲ್ಲದೇ ಟಾಯ್ಲೆಟ್ಟಲ್ಲಿ ತಿಣುಕಲೂ ಆಗದು ಎನ್ನುವಂಥ ಅಡಿಕ್ಷನ್ನು.   ಇನ್ನು ನೆಟ್ ಆನ್ ಮಾಡಿದರೆ ಸಾಕು ಗುಡ್ ಮಾರ್ನಿಂಗು, ಗುಡ್ ನೈಟು, ಕೊಟೇಷನ್ಸು, ಜೋಕ್ಸು, ನೋಡುತ್ತಾ ಕುಳಿತರೆ, (ತ) Lenovo ನಿಂದ ಶುರುವಾಗಿ ಇನ್ನು ಏನೇನೋ ಹೆಸರಿನ ಮೊಬೈಲ್ ಗಳ ಸಹವಾಸ ಮನುಷ್ಯನನ್ನು ಮಂಗನಂತಾಡಿಸಲು ಶುರು ಮಾಡುತ್ತವೆ.

ವೈಯುಕ್ತಿಕ ಚಾಟ್ಸ್ ಅಲ್ಲದೇ ನಮಗೇ ಗೊತ್ತಿಲ್ಲದ ಗ್ರೂಪ್ ಗಳಲ್ಲೆಲ್ಲಾ ನಮ್ಮನ್ನು ಸೇರಿಸಿಕೊಂಡು ದಬ್ಬುವ ಮೆಸೇಜ್ ಗಳು, ಟ್ರಾಲ್ಸ್ ಗಳು, ಚರ್ಚೆಗಳು, ಕಾಲೆಳೆತ, ಕಾಲು ಕೆರೆತ, ಕೊನೆಗೆ ಕಿತ್ತಾಟದ ಹಂತದವರೆಗೂ ಬಂದು ಎಕ್ಸಿಟ್ ಆಗುವಂಥವೆಲ್ಲಾ ಈಗ ಕಾಮನ್.   ಒಂದು ಆ್ಯಪ್ ಇನಸ್ಟಾಲೇಷನ್ ಮಾಡಿಕೊಳ್ಳುವಷ್ಟರಲ್ಲಿ ಇರೋ ಬರೋ ಕಾಂಟ್ಯಾಕ್ಟ್ ಡೀಟೇಲ್ಸ್ ಗಳಿಗೆಲ್ಲಾ “ನಿಮಗೆ ಐವತ್ತೊಂದು ರೂಪಾಯಿ ಗಳಿಕೆ….. ಇನ್ನೂ ಒಂದು ಲಕ್ಷದವರೆಗೆ ಗಳಿಕೆ ಲಭ್ಯ”  ಎನ್ನುವಂಥ ಟೆಕ್ಸ್ಟ್ ಮೆಸೇಜ್ ಗಳು ರವಾನೆಯಾಗಿಬಿಟ್ಟಿರುತ್ತವೆ.  

ಒಮ್ಮೊಮ್ಮೆ ಈ ಎಲ್ಲಾ ರಗಳೆಗಳ ಸಹವಾಸವೇ ಬೇಡ,  ಸ್ಮಾರ್ಟ್ ಫೋನೂ ಬೇಡವೆಂದು ಸಿಂಪಲ್ಲಾಗಿ ಕಿ ಪ್ಯಾಡ್ ಇರುವ ಮೊಬೈಲ್ ಇಟ್ಟುಕೊಂಡರೆ  ಜನ ಅದಕ್ಕೂ ಬಿಡುವುದಿಲ್ಲ.  “ಏನ್ಸಾರ್ ನೀವಿನ್ನೂ ಯಾವ್ ಕಾಲ್ದಾಗಿದೀರಿ?…….”  ಅಂದು ಕಿಚಾಯಿಸುತ್ತಾರೆ.  ನಮಗಾಗಿ ಅಲ್ಲದಿದ್ರೂ ಮಂದಿ ನೋಡುತ್ತಾರೆನ್ನುವ ಸಲುವಾಗಿ ಆದ್ರೂ ಸ್ಮಾರ್ಟ್ ಫೋನು ಇಟ್ಟುಕೊಳ್ಳುವ ಸಂಕಟಕ್ಕೆ ಬೀಳಬೇಕಾಗುತ್ತದೆ, ಯಾರೂ ಕಿಚಾಯಿಸದಿರಲೆಂದು.   “ಟೆಕ್ನಾಲಜಿ ಎಷ್ಟು ಇಂಪ್ರೂವ್ ಆಗಿದೆಯೆಂದ್ರೆ ಸಾಹೇಬ್ರೇ…… ನೀವು ನಿಬ್ಬೆರಗಾಗ್ತೀರಾ!….”   ಅನ್ನುವ ಸಬೂಬು ಬೇರೆ.

ಮೊನ್ನೆ ಹೀಗೆ ಸ್ಕ್ರೀನ್ ಶಾಟ್ ತೆಗೆದ ಒಂದು ಮೆಸೇಜ್ ಬಂತು.  “ The most common cause of stress nowadays is dealing with idiots.  ಜೊತೆಗೆ  Working with idiots can kill you!…. ಎನ್ನುವ  ಹೆಡ್ಡಿಂಗು, ಅದರಡಿ ಚಿಕ್ಕ ಬರಹ.    ಸಾಮಾನ್ಯವಾಗಿ ಈ ತರಹದ ಮೆಸೇಜ್ ಗಳು ಬರುತ್ತಲೇ ಇರುತ್ತವೆ.  ನೋಡಿ ಹಾಗೇ ಬಿಡ್ತೀವಾ?  ಇಲ್ಲ.  ಅದನ್ನು ಹತ್ತಾರು ಗ್ರೂಪ್ ಗಳಿಗೆ Individual contacts ಗೆ ದಬ್ಬದಿದ್ದರೆ ಸಮಾಧಾನವಿರುವುದಿಲ್ಲ.    ಆದರೆ, ಈ ಮೆಸೇಜ್ ಚೂರು ತಾಳ್ಮೆಯಿಂದ ಗಮನಿಸಿ, ಯೋಚಿಸಲು ಕಾರಣವಾಯ್ತು ; “ The most common cause of stress nowadays is dealing with idiots.”   ಈ ಸಾಲು ನಮ್ಮ ನಡುವೆ ಎಷ್ಟರ ಮಟ್ಟಿಗೆ ಹೋಲುತ್ತದೆಂದು.  

ಉದಾಹರಣೆಯಾಗಿ ಒಂದು  ಆಫೀಸನ್ನು ತೆಗೆದುಕೊಳ್ಳೋಣ. ಅದಕ್ಕೆ ಒಬ್ಬ ಬಾಸು,  ಹತ್ತಾರು ನೌಕರರು ಇರುತ್ತಾರೆಂದುಕೊಳ್ಳೋಣ.  ಬಾಸ್ ಅದವನಿಗೆ ತನ್ನ ಅಧಿಕಾರ ನಡೆಸುವ ಹುಕಿ. ಕೆಲ ನೌಕರರು ತಮ್ಮ ಪಾಡಿಗೆ ತಮ್ಮ ಕೆಲಸ, ರೂಲ್ಸ್, ರೆಗ್ಯುಲೇಷನ್ನು, ತಿಂಗಳ ಕೊನೆಗೆ ಸಂಬಳ ಎಣಿಸುವುದು, ಜೊತೆಗೆ ಯಾರಾದರೂ ಪುಗಸಟ್ಟೆ ಸಂಬಳ ಪಡೆಯುವ ಮೈಗಳ್ಳರನ್ನು ಹದಾ ಹೊಡೆದು ಕೆಲಸ ತೆಗೆಯುವುದು. ಇನ್ನೂ ಕೆಲವರು “ಅತೀ ವಿನಯಂ ಧೂರ್ತ ಲಕ್ಷಣಂ” ಎನ್ನುವ ಜಾಯಮಾನದ ಪಾಖಂಡಿಗಳು ಬಾಸ್ ಮುಂದೆ ಕೈ ಕಟ್ಟಿ ತಮ್ಮನ್ನು ಉಳಿದವರು ಶೋಷಿಸುತ್ತಿದ್ದಾರೆನ್ನುವಂತೆ ಬಿಂಬಿಸಲು ನೌಟಂಕಿ ಕಣ್ಣೀರು ಹಾಕಿ ತಮ್ಮ ಅಗಾಧ ಸಾಚಾತನ ತೋರಿಸುತ್ತಲೇ ತಮ್ಮ Ineficiencyಯನ್ನು ಮರೆಮಾಚುವುದು.  ಮತ್ತೀಗ ಬಾಸ್…. ಈ ಸಮಸ್ಯೆಯನ್ನು ತಾನಲ್ಲದೇ ಮತ್ಯಾರೂ ಬಗೆಹರಿಸಲಾರರು ಎನ್ನುವ ಹುಂಬತನದಲ್ಲಿ  ಪಂಚಾಯ್ತಿಗೆ ಕೂರಿಸಿ, “ ಊರ ಗೌಡ ಹೇಳಿದ್ದೇ ನ್ಯಾಯ, ಗೌಡ ಯಾವತ್ತಿದ್ರೂ ಅನ್ಯಾಯದ ವಿರುದ್ಧ” ಎನ್ನುವ ಸ್ಲೋಗನ್ನೇ ಹಣೆಗೆ ಅಂಟಿಸಿಕೊಂಡು ನ್ಯಾಯ ಪಂಚಾಯ್ತಿಯನ್ನು ಎಲ್ಲ ಸಿಬ್ಬಂದಿ ಮುಂದೇನೇ ಇತ್ಯರ್ಥ್ಯ ಮಾಡಿದ್ದರ ಕ್ರೆಡಿಟ್ಟು ಹೊತ್ತುಕೊಂಡು ಎಲ್ಲರೂ ಚೇಂಬರ್ ನಿಂದ ಹೊರಬಂದ ನಂತರ ಒಬ್ಬೊಬ್ಬರನ್ನೇ ಪ್ರತ್ಯೇಕವಾಗಿ ಕರೆದು ಮಾಯಬೇಕಿದ್ದ ಗಾಯವನ್ನು ಕೆದರಿ ಕೆದರಿ ಮತ್ತಷ್ಟು ಉಲ್ಬಣಗೊಳಿಸುತ್ತಾರೆ.

ಇದಿಷ್ಟರ ಮಧ್ಯೆ ಕೊಟ್ಟ ಸಂಬಳಕ್ಕೆ ನೂರರಷ್ಟರಲ್ಲದಿದ್ದರೂ ಹತ್ತತ್ತಿರದಷ್ಟು ನೀಯತ್ತಾಗಿ ಕೆಲಸ ಮಾಡೋದರ ಜೊತೆಗೆ ಮೈಗಳ್ಳ ಸಿಬ್ಬಂದಿ ಮುಖದ ಮೇಲಿನ ಬಣ್ಣ ತೊಳೆಯುವ ಕೆಲಸ ಕೆಲವರು ಮಾಡಿದ್ದೇ ಬಂತು.   ಹೋ…… ಅದು ಅಸಹಿಷ್ಣುತೆ, ಹೆರಾಸ್ಮೆಂಟು ಅಂತೆಲ್ಲಾ ಶುರುವಾಗುವ ರಗಳೆ, ಮೂಗರ್ಜಿ ನಂತರ ಹೆಸರು ಬರೆದು ಗೋಳಾಡುವುದು ಮೈಗಳ್ಳ ಮಂದಿಯದು ಹಳೇ ಚಾಳಿ.   ಒಂದು ಹೇಳಿದರೆ ಹನ್ನೊಂದು ಮಾಡುವುದು. ಹೂಂ… ಅಂದರೆ ಸಾಕಾಗುವಂಥ ಸಂಧರ್ಭಗಳಲ್ಲಿ ತಲೆ ಹನ್ನೆರಡಾಣೆಯಾಗುವಂತೆ ಇರಿಟೇಟ್ ಮಾಡುವುದು. ಹೀಗಾದಾಗ actually prompt employees ಗೆ ಆಗೋ ತೊಂದರೆ ಇದೆಯಲ್ಲಾ?!   ಅದನ್ನೇ   “ The most common cause of stress nowadays is dealing with idiots.” ಅನ್ನಬಹುದೇನೋ.  ಇಂಥವೇ ಸಂಧರ್ಭಗಳು ಸುಗಮವಾಗಿ ನಡೆಸಬಹುದಾದ ಕಛೇರಿ ನಿರ್ವಹಣೆಯನ್ನು ದುರ್ಬರಗೊಳಿಸುತ್ತವೆ.

ವರ್ಷಾನುಗಟ್ಟಲೇ prompt ಆಗಿ serve  ಮಾಡುತ್ತಿರುವ employee ಗಳನ್ನು ನೋಡಿದಾಗ್ಯೂ “……ಧೂರ್ತ ಲಕ್ಷಣಂ…. ಗಿರಾಕಿಗಳು….”   ಕೈ ಕಟ್ಟಿ ಕತೆ ಉರುಹೊಡೆಯುತ್ತಾರೆಂದರೆ, ಬಾಸು ಅಂಥವರನ್ನು entertaintain ಮಾಡಬಾರದೆನ್ನುವ ಸಣ್ಣ ಸಾಮಾನ್ಯ ಜ್ಞಾನವೂ ಇಲ್ಲವೆಂದರೆ ಹೇಗೆ?  ಒಂದು ವೇಳೆ ಸಾಮಾನ್ಯ ಜ್ಞಾನ, ಸುಳಿವು, ಲಕ್ಷ್ಯ, ಎಲ್ಲಾ ಪಕ್ಕಾ ಇದ್ದೂ ತಮ್ಮ ಮೇಲೆ “…… ಧೂರ್ತರು….. ಚಾಡಿ ಹೇಳಿದರೆ ಹೆಂಗೇ?"   ದೂರು ಬರೆದರೆ ಹೇಗೆನ್ನುವ ಲೆಕ್ಕಚಾರದ ಡಬಲ್ ಸ್ಟ್ಯಾಂಡರ್ಡ್ ಬಿಹೇವಿಯರ್ , ಮತ್ತು ಉಳಿದ ನಿಯತ್ತಿನ…… employees ಗಳದ್ದು, ಆಫೀಸ್ ಹದ್ದುಬಸ್ತು ಹೆಂಗಾದ್ರೂ ಹಾಳಾಗ್ ಹೋಗ್ಲಿ, ತಮ್ಮ ಸೇಫ್ಟಿ ಮಾತ್ರ ಇಂಪಾರ್ಟೆಂಟು ಅನ್ನುವ ಬಾಸ್ ನ ಅತಿ ಬುದ್ಧಿವಂತಿಕೆ ಇದೆಯಲ್ಲಾ….?   “Working with idiots can kill you! ಎನ್ನುವ ಸಾಲನ್ನು ಸ್ಪಷ್ಟವಾಗಿ ಪುಷ್ಠೀಕರಿಸುತ್ತದೆ.

ಇದು ಹೀಗೇ….. ಎಂದೇನಾದರೂ ಅತ್ತ ಮೈಗಳ್ಳರಿಗೂ ಇತ್ತ ಬಾಸ್ ಗೆ ಕೆಲ “Employees”  convince ಮಾಡಲು ಹೋಗುತ್ತಾರೆಂದುಕೊಳ್ಳೋಣ.  ಆಗ  ಮೈಗಳ್ಳರು ತಮ್ಮ ತುರಿಕೆಯ ಕೆರೆತಕ್ಕೆ ತಕ್ಕ ಬೆರಳು ಹುಡುಕಲು ಜಾಗೃತರಾಗಿಬಿಡುತ್ತಾರೆ.  ಒಮ್ಮೊಮ್ಮೆ ಆ ಬೆರಳು ಬಾಸ್ ನದ್ದೂ ಆಗುವ ಎಲ್ಲಾ ಲಕ್ಷಣಗಳಿರುತ್ತವೆ.  ದುರಂತವೆಂದರೆ, ಮೈಗಳ್ಳರ ತುರಿಕೆಯನ್ನು ತಮ್ಮ ಬೆರಳುಗಳು ಕೆರೆ ಕೆರೆದು ಆಹ್ಲಾದಗೊಳಿಸುತ್ತಿವೆ ಎನ್ನುವ ಸಣ್ಣ ಸಂಶಯವೂ ಬಾಸ್ ಗೆ ಬರುವುದಿಲ್ಲವೆಂದರೆ, ಒಂದೋ ಮೈಗಳ್ಳರ ಮೈಂಡ್ ಶಾರ್ಪ್ ಇದೆಯೆಂದರ್ಥ.  ಇಲ್ಲದಿದ್ದರೆ ಬಾಸ್ ಸೀಟಲ್ಲಿರೋ ಬಾಡಿಯಲ್ಲಿ ಕಿವಿಯನ್ನುವುದು ಹಿತ್ತಾಳೆಯದ್ದಾಗಿರುತ್ತದೆ, ಅಷ್ಟೇ.    ಅಂಥ ಸಮಯದಲ್ಲಿ ಬುದ್ಧಿವಂತರಾದಲ್ಲಿ ಮೈಗಳ್ಳರಿಗೆ “ಸ್ಮಾರ್ಟ್ ಫೋನ್ ತಗೊಂಡ್ ಮೇಲೆ ಡಾಟಾ ಪ್ಯಾಕ್ ಹಾಕಿಸ್ದೇ ಇದ್ರೆ ಹೆಂಗೆ?”  ಅಲ್ವಾ?  ಅದೇ ರೀತಿ "ಕೆಲಸ ಮಾಡಲಾರದೇ ಮೈಗಳ್ಳತನ ಮಾಡಿ ನುಣುಚಿಕೊಂಡು ಮೈ ದುಂಡಗಾಗಿಸಿಕೊಂಡ್ರೆ ಕೊಬ್ಬು ಕರಗಿಸಿಕೊಳ್ಳೋಕೆ ರೆಡಿ ಇರೋ ತಮ್ಮಾ”  ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿ ಚೇಂಬರ್ ನಿಂದ ಆಚೆ ದಬ್ಬುವುದನ್ನು ಬಾಸ್ ಆದವರು ರೂಢಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಹಾಗಾಗದಿದ್ದ ಸಂಧರ್ಭಗಳನ್ನು ನೋಡಿಯೇ ಹೇಳಿದ್ದಿರಬೇಕಲ್ಲವೇ –  “ The most common cause of stress nowadays is dealing with idiots.”  ಅಂತ…………  ?!!!!  ಹಾಗಂತ ಎಲ್ಲಾ ಬಾಸ್ ಗಳೂ ಹಾಗಿರುತ್ತಾರಂತಲ್ಲ, ಅಥವಾ ಎಲ್ಲಾ ನೌಕರರೂ ಇರುತ್ತಾರಂತಲ್ಲ…..  ಮೇಲೆ ಹೇಳಿದ ಸಂಧರ್ಭಗಳೂ ಇರುತ್ತವೆನ್ನುವುದಷ್ಟೇ  ನನ್ನ ಗ್ರಹಿಕೆ….

-ಪಿ.ಎಸ್. ಅಮರದೀಪ್


        

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಕೆ.ಬಿ.ದುದ್ರೇಶ್
ಕೆ.ಬಿ.ದುದ್ರೇಶ್
6 years ago

ವಾಸ್ತವಾಂಶವನ್ನು ಎಳೆಯಳೆಯಾಗಿ ಬಿಚ್ಚಿಟ್ಟಿದ್ದೀಯ, ಜನರಿಗೆ ಅರಿವಾಗಬೇಕಷ್ಟೇ ಅಮರ್ ದೀಪ್.????????????????

1
0
Would love your thoughts, please comment.x
()
x