ಅನಿ ಹನಿ

ಅತಿಥಿ ಸಂಪಾದಕೀಯ: ಅನಿತಾ ನರೇಶ್ ಮಂಚಿ

ಮನುಷ್ಯ ಸಂಘ ಜೀವಿ. ಇದರಲ್ಲಿ ಹೆಣ್ಣಾದರೂ ಸರಿ ಗಂಡಾದರೂ ಸರಿ ಬದುಕು ಸಾಗಿಸಬೇಕಾದರೆ ಜೊತೆಯನ್ನು ಬಯಸುವುದು ಸಹಜ. ಬಂಡಿಯ ಎರಡು ಗಾಲಿಗಳಲ್ಲಿ ಯಾವುದು ಮುಖ್ಯವೆಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೇ ಸ್ತ್ರೀ ಪುರುಷರಿಬ್ಬರಲ್ಲೂ ಯಾರು ಮೇಲು ಯಾರು ಕೀಳು ಎಂದು ಹೇಳುವುದು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಪೂರಕವಾಗಿ ನಡೆದರೆ ಬದುಕು ಸೊಗಸು.  

ಬದಲಾದ ಕಾಲ ಘಟ್ಟದಲ್ಲಿ  ಸ್ತ್ರೀ ಇನ್ನಷ್ಟು ಹೊಣೆಗಾರಿಕೆಗಳನ್ನು ಹೆಗಲ ಮೇಲೇರಿಸಿಕೊಳ್ಳುತ್ತಾ ನಡೆದಿದ್ದಾಳೆ.ಆ ಹೆಜ್ಜೆಗಳು ನಡೆದಾಡಿದ ದಾರಿ ಹೊಸ ದಿಕ್ಕಿನತ್ತ ಸಾಗಬೇಕಾದರೆ ಸಮಾಜದ ಸಹಕಾರವೂ ಮುಖ್ಯ.  ಬದುಕು ನಿಂತ ನೀರಲ್ಲ. ಆದರೆ ಬದಲಾಗುವುದು ಎಂದರೆ ಹಳೆಯದನ್ನು ದೂರ ತಳ್ಳುವುದಲ್ಲ.  ಹೊಸ ಅರಿವು ಹೊಸ ಹೊಳಹುಗಳನ್ನು ಕಾಲ ಕಾಲಕ್ಕೆ ತನ್ನ ತೆಕ್ಕೆಗೆಳೆದುಕೊಳ್ಳುತ್ತಾ ಚಲನಶೀಲವಾಗುವುದು.  ಹಿಂದಿನ ಇತಿಹಾಸದ ಒಳ್ಳೆಯದನ್ನು ಭವಿಷ್ಯತ್ತಿಗೂ  ಬೆಸೆಯುವ ಕೊಂಡಿಯಾಗುವುದು.  ಸ್ತ್ರೀ ಸಮಾನತೆ ಎಂದರೆ  ಗಂಡೆಂದುಕೊಳ್ಳುವುದಲ್ಲ. ಅಂದುಕೊಂಡಿದ್ದನ್ನು ಮಾಡುವ, ಸರಿ ತಪ್ಪುಗಳನ್ನು ತಾನೇ ವಿವೇಚಿಸಿ ನಿರ್ಧರಿಸುವ ತನ್ನ ತನವನ್ನು ಪಡೆಯುವುದು. ತೊಂದರೆಗಳಿದ್ದರೆ ನಿವಾರಿಸುವ ಚಾಕಚಕ್ಯತೆಯನ್ನು ತನ್ನಲ್ಲಿ ಬೆಳೆಸಿಕೊಳ್ಳುವುದು. ಹೊಸತು ಹೇಗಿರಬೇಕು, ತನ್ನ ಮುಂದಿನ ಜನಾಂಗಕ್ಕೆ ತಾನೇನನ್ನು ಕೊಡಬಲ್ಲೆ ಎಂಬುದರ ಬಗ್ಗೆ ಪ್ರಜ್ಞೆಯಿದ್ದು ವ್ಯವಹರಿಸುವುದು.

’ನಿನಗೆ ಬೇರೇ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೇ’ ಎನ್ನುವ ಕವಿಯ ಆಶಯದಲ್ಲೇ ಅವಳ ಹತ್ತು ಹಲವು ಪ್ರತಿಭೆಗಳ ದರ್ಶನ ಕಣ್ಣಿಗೆ ಕಾಣುತ್ತದೆ. ಹೆಣ್ಣನ್ನು ತಾಯಿ ಎಂದವರಿದ್ದರು, ಸಹೋದರಿ ಎಂದವರಿದ್ದರು, ಪ್ರಿಯೇ ಎಂದವರಿದ್ದರು.. ಆದರೆ ತನ್ನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಅವಳನ್ನು ಗೆಳತಿಯಾಗಿ ಕಂಡವರೆಷ್ಟು ಜನ? ಕಷ್ಟ ಬಂದಾಗ ಮುಖ ಮುಚ್ಚಿ ಅಳಲು ತೆರೆದುಕೊಳ್ಳುವ ಅವಳ ಮಡಿಲ ಬೇಗುದಿಯನ್ನು ಅರಿತವರೆಷ್ಟು ಜನ? 

ಎಲ್ಲಾ ಕಾಲಗಳಲ್ಲೂ  ಹೆಣ್ಣನ್ನು ಗಂಡಿನ ಇಂದ್ರಿಯ ಭೋಗವನ್ನು ತಣಿಸುವ ವಸ್ತು ಎಂದೇ ಬಿಂಭಿಸಲಾಗುತ್ತದೆ. ಹೆಣ್ಣು, ಹೊನ್ನು, ಮಣ್ಣು ಇವುಗಳನ್ನು ಒಟ್ಟಿಗೇ ಸೇರಿಸಲಾಗಿದೆ. ಗಂಡನ್ನು ತೃಪ್ತಿ ಪಡಿಸುವುದು ಹೆಣ್ಣಿನ ಮೂಲ ಉದ್ದೇಶವೆಂದೇ ಶತಶತಮಾನಗಳಿಂದ ಹೇಳುತ್ತಲೇ ಬಂದಿದ್ದಾರೆ.  ಹೆಣ್ಣನ್ನು ದೇವಿ ಎಂದು ಪೂಜಿಸುವವರೂ, ಮನೆಯಲ್ಲಿರುವ ಹೆಂಡತಿಯನ್ನು ಪರಿಚಾರಕಿಯಂತೆ ನಡೆಸಿಕೊಳ್ಳುವುದು ಸಾಮಾನ್ಯ. ಹಾಗೆಂದೂ ಇದೆಲ್ಲಾ ಕಾಲಘಟ್ಟದಲ್ಲೂ ಹೆಣ್ಣು ಸೊರಗಿಲ್ಲ. ತನ್ನ ತನವನ್ನು ಕಳೆದುಕೊಂಡಿಲ್ಲ. ತುಳಿದಷ್ಟೂ ಬಲವಾಗುತ್ತಲೇ ನಡೆದಿದ್ದಾಳೆ. 

ಹೆಣ್ಣು ಹುಟ್ಟುವುದೆಂದರೆ ತಂದೆ ತಾಯಿಯರಿಗೆ ಹುಣ್ಣು ಹುಟ್ಟಿದಂತೆ ಎಂಬ ಮಾತಿದೆ. ಹೆಣ್ಣು ಮದುವೆಯಾಗಿ ಹೊರ ಹೋಗುವವಳು, ಹಾಗಾಗಿ ತಮ್ಮ ಬದುಕಿನ ಕೊನೆಗಾಲಕ್ಕೆ ಆಸರೆಯಾಗಿ ಉಳಿಯುವುದು ಗಂಡು ಎಂಬ ಮನೋಭಾವ ಈ ಮಾತಿಗೆ ಕಾರಣ. ತವರು ಮನೆ ಮತ್ತು ಗಂಡನ ಮನೆ ಎರಡೂ ತಕ್ಕಡಿಗಳನ್ನು ತಾರತಮ್ಯವಿಲ್ಲದೆ ಒಂದೇ ರೀತಿ ತೂಗಿ ಹಿಡಿಯುವ ಕಠಿಣ ಸ್ಥಿತಿ ಹೆಣ್ಣಿನದ್ದು. ಆದರೆ ಇದು ಅವಳಿಂದ ಮಾತ್ರ ಸಾಧ್ಯ. ಮೂಲತಃ ಮಾತೃ ಸ್ವರೂಪಿಯಾದ ಹೆಣ್ಣಿಗೆ ಸಹನೆ,ಪ್ರೇಮಗಳು ಸಹಜವಾಗಿಯೇ ಇರುತ್ತದೆ. ಇದನ್ನಾಕೆ ಕಷ್ಟ ಪಟ್ಟು ಆವಾಹಿಸಿಕೊಳ್ಳಬೇಕಾದ್ದಿಲ್ಲ. ಆ ಕಾರಣಕ್ಕೆ ಆಕೆ ಮುಖ್ಯಳಾಗುತ್ತಾಳೆ.  

ಹೆಣ್ಣು ಸಹಜವಾಗಿ ಪ್ರವಹಿಸುವ ನೀರು. ಅವಳನ್ನು ಬಂಧಿಸಹೊರಟರೆ  ತಾಳ್ಮೆಯ ಮಿತಿ ಇರುವಷ್ಟು ದಿನ ಸುಮ್ಮನುಳಿದಾಳು. ನಂತರ ಒಮ್ಮೆಲೆ ಸಿಡಿದು ಪ್ರವಾಹವಾಗಿ ಉಕ್ಕಿ ಹರಿದಾಳು. ಆಗ ಉಂಟಾಗುವ ವಿನಾಶಕ್ಕೆ ಅವಳನ್ನು ಮಾತ್ರ ಹೊಣೆಗಾರಳನ್ನಾಗಿಸುವುದು ಸಾಧ್ಯವಿಲ್ಲ. 

ಈ ಎಲ್ಲಾ ಲೇಖನಗಳ ಆಶಯಗಳು ಸ್ವಾವಲಂಬನೆಯತ್ತ, ಸ್ವಾತಂತ್ರ್ಯದತ್ತ ದಿಟ್ಟ ಹೆಜ್ಜೆ ಇಟ್ಟು ನಡೆಯುವ ಅವಳಿಗೆ ಕಾಲ್ತೊಡಕಾಗದೆ ದಾರಿ ದೀಪವಾಗಿ ಎನ್ನುವುದೇ ಆಗಿದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಅತಿಥಿ ಸಂಪಾದಕೀಯ: ಅನಿತಾ ನರೇಶ್ ಮಂಚಿ

  1. naijatheyide, khaaLaji ide, badalaagiddaaLe / badalaaguttaLe embuva dodda aakaanksheyu ide nimma lekhanadalli. indige atyanta sookta lekhanavidu Ani… ishtavaaytu!

  2. ಅತಿಥಿ ಸಂಪಾದಕರು ಚೆನ್ನಾಗಿ ಬರೆದಿದ್ದಾರೆ. ಧನ್ಯವಾದಗಳು.

  3. ಸ್ತ್ರೀ ಸಮಾನತೆ ಎಂದರೆ  ಗಂಡೆಂದುಕೊಳ್ಳುವುದಲ್ಲ. ಅಂದುಕೊಂಡಿದ್ದನ್ನು ಮಾಡುವ, ಸರಿ ತಪ್ಪುಗಳನ್ನು ತಾನೇ ವಿವೇಚಿಸಿ ನಿರ್ಧರಿಸುವ ತನ್ನ ತನವನ್ನು ಪಡೆಯುವುದು… Super Line!

  4. ಸುಂದರ ಬರಹ,,,, ಸ್ತ್ರೀ ಅಷ್ಟೇ ಅಂದರೆ ಸಾಲದು ಮಮತೆಯ ಕಡಲು ಸಹನೆಯ ಶಾಂತ ಮೂರ್ತಿ ಈ ಹೆಣ್ಣು ಜಗಕ್ಕೇ ಕಣ್ಣು,,,,,

    ಶುಭವಾಗಲೀ ಮೇಡಂ,,,,,

  5. ಸಂಚಿಕೆ ಚೆನ್ನಾಗಿತ್ತು. ಸಂಪಾದಕೀಯ ಮಾರ್ಮಿಕವಾಗಿತ್ತು. ಅಭಿನಂದನೆಗಳು..

Leave a Reply

Your email address will not be published. Required fields are marked *