ಭಾರತೀಯ ನಾಗರೀಕತೆಯು ಭೂಮಿಯಲ್ಲಿಯೇ ಅತ್ಯಂತ ಪ್ರಾಚೀನವಾದವುಗಳಲ್ಲಿ ಒಂದಾಗಿರುವುದಲ್ಲದೇ, ಇತರೇ ಎಲ್ಲಾ ಸಂಸ್ಕøತಿಗಳಂತೆ ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದ್ದು ಅವುಗಳಲ್ಲಿ ಸಾಕಷ್ಟು ಅತಿಥಿ ಸತ್ಕಾರದ ವಿಚಾರಗಳನ್ನು ಹೊಂದಿದೆ. ಅತಿಥಿ ಎಂಬ ಶಬ್ದವು ಭಾರತೀಯರ ಒಂದು ವಿಶಿಷ್ಟ ಜೀವನಕ್ರಮವನ್ನು ಸೂಚಿಸುತ್ತದೆ. ಯಾರಿಗಾದರೂ ಅನೀರಿಕ್ಷಿತವಾಗಿ ಅಪರಿಚಿತರ ಆತಿಥ್ಯವನ್ನು ಅವಲಂಬಿಸುವ ಪ್ರಸಂಗ ಒದಗಬಹುದು. ಸಂಚಾರ ಸಾಧನಗಳು ಇಂದಿನ ಹಾಗೆ ಇಲ್ಲದಿದ್ದ ಕಾಲದಲ್ಲಿ ದೂರ ಪ್ರಯಾಣದಲ್ಲಿರುವವರು ಇಂಥ ಆತಿಥ್ಯವನ್ನು ನಂಬಿಕೊಂಡೆ ವ್ಯವಹಾರ ಸಾಗಿಸಬೇಕಿತ್ತು. ಇಂದು ಕೂಡ ಬಾರತೀಯ ಹಳ್ಳಿಗರಲ್ಲಿ ಈ ಧೋರಣೆ ಹಾಗೇ ಉಳಿದಿದೆ. ಇದು ನಮ್ಮ ಸಾಂಪ್ರದಾಯಿಕ ಸಮಾಜದ ಎಲ್ಲ ಜಾತಿಗಳು ಪಾಲಿಸಿಕೊಂಡು ಬಂದ ಧರ್ಮವಾಗಿದೆ. ಇದು ಅನಿರೀಕ್ಷಿತ ಸನ್ನಿವೇಶಗಳಲ್ಲಿ ಪರಸ್ಪರಾವಲಂಬನೆಯನ್ನು ಸಾಧ್ಯ ಮಾಡುತ್ತದೆ. ಬ್ರಿಟಿಷರು ಭಾರತೀಯ ಸಮಾಜದ ಅಧ್ಯಯನವನ್ನು ಮಾಡುವಾಗ ಅವರಿಗೆ ಇಲ್ಲಿನ ಜನರನ್ನು ಪರಸ್ಪರ ಪ್ರತ್ಯೇಕಿಸುವ ಜಾತಿ ಕಟ್ಟಳೆಗಳು ಕಾಣಿಸಿದವು. ಆ ಆಂಶವನ್ನಿಟ್ಟುಕೊಂಡು ಅವರು ಜಾತಿ ವ್ಯವಸ್ಥೆಯು ಈ ಸಮಾಜವನ್ನು ಒಡೆದಿದೆ ಎಂದರು. ಆದರೆ ಜಾತಿಗಳ ಆಚೆಗೆ ಸಮುದಾಯಗಳನ್ನು ಬೆಸೆಯುವ ಹಾಗೂ ಪರಸ್ಪರಾವಲಂಬನೆಯನ್ನು ಸಾಧ್ಯಮಾಡುವ ಇಂಥ ಆಚರಣೆಗಳು ಅವರಿಗೆ ಕಾಣಿಸಲಿಲ್ಲ. ಏಕೆಂದರೆ ಐರೋಪ್ಯರಿಗೆ ವರ್ಣ ವರ್ಗಗಳನ್ನು ನೋಡಿ ಆಹ್ವಾನಿಸಿ ಸತ್ಕರಿಸುವುದು ಮಾತ್ರ ಗೊತ್ತಿತ್ತು. ಬಹುಶಃ ಇಂಥ ಆಚರಣೆಗಳು ಅವರಿಗೆ ಅನಾಗರಿಕತೆಯ ಲಕ್ಷಣವಾಗಿ ಕೂಡ ಕಾಣಿಸಿರಬಹುದು. ಇಂದು ಆತಿಥ್ಯ ಎಂಬ ಪರಿಕಲ್ಪನೆಯನ್ನೇ ಮರೆಯತೊಡಗಿರುವ ನಾವೂ ಕೂಡ ಹಾಗೇ ಯೋಚಿಸುತ್ತಿದ್ದೇವೆಂದರೆ ಆಶ್ಚರ್ಯವಿಲ್ಲ. ನಮ್ಮ ಹಿರಿಯರು ಅತಿಥಿಯು ದೇವರೆಂದು ಪರಿಗಣಿಸಿ “ಅತಿಥಿ ದೇವೋಭವ” ಎಂಬ ತತ್ವÀದಲ್ಲಿ ನಂಬಿಕೆಯಿಟ್ಟುಕೊಂಡಿದ್ದರು. ಮನೆಯಲ್ಲಿ ಹಾಗೂ ಎಲ್ಲಾ ಸಾಮಾಜಿಕ ಸನ್ನಿವೇಶಗಳಲ್ಲಿ ಅತಿಥಿಗಳ ಬಗೆಗಿನ ದಯಾಪರತೆಯನ್ನು ಹೊಂದುವದರಿಂದಲೇ ಭಾರತೀಯ ನಡತೆಯು ಮಾನ್ಯಗೊಂಡಿದೆ.
ಅತಿಥಿ ಸತ್ಕಾರ ಎಂದರೆ :- ಅತಿಥಿ ಸತ್ಕಾರ ಎಂಬುದು ಅಗತ್ಯದಲ್ಲಿರುವವರಿಗೆ ಉದಾರವಾಗಿ ನೋಡಿಕೊಳ್ಳುವುದು ಹಾಗೂ ಕರುಣೆದೋರುವುದು ಎಂಬರ್ಥವನ್ನೂ ನೀಡಬಹುದು. ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಅತಿಥಿ ಬಂದರೆ ದೇವರೇ ಬಂದಂತೆ ಕಾಲು ತೊಳೆದು, ನೀರು ಕೊಟ್ಟು , ಊಟ ಬಡಿಸಿ, ವಿಶ್ರಾಂತಿ ನೀಡಿ ಸತ್ಕರಿಸಬೇಕು, ಸೇವೆ ಮಾಡಬೇಕು. ಅವರಿಗೆ ಯಾವುದಕ್ಕೂ ಕೊರತೆ ಮಾಡದೆ, ಒಳ್ಳೆಯ ಆಹಾರವನ್ನು ಅವರಿಗೆ ಬಡಿಸಿ, ಉಳಿದದ್ದನ್ನು ತಾವು ಸೇವಿಸಬೇಕು.ಅತಿಥಿಯು ವಿಶ್ರಮಿಸಿದ ನಂತರವೇ ಆತನ ಅಥವಾ ಆಕೆಯ ಹೆಸರನ್ನು ಕೇಳಬೇಕು. ಅತಿಥಿಗೆ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಬರುವಂತೆ ಮಾಡುವುದು ಹಾಗೂ ಆತಿಥ್ಯದ ಕೊನೆಗೆ ಆತನ ಗಮ್ಯದೆಡೆಗೆ ಮಾರ್ಗದರ್ಶನ ನೀಡುವುದನ್ನು ಒಳಗೊಂಡಿರುತ್ತದೆ.
ಅತಿಥಿಯಜ್ಞ:- ಇದೂ ಮುಖ್ಯತಃ ಗೃಹಸ್ಥರಿಗೆ ಸಂಬಂಧಿಸಿದ ಯಜ್ಷ. ಯಾವ ಪೂರ್ವ ನಿಶ್ಚಯವೂ ಇಲ್ಲದೆ, ಬರುವ ದಿನದ ಅರಿವು ಇಲ್ಲದೆ, ತಾವಾಗಿ ಬಂದ ಸನ್ಯಾಸಿಗಳನ್ನೂ ವಿದ್ವಾಂಸರನ್ನೂ, ಆತ್ಮಜರನ್ನೂ ಆದರದಿಂದ ಸ್ವಾಗತಿಸಿ, ಅವರಿಂದ ಆತ್ಮೋದ್ಧಾರಕಾರವಾದ ಉಪದೇಶಗಳನ್ನು ಪಡೆದುಕೊಂಡು, ಅವರನ್ನು ಭೋಜನಾದಿಗಳಿಂದ ಸತ್ಕರಿಸುವುದೇ ಅತಿಥಿಯಜ್ಞ. ಅತಿಥಿ ಯಜ್ಞದ ಮಹತ್ವವನ್ನು ವರ್ಣಿಸುತ್ತಾ ಅಥರ್ವ ವೇದ ಹೇಳುವದು ಹೀಗೆ:-
“ಏಷ ವಾ ಅತಿಥಿರ್ಯಚ್ಛೋತ್ರಿಯಸ್ತಸ್ಮಾತ್ಪೂರ್ವೋನಾಶ್ನಿಯಾತ್||”
ಯಾವನು ವೇದವೇತ್ತನಾಗಿದ್ದಾನೋ, ಅವನೇ ಅತಿಥಿಯು. ಆತನಿಗಿಂತಲೂ ಮೊದಲಿಗನಾಗಿ ಊಟ ಮಾಡಬಾರದು. ಚತುರ್ವೇದ ಪಾರಂಗತನಾದ ವಿದ್ವಾಂಸನೆ ಗೃಹಸ್ಥರಿಗೆ ಪಾರಮಾರ್ಥಿಕ- ಲೌಕಿಕ ಜ್ಞಾನಗಳನ್ನು ಕೊಡಬಲ್ಲನು. ಧರ್ಮ, ಮನೆಮನೆಯಲ್ಲಿಯೂ ಜೀವಂತವಾಗಿ ಮೆರೆಯಬೇಕಾದರೆ, ವಿದ್ವಾನ್ ಅತಿಥಿಗಳ ಆಗಮನ ಅನಿವಾರ್ಯ. ಅತಿಥಿಸತ್ಕಾರ ಮಾಡದೆ, ತಾನೇ ಮೊದಲು ತಿನ್ನುವ ಗೃಹಸ್ಥನಿಗೆ ಅಥರ್ವವೇz ಹೀಗೆÀ ಹೇಳುತ್ತದೆ.
“ಆಶಿತಾವತ್ಯಥಾವಶ್ನೀಯಾದ್ಯಜಸ್ಯ ಸಾತ್ಮತ್ವಾಯ ಯಜ್ಞಸ್ಯಾವಿಚ್ಛೇದಾಯ ತದ್ ವ್ರತಮ್||”
ಯಜ್ಞವು ಜಳ್ಳಾಗದಂತೆ , ಕೇವಲ ತಿರುಳಿಲ್ಲದ ಅಡಂಬರವಾಗದಂತೆ, ಅದು ಮುರಿದು ಬೀಳದಂತೆ ಮತ್ತು ಚೈತನ್ಯದಾಯಕವಾಗುವಂತೆ, ಸತತವೂ ನಡೆದು ಬರುವಂತೆ ಮಾಡುವುದಕ್ಕಾಗಿ, ಜ್ಞಾನಿಯಾದ ಸತ್ಯಮಯವಾದ ಆಧ್ಯಾತ್ಮಿಕ ಪ್ರವಚನವನ್ನು ನೀಡಬಲ್ಲ ಅತಿಥಿಯನ್ನು ಮೊದಲು ಭೋಜನಾದಿಗಳಿಂದ ಸತ್ಕರಿಸಿ ಆಮೇಲೆ ತಾನು ಭುಂಜಿಸುವುದು ಗೃಹಸ್ಥನ ವ್ರತವಾಗಿರಬೇಕು.
ಹಾಸ್ಪಿಟಾಲಿಟಿ:- ಹಾಸ್ಪಟಾಲಿಟಿ ಎಂಬ ಪದವು ವಾಸ್ತವವಾಗಿ ಶಕ್ತಿಯನ್ನು ಹೊಂದಿರುವುದು ಎಂಬರ್ಥ ಬರುವಂತಹಾ ಹಾಸ್ಟಿಸ್ ಎಂಬ ಪದದಿಂದ ರೂಪುಗೊಂಡ ಲ್ಯಾಟಿನ್ ಪದ ಹಾಸ್ಟೆಸ್ ನಿಂದ ಉತ್ಪತ್ತಿಯಾಗಿದೆ. “ಆತಿಥೇಯ/ಹೋಸ್ಟ್” ಎಂಬ ಪದದ ಅಕ್ಷರಶಃ ಅರ್ಥ “ಅಪರಿಚಿತ ದೇವರು” ಎಂಬುದಾಗಿದೆ. ಪೂರ್ವಸೂಚನೆಯಿಲ್ಲದೆ ಇನ್ನೊಬ್ಬರ ಮನೆಗೆ ಹೋಗುವುದು ಪಾಶ್ಚಾತ್ಯರಲ್ಲಿ ಅಸಭ್ಯ ನಡತೆ. ಪಾಶ್ಚಾತ್ಯದಿಂದ ಪ್ರಭಾವಿತರಾದ ಭಾರತೀಯ ವಿದ್ಯಾವಂತರೂ ಕೂಡ ಇಂದು ಹಾಗೇ ಭಾವಿಸುತ್ತಾರೆ. ಇಂದಿನ ಜೀವನ ಕ್ರಮದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಅತಿಥಿಗಳನ್ನು ಉತ್ತೇಜಿಸುವುದು ಅಸಾಧ್ಯವಾಗುತ್ತಿದೆ. ಏಕೆಂದರೆ ಹೊತ್ತಲ್ಲದ ಹೊತ್ತಿನಲ್ಲಿ ಬಂದವರನ್ನು ಉಪಚರಿಸಬೇಕಾದರೆ ಅತಿಥಿ ಹಾಗೂ ಗ್ರಹಸ್ಥರಿಬ್ಬರ ಜೀವನ ಕ್ರಮವೂ ಅದಕ್ಕೆ ಹೊಂದಿಕೊಳ್ಳುವಂತಿರಬೇಕು.
ನಗರವಷ್ಟೇ ಅಲ್ಲದೆ ಹಳ್ಳಿ ಜೀವನದ ಹಿನ್ನೆಲೆಯ ಅನೇಕ ವಿದ್ಯಾವಂತರಿಗಂತೂ ಈ ರಿವಾಜಿನ ಕಲ್ಪನೆಯೂ ಇರಲಿಕ್ಕಿಲ್ಲ. ಈ ಅಜ್ಞಾನಕ್ಕೆ ಇಂಬು ಕೊಡಲಿಕ್ಕೆಂದೇ ಅತಿಥಿ ಎಂಬ ಶಬ್ದವನ್ನು ನಾವು ಗೆಸ್ಟ್ ಎಂಬುದಾಗಿ ಭಾಷಾಂತರಿಸಿದ್ದೇವೆ. ನಮ್ಮ ಮನೆಗೆ ಯಾರೋ ಗೆಸ್ಟಗಳು ಬಂದು (ವಕ್ಕರಿಸಿ)ಬಿಟ್ಟಿದ್ದಾರೆ ಎನ್ನುತ್ತೇವೆ. ಆದರೆ ನಿಜವಾಗಿಯೂ ಅಲ್ಲಿ ಬಂದವರು ಅತಿಥಿಗಳಾಗಿರುತ್ತಾರೆ. ಗೊತ್ತಿಲ್ಲದೇ ಬರುವವರು ಗೆಸ್ಟ ಆಗಲು ಸಾಧ್ಯವಿಲ್ಲ. ಅದೇ ರೀತಿ, ನಮ್ಮಲ್ಲಿ ದುಡ್ಡುಕೊಟ್ಟು ಉಳಿಯುವ ಗೆಸ್ಟ ಹೌಸ್ಗಳು ಅತಿಥಿಗೃಹಗಳಾಗಿವೆ. ದುಡ್ಡು ಕೊಟ್ಟು ಪಡೆದ ಹಾಸ್ಪಟಾಲಿಟಿಯನ್ನು ಅತಿಥಿ ಸತ್ಕಾರವನ್ನಾಗಿ ಮಾಡಿದ್ದೇವೆ. ರೊಕ್ಕ ಇಸಿದುಕೊಂಡು ಮಾಡುವ ಸತ್ಕಾರದ ಕಾರಣದಿಂದ ಅತಿಥಿ ಎಂಬ ಶಬ್ದದ ನಿಜ ಅರ್ಥ ಮರೆಗೆ ಸರಿದಿದೆ. ಇಂಥ ಸಂಸ್ಕøತಿಗೆ ಸೇರಿದ ಯುವಜನರಿಗೆ ಮನೆಗೆ ಬಂದ ಪುಕ್ಕಟೆ ಅತಿಥಿಗಳನ್ನು ಮಾತನಾಡಿಸುವುದರಲ್ಲೂ ಆಸಕ್ತಿಯಿಲ್ಲ. ಅಂದರೆ ಆಹ್ವಾನಿತರಾಗಿ ಬರುವವರು ಒಂದು ವೇಳೆ ಆಹ್ವಾನವಿಲ್ಲದೇ ಬಂದರೆ ಅದು ಅನುಚಿತ ಹಾಗೂ ಅಸಂಬದ್ಧವೆಂದು ತೀರ್ಮಾನಿಸುತ್ತಾರೆ. ಹಾಗಂತ ನಾವೆಲ್ಲ ಆಹ್ವಾನದ ಬಗ್ಗೆ ಬಹಳ ಕಟ್ಟುನಿಟ್ಟಾಗಿದ್ದೇವೆ ಅಂತೆನಲ್ಲ. ಪ್ರತಿ ಮನೆಗಳಲ್ಲಿ ಯಾವುದೇ ಆಹ್ವಾನವಿಲ್ಲದೇ, ಪೂರ್ವ ಸೂಚನೆಯಿಲ್ಲದೇ ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬರುವವರೂ ಖಾಯಂ ಇರುತ್ತಾರೆ. ಅವರೇ ಅತಿಥಿಗಳು. ನಮ್ಮ ಭಾರತೀಯ ಸಂಸ್ಕøತಿಯಂತೆ ನಮ್ಮ ಕುಟುಂಬಗಳಲ್ಲಿ ಇವರನ್ನೂ ಕೂಡ ಗೌರವಿಸಿ ಉಪಚರಿಸಲಾಗುತ್ತದೆ. ಅಷ್ಟೇ ಅಲ್ಲ ಇಂಥ ಉಪಚಾರಕ್ಕೆ ಆತಿಥ್ಯ ಎಂಬುದಾಗಿಯೇ ಕರೆಯಲಾಗುತ್ತದೆ. ಇದು ಭಾರತೀಯ ಸಮಾಜದ ಒಂದು ವಿಶಿಷ್ಟತೆ ಹಾಗೂ ನಮ್ಮ ಪೂರ್ವಜರು ಇದನ್ನು ಸತ್ಸಂಪ್ರದಾಯ ಎಂಬುದಾಗಿ ತಿಳಿದಿದ್ದರು. ಅತಿಥಿ ಸತ್ಕಾರವೆನ್ನುವುದು ಅದ್ಭುತವಾದ ವಿಚಾರ ಇಂತಹ ಉತ್ತಮ ವಿಚಾರವನ್ನು ನಾವು ರೂಢಿಸಿಕೊಳ್ಳುವುದರ ಜೊತೆಗೆ ನಮ್ಮ ಮಕ್ಕಳಿಗೂ ಮನವರಿಕೆ ಮಾಡಿಕೊಡುವದರ ಜೊತೆಗೆ ಒಂದು ಸತ್‍ಸಂಪ್ರದಾಯವನ್ನು ಮುಂದುವರೆಸಬೇಕು.
ಅಭ್ಯಾಗತ ದೇವೋಭವ:- ಆಗೊಂದು ಕಾಲವಿತ್ತು ಮನೆಗಳಲ್ಲಿ ನೆಂಟರಿಷ್ಟರು ಸದಾ ತುಂಬಿಕೊಂಡಿರುತ್ತಿದ್ದರು. ವರ್ಷದಲ್ಲಿ ಹಲವಾರು ಸಂದರ್ಭಗಳಲ್ಲಿ ನೆಂಟರನ್ನು ಆಹ್ವಾನಿಸುತ್ತಿದ್ದರು. ನೆಂಟರೂ ಕೂಡ ಅಷ್ಟೇ. ಆಹ್ವಾನವನ್ನು ಮನ್ನಿಸಿ ಶ್ರದ್ಧೆಯಿಂz ಬಂದು ಹೋಗುತ್ತಿದ್ದರು. ಆದರೆ ಇಂದು ಸತ್ಕಾರ ಮಾಡುವ ಮತ್ತು ಮಾಡಿಸಿಕೊಳ್ಳುವ ಇಬ್ಬರಲ್ಲೂ ಸೌಜನ್ಯತೆ ಇಲ್ಲ. ಕೇವಲ ಮೇಲ್ನೋಟಕ್ಕೆ ಸೌಜನ್ಯಯುತವಾಗಿ ಇಬ್ಬರೂ ವರ್ತಿಸಿದರೂ ಕೂಡ, ಮನಸ್ಸಿನ ಒಳಾರ್ಥಗಳೇ ಬೇರೆ ಇರುತ್ತವೆ. ಮೊದಲೆಲ್ಲ ಶುಭ ಕಾರ್ಯಗಳಿಗೆ ಹೋಗುತ್ತಿದ್ದುದು ಹರಸಿ-ಹಾರೈಸಿ ಶುಭಾಶೀರ್ವಾದ ಮಾಡುವುದಕ್ಕೆ ಆದರೆ ಇಂದು ಇಬ್ಬರೂ ತಮ್ಮ ದೊಡ್ಡಸ್ಥಿಕೆಗಳಿಗೆ ಜೋತು ಬಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಷಾದನೀಯ ಸಂಗತಿ. ಇದು ಒಂದೆಡೆಯಾದರೆ ಇಂದು ಇಂಥಹ ಮಂಗಲ ಕಾರ್ಯಗಳು ಕೇವಲ ಹೆಸರಿಗಷ್ಟೇ ಆಗಿದ್ದು, ಮದುವೆ ಕಾರ್ಯಗಳು ನೋಂದಣಿ ಕಛೇರಿಗಳಲ್ಲೋ, ದೇವಸ್ಥಾನಗಳಲ್ಲೋ, ವಧು-ವರ ಅವರವರ ತಂದೆ-ತಾಯಿಯರನ್ನು ಹೊರತು ಪಡಿಸಿ ಅರ್ಚಕರೊಬ್ಬರಿದ್ದರೆ ಅತಿಥಿ-ಅಭ್ಯಾಗತರೊಂದಿಗೆ ಸಂಭ್ರಮದಿಂದ 4 ದಿನಗಳು ನಡೆಯಬೇಕಿದ್ದ ಮದುವೆ 4 ನಿಮಿಷದಲ್ಲಿ ಮುಗಿದುಹೋಗುತ್ತಿವೆ. ಇನ್ನು ಹಬ್ಬ ಹರಿದಿನ ಅಂತ ಬಂದರೆ ಮೊದಲೆಲ್ಲ ಮನೆಗೆ ನೆಂಟರನ್ನೆಲ್ಲ ಕರೆದು ವಿಧ ವಿಧದ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಅಕ್ಕ ಪಕ್ಕದವರೊಡನೆ ಕೂಡಿಕೊಂಡು ಆಚರಿಸುವ ಪರಿಪಾಠ ಇತ್ತು. ಇಂದು ಹಬ್ಬ ಎಂದರೆ ಮನೆಯಲ್ಲಿ ದೇವರ ಮುಂದೆ ವಿದ್ಯುದ್ದೀಪ ಬೆಳಗಿಸಿ, ನೈವೇದ್ಯವನ್ನು ಹೊರಗಿನಿಂದಲೇ ತರಿಸಿ, ನಾವು ಹೋಟಲಗಳಿಗೋ, ರೆಸ್ಟೊರಂಟಗಳಿಗೋ ಹೋಗಿ ಊಟ ಮಾಡಿ ಬರುವುದು, ಇಲ್ಲವೇ ಪಾರ್ಸಲ್ ತರಿಸಿ ತಿನ್ನುವುದು ರೂಢಿಯಲ್ಲಿದೆ.
ಮೊದಲೆಲ್ಲ ನೆಂಟರಿಷ್ಟರ ಮನೆ ಕಾರ್ಯಕ್ರಮಗಳಿಗೆಂದು ಆಹ್ವಾನವಿತ್ತರೆ ಖುಷಿಯೋ ಖುಷಿ ಬಂಧುಬಳಗವನ್ನೆಲ್ಲ ಒಮ್ಮೆ ಭೇಟಿಯಾಗಲು, ಮಾತನಾಡಿಸಲು, ಮನೆಗೆ ಕರೆದು ಸತ್ಕರಿಸಲು ಸುವರ್ಣ ಅವಕಾಶ ಎಂದುಕೊಳ್ಳುತ್ತಿದ್ದರು, ಆದರೆ ಇಂದು ದೂರದಲ್ಲಿ ಬರುವ ನೆಂಟರಿಷ್ಟರೋ, ಪರಿಚಯದವರೋ ನಮ್ಮ ಕಣ್ಣಿಗೆ ಬಿದ್ದರೆ, ಅವರಿಂದ ತಪ್ಪಿಸಿಕೊಂಡು ಹೋಗುತ್ತಿದ್ದೇವೆ. ಅವರಿಗೆ ಭೇಟಿಯಾದರೆ ಮತ್ತೇ ಅವರ ಜೊತೆ ಮಾತನಾಡಿ, ಆರೋಗ್ಯ ವಿಚಾರಿಸಿ, ಮನೆಗೆ ಬನ್ನಿ ಅಂತ ಕರಿಬೇಕು ಇದೆಲ್ಲ ಆಗೋಲ್ಲ. ಸುಮ್ಮನೆ ದೂರ ಸರಿದು ಹೋಗುವುದೇ ಲೇಸು ಎಂದು ಕೊಳ್ಳುತ್ತಿದ್ದೇವೆ. ಅತಿಥಿಗಳನ್ನು ಕಂಡೂ ಕಾಣದಂತೆ ಹೋಗುವರನ್ನ ಕಂಡು ಮನ್ನಿಸನೂ ಪರಮಾತ್ಮ ಎಂದು ಬಸವಣ್ಣನವರು ತಮ್ಮ ವಚನದಲ್ಲಿ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ.
ಏನಿ ಬಂದಿರಿ, ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೋಯ್ವುದೆ ಮಾಬನೆ ಕೂಡಲಸಂಗಮದೇವಯ್ಯ||
ಶರಣ ಶರಣನ ಕಂಡು
ಶರಣು ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ
ಶರಣ ಶರಣನ ಕಂಡು
ಪಾದವಿಡಿದು ವಂದಿಸುವುದೆ ಭಕ್ತಿ ಲಕ್ಷಣ
ಶರಣ ಚರಣವ ಪಿಡಿಯದೆ
ಕಂಡೂ ಕಾಣದೆ ಪೋದನಾದಡೆ
ಕೂಡಲ ಚೆನ್ನಸಂಗನ ಶರಣರು ಮನ್ನಿಸರಯ್ಯಾ||
ಕಾಲ ಬದಲಾದಂತೆ ನಮ್ಮ ನಡುವಳಿಕೆಗಳು, ಸಂಪ್ರದಾಯಗಳು ಬದಲಾಗುತ್ತಿವೆಯಷ್ಟೇ ಅಲ್ಲದೇ ಇಂದು ಯಾರೂ ತಮಗಿಷ್ಟ ಬಂದಾಗ ನೆಂಟರ ಮನೆಗೆ ಹೋಗುವಂತಿಲ್ಲ ಎಂಬ ಕಾಲ ಬಂದಿದೆ. ಸ್ವಂತ ನೆಂಟರಾದರೂ , ಅಕ್ಕ, ಅಣ್ಣ, ಗಂಡ, ಹೆಂಡತಿ ಯಾರೇ ಆಗಿದ್ದರೂ ಸಮಯವನ್ನು ಮೊದಲೇ ನಿಗದಿಪಡಿಸಿಕೊಂಡು ಹೋಗುವ ಪಾಶ್ಚಾತ್ಯ ಪದ್ದತಿ ನಮ್ಮ ದೇಶಕ್ಕೂ ಕಾಲಿಟ್ಟಿದೆ. ಹೀಗೇ ಹೋಗುತ್ತಿದ್ದೆ, ನಿಮ್ಮ ಮನೆ ಇಲ್ಲೇ ಇರುವುದು ನೆನಪಾಯಿತು. ಯೋಗಕ್ಷೇಮ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆ. . ಎಂದು ನಮ್ಮ ಅಜ್ಜನ ಕಾಲದಲ್ಲಿ ಹಿತೈಷಿಗಳು ಮನೆಗೆ ಬರುತ್ತಿದ್ದರು. ಹಾಗೆ ಬಂದವರು ಒಳ್ಳೆಯ ಆತಿಥ್ಯ ಪಡೆದು, ಊಟ ಮಾಡಿಕೊಂಡು ಹೋಗುತ್ತಿದ್ದರು. ಈಗ ಯಾರಾದರೂ ಹೇಳದೆ ಕೇಳದೆ ಬಂದರೆ, ಅಯ್ಯೋ ಈಗ್ಯಾಕೆ ಬರೋಕೆ ಹೋದ್ರಿ? ಮೊದಲೇ ಒಂದು ಪೋನ್ ಮಾಡಬಾರದಿತ್ತಾ? ನಾನು ಹೊರಗೆ ಹೋಗುತ್ತಿದ್ದೇನೆ . ಸ್ವಲ್ಪ ಕೆಲಸ ಇದೆ. ಆಮೇಲೆ ಸಿಗೋಣ ಎಂದು ಹೊರಟುಬಿಡುವವರೂ ಇದ್ದಾರೆ.
ಆತಿಥೇಯರ ಸಣ್ಣ ಬುದ್ಧಿ:- ನಾವು ಚಿಕ್ಕವರಗಿದ್ದಾಗ ರಜೆ ಬಂತೆಂದರೆ ಸಾಕು ಸಂಬಂಧಿಕರ ಮನೆಗೆ ಹೋಗುತ್ತಿದ್ದೇವು. ಅವರು ಇವರ್ಯಾಕೆ ಬಂದರೆಂದು ಕೊಳ್ಳದೆ ಪ್ರೀತಿಯಿಂದ ನೋಡಿಕೊಂಡು . ಎಷ್ಟು ದಿನ ಇದ್ದರೂ ಉಪಚರಿಸಿ ಕಳಿಸುತ್ತಿದ್ದರು. ಈಗ ಯಾರೇ ಅತಿಥಿ ಮನೆಗೆ ಬಂದರೂ ಮನೆಯ ದೊಡ್ಡವರೇ ಲೆಕ್ಕಾಚಾರ ಹಾಕುತ್ತಾರೆ. ಅಡುಗೆ ಮನೆಯಲ್ಲಿ ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ. ಇವರು ಎಷ್ಟು ದಿನ ಇರ್ತಾರೆ. . . ಈಗಲೇ ಬರಬೇಕಿತ್ತಾ.. . . ಸುಮ್ನೆ ಖರ್ಚು.. . . ಹೇಳೊ ಹಾಗೂ ಇಲ್ಲ. ಬಿಡೋ ಹಾಗೂ ಇಲ್ಲ. ಎಂದೆಲ್ಲ ಗುಸು ಗುಸು ಮಾಡುತ್ತಾರೆ. ದೊಡ್ಡವರು ಹೀಗೆ ಮಾಡುವುದನ್ನು ನೋಡಿ ಚಿಕ್ಕವರೂ ಅದನ್ನೇ ಕಲಿತಿದ್ದಾರೆ. ಅತಿಥಿಗಳನ್ನು ಸತ್ಕರಿಸುವುದು ಬಿಡಿ, ಅವರನ್ನು ನೋಡಿ ನಗೋದು ಇಲ್ಲ. ಕೆಲವು ಸಲ ನಮ್ಮ ಸಂಬಂಧಿಕರೇ ಬಂದಿದ್ದರೂ ಅವರು ಹೇಗೆ ನಮಗೆ ಸಂಬಂಧ ಎಂಬುದು ಕೂಡ ನಮಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳಲು ಪ್ರಯತ್ನಪಡುವುದದೂ ಇಲ್ಲ..
ಆಧುನಿಕ ಭಾರತ ಮರೆತ ಉದಾತ್ತ ಗುಣ: ಅತಿಥಿ ದೇವೋ ಭವ ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ. ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಕಾಣಬೇಕೆಂಬುದು ಇದರ ಆಶಯ. ಆದರೆ ನಾವು ಎಷ್ಟು ಜನ ನಿಜವಾಗಲೂ ಅತಿಥಿಗಳನ್ನು ದೇವರಂತೆ ಕಾಣುತ್ತೇವೆ? ದೇವರನ್ನೇ ದೇವರನ್ನಾಗಿ ಕಾಣದ ನಾವು ಮನೆಗೆ ಬಂದ ಮನುಷ್ಯರನ್ನು ದೇವರೆಂದು ಆದರಿಸುತ್ತೇವಾ? ನಮ್ಮಲ್ಲಿ ಎಷ್ಟೋ ಜನರು ಆಯ್ದ ಕೆಲ ಅತಿಥಿಗಳನ್ನು ಬಹಳ ಗೌರವದಿಂದ ಕಂಡು ಉಳಿದವರನ್ನ ಬೇಕಾ ಬಿಟ್ಟಿ ನೋಡುತ್ತಾರೆ, ಮತ್ತೇ ಕೆಲವರ ಕಡೆ ಲಕ್ಷ್ಯ ಕೂಡ ವಹಿಸುವುದಿಲ್ಲ. ಅಯ್ಯೋ ಬಿಡು , ಅವರನ್ನೇನು ಮಾತನಾಡಿಸೋದು. ಅವರಿಂದ ನಮಗೇನೂ ಆಗಬೇಕಾಗಿಲ್ಲ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕಿ ಕಡೆಗಣಿಸುತ್ತಾರೆ. ಆದರೆ ತಾವು ಬೇರೆಯವರ ಮನೆಗೆ ಹೋದಾಗ ಮಾತ್ರ ಅಲ್ಲಿರುವ ಎಲ್ಲರೂ ತಮ್ಮನ್ನು ಬಹಳ ಗೌರವದಿಂದ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ಈಗ ಬಂದ್ರಾ, ಚೆನ್ನಾಗಿದ್ದೀರಾ, ಮನೆಯಲ್ಲೆಲ್ಲ ಚೆನ್ನಾಗಿದ್ದಾರಾ, ಕುಡಿಯೋದಕ್ಕೆ ಏನು ಕೊಡಲಿ, ಬನ್ನಿ ಊಟ ಮಾಡುವಿರಂತೆ.. . . .ಇದು ಮನೆಗೆ ಯಾರೇ ಬಂದರೂ ನಮ್ಮ ಹಿರಿಯರು ಆದರಿಸುತ್ತಿದ್ದ ರೀತಿ. ಈಗ ನಮಗೆ ಇದೆಲ್ಲ ಮರೆತೆ ಹೋಗಿದೆ. ಕೆಲ ಸಲ ಬೇರೆಯವರ ಮನೆಗೆ ಹೋದಾಗ ತುಂಬಾ ಹೊಟ್ಟೆ ಹಸಿದಿರುತ್ತದೆ. ಕನಿಷ್ಟ ಪಕ್ಷ ಒಂದು ಕಾಫಿಯನ್ನಾದರೂ ಕೊಡಲಿ ಎಂದು ಮನಸ್ಸು ಬಯಸುತ್ತಿರುತ್ತದೆ ಆದರೆ, ಆ ಮನೆಯವರು ಕಾಫಿ ಹಾಗಿರಲಿ, ನೀರು ಬೇಕಾ ಅಂತಲೂ ಕೇಳುವುದಿಲ್ಲ. ನೀರನ್ನೇನೋ ನಾವೇ ಕೇಳಬಹುದು ಆದರೆ. ಕಾಫಿ ಕೊಡಿ, ತಿಂಡಿ ಕೊಡಿ ಎಂದು ಕೇಳಲು ಸಾಧ್ಯವೇ? ಇಂತಹ ಅನುಭವ ನಮಗೆಲ್ಲ ಒಮ್ಮೆಯಾದರೂ ಆಗಿಯೇ ಇರುತ್ತದೆ. ಆದರೆ ಇದರಿಂದ ಬುದ್ದಿ ಕಲಿತು ನಾವೇನೂ ನಮ್ಮ ಮನೆಗೆ ಬರುವ ಅತಿಥಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಕಾಫಿ ಕುಡಿತೀರಾ ಎಂದು ಕಾಟಾಚಾರಕ್ಕೆ ಕೇಳಿ, ಅವರು ಶಿಷ್ಟಾಚಾರಕ್ಕೆ ಬೇಡವೆಂದರೆ ಮುಗಿಯಿತು. ನಾವು ಸುಮ್ಮನಾಗಿಬಿಡುವುದುಂಟು.
ಭಾರತೀಯ ಸಂಸ್ಕøತಿಯಲ್ಲಿ ಹೀಗೆ ಅತಿಥಿ ಸತ್ಕಾರವನ್ನು ಗ್ರಹಸ್ಥ ಧರ್ಮ ಎಂಬುದಾಗಿ ಎತ್ತಿ ಹಿಡಿಯಲಾಗಿದೆ. ಅತಿಥಿ ದೇವೋ ಭವ ಎಂಬ ಹೇಳಿಕೆಯು ಜನಜನಿತವಾಗಿದೆ. ಮಹಾಭಾರತದ ಅಶ್ವಮೇಧಿಕ ಪರ್ವದ 92 ನೇ ಅಧ್ಯಾಯದಲ್ಲಿರುವಂತೆ ಬಂದಂಥ ಅತಿಥಿಯನ್ನು ಅವನ ಕುಲ ಮೂಲಗಳನ್ನು ಕೇಳಿ ಎಂದೂ ಅವಮಾನಿಸಬಾರದು. ಪರಲೋಕದಲ್ಲಿ ಹಿತವನ್ನು ಬಯಸುವವರು ತಮ್ಮ ಮನೆಗೆ ಬಂದವನು ಚಾಂಡಾಲನಿರಲಿ, ಶ್ವಪಾಕನಿರಲಿ, ಅತಿಥಿಯಾಗಿ ಬಂದವನಿಗೆ ಅನ್ನವನ್ನು ನೀಡಿ ಸತ್ಕರಿಸಬೇಕೆಂಬ ಹೇಳಿಕೆಯಿದೆ.
ಅತಿಥಿ ಸತ್ಕಾರವನ್ನು ನಡೆಸಿಕೊಂಡು ಹೋಗುವುದು ನಮ್ಮ ಸಾಂಪ್ರದಾಯಿಕ ಕುಟುಂಬಗಳ ಒಂದು ಕ್ರಮ. ಹಿಂದೆ ಎಷ್ಟೇ ಹೊತ್ತಿನಲ್ಲಿ ಯಾರೇ ಬರಲಿ ಮನೆಯವರು ಗೊಣಗಾಡದೇ ಅವರಿಗೆ ಊಟೋಪಚಾರಗಳನ್ನು ನಡೆಸುತ್ತಿದ್ದರು. ಬಹುತೇಕವಾಗಿ ಅವರು ನೆಂಟರಿಷ್ಟರಾದರೆ ಮನೆಮಂದಿಯೆಲ್ಲ ಖುಷಿಯಲ್ಲಿ ತೇಲುತ್ತಿದ್ದರು. ಕೆಲವೊಮ್ಮೆ ಹೆಂಗಸರಿಗೆ ಇದು ಶಿಕ್ಷೆಯೆ ಆಗುತ್ತಿತ್ತು. ಆದರೆ ಅದನ್ನು ಶಿಕ್ಷೆಯೆಂದುಕೊಳ್ಳದೆ ಪ್ರೀತಿ-ಆದರಗಳಿಂದ ಬಂದವರನ್ನು ಉಪಚರಿಸುತ್ತಿದ್ದರು.. ನನ್ನ ಬಾಲ್ಯದ ನೆನಪನ್ನೇ ಆಧರಿಸುವುದಾದರೆ, ಮನೆಗೆ ಬಂದವರನ್ನು ಮಕ್ಕಳಾದಿಯಾಗಿ ಎಲ್ಲರೂ ಮಾತನಾಡಿಸಿ ಉಪಚಾರ ಮಾಡಬೇಕು ಎಂಬುದು ನಮ್ಮ ರಿವಾಜು. ಕೆಲವೊಮ್ಮೆ ಯಾರೋ ಪರಿಚಯವೇ ಇಲ್ಲದ ಹಾದಿ ಹೋಕರು ದಾರಿ ತಪ್ಪಿಯೋ, ರಾತ್ರಿ ಕಳೆಯಲೋ ಮನೆಗೆ ಬಂದು ಬಿಡುತ್ತಿದ್ದರು. ಮಲಗಿದ್ದ ಅಮ್ಮ ಎದ್ದು ಅವರಿಗೆಲ್ಲ ಊಟ ಬಡಿಸಿ ಮಲಗುತ್ತಿದ್ದರು. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಮನೆಯ ಎಲ್ಲ ಕೆಲಸಗಳನ್ನು ನಿಭಾಯಿಸಿ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ ಮತ್ತೆ ಇಂಥ ಅತಿಥಿಗಳನ್ನು ಉಪಚರಿಸುವುದನ್ನು ಸ್ತ್ರೀ ಶೋಷಣೆ ಎಂದು ಇಂದಿನ ದಿನಮಾನಗಳಲ್ಲಿ ಕರೆಯುತ್ತೇವೆ..
ಅತಿಥಿ ಸತ್ಕಾರವು ಸಂಸಾರಸ್ಥರ ಕರ್ತವ್ಯವಾಗಿರುವದರಿಂದ ಇಷ್ಟಾನಿಷ್ಟಗಳು ಅಲ್ಲಿ ಮುಖ್ಯವಲ್ಲ. ಒಮ್ಮೆಯಾದರೂ ನಾವೂ ಅನ್ಯರ ಅತಿಥಿಗಳಾಗಿ ಹೋಗಿರುತ್ತೇವೆ/ಹೋಗುತ್ತೇವೆ, ಸತ್ಕಾರದಲ್ಲಿ ಜಾತಿ ಮತ ಅಂತೆಲ್ಲ ಸಂದಿಗ್ಧಗಳು ಇರುವುದಿಲ್ಲ. ಏಕೆಂದರೆ ಆ ಕಟ್ಟಳೆಗಳನ್ನು ಅನುಸರಿಸಿಯೇ ಆತಿಥ್ಯವನ್ನು ನೀಡಲಾಗುತ್ತದೆ. ಕುವೆಂಪು ಅವರ ನೆನಪಿನ ದೋಣಿಯಲ್ಲಿ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಕುವೆಂಪು ಅವರ ಮೆಟ್ರಿಕ್ ಪರೀಕ್ಷೆಯ ನಂತರ ಅವರು ತಮ್ಮ ಸಂಬಂಧಿಗಳು ಹಾಗೂ ಮಿತ್ರರೊಂದಿಗೆ ಶಿವಮೊಗ್ಗದಿಂದ ಕುಪ್ಪಳಿಗೆ ವಾಪಸು ಹೋಗಬೇಕಿತ್ತು. ಕಾಡಿನ ದಾರಿಯಲ್ಲಿ ಮಧ್ಯಾಹ್ನದ ಹೊತ್ತು ಯಾವುದೇ ಪೂರ್ವ ಸೂಚನೆ ಇಲ್ಲದೇ ಒಬ್ಬರು ಭಟ್ಟರ ಮನೆಗೆ ಮಧ್ಯಾಹ್ನ ಹೋಗುತ್ತಾರೆ. ಇವರು ಹದಿನೈದಿಪ್ಪತ್ತು ಜನರಿದ್ದರು. ಭಟ್ಟರು ಸಂತೋಷ ಪಟ್ಟು ಇವರಿಗೆಂದೇ ವಿಶೇಷ ಭೋಜನವನ್ನು ಮಾಡಿಸಿ ಉಪಚರಿಸುತ್ತಾರೆ. ಆದರೆ ಬ್ರಾಹ್ಮಣರು ಒಕ್ಕಲಿಗರ ನಡುವಿನ ಕೆಲವು ಜಾತಿ ಕಟ್ಟಳೆಗಳನ್ನು ಪಾಲಿಸುತ್ತಲೇ ಈ ಸತ್ಕಾರ ನಡೆಯಿತು. ಎಂಬುದಾಗಿ ಕುವೆಂಪು ದಾಖಲಿಸುತ್ತಾರೆ. ಜಾತಿ ಕಟ್ಟಳೆಗಳನ್ನಿಟ್ಟುಕೊಂಡೂ ಆ ಮನೆಯವರು ಗ್ರಹಸ್ಥ ಧರ್ಮವನ್ನು ಪಾಲಿಸುವ ಕರ್ತವ್ಯವನ್ನು ಮರೆಯಲಿಲ್ಲ.
ಇಂದಿಗೂ ಅನೇಕರ ಮನೆಗಳಲ್ಲಿ ದಣಿದವರ ಹಸಿವನ್ನು ತಣಿಸುವ ಸತ್ಕರ್ಮ ನಡೆಯುತ್ತಿದೆ. ಆದರೆ ಇಂದು ನಾವೆಲ್ಲ ಹೀಗೆ ಮಾಡುವುದಿಲ್ಲ. ಅಂದರೆ ನಾವ್ಯಾರಿಗೂ ಅನ್ನವನ್ನು ಹಾಕುವುದಿಲ್ಲವೆಂದರ್ಥವಲ್ಲ. ಬಡಿಸುತ್ತೇವೆ. ಆದರೆ ಯಾರಿಗೆ? ಉಳ್ಳವರಿಗೆ, ನಮ್ಮ ಬಂಧು ಮಿತ್ರರಿಗೆ , ಹಸಿವೆ ಇಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಉಣ್ಣಿಸುತ್ತೇವೆ. ಇದರಿಂದ ಯಾವ ಪ್ರಯೋಜನವೂ ಆಗದು. ಏಕೆಂದರೆ ಹೊಟ್ಟೆ ತುಂಬಿದ ವ್ಯಕ್ತಿ ಮತ್ತೆ ಉಣ್ಣುವದರಿಂದ ಆತನಿಗೆ ಅಜೀರ್ಣವಾಗುತ್ತದೆ. ಅದೇ ಅನ್ನವನ್ನು ನಿಜವಾಗಿ ಹಸಿದವನಿಗೆ ಬಡಿಸಿದರೆ ಅವನ ಹೊಟ್ಟೆ ತಣ್ಣಗಾಗುತ್ತದೆ. ಹಸಿವು ಅಷ್ಟಾದರೂ ಕಡಿಮೆಯಾಗುತ್ತದೆಯಲ್ಲವೆ.
ಅತಿಥಿ ಸತ್ಕಾರ ಮಾಡುವುದನ್ನು ಮರೆಯಬೇಡಿರಿ; ಅತಿಥಿ ಸತ್ಕಾರ ಮಾಡುವವರಲ್ಲಿ ಕೆಲವರು ದೇವದೂತರನ್ನು ಸತ್ಕರಿಸಿದ್ದಾರೆ.ಅದಕ್ಕೆ ಪೂರಕವಾದ ಒಂದು ಸಣ್ಣ ಕತೆ.
ಇಂಗ್ಲೇಂಡ್ ದೇಶದ ರಾಣಿ, ಒಂದು ದಿನ ಸಂಜೆ ವಿಹಾರ ಮಾಡಿ ಬರಲು ಹೊರಗೆ ಹೋದಳು . ಆಕೆಯು ಸಾಧಾರಣವಾದ ಉಡುಪಿನಲ್ಲಿ, ಒಂಟಿಯಾಗಿ ಹೋದುದರಿಂದ ಆಕೆಯನ್ನು ರಾಣಿ ಎಂದು ಯಾರೂ ಗುರುತಿಸಲಿಲ್ಲ!. ಮಳೆ ಬರಲಾರಂಭಿಸಿತು. ರಾಣಿಗೆ ಏನು ಮಾಡಲೂ ತೋಚಲಿಲ್ಲ. , ಒಂದು ಮನೆಯ ಬಳಿ ಮನೆಗೆ ಓರೆಯಾಗಿ ನಿಂತಳು. ಆಕೆಯನ್ನು ಯಾರೂ ಗಮನಿಸಲೇ ಇಲ್ಲ. ಮನೆಯ ಹಜಾರದಲ್ಲಿ ನಿಂತುಕೊಂಡಿದ್ದಳು. ಮಳೆ ಬಿಡುವಂತೆ ತೋಚಲಿಲ್ಲವಾದ್ದರಿಂದ ಮನೆಯಾಕೆಯ ಬಳಿ ಬಂದು ಕೊಡೆ ಕೊಡುವಂತೆಯೂ ಮತ್ತೆ ತಾನು ಅದನ್ನು ಹಿಂದಿರುಗಿಸುವೆನೆಂದೂ ಹೇಳಿದಳು. ಮನೆಯಾಕೆಗೆ ಇವಳಿಗೆ ಕೊಡೆ ಕೊಡಲು ಇಷ್ಟವಿಲ್ಲ. ಆದ್ದರಿಂದ ಒಂದು ಹಳೆಯ ಮುರುಕಲು ಕೊಡೆಯನ್ನು ಕೊಟ್ಟಳು.
ಮಾರನೇಯ ದಿನ ಬೆಳಿಗ್ಗೆ ಅವಳ ಮನೆಗೆ ಮಂತ್ರಿಗಳು ಸರ್ಕಾರಿ ನೌಕರರು ಕೂಡಿ ಬಂದು, ಆ ಕೊಡೆಯನ್ನು ಹಿಂತಿರುಗಿಸಿಕೊಟ್ಟು, ಕೃತಜ್ಞತೆ ಸಲ್ಲಿಸಿ ಹೋದರು. ರಾಣಿ ತನ್ನ ಕೈಯಿಂದ ಬರೆದ ಪತ್ರವನ್ನು ಸಹ ಕೊಟ್ಟರು. ಆ ಮನೆಯಾಕೆಯು ಆಶ್ಚರ್ಯಪಟ್ಟು ಅವಮಾನದಿಂದ ಕುಗ್ಗಿಹೋದಳು, ಅಯ್ಯೋ ಆಕೆ ರಾಣಿ ಎಂದು ತಿಳಿದಿದ್ದರೆ ನಾನು ಉಪಚಾರ ಮಾಡಿ ಸತ್ಕರಿಸುತ್ತಿದ್ದೇನಲ್ಲಾ ಎಂದು ವ್ಯಸನಪಟ್ಟಳು. ದೇವರ ಮಗುವೇ, ನೀನು ನಿತ್ಯರಾಜ್ಯದಲ್ಲಿನ ಕ್ರಿಸ್ತನ ನ್ಯಾಯಾಸ್ಥಾನದ ಮುಂದೆ ವ್ಯಸನಪಡದಂತೆ “ಅತಿಥಿ ಸತ್ಕಾರ ಮಾಡುವುದನ್ನು ಮರೆಯಬೇಡ”.
ನಾವು ಬರೀ ಮಾತಿನಿಂದಾಗಲೀ ಬಾಯುಪಚಾರದಿಂದಾಗಲೀ ಪ್ರೀತಿಸುವವರಾಗಿರಬಾರದು, ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು”. ಹಿಂದೊಂದು ಕಾಲವಿತ್ತು , ಯಾರಾದರೂ ಅತಿಥಿಗಳು , ಹಸಿದವರು ಬರುತ್ತಾರೆಯೋ ಎಂದು ಕಾದಿದ್ದು ಅವರಿಗೆ ಊಟ ನೀಡಿದ ನಂತರ ಊಟ ಮಾಡುವ ಪರಿಪಾಠ ಸಜ್ಜನರಲ್ಲಿತ್ತು. ಅಲ್ಲದೇ ಓದುವ ಬಡ ವಿದ್ಯಾರ್ಥಿಗಳಿಗೆ ಹೋಟೆಲ ಮಾಲೀಕರು ಅತ್ಯಂತ ಕಡಿಮೆ ದರವಿಟ್ಟು ಹೊಟ್ಟೆ ತುಂಬಾ ಊಟ ಹಾಕುತ್ತಿದ್ದರು. ಅವರು ವಿದ್ಯಾಥಿಗಳಿಗೆ ಹಾಕುತ್ತಿದ್ದ ಒಂದೇ ನಿಬಂಧನೆ ಯೆಂದರೆ , ಎಷ್ಟು ಬೇಕಾದರೂ ತಿನ್ನಿ, ಬೇಕಾಗುವಷ್ಟನ್ನೇ ಹಾಕಿಸಿಕೊಂಡು ತಿನ್ನಿ. ಎಲೆಯಲ್ಲಿ ಮಾತ್ರ ಒಂದು ಅಗುಳನ್ನೂ ಉಳಿಸಬಾರದು, ಚೆನ್ನಾಗಿ ತಿನ್ನಿ, ಚೆನ್ನಾಗಿ ಓದಿ ಎಂಬುದು ಮಾತ್ರ ವಾರಾನ್ನ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿಗಳಿಗೂ ಕಡಿಮೆಯಿರಲಿಲ್ಲ. ಇಂದು ಈ ಕಲ್ಪನೆಯೇ ಕಾಣೆಯಾಗಿದೆ. ಹಸಿದವರಿಗೆ, ಬಡವರಿಗೆ, ಅಶಕ್ತರಿಗೆ ಊಟ ಹಾಕುವ ಧರ್ಮಛತ್ರಗಳಿರುತ್ತಿದ್ದವು, ಈಗ? ಅತಿಥಿಗಳಿರಲಿ, ರಕ್ತಸಂಬಂಧಿಗಳೂ, ಬಂಧುಗಳೂ ಸಹ ಅಪರಿಚಿತರೆನಿಸಿಬಿಡುತ್ತಿದ್ದಾರೆ. ಈ ವ್ಯತ್ಯಾಸಕ್ಕೆ ಕಾರಣ ಹುಡುಕುತ್ತಾ ಹೋದರೆ ನಮಗೆ ಸ್ಪಷ್ಟವಾಗಿ ಗೊತ್ತಾಗುವದೆಂದರೆ ಪಾಶ್ಚಾತ್ಯ ಮೂಲದ “ಸಂಪಾದನೆಯೇ ಪ್ರಮುಖವಾಗಿಸಿರುª”À ಶಿಕ್ಷಣ ಪದ್ಧತಿ ಎಂಬುದು. ನೈತಿಕ ಶಿಕ್ಷಣದ ಕೊರತೆ, ಸತ್ ಸಂಸ್ಕಾರಗಳಿಗೆ ಅಡ್ಡಿ, ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕಾದ ತಂದೆ-ತಾಯಿಯರಿಗೆ ಸಂಸ್ಕಾರದ ಕೊರತೆ , ಋಣಾತ್ಮಕ ವಿಷಯಗಳಿಗೆ ಪ್ರಾಧನ್ಯತೆ ಕೊಡುವ ಮಾಧ್ಯಮಗಳು , ಬುದ್ದಿಜೀವಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿರುವುದು ಸುಳ್ಳಲ್ಲ. ನಾವು ಪ್ರತಿನಿತ್ಯ ಊಟ ಮಾಡಬಲ್ಲಷ್ಟು ಭಾಗ್ಯಶಾಲಿಗಳಾಗಿದ್ದೇವೆ , ಆದರೆ ಇದೇ ಪರಿಸ್ಥಿತಿ ಹೆಚ್ಚಿನವರಿಗೆ ಇಲ್ಲ. ಅಂತಹ ಯಾರಾದರೂ ಒಬ್ಬ ಅರ್ಹರಿಗೆ ಊಟ ಹಾಕುವ ಕೆಲಸ ನಾವು ಮಾಡಬಹುದೇನೋ. ವೈದಿಕ ಪರಂಪರೆಯಲ್ಲಿ ಪ್ರತಿನಿತ್ಯ ಮಾಡಬೇಕಾದ ಮಹಾಯಜ್ಞಗಳ ಪೈಕಿ ಅತಿಥಿ ಯಜ್ಞವೂ ಒಂದು.
ಮೊದಲೆಲ್ಲ ಸಂಬಂಧಿಕರ ಮನೆಗೆ ಹೋದಾಗ ಅಲ್ಲಿಯ ಮನೆಗಳಲ್ಲಿ ಇರುತ್ತಿದ್ದ ವಾತಾವರಣ! ಮನೆಯ ಎಲ್ಲ ಸದಸ್ಯರು ಅಂದರೆ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ನಮಗೆ ನೀಡುತ್ತಿದ್ದ ಆತಿಥ್ಯದ ನೆನಪಾಗುತ್ತದೆ. ಅಲ್ಲಿಂದ ಒಬ್ಬಟ್ಟಿನ ಔತಣವಿಲ್ಲದೆ ನಾವು ಬರುತ್ತಿರಲಿಲ್ಲ. ಅದರೊಂದಿಗೆ ತೋಟದಲ್ಲಿ ಸುತ್ತಾಟ, ಕಡಲೆಕಾಯಿ, ಜೋಳ, ಸೀಬೆಕಾಯಿ, ಪರಂಗಿ ಹಣ್ಣುಗಳನ್ನು ಮನಸೋ ಇಚ್ಛೆ ತಿಂದು ಚೀಲದ ತುಂಬಾ ತುಂಬಿಕೊಂಡು ಬರುತ್ತಿದ್ದೇವು. ಅಂದಿನ ಆ ಪ್ರೀತಿ ವಿಶ್ವಾಸ ಅತಿಥಿ ಸತ್ಕಾರ ಇಂದಿನ ದಿನಗಳಲ್ಲಿ ನೆನೆಪು ಮಾತ್ರ. ಮನೆಗೆ ಇಬ್ಬರು ಅತಿಥಿಗಳು ಬಂದರೆ ಗಡಬಡಾಯಿಸುವಂತಾಗುತ್ತದೆ. ಮನೆಯಲ್ಲಿ ಮುಜುಗುರದ ವಾತಾವರಣ ಮಗ ಏನಂದಾನೋ, ಸೊಸೆ ಹೊಂದುತ್ತಾಳೋ ಇಲ್ಲವೋ, ಮನೆಗೆಲಸದವಳು ಮುಖ ದಪ್ಪ ಮಾಡಿಯಾಳು, ಗಂಡ ಸಿಡುಕಿಯಾನು,ಕರೆಂಟು ಕೈ ಕೊಟ್ಟರೆ, ಹೀಗೆ ಹತ್ತು ಹಲವಾರು ಅಲವತ್ತುಗಳು, ಯಾವುದರಲ್ಲೂ ವಾಸ್ತವಿಕತೆ ಇಲ್ಲ, ಸಹಜತೆ ಇಲ್ಲ. ಎಲ್ಲವೂ ಕೃತಕ, ಮನಸ್ಸಿನ ತುಂಬ ಕಳವಳ ತುಂಬಿಕೊಂಡು ಮೇಲ್ನೋಟಕ್ಕೆ ಅತಿಥಿಗಳನ್ನು ಆದರಿಸುವುದು ಅನಿವಾರ್ಯವಾಗಿದೆ.
ಅತಿಥಿ ಸತ್ಕಾರದಲ್ಲಿ ಅಹಂಕಾರ ಸಲ್ಲ:- ಧರ್ಮದ ವಿಶ್ಲೇಷಣೆ ಸುಲಭದ ಮಾತಲ್ಲ! ಧರ್ಮವೆಂದರೆ ಇದೇ ನೋಡು ಎನ್ನುವಂತಿಲ್ಲ! ಹಸಿದವನೊಬ್ಬ ರೊಟ್ಟಿ ತಿನ್ನುವಾಗ ಆತನಿಗಿಂತ ಹೆಚ್ಚು ಹಸಿದ ನಾಯಿಯೊಂದು ಬಾಲ ಅಲ್ಲಾಡಿಸಿ ಬಂದರೆ ತನ್ನ ರೊಟ್ಟಿಯನ್ನು ಅದಕ್ಕೆ ಹಾಕಿ ಅದರ ಹಸಿವನ್ನು ತಣಿಸುವುದೇ ನಿಜವಾದ ಧರ್ಮ ಎನ್ನುತ್ತಾರೆ ಸ್ವಾಮಿ ವಿವೇಕನಂದರು. ಹಾಗಾಗಿ ಧರ್ಮವೆಂದರೆ ಇದೇ ರೀತಿ ಎಂದು ಹೇಳಲಾಗದು. ದಾನವೂ ಧರ್ಮದ ಒಂದು ಭಾಗವಾಗಿದೆ.
ದಾನಕ್ಕೆ ಸಂಬಂಧಿಸಿದಂತೆ ಬಲಗೈಲಿ ಕೊಟ್ಟ ದಾನ ಎಡಗೈಗೆ ತಿಳಿಯಬಾರದು ಎಂಬ ಮಾತಿದೆ. ಲೋಕಕಲ್ಯಾಣಕ್ಕಾಗಿ ರಾಜಸೂಯಯಾಗ ಕೈಗೊಂಡ ಧರ್ಮರಾಯ ಈವರೆಗೆ ಯಾರೂ ಕೊಡದಷ್ಟು ದಾನ ನೀಡಿದನಲ್ಲದೆ ತನಗಿಂತ ಮಹಾದಾನಿ ಮತ್ತೊಬ್ಬನಿಲ್ಲ ಎಂದು ಹೆಮ್ಮೆಯಿಂದ ಬೀಗಿದ್ದ! ಇದು ಭಗವಾನ್ ಶ್ರೀ ಕೃಷ್ಣನ ಗಮನಕ್ಕೂ ಬಂದಿತ್ತು ಯಾಗ ಪೂರ್ಣಗೊಂಡ ಮೇಲೆ ಪಾಂಡವರೆಲ್ಲ ಲೋಕಾಭಿರಾಮವಾಗಿ ಕೃಷ್ಣನೊಂದಿಗೆ ಹರಟೆ ಹೊಡೆಯುತ್ತಿದ್ದಾಗ, ಅರ್ಧ ಮೈ ಬಂಗಾರವಾಗಿದ್ದ ಮುಂಗುಸಿಯೊಂದು ಯಜ್ಞದ ಭಸ್ಮದಲ್ಲಿ ಹೊರಳಾಡುತ್ತಿದ್ದು ಧರ್ಮರಾಯನ ಗಮನಕ್ಕೆ ಬಂತು, ಆಶ್ಚರ್ಯಗೊಂಡ ಯುಧಿಷ್ಟಿರ ಕೃಷ್ಣನಲ್ಲಿ ಆ ಮುಂಗುಸಿಯ ಬಗ್ಗೆ ವಿಚಾರಿಸಿದಾಗ, ಮುಂಗುಸಿ ಬಳಿಯೆ ವಿಚಾರಿಸು ಎಂದ! ಕೃಷ್ಣ, ಮುಂಗುಸಿ ಮನುಷ್ಯನಂತೆ ಮಾತನಾಡುತ್ತಾ ತನ್ನ ವೃತ್ತಾಂತವನ್ನು ಹೇಳಿತು. “ ನಾನು ದಾಶಾರ್ಣ ದೇಶದಿಂದ ಬಂದಿದ್ದು, ಅಲ್ಲಿ ಹತ್ತು ವರ್ಷಗಳಿಂದ ಭೀಕರ ಬರಗಾಲವಿತ್ತು. ಆ ಪ್ರದೇಶದಲ್ಲಿ ತಂದೆ, ತಾಯಿ ಮಗನನ್ನೊಳಗೊಂಡ ಒಂದು ಸಂಸಾರವಿತ್ತು. ಅವರು ಒಂದು ತಿಂಗಳಿನಿಂದ ಸರಿಯಾಗಿ ಹೊಟ್ಟೆಗಿಲ್ಲದೆ ಜೀವನ ಸಾಗಿಸುತ್ತಿದ್ದರು. ಒಂದು ದಿನ ತಂದೆ ಹೊರಗೆಲ್ಲೋ ಬೇಡಿ ಮೂರು ಹಿಡಿ ಗೋಧಿ ಹಿಟ್ಟನ್ನು ತಂದು ರೊಟ್ಟಿ ಮಾಡಿ ತಿನ್ನುವಾಗ, ಅತಿಥಿಯೊಬ್ಬ ಪ್ರತ್ಯಕ್ಷನಾಗಿದ್ದ. ಹಸಿದ ಅತಿಥಿಗೆ ಸತ್ಕಾರ ಮಾಡುವುದು ಗೃಹಸ್ಥನ ಧರ್ಮವಾಗಿತ್ತು. ಆತ ತನ್ನಲ್ಲಿದ್ದ ರೊಟ್ಟಿಯನ್ನು ಆ ಅತಿಥಿಗೆ ನೀಡಿದ. ಅದು ಸಾಲದಾದಾಗ ಹೆಂಡತಿಯೂ ತನ್ನ ಪಾಲಿನ ರೊಟ್ಟಿಯನ್ನು ನೀಡಿದಳು. ಅದೂ ಸಾಲದಾದಾಗ ಮಗನ ಪಾಲಿನ ರೊಟ್ಟಿಯನ್ನು ನೀಡಿ ಆ ಗೃಹಸ್ಥ ಕುಟುಂಬ ಆನಂದಭಾವದಿಂದ ಅತಿಥಿಯನ್ನು ಉಪಚರಿಸಿತು. ಆ ಕುಟುಂಬ ಹಸಿದಿದ್ದರೂ ಅತಿಥಿ ಸತ್ಕಾರ ಮಾಡಿದ ತೃಪ್ತಿ ಅವರ ಮುಖ ಭಾವದಲ್ಲಿತ್ತು. ಇದನ್ನೆಲ್ಲ ಗಮನಿಸಿದ ನಾನು ಆ ಗೃಹಸ್ಥನ ತ್ಯಾಗ ಕಂಡು ಅಲ್ಲಿ ಸ್ವಲ್ಪ ಬಿದ್ದಿದ್ದ ಗೋಧಿ ಹಿಟ್ಟಿನ ಮೇಲೆ ಹೊರಳಾಡಿದ್ದೆ. ಆ ಹಿಟ್ಟಿನ ಸ್ಪರ್ಶದಿಂದ ನನ್ನ ಮೈ ಅರೆಭಾಗ ಬಂಗಾರವಾಯಿತು. ಧರ್ಮರಾಯ ಮಾಡುವ ದಾನ-ಧರ್ಮದ ಬಗ್ಗೆ ಕೇಳಿ ತಿಳಿದು ಇಲ್ಲಿಗೆ ಬಂದೆ. ನನ್ನ ಶರೀರದ ಉಳಿದ ಇನ್ನರ್ಧ ಭಾಗವನ್ನು ಬಂಗಾರವನ್ನಾಗಿಸುವ ಉದ್ದೇಶದಿಂದ ಧರ್ಮರಾಯ ಮಾಡಿದ ಯಜ್ಞದ ಭಸ್ಮದ ರಾಶಿಯಲ್ಲಿ ಹೊರಳಾಡುತ್ತಿದ್ದೇನೆ. ಅದೇಕೊ ನನ್ನ ಉಳಿzಧರ್À ಮೈ ಬಂಗಾರವಾಗುತ್ತಿಲ್ಲ. ಎಂದಿತು. ಇದನ್ನು ಕೇಳಿದ ಧರ್ಮರಾಯನಿಗೆ ನಾಚಿಕೆಯಾಯಿತು. ತಾನು ಮಹಾದಾನಿ ಎಂಬ ಅಹಂಕಾರ ನಾಶವಾಯಿತಂತೆ. ದಾನ-ಧರ್ಮ ಎಂಬುದು ನಮ್ಮ ಪರಂಪರೆಯ ಭಾಗ, ಹಾಗಾಗಿ ಅದು ನಮ್ಮ ಸಹಜ ಗುಣವಾಗಬೇಕು. ಪ್ರತಿಫಲ ಬಯಸಿ ಮಾಡುವ ದಾನ , ಅತಿಥಿ ಸತ್ಕಾರವು ಧರ್ಮದ ವ್ಯಾಪ್ತಿಗೆ ಬಾರದು. ಭಕ್ತಿ-ಭಾವದಿಂದ, ನಿಸ್ವಾರ್ಥದಿಂದ, ಮಾಡುವ ಅತಿಥಿ ಸತ್ಕಾರದಿಂದ ಮುಕ್ತಿಯನ್ನು ಪಡೆಯಬಹುದೆಂಬುದಕ್ಕೆ ಭಕ್ತ ಸಿರಿಯಾಳನ ಕತೆ ಉತ್ತಮ ಉದಾಹರಣೆಯಾಗಿದೆ.
ಮನೆಗೆ ಬರುವ ಅತಿಥಿಯನ್ನು ಸ್ವಾಗತಿಸಿ ಉಪಚರಿಸುವ ರೀತಿ:-
ಬಹು ದಿನಗಳ ಹಿಂದೆ ಓರ್ವ ಹರಿದಾಸರು ಇದ್ದರು. ಅವರಿಗೆ ತಮ್ಮದೇ ಆದ ಯಾವ ಬಂಧು ವರ್ಗಗಳಿರಲಿಲ್ಲ. ಹಾಗಾಗಿ ಒಂದೂರಿನಿಂದ ಇನ್ನೊಂದು ಊರಿಗೆ ಪಯಣಿಸುತ್ತಾ, ಊರ ಶಾಲೆಗಳಲ್ಲೋ, ದೇವಸ್ಥಾನಗಳಲ್ಲೋ ಹರಿಕಥಾ ಕಾಲಕ್ಷೇಪ ನಡೆಸಿಕೊಡುತ್ತಿದ್ದರು. ಆಯಾ ಊರಿನ ಹಿರಿಯ ಗೃಹಸ್ಥರ ಮನೆಗಳವರು ನೀಡುವ ಊಟೋಪಚಾರಗಳನ್ನು ಸ್ವೀಕರಿಸುತ್ತಿದ್ದರು. ಹತ್ತೂರುಗಳನ್ನು ಪದೇ ಪದೇ ಸುತ್ತಾಡುವ ಆ ಹರಿದಾಸರಿಗೆ, ತಮ್ಮ ಆದರಾತಿಥ್ಯ ಮಾಡುವ ಅಂತ ಪ್ರತಿ ಮನೆಯವರೊಂದಿಗೂ ಪರಿಚಯ ಬೆಳೆದುಬಿಟ್ಟಿತ್ತು. ಆದರೆ, ಒಂದು ಊರಿನ ಗೃಹಸ್ಥರ ವರ್ತನೆ ಅನ್ಯರ ಮನೆಯವರ ವರ್ತನೆಗಿಂತ ತುಂಬಾ ಭಿನ್ನವಾಗಿ ಕಂಡು ಬರುತ್ತಿತ್ತು. ಎಲ್ಲಾ ಮನೆಗಳವರೂ ಊಟೋಪಚಾರ ನೀಡಿ ಕಳುಹಿಸುತ್ತಿದ್ದರಾದರೂ, ಆ ಮನೆಯವರೆಲ್ಲರ ಪರಿಚಯ ಹೆಚ್ಚಾಗಿ ಆಗುತ್ತಿರಲಿಲ್ಲ. ಆದರೆ ಆ ಒಂದು ಗೃಹಸ್ಥರ ಮನೆಯಲ್ಲಿ ಎಲ್ಲರ ಪರಿಚಯವೂ ಆಗಿಬಿಟಿತ್ತು. ಅದಕ್ಕೆಲ್ಲಾ ಆ ಗೃಹಸ್ಥರೆ ಕಾರಣರಾಗಿದ್ದರು. ಹರಿದಾಸರು ಆ ಗೃಹಸ್ಥರ ಮನೆಯೊಳಗೆ ಕಾಲಿಟ್ಟರೆ ಸಾಕು, ಆ ಗೃಹಸ್ಥರ ಮನೆಯ ಸದಸ್ಯರನ್ನೆಲ್ಲಾ ಕರೆದು ಪರಿಚಯ ಮಾಡಿಕೊಡುತ್ತಿದ್ದರು. ಅವರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಹರಿದಾಸರ ಊಟೋಪಚಾರಗಳಲ್ಲಿ ನೆರವಾಗುವಂತೆ ಆದೇಶ ನೀಡುತ್ತಿದ್ದರು. ಓರ್ವ ಸದಸ್ಯ ನೀರು ನೀಡಿದರೆ, ಇನ್ನೋರ್ವ ಒರೆಸುವ ಬಟ್ಟೆ ನೀಡಬೇಕಾಗುತ್ತಿತ್ತು. ಹೀಗೆ ಅತಿಥಿ ಸತ್ಕಾರದಲ್ಲಿ, ಅಲ್ಲಿ ಎಲ್ಲರಿಗೂ ಒಂದೊಂದು ಕೆಲಸ ಇದ್ದೇ ಇರುತ್ತಿತ್ತು. ಹರಿದಾಸರು ಮನೆಯಿಂದ ಹೊರಡಲು ತಯಾರಾಗಿ ನಿಂತಾಗ ಆ ಗೃಹಸ್ಥರು ಮತ್ತೆ ಆ ಮನೆಯ ಸದಸ್ಯರನ್ನೆಲ್ಲಾ ಕರೆದುಕೊಂಡು, ಹರಿದಾಸರ ಜೊತೆಗೆ ಬೀದಿಯ ಕೊನೆಯ ತನಕ ನಡೆದು ಬಂದು , ನಮಸ್ಕರಿಸಿ ಬೀಳ್ಕೊಡುತ್ತಿದ್ದರು. ಹರಿದಾಸರಿಗೆ ನಮಸ್ಕಾರ ಮಾಡುವಂತೆ ಎಲ್ಲರಿಗೂ ಸೂಚಿಸುತ್ತಿದ್ದರು. ಅವರಲ್ಲಿ ಒಂದು ಮೂರು ವರುಷದ ಚಿಕ್ಕ ಮಗು ಕೂಡ ಇರುತ್ತಿತ್ತು. ಆ ಮಗು ಕೂಡ ಈ ನಿಯಮವನ್ನು ಪಾಲಿಸಬೇಕಾಗುತ್ತಿತ್ತು. ಈ ವರ್ತನೆ ಬೇರೆ ಯಾರ ಮನೆಯಲ್ಲೂ ಕಾಣ ಸಿಗದೇ ಇದ್ದುದರಿಂದ , ಹರಿದಾಸರ ಕುತೂಹಲಕ್ಕೆ ಕಾರಣವಾಗಿತ್ತು. ಒಂದು ದಿನ ಹೀಗೆ ಎಲ್ಲರಿಂದಲೂ ನನ್ನ ಉಪಚಾರ ಮಾಡಿಸುವುದು ಮತ್ತು ಕೊನೆಗೆ ಎಲ್ಲರಿಂದಲೂ ನಮಸ್ಕಾರ ಮಾಡಿಸಿ ಬೀಳ್ಕೊಡುವುದು, ಇವೆಲ್ಲದರ ಹಿಂದಿನ ಉದ್ದೇಶವೇನು, ಮರ್ಮವೇನು ಎಂದು ನಾನು ಅರಿಯಬಹುದೇ? ಎಂದು ಕೇಳಿದಾಗ ಆ ಗೃಹಸ್ಥರು ಸ್ವಾಮೀ ತಾವು ನಮ್ಮ ಅತಿಥಿಗಳು ದೇವರಿಗೆ ಸಮಾನ ಅನ್ನುವದನ್ನು ನಮ್ಮ ಹಿರಿಯರು ನಮಗೆ ಬೋಧಿಸಿದ್ದಾರೆ. ಆ ನಿಟ್ಟಿನಲ್ಲಿ ಅತಿಥಿಗಳ ಉಪಚಾರ ಮಾಡುವುದು ನಮ್ಮ ಮನೆಯ ಸದಸ್ಯರೆಲ್ಲರ ಕರ್ತವ್ಯವಲ್ಲವೇ? ಇನ್ನು ಈ ಚಿಕ್ಕ ಮಗುವನ್ನೂ ಬಿಡದೇ ಎಲ್ಲರನ್ನೂ ಈ ಬೀದಿಯುದ್ದಕ್ಕೂ ಕರೆದುಕೊಂಡು ಬರುವುದಕ್ಕೆ ಕಾರಣವೂ ಕೂಡ ಅದೇ ಆಗಿದೆ. ಮನೆಗೆ ಬಂದ ಅತಿಥಿಗಳನ್ನು , ಎಲ್ಲರೂ ಒಂದೇ ಮನಸ್ಸಿನಿಂದ, ಸ್ವಾಗತಿಸಿ, ಉಪಚರಿಸಿ, ಬೀಳ್ಕೊಡುವ ಅಗತ್ಯ ಇದೆಯೆನ್ನುವುದನ್ನು ನಾನು ನನ್ನ ಮನೆಯ ಸದಸ್ಯರೆಲ್ಲರಿಗೂ ಕಲಿಸಿಕೊಡಬೇಕಾದುದು ನನ್ನ ಕರ್ತವ್ಯ. ನನ್ನ ಹಿರಿಯರು ನನಗೆ ಕಲಿಸಿದುದನ್ನು, ನಾನು ನನ್ನ ಕಿರಿಯರಿಗೆ ಕಲಿಸಿಕೊಡಬೇಕಾಗಿದೆ. ಹಾಗಾಗಿಯೇ ಈ ಪರಿಪಾಠ ಇಟ್ಟುಕೊಂಡು ಅದನ್ನು ಪಾಲಿಸುತ್ತಿದ್ದೇನೆ, ಮುಂದೆ ಅವರ ಜೀವನದಲ್ಲಿ ಅವರು ಇದೇ ಸಂಸ್ಕøತಿ, ಸಂಸ್ಕಾರವನ್ನು ಉಳಿಸಕೊಂಡು, ಬೆಳೆಸಿಕೊಂಡು ತಮ್ಮ ಮುಂದಿನ ಪೀಳಿಗೆಗೆÀ ತಿಳಿಸಿಕೊಡುತ್ತಾ ಸಾಗಬೇಕಲ್ಲವೇ? ಅಂದರು. ಹರಿದಾಸರಿಗೆ ಅತೀವ ಆನಂದವಾಯ್ತು. “ಮಹನೀಯರೇ ತುಂಬಾ ಸಂತೋಷವಾಯ್ತು. ತಮ್ಮ ಈ ನೀತಿ ಪಾಠವನ್ನು ಇನ್ನು ಮುಂದೆ ನನ್ನ ಹರಿಕಥೆಗಳ ಮುಖಾಂತರ ಎಲ್ಲರಿಗೂ ತಲುಪಿಸುತ್ತೇನೆಂದು ಮುಂದಿನೂರಿಗೆ ಸಾಗಿದರು.
ಇಂದಿನ ದಿನಮಾನಗಳಲ್ಲಿ ಪರಿಚಿತರು ಮನೆಗೆ ಬಂದರೆ ಯಜಮಾನ ಬನ್ನಿ ಎನ್ನುತ್ತಾನೆ. ಆದರೆ ಮನೆಂiÀi ಸದಸ್ಯರು ಟಿ.ವಿ ಇಂದ ಇತ್ತ ಮುಖ ಇತ್ತ ತಿರುಗಿಸುವುದಿಲ್ಲ. ಮುಖದಲ್ಲಿ ಒಂದು ನಗೆ ಇರುವುದಿಲ್ಲ. ಮನೆಗೆ ಬಂದ ಅತಿಥಿ ಮನೆಯಲ್ಲಿರುವ ಎಲ್ಲರಿಗೂ ಮಾನ್ಯರು. ಅನಾದಿ ಕಾಲದಿಂದಲೂ ನಡೆದು ಬಂದ ಪದ್ದತಿಗಳು ಇಂದು ಕಳೆದು ಹೋಗಿವೆ ಈಗ ಸಂಸ್ಕಾರ, ಸಂಸ್ಕøತಿಯ ನೀತಿ ಪಾಠಗಳು ಈಗ ಅವೇನಿದ್ದರೂ ಮುಂದಿನವರಿಗೆ ರವಾನಿಸುವ ಸಂದೇಶಗಳು ಮಾತ್ರ ಎನಿಸಿವೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕಿರಿಯ ಅತಿಥಿ ಮನೆಗೆ ಬಂದರೆ ಆಶೀರ್ವದಿಸಿ, ಹಿರಿಯರಾಗಿದ್ದರೆ ಆತಿಥ್ಯ ಜೊತೆಗೆ ಅವರ ಕಾಲಿಗೆರಗಿ ಆಶೀರ್ವಾದ ಪಡೆಯುವ ವಾಡಿಕೆ ಇದೆ. ಅತಿಥಿಗಳನ್ನು ವಿಶೇಷ ಗೌರವದಿಂದ ನಡೆಸಿಕೊಳ್ಳುವ ಪರಂಪರೆ ಆ ಕಾಲದಿಂದಲೂ ನಡೆದು ಬರುತ್ತಿದೆ. ನಗರ ಸಂಸ್ಕøತಿಗಳಲ್ಲಿ ಇದು ಕಡಿಮೆಯಾಗಿರುವುದು ವಸ್ತುಸ್ಥಿತಿ. ಅತಿಥಿ ದೇವೋ ಭವ ಎನ್ನುವದನ್ನು ಹಿಂದಿನ ತಲೆಮಾರಿನವರು ನಮಗೆ ಬಿಟ್ಟು ಹೋಗಿರುವ ಒಂದು ಆಚರಣೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವಿಂದು ಮುಂದುವರೆಸಬೇಕಾಗಿದೆ. ಈ ಸಂಪ್ರದಾಯಗಳು ಕೇವಲ ಸಂದೇಶಗಳಾಗಿ ಉಳಿಯದೆ ಆಚರಣೆಯಲ್ಲಿ ಇರಬೇಕು.
ಅತಿಥಿಯಾಗಿ ಬಂದವರು ಹೊರಗಿರುವಾಗ ಅದು ಅಮೃತವಾದರೂ ತಾನೊಬ್ಬನೇ ಉಣ್ಣಲು ಬಯಸಬಾರದಂತೆ, ಅತಿಥಿಯನ್ನು ಯಾವಾಗಲೂ ಮುಖವರಳಿಸಿಕೊಂಡು ಉಪಚರಿಸುವಾತನ ಮನೆಯನ್ನು ಸಿರಿಮನವೊಲಿದು ಸೇರುವಳು, ಅತಿಥಿಗಳನ್ನುಪಚರಿಸಿ ಉಣಬಡಿಸಿ ಮಿಕ್ಕುದನ್ನು ತಾನುಣ್ಣುವವನ ಹೊಲಗಳಲ್ಲಿ ಬೀಜವನ್ನು ಬಿತ್ತಲೇಕೆ?(ಬಿತ್ತದೆಯೆ ತಾನಾಗಿಯೇ ಬೆಳೆಯುವುದು) ಬಂದ ಅತಿಥಿಗಳನ್ನು ಉಪಚರಿಸಿ, ಮತ್ತೆ ಬರುವ ಅತಿಥಿಗಳನ್ನು ಎದುರು ನೋಡುತ್ತಿರುವವನು, ಸ್ವರ್ಗಲೋಕದಲ್ಲಿರುವ ದೇವತೆಗಳಿಗೆ ಒಳ್ಳೆಯ ಅತಿಥಿಯಾಗುತ್ತಾನೆ. ಅತಿಥಿ ಯಜ್ಞದ ಫಲ ಇಷ್ಟು ಎಂದು ಅಳೆಯಲಾಗುವುದಿಲ್ಲ. ಸತ್ಕಾರದ ಬಗ್ಗೆ ನಮ್ಮ ಹಿರಿಯರು ಹೇಳಿದ ಮಾತುಗಳಿವು .ಅತಿಥಿಯೊಬ್ಬ ಸಂತೃಪ್ತನಾಗದೇ ಯಾರ ಮನೆಯಿಂದ ಹೋಗುವನೋ, ಆ ಮನೆಯವ ನೀಡುವ ಯಾವುದನ್ನು ಅವನ ಪಿತೃಗಳು, ಇಷ್ಟ ದೈವ ಸ್ವೀಕರಿಸುವುದಿಲ್ಲ. ಹೋಮಿಸಿದ್ದನ್ನು ಅಗ್ನಿ ಸ್ವೀಕರಿಸುವುದಿಲ್ಲ. ಅವನ ಮನೆಯಿಂದ ಅತಿಥಿಯು ಏನು ಸ್ವೀಕರಿಸಿಲ್ಲವಾದ್ದರಿಂದ ಇವರೂ ನಿರಾಶರಾಗೇ ತೆರಳುವರು. ಬ್ರಾಹ್ಮಣನನ್ನು ಅವಮಾನಿಸುವ, ಕೀಳಾಗಿ ಕಾಣುವ ಯಾವ ವರ್ಣದವನೇ ಆದರೂ ಅವನು ದೀಕ್ಷಾಹೀನನಾಗುತ್ತಾನೆ.(ಎಲ್ಲಾ ಕರ್ಮಗಳಲ್ಲೂ ಅನಧಿಕಾರಿ). ಅಲ್ಲದೇ ಖಲೀಲ್ ಗಿಬ್ರಾನ್ ಹೇಳುವಂತೆ ಯಾವ ಮನೆಯಲ್ಲಿ ಅತಿಥಿ ಸತ್ಕಾರ ಇರುವುದಿಲ್ಲವೊ ಅದು ಸ್ಮಶಾನದಂತೆ.
ಅತಿಥಿಯಾಗಿ ಬಂದವನು ನಡೆದುಕೊಳ್ಳಬೇಕಾದ ರೀತಿಗೆ ಒಂದು ಸಣ್ಣ ಉದಾಹರಣೆ:- ರಾಜಾ ಅಂಬರೀಶ ಭಾರತದಲ್ಲಿ ಧರ್ಮಶಾಸ್ತ್ರವನ್ನು ಸೃಷ್ಟಿಸಿದ ಮಹಾನ್ ಸಾರ್ವಭೌಮ.ಮನು ಚಕ್ರವರ್ತಿ , ವೈವಸ್ವತ ಮನು ಎಂದು ಅಂದಿನಿಂದ ಇಂದಿನವರೆಗೂ ವಿಖ್ಯಾತನೆನಿಸಿದ್ದಾನೆ. ಈತನ ಮೊಮ್ಮಗನೇ ಅಂಬರೀಶ ಭರತಖಂಡದ ಪುರಾಣ ಕಥೆಗಳಲ್ಲಿ ಪರಮ ಭಾಗವತೋತ್ತಮ ಎಂದು ಹೆಸರು ಪಡೆದವನು. ರಾಜ ಧರ್ಮದ ಸನ್ಮಾರ್ಗವನ್ನು ಸ್ಪಷ್ಟ ರೂಪದಲ್ಲಿ ಅರ್ಥಮಾಡಿಕೊಂಡಿದ್ದವನು. ವಿಷ್ಣು ಪರಮಾತ್ಮನ ಪರಮಭಕ್ತ. ರಾಜರ್ಷಿ ಎನಿಸಿಕೊಳ್ಳಲು ಇವನಲ್ಲಿ ಸಂಪೂರ್ಣ ಅರ್ಹತೆ ಇತ್ತು. ಶ್ರೀಹರಿಯ ಧ್ಯಾನದಲ್ಲಿ ಅನವರತವೂ ಇದ್ದರೂ, ಪ್ರಜಾಪಾಲನೆಯಲ್ಲಿ ಕಿಂಚಿತ್ತೂ ಚ್ಯುತಿ ಬಾರದ ರೀತಿಯಲ್ಲಿ ರಾಜ್ಯಭರ ನಡೆಸುತ್ತಿದ್ದವನು. ಆದ್ದರಿಂದಲೇ ಈತನ ಆಡಳಿತದ ಕಾಲ ಸುಭೀಕ್ಷಕಾಲ ಎನಿಸಿತ್ತು. ಮುನಿಜನರೆಲ್ಲರ ಗೌರವಾದರ ಹಾಗೂ ಮನ್ನಣೆಯನ್ನು ಗಳಿಸಿದ್ದವನು. ತನ್ನ ಭಕ್ತನಾದ ಈತನ ನೆರವಿಗಾಗಿ ಭಕ್ತರ ಭಕ್ತ ಎನಿಸಿದ . ವೈಕುಂಠ ಪತಿ ಎನಿಸಿದ ವಿಷ್ಣು ಪರಮಾತ್ಮನು ಅಂಬರೀಶ ರಾಜನಿಗೆ ತನ್ನ ಸುದರ್ಶನ ಚಕ್ರವನ್ನೇ ಅತ್ಮರಕ್ಷಣೆಯ ರೂಪದಲ್ಲಿ ನೀಡಿದ್ದ. ಅಂಬರೀಶ ದೈವಭಕ್ತನೂ ಹೌದು, ಮಹಾಶೂರಾಗ್ರಣಿಯೂ ಹೌದು, ತನ್ನ ಆಡಳಿತದ ಅವಧಿಯಲ್ಲಿ ಸಾಕಷ್ಟು ಯಾಗಗಳನ್ನು ನಿರ್ವಿಘ್ನವಾಗಿ ಮಾಡಿ ಮುಗಿಸಿದ್ದ ಈತನಿಗೆ ಏಕಾದಶಿ ವ್ರತದ ಆಚರಣೆಯ ಬಗ್ಗೆ ಅತಿ ಆಸಕ್ತಿ ಹಗೂ ನಿಷ್ಠೆ ನಿಯಮಗಳಿಂದಲೇ ಈ ವ್ರತವನ್ನು ನಿರ್ವಿಘ್ನವಾಗಿ ಮಾಡಿ ಮುಗಿಸುತ್ತಿದ್ದ . ಈ ವ್ರತದ ಮಹಿಮೆಯಿಂದ ತಾನೇ ಅಲ್ಲದೆ, ತನ್ನ ಪ್ರಜೆಗಳೂ ಸಹ ಮುಕ್ತಿ ಪದವಿಯ್ನನು ಪಡೆಯುವರೆಂಬ ಧಾರ್ಮಿಕ ನಂಬಿಕೆ , ಈ ರಾಜನದು. ಒಂದು ಭಾರಿ ಅಂಬರೀಶ ಮಹಾರಾಜನು ಏಕಾದಶಿ ವ್ರತವನ್ನು ಸಾಂಗೋಪಾಂಗವಾಗಿ ಪೂರೈಸಿ ಮರುದಿನ ಅಂದರೆ ದ್ವಾದಶಿಯ ಪ್ರಾತಃಕಾಲ ಪಾರಣೆ(ಊಟ)ಗಾಗಿ ಸಿದ್ಧಗೊಳಿಸುತ್ತಿದ್ದ ಸಮಯದಲ್ಲಿ, “ಕೋಪ”ದ ಪುನರಾವತಾರ ಎನಿಸಿದ ದೂರ್ವಾಸ ಮಹರ್ಷಿಗಳು ಅಲ್ಲಿಗೆ ಆಗಮಿಸಿದರು. ಅವರನ್ನು ಮಹಾರಾಜ ಗೌರವಾದರದಿಂದ ಬರಮಾಡಿಕೊಂಡು ಭಕ್ತಿ ಹಾಗೂ ನಿಷ್ಠೆಯಿಂದ ಪಾದಗಳನ್ನು ತೊಳೆದ. ಅತಿಥಿ ಸತ್ಕಾರವನ್ನು ಸವೀಕರಿಸಲು ವಿನಯದೊಂದಿಗೆ ಪ್ರಾರ್ಥಿಸಿದ. ದೂರ್ವಾಸ ಮುನಿಗಳು ತಮ್ಮ ಸ್ನಾನಾದಿಗಳನ್ನು ಬೇಗ ಮುಗಿಸಿ ಮರಳಿ ಬರಲು ಆಶ್ವಾಸನೆ ನೀಡುತ್ತಾ. ಯಮುನಾ ನದಿಗೆ ತೆರಳಿದರು. ಹಿಂದಿನ ದಿನ ಉಪವಾಸವಿದ್ದು ತೀರಾ ನಿಶ್ಯಕ್ತನಾಗಿದ್ದ ರಾಜನಿಗೆ, ಪಾರಣೆಯ ಹೊತ್ತು ಮೀರುತಿದ್ದು, ಸಕಾಲಕ್ಕೆ ತನ್ನ ಭಕ್ತ ಭಾಂಧವರೊಂದಿಗೆ ಪಾರಣೆ ಮಾಡಿ ಮುಗಿಸದಿದ್ದರೆ, ವ್ರತಭಂಗ ಆಗುವ ಭಯವೂ ಉಂಟಾಗತೊಡಗಿತು. ಆದರೆ ದೂರ್ವಾಸರನ್ನು ಬಿಟ್ಟು, ಪಾರಣೆ ಮಾಡುವಂತೆಯೂ ಇಲ್ಲ. ಉಭಯ ಸಂಕಟದಲ್ಲಿ ತೊಳಲಾಡುತ್ತಾ, ಪರಿಹಾರಕ್ಕಾಗಿ ವ್ರತದ ಸಮಯದಲ್ಲಿ ನೆರೆದಿದ್ದ ಬ್ರಾಹ್ಮಣೋತ್ತಮರ ಸಲಹೆ ಕೇಳಿದ . ಅವರೆಲ್ಲರೂ ಪಾರಣೆಯ ಸಮಯದಲ್ಲಿ ಇಂತಹ ಸಂದರ್ಭ ಸಂಭವಿಸಿದಾಗ ಕೇವಲ ನೀರು ಕುಡಿದು, ಅನಂತರ ಸಾವಕಾಶವಾಗಿ ಪಾರಣೆಯ ಕಾರ್ಯವನ್ನು ಮುಗಿಸಬಹುದೆಂದು ಸಲಹೆ ನೀಡಿದರು. ವಿಪ್ರೋತ್ತಮರ ಮಾತನ್ನು ವೇದಕ್ಕೆ ಸಮಾನವೆಂದು ಪರಿಗಣಿಸಿದ್ದ ಅಂಬರೀಶ ಮಹಾರಾಜ ಅದರಂತೆ ಜಲಪಾನ ಮಾಡಿ, ದೂರ್ವಾಸರು ಸ್ನಾನಾದಿಗಳನ್ನು ಮುಗಿಸಿ, ಮರಳಿ ಹಿಂದಿರುಗುವದಕ್ಕಾಯೇ ಎದುರು ಕಾಯುತ್ತಾ ಕುಳಿತ. ಹಿಂದಿರುಗಿದ ದೂರ್ವಾಸರಿಗೆ ಮಹಾರಾಜನ ಜಲಪಾನದ ಸುದ್ಧಿ ತಿಳಿಯಿತು. ಮಹಾರಾಜನ ಬಗ್ಗೆ ಕೆಂಡಾಮಂಡಲರಾದರು. ಕಣ್ಣುಗಳಲ್ಲಿ ಕಿಡಿಕರುತ್ತಾ, ಅಬ್ಬರಿಸಿದರು. “ ಮಹಾರಾಜ, ಅತಿಥಿಯು ಹಸಿದಿರುವಾಗ ಈ ರೀತಿ ಪಾರಣೆ ಮಾಡುವುದು ಯಾವ ರಾಜ ಧರ್ಮ? ನಿನ್ನಂತಹ ವಿಷ್ಣುಭಕ್ತನಿಗೆ ಈ ರೀತಿಯ ಕೃತ್ಯ ಸಮಂಜಸವೇ? ಇಂತಹ ದುರಹಂಕಾರಕ್ಕೆ ತಕ್ಕ ಶಿಕ್ಷೆಯನ್ನು ನಾನು ವಿಧಿಸಲೇಬೇಕು” ಎನ್ನುತ್ತಾ ಕ್ರೋಧದ ಪರಮಾವತಾರವನ್ನು ತಾಳಿ, ಸಮ್ಮುಖದಲ್ಲಿ ನಿಂತಿದ್ದ ಅಂಬರೀಶನನ್ನು ಕಾಲಿನಿಂದ ಒದೆದು ನೂಕಿದರು. ತಮ್ಮ ಜಟೆಯನ್ನು ಕಿತ್ತೆಸೆದರು. ಆ ಕೂಡಲೇ ಕೃತ್ಯೆ ಎಂಬ ಹೆಸರಿನ ವಿಕರಾಳ ರೂಪಿಣಿ ಕಾಣಿಸಿಕೊಂಡು ಮಹರ್ಷಿ ಆಜ್ಞೆಯಂತೆ ರಾಜನ್ನು ಕೊಂದು ಮುಗಿಸಲು ಮುಂದಾದಳು. ದಿಕ್ಕರಿಯಂತಾದ ಅಂಬರೀಶ ಮನದಲ್ಲಿಯೇ ತನ್ನ ಆರಾಧ್ಯದೇವನಾದ ವಿಷ್ಣು ಪರಮಾತ್ಮನನ್ನು ಶ್ರಧ್ಧೆ ಭಕ್ತಿಯಿಂದ ಪ್ರಾರ್ಥಿಸತೊಡಗಿದನು. ಭಕ್ತಪರಾಧೀನ ಎನಿಸಿದ ಶ್ರೀಹರಿಯು ತನ್ನ ಭಕ್ತನ ಮೊರೆಯನ್ನು ಆಲಿಸಿ ಅವನ ರಕ್ಷಣೆಗಾಗಾ ತನ್ನ ಚಕ್ರಕ್ಕೆ ಆಜ್ಞೆ ನೀಡಿದ ಕೂಡಲೇ ಅದು ಗಿರ್ರನೆ ತಿರುಗುತ್ತಾ ಕೃತ್ಯೆಯ ಕಡೆ ಧಾವಿಸಿತು. ಅವಳ ಕುತ್ತಿಗೆಯನ್ನು ನೆರೆದಿದ್ದವರೆಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದಂತೆ ಕತ್ತರಿಸಿಹಾಕಿತು. ಭೀಕರ ಚಿತ್ಕಾರದೊಂದಿಗೆ ಅವಳ ದೇಃ ಕೆಳಗುರುಳಿತು.
ಅಷ್ಟಕ್ಕೆ ಚಕ್ರ ಸುಮ್ಮನಾಗಲಿಲ್ಲ. ಎಂದಿನಂತೆ ಗಿರ್ರನೆ ತಿರುಗುತ್ತಾ ದೂರ್ವಾಸ ಮುನಿಯ ಕಡೆ ಧಾವಿಸಿತು. ಬೆಚ್ಚಿ-ಬೆದರಿದ ಮುನಿ ಭಯ ಹಾಗೂ ಗಾಬರಿಯೊಂದಿಗೆ ಓಡೋಡುತ್ತಾ, ಬ್ರಹ್ಮನ ಬಳಿಗೆ ಬಂದರು. ಬ್ರಹ್ಮನ ಅಭಯ ದೊರೆಯದೆ, ಪರಮೇಶ್ವರನ ಬಳಿಗೆ ಧಾವಿಸಿದರು. ಅಲಲೂ ರಕ್ಷಣೆ ದೊರೆಯದೆ, ವೈಕುಂಠದಲ್ಲಿದ್ದ ವಿಷ್ಣು ಪರಮಾತ್ಮನ ಬಳಿಗೆ ಏದುಸಿರು ಬಿಡುತ್ತಾ ಬಂದರು. ಪರಮಾತ್ಮನ ಪಾದಾರವಿಂದಗಳ ಮೇಲೆ ಅಡ್ಡಬಿದ್ದು, ’ತ್ರಾಹು,ತ್ರಾಹಿ’ ಅನ್ನುತ್ತಾ ಆಲಾಪಿಸತೊಡಗಿದರು. ಶ್ರೀ ಹರಿಯಾದ ವಿಷ್ಣು ಮುನಿಯನ್ನು ಸಮಾಧಾನಪಡಿಸುತ್ತಾ ಏನೂ ತಿಳಿಯದವನಂತೆ ನಟಿಸುತ್ತಾ ಹೇಳಿದ. ಭಕ್ತಪರಾಧೀನ ನಾನು. ನನ್ನ ಭಕ್ತನಿಗೆ ತೊಂದರೆ ಸಂಭವಿಸಿದಾಗ ರಕ್ಷಣೆಯ ಭಾರ ಮಾತ್ರ ನನ್ನದು. ಈಗ ನೀನು ಎಸಗಿರುವ ಮಹಾಪರಾಧಕ್ಕಾಗಿ, ಅಂಬರೀಶನ ಬಳಿಗೇ ತೆರಳು. ಆತನಲ್ಲಿ ಕ್ಷಮೆ ಯಾಚಿಸು. ಅನ್ನುತ್ತಿದ್ದಂತೆ ದೂರದಲ್ಲಿ ಚಕ್ರ ಗಿರ್ರನೆ ತಿರುಗುತ್ತಾ ಬರುತ್ತಿರುವುದು ಗೋಚರಿಸಿತು. ಸತ್ತೇನೊ-ಕೆಟ್ಟೆನೋ! ಎಂದು ಕೂಗಿಡುತ್ತಾ ಹಾವಿನ ಹೆಜ್ಜೆಯೊಂದಿಗೆ ದೂರ್ವಾಸ ಮುನಿ ಅಂಬರೀಶ ಮಹಾರಾಜನ ಬಳಿಗೆ ಧಾವಿಸಿ ಬಂದ. ಅವನ ಪಾದಗಳ ಮೇಲೆ ಬಿದ್ದು ಉರುಳಾಡುತ್ತಾ ಎದ್ದು ನಿಂತ. ರಕ್ಷಣೆಗಾಗಿ ಗೋಗರೆದ. ಶರನಾಗತರನ್ನು ರಕ್ಷಿಸುವುದು ರಾಜನ ಧರ್ಮ ತಾನೇ? ಕೂಡಲೇ ದೂರ್ವಾಸಮುನಿಯನ್ನು ತಮ್ಮ ಬೆನ್ನ ಹಿಂದೆ ನಿಲ್ಲಿಸಕೊಂಡು ಸ್ವತಃ ರಭಸದಿಂದ ತಿರುಗುವ ಶಬ್ದದೊಂದಿಗೆ ಬರುತ್ತಿದ್ದ ಚಕ್ರದ ಎದುರು ಕೈ ಜೋಡಿಸಿಕೊಂಡು ಶಿರ ಒಡ್ಡಿದ. ವಿಷ್ಣು ಚಕ್ರ ಈಗ ಸ್ತಬ್ಧ ರೀತಿಯಿಂದ ಹಾಗೆಯೇ ನಿಂತಿತು. ಅರೆಕ್ಷಣ ನಂತರ ವಿಷ್ಣುಪರಮಾತ್ಮನ ಬಳಿಗೇ ಹಿಂದಿರುಗಿತು. ಈಗ ದೂರ್ವಾಸರಿಗೆ ವಿಷ್ಣು ಭಕ್ತನ ಮಹಿಮೆಯ ಅರಿವಾಯಿತು. ನೆಮ್ಮದಿಯ ಉಸಿರು ಬಿಡುತ್ತಾ, ಪ್ರಾಣಭಯದಿಂದ ಪಾರಾದವನಂತೆ ಅಂಬರೀಶ ಮಹಾರಾಜನ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾ, ಮುಖದ ಮೇಲೆ ಸುರಿಯುತ್ತಿದ್ದ ಬೆವರು ಹನಿಗಳನ್ನು ಒರೆಸಿಕೊಂಡರು. ತಮ್ಮ ಅವಿವೇಕದ ನಡುವಳಿಕೆಗಾಗಿ ನಾಚುತ್ತಾ ಅಂಬರೀಶ ರಾಜನ ಆತಿಥ್ಯವನ್ನು ಪ್ರೀತ್ಯಾದರದೊಂದಿಗೆ ಸ್ವೀಕರಿಸಿ, ರಾಜನನ್ನು ಮನಸಾರೆ ಹಾರೈಸುತ್ತಾ ತಮ್ಮ ದಾರಿ ಹಿಡಿದರು.
ಪಾಪ ಪರಿಹಾರದ ಮಾರ್ಗ :- ಅತಿಥಿ ಸತ್ಕಾರ ಮಾಡುವುದರಿಂದ ನಮ್ಮ ಪಾಪಗಳು ಪರಿಹಾರವಾಗುತ್ತವೆ ನಿಜ. ಆದರೆ ಪರರನ್ನು ಪೀಡಿಸಿ ಗಳಿಸಿದ ಹಣದಿಂದ ಮಾಡಿದ ಅತಿಥಿ ಸತ್ಕಾರವೂ ಯಾವ ಪ್ರಯೋಜನಕ್ಕೂ ಬರುವುದಿಲ್ಲ, ಅಲ್ಲದೇ ನಮ್ಮ ಪಾಪ ಇನ್ನೂ ಹೆಚ್ಚಾಗುತ್ತದೆ. ಅದಕ್ಕೊಂದು ಸಣ್ಣ ಉದಾಹರಣೆ ಇಲ್ಲಿದೆ.
ಒಬ್ಬ ಸಂತರು ಪಾದಯಾತ್ರೆ ಮಾಡುತ್ತಾ ಇದ್ದರು. ಆ ಊರಿಗೆ ಬರುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗಿತತು. ಒಂದು ಗುಡಿಸಲಿನ ಮುಂದೆ ನಿಂತು ಏನಾದರೂ ತಿನ್ನಲು ಕೊಡುತ್ತೀರಾ ಎಂದು ಕೇಳಿಕೊಂಡರು. ಗುಡಿಸಲಿನಾತ ನಾವು ಬಡವರು ನಮ್ಮ ಬಳಿ ಒಣಗಿದ ಬ್ರೆಡ್ಡ ಬಿಟ್ಟರೆ ಮತ್ತೇನು ಇಲ್ಲ. ಆದರೆ ಅದನ್ನೂ ನಾವು ನಿಮಗೆ ಕೊಡುವಂತಿಲ್ಲ ಎನ್ನುತ್ತ ಮುಜುಗರ ಪಟ್ಟುಕೊಂಡರು. ಸಂತರ ನಿಮ್ಮಲ್ಲಿ ಒಣಗಿದ ಬ್ರೆಡ್ಡಿನ ತುಂಡುಗಳಿದ್ದರೆ ಅದನ್ನೇಕೆ ಕೊಡುವಂತಿಲ್ಲ ಎಂದರು.
ಗುಡಿಸಿಲಿನಾತ ಸ್ವಾಮಿ , ನಮ್ಮೂರಿಗೆ ಬರುವ ಯಾತ್ರಿಗಳೆಲ್ಲ ನಮ್ಮೂರಿನ ಪಾಳೇಗಾರರ ಧರ್ಮಶಾಲೆಗೆ ಊಟಕ್ಕೆ ಹೋಗಬೇಕೆಂಬ ನಿಯಮವಿದೆ, ಅವರು ಬೇರೆಯಲ್ಲಿಯೂ ಊಟ ಮಾಡುವಂತಿಲ್ಲ. ಅವರಿಗೆ ಊಟ ಕೊಟ್ಟರೆ ಊರಿನವರಿಗೆ ಶಿಕ್ಷೆ ಕಾದಿಟ್ಟ ಬುತ್ತಿ ಎಂದರು. ದೇಶದಲ್ಲೆಲ್ಲೂ ಇರದ ಇಂತಹ ನಿಯಮವನ್ನು ನಿಮ್ಮೂರಿನ ಪಾಳೆಗಾರರು ಏಕೆ ಮಾಡಿದ್ದಾರೆ? ಎಂದು ಕೇಳಿದರು. ಗುÀಡಿಸಲಿನಾತ ಅತ್ತಿತ್ತ ನೋಡಿ ಪಿಸುಮಾತಿನಲ್ಲಿ ಸ್ವಾಮಿ ನಮ್ಮೂರಿನ ಪಾಳೇಗಾರ ಬಹಳ ಕ್ರೂರಿ. ಜನರ ಮೇಲೆ ಇಲ್ಲಸಲ್ಲದ ಕರಗಳನ್ನೆಲ್ಲ ಹೇರಿದ್ದಾರೆ. ನಿಷ್ಕರುಣೆಯಿಂದ ವಸೂಲಿ ಮಾಡುತ್ತಾರೆ.ಬಡವರನ್ನಂತೂ ಬಹಳ ಪೀಡಿಸುತ್ತಾರೆ. ಅವರೆಲ್ಲರ ಶಾಪ ಆತನ ಮೇಲಿದೆ. ಆದರೆ ಆತನಿಗೆ ಯಾರೋ ಅತಿಥಿ ಸತ್ಕಾರದಿಂದ ಪಾಪಗಳು ಪರಿಹಾರವಾಗುತ್ತದೆಂದು ಹೇಳಿದ್ದಾರಂತೆ ಆದ್ದರಿಂದ ಅತಿಥಿಗಳನ್ನು ಒತ್ತಾಯದಿಂದ ತನ್ನ ಧರ್ಮಶಾಲೆಗೆ ಆತಿಥ್ಯ ಸ್ವೀಕರಿಸಲು ಕರೆದೊಯ್ಯುತ್ತಾನೆ. ನೀವು ಅಲ್ಲಿಗೆ ಹೋಗುವುದೇ ಒಳ್ಳೆಯದು ಎಂದರು.
ಸಂತರು ಕೋಚ ಯೋಚಿಸಿದರು. ಧರ್ಮಶಾಲೆಯ ಕಡೆ ನಡೆದರು. ಪಾಳೆಗಾರರು ಅಲ್ಲಿಯೇ ನಿಂತಿದ್ದರು. ಸಂತರನ್ನು ದರ್ಪದಿಂದ ಭಕ್ಷ್ಯ ಭೋಜ್ಯಗಳು ಸಿದ್ಧವಾಗಿದೆ. ನಿಮಗೆಷ್ಟು ಬೇಕೋ ಅಷ್ಟು ತಿನ್ನಿ. ಹೋಗುವಾಗ ನನಗೆ ಆಶೀರ್ವಾದ ಮಾಡಲು ಮರೆಯಬೇಡಿ. ಮರೆತರೆ ಕಾಲು ಮುರಿಯುತ್ತೇನೆ ಎಂದರು. ಸಂತರು, ಭಕ್ಷ್ಯ-ಭೋಜ್ಯಗಳನ್ನೇಲ್ಲ ನೋಡಿದ ನಂತರ ಪಾಳೇಗಾರರಿಗೆ ನನಗೆ ಭಕ್ಷ್ಯ-ಭೋಜ್ಯಗಳು ಬೇಡ . ಒಂದು ತುಂಡು ಬ್ರೆಡ್ಡು ಸಾಕು ಎಂದರು. ಪಾಳೇಗಾರರು ಸಂತರನ್ನು ಉದಾಸೀನದಿಂದ ನೋಡಿ, ಒಂದು ತುಂಡು ಬ್ರೆಡ್ಡನ್ನು ಅವರತ್ತ ಎಸೆದರು. ಸಂತರು ಅದನ್ನು ಕೈಯಲ್ಲಿ ಹಿಡಿದು ನನಗೇಕೊ ಇದನ್ನು ತಿನ್ನಲು ಮನಸ್ಸಾಗುತ್ತಿಲ್ಲ. ಇದರಲ್ಲಿ ತಿನ್ನಬಾರದಂತಹದೇನೋ ಇದೆ ಅನ್ನಿಸುತ್ತಿದೆ. ನೀವು ನನಗೊಂದು ಉಪಕಾರ ಮಾಡಿ. ನಿಮ್ಮೂರಿನ ಹೊರಗಡೆ ಬಡವರ ಗುಡಿಸಲಿದೆ. ಅಲ್ಲಿಂದ ಒಂದು ತುಂಡು ಬ್ರೆಡ್ಡನ್ನು ತರಿಸಿ ಎಂದರು. ಪಾಳೇಗಾರರು ಅಲ್ಲಿಂದ ಬ್ರೆಡ್ ತರಿಸಿ ಅದನ್ನು ಸಂತರಿಗೆ ಕೊಟ್ಟರು. ಸಂತರು ಪಾಳೇಗಾರರ ಬ್ರೆಡ್ಡನ್ನು ಹಿಂಡಿದಾಗ ಅದರಿಂದ ರಕ್ತ ಹೊರಬಂತು ಆದರೆ ಗುಡಿಸಿಲಿನವರ ಬ್ರೆಡ್ಡನ್ನು ಹಿಂಡಿದಾಗ ಅದರಿಂದ ಹಾಲು ಹೊರಬಂದಿತು. ಅದನ್ನು ಪಾಳೇಗಾರರಿಗೆ ತೋರಿಸಿದ ಸಂತರು ನೀವು ನೀಡುವ ಭೋಜನ ಬಡವರನ್ನು ಕಾಡಿಸಿ ಪೀಡಿಸಿ ಸಂಪಾದಿಸಿದ ಹಣದ್ದು. ಅದರಲ್ಲಿ ಬಡವರ ಗೋಳು ತುಂಬಿದೆ. ಅದನ್ನು ಹಿಂಡಿದರೆ ರಕ್ತ ಬರುತ್ತದೆ. ಆದರೆ ದುಡಿದು ಗಳಿಸುವ ಗುಡಿಸಲಿನವರ ಬ್ರೆಡ್ಡನ್ನು ಹಿಂಡಿದರೆ ಹಾಲು ಬರುತ್ತದೆ ಎಂದರು. ಈ ಮಾತುಗಳಿಂದ ಪಾಳೇಗಾರರು ಚಿಂತಾಕ್ರಾಂತರಾದರು. ಆನಂತರ ಸಂತರ ಕಾಲಿಗೆರಗಿ ತನ್ನ ಪದ್ದತಿಗಳನ್ನು ಬದಲಾಯಿಸಿಕೊಳ್ಳುವುದಾಗಿ ಭರವಸೆಯಿತ್ತರು.
ಕತೆಯಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ, ಸರಳ ತತ್ವವೊಂದಿದೆ. ಪರರನ್ನು ಪೀಡಿಸಿ ಗಳಿಸಿದ ಹಣದಲ್ಲಿ ಅತಿಥಿ ಸತ್ಕಾರ ಮಾಡಿದರೆ , ನಮ್ಮ ಪಾಪ ಪರಿಹಾರವಾಗುವುದಿಲ್ಲ. ಒಳ್ಳೆಯ ಹೆಸರೂ ಬರುವುದಿಲ್ಲ. ಬಹುಶಃ ಪಾಪ ಇನ್ನೂ ಹೆಚ್ಚಾಗುತ್ತದೆಂಬ ತತ್ವವಿದೆಯಲ್ಲವೇ?
ಅಯೋಧ್ಯಾಧಿಪತಿಯ ಅಶ್ವಮೇಧ ಯಾಗಕ್ಕೆ ಯುಗದ ಯೋಗಿಗಳ, ಜಗದ ಜನರೆಲ್ಲರ, ದಿವಿಯ ದೇವರುಗಳ ಸಾಕ್ಷಿತ್ವದಲ್ಲಿ ತಯಾರಿ ನಡೆದಿದ್ದು ಜೀವರು, ದೇವರು ಧರೆಯ ಸಕಲ ಜ್ಞಾನ ಜೀವ, ಕರ್ಮಜೀವ, ಭಾವಜೀವಗಳಿಗಷ್ಟೇ ಅಲ್ಲದೇ ಧರೆಯನಾಳುವ ದೊರೆಗಳಾದ ನರಶ್ರೇಷ್ಠ, ರಾಜಶ್ರೇಷ್ಠ, ಋಷಿಶ್ರೇಷ್ಠರಿಗೆ ಹಾಗೂ ಮಿಥಿಲಾಧಿಪತಿ, ಕೇಕಯಾಧಿಪತಿ, ಕಾಶೀ ನರೇಶ ಮತ್ತು ಅಂಗೇಶ್ವರರಿಗೆ ಆದರದ ಆಮಂತ್ರಣ ಸಲ್ಲಬೇಕಿರುವ ವಿಷಯ ಪ್ರಸ್ತಾಪಿಸಿದಾಗ, ಯಾಗಕ್ಕೆ ಯಾರ್ಯಾರನ್ನೂ ಕರೆಯಬೇಕೆಂಬುದನ್ನು ಸೂಚಿಸಿದ ವಸಿಷ್ಠರು ಸುಮಂತ್ರನ ಕಿವಿಯಲ್ಲಿ ಕಿವಿ ಮಾತೊಂದನ್ನು ಹೇಳಿದರು. “ನಾವು ಕರೆಯುವುದು ದೊಡ್ಡದಲ್ಲ;ಕರೆದವರು ಬರುವುದೂ ದೊಡ್ಡದಲ್ಲ; ಬಂದವರು ನಮ್ಮ ಸತ್ಕಾರದಿಂದ ಸಂತೃಪ್ತಿಗೊಂಡು ಸಂತಸದ ರಸದಲ್ಲಿ ನೆನೆ ಜೀವವುಳ್ಳವರಾಗಿ ಮರಳುವುದು ದೊಡ್ಡದು!” ಯಾವುದೇ ವರ್ಣದ, ಯಾವುದೇ ಮನುಷ್ಯನಿಗೂ ಅರಸ ನಡೆಸುವ ಅಶ್ವಮೇಧದಲ್ಲಿ ಅಗೌರವ, ಅಸಂತೋಷಗಳಾಗಕೂಡದು. ‘ಬಂದವನು ಭಗವಂತ’ ಎಂಬ ಭಾವದಲಿ ಸತ್ಕರಿಸಬೇಕೆಂದು ಸೇವೆಗೈಯುವವರಿಗೆ ತಿಳಿಸಿ ಹೇಳು ಸುಮಂತ್ರ ಎಂದರು. “ಸೇವೆ ದೊಡ್ಡದು, ಸೇವೆಗಿಂತಲೂ ದೊಡ್ಡದು ಸೇವೆಗೈಯುವವರ ಮನೋಭಾವ”!.
ವಿದೇಶಿ ಅತಿಥಿಗಳ ದುರ್ಬಳಕೆ:- ಮನೆಗೆ ಬರುವ ಅತಿಥಿಗಳನ್ನು ಕಡೆಗಣಿಸುವುದು ಒಂದೆಡೆಯಾದರೆ, ನಮ್ಮ ದೇಶಕ್ಕೆ ಬರುವ ಅತಿಥಿಗಳನ್ನು ದುರ್ಬಳಕೆ ಮಾಡಿಕೊಳ್ಳುವವರೂ ಸಾಕಷ್ಟಿದ್ದಾರೆ. ಪ್ರವಾಸಿ ತಾಣಗಳಲ್ಲಿ ಇದನ್ನು ರಾಜಾರೋಷವಾಗಿ ಮಾಡುತ್ತಾರೆ. ಅತಿಥಿ ಸತ್ಕಾರ ಬಿಡಿ, ಕೆಲವರಿಗೆ ತಿಥಿ ಮಾಡಿ ಕಳಿಸಿದ್ದಾರೆ.! ಅನೇಕ ವಿದೇಶಿ ಮಹಿಳೆಯರನ್ನು ಬಲಾತ್ಕಾರ ಮಾಡಿ ಕೊಲೆ ಮಾಡಿದ್ದಾರೆ. ಸಹಾಯ ಮಾಡುವ ನೆಪ ಹೇಳಿ ವಿದೇಶಿಗರ ಹಣ ಕದ್ದಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅತಿಥಿಗಳ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಈ ಕೆಟ್ಟ ಬುದ್ಧಿ ನಮಗೆಲ್ಲಿಂದ ಬಂತು? ಯಾರಿಂದ ಬಂತು? ನಮ್ಮ ಹಿರಿಯರಿಂದ ಬಂತಾ? ಅಥವಾ ನಾವು ತೀರಾ ಎಲ್ಲದರಲ್ಲೂ ಲೆಕ್ಕಾಚಾರಕ್ಕೆ ಇಳಿದು ಸ್ವಾರ್ಥಬುದ್ಧಿಯಿಂದ ಈಗ ಕಲಿತುಕೊಂಡಿದ್ದೇವಾ?
ನಮ್ಮನ್ನು ಬೇರೆಯವರು ಕೀಳಾಗಿ ಕಂಡಾಗಲೇ ನಮಗೆ ನೋವಿನ ಅರಿವಾಗುವುದು. ನಾವು ಬೇರೆಯವರ ಮನೆಗೆ ಹೋದಾಗ ಅವರು ನಮ್ಮನ್ನು ಸರಿಯಾಗಿ ಟ್ರೀಟ್ ಮಾಡಲಿಲ್ಲ ಅಂತಾದರೆ ನಮಗೆ ಬೇಸರವಾಗುವುದಿಲ್ಲವೇ? ಅದನ್ನು ಮನಸ್ಸಿನಲ್ಲಿಟ್ಟುಕೊಂಡಾದರೂ ಅತಿಥಿಗಳಿಗೆ ಸತ್ಕಾರ ಮಾಡಬೇಕು. ಯಾರೂ ತಮಗೆ ಊಟಕ್ಕೆ ಗತಿಯಿಲ್ಲವೆಂದು ನಮ್ಮ ಮನೆಗೆ ಬರುವುದಿಲ್ಲ. ಇವರು ನಮ್ಮವರು ಎಂಬ ಭಾವನೆಯಿಂದ ಬಂದಿರುತ್ತಾರೆ. ನಿಜವಾದ ಅತಿಥಿಗಳು ಹದಿನೈದಿಪ್ಪತ್ತು ದಿನ ಉಳಿದುಕೊಳ್ಳೂವುದೂ ಇಲ್ಲ. ಒಂದೋ ಎರಡೋ ದಿನ ಇದ್ದು ಹೋಗುತ್ತಾರೆ. ಅವರನ್ನು ಕಡೆಗಣಿಸಿ ನಮ್ಮ ಪರಂಪರೆಯನ್ನು ದಿಕ್ಕರಿಸಬೇಕೆ? ಅತಿಥಿ ದೇವೋಭವ ಎಂಬ ಉಕ್ತಿಯನ್ನು ಬಲವಾಗಿ ನಂಬುವ ನಾವು ಅತಿಥಿಗಳನ್ನು ದೇವರಂತೆ ಕಾಣಬೇಕು. ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಉಪಚಾರ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನು ನೀಡುವುದರ ಮೂಲಕ ನೀಡುವ ಸೇವೆ ವಿಶ್ವದಲ್ಲಿ ಇನ್ನೊಂದೆಡೆ ಇರಲಾರದು.
“ನಾವು ಕರೆಯುವುದು ದೊಡ್ಡದಲ್ಲ;ಕರೆದವರು ಬರುವುದೂ ದೊಡ್ಡದಲ್ಲ; ಬಂದವರು ನಮ್ಮ ಸತ್ಕಾರದಿಂದ ಸಂತೃಪ್ತಿಗೊಂಡು ಸಂತಸದ ರಸದಲ್ಲಿ ನೆನೆ ಜೀವವುಳ್ಳವರಾಗಿ ಮರಳುವುದು ದೊಡ್ಡದು”.
– ಸುನಂದಾ ಎಸ್ ಭರಮನಾಯ್ಕರ