ಪ್ರತೀ ಪದಕ್ಕೂ ತನ್ನದೇ ಆದೊಂದು ನೆನಪ ಬುತ್ತಿಯಿರುತ್ತಾ ಅಂತ. ಕೆಲವದ್ದು ನಲಿವ ನರ್ತನವಾದರೆ ಕೆಲವದ್ದು ನೋವ ಮೌನ ಗಾನ. ಅಕ್ಕ ಅನ್ನೋ ಎರಡಕ್ಷರದ ಮಾಧುರ್ಯ, ಗೆಳತಿ ಅನ್ನೋ ಮೂರಕ್ಷರದ ನವಿರು ಭಾವಗಳು, ಅಮ್ಮಾ ಅನ್ನೋ ಮಮತೆ, ಅಪ್ಪ ಅನ್ನೋ ಗೌರವ, ಹೆಮ್ಮೆ .. ಹೀಗೆ ಪ್ರತೀ ಪದವೂ ತಮ್ಮದೇ ಆದೊಂದು ಹೊಸಲೋಕಕ್ಕೆ ಕೊಂಡೊಯ್ಯುವಂತೆ.
ಸ್ನೇಹ ಎಂಬ ಪದದ್ದೆಂತೂ ನೆನಪುಗಳ ಬುತ್ತಿಯಲ್ಲ. ಅದೊಂದು ಜಾತ್ರೆ. ತಿರುಗಿದಷ್ಟೂ ಮುಗಿಯದಷ್ಟು, ನೋಡಿದಷ್ಟೂ ದಣಿಯದಷ್ಟು , ಹೊಸ ಹೊಸ ದಿಕ್ಕಲ್ಲಿ ಹೊಸ ಹೊಸ ಹೊಳವು ಹೊಳೆಸೋ ನಿತ್ಯ ನಿರಂತರ ಜಾತ್ರೆ. ಅಲ್ಲಿ ನಿತ್ಯ ಒಡಹಾಯೋರೆಷ್ಟು, ಒಮ್ಮೆ ಸಿಕ್ಕು ಮರೆಯಾದ ವರ್ತಕರೆಷ್ಟೋ ? ಜನಜಂಗುಳಿಯಲ್ಲಿ ಕಳೆದುಹೋದಂತನಿಸಿದರೂ ಜೊತೆಗೇ ಇರೋ ನೆರಳಿನಂತೆ ಪಕ್ಕಕ್ಕಿರೋ ಪ್ರಿಯರೆಷ್ಟೋ ಬರೆಯಹೊರಟರೆ ಅದರದ್ದೇ ಒಂದು ಪುರಾಣ. ಜೀವನದ ಬಂಡಿಯಲಿ ವಿಭಿನ್ನತೆಯೇ ಸತ್ವ, ಸತ್ಯ. ನಿತ್ಯ ಮಲಗೆದ್ದಾಗ ನಿನ್ನೆ ಮಲಗಿದ್ದಲ್ಲೇ ಇದ್ದೇವೆಂಬುದ ಬಿಟ್ಟರೆ ಬೇರೆಲ್ಲ ಹೊಸದೇ. ಹೊಸ ಭಾವ, ಹೊಸ ಜೀವ, ಹೊಸ ಪ್ರೀತಿ, ಹೊಸ ಹರ್ಷಗಳು ಹೆಜ್ಜೆ ಹೆಜ್ಜೆಗೆ ನಮ್ಮ ಸ್ಪರ್ಷ ಕಾದಿರುವುದಂತೆ. ಆದರೆ ಗುರುತಿಸೋ ಕಂಗಳು, ಅನುಭವಿಸೋ ಮನಸ್ಸಿರಬೇಕಷ್ಟೇ ನಮಗೆ. ಖುಷಿಯಾಯ್ತೆಂದು ಒಬ್ಬನೇ ನಗಬಹುದೇ ? ಬಹುದೇನೋ ಆದರೆ ಎಷ್ಟೊತ್ತು ? ನಲಿವೊಂದಿಗೇ ನೋವೂ ಉಂಟಲ್ಲ. ನೋವಲ್ಲಿ ಒಬ್ಬರೇ ಪರಿತಪಿಸೋದಕ್ಕಿಂತ ಕಣ್ಣೊರೆಸೋ ಕೈ, ಸಾಂತ್ವನಿಸೋ ಹೆಗಲೊಂದು ಸಿಕ್ಕರೆ ಅದೆಷ್ಟು ಚೆನ್ನವಲ್ವಾ ? ಈ ರೀತಿ ಹರ್ಷವ ಹಂಚೆ, ನೋವ ಮರೆಸಲೆಂದೇ ಸೃಷ್ಠಿಯಾದ ಬಂಧಗಳೇ ಸಂಬಂಧಗಳಾ ಅನಿಸುತ್ವೆ.ರಕ್ತಹಂಚಿ ಹುಟ್ಟಿದ ಸಂಬಂಧಗಳಂತೇ ಜೀವನದ ಓಟದಲ್ಲಿ ಜೊತೆಯಾಗೋರಿಗೆ ಕರೆಯೋ ಹೆಸರುಗಳ ಬಂಧವಿದ್ಯಲ್ಲ ಅದ್ರ ಖುಷಿಯೂ ಕಮ್ಮಿಯಲ್ಲ.ಸುಮ್ಮನೇ ಸರ್ರು, ಮೇಡಂ ಅಂದುಕೊಂಡೇ ದಬ್ಬೋದ್ರಲ್ಲೇನಿದೆ ಸವಿ ? ಕರೆದ ತಕ್ಷಣ ಅದಾಗದಿದ್ರೂ ಸುಮ್ಮನೇ ಒಮ್ಮೆ ಕನ್ನಡದಲ್ಲಿ ಕರೆದುನೋಡಿ. ತಾಯ್ನುಡಿಯ ಆ ಬಂಧ ಅದೆಷ್ಟು ಬೆಸೆಯುತ್ತೆ ಅಂತ. ಹರ್ಷಿಸುತ್ತೆ ಅಂತ.
ನಾವು ಹುಟ್ಟಿ ಬೆಳೆದ ಪರಿಸರದ ಪ್ರಭಾವ ನಮ್ಮ ನಡೆನುಡಿಗಳಲ್ಲಿರೋದು ಸಹಜವಂತೆ. ನಮ್ಮೂರಲ್ಲೆಲ್ಲ ವಯಸ್ಸಿನಲ್ಲಿ ದೊಡ್ಡೋರಾದ್ರೆ ಅಣ್ಣ, ಅಕ್ಕಾ ಸೇರಿಸಿ ಕರೆಯೋದು ವಾಡಿಕೆ. ಕೊನೆಮನೆ ರಾಮಣ್ಣ, ಆಚೆಮನೆ ಸೀತಕ್ಕ ಅಂತ ಅವರಿಲ್ಲದಿದ್ದಾಗ ಕರೆಯೋದಲ್ಲ, ಎದುರಿಗೆ ಸಿಕ್ಕಾಗ ಮಾತಾಡೋದೂ ಹಾಗೆಯೇ. ಚೆಡ್ಡಿ ಹಾಕೋ ಹುಡುಗರಾದ ನಾವು ನಮಗಿಂತ ದೊಡ್ಡವ, ಕೆಲಸದಲ್ಲಿರೋ ಊರ ರಾಮಣ್ಣ ಎದುರಿಗೆ ಬಂದಾಗ್ಲೂ ಏನ ರಾಮಣ್ಣ. ಆರಾಮಿದ್ಯಾ ಅಂತ್ಲೇ ಕರಿತಿದ್ವಿ. ಆ ಅಣ್ಣಾ ಅನ್ನೋ ಪದ ಕೊಡುತ್ತಿದ್ದ ಮಾಧುರ್ಯ ಹಲೋ ರಾಮು ಸರ್ ಹೇಗಿದ್ದೀರಿ ಅನ್ನೋ ಬೆಂಗಳೂರ ಬಳಕೆ ಎಂದೂ ಕೊಟ್ಟಿಲ್ಲ. ಏಕವಚನ ಅಗೌರವ ಅಂತ ಓದುಗರು ಅಂದುಕೊಳ್ಳೋ ಮೊದಲು ನೆನಪ ಗಣಿಯಿಂದ ವಾಸ್ತವಕ್ಕೆ ಮರಳಿ ಇಂದಿನ ಪರಿಸ್ಥಿತಿಯನ್ನೂ ಹೇಳಿಬಿಡೋದು ಉತ್ತಮವೆನಿಸುತ್ತೆ. ಕೆಲಸ ಹಿಡಿದ ನಾನೇ ಈಗ ಊರಿಗೆ ಹೋದಾಗ ಗೋಲಿಯಾಡೋ ಹುಡುಗ್ರು, ಅಣ್ಣ ಹೆಂಗಿದ್ಯ ಅಂತ ಕೇಳೋ ಖುಷಿಯಿದ್ಯಲ್ಲ ಅದ್ನ ಈ ಸರ್ರೆನ್ನೋ ಗೌರವದ ಸಂಬೋಧನೆ ಕೊಟ್ಟಿಲ್ಲ. ವಿದ್ಯೆಯಿತ್ತ ಶಾರದೆಯ ನಾನಾರೂಪಗಳಾದ ಗುರುಗಳನ್ನ ಸರ್ರೆಂದಿಂದ್ದು, ಹೊಟ್ಟೆಪಾಡಿನ ಕೆಲಸದಲ್ಲಿ ಕರೆಯಲೇಬೇಕಾದ ಅನಿವಾರ್ಯತೆಯೊದಗಿದ್ದು ಬಿಟ್ಟರೆ ಜೀವನದ ಪಯಣದಲ್ಲಿ ಈ ಸರ್ರಿನ ಪ್ರಯೋಗದ ಅವಶ್ಯಕತೆ ನನಗೆಂತೂ ಕಂಡಿಲ್ಲ. ವಯಸ್ಸಿನಲ್ಲಿ ದೊಡ್ಡವರಿಗೆ ನೀವು ಎಂದು ಸಂಬೋಧಿಸಿದ್ದು ಬಿಟ್ಟರೆ ಬೇರೆಲ್ಲ ಗೌರವಕ್ಕೆ ನೆರವಾದ ಪದ ಮತ್ತೆ ಇದೇ "ಅಣ್ಣಾ". ಪ್ರಕಾಶಣ್ಣ, ಹರೀಶಣ್ಣ, ಕಾರ್ತೀಕಣ್ಣ ,ಗ್ವಾಪಣ್ಣ, ಸುಬ್ಬಣ್ಣ, ರೋಭಣ್ಣ, ಕಿಣ್ಣ ಹೀಗೆ ಒಡಹುಟ್ಟಿದವರಲ್ಲದಿದ್ದರೂ ಸುಮಾರು ಜನರ ಸಂಬೋಧನೆ ಶುರುವಾಗೋದೇ ಅಣ್ಣ ಎಂದು. ನಟ್ಟು ಭಾಯ್, ವೆಂಕಿ ಭಾಯ್, bro, ಹೀಗೆ ತರಾವರಿ ರೂಪತಾಳಿದ್ರೂ ಎಲ್ಲದ್ರ ಮೂಲ ಈ ಅಣ್ಣನೇ.
ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳವು. ಮಚ್ಚಾ, ಸಿಸ್ಯ, ಗುರೂ, ಮಗಾ ಹೀಗೆ ಹಲತರದ ಪ್ರಯೋಗಗಳಂತೇ ನನ್ನ ಗಮನಸೆಳೆದದ್ದು ಅಣ್ಣ ಪ್ರಯೋಗ. ಬೇರೆ ಕಡೆ ರೀ ಟೈಂ ಎಷ್ಟಾಯ್ತು, ಸರ್ ಟೈಂ ಎಷ್ಟಾಯ್ತು ಅಂತ ಕೇಳೊದ್ರಲ್ಲಿ ನಂಗಿದ್ದ ಕರಕರೆ ಇಲ್ಲಿ ಸಿಕ್ಕ ಒಬ್ಬ ಅಣ್ಣ, ಟೈಂ ಎಷ್ಟಾಯ್ತು ಅನ್ನೋದ್ರಲ್ಲಿ ದೂರವಾಯ್ತು. ಸಂಬಂಧದಲ್ಲಿ , ಊರ ಕಡೆ ಅಣ್ಣ ಅಂದ ಗೊತ್ತಿದ್ದ ನನಗೆ ಗುರುತುಪರಿಚಯವಿಲ್ಲದಿದ್ದ, ಮೊದಲ ಬಾರಿಗೆ ಕಂಡವನೊಬ್ಬ ಅಣ್ಣ ಅಂದಿದ್ದು ಹೊಸ ಅನುಭವ. ಫೇಸ್ಬುಕ್ಕಲ್ಲಿ ಮಾತಿಗೆ ಸಿಕ್ಕು ಗೆಳೆಯರಾದ ಅನೇಕ ಹಿರಿಯರಿಗೆ ಅಣ್ಣ, ಅಕ್ಕ ಅಂತ ಕರೆಯೋದ್ರಲ್ಲಿ ಸಿಗುತ್ತಿದ್ದ ಖುಷಿ ಅವರನ್ನು ಮೊದಲ ಬಾರಿಗೆ ಅವರೇ, ಇವರೇ ಅಂತ ಕರೆಯೋ ಸಂದರ್ಭಗಳಿಗಿಂತ ಎಷ್ಟೊ ಜಾಸ್ತಿಯಿರುತ್ತಿತ್ತು. ಯಾವುದೋ ರೌಡಿಯಾಗಿ ಅಣ್ಣ ಅನಿಸಿಕೊಳ್ಳೋ, ಭಯಾನಕ ಸಾಧನೆ ಮಾಡಿ ಅಣ್ಣಾ ಅನಿಸಿಕೊಳ್ಳೋ ಸಿನಿಮೀಯ ಸನ್ನೀವೇಶಗಳಲ್ಲ ಇವು. ಕರೆದ ತಕ್ಷಣ ಆಗೇಬಿಡಬೇಕೆಂದಿಲ್ಲದಿದ್ದರೂ ಅಣ್ಣಾ ಅನ್ನೋದು ವಯಸ್ಸಿಗೊಂದು ಗೌರವ ಸೂಚಕದಂತೆ ಭಾಸವಾಗ್ತಿತ್ತು ನನಗೆ. ಅಂಕಲ್, ಆಂಟಿ, ಸರ್ರು, ಮೇಡಮ್ಮುಗಳ ಪರಕೀಯ ತುರಿಕೆಗಿಂತ ನಮ್ಮ ನುಡಿಯ ಆತ್ಮೀಯತೆಯನ್ನು ಇದು ನೀಡುತ್ತಿದ್ದೆಂದು ಬೇರೆ ಹೇಳಬೇಕಿಲ್ಲ. ಆಫೀಸಿನ ಕ್ಯಾಬ್ ಡ್ರೈವರ್ರು, ಬಸ್ಸ ಡ್ರೈವರ್ರು, ಪೀಜಿಯ ಓನರ್ರು ಎಲ್ಲರಿಗೂ ಕರೆದಿದ್ದು ಹೆಸರ ಮುಂದೆ ಅಣ್ಣ ಇಟ್ಟೇ. ಅವರ ಬಾಯಲ್ಲೂ ನಾನು ಅಣ್ಣ ಅಥವಾ ಭಯ್ಯ. ಅವರು ನಮಗಿಂತ ಎಷ್ಟೇ ದೊಡ್ಡವರಾದ್ರೂ ಕೆಲಸದೊತ್ತಡದಿಂದ ನನ್ನ ಸರ್ರೆನ್ನೋ ಅನಿವಾರ್ಯತೆ ಅವರಿಗೂ ಇಲ್ಲ.ಅವರಿಗೆ ಸರ್ರೆನ್ನಲಾಗದೇ ಬರೀ ಹೆಸರು ಹಿಡಿದು ಕರೆದು, ಅವರ ಕೈಯಲ್ಲಿ ಸರ್ರೆಂದು ಕರೆಸಿಕೊಂಡು ಏನೋ ಕಸಿವಿಸಿ ಅನುಭವಿಸೋ ವೇದನೆ ನನಗೂ ಇಲ್ಲ. ಈ ಅಣ್ಣನ ಆತ್ಮೀಯತೆ ಎಷ್ಟಿತ್ತೆಂದ್ರೆ ಆಫೀಸ ಬಾಸನ್ನೂ ಸರ್ರೆನ್ನದೆ ಅಣ್ಣ ಅನ್ನುತ್ತಿದ್ದ ಜನಗಳು , ತಮ್ಮ ಕೈಕೆಳಗಿನ ಸಿಬ್ಬಂದಿಯನ್ನು ಸಿಬ್ಬಂದಿಯಲ್ಲ, ತಮ್ಮ ತಮ್ಮಂದಿರೇ ಎಂಬಂತೆ ನೋಡುತ್ತಿದ್ದ ಬಾಸು..ಇಂಥಾ ದೃಶ್ಯಗಳೂ ಕಣ್ಣಿಗೆ ಬೀಳ್ತಿದ್ದವು.
ತಮ್ಮ ಸರಳ ಸಜ್ಜನಿಕೆಯಿಂದ ಇಡೀ ನಾಡಲ್ಲೇ ಅಣ್ಣಾ ಅನಿಸಿಕೊಂಡು ನಮ್ಮ ನೆನಪಲ್ಲಿ ಅಚ್ಚಾಗಿಹೋದೋರು ರಾಜಣ್ಣ. ಜನಲೋಕಪಾಲಕ್ಕಾಗಿ ಆಗ್ರಹಿಸಿ ಮಲಗಿದ್ದ ಇಡೀ ದೇಶದ ಜನರನ್ನ ಎಚ್ಚರಿಸಿ ಹೊಸ ಅಲೆಯನ್ನೇ ಹುಟ್ಟಿಸಿದೋರು ಅಣ್ಣಾ ಹಜಾರೆ. ತಮಿಳುನಾಡಲ್ಲಿ ಒಂದೋ ಅಮ್ಮಾ ಪಾರ್ಟಿ, ಅದ್ನ ಬಿಟ್ರೆ ನೆನಪಾಗೋದೇ ಅಣ್ಣಾ ಪಾರ್ಟಿ. ಹಿಂಗೆ ಬರೀತಾ ಹೋದ್ರೆ ನಮ್ಮ ಭಾರತೀಯ ಇತಿಹಾಸದಲ್ಲಿ ಅಣ್ಣನ ಮಹತ್ವ ಒಂದೆರಡಲ್ಲ. ಇಂದಿನ ಕತೆಯೇನು ಪುರಾಣಗಳನ್ನು ತೆಗೆದುಕೊಂಡ್ರೂ ಅಣ್ಣ ಅಂದ್ರೆ ರಾಮನಂತಿರಬೇಕು. ತಮ್ಮನೆಂದರೆ ರಾಮನಿಗೆ ಲಕ್ಷ್ಮಣನಂತೆಯೂ ಬಲರಾಮನಿಗೆ ಕೃಷ್ಣನಂತೆಯೂ ಇರಬೇಕು ಅನ್ನುತ್ತಾರೆ. ಕೃಷ್ಣನೆಂದಾಗ ನೆನಪಾಗೋದು ದ್ರೌಪದಿಯ ಅಣ್ಣನಾಗಿ ಅವನು ವಹಿಸಿದ ಪಾತ್ರಗಳ ಬಗ್ಗೆ. ಕೃಷ್ಣನ ಕೈಗೆ ಗಾಯವಾಗಿ ರಕ್ತ ಸೋರತೊಡಗಿದ್ದಾಗ ದ್ರೌಪದಿ ತನ್ನ ಸೀರೆಯನ್ನೇ ಹರಿದು ಕಟ್ಟಿದ್ದಳಂತೆ. ಅದಕ್ಕೆ ಪ್ರತಿಯಾಗಿ ಕೃಷ್ಣ ಅವಳಿಗೆ ಎಂದೆಂದೂ ಕಾಪಾಡೋ ರಕ್ಷೆಯ ಅಭಯವಿತ್ತಿದ್ದನಂತೆ. ದ್ಯೂತ ಪ್ರಸಂಗದಲ್ಲಿ ಅಕ್ಷಯ ವಸ್ತ್ರವನ್ನಿತ್ತು ಮಾನ ಕಾಪಾಡಿದ ಕೃಷ್ಣ ಮತ್ತೆ ವನವಾಸದಲ್ಲೂ ನೆರವಿಗೆ ಬರುತ್ತಾನೆ. ಊಟವೆಲ್ಲಾ ಖಾಲಿಯಾದ ಮೇಲೆ ತಮ್ಮ ದೊಡ್ಡ ಶಿಷ್ಯಂದಿರ ಬಳಗದೊಡನೆ ಬರೋ ದೂರ್ವಾಸರಿಗೆ ಇಕ್ಕಲು ವನವಾಸದಲ್ಲಿದ್ದ ಪಾಂಡವರ ಬಳಿ ತುತ್ತೂ ಅನ್ನವಿಲ್ಲ. ಅಕ್ಕಿಯಿದ್ದರೆ ತಾನೆ ಅನ್ನಮಾಡೋದು. ಊಟವಿಲ್ಲವೆಂದರೆ ದೂರ್ವಾಸರ ಸಿಟ್ಟಿಗೆ ಸುಟ್ಟೇ ಹೋಗಬಹುದಾದ ಅಪಾಯ. ಆದರೆ ಕೊಡಲಾದ್ರೂ ಇದ್ದುದ್ದೇನು ? ಆಗ ನೆರವಿಗೆ ಬಂದು ಇದ್ದ ಒಂದು ಅಗುಳು ಅನ್ನ ಪಡೆದು ಅದರಿಂದ ಪಾತ್ರೆಯಲ್ಲಿದ್ದ ಅನ್ನ ಅಕ್ಷಯವಾಗುವಂತೆ ಮಾಯವೆಸಗಿದೋನು ಮತ್ತದೇ ದ್ರೌಪದಿಯ ಅಣ್ಣ, ಪಾಂಡವರ ಪಾಲಿನ ಬಂಧು ಕೃಷ್ಣ. ಅಂದು ದ್ರೌಪದಿಗೆ ರಕ್ಷೆಯ ಅಭಯವಿತ್ತ ರಾಖಿಯೇ ತದನಂತರ ಅಣ್ಣ-ತಂಗಿಯರ ಸಂಬಂಧದ ಮಾಧುರ್ಯಕ್ಕೆ ವರ್ಷವರ್ಷ ಮೆರಗು ನೀಡೋ ರೂಪಕವಾಯಿತೆಂದು ಕೆಲವರ ಅಂಬೋಣ. ಪುರಾಣಗಳನ್ನು ಕಾವ್ಯಾತ್ಮಕ ಗುಣಗಳಿಂದ ನೋಡಬೇಕೆನ್ನುವವರು ದೇಶಕ್ಕೆ ದಂಡೆತ್ತಿ ಬಂದ ಮೊಘಲರಿಂದ ತಮ್ಮ ರಕ್ಷಣೆಗೆ ರಜಪೂತ ಹೆಣ್ಣು ಮಕ್ಕಳು ಅವರಿಗೆ ರಾಖಿ ಕಟ್ಟಿ ಅವರನ್ನು ಅಣ್ಣ ಎಂದರರು ಎಂಬಲ್ಲಿಂದ ರಾಖಿಯ ಉಗಮವಾಯಿತು ಅನ್ನುತ್ತಾರೆ.
ಒಡಹುಟ್ಟಿದ ಅಣ್ಣ, ತಮ್ಮಂದಿರಿಗೆ, ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಿಗೆ ಅಕ್ಕ ತಂಗಿಯಂದಿರು ರಾಖಿ ಕಟ್ಟಿ ಆರತಿ ಬೆಳಗೋದು, ಅವರು ಇವರಿಗೆ ಸಿಹಿ , ಏನಾದ್ರೂ ಉಡುಗೊರೆ ಕೊಟ್ಟು ರಕ್ಷೆಯ ಭರವಸೆ ನೀಡೋದು ವರ್ಷವರ್ಷ ಬರೋ ಒಂಥರಾ ಭಾವನಾತ್ಮಕ ಸಂದರ್ಭ. ಜೀವನದ ಓಟದಲ್ಲಿ ಎಲ್ಲೆಲ್ಲೋ ಕಳೆದುಹೋಗಿರೋ ಅಕ್ಕ ತನ್ನ ತಮ್ಮನಿಗೆ ವರ್ಷಕ್ಕೊಮ್ಮೆ ಪೋಸ್ಟಲ್ಲಿ ರಾಖಿ ಕಳಿಸೋದು, ಫೋನ್ ಮಾಡಿ ಶುಭಾಶಯ ಹೇಳೋದಿದ್ಯಲ್ಲ. ಅದ್ರಲ್ಲಿರೋ ಖುಷಿ ಆ ರಾಖಿ ಕಂಡ ತಮ್ಮನ ಬಾಯಲ್ಲೇ ಕೇಳಬೇಕು. ಸ್ವಾರ್ಥದ ಮಡುವಲ್ಲಿ ಸಂಬಂಧಗಳೇ ಉಸಿರುಗಟ್ಟುತ್ತಿರೋ ಸಂದರ್ಭದಲ್ಲಿ ಇನ್ನೂ ಇಂತಹ ನೆನಪುಗಳ ಹಸಿರಾಗಿಟ್ಟಿರೋ ಶ್ರೇಯ ರಾಖಿಗೇ ಸಲ್ಲಬೇಕು. ಒಡಹುಟ್ಟಿದವ್ರ ಬೆಸುಗೆಯಾಗಿ, ಬೇರೆಯವರಿಂದ ರಕ್ಷೆಗಾಗಿ.. ಹೀಗೆ ರಾಖಿ ಹುಟ್ಟಿದ್ದು ಹೇಗೇ ಆಂದ್ರೂ ಇಂದು ಈ ರಾಖಿ "ರಾಖಿ ತಂಗಿ" ಎಂಬ ಹೊಸ ಸಂಬಂಧವನ್ನು ಹುಟ್ಟಿ ಹಾಕಿದ್ದೆಂತೂ ಸುಳ್ಳಲ್ಲ ! ಕಾಲೇಜಲ್ಲಿ ತಮ್ಮನ್ನು ಗೌರವದಿಂದ ಕಾಣೋ ಹುಡಗನನ್ನೋ , ಸಿಕ್ಕಾಪಟ್ಟೆ ಕಾಟ ಕೊಡೋ ಹುಡುಗನನ್ನೋ ಅಣ್ಣನಾಗಿಸಿಕೊಳ್ಳೋಕೆ ಹುಡುಗಿಯರಿಗೆ ವರ್ಷಕ್ಕೊಮ್ಮೆ ಸಿಗೋ ಹಬ್ಬ ರಾಖಿ ಹಬ್ಬ !! ಚೆನ್ನಾಗಿರೋ ಹುಡುಗಿಯರೆಲ್ಲಾ ನನ್ನ ಅಣ್ಣ ಅಂದ್ರೆ ಗತಿಯೇನು ? ಇದು ಅನ್ಯಾಯ. ಆಂಟಿ ಅಣ್ಣ ಚಳುವಳಿ ಮಾಡ್ಬೇಕು, ರಾಖಿ ಕಟ್ಟೋಕೆ ಬರೋ ಹುಡುಗಿಯರಿಗೆ ತಾಳಿ ತಗೊಂಡು ಬರ್ತೀನಿ ಅನ್ಬೇಕು ಅನ್ನೋ ಹುಡುಗರದ್ದು ಒಂದು ಗುಂಪಾದ್ರೆ , ಇದ್ರ ಸಹವಾಸವೇ ಬೇಡ. ರಾಖಿ ದಿನ ರಜ ಹಾಕಿ ಮನೇಲಿದ್ಬಿಡೋದೇ ಕ್ಷೇಮ ಅನ್ನೋ ಹುಡುಗರದ್ದು ಇನ್ನೊಂದು ಗುಂಪು. ಶಾಲಾ ದಿನಗಳಲ್ಲಿ ಈ ತರದ ಅರ್ಥ, ಅಪಾರ್ಥಗಳ ಅರಿವಿರದೇ ಎರಡೂ ಕೈಗೆ ಕೈತುಂಬಾ ರಾಖಿ ಕಟ್ಟಿಸಿಕೊಂಡು ನನ್ನ ಕೈಗೆ ಹದಿನೈದು, ನನ್ನ ಕೈಗೆ ಇಪ್ಪತ್ತು ಅಂತ ದೊಡ್ಡ ದೊಡ್ಡ ರಾಖಿಗಳನ್ನ ತೋರಿಸ್ಕೊಂಡು, ಆ ಗಜಗಾತ್ರದ ರಾಖಿಗಳಿಂದ ಸರಿಯಾಗಿ ಊಟ ಮಾಡಲು, ಸ್ನಾನ ಮಾಡಲೂ ಆಗದೇ ಒದ್ದಾಡುತ್ತಾ ಅದರಲ್ಲೇ ಒಂದು ಖುಷಿ ಪಡ್ತಿದ್ದುದು ನೆನಪಾಗತ್ತೆ. ಆಗೆಲ್ಲಾ ಜಾಸ್ತಿ ರಾಖಿಯಿದೆ ಅಂದ್ರೆ ಆತ ಕ್ಲಾಸಲ್ಲಿ ಸಖತ್ ಒಳ್ಳೆ ಹುಡುಗ, ಸ್ನೇಹಪರ ಅಂಥರ್ಥ. ಸ್ವಂತ ಅಕ್ಕ-ತಂಗಿಯಂದಿರೋರಿಗೆ ಒಂದಾದ್ರೂ ರಾಖಿ ಸಿಕ್ಕೇ ಸಿಗ್ತಿತ್ತು. ಆದ್ರೆ ಯಾರೂ ಇಲ್ಲದ ಹುಡುಗನಿಗೆ ಬೇರೆಯವ್ರ ರಾಖಿ ತುಂಬಿದ ಕೈಯನ್ನ , ಇನ್ನೂ ಒಂದು ರಾಖಿಯನ್ನೂ ಕಾಣದ ತನ್ನ ಕೈಯನ್ನು ನೋಡೋದೇ ಒಂದು ಹಿಂಸೆ. ಮುಂದಿನ ಜನ್ಮದಲ್ಲಾದ್ರೂ ನಂಗೊಂದು ತಂಗಿ ಕರುಣಿಸಪ್ಪಾ ದೇವ್ರೆ ಅಂತ ಬೇಡಿಕೊಳ್ಳೋ ಪರಿಸ್ಥಿತಿ.ಆದ್ರೆ ಈಗ ಕಾಲೇಜಲ್ಲಿ ಹೆಚ್ಚೆಚ್ಚು ರಾಖಿ ಬಿದ್ದಿದೆ ಅಂದ್ರೆ ಆತ ಹೆಚ್ಚೆಚ್ಚು ಹುಡುಗೀರ ಹಿಂದೆ ಬಿದ್ದು ಕಾಟ ಕೊಡ್ತಿದ್ದ, ಅವರೆಲ್ಲಾ ರಾಖಿ ಕಟ್ಟೋಕೆ ಹೋದಾಗ ಸಿಕ್ಕಿಬಿದ್ದ ಬರ್ಕ ಎಂದು ಅರ್ಥೈಸೋ ಜಮಾನ. ರಾಖಿ ಕಟ್ಟಿಸ್ಕೊಂಡಂಗಲ್ಲ ಗಿಫ್ಟು ಕೊಡು ಅಂತ ಮೂದಲಿಸೋಕೆ ಆ ಕ್ಷಣಕ್ಕೆ ತಂಗಿಯಾದೋರಿಗೊಂದು ಛಾನ್ಸು. ಊರಲ್ಲಿ ಸಣ್ಣ ಹುಡುಗ್ರತ್ರ, ಯಾರತ್ರನೋ ಸರ್ ಅನಿಸಿಕೊಳ್ಳೋ ಬದ್ಲು , ಅಂಕಲ್ ಅನಿಸಿಕೊಳ್ಳೋ ಇನ್ನೂ ಕೆಟ್ಟ ಅನುಭವಕ್ಕಿಂತ ಹುಡುಗರಿಗೆ ಅಣ್ಣ ಅನಿಸಿಕೊಳ್ಳೋದು ಓಕೆ ಅನಿಸುತ್ತೆ. ಆದ್ರೆ ಕ್ಲಾಸ್ಮೇಟೊಬ್ಳು ಅಣ್ಣ ಅನ್ನೋಕೆ ಬಂದಾಗಿದ್ಯಲ್ಲ.. ಹೆ ಹೆ ಆ ಅನುಭವ ಅನುಭವಿಸಿದೋರಿಗೇ ಪ್ರೀತಿ.
ಯಾವ ಕೆಟ್ಟ ದೃಷ್ಟಿಯಿಂದ ನೋಡಿರದಿದ್ರೂ ಸಾಮಾನ್ಯ ಸ್ನೇಹಿತನ ಸ್ಥಾನದಿಂದ ಅಣ್ಣನ ಸ್ಥಾನಕ್ಕೆ ಬಡ್ತಿ ಪಡೆಯೋ ಕ್ಷಣ ಅಂದ್ರೆ ಕೆಲವರಿಗೆ ಒಂಥರಾ ಆಕಾಶದಲ್ಲಿ ಹಾರಾಡಿದಂತೆ. ಮಜ ಅಂದ್ರೆ ಕ್ಲಾಸ್ಮೇಟೇ ಆದ್ರೂ ನಮಗಿಂತ ವಯಸ್ಸಲ್ಲಿ ದೊಡ್ಡವರು ಅಂತ ಗೊತ್ತಿರತ್ತೆ. ಹಂಗಾಗಿ ಅಣ್ಣ ಆಗೋಲ್ಲ. ತಮ್ಮ ಆಗ್ತೀನಿ ಅನ್ನೋ ತರ್ಕಕ್ಕೆ ಇವರು ಒಪ್ಪೋಲ್ಲ. ಅಣ್ಣ ಅನ್ನೋದೇ ಒಂದು ಖುಷಿಯಂತೆ !! ಆದ್ರೆ ಅದೇ ಸ್ನೇಹಿತೆಯ ಮೇಲೆ ಒಂದರ್ಧ ಇಂಚು ಪ್ರೀತಿಯನ್ನೂ ಇಟ್ಟೋರಿಗೆ ಆಕೆ ಅಣ್ಣಾ ಅನ್ನೋಕೆ ಬಂದಾಗಾಗೋ ಹಿಂಸೆ ಅಷ್ಟಿಷ್ಟಲ್ಲ. ಮನದ ಭಾವ ಹೇಳಿದ್ರೆ ಇದನ್ನ ಹೇಳಕ್ಕೆ ಇಷ್ಟು ದಿನ ಬೇಕಿತ್ತಾ? ನನ್ನ ಪ್ರೀತಿಗೆ ನೀನು ನಾಲಾಯಕ್ಕು . ಸುಮ್ಮನೇ ಅಣ್ಣನಾಗಿರು ಅಂತ ರಾಖಿ ಕಟ್ಟಿಬಿಡಬಹುದು ಅಂತ ಒಂದು ಮನಸ್ಸು. ಹೇಳದೇ ರಾಖಿ ಕಟ್ಟಿಸಿಕೊಂಡ್ರೆ ಆ ಭಾವವನ್ನು ಆಮೇಲೆ ಎಂದೂ ಹೇಳಕ್ಕಾಗಲ್ವಲ್ಲಾ ಅನ್ನೋ ಕೊರಗು ಒಂದು ಕಡೆ. ಈ ಸೈಲೆಂಟ್ ಪ್ರೀತಿಗಳಿಂದ ರಾಖಿ ಕಟ್ಟಿಸಿಕೊಂಡು, ರಾಖಿ ಕಟ್ಟಬರೋರಿಂದ ತಪ್ಪಿಸಿಕೊಂಡು ಓಡಾಡೋ ಬದಲು ಅವತ್ತೊಂದಿನ ರಜೆ ಹಾಕೋದೇ ಮೇಲು ಅಂತ ಅವರ ಭಾವ. ಸುಮ್ಮ ಸುಮ್ನೇ ಕಂಡ ಕಂಡ ಹುಡುಗೀರ ಕೈಯಲ್ಲೆಲ್ಲಾ ಅಣ್ಣ ಅನಿಸಿಕೊಳ್ಳೋಕೆ ನಾ ರೆಡಿಯಿಲ್ಲ. ಅಣ್ಣ ಅನಿಸಿಕೊಂಡ್ರೆ ಇಡೀ ಜೀವಮಾನವಿಡೀ ಅವಳಿಗೆ ರಕ್ಷಣೆ ಕೊಡೋಕೆ ಮುಂದಾಗ್ತೀನಿ. ಕಾಯ್ತೀನಿ ಅನ್ನೋ ಭರವಸೆ ಕೊಡಬೇಕು. ಅದೆಲ್ಲಾ ಇಲ್ಲಾ ಅಂದ್ರೆ ವರ್ಷಕ್ಕೊಂದು ದಿನ ಅಣ್ಣನಾಗಿ ಯಾವ ಪ್ರಯೋಜನವೂ ಇಲ್ಲ ಅನ್ನೋದು ಇನ್ನು ಕೆಲವರ ಮಾತು.
ಈ ಸೀರಿಯಸ್ ಪ್ರೀತಿಯ ವಿಷ್ಯ ಏನೇ ಇದ್ರೂ ಈ ರಾಖಿಯಿಂದಾಗೇ ಹುಟ್ಟಿದ ರಾಖಿ ತಂಗಿಯಂದಿರಿಂದ ಸಾಮಾಜಿಕ ತಾಣಗಳಾದ ಫೇಸ್ಬುಕ್, ವಾಟ್ಸಾಪುಗಳಲ್ಲಿ ಆದ ಹಾವಳಿ ಅಷ್ಟಿಷ್ಟಲ್ಲ. ಮಾತಿಗೆ ನಿನ್ನ ತಂಗಿ ಹಂಗಂದ್ಲು ಅಂತ ಇವನಿಗೆ ಚಾಡಿಸೋದು, ಏನೇ ನಿಮ್ಮಣ್ಣ ಅದ್ಯಾವ್ದೋ ಹುಡುಗಿ ಫೋಟೋಕೆ ಲೈಕ್ ಒತ್ತಿದ ಅಂತ ಅವಳಿಗೆ ಚಾಣಿಸೋದು, My beloved brother ಅಂತ ಅವಳು ಬರೆಯೋದು, ಸ್ವೀಟ್ ಸಿಸ್ಟರ್ ಅಂತ ಇವನು ಬರೆಯೋದು.. ಅವಳಿಗೆ ತೀರಾ ಕಾಲೆಳೆಯೋಕೆ ಹೋದಾಗ ಇವನು ರಕ್ಷಣೆಗೆ ಧಾವಿಸೋದು, ಇವನಿಗೆ ಅವಳು..ಹೀಗೆ ಎಲ್ಲಾ ಮುಂಚೆ ಇಲ್ಲದ, ಒಂದು ರಾಖಿಯ ತರುವಾತ ಹುಟ್ಟಿದ ಭಾವಗಳು. ನೆನೆಸಿಕೊಂಡ್ರೆ ಆಶ್ಚರ್ಯವೆನಿಸುತ್ತೆ.ಹೊಸದಾಗಿ ನೊಡೋರಿಗೆ ಸ್ವಂತ ಅಣ್ಣತಂಗಿಯಂದಿರಾ ಅಂತ ಡೌಟ್ ಕೊಡೋ ಇವ್ರು , ಇವ್ರ ಬಗ್ಗೆ ಅರಿವಿದ್ದೋರ ಮನದ ಮರೆಯಲ್ಲೊಂದು ಮಂದಹಾಸವನ್ನೂ ಹುಟ್ಟುಹಾಕುತ್ತಾರೆ. ಸಾಮಾಜಿಕ ತಾಣಗಳಲ್ಲಿ ಕರೆದುಕೊಳ್ಳೋದು, ನಾನು ಎಲ್ಲೇ ಹೋದ್ರೂ ನಿನಗೊಂದು ರಾಖಿ ಕಳಿಸ್ತೀನಿ ಕಣೋ ಅನ್ನೋ ಶುರುವಿನ ಭಾವ, ಜೋಷುಗಳೆಲ್ಲಾ ಓಕೆ. ಆದ್ರೆ ಒಡಹುಟ್ಟಿದವರನ್ನೇ ಹೊಡೆದಾಡಿಸೋ ಕಾಲದ ಹೊಡೆತದಲ್ಲಿ ಈ ರಾಖಿ ಅಣ್ಣಂದಿರ ಮಧುರ ಭಾವಗಳು ಉಳಿಯುತ್ತಾ ಅಥವಾ ಉಳಿದವಂತೆ ಕೊಚ್ಚಿ ಹೋಗುತ್ತಾ ಅನ್ನೋ ಕುತೂಹಲದ ಪ್ರಶ್ನೆಗೆ ಆ ಕಾಲನೇ ಉತ್ತರಿಸಬೇಕು. ನೋವುಗಳ ಮರೆಸಬೇಕು. ನಲಿವುಗಳ ಹಂಚಬೇಕು..
ಓದಿದ ಅಣ್ಣ-ತಮ್ಮಂದಿರಿಗೆ: ಸರ್ರನ್ನೋಕಿಂತ ಅಣ್ಣ ಅನ್ನೋದು ನಿಮಗೂ ಖುಷಿ ಕೊಟ್ಟಿರಬಹುದು ಅನ್ನೋ ಭಾವದಲ್ಲಿ.
ಅಕ್ಕ-ತಂಗಿಯರಿಗೆಲ್ಲಾ ರಕ್ಷಾಬಂಧನದ ಶುಭಾಶಯಗಳು. ಉಳಿದ ಸ್ನೇಹಿತೆಯರಿಗೆ…:ಕೊನೆಯೆರಡು ಪ್ಯಾರಾಗಳು ನಿಮಗಲ್ಲ. ಒಮ್ಮೆ ಓದಿದ್ರೂ ಮರೆತುಬಿಡಿ 🙂 ಮತ್ತೆ ಸಿಗೋಣ.
*****
ಪ್ರಶಸ್ತಿ ಅಣ್ಣನ ಅಂಕಣ ಬರಹ ಇಷ್ಟವಾಯ್ತು…:)
ಸಾಂಧರ್ಬಿಕ ಲೇಖನ ಚೆನ್ನಾಗಿದೆ ಪ್ರಶಸ್ತಿ
He he. Dhanyavaadagalu vatsanna n akki bhai 🙂