ಅಣ್ಣಾವ್ರ ನೆನಪುಗಳು: ಹೊ.ರಾ.ಪರಮೇಶ್ ಹೊಡೇನೂರು

      
ಇದೇ ಏಪ್ರಿಲ್ 12ಕ್ಕೆ ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರು ವಿಧಿವಶರಾಗಿ ಒಂಭತ್ತು ವರ್ಷಗಳು ಪೂರೈಸಿವೆ.ಭೌತಿಕವಾಗಿ ಇಲ್ಲವಾದರೂ ಜನ ಮಾನಸದಲ್ಲಿ ಅವರು ಸ್ಥಾಪಿಸಿರುವ ಛಾಪು ಚಿರ ಕಾಲ ಉಳಿಯವಂತಾದ್ದು. ಅಣ್ಣಾವ್ರ ಒಂಭತ್ತನೇ ಪುಣ್ಯತಿಥಿ  ಹಾಗೂ ಅವರ ಜನ್ಮ ದಿನ(ಏಪ್ರಿಲ್-24)) ಸಂದರ್ಭದಲ್ಲಿ  ಈ ಲೇಖನ.
            
ಕನ್ನಡ ಚಿತ್ರರಂಗದ ಅನಭಿಶಕ್ತ ದೊರೆ, ಕಲಾಕೌಸ್ತುಭ, ಕರ್ನಾಟಕ ರತ್ನ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು ಕನ್ನಡಿಗರ ಅಭಿಮಾನದ ಅಣ್ಣಾವ್ರು ಎನಿಸಿಕೊಂಡ ಕಲಾ ಸೇವೆಯನ್ನೇ ತನ್ನ ಉಸಿರನ್ನಾಗಿಸಿ ಕನ್ನಡಾಭಿಮಾನವನ್ನು ಅಚ್ಚ ಹಸಿರಾಗಿಸಿ ಚಿತ್ರರಂಗದ ಹಿಮಾಲಯ ಪರ್ವತವಾಗಿ ಬೆಳೆದ ಮುತ್ತುರಾಜ ಡಾ.ರಾಜಕುಮಾರ್ ರವರನ್ನು ಭೌತಿಕವಾಗಿ ಕಳೆದುಕೊಂಡು ಎಂಟು ವರ್ಷಗಳು ಸಂದಿದ್ದರೂ ಕನ್ನಡ ಕಲಾಭಿಮಾನಿಗಳ ಕಣ್ಣಾಲಿಗಳು ಈಗಲೂ ತೇವವಾಗುತ್ತವೆ.ಮನಸ್ಸು ಭಾರವೆನಿಸುತ್ತದೆ.ಮನೆಯವರನ್ನೇ ಕಳೆದುಕೊಂಡಂತೆ ಭಾವ ಪರವಶವನ್ನಾಗಿಸುತ್ತದೆ.ವೃತ್ತಿರಂಗಭೂಮಿಯ ಹಿನ್ನಲೆಯಿಂದ ಬಂದ ಸಿಂಗಾನಲ್ಲೂರು ಪುಟ್ಟ ಸ್ವಾಮಯ್ಯನವರ ಸುಪುತ್ರ, ಮುತ್ತತ್ತಿರಾಯನ ವರ ಪ್ರಸಾದದಿಂದ ದಿ.24.04.1929ರಂದು ಹುಟ್ಟಿದ ಅಣ್ಣಾವ್ರು ಯಾವುದೇ ಪದವಿಗಳನ್ನು ಪಡೆಯದೆ ಅಭಿಮಾನದ ಗೌರವ ಡಾಕ್ಟರೇಟ್ ಪಡೆಯುವಷ್ಟು ಪ್ರಬುದ್ಧ ಕಲಾವಿದರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಸುಮಾರು 205 ಚಿತ್ರಗಳಲ್ಲಿ ನಾಯಕರಾಗಿ ನಟಿಸಿ ಕರ್ನಾಟಕದ ಕಲಾ ರಸಿಕರಾಗಿ ಅಜರಾಮರರಾಗಿದ್ದಾರೆ.ಕೇವಲ ನಟರಾಗಿ ಮಾತ್ರ ಉಳಿಯದೆ ಗಾಯಕರಾಗಿಯೂ ಹೊರ ಹೊಮ್ಮಿದ ಡಾ.ರಾಜ್ ರವರು ನಾಯಕ – ಗಾಯಕ ಪರಿಕಲ್ಪನೆಗಳನ್ನು ಸಾಕಾರಗೊಳಿಸಿ ಅಪರೂಪದ ಕಲಾವಿದರೆನಿಸಿದ್ದಾರೆ.


          
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅಣ್ಣಾವ್ರು ಅಭಿನಯಿಸದ ಪಾತ್ರಗಳೇ ಇಲ್ಲ.1954ರಲ್ಲಿ ಬೇಡರ ಕಣ್ಣಪ್ಪನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಭಕ್ತ ಕನಕದಾಸ, ಪುರಂದರದಾಸ, ಗುರುರಾಘವೇಂದ್ರ ಕಬೀರನಂತಹ ಸಾಧು ಸಂತರ ಪಾತ್ರಗಳಿಗೆ ಜೀವ ತುಂಬಿದರು.ತಮ್ಮ ವಿಶಿಷ್ಠ ಅಭಿನಯದಿಂದ ಕಲಾ ರಸಿಕರ ಸ್ಮೃತಿ ಪಟಲದಲ್ಲಿ ಸದಾ ಉಳಿಯುವ ಪಾತ್ರಗಳನ್ನು ನಿರ್ವಹಿಸಿ ಅಭಿಮಾನಿಗಳ ಆರಾಧ್ಯ ದೈವ ಎನಿಸಿದ್ದರೂ ಅಭಿಮಾನಿಗಳನ್ನೇ ದೇವರು ಎಂದು ಸಂಬೋಧಿಸಿ ಹೊಸ ಮೇಲ್ಪಂಕ್ತಿಯನ್ನೇ ಹಾಕಿದ ಡಾ.ರಾಜ್ ರವರು ತಮ್ಮ ಮೊದಲ ಬೇಡರ ಕಣ್ಣಪ್ಪ ಚಿತ್ರದ ಅಭಿನಯಕ್ಕೆ ಶ್ರೇಷ್ಠ ನಟ ಎಂದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು ಇಲ್ಲಿ ಸ್ಮರಣೀಯ.
           
ಪೌರಾಣಿಕ ಚಿತ್ರಗಳಲ್ಲಿ ರಾಮನಾಗಿ,ಕೃಷ್ಣನಾಗಿ, ನಾರದ ರಾವಣ ಮಹಿಷಾಸುರ ಹಿರಣ್ಯಕಶ್ಯಪು ಅರ್ಜುನ ಬಬ್ರುವಾಹನ ಮುಂತಾದ ಸವಾಲು ತುಂಬುವ ಪಾತ್ರಗಳಿಗೆ ಜೀವ ತುಂಬಿದವರು. ಐತಿಹಾಸಿಕ ಕಥಾಹಂದರ ಹೊಂದಿದ ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯ, ಮಯೂರ,ಹುಲಿಯ ಹಾಲಿನ ಮೇವು ಮುಂತಾದ ಚಿತ್ರಗಳ ಪಾತ್ರಗಳನ್ನು ಇವರಷ್ಟು ಸಮರ್ಥವಾಗಿ ನಿರ್ವಹಿಸಬಲ್ಲವರು ಮತ್ತೊಬ್ಬರಿಲ್ಲ ಎಂಬ ರೀತಿಯಲ್ಲಿ ನಟಿಸುತ್ತಿದ್ದರು. ಅಣ್ಣಾವ್ರ ಅಭಿನಯ, ಸಂಭಾಷಣೆ ಹೇಳುವ ಶೈಲಿಯಿಂದಲೇ  ಹಿಂದಿನ ಕಾಲದ ವೀರಾಧಿವೀರರ ಗತ್ತು, ರಾಜ ಗಾಂಭೀರ್ಯತೆ, ಯುದ್ಧ ಸಂದರ್ಭದಲ್ಲಿನ ಕತ್ತಿಯ ಕೈಚಳಕ, ದೊಣ್ಣೆಯನ್ನು ಝಳಪಿಸುವ ಮಿಂಚಿನ ಕೌಶಲ್ಯ, ಯುದ್ದ ಕುಸ್ತಿಗಳಲ್ಲಿ ಹಾಕುತ್ತಿದ್ದ ಪಟ್ಟು ಎಲ್ಲವೂ ನೈಜ ಕಾಲದ ಘಟನೆಯೋ ಎಂಬಂತೆ ಭಾಸವಾಗುವ ರೀತಿಯಲ್ಲಿ ಮೂಡಿಬರಲು ಅವರ ಪಾತ್ರಗಳಲ್ಲಿ ಲೀನವಾಗುವ ಸಾಮರ್ಥ್ಯವನ್ನು ಸರ್ವಕನ್ನಡಾಭಿಮಾನಿಗಳೂ ಮೆಚ್ಚಿ ಕೊಂಡಿದ್ದರು.ಮೂಲತಃ ಹೆಚ್ಚು ಅಕ್ಷರ ಜ್ಞಾನ ಹೊಂದಿಲ್ಲದಿದ್ದರೂ ದೀರ್ಘವಾದ ಸಂಭಾಷಣೆಗಳನ್ನು ನೆನಪಿನಲ್ಲಿಟ್ಟುಕೊಂಡು ಹೆಚ್ಚಿನ ಟೇಕ್ ಗಳಿಲ್ಲದೆ ಭಾವಕ್ಕೆ ತಕ್ಕಂತೆ  ಹೇಳುತ್ತಿದ್ದ ಅವರ ಸ್ಮರಣ ಶಕ್ತಿಯನ್ನು ಅನೇಕ ಹಿರಿಯ ನಿರ್ದೇಶಕರು ಮೆಚ್ಚಿಕೊಂಡಿದ್ದರು. ತಮ್ಮ ಅಭಿನಯ ಕಲೆಯಿಂದ ಎಂದೂ ಗರ್ವಪಟ್ಟುಕೊಳ್ಳದೆ ಎಲ್ಲವೂ ಆ ಭಗವಂತನ ಪ್ರೇರಣೆ ಎಂಬುದಾಗಿ ವಿನೀತ ಭಾವ ಹೊಂದಿದ್ದರು.
          
ಡಾ.ರಾಜ್ ಕುಮಾರ್ ರವರ ಸಮಕಾಲೀನ ಕಲಾವಿದರಾದ ಅಶ್ವತ್ಥ್, ಆರ್.ನಾಗೇ೦ದ್ರರಾಯರು, ಬಿ.ಆರ್.ಪಂತುಲು, ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಸೇರಿದಂತೆ ಹಾಸ್ಯ ನಟರಾದ ಬಾಲ ಕೃಷ್ಣ, ನರಸಿಂಹರಾಜುರಂಥವರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದ ಅವರು ಯಾವ ನಿರ್ಮಾಪಕರಿಗೆ ಯಾವುದೇ ತೊಂದರೆ ಕೊಡದೆ ಅವರ ಅನುಕೂಲಕ್ಕೆ ತಕ್ಕಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡು ಸಹಕರಿಸಿದ್ದರು.ಚಿತ್ರ ನಿರ್ಮಾಪಕರನ್ನು ಅನ್ನದಾತರೆಂದೇ ಭಾವಿಸುತ್ತಿದ್ದ ಅಣ್ಣಾವ್ರು ಸಣ್ಣ ಪುಟ್ಟ ಲೋಪಗಳಿಗೆ ಹೆಚ್ಚು ಮಹತ್ವ ನೀಡದೇ ಇತರೆ ಕಲಾವಿದರಿಗೆ ಮಾದರಿಯಾಗಿದ್ದರು.ಅವರಲ್ಲಿ ಶಿಸ್ತು, ಸಜ್ಜನಿಕೆ ಮತ್ತು ಸಮಯ ಪ್ರಜ್ಞೆ ಹಾಗೂ ಅಗಾಧವಾದ ದೈವಭಕ್ತಿ ಮನೆ ಮಾಡಿತ್ತು.
         
ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಪಾಠಶಾಲೆ ಎಂಬ ಮಾತಿನಂತೆ ರಾಜ್ ರವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅನುಭವಿಸಿದ್ದ ಕಷ್ಟ ಸಂಕಷ್ಟಗಳಿಂದ ಸಾಕಷ್ಟು ಅನುಭವ ಗಳಿಸಿಕೂಂಡು ಜೀವನ ಸತ್ಯದ ಸಾರ ತಿಳಿದುಕೊಂಡಿದ್ದರು. ಡಾ.ರಾಜ್ ರವರು ನಟಿಸಿದ ಬಹುಪಾಲು ಚಿತ್ರಗಳು ಕಾದಂಬರಿ ಆಧಾರಿತವಾಗಿಯೇ ಇರುತ್ತಿದ್ದುದು ಅವರ ಸ್ವಯಂ ಆಸಕ್ತಿ ಮತ್ತು ಒತ್ತಾಸೆಯಿಂದ ಎಂಬುದಾಗಿ ಹಿರಿಯ ನಿರ್ದೇಶಕದ್ವಯರಾದ ದೊರೆ ಭಗವಾನ್ ರವರು ಆಗಾಗ ಹೇಳುತ್ತಿದ್ದರು. ಇವರೂಂದಿಗೆ ಕೆಲಸ ಮಾಡುವುದರಿಂದ ಕಾಯಕ ತತ್ವದ ಅರಿವಿನ ಸಾಕ್ಷಾತ್ಕಾರವಾಗುತ್ತದೆ ಎಂದು ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ, ಸಿದ್ಧಲಿಂಗಯ್ಯ,ಸಿಂಗೀತಂ ಶ್ರೀನಿವಾಸ್, ಎಂ.ಎಸ್.ರಾಜಶೇಖರ್ ರಂಥ ದಿಗ್ಗಜ ದಿಗ್ಧರ್ಶಕರು ಆಗಾಗ ಸ್ಮರಿಸುತ್ತಿದ್ದರು.
      
ಚಿತ್ರ ಸಾಹಿತಿ ಚಿ.ಉದಯಶಂಕರ್ ರವರ ಲೇಖನಿ ಅಣ್ಣಾವ್ರ ಚಿತ್ರಗಳ ಸಂಭಾಷಣೆ ಮತ್ತು ಗೀತೆಗಳಿಗೆ ವಿಶೇಷ ಮೆರುಗು ತರುತ್ತಿತ್ತು. ಅವರ ಅಭಿನಯ ಚಾತುರ್ಯಕ್ಕೆ ತಕ್ಕಂತೆ ಚಿತ್ರ ಸಾಹಿತ್ಯ ಬರೆಯುವಲ್ಲಿ ಚಿ.ಉ.ಸಿದ್ಧಹಸ್ತರಾಗಿದ್ದರು. ಇವರಲ್ಲದೆ ಭಕ್ತ ಕುಂಬಾರ, ಬಬ್ರುವಾಹನ ದಂತಹ ಚಿತ್ರಗಳಿಗೆ ಸಮೃದ್ಧ ಸಾಹಿತ್ಯ ಬರೆದ ಹುಣಸೂರು ಕೃಷ್ಣಮೂರ್ತಿಯವರ ಹಾಡು ಸಂಭಾಷಣೆಗಳು ಇಂದಿಗೂ ಕಲಾರಸಿಕರ ನಾಲಿಗೆಗಳಲ್ಲಿ ನಲಿದಾಡುತ್ಥಿವೆ.
           
ಸಂಗೀತ ನಿರ್ದೇಶಕರಾದ ಎಂ.ರಂಗರಾವ್, ರಾಜನ್-ನಾಗೇಂದ್ರ ಉಪೇಂದ್ರಕುಮಾರ್.ಜಿ.ಲಿಂಗಪ್ಪ,ಜಿ.ಕೆ.ವೆಂಕಟೇಶ್ ಮುಂತಾದವರು ಡಾ.ರಾಜ್ ಕುಮಾರ್ ರವರ ಚಿತ್ರಗಳಿಗೆ ವಿಶೇಷ ತಾಲೀಮ ನಡೆಸಿ, ಕಾಳಜಿ ವಹಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದರು.ಸಂಪತ್ತಿಗೆ ಸವಾಲ್ ಚಿತ್ರದವರೆಗೂ ಡಾ.ರಾಜ್ ರವರಲ್ಲಿ ಅದ್ಭುತ ಹಾಡುಗಾರನಿದ್ದಾನೆ ಎಂಬುದು ಬೆಳಕಿಗೆ ಬಂದಿರಲಿಲ್ಲ.ಈ ಕಾರ್ಯವನ್ನು ಜಿ.ಕೆ.ವೆಂಕಟೇಶ್ ರವರು ಯಾರೇ ಕೂಗಾಡಲಿ ಊರೇ ಹೋರಾಡಲಿ….. ಗೀತೆಯನ್ನು ಅಣ್ಣಾವ್ರಿಂದಲೇ ಹಾಡಿಸಿದಾಗ ಆ ಎಮ್ಮೆಯ ಹಾಡೇ ಮುಂದೆ ರಾಜಣ್ಣನವರ ಗಾಯನ ಪಾಂಡಿತ್ಯಕ್ಕೆ ನಾಂದಿ ಹಾಡುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ.ಆದರೆ ಆಗಿದ್ದು ಈಗ ಎಲ್ಲಾ ಕಲಾಭಿಮಾನಿಗಳಿಗೂ ತಿಳಿದೇ ಇದೆ.
          
ಅಲ್ಲಿಯವರೆಗೂ ಡಾ.ರಾಜ್ ಕುಮಾರ್ ರವರ ಅಭಿನಯದ ಗೀತೆಗಳಿಗೆ ಪಿ.ಬಿ.ಶ್ರೀನಿವಾಸ್ ರವರು ಅದ್ಭುತ ಕಂಠಸಿರಿ ತುಂಬುತ್ತಿದ್ದರು. ಡಾ. ರಾಜ್ ರವರ ಶರೀರಕ್ಕೆ ಪಿ.ಬಿ. ಶ್ರೀನಿವಾಸ್ ರವರು ಶಾರೀರ ಎಂಬುದಾಗಿ ಜನಪ್ರಿಯರಾಗಿದ್ದರು.ಅಂತಹ ಅಪರೂಪದ ಸಂಯೋಜನೆಯಲ್ಲಿ ನ್ಯಾಯವೇ ದೇವರು ಚಿತ್ರದ ಆಕಾಶವೇ ಬೀಳಲಿ ಮೇಲೆ ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು , ಗಂಧದ ಗುಡಿಯ,ನಾವಾಡುವ ನುಡಿಯೇ ಕನ್ನಡ, ರಾಜ ನನ್ನ ರಾಜ ಚಿತ್ರದ ನೂರು ಕಣ್ಣು ಸಾಲದು, ಸನಾದಿ ಅಪ್ಪಣ್ಣ ಚಿತ್ರದ ನಾನೇ ತಾಯಿ, ನಾಂದಿ ಚಿತ್ರದ ಹಾಡೊಂದ ಹಾಡುವೆ ನೀ ಕೇಳು ಮಗುವೇ, ದಾರಿ ತಪ್ಪಿದ ಮಗ ಚಿತ್ರದ ಕಣ್ಣಂಚಿನ ಈ ಮಾತಲಿ, ಕಾಪಾಡು ಶ್ರೀ ಸತ್ಯ ನಾರಾಯಣ, ಭಕ್ತ ಕುಂಬಾರದ ಎಲ್ಲಾ ಗೀತೆಗಳು ಬಬ್ರುವಾಹನದ ಯಾರು ತಿಳಿಯರು ನಿನ್ನ ….. ಅಬ್ಬಬ್ಬ ! ಎಷ್ಟೊಂದು ಗೀತರತ್ನಗಳು ? ಇಂದಿಗೂ ಅರ್ಥ ಮತ್ತು ಮಾಧುರ್ಯತೆಯಿಂದ ಮೋಡಿ ಮಾಡಿವೆ. ಅಂದು …. ಇಂದು …. ಎಂದೆಂದೂ ಜನಮಾನಸದಲ್ಲಿ ಶಾಶ್ವತವಾಗಿ ಮನೆ ಮಾಡಿರುವ ಈ ಗೀತೆಗಳು, ಚಿತ್ರಗಳು ನಿತ್ಯ ಹರಿದ್ವರ್ಣದಂತೆ ಸದಾ ಕಾಲ ನಮ್ಮೊಂದಿಗಿರುವಲ್ಲಿ ಸಾಕಷ್ಟು ತಂತ್ರಜ್ಞರ ಪರಿಶ್ರಮದ ಜೊತೆಗೆ ಡಾ. ರಾಜ್ ರವರ ನಟನೆಯ ಮಾಂತ್ರಿಕ ಸ್ಪರ್ಶವಿದೆ.
         
ಸ್ವತಂತ್ರ ಗಾಯಕರಾಗಿ ಹೊರ ಹೊಮ್ಮಿದ ಮೇಲೆ ಅಣ್ಣಾವ್ರು ಹಾಡಿದ ನೂರಾರು ಗೀತೆಗಳು ಸಂಗೀತ ಪ್ರಪಂಚದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ.ಪ್ರತಿಯೊಂದನ್ನೂ ಹೆಸರಿಸಲು ವಿವರಿಸಲು ನೂರಾರು ಪುಟಗಳೇ ಬೇಕಾಗಬಹುದು.ಬಹುಮುಖ್ಯವಾಗಿ ಮಯೂರ ಚಿತ್ರದ ನಾನಿರುವುದೇ ನಿಮಗಾಗಿ…ಗೀತೆಯು ಕನ್ನಡ ಕಲಾಭಿಮಾನಿಗಳಿಗಾಗಿಯೇ ನಾನಿದ್ದೇನೆ ಎಂಬ ಪ್ರೀತಿಯ ಹಾಡಾಗಿ ಉಳಿದಿದೆ.ಗಿರಿಕನ್ಯೆ ಚಿತ್ರದ ಏನೆಂದೂ ನಾ ಹೇಳಲೀ….ಗೀತೆಯು ಮನುಷ್ಯನ ದುಷ್ಟ ಗುಣಗಳ ವರ್ತನೆಯನ್ನು ಅನಾವರಣಗೊಳಿಸುತ್ತದೆ.ರಾಗ ಬ್ರಹ್ಮ ಹಂಸಲೇಖ ಗರಡಿಯಲ್ಲಿ ಪಡಿಮೂಡಿದ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು….ಹಾಡಂತೂ ಕರುನಾಡ ಮೂಲೆ ಮೂಲೆಯಲ್ಲಿ ಮನೆ ಮಾತಾಯಿತು.ಇದು ನಾಡಗೀತೆಯೆಂಬಂತೆ ಜನಪ್ರಿಯವಾಯಿತು.ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ ಹಾಲಿನ ಹೊಳೆಯೋ….. ಗೀತೆಯೂ ಸಹ ಕನ್ನಡ ನುಡಿಯ ಅಭಿಮಾನ ಕುರಿತ ಹಾಡಾಗಿ ಖ್ಯಾತಿ ಪಡೆಯಿತು.ಅಣ್ಣಾವ್ರು ತಾವು ನಟಿಸಿದ ಚಿತ್ರಗಳಿಗೆ ಹಾಡಿದ್ದಷ್ಟೇ ಅಲ್ಲದೆ ನೂರಾರು ಭಾವಗೀತೆಗಳು, ದಾಸರ ಪದಗಳು, ಭಕ್ತಿ ಗೀತೆಗಳಲ್ಲಿಯೂ ತಮ್ಮ ಕಂಠ ಸಿರಿಯಿಂದ ನಾಡಿನ ಜನತೆಗೆ ಮೋಡಿ ಮಾಡಿದರು.ಕುವೆಂಪುರವರ ಎಲ್ಲಾದರು ಇರು…. ಗೀತೆ ತುಂಬಾ ಖ್ಯಾತವಾಗಿದ್ದು ಇಂತಹ ಹಲವಾರು ಕವಿಗಳ ಕವನಗಳು ರಾಜ್ ರವರಿಂದ ಹಾಡಲ್ಪಟ್ಟಿವೆ.ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳು, ಶ್ರೀಗುರು ರಾಯರ ಆರಾಧನಾ ಗೀತೆಗಳು, ಮಲೆ ಮಹದೇಶ್ವರ ಭಜನೆಗಳು ಮುಂತಾದವುಗಳು ನಮ್ಮ ನಾಡಿನ ಮೂಲೆ ಮೂಲೆಗಳಲ್ಲೂ ದಿನ ನಿತ್ಯವೂ ನಮ್ಮ ಕಿವಿಗೆ ಕೇಳಿಸುತ್ತಲೇ ಇರುತ್ತವೆ.ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಳವಡಿಸಿರುವ ಶ್ಲೋಕಗಳಂತಹ ಸಂಗೀತ ಪ್ರಧಾನ ಹಾಡುಗಳನ್ನು ಸಂಗೀತಗಾರರಿಗೆ ಸಮನಾಗಿ ಹಾಡಿ ತಮ್ಮ ಪಾಂಡಿತ್ಯ ಮೆರೆದ ಅಣ್ಣಾವ್ರು ಜೀವನ ಚೈತ್ರದ ನಾದಮಯಾ
…. ಹಾಡಿಗಾಗಿ ರಾಷ್ಟ್ರ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದು ಅವರ ಗಾಯನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ನಾಯಕ-ಗಾಯಕರಾಗಿ ನಾಡಿನಾದ್ಯಂ ತ ಹೆಸರು ಪಡೆದ ರಾಜ್ ರವರು ನಾಡಿನ ಅಭಿಮಾನಿಗಳ ಆರಾಧ್ಯ ದೈವವಾಗುವುದರೊಂದಿಗೆ ಕನ್ನಡನಾಡು, ನುಡಿಯಂತಹ ವಿಷಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಶಕ್ತಿಯಾಗಿಯೂ ಬೆಳೆದಿದ್ದರು.

ಡಾ.ರಾಜ್ ರವರು ಯಶಸ್ಸಿನ ಮೆಟ್ಟಿಲೇರುತ್ತಿದ್ದಂತೆ ಅವರ ಅಭಿಮಾನಿ ಸಂಘಗಳು ರಾಜ್ಯದೆಲ್ಲೆಡೆ ಸ್ಥಾಪಿಸಲ್ಪಟ್ಟು ಸಮಾಜ ಸೇವಾ ಕಾರ್ಯಗಳನ್ನೂ ಮಾಡುವಲ್ಲಿ ಅಣ್ಣಾವ್ರು ಪ್ರೇರಕ ಶಕ್ತಿಯಾಗಿದ್ದರು.ಇಂತಹ ಸಂಘ, ಸಂಘಟನೆಗಳಿಗೆ ನೈತಿಕ ಮತ್ತು ಆರ್ಥಿಕ ನೆರವು ನೀಡುತ್ತಾ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಯಾವುದೇ ಸಂದರ್ಭದಲ್ಲಿ ಎದುರಾಗುತ್ತಿದ್ದ ಪ್ರಕೃತಿ ವಿಕೋಪಗಳಾದ ಭೂಕಂಪ , ನೆರೆಹಾವಳಿ , ಅತಿವೃಷ್ಟಿ , ಅನಾವೃಷ್ಟಿ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯವನ್ನು ಅಭಿಮಾನಿ ಸಂಘಗಳ ಮೂಲಕ ಮತ್ತು ವೈಯಕ್ತಿಕವಾಗಿ ಮಾಡುತ್ತಿದ್ದ ರಾಜ್ ರವರು ನೆರೆ ರಾಜ್ಯಗಳೊಂದಿಗೆ ಉದ್ಭವಿಸುತ್ತಿದ್ದ ಗಡಿ ವಿವಾದ ,ಕಾವೇರಿ ಜಲ ವಿವಾದಗಳಲ್ಲಿ  ಕನ್ನಡ ನಾಡಿನ ಧ್ವನಿಯಾಗಿ , ನಾಯಕತ್ವ ವಹಿಸುತ್ತಿದ್ದ ಡಾ. ರಾಜ್ ರವರು ಕನ್ನಡ ಮಾಧ್ಯಮ ಶಿಕ್ಷಣದ ಪರವಾದ ಗೋಕಾಕ್ ಚಳುವಳಿಯಲ್ಲಿ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ನಾಡಿನ ಜನತೆಯನ್ನು ಒಟ್ಟುಗೂಡಿಸಿ ಹುರಿದುಂಬಿಸಿದ್ದು ಸ್ವಾತಂತ್ರ್ಯಚಳುವಳಿಗೆ ಗಾಂಧೀಜಿ ಸ್ಪೂರ್ತಿ ತುಂಬಿದಂತೆ ಗೋಕಾಕ್ ಚಳುವಳಿಗೆ ಡಾ.ರಾಜ್ ಚೈತನ್ಯ ನೀಡಿದ್ದು ಸ್ಮರಣೀಯ.

ಇಂತಹ ದೇವತಾ ಮನುಷ್ಯನನ್ನು ವೀರಪ್ಪನ್ ಎಂಬ ನರಹಂತಕ ಅಪಹರಿಸಿದಾಗ ಇಡೀ ಕನ್ನಡ ನಾಡೇ ಶೋಕ ಸಾಗರದಲ್ಲಿ ಮುಳುಗಿತು. ಆಗ ಅಭಿಮಾನಿಗಳು ಚಡಪಡಿಸಿದ ರೀತಿ ಮನೆ ಮಗನ ವಿಯೋಗದಂತೆ ಭಾಸವಾಗಿತ್ತು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿನವರು ವೀರಪ್ಪನ್ ಮೂಲಕ ನಡೆಸಿದ ಕುತಂತ್ರ ಯಶಸ್ವಿಯಾಯಿತು. 108 ದಿನಗಳವರೆಗೆ ಬಂಧನದಿಂದ ಸುರಕ್ಷಿತವಾಗಿ ಬಂದು ಕನ್ನಡ ಜನತೆ ನಿಟ್ಟುಸಿರು ಬಿಡುವಂತಾಯಿತು.

ಇಂತಹ ಅದ್ಭುತ ನಟ, ಅಪೂರ್ವ ಕಲಾವಿದ ಅಜಾತ ಶತ್ರು ಅಸಾಮಾನ್ಯ ಗಾಯಕ ಅಣ್ಣಾವ್ರು 2006ರ ಏಪ್ರಿಲ್ 12ರಂದು ವಿಧಿವಶರಾದಾಗ ಹಲವಾರು ದಿನಗಳವರೆಗೂ ಕರುನಾಡ ಮನೆ ಮನೆಯಲ್ಲಿ ಸೂತಕದ ಛಾಯೆ ತುಂಬಿತ್ತು.ಇದೀಗ ಅವರ ಎಂಟನೇ ವರ್ಷದ ಪುಣ್ಯತಿಥಿಯ ಸಂದರ್ಭ. ಈಗಾಗಲೇ ಅಣ್ಣಾವ್ರ ಪವಿತ್ರ ಸಮಾಧಿಯನ್ನು ಸ್ಮಾರಕವನ್ನಾಗಿ ನಿರ್ಮಿಸುವ ಇರಾದೆ ಸರ್ಕಾರ ಹಾಗೂ ಅಣ್ಣಾವ್ರ ಕುಟುಂಬ ವರ್ಗಕ್ಕಿದ್ದು ಈ ಕಾರ್ಯ ಪ್ರಗತಿಯಲ್ಲಿದೆ. ಅವರ ಸ್ಮಾರಕ ಕನ್ನಡಿಗರ ಪ್ರತೀಕದಂತೆ ನಿರ್ಮಾಣವಾಗಲೆಂದು ಆಶಿಸುತ್ತಾ ಹುಟ್ಟಿದರೆ ಕನ್ನಡ ನಾಡಲ್ಲಿ ಮತ್ತೊಮ್ಮೆ ಹುಟ್ಟಿಲಿ ಎಂದು ಪ್ರಾರ್ಥಿಸೋಣ.

>>>ಹೊ.ರಾ.ಪರಮೇಶ್ ಹೊಡೇನೂರು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x