ಅಡೆತಡೆಗಳನ್ನು ದಾಟಿ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ: ಪ್ರಭಾಕರ ತಾಮ್ರಗೌರಿ

 
ಇಂದು ದೇಶದಲ್ಲಿ ಎಷ್ಟೊಂದು ವಿಕಲಾಂಗ ಚೇತನರಿದ್ದಾರೆ. ಕಣ್ಣಿಲ್ಲ, ಮೂಗಿಲ್ಲ, ಮಾತನಾಡಬೇಕೆಂದರೆ ಬಾಯಿಇಲ್ಲ.ಎದ್ದು ನಡೆದಾಡಬೇಕೆಂದರೆ ಕಾಲು ಇಲ್ಲ. ಏನಾದರೂ ಕೆಲಸ ಮಾಡಬೇಕೆಂದರೆ ಕೈ ಇಲ್ಲ. ಇಂಥವರನ್ನ ನೋಡಿದರೆ ಪಾಪ ಅಯ್ಯೋ ಅನ್ನಿಸುತ್ತೆ. ಇವರನ್ನ ನೋಡಿದರೆ ಅಂತಃಕರಣ ಜುಂ ಎನ್ನುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಂಗ ವೈಫಲ್ಯದಿಂದ ಬಳಲುತ್ತಿರುವ ಈ ಮಕ್ಕಳು ಆದಾರೋಪಕ್ಕೆ ಬಲಿಯಾದವೋ ಗೊತ್ತಿಲ್ಲ…? ಎಲ್ಲ ಮಕ್ಕಳಂತೆ  ಇವರು ಬಾಲ್ಯದ ಸುಮಧುರ ಜೀವನ ಕಳೆಯಬೇಕಾಗಿದ್ದ ಈ ಮಕ್ಕಳು ಎಲ್ಲವುಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು ದೇವರು ಮಕ್ಕಳಿಗೆ ಕೊಟ್ಟ ಶಾಪವೋ ಅಥವಾ ಪಾಲಕರಿಗೆ ಕೊಟ್ಟ ಶಾಪವೋ ಎಂದು ಪಾಲಕರು ಅವರನ್ನು ನೋಡಿ ದಿನಾಲೂ ಕಣ್ಣೀರು ಸುರಿಸುವಂತಾಗಿದೆ.  
 
ಇಂಥ ಮಕ್ಕಳು ಪಾಲಕರಿಗೆ ಸವಾಲಾಗುತ್ತಾರೆ. ಇವರ ಸಹಾಯಕ್ಕೆ ಮತ್ತೊಬ್ಬರು ಬೇಕೇ ಬೇಕು. ಮತ್ತೊಬ್ಬರ ಸಹಾಯವಿಲ್ಲದಿದ್ದರೆ ಏನೂ ಮಾಡಲಾಗದು.ಇವರು ತಮ್ಮ ಕೈಯಿಂದ ಒಂದು ಲೋಟ ನೀರು ಸಹ ತೆಗೆದುಕೊಳ್ಳದಷ್ಟು ಅಸಹಾಯಕರಾಗಿರುತ್ತಾರೆ. ಇಂತಹ ಮಕ್ಕಳಿಗೆ ಯಾರಾದರೂ ಒಬ್ಬರು ಬೆನ್ನೆಲುಬಾಗಿ ಬೇಕೇ ಬೇಕು. ಇವರ ಸಮಸ್ಯೆಗಳನ್ನ ನೋಡಿದರೆ ಎಂತಹ ಕಠಿಣ ಹೃದಯದವರಿಗೂ ಮನ ಕರಗುತ್ತದೆ. ಇವರಲ್ಲಿ ಕೆಲವರು ಹುಟ್ಟಿದಾಗಿನಿಂದ ಸಮಸ್ಯೆಗಳನ್ನ ಅನುಭವಿಸುತ್ತಿದ್ದರೆ , ಕೆಲವರು ಪೋಲಿಯೋದಿಂದ ಅನುಭವಿಸುತ್ತಿದ್ದಾರೆ. ಇವರ ಸಮಸ್ಯೆ ಹೇಳತೀರದು. ಇವರಿಗೆ ಆಗುವ ತೊಂದರೆಗಳನ್ನು ಸಾಮಾನ್ಯ ಮಕ್ಕಳಂತೆ ಯಾರಿಗೂ ಹೇಳಲು ಆಗುವುದಿಲ್ಲ. ಅವರು ತಮ್ಮ ಸಂಕಟವನ್ನು ತಾವೇ ಅನುಭವಿಸುತ್ತಾರೆ. ತಮ್ಮ ಸಮಸ್ಯೆಗಳನ್ನು ಅಳುವುದರ ಮೂಲಕವಾದರೂ ವ್ಯಕ್ತಪಡಿಸಬೇಕೆಂದರೂ ಈ ಮಕ್ಕಳಿಗೆ ಕೆಲವೊಂದು ಸಂದರ್ಭದಲ್ಲಿ ಆಗುವುದಿಲ್ಲ.  
 
ಇವರಿಗೆ ಹಸಿವಾದರೂ ಹೇಳುವ ಶಕ್ತಿಯಿಲ್ಲ ಪಾಲಕರೇ ತಿಳಿದು ಇವರಿಗೆ ಊಟ ಮಾಡಿಸಬೇಕು. ಸರಿಯಾಗಿ ನಿದ್ದೆ ಇಲ್ಲ. ಸರಿಯಾಗಿ ಊಟ ಇಲ್ಲ…..ಇದ್ದೂ ಇಲ್ಲದಂತೆ. ಒಂದರ್ಥದಲ್ಲಿ ಜೀವಂತ ಶವ ಇದ್ದ ಹಾಗೆ…! ಕೆಲವೊಂದು ಸಲ ಅವಲಂಬನೆ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ  ಅನ್ನುವ ಮಟ್ಟಿಗೆ ಬದುಕುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಬೆಳ್ಳಿ ಹಬ್ಬದಲ್ಲಿ ವಿಶೇಷ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಇಂತಹ ನೂರಾರು ಮಕ್ಕಳು ಬಂದಿದ್ದರು. ಕರ್ನಾಟಕ ಮಕ್ಕಳ ಆಯೋಗದಿಂದ ಕರ್ನಾಟಕ ರಾಜ್ಯದ ಜಿಲ್ಲೆಗಳಿಂದ ಇಬ್ಬರು ಮಕ್ಕಳನ್ನು ಆಯ್ದು ಅವರ ಸಮಸ್ಯೆ ಏನು…? ಅದಕ್ಕೆ ಪರಿಹಾರ ಏನು ? ಎಂಬ ಕುರಿತು ಚರ್ಚೆ ನಡೆಯಿತು.  
 
ಈ ಚರ್ಚೆಯಲ್ಲಿ ಸುಮಾರು ಅರವತ್ತು [60] ಜನ ಅಂಗ ವೈಫಲ್ಯ ಮಕ್ಕಳು ಬಂದಿದ್ದರು. ಬುದ್ದಿಮಾಂದ್ಯ ಮಕ್ಕಳು, ಮಾನಸಿಕ ಅಸ್ವಸ್ತ ಮಕ್ಕಳು, ಶ್ರವಣ  ದೋಷ  ಮಕ್ಕಳು, ದೃಷ್ಟಿದೋಷ ಮಕ್ಕಳು, ಇನ್ನೂ ಯಾರಾರೋ…….:' ನಮ್ಮ ದೇಶದಲ್ಲಿ ಇಂತಹ ಮಕ್ಕಳು ಸಾವಿರಾರು ಜನ ನಮ್ಮ ನಡುವೆ ಇದ್ದಾರೆ ಅಂದರೆ ತಪ್ಪಾಗಲಾರದು. ಒಬ್ಬೊಬ್ಬರು ಒಂದೊಂದು ತೊಂದರೆಯಿಂದ ಬಳಲುತ್ತಿದ್ದಾರೆ. ಇವರಿಗೆ ತಮ್ಮ ಯಾವುದೇ ಕೆಲಸ ಮಾಡಿಕೊಳ್ಳಲು ಬರುವುದಿಲ್ಲ. ಇವರ ಪ್ರತಿಯೊಂದು ಕೆಲಸಕ್ಕೂ ಒಬ್ಬರು ಬೇಕೇ ಬೇಕು. ಇವರು ಏನು ಮಾಡುತ್ತಾರೆ ಎಂದು ಇವರಿಗೆ ತಿಳುವಳಿಕೆ ಇಲ್ಲ.ತಮ್ಮದೇ ಆದ ಪ್ರಪಂಚದಲ್ಲಿ ಇವರು ಬದುಕುತ್ತಿದ್ದಾರೆ.ಇಂತಹ ಮಕ್ಕಳ ಆರೋಗ್ಯವೂ ಮುಖ್ಯವಾಗಿರುತ್ತವೆ. 
  
ಇಂತಹ ಮಕ್ಕಳ ಆರೋಗ್ಯದ ಖರ್ಚಿಗಾಗಿ ಸರ್ಕಾರ ಇವರಿಗೆ ತಿಂಗಳಿಗೆ 200 ರಿಂದ 1500 ರೂಪಾಯಿವರೆಗೂ ಪಿಂಚಣಿ ಕೊಡುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ. ಸಂಬಂಧಪಟ್ಟ ಇಲಾಖೆಗೆ ಹೋಗಿ ಅಲ್ಲಿ ಹಳದಿ ಕಾರ್ಡು ಹಿಡಿದು ನಿಲ್ಲಬೇಕು. ಆಮೇಲೆ ಆಧಾರ್ ಕಾರ್ಡ್ ಮಾಡಿಸಬೇಕು.ಆಮೇಲೆ ಅದನ್ನ ಸಂಬಂಧ ಪಟ್ಟ ಇಲಾಖೆಗೆ ಕೊಟ್ಟು ಆಮೇಲೆ ಕಾಲಾವಕಾಶ ತೆಗೆದುಕೊಂಡು ಮೊದಲು 200 ರೂಪಾಯಿ ಕೊಡುತ್ತಾರೆ. ಆರು ತಿಂಗಳ ನಂತರ 500 ರೂಪಾಯಿ ಕೊಡುತ್ತಾರೆ. ಮೂರು ವರ್ಷದ ಮೇಲೆ 1500 ರೂಪಾಯಿ ಕೊಡುತ್ತಾರೆ. 
  
ಶ್ರಮ, ಛಲ, ಮತ್ತು ಗುರಿ ಎಂಬ ಎರಡಕ್ಷರಗಳ ಈ ಮೂರು ಪದಗಳನ್ನು ಶ್ರದ್ದೆಯಿಂದ ಬೆನ್ನು ಹತ್ತಿದಲ್ಲಿ ಯಶಸ್ಸು ಮತ್ತು ಸಾಧನೆ ಎನ್ನುವ ಮೂರಕ್ಷರಗಳ ಪದಗಳು ಮುಡಿಗೇರುತ್ತವೆ. ಈ ಮಾತು ಸತ್ಯ ! ! ವಿಶ್ವದ ನಾನಾ ರಂಗಗಳಲ್ಲಿನ ಅದ್ವಿತೀಯ ಸಾಧಕರ ಜೀವನ ಚರಿತ್ರೆಗಳನ್ನು ಗಮನಿಸಿದಾಗ ಇದು ಸತ್ಯ ಅನ್ನುವುದು ಗೋಚರವಾಗುತ್ತದೆ. ಅಡೆತಡೆಗಳನ್ನು ದಾಟಿ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ ಸಾಧನೆಯ ಹಾದಿಯಲ್ಲಿನ ಪಯಣ ಸಾಧ್ಯ ಎನ್ನುವುದು ಮತ್ತೊಂದು ಮಾತು. ಅವರ ಭವಿಷ್ಯ ಸುಂದರವಾಗಿರಲಿ. ಅವರ ಸಾಧನೆಯ ಹಾದಿ ಯಾವುದೇ ಆಗಿರಲಿ ಇನ್ನಷ್ಟು, ಮತ್ತಷ್ಟು ಸುಗಮವಾಗಲಿ ಎಂದು ನಾವೆಲ್ಲಾ ಹಾರೈಸೋಣ….! 
 
ಪ್ರಭಾಕರ ತಾಮ್ರಗೌರಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x