ಅಡುಗೆ ಮನೆ ಅವಾಂತರಗಳು: ಶ್ರೇಯ ಕೆ. ಎಂ.


ಅಡುಗೆ ಮನೆ ಎಂದರೆ ಹೆಣ್ಣುಮಕ್ಕಳ ಆವಾಸ ಸ್ಥಾನ ಅಂತಾನೆ ಹಿಂದಿನಿಂದಲೂ ಬಂದಂತಹ ನುಡಿ, ಎಷ್ಟೇ ಉದ್ಯೋಗಸ್ಥ ಮಹಿಳೆಯಾದರೂ ಅಡುಗೆ ಮನೆ ಅನ್ನುವುದು ಅವಳ ಇನ್ನೊಬ್ಬ ಸ್ನೇಹಿತೆ. ಮಹಿಳೆ ಎಷ್ಟೇ ಉನ್ನತ ಹಂತದಲ್ಲಿ ಇದ್ದರೂ ಆಕಾಶದೆತ್ತರಕ್ಕೆ ಹಾರಾಡುತ್ತಿದ್ದರೂ ಅಡುಗೆ ಮನೆ ಎಂಬ ಮಾಯೆಗೆ ಅವಳು ಬರಲೇ ಬೇಕು, ಇಂತಹ ಅಡುಗೆ ಮನೆಯಲ್ಲಿ ನಡೆಯುವ ಅವಾಂತರಗಳ ಬಗ್ಗೆ ನೋಡೋಣ ಬನ್ನಿ.

ನಾನು ಈ ಹೆಸರಿನ ಬದಲಾಗಿ ಅಡುಗೆ ಮನೆಯ ಕಲರವ ಅಂತ ಹೇಳುತ್ತೇನೆ … ಯಾಕೆಂದರೆ ನಮ್ಮ ಅಡುಗೆ ಮನೆಯಲ್ಲಿ ಬೆಳಗ್ಗೆ ಎದ್ದ ಕೂಡಲೇ ಹಲವಾರು ರೀತಿಯ ಕಲರವಗಳ ಸುರಿಮಳೆಯೇ ಸುರಿಯುತ್ತದೆ. ಒಂದೊಂದಾಗಿ ಹೇಳುತ್ತಾ ಹೋಗುತ್ತೇನೆ…

ನಮ್ಮ ಅಡುಗೆ ಮನೆ ಎಂಬ ಅರಮನೆಯಲ್ಲಿ ಬೆಳಗ್ಗೆ ಎದ್ದಕೊಡಲೇ ಶುರುವಾಗುವುದು ರೇಡಿಯೋ ಎಂಬ ಮಾಯಾಜಾಲ. ಅದಾದ ಕೊಡಲೇ ನಮ್ಮ ಅಡುಗೆ ಮನೆಯ ಹಿಂದೆ ಒಂದು ದೇವಸ್ಥಾನ ಇದೆ ಅವರೋ 7 ಗಂಟೆಗೆಲ್ಲ ಭಕ್ತಿಗೀತೆಗಳನ್ನ ಜೋರಾಗಿ ಹಾಕುತ್ತಾರೆ. ಆ ನಂತರ ನಮ್ಮ ಅಡುಗೆ ಶುರುವಾಯ್ತು ಅಂದರೆ ನಮ್ಮ ಅಡುಗೆ ಮನೆಯ ರಾಣಿ ಚಿಮಣಿ ಆನ್ ಆಗ್ತಾಳೆ. ಅದರ ಜೊತೆ ಮಿಕ್ಸಿ ಸೌಂಡ್ ಮಾಡತ್ತೆ. ಅಷ್ಟೇ ಸಾಲದೆಂಬಂತೆ ನೀರಿನ ಅಕ್ವ ಗಾರ್ಡ್ ಗೆ ನೀರು ತುಂಬಲು ಸ್ವಿಚ್ ಆನ್ ಮಾಡಿದರೆ ನೀರು ಬೀಳುವ ಸದ್ದು… ಅದರ ನಡುವೆ ತಿಂಡಿ ಮಾಡುತ್ತ ಮಕ್ಕಳಿಗೆ ಓದಿಸುವ ಪರಿ., ಅದರ ನಡುವೆ ನಾವೇನು ಕಮ್ಮಿ ಅಂತ ತರಹೇವಾರಿ ಪಾತ್ರೆಗಳ ಸದ್ದು, ಈಗ ಹೇಳಿ ನಮ್ಮ ಅಡುಗೆ ಮನೆಯಲ್ಲಿ ಎಷ್ಟೊಂದು ರೀತಿಯ ಕಲರವಗಳು.. ಈ ಕಲರವಗಳ ನಡುವೆ ನಮ್ಮ ಅಡುಗೆ ಮನೆಯಲ್ಲಿ ಆಗುವ ಅವಾಂತರಗಳೋ ಲೆಕ್ಕವೇ ಇಲ್ಲ.. ಒಂದೊಂದೇ ನೆನಪು ಮಾಡಿಕೊಳ್ಳುತ್ತಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಏನ್ರೀ ಮಾರಾಯ್ರೆ ಹೆಣ್ಣು ಮಕ್ಕಳಿಗೆ ಅಡುಗೆಯ ಗೋಳು ಮುಗಿಯಲಾರದ ಕಥೆಯೋ ಏನೋ ತಿಳೀತಿಲ್ಲ.. ಹೀಗೆ ಮೊನ್ನೆ ಮುಖಪುಟದಲ್ಲಿ ಏನೋ ಕೊಟ್ಟಿದ್ರು ಅದ್ರಲ್ಲಿ ಬರೆದಿರೋದನ್ನ ಓದುತ್ತ ಇದ್ದೆ. ಹಾಗೆ 11ಗಂಟೆಗೆ ಇಡ್ಲಿ ಬೇಯಿಸಲು ಇಟ್ಟು ರೂಮಲ್ಲಿ ಬಂದು ಕುತ್ಕೊಂಡು ಓದುತ್ತ ಇದೀನಿ ಇಡ್ಲಿ ಇಟ್ಟ ಪರಿವೆಯೇ ಇಲ್ಲ. 11.45 ಅಥವಾ 12 ಆಗಿತ್ತೇನೋ ನಮ್ಮತ್ತೆ ಯಾಕೋ ಅಡುಗೆ ಮನೆಗೆ ಬಂದವರು ಎಸ್ಟ್ ಗಂಟೆಗೆ ಇಟ್ಟಿದ್ದೆ ಇಡ್ಲಿ ಪಾತ್ರೆ ಅಂದ್ರು. ಅಬ್ಬಾ ಅವಾಗ ನೆನಪಾಯ್ತು ನೋಡಿ ಇಡ್ಲಿ ಇಟ್ಟಿದ್ದು. ಮೊಬೈಲ್ ಅಲ್ಲೇ ಇಟ್ಟು ಅಡುಗೆ ಮನೆಗೆ ಹೋಗಿ ನೋಡಿದರೆ ಪಾತ್ರೆ ಇಂದ ಹೊಗೆ ಬಂದು ಅಡುಗೆ ಮನೆ ಸುತ್ತುವರೆದಿದೆ. ತಕ್ಷಣ ನಮ್ಮ ರಾಣಿ ಚಿಮಣಿ ಆನ್ ಮಾಡಿ ಪಾತ್ರೆ ಕೆಳಗಿಳಿಸಿ ಓಪನ್ ಮಾಡಿಧೆ.. ಅಬ್ಬಾ ನನ್ನ ಅದೃಷ್ಟ ಯಾಕೆಂದರೆ ನೀರು ತುಂಬಾ ಹಾಕಿದ್ದೆ, ನೀರೆಲ್ಲ ಕಾಲಿ ಆಗಿ ಲಾಸ್ಟ ಪ್ಲೇಟ್ ಮಾತ್ರ ಕರಕಲಾಗಿ ಚುಕ್ಕಿ ರಂಗೋಲಿ ಥರ ಆಗ್ಬಿಟ್ಟಿತ್ತು. ಬೇಗ ಬೇಗ ಇನ್ನುಳಿದ ಇಡ್ಲಿ ತಗೆದು ತೊಳೆಯಲು ಪಾತ್ರೆ ಇಟ್ಟೆ. ಆ ಲಾಸ್ಟ ಪ್ಲೇಟ್ ಪಾಪ ಇನ್ನೂ ವಾಶ್ ಬೇಸಿನ್ ನಲ್ಲಿ ನೆನಿತಾನೆ ಇದೆ.

ಇನ್ನೂ ನಾ ಮದುವೆ ಆಗಿ ಬಂದ ಹೊಸತು.. ಮದುವೆಗಿಂತ ಮುಂಚೆ ಓದು ಕಾಲೇಜು ಅಷ್ಟೇ. ಸ್ವಲ್ಪ ಸ್ವಲ್ಪ ಅಡುಗೆ ಬರ್ತಿತ್ತು. ಒಮ್ಮೊಮ್ಮೆ ಏನೋ ಮಾಡೋಕೆ ಹೋಗಿ ಏನೇನೋ ಆಗಿದ್ದು ಇದೆ… ಆದರೆ ಒಂದ್ಸಾರಿ ಬೋಂಡಾ ಮಾಡೋಕೆ ನಮ್ ಮೈದುನ ಹೇಳಿದರು.. ಅಲ್ಲಿವರೆಗೂ ನಮ್ಮ ಅಕ್ಕ ಬೋಂಡಾ ಮಾಡ್ತಿದ್ದದು. ಅಕ್ಕ ಅಂದರೆ ನಾವಿಬ್ರು ಅವಳಿ ಸಹೋದರಿಯರು ಒಂದೇ ಮನೆಗೆ ಸೊಸೆಯರಾಗಿ ಬಂದಿರೋದು. ಅವಳು ಬಾಣಂತನಕ್ಕೆ ಊರಿಗೆ ಹೋಗಿದ್ಲು.. ಏನ್ ಪಜೀತಿ ಎಪ್ಪಾ ನಾ ಬೋಂಡಾ ಮಾಡಬೇಕು ಸರಿ ಮಾಡೋಣ ಅಂತ ಹಿಟ್ಟು ಕಲಿಸಿ ಒಂದು ಮೆಣಸಿನಕಾಯಿ ಅದ್ದಿ ಬಿಟ್ಟೆ. ತೆಳು ಮೆಣಸಿನಕಾಯಿ ಹೇಗಿದೀಯೋ ಹಾಗೆ ಇದೆ ಸ್ವಲ್ಪಾನು ಉಬ್ಬಲಿಲ್ಲ ಸೋಡಾ ಪುಡಿ ಹಾಕೋದು ಮರ್ತಿದ್ದೆ. ಆಮೇಲೆ ಹಾಕಿದೆ. ಅವಾಗ ಬುರ ಬುರ ಉಬ್ಬಿ ದೊಡ್ಡ ದೊಡ್ಡ ಬೋಂಡಾ ಅಯ್ತು ಸರಿ ಅವರಿಗೆ ತಿನ್ನೋಕೆ ಕೊಟ್ಟೆ.. ಅವರು ತಿಂತಾರೆ ಕಹಿ ಕಹಿ ಬೋಂಡಾ ಅಂದರೆ ಸೋಡಾ ಪುಡಿ ಜಾಸ್ತಿ ಆಗೋಗಿದೆ ಎಲ್ಲಾ ತಗೊಂಡು ಹೋಗಿ ಚರಂಡಿಗೆ ಚೆಲ್ಲಿದ್ದಾಯ್ತು…

ಇನ್ನೂ ನಮ್ಮ ಮದುವೆಗಿಂತ ಮುಂಚೆ ನಮ್ಮನೆಯಲ್ಲಿ ಗಣಪತಿ ಹಬ್ಬ ಅಂದ್ರೆ ತುಂಬಾ ಜೋರು. ಮೂರು ದಿನ ಗಣಪನನ್ನ ಕೂರಿಸಿದರೆ ಒಂದು ದಿನಕ್ಕೆ ಐವತ್ತು ಅರವತ್ತು ಜನರು ಊಟಕ್ಕೆ ಬರೋರು.. ಹೀಗೆ ಒಂದು ವರ್ಷ ನಮ್ಮ ದೊಡ್ಡಮ್ಮನ ಮಗಳಿಗೆ ಅಡುಗೆ ಮಾಡೋಕೆ ಬಿಟ್ಟಿದ್ದೆ. ಅವಳು ಎಲ್ಲಾ ಸಾರು ಪಲ್ಯಗಳಿಗೆ ಒಳ್ಳೆಣ್ಣೆಲಿ ಒಗ್ಗರಣೆ ಹಾಕೋ ಬದಲು ಅಲ್ಲಿಯೇ ಇನ್ನೊಂದು ಡಬ್ಬದಲ್ಲಿದ್ದ ಹರಳೆಣ್ಣೆ ಇಂದ ಒಗ್ಗರಣೆ ಹಾಕಿದ್ದಾಳೆ. ಪಾಪ ಬಂದ ನೆಂಟರೆಲ್ಲರೂ ಊಟ ಮಾಡಿಕೊಂಡು ಹೋದರು. ಕೊನೆ ಪಂಕ್ತಿ ಗೆ ಮನೆಯವರು ಕೂತಾಗ ನಮ್ಮ ಅಪ್ಪಾಜಿ ವಾಸನೆ ರುಚಿ ಎರಡು ಕಂಡು ಹಿಡಿದು ಯಾರು ಒಗ್ಗರಣೆ ಹಾಕಿದ್ದು ಹರಳೆಣ್ಣೆಯಿಂದ ಅಂತ ಜೋರಾಗಿ ಕೇಳಿದರು. ಆವಾಗ್ಲೇ ಗೊತ್ತಾಗಿದ್ದು ಎಲ್ಲರಿಗೂ ಹರಳೆಣ್ಣೆ ಒಗ್ಗರಣೆ ಅಂತ.. ಆಮೇಲೆ ಯಾವದೇ ಕಾರ್ಯಕ್ರಮ ಇದ್ದರು ಈ ಪ್ರಸಂಗ ನೆನಪು ಮಾಡಿಕೊಂಡು ನಗೋದೇ ಆಗತ್ತೆ… ಹಾಗೆ ಅದೇ ಅಕ್ಕ ನಮ್ಮ ಮದುವೆ ಆದಮೇಲೆ ನಮ್ಮ ಗಂಡನ ಮನೆಗೆ ಯಾವುದೊ ಕಾರ್ಯಕ್ರಮಕ್ಕೆ ಕರೆದಾಗ ಪಾಯಸ ಮಾಡಲು ಹೋಗಿ ಪಾಯಸಕ್ಕೆ ಸಕ್ಕರೆ ಬದಲು ಉಪ್ಪು ಹಾಕೋದ :::!!ಅಬ್ಬಾ ಈ ಅವಾಂತರಗಳೆಲ್ಲ ಒಂದ ಎರಡ ಹೇಳುತ್ತಾ ಹೋದರೆ ಇನ್ನೂ ಸಾಕಷ್ಠಿದೆ.

ಇನ್ನೂ ಈ ಮೊಬೈಲ್ ಬಂದಮೇಲೆ ಅವಾಂತರಗಳು ಇನ್ನೂ ಹೆಚ್ಚು. ಮೊದಲೆಲ್ಲ ಕಥೆ ಕಾದಂಬರಿ ಓದುತ್ತ ಎಷ್ಟೋ ಪಾತ್ರೆಗಳೆಲ್ಲ ಸೀದು ಹೋಗುತ್ತಿದ್ದವು. ಈಗ ಈ ಮೊಬೈಲ್ ಎಂಬ ಮಾಯೆಯಲ್ಲಿ ಪಾಪ ಪಾತ್ರೆಗಳು ಎಷ್ಟು ಬೈಕೊಳ್ಳುತ್ತಿದ್ದಾವೋ ಆ ದೇವರಿಗೆ ಗೊತ್ತು. ಆ ಪಾತ್ರೆಗಳಿಗೇನಾದರೂ ಜೀವ ಇದ್ದಿದ್ರೆ ನಮಗೆ ಎಷ್ಟು ಶಾಪ ಹಾಕ್ತಿಧ್ವೋ ಏನೋ.. ಇತ್ತೀಚಿಗೆ ಎರಡು ವರುಷದಿಂದ ನನ್ನ ಆನ್ಲೈನ್ ಪರ್ಚೇಸಿಂಗ್‌ ಬಿಸಿನೆಸ್ ಮೊಬೈಲಲ್ಲೇ… 10 ಗಂಟೆಗೆ ತಿಂಡಿ ಮುಗ್ಸಿ ಮೊಬೈಲ್ ಹಿಡ್ಕೊಂಡ್ರೆ ಅಡುಗೆ ಮನೆ ಕಾಯ್ತ ಇರತ್ತೆ. ಒಂದು ಗಂಟೆ ಆದರೂ ಈ ಶ್ರೇಯ ಎಲ್ಲೋದ್ಲು ಅಡುಗೆ ಮಾಡೋಕೆ ಬರ್ತಾಇಲ್ವಲ್ಲ ಅಂತ… ಒಂದು ಗಂಟೆಗೆ ಹೋದೆನೋ ಎಷ್ಟು ಬೇಗ ಅಡುಗೆ ಮುಗಿಯುತ್ತೋ ಅಂತ ಕೈ ಎಲ್ಲಾ ಸುಟ್ಟುಕೊಳ್ತಾ ಬೇಗ ಬೇಗ ಅಡುಗೆ ಮುಗಿಸಿ ಮತ್ತೆ ಮೊಬೈಲ್ಗೆ ಅಂಟಿಕೊಳ್ಳೋದೇ ಆಗ್ಬಿಟ್ಟಿದೆ…

ಅಡುಗೆ ಮಾಡುವಾಗ ಆಗೋ ಅವಾಂತರಗಳೇ ಬೇರೇ., ಅಡುಗೆ ಮನೆಯಲ್ಲಿ ಇನ್ನೂ ಬೇರೆ ಥರ ಅವಾಂತರಗಳು ಆಗತ್ತೆ ಏನಪ್ಪಾ ಅಂತಾನಾ .. ನಾ ಮೊದಲೇ ಹೇಳಿದ್ದೆ ಅಕ್ವಾ ಗಾರ್ಡಿಗೆ ನೀರು ತುಂಬಿಸುವ ಸೌಂಡ್ ಅಂತ. ನೀರಿನ ಟ್ಯಾಂಕ್ ಇಟ್ಟು ಅದರ ಮೇಲೆ ಅಕ್ವಾ ಗಾರ್ಡ್ ಇದೆ ಸ್ವಿಚ್ ಹಾಕಿ ಒಂದು ಸಾರಿ ಟ್ಯಾಂಕ್ ತುಂಬಿಸ್ಕೊಬೇಕು. ಹಾಗೆ ಎಷ್ಟೋ ಸಾರಿ ಸ್ವಿಚ್ ಆನ್ ಮಾಡಿ ಏನೋ ಮರೆತು ಹೊರಗಿದ್ರೆ ನಮ್ಮ ಅಡುಗೆ ಮನೆಗೆ ತುಂಗಾ ಕಾವೆರಿನೇ ಹರಿದು ಇಡೀ ಮನೆ ನೀರಾಗತ್ತೆ. ಏನ್ ಹೇಳ್ತಿರಾ ಅವಾಗ ನಮ್ಮ ಪಾಡು, ಬಿರುಬೇಸಿಗೆಯಲ್ಲೂ ನಮ್ಮ ಅಡುಗೆ ಮನೆಯಲ್ಲಿ ಪ್ರಳಯ ಆಗತ್ತೆ ಅಂದ್ರೆ ನಂಬುತ್ತಿರಾ. ನೀವು ನಂಬ್ಲೇಬೇಕು. ಯಾಕಂದ್ರೆ ನಾವೇ ಅಲ್ವಾ ಮತ್ತೆ ಅದನ್ನ ಕ್ಲೀನ್ ಮಾಡೋದು…

ಎಷ್ಟು ಹೇಳಿದರು ಅಡುಗೆ ಮನೆಯ ಅವಾಂತರಗಳು ಮುಗಿಯೋಲ್ಲ.. ದಿನ ಅಲ್ಲ ದಿದ್ದರೂ ವಾರಕ್ಕೆ ಒಮ್ಮೆಯಾದರೂ ಏನಾದ್ರು ಎಡವಟ್ಟು ಆಗ್ತಾನೆ ಇರತ್ತೆ. ಜೊತೆಗೆ ಈ ಅವಾಂತರಗಳು ಮನೆಯ ದೊಡ್ಡವರ ಕೆಂಗಣ್ಣಿಗೆ ಕಾರಣ ಆಗ್ತಾ ಇರುತ್ತೆ… ನಿಮಗೂ ಹೀಗೆ ಆಗುತ್ತಾ ಇರತ್ತೆ ಅಲ್ವಾ. ಹೆಣ್ಣುಮಕ್ಕಳು ಅಂದ್ಮೇಲೆ ಅಡುಗೆ ಮನೆಯಲ್ಲಿ ಅವಾಂತರಗಳು ಆಗದೆ ಇದ್ರೆ ಏನು ಚಂದ ಹೇಳಿ, ನೀವೇನಂತೀರಾ

-ಶ್ರೇಯ ಕೆ ಎಂ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x