ಲೇಖನ

ಅಡುಗೆಯ ಅವಾಂತರಗಳು: ಸ್ಮಿತಾ ಅಮೃತರಾಜ್

ಅಡುಗೆ ಮಾಡುವುದರಲ್ಲಿ ನಮ್ಮ ಗೃಹಿಣಿಯರು ಎಷ್ಟೇ ಪಳಗಿದರೂ, ಪರಿಣಿತಿಯನ್ನು ಪಡೆದುಕೊಂಡರೂ ಕೆಲವೊಮ್ಮೆ ಗಡಿಬಿಡಿಯಲ್ಲಿ ಅಡುಗೆ ತಯಾರು ಮಾಡುವಾಗ ಎಡವಟ್ಟಾಗಿ ಪಾಕವೇ ಬದಲಾಗಿ ಹೊಸ ರುಚಿಯೇ ಉದ್ಭವಗೊಳ್ಳುವಂತಹ ಪರಿಸ್ಥಿತಿಗಳು ಬಂದೊದಗಿ ಬಿಡುತ್ತದೆ. ಬಹುಷ; ಇದಕ್ಕೆ ಯಾವ ಮನೆಯಾಕೆಯೂ ಹೊರತಾಗಿಲ್ಲ ಅನ್ನಿಸುತ್ತೆ. 

ಮೊದ ಮೊದಲೆಲ್ಲಾ ತೀರಾ ಸಾಂಪ್ರದಾಯಿಕ ಅಡುಗೆಗಳು. ಹಾಗಾಗಿ ಇಂತಿಂತ ಖಾದ್ಯಕ್ಕೆ ಇಂತಿಂತದೇ ರುಚಿ ದಕ್ಕುತ್ತದೆ ಅಂತ ಕರಾರುವಕ್ಕಾಗಿ ಹೇಳಿ ಬಿಡಬಹುದಾಗಿತ್ತು. ಅಡುಗೆ ಮಾಡುವಾಗ ಸಾಕಷ್ಟು ಏಕಾಗ್ರತೆಯನ್ನು ಮೈಗೂಡಿಸಿ ಕೊಳ್ಳಬೇಕಾಗಿತ್ತು. ಮನಸ್ಸು ಕೊಂಚ ವಿಚಲಿತವಾಗಿ ಹಾಕುವ ಸಾಮಾಗ್ರಿ ತುಸು ಏರು ಪೇರಾದರೂ ರುಚಿ ಬದಲಾಗಿ ಮನೆಯಾಕೆ ಹಿರಿಯರ ಕೋಪಕ್ಕೆ ತುತ್ತಾಗುವ ಪ್ರಸಂಗ ಒದಗಿ ಬಿಡುತ್ತಿತ್ತು. ಈಗ ಹಾಗಲ್ಲ. ನಮ್ಮ ಪುಣ್ಯಕ್ಕೆ ದಿನವಿಡೀ ಕಣ್ಣು ಮೂಗೊರೆಸಿಕ್ಕೊಂಡು ಬೆಂಕಿ ಹೊಗೆಯ ನಡುವೆ ಆಯುಷ್ಯ ಕಳೆಯುವ ಶಿಕ್ಷೆಯಿಂದ ನಾವೆಲ್ಲಾ ಪಾರಾಗಿ ಬಿಟ್ಟಿದ್ದೇವೆ. ಈಗ ಏನಿದ್ದರೂ ನಾವು ಮಾಡಿದ್ದೇ ಸೈ. ಹಿಂದಿನ ಎಲ್ಲಾ ರೆಸಿಪಿಗಳನ್ನು ಕಸದ ಬುಟ್ಟಿಗೆ ತೂರಿ, ತಮಗೆ ಅನುಕೂಲವಾಗುವಂತಹ ತಮ್ಮದೇ ಪಟ್ಟಿ ತಯಾರಿಸಿ, ಅದಕ್ಕೆ ತಮ್ಮದೇ ಹೆಸರು ಕೊಡುವಲ್ಲಿಯವರೆಗೆ ಇಂದಿನ ಮಹಿಳಾ ಮಣಿಗಳು ನೈಪುಣ್ಯತೆಯನ್ನು ಸಾಧಿಸಿದ್ದು ಆಕೆಯ ಪುಣ್ಯವೋ? ಕಾಲದ ಮಹಿಮೆಯೋ ಗೊತ್ತಿಲ್ಲ. ಅಂತೂ ಅಲ್ಲಿಯವರೆಗೆ ಆಕೆಗೆ ಅಡುಗೆ ಕೋಣೆ ಸ್ವಾತಂತ್ರ್ಯವನ್ನು ಕಲ್ಪಿಸಿ ಕೊಟ್ಟಿದೆ ಅಂತಾನೆ ಹೇಳಬೇಕು. ಹಾಗಾಗಿ ಅಡುಗೆ ಎಂದರೆ ಯಾರೂ ನಿಷ್ಣಾತರಾಗಬೇಕಿಲ್ಲ. ಹೆದರಿ ಮಾರು ದೂರ ಸರಿಯಬೇಕಾಗಿಯೂ ಇಲ್ಲ. ಮೊದಮೊದಲು ಅಡುಗೆ ಮಾಡುವವರು, ಅಡುಗೆ ಕೋಣೆಗೆ ಹೊಸಬರಾದವರು ಕೂಡ ಯಾವ ಎಗ್ಗಿಲ್ಲದೇ, ಅಂಜಿಕೆ ಅಳುಕಿಲ್ಲದೇ ತಮಗನ್ನಿಸಿದ್ದನ್ನ ಮಾಡಿ ಬಿಡಬಹುದು. ಚೂರು ಪಾರು ಹುಳಿ , ಉಪ್ಪು,  ಖಾರಗಳ ಸ್ಥಾನಗಳು ಪಲ್ಲಟಗೊಂಡರೂ ಏನೂ ಅಡ್ಡಿಯಾಗಲಾರದು. ಅಕಾಸ್ಮಾತ್ ಯಾರದರೂ ಜಬರ್ದಸ್ತ್ ಮಾಡಿದರೂ ಕೂಡ ನಾವೇನು ಅವರಿಗೆ ಕಮ್ಮಿಯಿಲ್ಲವೆಂಬಂತೆ, ಈ ಅಡುಗೆ ಈ ರೀತಿಯಾಗಿಯೇ ಮಾಡೋದು ಅಂತ ಸಮಜಾಯಿ಼ಷಿಯನ್ನು ಕೂಡ ಕೊಟ್ಟು ಬಿಡ ಬಹುದು. ಹೊರಗಿನ ಜಂಕ್ ಫುಡ್ ಫಾಸ್ಟ್ ಫುಡ್ ಅಂತ ಮತ್ತೊಂದು ಮಗದೊಂದು ತಿಂದು ನಾಲಗೆ ರುಚಿ ಕೆಡಿಸಿಕೊಂಡವರಾರು ಇಂತಹ ಪ್ರಶ್ನೆಯನ್ನು ಹಾಕುವ, ಗದರಿಸುವ ಮಟ್ಟಿಗೆ ಬರಲಾರರೆಂಬ ಪೂರ್ತಿ ಧೈರ್ಯ ಎಲ್ಲಾ ಹೆಣ್ಣು ಮಕ್ಕಳಿಗೂ ಈಗ ಒದಗಿ ಬಂದಿದೆ. 

  ಮೊದಲೆಲ್ಲಾ ಅಡುಗೆ ಕಲಿಯುವುದೆಂದರೆ ಅದೊಂದು ಕಲೆಗಾರಿಕೆ. ಅದೊಂದು ತಪಸ್ಸಿನಂತೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಅಜ್ಜಿ,  ಅಮ್ಮಂದಿರ ಕೈ ಕೆಳಗೆ ಸಹಾಯಕಿಯರಾಗಿ ದುಡಿಯಬೇಕಿತ್ತು. ರುಚಿ ನೋಡಿ, ಸವಿ ಮೆದ್ದು, ತಮ್ಮ ಕೈಯೂ ಹದವರಿತು ಪಳಗಲು ಮಾಗಬೇಕಿತ್ತು. ಟೈಲರ್ ಆಗಿ ಹೊಲಿಯಲು ಶುರು ಮಾಡೋಕೆ ಮುಂಚೆ ಕಲಿಯುವಾಗ ಟೈಲರ್ ಅಂಗಡಿಯಲ್ಲಿ ಎಷ್ಟೋ ವರುಷಗಳವರೆಗೆ ಅಂಗಿಗೆ ಗುಬ್ಬಿಯನ್ನೇ ಹೊಲಿದುಕೊಂಡಿರಬೇಕಿತ್ತಂತೆ. ಯಾವಾಗ ಪರಿಪೂರ್ಣ ಗುಬ್ಬಿ ಹೊಲಿಯೋಕೆ ಬಂತೋ ಆನಂತರ ಮುಖ್ಯ ದರ್ಜಿಯಿಂದ ಪರವಾನಿಗೆ ಸಿಕ್ಕ ಮೇಲಷ್ಟೇ ಅವರಿಗೆ ಬಟ್ಟೆ ಕತ್ತರಿಸಲು, ಹೊಲಿಯಲು ಭಡ್ತಿ ಸಿಗುತ್ತಿತ್ತಂತೆ. ಹಾಗೇ ಮಕ್ಕಳು ಅಂದರೆ ವಿಶೇಷವಾಗಿ ಹೆಣ್ಣು ಮಕ್ಕಳು ಹೈಸ್ಕೂಲ್ ಮೆಟ್ಟಿಲೇರಿದ್ದೇ ತಡ, ಅಮ್ಮಂದಿರಿಗೆ ಹೀಗೆ ಸಹಾಯಕರಾಗಿ ಹಿಂದೆ ಮುಂದೆ ತಿರುಗುತ್ತಾ ಕೆಲಸಕ್ಕೆ ಒದಗ ಬೇಕಿತ್ತು. ಒಗ್ಗರಣೆಗೆ ಕರಿಬೇವು ತಂದು ಕೊಡುವುದು, ತರಕಾರಿ ಕತ್ತರಿಸಿಕೊಡುವುದು, ಕಾಯಿ ತುರಿದು ಕೊಡುವುದು. . ಹೀಗೆ ವಗೈರ ವಗೈರ ಬೋರ್ ಹೊಡೆಸುವ ಬಿಟ್ಟಿ ಚಾಕರಿಗಳನ್ನು ಶಿರಸಾವಹಿಸಿ ಪಾಲಿಸ ಬೇಕಿತ್ತು. ಇನಿತು ಲೋಪ ದೋಷ ಕಂಡರೂ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತ ದೊಡ್ಡ  ಗಾದೆ ಮಾತಿನ ಪಾಠದ ವಿಸ್ತರಣೆಯೇ ಶುರುವಾಗಿ ಬಿಡುತ್ತಿತ್ತು. ರೇಜಿಗೆ ಹುಟ್ಟಿಸಿದರೂ ಅದು ನಮ್ಮ ಜನ್ಮ ಸಿದ್ಧ ಹಕ್ಕೆಂಬಂತೆ  ಎಲ್ಲರೂ ಅದಕ್ಕೆ ಹೊಂದಿಕೊಂಡು ಬಿಡುತ್ತಿದ್ದರು. ಅಡುಗೆಯಲ್ಲಿ ಅಪರಿಮಿತ ಆಸಕ್ತಿ ತೋರುವ ಹೆಣ್ಣು ಮಕ್ಕಳು ಮಾತ್ರ ಅಮ್ಮಂದಿರ ಶಹಾಭಾಶ್‌ಗಿರಿಗೆ ಭಾಜನರಾಗಿ ತಾವೂ ಮರಿ ಅಮ್ಮಗಳಂತೆ ವರ್ತಿಸುತ್ತಿದರು. 


  ನನಗೂ ನನ್ನ ಅಮ್ಮ ಹೀಗೆ ಅಡುಗೆ ಕಲಿಸಲು ಇದ್ದ ಬದ್ದ ಪ್ರಯೋಗಗಳನ್ನೆಲ್ಲಾ ಪ್ರಯೋಗಿಸಿ , ನಿರಂತರ ಕಲಿಸುವ ಶತಪತ ಪ್ರಯತ್ನಕ್ಕೆ ತೊಡಗಿದ್ದಳು. ನನಗೆ ಶಾಲೆಯಲ್ಲಿ ಗಣಿತವೂ ಮನೆಯಲ್ಲಿ ಅಡುಗೆಯೂ ಅಷ್ಟಕಷ್ಟೆ.  ಎಷ್ಟು ಹೇಳಿ ಕೊಟ್ಟರೂ,  ಅರ್ಥೈಸಿಕೊಂಡೆ ಅಂತ ಅನ್ನಿಸಿದರೂ ಕೊನೆಗೇ ತಾಳೆಯೇ ಆಗುತ್ತಿರಲಿಲ್ಲ. ಒಂದು ಸಲ ಅಮ್ಮ ಹೀಗೆ ಸಂಜೆಯ ತಿಂಡಿಗೆ ಉಪ್ಪಿಟ್ಟು ಮಾಡುವ ತರಾತುರಿಯಲ್ಲಿದ್ದಳು. ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟಿದ್ದಳಷ್ಟೆ. ಅಷ್ಟರಲ್ಲಿ ಮನೆಗೆ ಯಾರೋ ಬಂದಿರಬೇಕು. ಅಮ್ಮ ನನ್ನನ್ನ ಕೂಗಿ ಕರೆದು ಎಣ್ಣೆ ಕಾದ ತಕ್ಷಣ ಒಗ್ಗರಣೆಗೆ ಸಾಸಿವೆ ಹಾಕು ಅನ್ನೋ ಬದಲು ಮೆಂತೆ ಉದುರಿಸು ಅಂದಳೋ ಅಥವಾ ಯಾವುದೋ ಗುಂಗಿನಲ್ಲಿದ್ದ ನನಗೆ ಹಾಗೆ ಕೇಳಿಸಿತೋ ಗೊತ್ತಿಲ್ಲ. ಒಗ್ಗರಣೆಗೆ ಸಾಸಿವೆ ಹಾಕುತ್ತಾರೆನ್ನುವುದು ಮಾತ್ರ ಸ್ಪಷ್ಟವಾಗಿ ತಿಳಿದಿತ್ತು. ಆದರೂ ಅಮ್ಮ ಮೆಂತೆ ಹಾಕಲು ಹೇಳಿರುವಳಲ್ಲ? ಮತ್ತೆ ಹೇಳಿದ ಹಾಗೆ ಮಾಡದಿದ್ದರೆ ಬೈಗುಳ ತಿನ್ನಬೇಕಾದೀತು ಅಂತ ನೀಟಾಗಿ ಅಮ್ಮ ಹೇಳಿದ ಹೋಂ ವರ್ಕನ್ನು ಚಾಚು ತಪ್ಪದೆ ಪಾಲಿಸಿ, ಹೇಗೋ ಏನೋ ಹರಸಾಹಸ ಪಟ್ಟು ಉಪ್ಪಿಟ್ಟನ್ನು ಕೂಡ ನಾನೇ ತಯಾರಿಸಿಬಿಟ್ಟೆ. ಅಂತೂ ಇಂತೂ ಪಾಕ ಪ್ರವೀಣೆಯಾಗಿಬಿಟ್ಟಳಲ್ಲ ಮಗಳು ಅಂತ ಭಾರಿ ಖುಷಿಯಾಗಿ, ಅದೇ ಖುಷಿಯಲ್ಲಿ ಪಕ್ಕದ ಮನೆ ಆಂಟಿಯನ್ನು ಕೂಡ ತಿಂಡಿಗೆ ಕರೆದೇ ಬಿಟ್ಟಳು. ಉಪ್ಪಿಟ್ಟು ಸವಿಯುವ ಸಂಭ್ರಮದಲ್ಲಿರುವಾಗ ಬಾಯಿಗೆ ಕಹಿ ಕಹಿ ಅನುಭವ ಆದದ್ದೇ ತಡ,  ಇಷ್ಟು ಹೊತ್ತು ಉಬ್ಬಿಕ್ಕೊಂಡಿದ್ದ ಸಂತಸದ ಬುಗ್ಗೆ ಒಮ್ಮೆಗೆ ಡಮಾರ್ ಅಂತ ಒಡೆದೇ ಹೋಯಿತು. ಅಲ್ಲಿಂದ ಅಮ್ಮನ ವೇದಾಂತ ಕೇಳೋಕಾಗದೆ ಕೋಣೆ ಕದವಿಕ್ಕಿ ಲೆಕ್ಕ ಪುಸ್ತಕ ಬಿಡಿಸಿ ಕುಳಿತರೆ. . ಅಂಕ ಗಣಿತ, ಬೀಜಗಣಿತ ಎಲ್ಲವೂ ಕಲಸುಮೇಲೊಗರವಾಗಿ ಇಷ್ಟೂ ಅರ್ಥವಾಗದೆ ಕಂಗಾಲಾಗಿ ಮತ್ತೆ ಕವಿತೆ ಗೀಚುತ್ತಾ ಕುಳಿತ್ತಿದ್ದೆ. ಆದರೆ ನನಗಿಂತ ಬರೋಬ್ಬರಿ ಏಳು ವರ್ಷದಷ್ಟು ಚಿಕ್ಕವಳಾದ ಪುಟ್ಟ ತಂಗಿ ಬಹಳೇ ಆಸ್ಥೆಯಿಂದ ಅಚ್ಚುಕಟ್ಟಾಗಿ ಸಣ್ಣಪುಟ್ಟ ಅಡುಗೆಗಳನ್ನು ಸಲೀಸಾಗಿ ಮಾಡಿ ಮನೆ ಮಂದಿಯಿಂದ ಭೇಷ್ ಅನ್ನಿಸಿಕೊಳ್ಳುವಾಗ ಮಾತ್ರ ಸಿಕ್ಕಾಪಟ್ಟೆ ಹೊಟ್ಟೆ ಉರಿಯಾಗುತ್ತಿತ್ತು. ಕ್ರಮೇಣ, ನನಗೆ ಅಮ್ಮ ವಹಿಸಿದ  ಕೆಲಸಗಳನ್ನೆಲ್ಲಾ ಮೆಲ್ಲಗೆ ಪೂಸಿ ಹೊಡೆದು ಅವಳಿಗೇ ವಹಿಸಿ ನಾನು ಅದರ ಲಾಭ ಪಡೆದು ಕೊಳ್ಳುತ್ತಿದ್ದದ್ದು  ಬೇರೆ ಮಾತು. ಆದರೆ ಈಗ ನಾನು ಕೂಡ ಅವಳಷ್ಟೇ ಚೆಂದಕ್ಕೆ ಅಡುಗೆ ಮಾಡುತ್ತೇನೆ ಅಂತ ಅಮ್ಮ ಸರ್ಟಿಫಿಕೇಟ್ ಕೊಟ್ಟಿದ್ದಾಳೆ. ಆ ಉಪಯೋಗಕ್ಕೆ ಬಾರದ ಸರ್ಟಿಫಿಕೇಟ್ ಇಟ್ಟುಕ್ಕೊಂಡು ಏನು ಪ್ರಯೋಜನ?ನಿನ್ನ ಬಳಿಯೇ ಬೇಕಾದರೆ ಇಟ್ಟುಕೋ ಅಂತ ಹೇಳೋಕೂ ಆಗದೆ ಸುಮ್ಮಗೆ ಪೆದ್ದು ನಗೆ ಬೀರುತ್ತೇನೆ. 

 ಒಂದು ಇಪ್ಪತ್ತು ವರುಷದ ಕೆಳಗೆ, ನಮ್ಮ ಕಡೆ ಹುಡುಗಿಯನ್ನು ಮದುವೆ ಮಾಡಿ ಕೊಡಬೇಕಾದರೆ ಆಕೆಗೆ ಕಡ್ಡಾಯವಾಗಿ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತಟ್ಟಿ ಮಾಡೋಕೆ ಗೊತ್ತಿರಬೇಕಾಗಿತ್ತು. ಇಲ್ಲದಿದ್ದರೆ ಅದು ಹಿರಿಯರ ಪಾಲಿಗೆ ಮಾತಿನ ವಸ್ತುವಾಗಿ ನಾಚಿಕೆಗೇಡಿನ ಸಂಗತಿಯಾಗಿ ಬಿಡುತ್ತಿತ್ತು. ಊರಿಗೆ ಹೊಸ ಮದುವೆಯಾಗಿ ಬಂದ ಮದುವಣಗಿತ್ತಿಯರ ಕಲೆಗಾರಿಕೆಯನ್ನು, ಚಾಕಚಕ್ಯತೆಯನ್ನು, ಜಾಣತನವನ್ನು, ಪೆದ್ದುತನವನ್ನು ಅಳೆಯಲು ಆಕೆಯ ರೊಟ್ಟಿ ತಟ್ಟುವ ಕುಶಲತೆಯನ್ನು ಮಾನದಂಡವಾಗಿ ಉಪಯೋಗಿಸುತ್ತಿದ್ದರು. ಮೊನ್ನೆ ಮೊನ್ನೆ ಕೆಳಗೆ ಮನೆಗೆ ಮದುವೆ ಆಗಿ ಬಂದಳಲ್ಲ ಕಲಿತ ಹುಡುಗಿ ಸುಮ. . ?ಆಕೆ ಜೊತೆಗೇ ರೊಟ್ಟಿ ಒತ್ತುವ ಮೆಷಿನ್ ಕೂಡ ತಂದಿದ್ದಾಳೆ. ಅರೆಗಳಿಗೇಲಿ ನೂರು ಜನಕ್ಕೂ ಬೇಕಾದರೂ ಚಕ ಚಕನೆ ರೊಟ್ಟಿ ಒತ್ತಿ ಹಾಕಿ ಬಿಡುತ್ತಾಳೆ ಅಂತ ಅಮ್ಮಂದಿರು, ಅತ್ತೆಯಂದಿರು ಎಲ್ಲಾ ಗುಸು ಗುಸು ಮಾತನಾಡಲಿಕ್ಕೆ ಶುರುವಾದದ್ದೇ ತಡ ಎಲ್ಲರ ಮನೆಗೂ ಅಚ್ಚರಿಯೆಂಬಂತೆ ರೊಟ್ಟಿ ಒತ್ತುವ ಮೆಷೀನ್ ಬಂದೇ ಬಿಟ್ಟಿತು. ಮದುವೆಗೆ ಸಿದ್ಧವಾಗಿರುವ ಹೆಣ್ಣು ಮಕ್ಕಳು, ಅವರ ಅಮ್ಮಂದಿರು ಎಲ್ಲಾ ನಿರಾಳವಾಗಿ ಬಿಟ್ಟರು. ಮದುಮಗಳಿಗೆ ಏನಿಲ್ಲದಿದ್ದರೂ ರೊಟ್ಟಿ ಮೆಷೀನ್ ಒಂದು ಕಡ್ಡಾಯವಾಗಿ ಉಡುಗೊರೆ ರೂಪದಲ್ಲಿ ಕೊಡುವ ಪರಿಪಾಠವೊಂದು  ಬೆಳೆದು ಬಿಟ್ಟಿತು. ಒಲೆಯ ಮುಂದೆ ನಮ್ಮ ಮಗಳು ರೊಟ್ಟಿ ತಟ್ಟಿಯೇ ಬದುಕು ವ್ಯಯಿಸುವುದು ಬೇಡ ಅನ್ನುವಷ್ಟರ ಮಟ್ಟಿಗೆ ಅಡುಗೆ ಮನೆಯೊಳಗೊಂದು ಬೆಳಕಿನ ಕಿಂಡಿ ತೆರೆದು ಕೊಂಡಿತು. ಈ ಅಡುಗೆ ಕೋಣೆಯ ಅವಾಂತರಗಳು, ಉಬ್ಬು ರೊಟ್ಟಿಯ ಒಳಗೆ ಅಡಗಿಕ್ಕೊಂಡ ಕತೆಗಳನ್ನು  ಕೇಳುತ್ತಾ ಬೆಳೆದ ನನಗೆ ನಿಜಕ್ಕೂ ಕೈಯಲ್ಲೂ ಆಗಲಿ ಮೆಷಿನ್ ನಲ್ಲೂ ಆಗಲಿ ರೊಟ್ಟಿ ಮಾಡೋಕೆ ಕಲಿಯಲು ಈವರೆಗೂ ಆಗಲೇ ಇಲ್ಲ. ನಾವು ಏನು ಕಲಿಯುತ್ತೇವೋ ಅದು ಸಹಜವಾಗಿ ಯಾವ ಒತ್ತಡವೂ ಇಲ್ಲದೆ, ಹೆದರಿಕೆಯೂ ಇಲ್ಲದೆ ಕಲಿಯುವಂತಾದರೆ ಮಾತ್ರ ಆ ಕೆಲಸದ ಬಗ್ಗೆ ಪ್ರೀತಿ ಹುಟ್ಟೋಕೆ ಸಾಧ್ಯ ಅನ್ನೊ  ಮಾತು ಅಡುಗೆ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಕೂಡ ಅಕ್ಷರಶ; ಸತ್ಯ ಅನ್ನಿಸುತ್ತದೆ. 

ಈಗೀಗ ಟಿ. ವಿ. ಗಳಲ್ಲೂ ಕೂಡ ಧಿಡೀರ್ ಅಡುಗೆಯ ಪಾಠ ಹೇಳಿ ಕೊಡಲಾಗುತ್ತದೆ. ಅಂತಹುದರಲ್ಲಿ ಇಷ್ಟರವರೆಗೆ ಅಡುಗೆಯ ಎ. ಬಿ. ಸಿ. ಡಿ.  ಗೊತ್ತಿಲ್ಲದ ಆಂಟಿ ಮಗಳೊಬ್ಬಳು ಟಿ. ವಿ.  ಅಡುಗೆ ಮನೆಗೆ ಹೋಗಿ,  ಅರ್ಜಿ ಗುಜರಾಯಿಸಿ ಅಲ್ಲೂ ಪಾಸಾಗಿ, ನನಗೆ ಹೆಸರೇ ತಿಳಿಯದ  ಅಡುಗೆಯೊಂದನ್ನ ರಪ ರಪನೆ ತಯಾರಿಸಿ, ನಿರೂಪಕಿ ಕೂಡ ವಾಹ್! ಸಖತ್ತಾಗಿದೆ ಅಂತ ಬಾಯಿ ಚಪ್ಪರಿಸುವಾಗ. ನಿಜಕ್ಕೂ ನನಗೂ ಬಾಯಲ್ಲಿ ನೀರೂರಿತ್ತು. ಹಾಗಾಗಿ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಯಾರು ಬೇಕಾದರೂ ಗುರುವಿಲ್ಲದೇ ಅಡುಗೆ ಪಾಠ ಕಲಿತು ಪ್ರವೀಣತೆಯನ್ನು ಸಾಧಿಸಿಕೊಳ್ಳ ಬಹುದು ಅಂತ ನನಗೆ ನಾನೇ ಸಮಧಾನಿಸಿ ಕೊಳ್ಳುತ್ತಿದ್ದೇನೆ. ಯಾಕೆಂದರೆ ನನ್ನ ಹೆಗಲೆತ್ತರಕ್ಕೆ ಬೆಳೆಯುತ್ತಿರುವ ಮಗಳು ಅಡುಗೆ ಕೋಣೆಯೊಳಗೆ ಕಾಲು ತಾಕಿಸುವುದೇ ಇಲ್ಲ. ಒಗ್ಗರಣೆಯ ಘಾಟಿಗೇ ಅವಳಿಗೆ ಅಕ್ಷಿ ಶುರುವಾಗಿ ಬಿಡುತ್ತೆ. 
ಅಂದ ಹಾಗೆ ಇದೆಲ್ಲಾ ಪೀಠಿಕೆ ಯಾಕೆ ಶುರುವಾಯಿತೆಂದರೆ,  ಮೊನ್ನೆ ಬಿರು ಬೇಸಿಗೆ ದಿನ ಒಂದಷ್ಟು  ಅತಿಥಿಗಳು ನಮ್ಮ ಮನೆಗೆ ಬರುವವರಿದ್ದರು. ಮಟ ಮಟ ಮಧ್ಯಾಹ್ನ ಉರಿ ಸೆಕೆ ಬೇರೆ. ತಣಿಯದಷ್ಟು ಬಾಯಾರಿಕೆ ಇರುತ್ತೆ ಅಂತ ದೊಡ್ಡ ಪಾತ್ರೆಯ ತುಂಬಾ ಕಲ್ಲಂಗಡಿ ಹಣ್ಣಿನ ಶರಬತ್ತು ಮಾಡಿಟ್ಟು,  ಲಕ್ಷಣವಾಗಿ ಅದಕ್ಕೆ ಘಮ ಘಮ ಏಲಕ್ಕಿ ಪುಡಿ ಉದುರಿಸಿ ಬೇರೆ ಯಾವುದೋ ಕೆಲಸಕ್ಕೆ ಕೈ ಹಚ್ಚಿಕ್ಕೊಂಡೆ. ಸಾಂಬಾರಿಗೆ ಮಸಾಲೆ ಅರೆದು ತಪ್ಪಿ, ಶರಬತ್ತು ಮಾಡಿಟ್ಟ ಪಾತ್ರೆಗೆ ಕಾಲು ವಾಸಿ ಮಸಾಲೆ ಸುರಿದುಬಿಟ್ಟಿದ್ದೆ. ನಂತರವೇ ನನಗೆ ಪ್ರಜ್ನೆ ಬಂದದ್ದು. ಸಾಂಬಾರಿನ ಪಾತ್ರೆಯೂ ಶರಬತ್ತಿನ ಪಾತ್ರೆಯ ಆಕಾರಗಳು ಒಂದೇ ತೆರನಾಗಿ ಅವಳಿ ಜವಳಿಗಳ ತರಹ ಗೋಚರಿಸಿದ್ದ ಕಾರಣ,  ಗಡಿ ಬಿಡಿಯಲ್ಲಿ ಪ್ರಮಾದವಾಗಿಬಿಟ್ಟಿತ್ತು. ಇನ್ನೇನು ಮಾಡುವುದು? ಯಾರಿಗೆ ಹೇಳುವುದು?ಒಮ್ಮೆಗೇ ಕೈ ಕಾಲು ಬಿದ್ದು ಹೋದಂತೆನ್ನಿಸಿ ಬಿಟ್ಟಿತ್ತು. ಅದಾಗಲೇ ನೆಂಟರಿಷ್ಟರು ಪವಡಿಸಿ ಕಷ್ಟ-ಸುಖ ಕುಶಲೋಪರಿ ಶುರು ಮಾಡಿದ್ದರು. ನಾನೋ ಇಲ್ಲಿ ಅಡುಗೆ ಕೋಣೆಯಲ್ಲಿ ಗಹನವಾಗಿ ಶರಬತ್ತಿನ ಹೊಸ ಮಾರ್ಪಾಟಿನಲ್ಲಿ ತೊಡಗಿದ್ದೆ. ಪಾತ್ರೆಗೆ ಸಾಕಷ್ಟು ಐಸ್ ಸುರಿದು, ಪ್ರಮಾಣ ಮೀರಿ ಸಕ್ಕರೆ ಸುರಿದು , ಲಗು ಬಗೆಯಿಂದ ಕಲಡಿಸಿ ರುಚಿ ನೋಡಿದರೆ ಖಾರ ತಹಬಂದಿಗೆ ಬಂದಂತಿತ್ತು. ಆದರೂ ಕುಡಿದಾಗ ಯಾಕೋ ಖಾರ ಗಂಟಲಲ್ಲೇ ನಿಂತಂತೆನ್ನಿಸುತ್ತಿತ್ತು. ಇನ್ನು ಬೇರೇನು ಮಾಡುವ ಹಾಗಿಲ್ಲ. ನಾನೋ ಹುಳ್ಳ ಹುಳ್ಳ ನಗೆ ಬೀರುತ್ತಾ ಇರುಸು ಮುರುಸು ಮಾಡಿಕ್ಕೊಂಡು ಪತಿರಾಯನ ಜೊತೆಯಲ್ಲಿ, ಮಕ್ಕಳ ಜೊತೆಯಲ್ಲಿ ಶರಬತ್ತು ಸರಬರಾಜು ಮಾಡಿಸಿದೆ. ಅವರುಗಳು  ಗ್ಲಾಸ್ ತುಟಿಗಿಟ್ಟು ಗಂಟಲಿಗಿಳಿಸುವ ಹಾವ ಭಾವವನ್ನೆಲ್ಲಾ ಮುಖ ಕಿವುಚಿಕ್ಕೊಂಡು ಮರೆಯಲಿ ನಿಂತು ನೋಡಲೆತ್ನಿಸಿದೆ. ಇದೇನು ಜ್ಯೂಸ್ ಖಾರ ಅಂತ ಅವಲತ್ತುಕೊಳ್ಳುತ್ತಾರೇನೋ ಅಂತ ಬೆದರಿ ಹೈರಾಣಾಗಿದ್ದೆ. ಅಬ್ಬಾ! ದೇವರು ದೊಡ್ಡವನು. ಸಧ್ಯ ಅಂತದ್ದೇನು ಆಗಲಿಲ್ಲ. ಇನ್ನೊಂದೆರಡು ಗ್ಲಾಸ್ ಕೇಳಿ ಕುಡಿದಾದ ಮೇಲೆಯೇ ನಾ ಕಟ್ಟಿದ ಉಸಿರು ಬಿಟ್ಟು ಮತ್ತೆ ಲವಲವಿಕೆಯಿಂದ ಮಾಡಿಟ್ಟ ಹಂಡೆ ಭರ್ತಿ ಶರಬತ್ತು ಖಾಲಿಯಾಗುವವರೆಗೂ ಕುಣಿಯುತ್ತಾ ವಿತರಿಸಿದ್ದೇ ವಿತರಿಸಿದ್ದು. ಶರಬತ್ತು ಕುಡಿದು  ಖಾಲಿ ಲೋಟ ಕೆಳಗಿಡುವ ಮುನ್ನ ಅವರು ಆಡಿದ ಮಾತು ನನ್ನನ್ನು ಇನ್ನೂ ಅಚ್ಚರಿಯೆಡೆಗೆ ನೂಕಿತ್ತು. ಹೀಗೆ ಶರಬತ್ತು ಸಿಹಿಯ ಜೊತೆಗೆ ಚೂರು ಖಾರ ಇದ್ದರೆನೇ ಚೆನ್ನ. ಶೀತ ಆಗದ ಹಾಗೆಯೂ ಒಳ್ಳೆಯದು ಅಂತ ಒಕ್ಕಣೆ ಕೊಡುತ್ತಿರಬೇಕಾದರೆ. . ಒಬ್ಬಾಕೆ ಶರಬತ್ತಿಗೆ ಏನೆಲ್ಲಾ ಹಾಕಿದ್ರಿ ಅಕ್ಕಾ. . ? ಅಂತ ಕೇಳಿಯೇ ಬಿಟ್ಟಾಗ ನನಗೆ ಪೀಕಲಾಟ ಶುರುವಾದದ್ದು. ನಿಜ ಹೇಳಿದರೆ ನಾಚಿಕೆ. ಸುಳ್ಳು ಹೇಳಿದ್ರೆ ಪಾಪ ಪ್ರಜ್ನೆ. ಹಾಗಾಗಿ ಇದ್ಯಾವ ಉಸಾಬರಿಯೇ ಬೇಡ ಅಂತ ನಾನು ಪೆದ್ದು ಪೆದ್ದು ನಗುತ್ತಾ ಮೆಲ್ಲಗೆ ಮಾತು ತೇಲಿಸಿಬಿಟ್ಟಿದ್ದೆ. ಅಡುಗೆ ಪಾಕ ಇವರು ಯಾರಿಗೂ ಹೇಳಿ ಕೊಡೋದಿಲ್ಲ ಅನ್ಸುತ್ತೆ ಅಂತ ಅವರು ಅಂದುಕೊಂಡರೇನೋ. . ?!ಪರವಾಗಿಲ್ಲ. ಆದರೆ ನಾ ಮಾತ್ರ ನನ್ನ ಅದ್ಭುತ ಕಲ್ಲಂಗಡಿ ಹಣ್ಣಿನ ಶರಬತ್ತಿನ ರೆಸಿಪಿ ಮಾತ್ರ ಯಾರಿಗೂ ಈವರೆಗೂ ಹೇಳಿ ಕೊಡಲು ಹೋಗಲಿಲ್ಲ. ಜೊತೆಗೆ ಅಪ್ಪಿ ತಪ್ಪಿಯೂ ನನಗೆ ಮತ್ತೆಂದೂ ಆ ತರದ ಜ್ಯೂಸ್ ಈವರೆಗೂ ಮಾಡಲು ಸಾಧ್ಯವಾಗಲಿಲ್ಲ. 

ಅಡುಗೆ ಹೇಗೇ ಇರಲಿ, ಪ್ರೀತಿಯಿಂದ ಬಡಿಸುವ ಕಲೆಗಾರಿಕೆ ಗೊತ್ತಿದ್ದರೆ,  ಆ ಅಡುಗೆಗೂ ಪರಿಪೂರ್ಣತೆ ಒದಗಿ ಬಂದು ರುಚಿ ಹೆಚ್ಚಾಗುತ್ತೆ ಅಂತ ಎಲ್ಲೋ ಓದಿದ ಸಾಲುಗಳು ಈಗ ನೆನಪಿಗೆ ಬಂದು ಹೌದಲ್ಲಾ?! ಅಂತ ಅನ್ನಿಸ್ತಿದೆ. 

-ಸ್ಮಿತಾ ಅಮೃತರಾಜ್,  ಸಂಪಾಜೆ. 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಅಡುಗೆಯ ಅವಾಂತರಗಳು: ಸ್ಮಿತಾ ಅಮೃತರಾಜ್

Leave a Reply

Your email address will not be published. Required fields are marked *