ಕಥಾಲೋಕ

ಅಜ್ಜ ನೆಟ್ಟ ಹಲಸಿನ ಮರ: ಸತೀಶ್ ಶೆಟ್ಟಿ. ವಕ್ವಾಡಿ

ಸೂರ್ಯನ ಬೆಳಗಿನ ಬೆಳಕಿಗೆ ಮಂಜಿನ ಹನಿಗಳ ರಂಗಿನಾಟ ಆಗತಾನೆ ಮುಗಿದಿತ್ತು. ಸೂರ್ಯನ ಬೆಳಕಿನ ಅಟ್ಟಹಾಸ ಹೆಚ್ಚಾದಂತೆ ಮನೆ ಎದುರಿನ ಹುಲ್ಲು ಹಾಸಿನ ಮೇಲೆ ಬೆಚ್ಚನೆ ಮಲಗಿದ್ದ ಮಂಜಿನ ಹನಿಗಳು ಒಂದೊಂದಾಗಿ ಕಾಣದ ಗೂಡು ಸೇರುವ ತವಕದಲ್ಲಿದ್ದವು. ಅದೂ ಬೇರೆ ಕಾರ್ತಿಕ ಮಾಸ. ಚಳಿರಾಯನ ಒಡ್ಡೋಲಗಕ್ಕೆ ಆಗಷ್ಟೇ ರಂಗಸಜ್ಜಿಕೆಯ ಹೂರಣವಾಗಿತ್ತು. ಮನೆಯ ಕಣದಲ್ಲಿ ರಂಗು ಮೂಡಿಸಿದ್ದ ಭತ್ತದ ತಿರಿ ಮತ್ತು ಹುಲ್ಲಿನ ಕುತ್ತರಿಗಳಿಂದ ಮೂಗಿಗೆ ಅಪ್ಪಳಿಸುತ್ತಿದ್ದ ಭತ್ತದ ಸುವಾಸನೆ ಮನದ ಮೂಲೆಯಲ್ಲಿ ಹೊಂಗಿರಣದ ಚಿತ್ತಾರ ಬರೆಸಿದ್ದವು. ಮನೆ ಹಿಂದಿನ ಗದ್ದೆಯಲ್ಲಿ ಮೇಯಲು ಕಟ್ಟಿದ ದನಗಳ ಹಿಂಡು ಮತ್ತು ಮನೆ ಎದುರಿನ ರಸ್ತೆಯಲ್ಲಿ ಶಾಲೆಗೆ ಹೊರಟಿದ್ದ ಮಕ್ಕಳ ಹಿಂಡು ಬಾಲ್ಯದ ದಿನಗಳ ರಂಗನ್ನು ನೆನಪಿಸುತ್ತಿತ್ತು.

ಆದರೆ ಈ ಎಲ್ಲ ಮುಂಜಾನೆಯ ದ್ರಶ್ಯಾವಳಿಗೆ ಸಾಕ್ಷಿಯಾಗಿದ್ದ ನವೀನನಿಗೆ ಮಾತ್ರ ಇವುಗಳನ್ನು ಮನತುಂಬಿಕೊಳ್ಳುವ ಮನಸ್ಥಿತಿ ಇದ್ದಂತಿಲ್ಲ. ಮನೆಯೆದುರಿನ ಕೆಟ್ಟು ಕೆರಹಿಡಿದ ರಸ್ತೆಯಲ್ಲಿ ಸಾಲು ಸಾಲಯಾಗಿ ಹೊಂಡ ಗುಂಡಿಗಳನ್ನು ಹಾರಿಸಿಕೊಂಡು ಸಾಗುತ್ತಿರುವ ವಾಹನಗಳ ಪೀಕಲಾಟ ಮತ್ತು ಅವುಗಳಿಂದ ಎದ್ದ ದೂಳನ್ನು ಹೊದ್ದು ನಿಂತಿರುವ ಅಸಹಾಯಕ ಸೇನಾನಿಯೆಂತಿರುವ ಮರಗಳನ್ನೇ ದಿಟ್ಟಿಸುತ್ತಿದ್ದ. ಮನೆಯೆದುರಿನ ಬೃಹದಾಕಾರದ ಹಲಸಿನ ಮರದ ಮೇಲೆ ಕುಳಿತ್ತಿದ್ದ ಹಕ್ಕಿಗಳು ಯಾವಾಗ ಇಲ್ಲಿ ಹಣ್ಣು ಬಿಡುತ್ತವೋ ಎಂಬ ನೀರಿಕ್ಷೆಯೆಲ್ಲಿ ಇದ್ದಂತೆ ಬಾಸವಾಗುತ್ತಿತ್ತು.

“ನವೀನ ನಿನ್ನೆ ನರಸಿಂಹ ಬಂದಿದ್ದ. ನಿಂಗೆ ಫೋನ್ ಮಾಡ್ದ ಅಂಬ್ರ, ನಾಟ್ ರೀಚ್ ಇತ್ತಂಬ್ರ ಎಷ್ಟೋತ್ತಿಗ್ ಬತ್ತಾ ಕೆಂಡ, ನಾನ್ ಅದಕ್ಕೆ ಅಂವ ಬಪ್ಪುದು ಬೆಳ್ಗತ್ತ್,ಅಂದೇ. ಅದ್ಕೆ ಅಂವ ಬೆಳ್ಗೆ 10 ಗ್ಯಾಂಟಿಗೆ ಬತ್ತೆ ನವೀನ ಗೆ ರೆಡಿಯಾಯಿ ಇಪ್ಪುಗೆ ಹೇಳಿ ಅಂದ. ನೀರ್ ಬಿಸಿ ಮಾಡಿದ್ದೆ. ಹೊಯ್ ಮೀನ್ಕ ಬಾ. ತಿಂಡಿ ರೆಡಿ ಮಾಡ್ತೆ ” ಅಂತ ಅಮ್ಮ ಕೂಗಿ ಹೇಳಿದಾಗ ನವೀನ ತಲೆಯಾಡಿಸಿ ಟವೆಲನ್ನು ಹೆಗಲಮೇಲೇರಿಸಿಕೊಂಡು ಬಚ್ಚಲು ಮನೆಯತ್ತ ಹೆಜ್ಜೆ ಹಾಕಿದ.

” ಮೊನ್ನೆಯಿಂದ ನರಸಿಂಹ ಅದೇನೋ ಸೆಂಟು ಸೆಂಟು ಅಂತಿದ್ದ. ತಂದಿದ್ಯಾ ” ಮತ್ತೆ ಅಮ್ಮ ಮಾತಿಗೆ ” ಹೂಂ ಬ್ಯಾಗಲಿದೆ, ವರ್ಷ ಐವತ್ತಾದ್ರು ಈ ಜ್ವಾಗಳಕ್ಕೇನು ಕಮ್ಮಿ ಇಲ್ಲ ಅವಂಗೆ ” ಅಂತ ಉತ್ತರಿಸಿ ನವೀನ ಬಚ್ಚಲ ಮನೆಯ ತಾಮ್ರದ ಹಂಡೆಯಲ್ಲಿ ಬಿಸಿನೀರನ್ನು ಮೈಮೇಲೆ ಎಳೆದುಕೊಂಡ.

ಕಾರ್ತಿಕ ಮಾಸದ ಚಳಿರಾಯನಾಗಮನದ ಪರ್ವ ಕಾಲದಲ್ಲಿ ಮುಂಜಾನೆ ಸ್ಥಾನ ಮಾಡುವುದೆಂದರೆ ಹಬ್ಬ.ಕಟ್ಟಿಗೆಯ ಒಲೆಯಲ್ಲಿ ತಾಮ್ರದ ಹಂಡೆಯಲ್ಲಿನ ಬಿಸಿ ನೀರು ಮೈಮೇಲೆ ಹರಿದರೆ ಸ್ವರ್ಗಕ್ಕೆ ಮೂರೇ ಗೇಣು. ಸುಮಾರು 5 ಗಂಟೆಯ ವಿಮಾನಯಾನ, ಚೆಕ್ ಇನ್ ಚೆಕ್ ಔಟ್ ಗಳ ಜಂಜಾಟ. ಮಂಗಳೂರು ವಿಮಾನನಿಲ್ದಾಣದಿಂದ ತೆಕ್ಕಟ್ಟೆ ಯ ಮನೆಗೆ ಬರುವ ಹೊತ್ತಿಗೆ ಅರ್ಧ ಜೀವ ಕೈಬಿಟ್ಟಿತ್ತು.ಇದರ ಮದ್ಯ ಚತುಷ್ಪಥಕ್ಕಾಗಿ ರಸ್ತೆಯ ಅಗಲೀಕರಣದಿಂದ ಅಲಲ್ಲಿ ಅಡೆತಡೆಗಳು ಬೇರೆ. ಸುಸ್ತಾಗಿದ್ದ ದೇಹಕ್ಕೆ ಬಿಸಿನೀರಿನ ಸ್ಥಾನ ನವ ಚೈತನ್ಯ ಮೂಡಿಸಿತು. ಸ್ಥಾನ ಮುಗಿಸಿ ಅಮ್ಮ ಮಾಡಿಟ್ಟ ನೀರು ದೋಸೆ ತಿಂದು ಚಹಾ ಕುಡಿದ ನವೀನ ಕೋರ್ಟ್ ಗೆ ತೆರಳಲು ತಯಾರಾಗ ತೊಡಗಿದ.

” ಅಮ್ಮ ಅಪ್ಪಯ್ಯ ಎಲ್ಲಿ, ಕಾಣ್ತಾ ಇಲ್ಲ ” ನವೀನನ ಪ್ರಶ್ನೆಗೆ ಅಮ್ಮ “ನಿನ್ ಬತ್ತಿಯಂತ ಆರ್ ಗ್ಯಾಂಟಿ ತನ್ಕ ಕಾದ್ರು, ಆಮೇಲೆ ಅದೇನೋ MLA ಮನೇಲಿ ಮೀಟಿಂಗ್ ಅಂತ ಬೇಗ ಹೋದ್ರು. ಎಲೆಕ್ಷನ್ ಬೇರೆ ಹತ್ರ ಬಂತಲ್ಲ, ನಿನ್ ಅಪ್ಪ ಫುಲ್ ಬ್ಯುಸಿ. ಕೋರ್ಟ್ನಲ್ಲಿ ಸಿಕ್ತಿನಿ ಅಂತ ಹೇಳಿದ್ದಾರೆ. ಅಲ್ಲಿ ಸಿಗಬಹುದು” ಅಮ್ಮನ ವರದಿಯಲ್ಲಿದ್ದ ಕೋರ್ಟ್ ಪದ ಯಾಕೋ ನವೀನನನ್ನು ಕುಟುಕಿದಂತಿತ್ತು.
ಇಷ್ಟಕ್ಕೂ ನವೀನ ದುಬೈಯಿಂದ ಊರಿಗೆ ಬಂದಿದ್ದು ಕೋರ್ಟ್ ಕೆಲಸಕ್ಕೆ. ಇಂದು ನವೀನ ಹಾಕಿದ ಕೇಸಿನ ತೀರ್ಪು ಹೊರಬೀಳಲಿದೆ. ಕೋರ್ಟ್ ವ್ಯವಹಾರ ಅಂತ ಆತ ಈ ತನಕ ಕಳೆದ 2 ವರ್ಷದಲ್ಲಿ 6 ಬಾರಿ ದುಬೈಯಿಂದ ಊರಿಗೆ ಬಂದಿದ್ದ. ಅದು ಲಕ್ಷಾಂತರ ರೂಪಾಯಿ ಖರ್ಜು ಮಾಡಿಕೊಂಡು.

ನರಸಿಂಹ ಬೇರೆ ಗಡಿಬಿಡಿ ಗಿರಾಕಿ. ಅದಕ್ಕೆ ನವೀನ ಬೇಗನೆ ರೆಡಿಯಾಗ ತೊಡಗಿದ. ಅವನು ಬರುವಾಗ ರೆಡಿ ಆಗದಿದ್ದರೆ ಊರನ್ನೇ ಒಂದು ಮಾಡಿ ಬಿಡ್ತಾನೆ. ಮಾಡಲು ಏನು ಕೆಲಸ ಇಲ್ಲದಿದ್ದರೂ ಬಾರಿ ಬ್ಯುಸಿ ಮನುಷ್ಯನ ತರಹ ಆಡ್ತಾನೆ. ಈಗ ಎಲೆಕ್ಷನ್ ಬೇರೆ. ರಗಳೇನೇ ಬೇಡ ಅಂತ ಬೇಗ ರೆಡಿ ಆದ ನವೀನ, ನರಸಿಂಹನಿಗಾಗಿ ತಂದ ಸೆಂಟಿನ ಬಾಟ್ಲಿನ ಕೈಯಲ್ಲಿ ಹಿಡಿದು ಮನೆಯೆದುರಿನ ರಸ್ತೆಗೆ ತಾಗಿಕೊಂಡಿದ್ದ ಹಲಸಿನ ಮರದ ಕೆಳಗೆ ಬಂದು ನಿಂತ. ವಿಶಾಲಾವಾದ ಮರ, ನವೀನನ ಅಜ್ಜಯ್ಯ ಇದನ್ನು ನೆಟ್ಟು 25 ವರ್ಷ ಕಳೆದಿದೆ. ಇದು ನವೀನ ಪಾಲಿನ ಜೀವ. ಎಲ್ಲಕ್ಕಿಂದ ಹೆಚ್ಚಾಗಿ ಇದು ಆತನ ಇಡೀ ಬದುಕಿನ ನೆನಪಿನ ಬುಟ್ಟಿಯನ್ನು ಬಚ್ಚಿಟ್ಟುಕೊಂಡ ಜೋಳಿಗೆ.

” ಇವ್ರು ಎಲ್ಲಾದ್ರೂ ಕೇಸ್ ಸೋತ್ರೆ ಮತ್ತೆ ಮೇಲಿನ ಕೋರ್ಟ್ ಗೆ ಹ್ವಾಪುದ್ ಬ್ಯಾಡ ಅಂತ ನಿಂಗೆ ಬುದ್ದಿ ಹೇಳು ಅಂತಿದ್ರ, ಇಲ್ಲಿ ತಂಕ ಏನೋ ಐತ್ ಬಿಟ್ಬಿಡು. ಊರಲ್ಲೆಲ್ಲ ಆಡ್ಕೊಳ್ತಾರೆ ನವೀನನಿಗೆ ಲೂಸಾ ಅಂತ ” ಅಮ್ಮನ ಆತಂಕದ ಮಾತುಗಳಿಗೆ ನವೀನನ ನಿರಾಯಾಸಕ್ತಿಯ ಮೌನವೇ ಉತ್ತರವಾಗಿತ್ತು.

ಅದು ಅಜ್ಜ ನೆಟ್ಟ ಹಲಸಿನ ಮರ, ಮರ ನೆಟ್ಟಿದ್ದು ಮೊಮ್ಮಗ ನವೀನನಿಗಾಗಿ. ಆತನಿಗಾಗ 5 ವರ್ಷ. ಹಲಸಿನ ಹಣ್ಣು ಅಂದ್ರೆ ಪಂಚಪ್ರಾಣ. ಮನೆಯಲ್ಲಿ ಹಲಸಿನ ಹಣ್ಣಿನ ಮರ ಇರಲಿಲ್ಲ. ಮೊಮ್ಮೊಗನಿಗಾಗಿ ಆಚೆ ಈಚೆ ಮನೆಯವರಲ್ಲಿ ಹಲಸಿನ ಹಣ್ಣನ್ನು ಕೇಳಿ ತರಬೇಕಾಗಿತ್ತು ಅಥವಾ ಸಂತೆಯಿಂದ ಹಣ ಕೊಟ್ಟು ತರಬೇಕಾಗಿತ್ತು. ದುಡ್ಡಿಗೆ ಸಮಸ್ಸೆಯ ಆ ದಿನಗಳಲ್ಲಿ ಅದು ಕಷ್ಟದ ಮಾತು. ಅಂದು ಅಜ್ಜಯ್ಯ ಯಾವುದೋ ಕಾರಣಕ್ಕೆ ಕೋಟೇಶ್ವರಕ್ಕೆ ಹೋಗಿದ್ದಾಗ ಅಲ್ಲಿನ ಯುವಕ ಮಂಡಲದವರು ವನಮಹೋತ್ಸವ ಕಾರ್ಯಕ್ರಮ ಮಾಡುತ್ತಿದ್ದಾಗ ಹೂವುಕಿ ತಂಡ ಹಲಸಿನ ಗಿಡ ಅದು.

ಹಲಸಿನ ಗಿಡ ನೆಡುವಾಗ ಅಜ್ಜಯ್ಯ ಮನೆಯವರನ್ನೆಲ್ಲ ಕರೆದು ಆದೇಶ ಹೊರಡಿಸಿದರು ” ಈ ಗಿಡ ನವೀನನ ಅಸ್ತಿ.ಇದರಮೇಲೆ ಯಾರಿಗೂ ಅಧಿಕಾರ ಇಲ್ಲ. ಮರವಾಗಿ ಹಣ್ಣಾದಮೇಲೆ ನವೀನ ಕೊಟ್ಟರೆ ನೀವು ತಿನ್ನಬಹುದು. ಗೊತ್ತೈಯಿತಲ್ಲ ” ಅಜ್ಜಯ್ಯನ ಮಾತಿನಿಂದಲೋ ಅಥವಾ ಹಲಸಿನ ಹಣ್ಣಿನ ಮೇಲಿನ ಪ್ರೀತಿಯಿಂದಲೋ ನವೀನನಿಗೆ ಆ ಗಿಡದ ಮೇಲೆ ಎಲ್ಲಿಲದ ಭಾಂದವ್ಯ ಬೆಳೆಯಿತು. ಬೆಳ್ಳಿಗೆ ಎದ್ದ ಕೂಡಲೇ ಹಲ್ಲುಜ್ಜುವ ಮೊದಲೇ ಗಿಡಕ್ಕೆ ನೀರು ಹಾಕುತ್ತಿದ್ದ.ದಿನ ಸಂಜೆ ಶಾಲೆಯಿಂದ ಬಂದಕೂಡಲೇ ಗಿಡ ಪಕ್ಕ ನಿಂತು ನಿನ್ನೆಗಿಂತ ಇಂದೆಷ್ಟು ಉದ್ದಕ್ಕೆ ಬೆಳೆದಿದೆ ಅಂತ ಲೆಕ್ಕ ಹಾಕುತ್ತಿದ್ದ. ಇತ್ತ ಅಜ್ಜಯ್ಯ ಹಲಸಿನ ಗಿಡಕ್ಕೆ ಬೇಲಿ ಹಾಕಿ ಅದರ ಸುತ್ತ ತೆಂಗಿನ ಮಾಡಲಿನ ಹೊದಿಕೆ ಹಾಸಿ ಗಿಡಕ್ಕೆ ಸಂಪೂರ್ಣ ರಕ್ಷಣೆ ನೀಡಿದ್ದರು.

“ಈ ಗಿಡ ನೆಟ್ಟಿದ್ ನಂಗೆ ಹಣ್ಣು ಬೇಕಂತ ಅಲ್ಲ. ನಾಳೆ ಇದು ಫಲ ಕೊಡೊ ಹೊತ್ತಿಗೆ ನಾನ್ ಇರ್ತೀನೋ ಇಲ್ಲವೋ, ಆದ್ರೆ ನನ್ ಮೊಮ್ಮೊಗ ನೋಡಿ, ಅಜ್ಜಯ್ಯ ಎಂತ ಒಳ್ಳೆ ಹಲಸಿನ ಹಣ್ಣಿನ ಮರ ನೆಟ್ಟು ಹೋಗಿದ್ದಾರೆ ಅಂತ ಅದ್ರ ಹಣ್ಣು ತಿಂತ ಹೇಳಿದ್ರ್ ಸಾಕಪ್ಪ ” ಅಂತ ಅಜ್ಜಯ್ಯ ತನ್ನ ಗೆಳೆಯೆರ ಹತ್ತಿರ ಹೇಳುತ್ತಿದ್ದದನ್ನು ಕೇಳಿಸಿಕೊಂಡ ಒಳಗೊಳಗೇ ಖುಷಿ ಪಡುತ್ತಿದ್ದ.

ನವೀನ ಬೆಳೆಯುತ್ತ ಹೋದ, ಜೊತೆಗೆ ಹಲಸಿನ ಗಿಡವೂ ಬೆಳೆಯಿತು. ಗಿಡ ಹೋಗಿ ಮರವಾಯಿತು.ನವೀನ SSLC ಗೆ ಬಂದ. ನವೀನಿಗೆ ದಿನಕಳೆದಂತೆ ಮರದೊಂದಿನ ಅನುಭಂದ ಇನ್ನಷ್ಟು ಗಾಢವಾಯಿತು.ಒಮ್ಮೆ ಪಕ್ಕದಮನೆ ರಾಜುವಣ್ಣ ಯಾವೊದೋ ಕಾರಣಕ್ಕೆ ಹಲಸಿನ ಗಿಡದ ಎಲೆ ಕಿತ್ತಿದಕ್ಕೆ ಕೋಪಗೊಂಡು ಅವರಿಗೆ ಕಲ್ಲಲ್ಲಿ ಹೊಡೆದಿದ್ದ. ಆಮೇಲೆ ಅಜ್ಜಯ್ಯ ಬಂದು ಸಮಾಧಾನಿಸಿದ ಮೇಲೇ ನವೀನನ ಕೋಪ ಕಡಿಮೆಯಾಗಿತ್ತು. ಅಜ್ಜಯ್ಯ ಯಾವಾಗಲೂ ಅಂಗಡಿಯಿಂದ ತಿಂಡಿ ತಂದಾಗಲ್ಲೆಲ್ಲ ಅದರ ಒಂದು ಚಿಕ್ಕ ತುಂಡನ್ನು ಹಲಸಿನ ಗಿಡಕ್ಕೆ ಅಂತ ಅದರ ಪಕ್ಕದಲ್ಲಿಟ್ಟು ಉಳಿದ್ದನ್ನವು ತಾನು ತಿನ್ನುತ್ತಿದ.

ನವೀನನಿಗೆ SSLC ಪರೀಕ್ಷೆಗೆ ಒಂದು ತಿಂಗಳು ಇರುವಾಗ ಅಜ್ಜಯ್ಯ ತೀರಿಕೊಳ್ಳುತ್ತಾರೆ. ಅಜ್ಜಯ್ಯನ ತಿಥಿ ಕಾರ್ಯವೆಲ್ಲ ಮುಗಿದಮೇಲೆ ಒಂದು ಸಂಜೆ ಅಜ್ಜಯ್ಯನ ನೆನಪಾಗಿ ಹಾಗೆ ಹಲಸಿನ ಮರದ ಬುಡದಲ್ಲಿ ನಿಂತ್ತಿದ್ದಾಗ ಯಾರೋ ಮರದಮೇಲಿಂದ ಕರೆದಂತಾಗಿ ನವೀನ ಮೇಲೆ ನೋಡಿದರೆ ಅಲ್ಲಿ ಆಗಷ್ಟೇ ಚಿಗುರೊಡೆದ ಮೊದಲ ಹಲಸಿನಕಾಯಿ ಕಣ್ಣಿಗೆ ಬಿದ್ದಿತ್ತು. ಆ ಹಲಸಿನ ಕಾಯಿಯ ಹಿಂದೆ ಅಜ್ಜಯ್ಯ ನಕ್ಕ ಹಾಗಾಯಿತು. ದುಃಖ ತಾಳಲಾರದೆ ನವೀನ ಮರವನ್ನು ಜೋರಾಗಿ ತಬ್ಬಿಕೊಂಡ ಅಳತೊಡಗಿದ.

“ಅಜ್ಜಯ್ಯ ನಂಗೆ ಗೊತ್ತು ನೀವು ಈ ಹಲಸಿನ ಮರದಲ್ಲಿ ಸೇರಿಕೊಂಡಿದ್ದೀರಾ ಅಂತ.ಇನ್ಮೇಲೆ ನೀವು ಇಲ್ಲೇ ಇರಿ. ಎಲ್ಲೂ ಹೋಗಬೇಡಿ. ನಾನು ದಿನ ನಿಮ್ಮನ್ನು ಇಲ್ಲೇ ನೋಡಬೇಕು. ನಾನು ಇರುವಷ್ಟು ದಿನ ಈ ಮರಕ್ಕೆ ಏನು ಆಗದ ಹಾಗೆ ನೋಡಿಕೊಳ್ಳುತ್ತೇನೆ. ಪ್ರಾಮಿಸ್ ಅಜ್ಜಯ್ಯ ” ನವೀನನ ಮಾತು ಹೊರಗೆ ನಿಂತಿದ್ದ ಮನೆಯವರೆಲ್ಲರ ಕಣ್ಣಲ್ಲಿ ನೀರು ತರಿಸಿತು.

ಮುಂದೆ ಹಲಸಿನಮರ ನವೀನನ ಪಾಲಿಗೆ ಅಜ್ಜಯ್ಯನ ಇನ್ನೊಂದು ಅವತಾರವಾಯಿತು. ದಿನಾ ಬೆಳಿಗ್ಗೆ ಎದ್ದ ಕೂಡಲೇ ಆತ ಮರಕ್ಕೊಂದು ನಮಸ್ಕಾರ ಮಾಡುತ್ತಿದ್ದ, ರಾತ್ರಿ ಊಟ ಆದಮೇಲೆ ಸ್ವಲ್ಪ ಹೊತ್ತು ಮರದ ಕೆಳೆಗೆ ಕುಳಿತು ಅಜ್ಜಯ್ಯನ ಇಷ್ಟದ ದೇವರನಾಮಗಳನ್ನು ಹಾಡಿ ಬಂದು ಮಲಗುತ್ತಿದ್ದ. ಹಲಸಿನ ಮರವು ಅಷ್ಟೇ, ಆತನ ಪ್ರೀತಿಗೆ ಮರುಳಾದಂತ್ತಿತ್ತು. ಮಾರುದ್ದದ ಹಲಸಿನಹಣ್ಣು ಮರದಲ್ಲಿ ಬಿಡುತ್ತಿತ್ತು, ಅದೂ ಭಯಂಕರ ಸಿಹಿ. ವರ್ಷಕ್ಕೆ 50 ಹೆಚ್ಚಿನ ಹಣ್ಣು ಮರದಲ್ಲಿ ಆಗುತ್ತಿತ್ತು. ಅಕ್ಕ ಪಕ್ಕದ ಮನೆಯವರೆಲ್ಲ ನವೀನ ಕೊಟ್ಟ ಹಲಸಿನ ಹಣ್ಣು ತಿನ್ನುತ್ತಾ ರಂಗಜ್ಜನೇ ಬಂದು ಹಣ್ಣಿಗೆ ಸ್ವರ್ಗದಿಂದ ತಂದ ಸಿಹಿ ಜೇನು ತುಂಬಿಸಿದ್ದಾನೆ ಅಂತ ಮಾತಾಡಿಕೊಳ್ಳುತ್ತಿದ್ದರು.

ನವೀನ ತೆಕ್ಕಟ್ಟೆಯಲ್ಲಿ PUC ಮುಗಿಸಿ ಕುಂದಾಪುರಕ್ಕೆ ಬಿ.ಕಾಮ್ ಗೆ ಸೇರಿಕೊಂಡ. ದಿನ ಕಾಲೇಜು ಮುಗಿಸಿ ಅಜ್ಜಯ್ಯನ ದೂರದ ಸಂಬಂಧಿ ರಾಜಾರಾಮ ಶೆಟ್ರ ಆಡಿಟ್ ಆಫೀಸಿನಲ್ಲಿ ಒಂದು ಗಂಟೆ ಕೆಲಸ ಮಾಡಿ ಮನೆಗೆ ಬರುತ್ತಿದ್ದ. ಬಿ.ಕಾಮ್ ಮುಗಿಸಿದ ನಂತರ ಒಂದು ವರುಷ ಅಲ್ಲೇ ಕೆಲಸಮಾಡುತ್ತಿದ್ದವನನ್ನು ದುಬೈ ಕೈ ಬೀಸಿ ಕರೆಯಿತು. ದುಬೈಯಲ್ಲಿ ರಾಜಾರಾಮ್ ಶೆಟ್ರ ಹೆಂಡತಿಯ ತಂಗಿಯ ಗಂಡನ ಆಫೀಸ್ ಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡ.

ದುಬೈಗೆ ಹೋಗಿ ಈಗ ಹೆಚ್ಚು ಕಡಿಮೆ ಹತ್ತು ವರ್ಷವಾಗಿದೆ. ತಿಂಗಳಿಗೆ ಸುಮಾರು 5 ಲಕ್ಷ ಸಂಬಳವಿದೆ. ಊರಲ್ಲಿ ಮನೆ ಕಟ್ಟಿಸಿದ್ದಾನೆ, ತಂಗಿಗೆ ಮಾಡುವೆ ಮಾಡಿಸಿದ್ದಾನೆ. ಈಗ ನವೀನನ ಅಪ್ಪಯ್ಯ ಮಗನಿಗೆ ಹಿಡುಗಿ ಹುಡುಕುತ್ತಿದ್ದಾರೆ.

“ಓ ನವೀನ, ಏನ್ ದುಬೈಯಲ್ಲಿ ಜೋರ್ ಮಳೆ ನಾ ಏನ್. ಬಪ್ಪುದ ಲೇಟ್ ಐತಲ್ಲಾ.” ಹಲಸಿನ ಮರದ ಕೆಳಗೆ ಬೈಕ್ ಪಾರ್ಕ್ ಮಾಡುತ್ತಿದ್ದ ನರಸಿಂಹನ ವಟವಟ ಆರಂಭವಾಯಿತು. ” ಪರವಾಗಿಲ್ಲ, ಬೇಗ ರೆಡಿ ಆಗಿದ್ಯಲ್ಲ ಮಾರಾಯ. ಬಿಡು ಏನ್ ಹೆಣ್ ಕಾಂಬುಕೆ ಇಲ್ಲ ಅಲ್ಲ ಇವತ್, ಸೆಂಟ್ ಈ ಸರಿ ಮಿಸ್ ಮಾಡ್ಲಾ ತಾನೇ ” ಅನ್ನುತಾ ಬಾಯಲ್ಲಿದ್ದ ಎಲೆಯಡಿಕೆಯನ್ನು ಥೋ ಅಂತ ಉಗಿದ
“ಕಳೆದ ಸರಿ ಸೆಂಟ್ ಮಿಸ್ ಮಾಡಿದ್ದಕ್ಕೆ ವಾಟ್ಯಾಪ್ಪ್ ನಲ್ಲಿ ಸಾವಿರ ಮೆಸಜ್ ಹಾಕ್ಡ್ಯಾವ ನಿನ್. ಈ ಸರಿ ಮರೆಯುಹುದಾರು ಹೆಂಗೆ. ತಗೋ ” ಅಂದ ಕಿಸೆಯಲ್ಲಿದ್ದ ಸೆಂಟ್ ಬಾಟಲಿಯನ್ನು ನವೀನ ನರಸಿಂಹನ ಕೈಗೆ ಇತ್ತ.

“ನೀ ಎಂತದೇ ಹೇಳು, ಈ ದುಬೈ ಸೆಂಟಿಗಿಪ್ಪಷ್ಟು ಪವರ್ ನಮ್ ಸೆಂಟಿಗಿಲ್ಲ. ಇದನ್ನ ಹೈಕಂಡ್ ಹ್ವಾರೆ ಒನ್ ತರ ರೆಸ್ಪೆಕ್ಟ್ ಸಿಗುತ್ತಾ” ಸೆಂಟನ್ನು ಶರ್ಟ್ ಮೇಲ್ ಪ್ರೋಕ್ಷಿಸುತ್ತ ನರಸಿಂಹ ನುಡಿದ. ನವೀನ ನರಸಿಂಹನ ಕೈಯಲ್ಲಿದ್ದ ಬೈಕಿನ ಕೀ ತಗೆದುಕೊಂಡು ತಾನೇ ಬೈಕ್ ಚಲಾಯಿಸಿದೊಂದು ಕೋರ್ಟ್ ನತ್ತ ಸಾಗಿದ.
” ನವೀನ ಊರಲ್ಲಿ ಎಲ್ಲರಿಗೂ ನಿನ್ ಮೇಲ ಬಾಳ ಸಿಟ್ ಕಾಣಾ, ” ಬೈಕಿನ ರಭಸಕ್ಕೆ ಮುಖಕ್ಕೆ ಅಪ್ಪಳಿಸುತ್ತಿದ್ದ ಗಾಳಿಯ ಹೊಡೆತದ ನಡುವೆ ನರಸಿಂಹ ಬಾಯಿ ತೆರೆದ
” ಗೊತ್ತು ಬಿಡು, ನಾನು ಊರಿನ ವಾಟ್ಯಾಪ್ಪ್ ಗ್ರೂಪ್ನಲ್ಲಿ ನೋಡುತ್ತಿದ್ದೇನೆ ಏನ್ ಮಾಡೋದು, ನಾನೇನು ಬೇರೆಯವರಿಗಾಗಿ ಬದುಕುಕಾತ್ತ “, ನವೀನ ಉತ್ತರ ದಿಟ್ಟ ವಾಗಿತ್ತು.
“ಅಲ್ಲ ನವೀನ,ಒಂದ್ ಹಲಸಿನ ಮರನ ಉಳಿಸುವುದಕ್ಕಾಗಿ ರೋಡ್ ಅಗಲ ಮಾಡುವುದಕ್ಕೆ ಸ್ಟೇ ತಂದಿದ್ದೀಯಲ್ಲ ಯಾಕೋ ಯಾರಿಗೂ ಸರಿ ಕಾಣ್ಸ್ತ ಇಲ್ಲ ಮಾರಾಯ ” ನರಸಿಂಹನ ಮಾತು ಮುಗಿದಿಲ್ಲ
“ನೀ ಮುಚ್ಕ ಕುತ್ಕೋ, ” ಅಂದ ನವೀನ ಬೈಕನ್ನು ಇನ್ನು ಜೋರಾಗಿ ಓಡಿಸತೊಡಗಿದ.

ಶುಕ್ರವಾರ ರಜೆಯ ಮೂಡಿನಲ್ಲಿ ಇದ್ದಾಗ ನವೀನನಿಗೆ ಊರಿಂದ ಅಪ್ಪಯ್ಯನ ಫೋನ್ ಬಂದಿತ್ತು ” ನವೀನ ನಮ್ಮ ಮನೆಯೆದುರಿನ ಕುಂದಾಪ್ರ ಮಂಗಳೂರು ಹೈವೇನ ಡಬಲ್ ರೋಡ್ ಮಾಡ್ತಾರೆ ಅಂತಿತ್ತಲ್ಲ. ಈಗ ಅದು ಸ್ಯಾಂಕ್ಷನ್ ಆಗಿದೆಯೆಂತೆ. ಇಂದು ಸರ್ವೇ ಮಾಡಲು ಇಂಜಿನಿಯರ್ ಬಂದು ಎಲ್ಲ ಮಾರ್ಕ್ ಮಾಡಿದ್ದಾರೆ. ರಸ್ತೆ ಪಕ್ಕದ ನಮ್ಮ 2 ಮೀಟರ್ ಜಾಗ ರಸ್ತೆಗೆ ಹೋಗುತ್ತಂತೆ. ಅದಕ್ಕೆ ಸರಕಾರ ಪರಿಹಾರ ಕೊಡ್ತಾರಂತೆ. ” ಅಪ್ಪಯ್ಯನ ಮಾತಿಗೆ ಮದ್ಯೆ ಬಾಯಿ ಹಾಕಿದ ನವೀನ,
“2 ಮೀಟರ್ ಜಾಗ ಅಂದ್ರೆ ಹಲಸಿನ ಮರನೂ ಬರುತ್ತದಲ್ಲ ಅಪ್ಪಯ್ಯ ”
” ಹೌದು ಅದು ಹೋಗ್ತದಂತೆ ”
“ಹಲಸಿನ ಮರ ಹೋದ್ರೆ ಹೆಂಗೆ ಅಪ್ಪಯ್ಯ. ಸ್ವಲ್ಪ ಅಡ್ಜಸ್ಟ್ ಮಾಡಿ ಮರ ಉಳ್ಸಬಹುದಲ್ಲ ”
“ಕೇಳ್ದೆ ಮಗ, ಆತಿಲ್ಲ ಅಂದ್ರು. ಮರ ಈಗಿನ ರಸ್ತೆಗೆ ತಾಂಗಿ ಇತ್ತಲ್ಲ, ಅದ್ಕೆ ಎಂಗ್ ಲೆಕ್ಕ ಹಾಕ್ರು ಆತಿಲ್ಲ ಅಂದ್ರು. ಮರನ ಬೇರೆ ಕಡೆ ಟಾನ್ಸ್ಫರ್ ಮಾಡುಕ್ ಆತಾ ಅಂತ ಇಂಜಿನಿಯರ್ ಕೇಳ್ದೆ. ಹೆಲ್ಸಿನ್ ಮರನ್ ಹಂಗೆಲ್ಲಾ ಮಾಡು ಆತಿಲ್ಲ ಅಂಬ್ರ. ಮರ ಕಡಿದೆ ಬೇರೆ ದಾರಿ ಇಲ್ಲ ಮಗ ” ಅಪ್ಪಯ್ಯನ ಮಾತಲ್ಲಿ ಅಂತಂಕ ಛಾಯೆ ಮನೆಮಾಡಿತ್ತು.

“ಈಗಿರುವ ವೆಹಿಕಲ್ ಗೆ ರಸ್ತೆ ತುಂಬಾ ಚಿಕ್ಕದಾಯಿತು ಇಲ್ಲಿ ಡಬಲ್ ರೋಡ್ ಬೇಕೇ ಬೇಕು. ಇಲ್ಲ ಅಂದ್ರೆ ಕಷ್ಟನೇ ” ಊರಿಗೆ ಬಂದಾಗೆಲ್ಲ ನವೀನ ಈ ಮಾತನ್ನು ಆಡುತ್ತಿದ್ದ. ಅದಕ್ಕೆ ಕಾರಣನೂ ಇತ್ತು. ದಿನೇದಿನೇ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗುತ್ತಿತ್ತು. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದವು.
“ಎಷ್ಟೋ ಕಡೆ ಜನರ ಅಂಗಡಿ, ಮನೆ ಎಲ್ಲ ರಸ್ತೆಗೆ ಹೋಗ್ತಾ ಇದೆ, ನಂಗೂ ಗೊತ್ತು ನಿಂಗೆ ಆ ಹಲಸಿನ ಮರ ಅಂದ್ರೆ ಜೀವ ಅಂತ. ಏನ್ ಮಾಡುಕ್ ಆತ. ಊರಿನ ಉದ್ದಾರಕ್ಕಾಗಿ ನಾವು ಸ್ವಲ್ಪ ತ್ಯಾಗ ಮಾಡ್ಕಲ್ಲ ಮಗ. ಅಜ್ಜಯ್ಯನ ನೆನಪಿಗೆ ಇನ್ನೊಂದು ಮರ ನೇಟ್ರ ಆಯಿತು ಬಿಡು “ಅಪ್ಪ ಮಗನನ್ನು ಸಮಾಧಾನ ಮಾಡುವ ಯತ್ನ ಮಾಡಿದ್ದರು.
ಈ ಮಾತುಕತೆಯಾದ ಎರಡೇ ವಾರಕ್ಕೆ ನವೀನ ಆಕಸ್ಮಿಕವೆನ್ನುವಂತೆ ಊರಿಗೆ ಬಂದಿದ್ದ. ಅದಾಗಲೇ ರಸ್ತೆ ಅಗಲೀಕರಣ ಕೆಲಸ ಆರಂಭವಾಗಿತ್ತು.ಕೆಲವು ಕಡೆ ರಸ್ತೆಯ ಪಕ್ಕದ ಜಾಗವನ್ನು ಸಮದಟ್ಟು ಮಾಡುವ ಕೆಲಸ ಬಾರೀ ವೇಗದಲ್ಲಿ ನೆಡೆದಿದ್ದು.

“ಮಹಾಸ್ವಾಮಿ ನಾನು ಅಭಿವೃದ್ಧಿಯ ವಿರೋಧಿಯಾಗಿ ಇಲ್ಲಿ ನಿಂತಿಲ್ಲ. ರಸ್ತೆ ಅಗಲವಾಗಲೇ ಬೇಕು. ಇದು ಅನಿವಾರ್ಯ ಸಹ. ದುಬೈಯಂತಹ ದೇಶದಲ್ಲಿರುವವನು ನಾನು. ಭಾರತದ ರಸ್ತೆಗಳು ಕೆನ್ನೆ ನುಣುಪಿನಷ್ಟು ಸುಂದರವಾಗಬೇಕೆನ್ನುವವ ನಾನು. ಹಾಗಂತ ಪರಿಸರ ಮತ್ತು ಪರಿಸರದ ಜೀವರಾಶಿಗಳ ಬದುಕು ಮತ್ತು ಭಾವನೆಗಳಿಗೆ ಕೊಡಲಿಯೇಟು ನೀಡಬಾರದಲ್ಲ. ಅವಕಾಶ ಇದ್ದಾಗ ನಿಸರ್ಗಕ್ಕೆ ಅಭಿವೃದ್ಧಿಯ ನೆಪದಲ್ಲಿ ನಾವು ಮಾರಕವಾಗಬಾರದು. ಇಲ್ಲಿ ಆಗುತ್ತಿರುವುದು ರೈಲ್ವೆ ಟ್ರ್ಯಾಕ್ ಅಲ್ಲವಲ್ಲ. ನಮ್ಮ ಜಾಗದ ಎದುರಿರುವುದು ಖಾಲಿ ಸರಕಾರೀ ಜಾಗ. ಈ ಜಾಗವನ್ನು ಬಳಸಿಕೊಂಡು ರಸ್ತೆಯನ್ನು ಸ್ವಲ್ಪ ಓರೆಯಾಗಿಸಿ ಹಲಸಿನಮರವನ್ನು ಉಳಿಸಬಹುದು. ಇದಕ್ಕೆ ಸಂಭಂದಪಟ್ಟಹಾಗೆ ಎಕ್ಸ್ಪರ್ಟ್ ಕಡೆಯಿಂದ ಒಂದು ಡ್ರಾಯಿಂಗ್ ತಂದು ತಮಗೆ ಸಲ್ಲಿಸಿದ್ದೇನೆ. ತಾವು ಅದನ್ನು ಗಮನಿಸಬಹುದು.ಇಷ್ಟಕ್ಕೂ ನಮಗೆ ಅದು ಬರಿ ಹಲಸಿನ ಮರ ಮಾತ್ರವಲ್ಲ.ನಮ್ಮೆಲ್ಲ ಭಾವನೆಗಳ ಭಾವಕೋಶ. ನನ್ನೆಲ್ಲ ಬಾಲ್ಯದ ನೆನಪುಗಳನ್ನು ಬಚ್ಚಿಟ್ಟುಕೊಂಡ ಭದ್ರತಾ ಕೊಠಡಿ. ಮರದ ಕೆಳಗೆ ಹೋದರೆ ಬಾಲ್ಯದ ನೆನಪಿನ ಸುಳಿ ನನ್ನನ್ನಾವರಿಸುತ್ತದೆ. ಅತ್ತಿದ್ದು, ನಕ್ಕಿದು, ಆಟವಾಡಿದ್ದು, ಮಣ್ಣಿನ ಮನೆ ಕಟ್ಟಿದ್ದು, ಮಳೆನೀರಲ್ಲಿ ಕಾಗದದ ದೋಣಿ ಬಿಟ್ಟಿದ್ದು, ಮರಕೋತಿ ಆಟ ಆಡಿದ್ದು, ಮರವನ್ನೇ ವಿಕೆಟ್ ಮಾಡಿಕೊಂಡು ಕ್ರಿಕೆಟ್ ಆಡಿದ್ದು, ಹೀಗೆ ಒಂದೋ ಎರಡೋ, ಹೀಗೆ ನೂರಾರು ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತೆ. ದಯವಿಟ್ಟು ರಸ್ತೆಯ ಪಥವನ್ನು ಸ್ವಲ್ಪ ಬದಲಾಯಿಸಿ ನನ್ನ ಹಲಸಿನ ಮರವನ್ನು ನನಗೆ ಉಳಿಸಿಕೊಡಿ.ಇದಕ್ಕೇನಾದರೂ ಹೆಚ್ಚುವರಿ ಖರ್ಚು ಬಂದರೆ ನಾನೇ ಭರಿಸುತ್ತೇನೆ. ದಯವಿಟ್ಟು ನನ್ನ ನೆನಪಿನ ಬುಟ್ಟಿಯನ್ನು ನನ್ನಿಂದ ಕಸಿಯಲು ಅವಕಾಶ ನೀಡಬೇಡಿ ” ನ್ಯಾಯಾಧೀಶರ ಎದುರು ನವೀನ ಮಾತು ಮುಗಿಸುವಹೊತ್ತಿಗೆ ಕಣ್ಣಾಲಿಗಳು ತುಂಬಿಕೊಂಡಿತ್ತು.

ಹೌದು ನವೀನ ಕೇಸು ಹಾಕಿದ್ದ. ತಾಲೂಕ್ ಕೋರ್ಟ್ನ್ ನಲ್ಲಿ ಹೈವೇ ಅಗಲೀಕರಣದಿಂದ ನಾಶವಾಗಲಿರುವ ತನ್ನ ಹಲಸಿನ ಮರವನ್ನು ಉಳಿಸಿಕೊಡಬೇಕೆಂದು ಕೋರ್ಟ್ ಮೊರೆ ಹೋಗಿದ್ದ. ಇದು ಎಲ್ಲರಿಗೂ ವಿಚಿತ್ರವಾಗಿತ್ತು. ಊರಲ್ಲಿ ಮತ್ತು ಮನೆಯಲ್ಲಿ ಯಾರೂ ಹೇಳಿದರು ನವೀನ ಕೇಳಿರಲಿಲ್ಲ. ಆದರೆ ಕೋರ್ಟ್ ನವೀನನ ಅಹವಾಲು ಸ್ವೀಕರಿಸಿತ್ತು.ಆತನ ಬೇಡಿಕೆ ಪ್ರಕಾರ ರಸ್ತೆಯ ಪಥವನ್ನು ಸ್ವಲ್ಪ ಬದಲಿಸಿ ಹಲಸಿನ ಮರವನ್ನು ಉಳಿಸಲು ಸಾಧ್ಯವೇ ಎಂದು ಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಮನ್ಸ್ ನೀಡಿತ್ತು ಮತ್ತು ತನ್ನ ತೀರ್ಪು ಬರುವವರೆಗೂ ಆ ಜಾಗದಲ್ಲಿ ರಸ್ತೆ ಅಗಲೀಕರಣ ಮಾಡಬಾರದೆಂದು ತಡೆಯಾಜ್ಞೆ ನೀಡಿತು. ನವೀನ ಪ್ರಥಮ ಘಟ್ಟದಲ್ಲಿ ಯಶ ಪಡೆದ. ಆದರೆ ಮುಂದಿನ ವಿಚಾರಣೆಯಲ್ಲಿ ಒಂದು ಮರಕ್ಕಾಗಿ ರಸ್ತೆಯ ಪಥವನ್ನು ಬದಲಾಯಿಸಲಿಕ್ಕೆ ಆಗದು ಮತ್ತು ಅದು ವೈಜ್ಞಾನಿಕವಾಗಿ ಸಮಂಜಸವಲ್ಲ ವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾದ ಮಂಡಿಸಿತ್ತು

ಕೇಸು ದಾಖಲಾಗಿ 2 ವರ್ಷ ಉರುಳಿತು.ಹೆಚ್ಚು ಕಡಿಮೆ ಎಲ್ಲ ಕಡೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿಬಿಟ್ಟಿತ್ತು. ಆದರೆ ನವೀನನ ಕೇಸಿನಿಂದ ತೆಕ್ಕಟ್ಟೆಯ ಸುಮಾರು 1 ಕಿಲೋ ಮೀಟರ್ ಉದ್ದದ ರಸ್ತೆ ಹಾಗೆ ಉಳಿದುಕೊಂಡಿದೆ ಮತ್ತು ಸಂಪೂರ್ಣ ಕೆಟ್ಟು ಕೆರ ಹಿಡಿದಿತ್ತು. ಹೆದ್ದಾರಿ ಪ್ರಾಧಿಕಾರ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಇರುವುದರಿಂದ ರಸ್ತೆ ದುರಸ್ತಿಯನ್ನು ಉದ್ದೇಶಪೂರಕವಾಗಿ ಮರೆತುಬಿಟ್ಟಿತ್ತು. ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿತ್ತು. ಅಲ್ಲೀತನಕ ಡಬಲ್ ರೋಡಿನಲ್ಲಿ ವೇಗವಾಗಿ ಬರುವ ವಾಹನ ಇಲ್ಲಿ ಒಂದು ಕಿಲೋಮೀಟರ್ ದಾಟಲು ಇನ್ನಿಲ್ಲದ ಹರಸಾಹಸ ಮಾಡಬೇಕಾದ ಪರಿಸ್ಥಿತಿ. ” ಅವನ್ಯಾವನೋ ಮಾರ್ಲ ಒಂದ್ ಹಲಸಿನ ಮರಕ್ಕಾಗಿ ಸ್ಟೇ ತಂದಿದ್ದನಲ್ಲ, ಅವ್ನ್ ವಾಲೀಕಾಲುಕೆ, ಇಲ್ಲಿ ದಿನ ನಾವ್ ಸಾಯಬೇಕ್. ಹೋಂಡಾ ಕಂಡಿಗ್ ಗಾಡಿ ಹಾಳಾರ್ ಅವ್ನ್ ಅಪ್ಪ ಕಾಸ್ ಕೊಡ್ತಾನ ” ಇದು ದಿನ ಇಲ್ಲಿ ಓಡಾಡುವ ಬಸ್ಸಿನ ಡ್ರೈವರುಗಳ ಸುಪ್ರಭಾತದ ಮೊದಲ ಸಾಲುಗಳು.
ಇಂದು ತೀರ್ಪಿನ ದಿನ. ಇಲ್ಲಿತನಕ 3 ಹಿಯರಿಂಗ್ ಮುಗಿಸಿದ ಕೋರ್ಟ್ ಎರಡು ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ತೀರ್ಪು ನೀಡಲು ಸಿದ್ಧರಾಗಿದ್ದರು. ನವೀನ ಕೋರ್ಟ್ ಎದುರುಗಡೆ ನಿರ್ಲಿಪ್ತನಾಗಿ ನಿಂತಿದ್ದ. ಆತನ ವಕೀಲ ಸದಾನಂದ ಶೆಟ್ಟಿ ಕೇಸು ಗೆದ್ದವನಂತೆ ಬೀಗುತ್ತಿದ್ದ. ಒಂದು ವೇಳೆ ಸೋತರೆ ಮೇಲಿನ ಕೋರ್ಟ್ ಗೆ ಹೋದರಾಯಿತು ಅಂತ ಆಗ ತಾನೇ ಅಲ್ಲಿಗೆ ಬಂಡ ನವೀನನ ಅಪ್ಪಯ್ಯನ ಹತ್ತಿರ ಹೇಳುತ್ತಿದ್ದ

“ಸದಾನಂದ ಮೇಲಿನ ಕೋರ್ಟ್ ಬೇಡ.ಇದು ಇಲ್ಲಿಗೆ ಮುಗಿಯಲಿ. ನಂಗೂ ಸಾಕಾಯಿ ಬಿಟ್ಟಿದೆ. ಇಡೀ ಊರೇ ಬೈತಾ ಇದೆ. ಅವನಿಗೇನು ದುಬೈಯಲ್ಲಿ ಇರ್ತಾನೆ. ಮೊನ್ನೆ MLA ಶಶಿಯಣ್ಣ ಕರೆದು ಬಾಯಿಗ್ ಬಂದಾಗ ಬೈತಿದ್ರ್, ರಸ್ತೆ ಹೊಂಡದಿಂದ ರಾತ್ರಿ ವೆಹಿಕಲ್ ಹಾರ್ನ್ ಕಡೆಯಿಂದ ಮನೆಗ್ ಮಲಗುವಂಗಿಲ್ಲ, ಡ್ರೈವರ್ ಗಳ ಶಾಪವೇ ಸಾಕು, ಮೂರ್ ಜನ್ಮ ತೊಳೆಯೋಕೆ. ಸಾಕಪ್ಪ ಸಾಕು. ಕೇಸು ನಮ್ಮ ಪರವಾಗಿ ಬಂದ್ರೆ ಐತಲ್ಲಾ, ಇಲ್ಲ ಅಂದ್ರೆ ಇಲ್ಲೇ ಬಿಟ್ಟುಬಿಡುವ. ” ಅಪ್ಪಯ್ಯನ ಮುಖದಲ್ಲಿ ಕೋಪಕ್ಕಿಂತ ಹೆಚ್ಚಾಗಿ ಅಸಹನೆ ಇತ್ತು.
“ಟೆನ್ಶನ್ ಮಾಡ್ಕಂಬೇಡಿ, ನವೀನ ಬೇಜಾರ್ ಮಾಡ್ಕಂತ, ಕೇಸ್ ಗೆಲ್ಲುದು ನಾವೇ ” ನರಸಿಂಹ ಎಲಾವಣಿ ಸಮಾಧಾನ ಪಡಿಸುವ ಯತ್ನ ಮಾಡಿದ.
“ಎಲ್ಲ ಬನ್ನಿ, ಈಗ ನಮ್ ಕೇಸೀದ್ ಟೈಮ್. ” ವಕೀಲ ಸದಾನಂದ ಶೆಟ್ಟಿ ಎಲ್ಲರನ್ನು ಕೋರ್ಟ್ನ್ ನ ಒಳಗೆ ಕರೆದುಕೊಂಡು ಹೋದ. ಕೋರ್ಟ್ ಹಾಲಿನಲ್ಲಿ ನಿಂತಿದ್ದ ನವೀನ ಸಂಪೂರ್ಣ ಬೆವತಿದ್ದ. ನ್ಯಾಯಾಧೀಶರ ಬಾಯಿಂದ ಒಳ್ಳೆ ಸುದ್ದಿ ಬರಲಪ್ಪ ಅಂತ ಮನೆದೇವರಲ್ಲಿ ಬೇಡಿ ಕೊಂಡ. ಇನ್ನೇನು ನಿವೃತ್ತಿಗೆ ದಿನ ಎಣಿಸುತ್ತಿದ್ದ ನ್ಯಾಯಾಧೀಶರು ತೀರ್ಪಿನ ಕಾಪಿಯನ್ನು ಕೈಗೆತ್ತಿಕೊಂಡರು. ನವೀನನಿಗ್ಯಾಕೋ ನ್ಯಾಯಾಧೀಶರ ಜಾಗದಲ್ಲಿ ಅಜ್ಜಯ್ಯ ಕೂತ ಹಾಗೆ ಕಂಡಿತು. ನ್ಯಾಯಾಧೀಶರನ್ನೇ ದಿಟ್ಟಿಸಿ ನೋಡಿದ, ಅಜ್ಜಯ್ಯನೆ ಕೂತಂತಿತ್ತು ಮತ್ತು ಅಜ್ಜಯ್ಯ ತೀರ್ಪಿನ ಕಾಪಿಯನ್ನು ಎತ್ತಿಕೊಂಡು ಓದಲು ಆರಂಭಿಸಿದಂತಿತ್ತು.

ಶೆಟ್ಟಿ ಲಂಚ್ ಹೋಂ, ಕುಂದಾಪುರದ ಪ್ರಸಿದ್ಧ ಮೀನಿನ ಹೋಟೆಲ್. ಇಲ್ಲಿ ಮೀನಿನ ಊಟ ಮತ್ತು ಕುಂದಾಪುರ ಚಿಕನ್ ಸಾರು ತಿನ್ನಲು ಉಡುಪಿ, ಭಟ್ಕಳದಿಂದ ಜನ ಬರ್ತಾರೆ. ಹೋಟೆಲಿನ ಸಾರಿನ ಘಮ ಘಮ ಪಕ್ಕದಲ್ಲಿರುವ ಬಸ್ ಸ್ಟ್ಯಾಂಡಿನ ವರೆಗೂ ಪಸರಿಸುತಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ಇಂದು ಸೋಮವಾರವಾದರೂ “ಗೌಲೇ ಸತ್ಯ ” ಎನ್ನುವಂತೆ ಜನರಿಂದ ಹೋಟೆಲ್ ತುಂಬಿಕೊಂಡಿತ್ತು. ಹೋಟೆಲ್ ಪ್ರವೇಶಿಸಿದ ನವೀನ ಬೆಕ್ಕಸ ಬೆರಗಾದ. ಸಂಪೂರ್ಣವಾಗಿ ಬದಲಾಗಿತ್ತು ಶೆಟ್ಟಿ ಲಂಚ್ ಹೋಂ ಚಿತ್ರಣ. ಹತ್ತು ವರ್ಷದ ಹಿಂದೆ ನವೀನ ಕಾಲೇಜಿಗೆ ಹೋಗುವ ದಿನಗಳಲ್ಲಿ ಅದೊಂದು ಚಿಕ್ಕ ಹೊಟೇಲಾಗಿತ್ತು. ಗೂಡಿನ ತರಹ ನಾಲ್ಕು ಕ್ಯಾಬೀನುಗಳು ಮತ್ತು ಸಾಲಾಗಿ ಇಟ್ಟ ಮರದ ಮೇಜುಗಳು ಅಷ್ಟೇ. ಆದರೆ ಈಗ ನಳನಳಿಸುವ ಎಸಿ ಕ್ಯಾಬಿನ್ನುಗಳು, ಐಷಾರಾಮಿ ಚೇರುಗಳು, ಅದ್ಬುತ ಇಂಟೀರಿಯರ್ ಡಿಸೈನ್ಸ್, ಒಟ್ಟಾರೆ ಹೋಟೆಲ್ ಅದ್ಭುತವಾಗಿ ಬದಲಾಗಿದೆ. ಹೌದು ಬದಲಾಗಲೇ ಬೇಕು. ಅದು ಕಾಲದ ಲಕ್ಷಣ, ಬದಲಾಗದಿದ್ದರೆ ಕಾಲವೇ ಬದಲಾಯಿಸುತ್ತದೆ. ಜಡ್ಜ್ ಹೇಳಿದ್ದು ಅದನ್ನೇ ಅಲ್ಲವಾ,
ಅಪ್ಪಯ್ಯ, ನರಸಿಂಹ, ಲಾಯರ್ ಸದನಂದ ಎಲ್ಲಾ ಮೆನುವಿನಲ್ಲಿರುವುದನ್ನೆಲ್ಲ ಆರ್ಡರ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ನಿರ್ಲಿಪ್ತ ಜನರಿವರು, ಬೇಗ ಬದಲಾಗಿಬಿಟ್ಟಿದ್ದಾರೆ, ಅಥವಾ ಹಾಗೆ ನಟಿಸುತ್ತಿದ್ದರೋ ಗೊತ್ತಾಗುತ್ತಿಲ್ಲ.

ನವೀನ ಬಾಯಿಗಿಳಿಸಿಕೊಂಡ ಬೆಳ್ಮೀನಿನ ಫ್ರೈ ಅದ್ಭುತವಾಗಿತ್ತು. ಹಾಗೆ ನ್ಯಾಯಾಧೀಶರ ಬಾಯಿಂದ ಬಂದ ಮಾತು ಆಗಿದ್ದಿದ್ದರೆ. “ಪರಿಸರ ಉಳಿಸಬೇಕು, ಸಂಸ್ಕೃತಿ ಹಾಳಾಗಬಾರದು, ಭಾವನೆಗಳಿಗೆ ದಕ್ಕೆ ಬರಬಾರದು ಅಂತೆಲ್ಲ ಕುಳಿತರೆ ನಾವು ಶತಮಾನಗಳ ಹಿಂದೇನೆ ಇರಬೇಕಾದಿತು. ಇವತ್ತಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನು ಪರಿಸರದ ಮೇಲಿನ ಕಾಳಜಿಯೊಂದಿಗೆ ನೀಡಬೇಕಾದದ್ದು ನಮ್ಮೆಲ್ಲರ ಬದ್ಧತೆ. ಅನುಭಂದ ಅಂತ ಅಜ್ಜ ನೆಟ್ಟ ಆಲದ ಮರದ ಕೆಳಗೆ ಬದುಕಲು ಸಾಧ್ಯವೇ ? ಒಂದು ಮರ ಕಡಿದರೆ ಎರಡು ಮರ ನೆಡಬೇಕು ಎನ್ನುವ ಜವಾಬ್ದಾರಿ ನಮ್ಮಲಿರಬೇಕು ಅಷ್ಟೇ. ರಸ್ತೆ ಅಗಲೀಕರಣ ಅನಿವಾರ್ಯ. ಇದರಿಂದ ಜಾಗ ಮನೆ ಕಳೆದುಕೊಂಡವರಿಗೆ ಸರಕಾರ ಹರಿಹಾರ ನೀಡಿದೆ. ಹಲಸಿನ ಮರದ ಮೇಲಿನ ಪ್ರೀತಿ, ಮಮಕಾರ, ಅನುಭಂದದ ಬಗ್ಗೆ ನನಗೂ ಗೌರವವಿದೆ. ಆದರೆ ಅದಕ್ಕಿಂತ ಅನಿವಾರ್ಯವಾದದ್ದು ಅಭಿವೃದ್ಧಿ. ನವೀನ ಅವರು ದಯಮಾಡಿ ತಮ್ಮ ತಾತನ ಹೆಸರಿಗೆ ಇನ್ನೊಂದು ಹಲಸಿನ ಮರ ನೆಟ್ಟುಕೊಳ್ಳಿ, ಆದರೆ ನಿಮ್ಮ ಒಂದು ಹಲಸಿನ ಮರಕ್ಕಾಗಿ ರಸ್ತೆಯ ಪಥ ಬದಲಿಸಲು ಸಾಧ್ಯವಿಲ್ಲ. ಪಥ ಬದಲಾಯಿಸಿದರೆ ಮುಂದೊಂದು ದಿನ ಆ ಜಾಗ ಅಪಘಾತದ ತೊಟ್ಟಿಲು ಆಗಬಹುದು. ನವೀನ ಅವರ ತಾತ ನನ್ನ ಜಾಗದಲ್ಲಿದ್ದರೂ ಇದೆ ತೀರ್ಪು ನೀಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂದಿನ ಯೋಜನೆಯಂತೆ ಅಲ್ಲಿ ರಸ್ತೆ ನಿರ್ಮಿಸಬಹುದೆಂದು ಕೋರ್ಟ್ ಈ ಮೂಲಕ ಆದೇಶಿಸುತ್ತಿದೆ ” ಎಂದು ನ್ಯಾಯಾಧೀಶರು ತೀರ್ಪು ಹೇಳಿ ಕೇಸ್ ಫೈಲ್ನ ನ್ನು ಕೋರ್ಟ್ ಕ್ಲರ್ಕ್ ಕೈಗೆ ಇಟ್ಟರು.
ಊಟ ಮುಗಿದು ಕೈ ತೊಳೆಯಲು ಫಿಂಗರ್ ಬೌಲ್ ನೊಳಗಿನ ಇಳಿಸಿದ ಬೆರಳುಗಳಿಗೆ ಬಿಸಿನೀರಿನ ಬೆಚ್ಚಗಿನ ಅನುಭೂತಿಯ ಜೊತೆಗೆ ನವೀನ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಕಪೋಲಗದ ಮೇಲೇನೂ ಬೆಚ್ಚನೆಯ ಬಾರವಾದ ಅನುಭವ ಕೊಡುತ್ತಿತ್ತು. ಹತ್ತು ವರ್ಷದ ಹಿಂದೆ ಕಿವಿಗೆ ಸಿಕ್ಕಿಸಿದ್ದ ರೆನೊಲ್ದ ಪೆನ್ನಿನ್ನಲ್ಲಿ, ಕೈಯಲ್ಲಿದ್ದ ಬಸ್ ಟಿಕೆಟ್ ತರದ ಬಿಲ್ಲನ್ನು ತನ್ನ ಅಂಕು ಡೊಂಕಾದ ಲಿಪಿಯಲ್ಲಿ ಬರೆದು ಕೊಡುತ್ತಿದ್ದದ ಸಪ್ಲೆಯರ್ ಸದಾಶಿವ ಇಂದು ಕೈಯಲ್ಲಿ ಕಾರ್ಡ್ ಸ್ವೀಪ್ಪಿಂಗ್ ಮೆಷಿನ್ ಹಿಡಿದು ತಾನು ಕೊಟ್ಟ ಕ್ರೆಡಿಟ್ ಕಾರ್ಡನ್ನು ಅದರಲ್ಲಿ ತುರುಕಿಸಿ ಬಿಲ್ಲಿನ ಮೊತ್ತ ಪಡೆಯುವುದನ್ನು ನೋಡಿ ನವೀನ ಬೆರಗಾದ. ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ, ಪರಿವರ್ತನೆ ಜಗದ ನಿಯಮ..

ಸತೀಶ್ ಶೆಟ್ಟಿ. ವಕ್ವಾಡಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಅಜ್ಜ ನೆಟ್ಟ ಹಲಸಿನ ಮರ: ಸತೀಶ್ ಶೆಟ್ಟಿ. ವಕ್ವಾಡಿ

  1. ಕುಂದಾಪುರ ಕನ್ನಡದ ಸೊಗಡಿನಲ್ಲಿ ಮೂಡಿ ಬಂದ ಕಥೆ ಅತ್ಯುತ್ತಮವಾಗಿದೆ. ಮನುಷ್ಯ ಸಂಬಂಧಕ್ಕೊಂದು ಹೊಸ ಆಯಾಮ ಹಾಗೂ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವಲ್ಲಿ ಲೇಖಕರು ಯಶಸ್ವಿ ಗೊಂಡಿದ್ದಾರೆ. Superb

Leave a Reply

Your email address will not be published. Required fields are marked *