ಹೀಗೇ ಸುಮ್ಮನೆ ಏನನ್ನಾದರೂ ಹೇಳುತ್ತಿರಬೇಕೆಂಬ ಮನಸ್ಸಿನ ವಾಂಛೆಯನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗದೆ ವಸ್ತುವಿಗಾಗಿ ಹುಡುಕಾಟ ಶುರುಮಾಡಿದೆ. ರಸ್ತೆಯಲ್ಲಿ ಅನೇಕ ವಸ್ತುಗಳು ಸಿಗುತ್ತವೆಂಬ ನಂಬಿಕೆ ಅನೇಕ ಬರಹಗಾರರದು. ವಸ್ತುಗಳೇನೋ ಸಿಗುತ್ತವೆ, ಆದರೆ ನೋಡುವ ಕಣ್ಣಿರಬೇಕು. ಆಘ್ರಾಣಿಸುವ ಮನಸ್ಸಿರಬೇಕು. ಅನುಭವಿಸುವ ಆಸೆ ಇರಬೇಕು. ಹೇಳಬೇಕೆಂಬ ಇಚ್ಚೆ ಇರಬೇಕು.
ಒಮ್ಮೆ ಹೀಗೆ ನಡೆದು ಬರುತ್ತಿರುವಾಗ ಸುಮಾರು ಎಂಬತ್ತು ವರ್ಷ ವಯಸ್ಸಿನ ಹೆಂಗಸು ಕೈಯಲ್ಲಿ ಕೆಂಪು ಬಣ್ಣದ ಸಣ್ಣ ಚೀಲವೊಂದನ್ನು ಹಿಡಿದು ನಡೆದು ಬರುತ್ತಿದ್ದಳು. ತನ್ನ ದೀರ್ಘಕಾಲದ ಬದುಕಿನಲ್ಲಿ ಸಾಕಷ್ಟು ಹಿತ-ಅಹಿತ ಅನುಭವಗಳನ್ನು ಕಂಡ ಹಿರಿ ಜೀವ. ಬಾಳ ದಾರಿಯ ಬವಣೆಗಳಿಗೆ ಬಾಗಿಹೋಗಿರುವ ಶರೀರ, ಆದರೂ ಒಂದು ಕಾಲಕ್ಕೆ ನೆಮ್ಮದಿಯ ಬದುಕನ್ನು ಕಂಡವಳು ಎಂಬ ಭಾವ ಮುಖದಲ್ಲಿ.
ಯೌವನದಲ್ಲಿನ ಸದೃಢದೇಹ ವಯೋಸಹಜ ಕ್ರಿಯೆಯಿಂದ ಕುಗ್ಗಿದೆ. ಹೆಜ್ಜೆ ಇಡಲು ಪ್ರಯಾಸವಾಗುತ್ತಿದೆ ಎಂಬುದು ಆಕೆಯ ನಡಿಗೆಯನ್ನು ನೋಡುತ್ತಲೆ ತಿಳಿಯುತ್ತದೆ. ತಲೆಯಲ್ಲಿನ ಬಿಳಿಯ ಕೂದಲು, ಒಂದು ಕಾಲದಲ್ಲಿ ತಾನೂ ಒಡವೆ ಧರಿಸಿದ್ದೆ ಎಂಬುದನ್ನು ಸಾಕ್ಷಾತ್ಕರಿಸಲು ಇಳೆ ಬಿದ್ದು ಜೋಲಾಡುತ್ತಿರುವ ರಂದ್ರವಿರುವ ಕಿವಿ. ಹಲ್ಲುಗಳಿಲ್ಲದ ಕಾರಣದಿಂದ ಒಳಹೋದ ಕೆನ್ನೆಗಳು. ಎಂಟುಗಜದ ಚೌಕಳಿ ಸೀರೆಯಲ್ಲಿ ಒಮ್ಮೆ ನಾನೂ ಸುಂದರಿಯಾಗಿದ್ದೆ ಎಂಬುದನ್ನು ಸಾಬೀತು ಪಡಿಸುತ್ತಿತ್ತು.
ಎರಡೆಜ್ಜೆಗೆ ಒಮ್ಮೆ ಹಿಂದೆ ನೋಡುತ್ತಾ ಮುಂದೆ ಸಾಗುವ ಈ ಮುದುಕಿಯನ್ನು ಕಂಡ ನನಗೆ ಕುತೂಹಲ ತಡೆಯದಾಯಿತು. ಆಕೆಯನ್ನು ದಾಟಿ ಮುಂದೆ ಹೋಗಬಹುದಾದ ವೇಗದ ನಡಿಗೆ ನನ್ನದಾಗಿದ್ದರೂ ವೇಗಕ್ಕೆ ಕಡಿವಾಣ ಹಾಕಿ ಮೆಲ್ಲಗೆ, ಆಕೆಗಿಂತ ಮೆಲ್ಲಗೆ ನಡೆಯತೊಡಗಿದೆ. ಆಕೆ ಹಿಂದೆ ನೋಡಿದಾಗಲೆಲ್ಲಾ ನಾನೂ ಹಿಂದಕ್ಕೆ ನೋಡುತ್ತಾ, ಯಾಕಾಗಿ ಹಿಂದೆ ನೋಡುತ್ತಿದ್ದಾಳೆಂದು ಊಹಿಸತೊಡಗಿದೆ. ನನ್ನ ಊಹೆಯ ಗುಂಗಿಗೆ ಬ್ರೇಕ್ ಹಾಕಿ ಬೆದರುವಂತೆ ಮಾಡಿದ ದ್ವಿಚಕ್ರವಾಹನ ನನ್ನ ಪಕ್ಕದಲ್ಲೆ ಭರ್ರ್….ರ್ ಎಂದು ಹಾದು ಹೋಯಿತು. ಸುಮಾರು ಇಪ್ಪತ್ತು ಇಪ್ಪತ್ತೆರಡು ವರ್ಷದ ಯುವಕ ಸುಂಟರಗಾಳಿಗಿಂತ ವೇಗವಾಗಿ ಹಾದು ಹೋದ. ಬೆದರಿದ ನಾನು ಒಂದು ಕ್ಷಣ ಅವಕ್ಕಾಗಿ ಮುಂದೆ ನೋಡಿದೆ. ಗಾಡಿಗೆ ಅಜ್ಜಿ ಕೈ ಅಡ್ಡ ಹಾಕುತ್ತಿದ್ದಾಳೆ. ಪಾಪ, ಯುವಕನ ಕಣ್ಣಿಗೆ ಅಜ್ಜಿ ಕಂಡಿದ್ದರೆ ತಾನೇ?! ಹೊರಟೇ ಹೋಯಿತು ಗಾಡಿ.
ಐದಾರು ಹೆಜ್ಜೆ ಮುಂದೆ ಹೋದ ಅಜ್ಜಿ ಹಿಂತಿರುಗಿದಳು. ಮತ್ತೊಂದು ದ್ವಿಚಕ್ರವಾಹನ ಬರುತ್ತಿದೆ ಅಂತಹ ವೇಗವೇನು ಇಲ್ಲಾ. ಕಾರಣ ಗಾಡಿಯ ಚಾಲಕ ಸುಮಾರು ಐವತ್ತು ವರ್ಷದ ವ್ಯಕ್ತಿ. ಸಾಧಾರಣ ವೇಗದ ಗಾಡಿಗೆ ಮುದುಕಿ ಕೈ ಅಡ್ಡ ಇಟ್ಟಳು. ಆತ ಒಮ್ಮೆ ಆಕೆಯ ಕಡೆ ಕತ್ತು ಹೊರಳಿಸಿ ಮತ್ತೆ ಮುಂದೆ ನೋಡುತ್ತಾ ಹೊರಟುಹೋದ. ಅಜ್ಜಿ ಆತನಿಗೆ ಏನೋ ಹೇಳುತ್ತಿದ್ದಂತೆ ಅನ್ನಿಸಿತು. ಆ ಪದಗಳು ಚಾಲಕನಿಗೆ ಬಹುಶಃ ಕೇಳಿರಲಿಕ್ಕಿಲ್ಲ. ನನಗೂ ಅಷ್ಟೇ. ನನಗೀಗ ಅರ್ಥವಾಯಿತು, ಈಕೆ ದ್ವಿಚಕ್ರ ವಾಹನಗಳಿಗೆ ಹಿಂದೆ ತಿರುಗಿ ನೋಡುತ್ತಾ ಮುಂದೆ ನಡೆಯುತ್ತಿದ್ದಾಳೆ. ಲಿಪ್ಟ್ ಕೇಳುತ್ತಿದ್ದಾಳೆ ಎಂದು.
ಒಮ್ಮೆಗೆ ನಗು ಬಂದು ನಕ್ಕುಬಿಟ್ಟೆ. ಮರುಕ್ಷಣವೇ ನಗು ನಿಲಿಸಿ ಸುತ್ತಲೂ ಕಣ್ಣಾಡಿಸಿದೆ. ಯಾರಾದರೂ ನೋಡಿಬಿಟ್ಟಾರೆಂದು. ನಾನು ಅಜ್ಜಿಯನ್ನು ನೋಡುತ್ತಿರುವಂತೆ ನನ್ನನ್ನು ಯಾರಾದರೂ ಗಮನಿಸುತ್ತಿದ್ದರೆ……! ನಾನೊಬ್ಬನೇ ನಕ್ಕಿದ್ದನ್ನು ಕಂಡು ವಿಪರೀತಾರ್ಥ ಮಾಡಿಕೊಂಡುಬಿಟ್ಟರೆ! ಮತ್ತೆ ನಾನು ಇದೇ ರಸ್ತೆಯಲ್ಲಿಯೇ ದಿನವೂ ಓಡಾಡಬೇಕು. ಸುಮ್ಮ ಸುಮ್ಮನೆ ನಗುವವರನ್ನು ಏನನ್ನುತ್ತೇವೆಂದು ನಾನು ಹೇಳಲೇ ಬೇಕಾಗಿಲ್ಲ, ಈಗಾಗಲೇ ನಿಮಗರ್ಥವಾಗಿರಬಹುದು.
ಸಾಮಾನ್ಯವಾಗಿ ಹದಿಹರೆಯದ, ತಳಕು ಬಳಕಿನ, ವಯ್ಯಾರದ, ಬೆಡಗಿನ ಲಲನೆಯರಿಗೆ ಬೇಡವೆಂದರೂ ಲಿಪ್ಟ್ ಕೊಡುವ ಚಾಲಕರು ಈ ಅಜ್ಜಿಯ ಬೇಡಿಕೆಗೆ ಮಣೆ ಹಾಕುವರೆ? ಸಾಧ್ಯವೇ ಇಲ್ಲಾ, ಎಂದು ಯೋಚಿಸುವಷ್ಟರಲ್ಲಿ ಮತ್ತೊಂದು ಬೈಕಿಗೆ ಕೈಯಿಟ್ಟು ನಿಲ್ಲಿಸಿಕೊಂಡು ಬಿಟ್ಟಿದ್ದಾಳೆ ಚಾಲಾಕಿ ಅಜ್ಜಿ. ಮುಂದಕ್ಕೆ ಕೈ ತೋರಿಸಿ ಏನೋ ಹೇಳುತ್ತಿದ್ದಾಳೆ. ಬೈಕಿನಲ್ಲಿದ್ದವನು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳತೊಡಗಿದ್ದಾನೆ. ನನಗೂ ಕುತೂಹಲವಾಗಿ ನನ್ನ ನಡಿಗೆಯ ಗೇರ್ ಬದಲಿಸಿ ನಡಿಗೆ ವೇಗಗೊಳಿಸಿದೆ. ನಾನಲ್ಲಿಗೆ ತಲುಪುವಷ್ಟರಲ್ಲಿ ಚಾಲಕ ತಲೆ ಅಡ್ಡಲಾಗಿ ತಿರುಗಿಸಿ ಹೊರಟೇ ಬಿಟ್ಟ. ಅವರ ಸಂಭಾಷಣೆಯ ಒಂದು ಮಾತೂ ನನ್ನ ಕಿವಿ ಮುಟ್ಟಲಿಲ್ಲ. ವಿಚಲಿತಗೊಳ್ಳದ ಅಜ್ಜಿ ಎರಡೆಜ್ಜೆ ಮುಂದೆ ಹೋಗಿ, ಮತ್ತೆ ಹಿಂದೆ ತಿರುಗಿದ್ದಾಳೆ. ನನ್ನ ಗಾ(ಬಾ)ಡಿಯನಡಿಗೆ ವೇಗ ಕಡಿಮೆಗೊಳಿಸಿದೆ ಅಜ್ಜಿ ವೇಗಕ್ಕನುಗುಣವಾಗಿ.
ಈಗಿನ ದಿನಗಳಲ್ಲಿ ರಸ್ತೆಯಲ್ಲಿ ಜನಗಳಿಗಿಂತ ವಾಹನಗಳೇ ಹೆಚ್ಚು ಸಂಚರಿಸುತ್ತವೆ. ಒಂದೊಂದು ಮನೆಗೆ ಮೂರು ನಾಲ್ಕು ವಾಹನಗಳು. ನಿಲ್ಲಿಸಲು ಸ್ಥಳವಿಲ್ಲದಿದ್ದರೂ ವಾಹನ ಮಾತ್ರ ಬೇಕು. ನಿಲುಗಡೆಗೆ ಮನೆ ಮುಂದಿನ ರಸ್ತೆ ಇದೆಯಲ್ಲ! ಅದೇ ನಿಲುಗಡೆ ತಾಣಗಳಾಗಿಬಿಟ್ಟಿವೆ. ಇದರಿಂದ ಮತ್ತೊಬ್ಬರಿಗೆ, ರಸ್ತೆ ಸಂಚಾರಿಗಳಿಗೆ ತೊಂದರೆಯಾಗುತ್ತದೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೆ ಇಚ್ಚೆ ಬಂದಂತೆ ನಿಲ್ಲಿಸುತ್ತಾರೆ. ಯಾರಿಗೆ ತೊಂದರೆಯಾದರೂ ಪರವಾಗಿಲ್ಲ. ಶ್ವಜನ(ನಾಯಿ)ಗಳಿಗೆ ಮಾತ್ರ ತುಂಬಾ ಅನುಕೂಲ. ನೀವು ನೋಡಿರಬಹುದು, ಬೀದಿ ನಾಯಿಗಳಿಂದ ಹಿಡಿದು ಉಳ್ಳವರ ಸಾಕುನಾಯಿಗಳವರೆಗೂ ಈ ಬೀದಿ ವಾಹನಗಳ ಚಕ್ರಗಳೇ ಶೌಚಾಲಯಗಳಾಗಿ ಬಿಟ್ಟಿರುತ್ತವೆ.
ವಿಷಯ ಎಲ್ಲಿಗೋ ಹೋಯ್ತು. ಮತ್ತೆ ವಿಷಯಕ್ಕೆ ಬರೋಣ. ಈಗ ಅಜ್ಜಿ ಮತ್ತು ನಾನು ಗಾಡಿಯ ಎರಡು ಚಕ್ರದಂತೆ ರಸ್ತೆಯ ಬಲಕ್ಕೆ ನಾನು ಎಡಕ್ಕೆ ಮುದುಕಿ ಸಮಾನಾಂತರವಾಗಿ ನಡೆಯುತ್ತಿದ್ದೇವೆ. ಅಜ್ಜಿಯ ವೇಗಕ್ಕೆ ನನ್ನ ವೇಗವನ್ನು ಹಿಡಿದಿಟ್ಟಿದ್ದೇನೆ. ಮತ್ತೊಂದು ಗಾಡಿ ಬಂತು. ಅಜ್ಜಿಯ ಕೈ ತಾನೇ ತಾನಾಗಿ ಅಡ್ಡ ಹೋಯಿತು. ಗಾಡಿಯ ಚಾಲಕನ ಕಾಲು ತನ್ನಷ್ಟಕ್ಕೆ ಬ್ರೇಕು ಮೇಲೆ ಒತ್ತಡ ಹೇರಿತು. ಗಾಡಿ ನಿಂತಿತು. ಅಜ್ಜಿ ಹತ್ತಿರ ಬಂದು ನನ್ನನ್ನು ಅಲ್ಲಿಯವರೆಗೆ ಬಿಟ್ಟು ಬಿಡು, ನಡೆಯಲು ಕಷ್ಟ ಎಂದಳು. ಗಾಡಿ ಚಾಲಕ ಕಂ ಮಾಲಿಕ ಅನುಮಾನಿಸುತ್ತಾ “ಅಜ್ಜಿ, ನೀವು… ಗಾಡಿ ಮೇಲೆ ಕುಳಿತುಕೊಳ್ಳಲಿಕ್ಕೆ ಆಗುತ್ತಾ?”ಕೇಳಿದ.
“ಆಗುತ್ತಪ್ಪ, ನಾನು ಕುಳಿತುಕೊಳ್ಳುತ್ತೇನೆ, ಅಭ್ಯಾಸ ಇದೆ.”
“ಅಲ್ಲಿಯವರೆಗೆ ಎಂದರೆ ಎಲ್ಲಿಯವರೆಗೆ?” ಚಾಲಕನ ಮತ್ತೊಂದು ಪ್ರಶ್ನೆ.
“ಇಲ್ಲೇ, ಆ ಸರ್ಕಲ್ ಕಾಣುತ್ತಲ್ಲ ಅಲ್ಲಿಗೆ”.
ಅನುಮಾನದಿಂದಲೇ ಗಾಡಿಯ ಮೇಲೆ ಹತ್ತಲು ಹೇಳಿದ.
“ಹತ್ತಿ, ಹುಷಾರು, ಗಟ್ಟಿಯಾಗಿ ಹಿಡಿದುಕೊಳ್ಳಿ” ಅವನು ಮಾತು ಮುಗಿಸುವಷ್ಟರಲ್ಲಿ ಅಜ್ಜಿ ಠಣ್ಣನೆ ಜಿಗಿದು ಕುಳಿತಾಗಿತ್ತು.
“ನಾನಾಗಲೇ ಕುಳಿತಾಗಿದೆ, ನನಗೆ ಭಯ ಇಲ್ಲಾಪ್ಪ, ನಡಿ” ಎಂದಳು.
“ನಿಮಗೆ ಭಯ ಇಲ್ಲದಿರಬಹುದು, ಆದರೆ ನನಗಿದೆಯಲ್ಲ”. ಎನ್ನುತ್ತಾ ಗಾಡಿ ಚಾಲಿಸುತ್ತಾ ನಿಧಾನವಾಗಿ ಹೊರಟ.
ಅಜ್ಜಿ “ಸ್ವಲ್ಪ ಜೋರಾಗೆ ನಡಿಯಪ್ಪ, ನಿಧಾನಕ್ಕೆ ಹೋದರೆ ಗಾಡಿ ಮೇಲೆ ಹೋದಹಾಗೆ ಇರೋಲ್ಲ”ಎಂದಳು.
“ಬೇಡ ಅಜ್ಜಿ, ರಸ್ತೆ ಬೇರೆ ತುಂಬಾ ಕೆಟ್ಟದಾಗಿದೆ. ರಸ್ತೆ ತುಂಬಾ ಹಳ್ಳಗಳು, ಹಂಪ್ಸ್‍ಗಳು. ಜೋರಾಗಿ ನಾನು ಹೋಗಿ ಹಳ್ಳದಲ್ಲಿ ಗಾಡಿ ಇಳಿದು, ನೀವು ಮೇಲೆ ಜಿಗಿದು ನೆಲಕ್ಕೆ ಬಿದ್ದರೆ…! ನಾನೇನು ಮಾಡಲಿ?” ಎಂದ.
“ಹಾಗೇನೂ ಹಾಗೋದಿಲ್ಲ ನಡೀಯಪ್ಪ, ಪ್ರತಿ ಬಾರಿಯೂ ನಾನು ಹೀಗೆ ಯಾರಾದರೂ ಒಬ್ಬೊಬ್ಬರ ಗಾಡೀಲಿ ಹೋಗ್ತೇನೆ. ಎಂದೂ ಬಿದ್ದಿಲ್ಲಾ. ಚೆನ್ನಾಗಿ ಅಭ್ಯಾಸವಾಗಿಬಿಟ್ಟಿದೆ.”
ಇವರಿಬ್ಬರ ಸಂಭಾಷಣೆ ಕೇಳಿಸಿಕೊಳ್ಳುತ್ತಾ ನನ್ನ ನಡಿಗೆಯ ವೇಗವನ್ನು ಗಾಡಿಯ ವೇಗಕ್ಕೆ ಬದಲಾಯಿಸಿದೆ. ಗಾಡಿಯ ವೇಗ ಎಷ್ಟಿತ್ತೆಂದರೆ ನನ್ನ ಜೋರು ನಡಿಗೆ ಗಾಡಿಗಿಂತ ನಾನೇ ಮುಂದೆ ಇರುವಂತಾಗಿದೆ. ವೇಗವನ್ನು ಸರಿದೂಗಿಸುತ್ತಾ ಇದ್ದೇನೆ. ಅವರಿಬ್ಬರ ಸಂಭಾಷಣೆ ಹಾಗಿತ್ತು.
“ನಿಮ್ಮ ಮನೇಲಿ ಗಾಡಿ ಇದೆಯಾ?”ಚಾಲಕ ಪ್ರಶ್ನಿಸಿದ್ದ.
“ಇದೆ ಕಣಪ್ಪ, ನಮ್ಮ ಹುಡುಗನನ್ನು ಕೇಳಿದರೆ ಆಗೊಲ್ಲ ಅಂತಾನೆ, ಟೈಂ ಇಲ್ಲಾ ಅಂತಾನೆ. ನಿನ್ನನ್ನು ಕೂರಿಸಿಕೊಂಡು ಹೋದರೆ ನನ್ನ ಸ್ನೇಹಿತರು ನಗ್ತಾರೆ ಅಂತಾನೆ. ಈಗನ ಕಾಲದ ಹುಡುಗರೇ ಹೀಗೆ, ವಯಸ್ಸಾದ ಮೇಲೆ ಹೆಂಗಸರು ಗಾಡಿನೇ ಹತ್ತಬಾರದು ಎನ್ನೋ ಮನೋಭಾವದವರು”. ಸಣ್ಣ ಭಾಷಣವನ್ನೇ ಮಾಡಿಬಿಟ್ಟಳು. ಒಳ್ಳೆ ಮಾತುಗಾರ್ತಿ, ಹಾಗೇ ಧ್ವನಿಯೂ ಜೋರು.
“ಹಾಗದರೆ ನಿಮಗೆ ಗಾಡಿ ಮೇಲೆ ಇಷ್ಟು ಸಲೀಸಾಗಿ ಕೂರೋ ಅಭ್ಯಾಸವಾದರೂ ಹೇಗಾಯ್ತು?” ಸಂಶಯದ ಪ್ರಶ್ನೆಯೊಂದನ್ನು ಹೊರಹಾಕಿದ ಚಾಲಕ ಕಂ ಮಾಲಿಕ.
“ಹೀಗೆ ನಿನ್ನಂತವರು ರಸ್ತೆಯಲ್ಲಿ ಬರ್ತಾರಲ್ಲ, ಕೈ ಅಡ್ಡ ಹಾಕ್ತೇನೆ, ಒಬ್ಬರಲ್ಲ ಇನ್ನೊಬ್ಬರು ಗಾಡಿ ನಿಲ್ಲಿಸಿ ಹತ್ತಿಸಿಕೊಂಡು ಹೋಗುತ್ತಾರೆ. ಹೀಗೆ ಅಭ್ಯಾಸವಾಗಿಬಿಟ್ಟಿದೆ”ಎಂದಳು.
“ದಿನ ಸರ್ಕಲ್ಲಿಗೆ ಏಕೆ ಹೋಗುತ್ತೀರಿ? ಕೇಳಿದ.
“ದಿನಾ ಹೋಗೊದಿಲ್ಲ ಕಣಪ್ಪಾ, ಪ್ರತಿ ಗುರುವಾರ ಸರ್ಕಲ್ಲಿನಲ್ಲಿರುವ ರಾಯರ ಮಠಕ್ಕೆ ಹೋಗುತ್ತೇನೆ”ಎಂದಳು.
ಅಷ್ಟರಲ್ಲಿ ರಾಯರ ಮಠ ಬಂದಿತ್ತು. ಗಾಡಿಯೂ ನಿಂತಿತು. ಗಾಡಿಯಿಂದ ಇಳಿದ ಅಜ್ಜಿ ಗಾಡಿ ಚಾಲಕನಿಗೆ ಆಶೀರ್ವದಿಸುವಂತೆ ಬೆನ್ನು ತಟ್ಟಿ ಮಠದೊಳಗೆ ಹೊರಟಳು ಚಾಲಕನು ಸಂತೋಷದಿಂದಲೋ, ವ್ಯಂಗ್ಯದಿಂದಲೋ, ತಮಾಷೆಗೋ ನಗುತ್ತಾ ಗಾಡಿಯನ್ನು ಬಂದ ದಾರಿಯಲ್ಲೇ ಹಿಂತಿರುಗಿಸಿ ಹೊರಟನು. ಕೊನೆಗೂ ಅಜ್ಜಿ ಲಿಪ್ಟ್ ಪಡೆದಳು. ನನಗೂ ನಗು ಬಂದು ಮನಸಾರೆ ಮನದಲ್ಲೇ ನಕ್ಕುಬಿಟ್ಟೆ.
*****
ಅಜ್ಜಿ ಲಿಫ್ಟ್ ಕತೆ ಚೆನ್ನಾಗಿದೆ.
ಧನ್ಯವಾದಗಳು ಪಾ ಮುರವರೆ
ಧನ್ಯವಾದಗಳು ಬರಹ ಓದಿ ಮೆಚದ್ದಕ್ಕೆ ಅಖಿಲೇಶ್ ರವರೇ
ಅಜ್ಜಿ ಕತೆ ತುಂಬಾ ಚೆನ್ನಾಗಿದೆ…ಓದೋವಾಗ ನಗೂಗು ಕೊರತೆ ಇಲ್ಲ
ಧನ್ಯವಾದಗಳು ಓದಿ ನಕ್ಕಿದ್ದಕ್ಕೆ.