ಕಾಮನ ಬಿಲ್ಲು

ಅಜ್ಜಿಯ ಕತೆ: ಪದ್ಮಾ ಭಟ್, ಇಡಗುಂದಿ.

                
ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ.. ಎಂದೇ ಆರಂಭವಾಗುತ್ತಿದ್ದ ಅಜ್ಜಿಯ ಕತೆಯು ಯಾವುದೋ ನೀತಿ ಪಾಠದೊಂದಿಗೋ ಜೀವನ ಮೌಲ್ಯಗಳೊಂದಿಗೋ ಮುಗಿಯುತ್ತಿದ್ದವು. ದಿನದ ಎಲ್ಲಾ ಚಟುವಟಿಕೆಗಳಲ್ಲಿ ಕತೆಯೂ ಸಹ ಒಂದಾಗಿತ್ತು. ರಾಮಾಯಣ ಮಹಾಭಾರತದಂತಹ ಪಾತ್ರಗಳು ಮಕ್ಕಳ ಪಾಲಿನ ಹೀರೋಗಳಾಗಿರುತ್ತಿದ್ದವು. ಅಜ್ಜಿ ಅಜ್ಜಿ ಕತೆ ಹೇಳಜ್ಜಿ ಎಂದ ಕೂಡಲೇ ಒಂದು ಚೂರೂ ಬೇಸರ ಮಾಡಿಕೊಳ್ಳದೆ ಹೇಳುತ್ತಿದ್ದಳು. ಇಡೀ ದಿನವೂ ಯಾವುದೋ ಕೆಲಸಗಳಿಂದಲೋ ಅಥವಾ ಇನ್ಯಾವುದರಿಂದಲೋ ಬ್ಯೂಸಿಯಾಗಿರುತ್ತಿದ್ದ ಅಜ್ಜಿಗೂ ಮೊಮ್ಮಕ್ಕಳಿಗೆ ಕತೆ ಹೇಳುವುದೆಂದರೆ ಅದು ಎಲ್ಲಿಲ್ಲದ ಪ್ರೀತಿ. ತಾನೂ ಮಕ್ಕಳೇ ಎನ್ನುವ ಹಾಗೆ ವರ್ತಿಸುತ್ತಿದ್ದಳು. ಒಟ್ಟಾರೆ ಮಕ್ಕಳ ಮಾನಸಿಕ ಬೆಳವಣಿಗೆ ಸುಗಮವಾಗಿ ಮನೆಯ ಪಾಠದೊಂದಿಗೆ ಆಗುತ್ತಿತ್ತು.

Àಅಪ್ಪ ಅಮ್ಮಂದಿರೂ ಸಹ ಅಜ್ಜಿಯ ಕತೆಗಳಿಗೆ ಪ್ರೇರೇಪಿಸುತ್ತಿದ್ದರು. ಮನೆಗೊಂದು ಹಿರಿಯ ಜೀವ ಇರಬೇಕೆನ್ನುವುದು ಎಲ್ಲರ ಭಾವನೆಯಾಗಿತ್ತು. ಸರಿಯಾದ ಮಾರ್ಗದರ್ಶನದ ಜೊತೆಗೆ ಜೀವನದ ಅನುಭವಗಳನ್ನು ಹೊಂದಿರುತ್ತಾರೆ ಆ ಹಿರಿಯರು. ಮಕ್ಕಳನ್ನು  ಗುಮ್ಮ ಬರುತ್ತದೆಯೆಂದು ಹೆದರಿಸಿ ಮಲಗಿಸುತ್ತಿದ್ದರು. ಈಗಿನ ಮಕ್ಕಳು ಎಷ್ಟು ಬುದ್ದಿವಂತರಿರುತ್ತಾರೆ ಎಂದರೆ ಗುಮ್ಮನನ್ನು ತೋರಿಸು ಎನ್ನುತ್ತಾರೆ.. ಅಜ್ಜಿಯ ಕತೆಯೆಂದರೆ ಜೀವ ಇಲ್ಲದ ವಸ್ತುವಿಗೂ ಜೀವ ತುಂಬಿ ಪ್ರಾಣಿಗಳೆಲ್ಲಾ ಮಾತನಾಡುವ ಕತೆಯಾಗಿರುತ್ತಿತ್ತು. ನಮ್ಮ ಯೋಚನೆಗೂ ನಿಲುಕದ ಅದ್ಬುತ ಕಲ್ಪನೆ ಎಂದರೆ ತಪ್ಪಾಗಲಾರದು.ಪಂಚತಂತ್ರದ ಕತೆಗಳು, ನೀತಿಕತೆಗಳು, ಇಷ್ಟುದ್ದ ಹಲ್ಲಿರುತ್ತೆ, ಕೋಡಿರುತ್ತೆ ಎಂದು ವರ್ಣಿಸುವ ರಾಕ್ಷಸರ ಕತೆಗಳೆಲ್ಲಾ ಕೇಳುತ್ತಿದ್ದಂತೆ ಒಂದಷ್ಟು ಬೆರಗುಗಳು..

ಅಜ್ಜಿ ಎಲ್ಲಾದರು ಹೊರಟಳೆಂದರೆ ಸಾಕು ಅವಳ ಹಿಂದೆ ಮೊಮ್ಮಕ್ಕಳ ದಂಡು. ಹಠ ಮಾಡಿಯಾದರೂ ಸರಿಯೇ ಅಜ್ಜಿಯ ಜೊತೆಗೆ ಹೋಗಲೇಬೇಕು. ಅಪ್ಪ ಅಮ್ಮನಿಗಿಂತಲೂ ಅಜ್ಜಿಯೇ ಇಷ್ಟವಾಗಿರುತ್ತಿತ್ತು. 

ಅಜ್ಜಿ ಹೇಳುತ್ತಿದ್ದ ಕತೆಯ ಎಳೆ ಎಳೆಯೂ ಇನ್ನೂ ನೆನಪಿದೆ.. ನಿಜವೋ ಸುಳ್ಳೋ, ಕಾಲ್ಪನಿಕ ಶಕ್ತಿಯನ್ನು, ಯೋಚನಾಶಕ್ತಿಯನ್ನು ಹೆಚ್ಚಿಸುತ್ತಿದ್ದುದಂತೂ ಹೌದು.. ಅದೆಷ್ಟೋ ಬಾರಿ ಬೇಸರವಾದಾಗ, ಅತ್ತಾಗ ಆ ಕತೆಗಳೇ ಸುಮ್ಮನಿರುಸುವಂತೆ ತೋರುತ್ತಿದ್ದವು..ಕೇಳುತ್ತಿದ್ದಂತೆಯೇ ಒಂದಷ್ಟು ಕುತೂಹಲಗಳು, ಬೆರಗುಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿದ್ದುದೂ ಸುಳ್ಳಲ್ಲ..

ಇಂದಿನ ಕಾಲದಲ್ಲೆಲ್ಲಾ ಅಜ್ಜಿಯ ಜೊತೆಗೆ ಮೊಮ್ಮಕ್ಕಳು ಇರುವುದೇ ಅಪರೂಪ. ಒಂದು ವೇಳೆ ಇದ್ದರೂ ಅಜ್ಜಿ ನಾನೆ ನಿಂಗೆ ಕತೆ ಹೇಳುತ್ತೇನೆ. ನೀ ಹೇಳುವ ಆ ಕಾಗಕ್ಕಾ ಗುಬ್ಬಕ್ಕನ ಕತೆ ಯಾರು ಕೇಳ್ತಾರೆ ಎನ್ನುವ ಕಾಲ ಬಂದಿದೆ. ಅಜ್ಜಿಗೇ ಪ್ರಶ್ನೆಗಳನ್ನು ಕೇಳಿ ದಿಕ್ಕಾಪಾಲಾಗಿಸುತ್ತಾರೆ. ಅದು ಹೇಗೆ, ಸೈಂಟಿಫಿಕ್ ರೀಸನ್ ಇದೆಯಾ ಎಂದೆಲ್ಲಾ ಕೇಳಿದರೂ ಆಶ್ಚರ್ಯ ಪಡಬೇಕಾಗಿಲ್ಲ.. ದೂರದ ಊರಿನಲ್ಲಿರುವ ಮೊಮ್ಮಕ್ಕಳು  ಅಪರೂಪಕ್ಕೆಂದು ಮನೆಗೆ ಬರುತ್ತಾರಷ್ಟೆ.. ಈ ಕತೆಯನ್ನೆಲ್ಲಾ ಕೇಳೋ ಪುರ್ಸೊತ್ತು ಅವರಿಗಿದ್ದೇ ಬಿಡುತ್ತದೆಯೆಂದು ಹೇಳಲಿಕ್ಕಾಗದು..  ಹಳ್ಳಿಯಲ್ಲಿರುವ ಅಜ್ಜ ಅಜ್ಜಿಯರಿಗೆ ಅವರವರು ಅವರವರ ಕತೆಗಳನ್ನು ಹೇಳಿಕೊಳ್ಳಬೇಕೇ ವಿನಃ ಕೇಳುವವರ ಸಂಖ್ಯೆಯಂತೂ ಕಡಿಮೆಯಾಗಿದೆ. ಕಂಪ್ಯೂಟರಿನಲ್ಲೋ, ಮೊಬೈಲಿನಲ್ಲೋ ಗೇಮ್ಸ್ ಹಚ್ಕೊಂಡು, ಕೂತುಬಿಟ್ರೆ ಅದೇ ಒಂದು ಜಗತ್ತು..

 ಇಂದಿನ ಎಷ್ಟೋ  ಅಪ್ಪ ಅಮ್ಮಂದಿರೂ ಸಹ ಅಜ್ಜಿಗೆ ಹೇಳೋದನ್ನು ಕೇಳಿದ್ದೇನೆ..ನಿಮ್ ಕಾಲದ ಮೂಢನಂಬಿಕೆಗಳನ್ನೆಲ್ಲಾ ಅವರ ತಲೆಯಲ್ಲಿ ತುಂಬಬೇಡಿ ಹೋಗೋ ಹೋಂವರ್ಕ್ ಮಾಡ್ಕೋ ಎಂದು ಗದರಿಸುತ್ತಾರೆ . ಸಿಲೇಬಸ್‍ನಲ್ಲಿರೋ ಪಾಠಗಳನ್ನೆಲ್ಲಾ ಟ್ಯೂಶನ್ನು ಗೀಶನ್ನು ಅಂತ ಕಳಿಸಿ ಬಾಯಿಪಾಠ ಮಾಡಿಸಿ ರ್ಯಾಂಕ್ ಗಳಿಸಿದರೂ ಕೂಡ ಒಂದು ಅನುಭವೀ ಜೀವಿಯಾದ ಅಜ್ಜಿಯ ಕತೆಯನ್ನು ಎಷ್ಟು ಮಿಸ್ ಮಾಡ್ಕೊಳ್ತಾ ಇದ್ದಾರೆ ಅಂತ ಎಷ್ಟೋ ಬಾರಿ ಅನಿಸಿದರೂ ಏನೂ ಮಾಡೋ ಹಾಗಿಲ್ಲ.. ಮುಂದೊಂದು ಕಾಲಕ್ಕೆ ಅಜ್ಜಿ ಅನ್ನೋವ್ಳು ಇರ್ತಿದ್ಲಂತೆ ಅವಳು ಕತೆ ಎನ್ನೋದನ್ನ ಹೇಳ್ತಿದ್ಳಂತೆ ಅಂತಾ ಬಂದರೂ ಅಚ್ಚರಿಪಡಬೇಕಿಲ್ಲ.

*****      
  

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *