ಲೇಖನ

ಅಚ್ಚರಿಯ ಕಂಗಳು: ಸಿಂಧು ಭಾರ್ಗವ್ ಬೆಂಗಳೂರು

ಚಿಕ್ಕ ಮಕ್ಕಳು ಮುಗ್ಧರಾಗಿರುತ್ತಾರೆ. ಪ್ರಪಂಚದ ಅರಿವೇ ಇಲ್ಲದೇ ತಮ್ಮ ಪಾಡಿಗೆ ತಾವು ಆಡಿ ಕುಣಿದು ನಲಿಯುತ್ತಿರುತ್ತಾರೆ.
ಹೆತ್ತವರು ಯಾವುದೋ ಕಾರಣಕ್ಕೆ ಗದರಿಸಿದರೆ ಹೆದರಿ ಮುದುರಿಕೊಂಡು ಕುಳಿತುಬಿಡುತ್ತಾರೆ. ಅವರ ತುಂಟಾಟ, ಚೇಷ್ಠೆಗಳು ಲೆಕ್ಕವಿಲ್ಲದಷ್ಟು ಮಾಡಿದರೂ ಹೆತ್ತವರು ಬೆದರಿಸದೇ, ಹೊಡೆಯದೇ ತಾಳ್ಮೆಯಿಂದ ಇರಬೇಕು. ತಮ್ಮ ಕೆಲಸದ ಒತ್ತಡವನ್ನು, ಕೋಪವನ್ನು ಅವರ ಮೇಲೆ ತೀರಿಸಿಕೊಳ್ಳಬಾರದು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡುವುದು ಎಷ್ಟು ಸರಿ? ಬದಲಾಗಿ ಅವರ ಖುಷಿಯಲ್ಲಿ ತಾವು ಕೂಡ ಖುಷಿಪಡಬೇಕು. ಮಕ್ಕಳ ಮನಸ್ಸಿಗೆ ಘಾಸಿ ಮಾಡಬಾರದು. ಅವುಗಳ‌ ಜೊತೆ ಬೆರೆತು ವಿಧವಿಧವಾದ ಆಟಗಳನ್ನು ಆಡಲು ಅನುವುಮಾಡಿಕೊಡಬೇಕು. ಅವರ ಬುದ್ಧಿ ವಿಕಸನಕ್ಕೆ ಸಹಾಯಮಾಡಬೇಕು.

ಮಗು: ಮಗುವು ಪ್ರತಿಕ್ಷಣವನ್ನು ಸಂತಸದಿಂದ ಅನುಭವಿಸುತ್ತಾ ಇರುತ್ತದೆ. ಅದಕ್ಕೆ ಎಲ್ಲವೂ ಹೊಸದಾಗಿರುತ್ತದೆ. ಸುತ್ತಮುತ್ತಲಿನ ಪ್ರಪಂಚದಲ್ಲಿ ನಡೆಯುವುದು, ಕಣ್ಣಿಗೆ ಕಾಣಿಸುವುದೆಲ್ಲವೂ ಅಚ್ಚರಿಯೆನಿಸುತ್ತದೆ. ಕುತೂಹಲವನ್ನು ತುಂಬಿಕೊಂಡು ಅದರ ಬಗೆಗೆ ತಿಳಿದುಕೊಳ್ಳಲು ಮುಂದಾಗುತ್ತದೆ. ಮನಸ್ಸಿನಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ. ಆಗ ಬಾರಿಬಾರಿ ಹೆತ್ತವರಲ್ಲಿ ಪ್ರಶ್ನೆ ಕೇಳುತ್ತಲೇ ಇರುತ್ತದೆ. ಆಗ ಹೆತ್ತವರು ಅಡ್ಡಿಪಡಿಸಿದರೆ ಅಳುತ್ತದೆ, ಹಠಮಾಡುತ್ತದೆ, ಇಲ್ಲ ಬೇಕೆಬೇಕು ಎಂದು ರಚ್ಚೆಹಿಡಿಯುತ್ತದೆ. “ಎಷ್ಟು ಪ್ರಶ್ನೆ ಕೇಳುವೆ, ನನ್ನ ತಲೆ ತಿನ್ನಬೇಡ”… ಎಂದು ಗದರಿಸಿದರೆ ಅದಕ್ಕೆ ಬೇಸರವಾಗುತ್ತದೆ. ಅದರ ಕುತೂಹಲಕ್ಕೆ ತಡೆಹಾಕಿದಂತಾಗುತ್ತದೆ.

ಹೆತ್ತವರು: ಮಗುವಿನ ಪ್ರತಿ ಚಲನವಲನಗಳನ್ನು ಗಮನಿಸಲು ಈಗಿನ ಹೆತ್ತವರಿಗೆ ಸಮಯವೇ ಸಿಗುವುದಿಲ್ಲ. ಗಂಡ ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೋಗುವ ಆತುರದಲ್ಲಿ ತಮ್ಮ ಕೆಲಸಗಳನ್ನು ಮಾಡುವುದೇ‌ ಹೆಚ್ಚು. ಅಂತದ್ದರಲ್ಲಿ ಮಗುವಿನ ಜೊತೆ ಬೆರೆತು ಮಗುವಾಗಿ ಸಮಯ ಕಳೆಯುವ ಮಾತೆಲ್ಲಿ.? ಯಾವಾಗಲೂ ಒತ್ತಡ, ಕೋಪ, ಬಿಡುವಿಲ್ಲ, ಸಮಯವಿಲ್ಲ ಎಂದು ಹೇಳಿ ಮಗು ಮಾಡುವುದೆಲ್ಲವೂ ಇವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮಗುವನ್ನು‌ ನೋಡಿಕೊಳ್ಳಲು “ಆಯಿ”ಯ ಸಹಾಯ ಪಡೆದು ತಾಯಿಯ ಅಪ್ಪುಗೆಯ ಸುಖದಿಂದ ವಂಚಿಸಿಬಿಡುತ್ತಾರೆ. ಮಗುವು ಮನೆ ತುಂಬಾ ಕಸಮಾಡುವುದು, ಆಟಿಕೆಗಳನ್ನು ಮುರಿದುಹಾಕುವುದು, ಏನಾದರೂ ಚೆಲ್ಲುವುದು ಹೀಗೆ ಒಂದಿಲ್ಲೊಂದು ತುಂಟತನ ಮಾಡುತ್ತಲೇ ಇರುತ್ತದೆ. ಆಗ ತಾಯಿಯಾದವಳು ಕೋಪ ಮಾಡಿಕೊಂಡು ಬೈಯುವುದೋ ಇಲ್ಲ ಮಗುವಿನ ಕೈಯಿಂದ ಕಸಿದುಕೊಳ್ಳಲೋ ಮುಂದಾಗುತ್ತಾರೆ. ಅದರ ಇಷ್ಟಕ್ಕೆ ಅಡ್ಡಿಪಡಿಸುತ್ತಾಳೆ. ಆಗ ಮಗುವು ಅಳುತ್ತಾ ತನಗೆ ಬೇಕು ಎಂದು ನೆಲದಲ್ಲಿ ಬಿದ್ದು ಹೊರಳಾಡುತ್ತದೆ. ಇದನ್ನು ಅರಿಯದ ಹೆತ್ತವರು ನಮ್ಮ ಮಗು “ತುಂಬಾ ಹಠಮಾರಿಯಪ್ಪಾ…. ಅವನ ಚೇಷ್ಠೆ ಸಹಿಸೋಕೆ ಆಗಲ್ಲ… ಸಾಕು ಹಿಡಿಸಿ ಬಿಡ್ತಾನೆ…” ಎಂದು ಅವರೇ ತಮ್ಮ ಮಗುವಿನ ಮೇಲೊಂದು ಪ್ರಮಾಣಪತ್ರ ಕೊಟ್ಟುಬಿಡುತ್ತಾರೆ.

ನೀವು ಗಮನಿಸಬಹುದು, ಆಟಿಕೆ ಹಿಡಿದು ಒಂದಷ್ಟು ಹೊತ್ತು ಆಡಿ ಆಮೇಲೆ ಅದರ ಬಿಡಿಭಾಗಗಳನ್ನು ಬಿಚ್ಚಿ ಹಾಳು ಮಾಡುತ್ತದೆ. ಮತ್ತೆ ಜೋಡಿಸಲಾಗದೇ ಅಳುತ್ತದೆ. ಆಗ ತಾಯಿ ಬಂದು ಏರುದ್ವನಿಯಲ್ಲಿ “ಯಾಕೆ ಹಾಳು ಮಾಡಿದೆ? ಆಟಿಕೆಯೂ ಹಾಳು ಹಣವೂ ಹಾಳು ನಿನಗೆ ಇನ್ನು ಏನು ಕೊಡಿಸುವುದಿಲ್ಲ‌ ನೋಡು?” ಎಂದರೆ ಮಗುವಿನ ಪ್ರಗತಿಗೆ ತಾಯಿಯೇ ಅಡ್ಡಿಯಾದಂತೆ. ಅದರ ಬದಲಾಗಿ ಏನೂ ಆಗೇ ಇಲ್ಲ ಅನ್ನುವ ರೀತಿ ಆ ಮಗುವನ್ನು ಸಮಾಧಾನ ಪಡಿಸಿ ಬಿಗಿದಪ್ಪಿ ಇನ್ನೊಂದು ಹೊಸದಾದ ಆಟಿಕೆ ಕೊಡಿಸುವೆ ಎಂದರೆ ಅದಕ್ಕೆ ಎಷ್ಟು ಖುಷಿಯಾಗುವುದಿಲ್ಲ‌ ಹೇಳಿ. ಹೆತ್ತವರಿಗೆ ತಾಳ್ಮೆ ಸಹನೆಯಿಂದಿರುವುದು ಅತ್ಯಗತ್ಯವಾಗುತ್ತದೆ.

ನಿಜವಾಗಿಯೂ ಮಗುವು ಹಠಮಾರಿಯೇ? ಇಲ್ಲ. ಎಲ್ಲರ ಮನೆ ಮಗುವು, ಆಯಾಯ ವಯಸ್ಸಿನಲ್ಲಿ ಏನು‌ಮಾಡಬೇಕೋ ಅದನ್ನೇ ಮಾಡುತ್ತಿರುತ್ತದೆ. ತಾಯಿಯಾದವಳು ಅದರ ಕಡೆಗೆ ಸೂಕ್ಷ್ಮವಾಗಿ ಗಮನ ಹರಿಸಬೇಕು. ಅದಕ್ಕೆ ಏನು ಇಷ್ಟ, ಯಾವುದರಲ್ಲಿ ಆಸಕ್ತಿ ಇದೆ ಎನ್ನುವುದನ್ನು ಗಮನಿಸುತ್ತಾ ಇರಬೇಕು. ಮಗುವಿಗೆ ಸ್ವಾತಂತ್ರ್ಯ ಕೊಡಬೇಕು.

ಮೊದಲೆಲ್ಲ ಚಂದಮಾಮನನ್ನು ತೋರಿಸಿ ಊಟ ಮಾಡಿಸುವ ಪದ್ದತಿಯಿತ್ತು. ಜೊತೆಗೆ ಸಣ್ಣಸಣ್ಣ ಕಾಲ್ಪನಿಕ ಕಥಡಗಳನ್ನು ಹೇಳಿ ಅಚ್ಚರಿ ಮೂಡಿಸುತ್ತಾ ಊಟ ಮಾಡಿಸುತ್ತಿದ್ದರು. ಆದರೀಗ ಮೊಬೈಲ್ ನ ಮೊರೆ ಹೋಗಿದ್ದಾರೆ. ಮಗುವು ಹಠ ಮಾಡಿತು ಎಂದಾಕ್ಷಣ ಕೂಡಲೇ ಮೊಬೈಲ್ ಅದರ ಕೈಗೆ ಕೊಟ್ಟು ತಾವು ತಮ್ಮ‌ಪಾಡಿಗೆ ಇರುತ್ತಾರೆ. ಇದರಿಂದ ಆ ಮಗುವಿನ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತದೆ ಎಂಬ ಅರಿವೇ ಹೆತ್ತವರಿಗೆ ಇರುವುದಿಲ್ಲ . ಒಂದು- ಒಂದುವರೆ ವರುಷದ ಮಗುವಿಗೆ ಸ್ವತಃ ತಾಯಿಯೇ ಮೊಬೈಲ್ ಕೈಗೆಕೊಟ್ಟು ಕಾರ್ಟೂನ್ ತೋರಿಸಿ ಊಟ ಮಾಡಿಸುವುದು, ಅದರ ಮೂಲಕ ಮೊಬೈಲ್ ನ ಗೀಳಿಗೆ ಆ ಪುಟಾಣಿ ಮಗುವನ್ನು ನೂಕುವ ಕೆಲಸ ಮಾಡುತ್ತ ಇದ್ದಾಳೆ. ಆಮೇಲೆ ಆ ಮಗುವಿಗೇನೆ ಬೈಯುತ್ತಾರೆ.. “ಯಾವಾಗ ನೋಡಿದ್ರೂ ಮೊಬೈಲ್ ಹಿಡ್ಕೊಂಡ್ ಇರ್ತಾನೆ, ಕಾರ್ಟೂನ್ ನೋಡ್ತಾ ಇರ್ತಾನೆ… ಸರಿಯಾಗಿ ಊಟ ಮಾಡೋದಿಲ್ಲ, ನಿದ್ರೆ ಮಾಡೋದಿಲ್ಲ, ಓದೋದಿಲ್ಲ….” ಎಂದು. ಹೆತ್ತವರ ಬೇಜವಾಬ್ದಾರಿತನವೇ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗೆ ಕಾರಣವಾಗಿದೆ. ಈಗಿನ ಆಧುನಿಕ ಉಪಕರಣಗಳ ಪ್ರಭಾವಳಿಗೆ ಒಳಗಾಗದೇ ಮಕ್ಕಳನ್ನು ಪರಿಸರದಿಂದ ದೂರವಿಡುವ ಬದಲು ಪರಿಸರದೊಂದಿಗೆ ಬೆರೆತು ಆಡಿ ಕುಣಿದು ,ಬಿದ್ದು ಎದ್ದು ಏಟುಮಾಡಿಕೊಂಡು ಬೆಳೆದರೇನೆ ಮಕ್ಕಳು ಗಟ್ಟಿಯಾಗುವುದು. ಹಳೇ ಬೇರು ಗಟ್ಟಿಯಾಗಿದ್ದರೇನೆ ಹೊಸ ಚಿಗುರು ಮೂಡುವುದು.

– ಸಿಂಧು ಭಾರ್ಗವ್ ಬೆಂಗಳೂರು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಅಚ್ಚರಿಯ ಕಂಗಳು: ಸಿಂಧು ಭಾರ್ಗವ್ ಬೆಂಗಳೂರು

  1. ಹೃತ್ಪೂರ್ವಕ ವಂದನೆಗಳು🌼😊🙏 ಸರ್. ಸಂಪಾದಕ ಬಗಳಕ್ಕೆ….

    ಸಿಂಧು.

Leave a Reply

Your email address will not be published. Required fields are marked *