ಅಲ್ಲಿ ಜನಸಾಗರ ನೆರೆದಿತ್ತು, ಜಾತಿ ಮತದ ಬೇಧವಿಲ್ಲದೆ ನೆರೆದಿದ್ದ ಜನ.. ಎಲ್ಲರಲ್ಲೂ ಮನೆ ಮಾಡಿದ ಮೌನ, ತುಂಬಿದ ಕಣ್ಣೀರು. ಕಳೆದುಕೊಂಡ ಮಾಣಿಕ್ಯ ಬದುಕಿದ ರೀತಿಯೇ ಹಾಗಿತ್ತು.
ಶ್ರೀನಿವಾಸ ರಾಯರು ತಮ್ಮ 60ವರ್ಷ ಸಾರ್ಥಕ ಬದುಕಿನ ಪಯಣ ಮುಗಿಸಿ ಪರಲೋಕ ಸೇರಿದ್ದರು. ಬದುಕಿರುವಷ್ಟು ದಿನ ಆದರ್ಶ ಜೀವನ ನಡೆಸಿದ್ದರು, ಜಾತಿ ಭೇಧವಿಲ್ಲದೆ, ಮೇಲು ಕೀಳು, ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರನ್ನು ಪ್ರೀತಿಸುತ್ತಿದ್ದರು. ಪರೋಪಕಾರಕ್ಕೆ ಹೆಸರಾಗಿದ್ದರು. ಅನಾರೋಗ್ಯ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಇವರಿಂದ ಸಹಾಯ ಪಡೆದಿದ್ದರು. ಇವರ ಸಹಾಯದಿಂದ ಎಷ್ಟೋ ಜನ ತಮ್ಮ ಮಕ್ಕಳ ಮದುವೆ ಮಾಡಿದ್ದರು. ಹೀಗೆ ರಾಯರು ಎಲ್ಲರಿಗು ಬೇಕಾದವರು ಆಗಿದ್ದರು. ಮೂಲತಃ ಆಸ್ತಿವಂತರು ಅಲ್ಲವಾದರೂ ತಾವು ದುಡಿದು ಕೂಡಿಟ್ಟ ಹಣದಲ್ಲಿ ಇತರರಿಗೆ ಸಹಾಯ ಮಾಡುವ ಮನಸ್ಥಿತಿ ಉಳ್ಳವರಾಗಿದ್ದರು. ತಮ್ಮ ಕೊನೆಗಾಲಕ್ಕೆ ಏನಾದರು ಉಳಿಸಿಕೊಳ್ಳಬೇಕು ಅಂತಾ ಎಂದು ಯೋಚಿಸುತ್ತಿರಲಿಲ್ಲ. ಅವರ ಪತ್ನಿ ಲಕ್ಷ್ಮೀ ದೇವಮ್ಮ ಕೂಡ ಇವರಂತೆ ಮೃದು ಮನಸ್ಸಿನವರು. ಪತಿ ಮಾಡುವ ಒಳ್ಳೆ ಕೆಲಸಗಳಲ್ಲಿ ಎಂದು ಅಡ್ಡಿಯಾಗುತ್ತಿರಲಿಲ್ಲ.
ಅವರ ಒಳ್ಳೆ ಮನಸಿಗೆ ದೇವರು ಜೊತೆಯಾಗಿ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವ ಶಕ್ತಿಯನ್ನು ಅವರಿಗೆ ಕೊಟ್ಟಿದ್ದ. ಅವರಿಗೆ ಒಬ್ಬಳೇ ಮಗಳು. ಅವರು ಹಚ್ಚಿಕೊಂಡ ಆಪ್ತರೇ ಅವರಿಗೆ ಬಂಧುಗಳು ಆಗಿದ್ದರು. ರಕ್ತ ಸಂಬಂದಿಕರು ಅಂತಾ ಇದ್ದದ್ದು ಅವರ ತಮ್ಮ ಒಬ್ಬರೇ. ಆದರೆ ಅವರಿಗೆ ರಾಯರ ಈ ಪರೋಪಕಾರ, ದಾನ, ಧರ್ಮ ಯಾವುದು ಇಷ್ಟ ವಾಗುತ್ತಿರಲಿಲ್ಲ. ಅಣ್ಣನಿಗೆ ಒಬ್ಬಳೇ ಮಗಳು, ಮದುವೆ ಮಾಡಿಕೊಟ್ಟರೆ ಮುಗಿತು. ತನಗೆ ಮೂರು ಜನ ಗಂಡು ಮಕ್ಕಳು, ಅಣ್ಣ ಗಳಿಸಿದ್ದನ್ನು ತನ್ನ ಮಕ್ಕಳಿಗೆ ಮಾಡಬೇಕು ಅನ್ನೋ ಆಸೆ ಅವನಿಗೆ. ಈ ವಿಷಯವಾಗಿ ಅಣ್ಣ ತಮ್ಮಂದಿರ ಮಧ್ಯ ಅವಾಗವಾಗ ಮನಸ್ತಾಪ ನಡೆಯುತ್ತಿತ್ತು. ತಮ್ಮ ಕೇಶವ ರಾಯರಿಗೆ ” ನಿನಗೆ ಗಂಡು ಮಕ್ಕಳು ಇಲ್ಲ, ಕೊನೆಗಾಲದಲ್ಲಿ ನಿನಗೆ ಕೊಳ್ಳಿ ಇಡಲು ನಾನು ನನ್ನ ಮಕ್ಕಳೇ ಬೇಕು” ಅಂತಾ ಹೀಯಾಳಿಸಿದ್ದರು ಕೊನೆಗೆ ರಾಯರ ಮನೆಗೆ ಬರುವುದನ್ನು, ಅವರ ಜೊತೆ ಮಾತನಾಡುವುದನ್ನ ನಿಲ್ಲಿಸಿದ್ದರು. ಈ ವಿಷಯವಾಗಿ ರಾಯರು ನೊಂದುಕೊಂಡಿದ್ದರು, ರಕ್ತ ಸಂಬಂದಿ ಅಲ್ಲದಿದ್ದರೂ ನನ್ನ ಮಗನಂತೆ ಇರುವ ಈ ವಿಜಯ ನೇ ನಾನು ಸತ್ತಾಗ ನನ್ನ ಶವಕ್ಕೆ ಕೊಳ್ಳಿ ಇಡಬೇಕು ಅಂತಿದ್ದರು.
ವಿಜಯ್ ಕುಲ ಗೋತ್ರ ಗೊತ್ತಿಲ್ಲದ ಹುಡುಗ. ವಿಧಾರ್ಥಿ ವಸತಿ ನಿಲಯದಲ್ಲಿ ಇದ್ದು ವಿದ್ಯಾಭ್ಯಾಸ ಪಡೆಯುತ್ತಿದ್ದ, ಯಾರೋ ಪರಿಚಯ ಮಾಡಿಸಿದ್ದರು, ರಾಯರಿಂದ ಸಹಾಯ ಪಡೆದು ಡಿಗ್ರಿ ಮುಗಿಸಿ ಸ್ವಂತ ಉದ್ಯೋಗ ಶುರು ಮಾಡಿದ್ದ. ಅವನು ರಾಯರಿಗೆ ಮಗನೆ ಆಗಿದ್ದ. ರಾಯರಿಗೆ ಜ್ವರ ಬಂದರೆ ಅಲ್ಲಿ ಅವನಿಗೆ ಸಂಕಟ ಆಗಿ ಓಡಿ ಬರುತ್ತಿದ್ದ. ಅಷ್ಟೊಂದು ಅಂಥಕ್ಕರಣ ಬೆಸೆದಿತ್ತು ಅವರ ಮಧ್ಯ. ರಾಯರು ತಮ್ಮನ ಮಕ್ಕಳನ್ನು ತಮ್ಮ ಮಕ್ಕಳಂತೆ ಅವರಿಗೆ ಮಾಡಬೇಕಾದನ್ನು ಮಾಡುತ್ತಿದ್ದರು ಆದರೆ ನಮ್ಮ ಕರ್ತವ್ಯ ವನ್ನು ಬಿಡುತ್ತಿರಲಿಲ್ಲ. ರಾಯರು ಅತೀ ಅಸೆ ಪಟ್ಟವರಲ್ಲ ಅಷ್ಟೆಯಾಕೆ ಕೊನೆಗೆ ತಮ್ಮ ಮುಪ್ಪಿನ ಸಮಯಕ್ಕೆ ಬೇಕು ಅಂತಾ ನಾಲ್ಕು ದುಡ್ಡು ಸಂಗ್ರಹಿಸಿ ಇಡುತ್ತಿರಲಿಲ್ಲ. ದೇವರು ಇದ್ದಾನೆ. ನನ್ನ ಕುಟುಂಬದ ರಕ್ಷಣೆ ಅವನ ಹೊಣೆ. ಇರುವ ಒಬ್ಬ ಮಗಳನ್ನು ಯಾವ ಕೊರತೆ ಇಲ್ಲದೆ ಬೆಳೆಸುತ್ತಿದ್ದೇನೆ. ಒಳ್ಳೆ ಮನೆತನ ಹುಡುಕಿ ಮದುವೆ ಮಾಡಿದರು ಮುಗಿತು ತನ್ನ ಜವಾಬ್ದಾರಿ ಅನ್ನುತ್ತಿದ್ದರು.
ರಾಯರ ಹತ್ತಿರ ಸಹಾಯ ಪಡೆದವರು ಹಲವಾರು ನೆನಪಿಟ್ಟು ಕೃತಜ್ಞತೆ ತಿಳಿಸುತ್ತಿದ್ದರು ಕೆಲವರು ಮರೆತು ಸೊಕ್ಕಿನಿಂದ ಮೆರೆಯುತ್ತಿದ್ದರು. ರಾಯರು ಮಾತ್ರ ಹೊಗಳಿದಾಗ ಹಿಗ್ಗದೇ, ತೆಗಳಿದಾಗ ಕುಗ್ಗದೆ ನಿಶ್ಚಿಂತೆ ಇಂದ ಇರುತ್ತಿದ್ದರು. ಅವರು ಒಂದೇ ಮಾತು ಹೇಳುತ್ತಿದ್ದರು.
“ಶರಣರನ್ನು ಮರಣದಲ್ಲಿ ನೋಡು ” ನಾನು ಮಾಡಿದ ಕರ್ತವ್ಯದಲ್ಲಿ ಪುಣ್ಯದ ಪಾಲು ಇದ್ದಾರೆ ಅದು ನನ್ನ ಮರಣದಲ್ಲಿ ಕಂಡೆ ಕಾಣುತ್ತದೆ ಎನ್ನುತ್ತಿದ್ದರು. ಆದರೆ ಆ ದಿನ ಇಷ್ಟು ಬೇಗ ಘಟಿಸುತ್ತದೆ ಎಂಬ ಊಹೆ ಯಾರಿಗೂ ಇರಲಿಲ್ಲ.
ಅಂದು ರಾಯರು ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ, ಸ್ನಾನ, ಅನುಷ್ಠಾನ ಸಹ ಮುಗಿಸಿ ಕಾಫಿ ಕುಡಿದು ಯಾಕೋ ಎದೆ ನೋವು ಬೇಗ ಮಗಳಿಗೆ ಅಳಿಯನಿಗೆ ಫೋನ್ ಮಾಡಿ ಬರೋಕೆ ಹೇಳು ಅಂತಾ ಹೆಂಡತಿಯ ಹತ್ತಿರ ಫೋನ್ ಮಾಡಿಸುತ್ತಾರೆ. ಇರುವ ಒಬ್ಬಳೇ ಮಗಳು ತಮ್ಮ ಕೊನೆ ಕ್ಷಣದಲ್ಲಿ ತಮ್ಮ ಜೊತೆಯಲ್ಲಿಯೇ ಇರಬೇಕು ಅನ್ನೋ ಆಸೆ ಇಂದಲೇ ಇದ್ದೂರಲ್ಲೇ ಒಳ್ಳೆ ಸಂಬಂಧ ಹುಡುಕಿ ಮದುವೆ ಮಾಡಿದ್ದರು. ಅವರ ಆಸೆ ಫಲಿಸಿತು. ಫೋನ್ ಮಾಡಿ ಕೆಲವೇ ನಿಮಿಷಗಳಲ್ಲಿ ಮಗಳು – ಅಳಿಯ ಬಂದರು. ಚೂರು ನೋವು, ವೇದನೆ ಇಲ್ಲದೆ ಪತ್ನಿ, ಮಗಳ ಕಣ್ಣಮುಂದೆ, ಅಳಿಯನ ತೊಡೆಯಮೇಲೆ ನೋಡು ನೋಡುತ್ತಿದ್ದಂತೆ ರಾಯರ ಪ್ರಾಣ ಪಕ್ಷಿಯು ಹಾರಿ ಹೋಯಿತು. ಲಕ್ಷ್ಮೀದೇವಮ್ಮ ಅವರ ಆರ್ತನಾದ ಮುಗಿಲು ಮುಟ್ಟಿತ್ತು. ಮಗಳು ಜಾನಕೀ ಕಣ್ಣೀರ ಕೊಡಿ ಕರಳು ಹಿಸಕುವಂತಿತ್ತು.. ಬೆಳಗಿನ ಸಮಯ ನೋಡು ನೋಡುತ್ತಿದ್ದಂತೆ ಸುದ್ದಿ ಊರೆಲ್ಲ ಹಬ್ಬಿತ್ತು. ಮನೆಯ ಒಡೆಯನನ್ನು ಕಳೆದುಕೊಂಡಂತೆ ಕಕ್ಕಾಬಿಕ್ಕಿಯಾಗಿ ಹರಿದು ಬಂದಿತ್ತು ಜನಸಾಗರ.. ಅಲ್ಲಿ ಮೃತರಾಗಿರುವುದು ಯಾವ ರಾಜಕಾರಣಿ, ದೊಡ್ಡ ವ್ಯಕ್ತಿ ಅಲ್ಲ. ಒಬ್ಬ ಸಾಧಾರಣ ಮನುಷ್ಯ ಆದರೆ ಅಸಾಧಾರಣ ವ್ಯಕ್ತಿತ್ವ.
ಎಲ್ಲರ ಕಣ್ಣಲ್ಲೂ ನೀರು. ಆದರೆ ಭಾವನೆಗಳೇ ಇಲ್ಲದೆ ದೂರ ನಿಂತಿದ್ದು ಮಾತ್ರ ರಾಯರ ತಮ್ಮ ಕೇಶವ. ತನಗೂ ಇದಕ್ಕೂ ಸಂಬಂಧವೇ ಇಲ್ಲವಂತೆ ನಿಂತಿದ್ದ.
ಕೊನೆ ಕ್ಷಣಗಳು ಹಲವರ ಬಳಿಗೆ ಬೆಳಕಾದ ರಾಯರು ಈಗ ಕೇವಲ ಶವ ಮಾತ್ರ. ಮುಂದಿನ ಕಾರ್ಯಗಳು ನೆರವೇರಬೇಕಿದೆ. ರಾಯರಿಗೆ ಗಂಡು ಮಕ್ಕಳು ಇಲ್ಲದ ಕಾರಣ ಮುಂದಿನ ಕಾರ್ಯವನ್ನೆಲ್ಲ ಅವರ ತಮ್ಮ ಕೇಶವ ನೇ ನೆರವೇರಿಸಬೇಕಾಗಿದೆ. ಜಾನಕೀ ಗೆ ತಂದೆ ಹೇಳಿದ ಮಾತು ನೆನಪಾಗುತ್ತದೆ. ವಿಜಯ್ ತಮ್ಮ ಶವಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಎಂದು ಆಸೆ ಪಟ್ಟಿದ್ದು ನೆನಪಾಗಿ ಹಿರಿಯರ ಮುಂದೆ ಹೇಳಿಕೊಳ್ಳುತ್ತಾಳೆ.
ಆದರೆ ವಿಜಯ್ ಕುಲ, ಗೋತ್ರ ಗೊತ್ತಿಲ್ಲದವನು ಅವನಿಂದ ಕಾರ್ಯಗಳನ್ನು ಮಾಡಿಸುವುದು ಸಾಧ್ಯವೇ ಇಲ್ಲವೆಂದು ಎಲ್ಲರು ನಿರ್ಣಯಿಸುತ್ತಾರೆ. ಲಕ್ಷ್ಮೀದೇವಮ್ಮ ರವರು ಏನು ಹೇಳುವ ಸ್ಥಿತಿಯಲ್ಲಿ ಇರುವದಿಲ್ಲ. ಇದೆ ತಮ್ಮ ನಿರ್ಧಾರ ಎಂದು ಜೋರಾಗಿ ಹೇಳಲು ರಾಯರು ಜೀವಂತವಾಗಿ ಇಲ್ಲ. ಹಲವು ನಿಮಿಷಗಳು ಈ ವಿಷಯದ ಬಗ್ಗೆ ಪರಾ ವಿರೋಧ ಚರ್ಚೆಗಳು ಶುರುವಾಗುತ್ತವೆ. ರಾಯರ ಮನಸ್ಥಿತಿ ಗೌರವಿಸುವವರು ವಿಜಯ್ ವಿಧಿ ವಿಧಾನವನ್ನು ನಿರ್ವಹಿಸ ಬೇಕು ಎಂದು. ಮತ್ತು ವಿಚಾರವಾದಿ ಹಿರಿಯರು ಅದನ್ನ ಒಪ್ಪದೇ ಕೇಶವನಿಗೆ ಮಾತ್ರ ಈ ಅಧಿಕಾರ ಇದೆ ಎಂದು ಘರ್ಷಣೆ ಶುರುವಾಗುತ್ತದೆ. ಶವದ ಮುಂದೆ ನಡೆಯುತ್ತಿರುವ ಈ ಸಂಘರ್ಷ ಹಲವರ ಮನಸಿನಲ್ಲಿ ಆತಂಕ ಮೂಡಿಸುತ್ತದೆ.
ಅಂದು ಮೊದಲೆನೆ ಸರಿ ರಾಯರ ಮಡದಿ ಲಕ್ಷ್ಮೀ ದೇವಮ್ಮ ಕಣ್ಣೀರು ಹಾಕುತ್ತಲೇ ಒಬ್ಬ ಮಗನಿದ್ದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದು. ಜಾನಕೀ ಮೊದಲ ಬಾರಿ ನೊಂದುಕೊಳ್ಳುತ್ತಾಳೆ ತಾನು ಹೆಣ್ಣಾಗಿ ಹುಟ್ಟಿದ್ದಕ್ಕೆ.
ಕೊನೆಗೂ ವಿಚಾರವಾದಿ ಹಿರಿಯರು ಗೆಲ್ಲುತ್ತಾರೆ, ಭಾವನೆಗಳು ಸೋಲುತ್ತವೆ. ಕೇಶವ ಗೆಲುವಿನ ನಗೆ ಬೀರುತ್ತಾನೆ. ನೋಡು ಅಣ್ಣ ಕೊನೆಗೂ ನಿನಗೆ ನಾನೆ ಗತಿ, ಎಂದು ಕುಹುಕದ ನಗೆ ಬಿರುತ್ತಾನೆ. ಅದನ್ನು ಗಮನಿಸಿದ ಜಾನಕೀ ಕುಗ್ಗಿ ಹೋಗುತ್ತಾಳೆ. ರಾಯರ ಆತ್ಮ ಅದೆಷ್ಟು ಚಡಪಡಿಸಿತ್ತೋ ಏನೋ.
ಇದು ಭಾವನೆ ಮತ್ತು ಪದ್ಧತಿಗಳ ಮಧ್ಯದ ಸಂಘರ್ಷ ವಾಗಿತ್ತು.
ಎಷ್ಟೇ ಬದಲಾದ ಮನಸುಗಳು ಪ್ರಗತಿಪರ ಚಿಂತನೆಗಳು ಹರದಾಡುತ್ತಿದ್ದರು ಕೆಲವು ವಿಷಯದಲ್ಲಿ, ಕೆಲವುಕಡೆ ತಲುಪುವುದರಲ್ಲಿ ಸೋತಿದೆ. ಜಗತ್ತನ್ನೇ ಗೆಲ್ಲುವ ಪ್ರೌಢಿಮೆ ಇದ್ದರು ಸಣ್ಣಪುಟ್ಟ ವಿಷಯಗಳಲ್ಲಿ ಸೋಲುತ್ತೇವೆ. ಇಲ್ಲಿ ಯಾವ ನೀತಿ ಬಿಂಬಿಸಬಹುದು ಎಂಬುದು ನನಗೆ ಅರ್ಥವಾಗುತ್ತಿಲ್ಲ.. ಇದು ಓದುಗರ ಅಭಿಪ್ರಾಯಕ್ಕೆ, ಅವರ ವಿಚಾರಧಾರೆ ಗೆ ಬಿಟ್ಟಿದ್ದು..
–ಭಾರ್ಗವಿ ಜೋಶಿ
ಕಥೆ ಮನಮುಟ್ಟುವಂತಿದೆ. ವಾಸ್ತವ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಶುಭವಾಗಲಿ ನಿಮ್ಮ ಬರವಣಿಗೆಗೆ.
It’s wonderful story
ಬಹಳ ಅರ್ಥಗರ್ಭಿತವಾದ ಕಥೆ. ಮನಸಿನ ಭಾವನೆ ಮತ್ತು ಪದ್ಧತಿಗಳ ನಡುವೆ ನಡೆಯುವ ಸಂಘರ್ಷವನ್ನು ಅಚ್ಚುಕಟ್ಟಾಗಿ ಮತ್ತು ಮಾರ್ಮಿಕವಾಗಿ ಬರೆದಿದ್ದೀರಿ. ಮನುಷ್ಯರ ಭಾವನೆಗಳಿಗೆ ಬೆಲೆ ಇಲ್ಲ.
ಧನ್ಯವಾದಗಳು
Thank you