ಕಥಾಲೋಕ

ಅಗ್ನಿ: ಬೆಳ್ಳಾಲ ಗೋಪಿನಾಥ ರಾವ್

   
  
೧. ಬಲಿ  
ಚಂದ್ರ ಹಾಸ ಮತ್ತೊಮ್ಮೆ ತಲೆ ಕೆರೆದುಕೊಂಡ.  
ಎರಡಸ್ಥಂತಿನ  ಭದ್ರ ಬುನಾದಿ ಎಬ್ಬಿಸಿ ಕಟ್ಟಿಸಿದ ಈ ಕಟ್ಟೋಣ    ಅಲುಗಾಡುವದೆಂದರೇನು? 
ಅರ್ಥವಾಗಲಿಲ್ಲ.    
ಚೈತ್ರಂಗೆ ಹೇಳೋಣವೆಂದುಕೊಂಡ ಮತ್ತೆ ನಕ್ಕಾಳು. 
ನಿನ್ನೆ ಹಲ್ಲಿನ ವೈದ್ಯರು ಕೊಟ್ಟ  ಮಾತ್ರೆಯದ್ದೇನಾದರೂ ಸೈಡ್ ಎಫೆಕ್ಟ್ ಆಗಿರಬಹುದಾ.  
ಸ್ವಲ್ಪ ಮತ್ತಿನಲ್ಲಿದ್ದವರ ಹಾಗಿದ್ದೀರಾ ಚೈತ್ರನ ರಾತ್ರೆಯ ಮಾತು ನೆನಪಾಯ್ತು. 
ಕಣ್ಣೂ ನಿಚ್ಚಳವಾಗಿ ಕಾಣ್ತಾ ಇದೆ. 
ಚಿವುಟಿಕೊಂಡ.  
ಇಲ್ಲ ಸರಿಯಾಗಿ ನೋವಾಗ್ತಾ ಇದೆ. 
ಮತ್ತೆ,,? 
ಇನ್ನೊಮ್ಮೆ ಅಲುಗಾಡಿದಂತಾಯ್ತು,ಈ ಸಾರಿ ಇಡೀ ಕಟ್ಟೋಣವೇ ಅಲುಗಾಡಿದಂತೆನಿಸಿತು. 
ತನ್ನ ಭ್ರಮೆಯೇನೋ ಎಂದುಕೊಂಡ. 
ಚೈತ್ರನಿಗೆ  ಅನಾಯಾಸವಾಗಿ ಕರೆ ಮಾಡಿದ. ಆ ಕಡೆಯಿಂದ ಉತ್ತರವಿಲ್ಲ. ಅಂದರೆ ಆಕೆ ಮೀಟಿಂಗ್ನಲ್ಲಿರಬಹುದೆಂದುಕೊಂಡ. 
ಇಲ್ಲ ಈ ಸಾರಿಯ ಅನುಭವ ಇನ್ನೂ ಜಾಸ್ತಿ, ಗಾಬರಿಯಾದ. 
ಅದೇ  ಟ್ರಾನ್ಸ್ನಲ್ಲಿ ಕ್ಯಾಬಿನ್ನನ ಹೊರಗೆ ಬಂದ. 
ಇಡೀ ಕಾರಿಡಾರ್ ಖಾಲಿ. ತನ್ನದೇ ಕೊನೆಯ ಕ್ಯಾಬಿನ್ ಅನತಿದೂರದಲ್ಲಿ ಎತ್ತಿಗೆಯಿದೆ ( ಲಿಫ್ಟ್) 
ಆ ಕಡೆ ಹೋಗೋಣವೆಂದುಕೊಂಡ. 
ಆಗಲೇ ಚೀರಾಟ ಕೇಳಿಸಿತು. ಪಕ್ಕದ ಆಫೀಸುಗಳಿಂದ ಎನ್ನಿಸಿತು. 
ಅವನಿದ್ದದ್ದು ಮೊದಲನೇ ಮಹಡಿಯಲ್ಲಿ.   
ಒಂದೇ ಕ್ಷಣ. ಪಕ್ಕದ ಭಾಗ ದೊಪ್ಪನೆ ಕೆಳಗೆ ಕುಸಿಯಿತು. 
ಅದು ಹೇಗೆ ಕುಸಿಯಿತೆಂದರೆ ಚಂದ್ರಹಾಸನಿಗೆ ಕಂಡದ್ದು ಬರೇ ಹೊಗೆಯ ರಾಶಿ.  
ಭವ್ಯ ಸುಂದರ ಮತ್ತು ಸುರಕ್ಷಿತ ಇಂತಹ ಶಬ್ದಗಳಿಗೆ ಬೆಲೆಯೇ ಇಲ್ಲದ ಹಾಗೆ… 
ಯಾವುದಕ್ಕೂ ಸಮಯವಿಲ್ಲ. 
ಲಿಫ್ಟ್ ನ ಗುಂಡಿಯೊತ್ತಿದ. 
ಆತನಿಗೆ ಅಪಾಯದ ಅರಿವಾಯ್ತು. 
ಅಂದರೆ ತನ್ನ ಕೊನೇಗಾಲವಿದು. 
ಇಡೀ ಕಟ್ಟೋಣವೇ ಕುಸಿಯುತ್ತಿದೆ.. 
ಹೇಗಾಯ್ತು ಏನಾಯ್ತು… 
ಇವಕ್ಕೆಲ್ಲಾ ಅವಕಾಶವಿಲ್ಲ, 
ಸೆಕೆಂಡಿನ ನೂರರಲ್ಲೊಂದು ಅಂಶವಾಗಿ ನನ್ನ ಮರಣ ಕಾಲ ಸಮೀಪಿಸುತ್ತಿದೆ.. 
ಕೊನೆಯ ಆಸೆ…!!! 
ನಗು ಬಂತು 

****** 


ಚೈತ್ರ…. 

 ಮತ್ತೊಮ್ಮೆ ಎಡಗೈ ನೋಡಿಕೊಂಡಳು 
ಯಾಕೋ ಇರುಸು ಮುರಿಸು. 
ಇದಿರು ತನ್ನ ಎಮ್ಡಿ ಭಾಷಣ ಮಾಡುತ್ತಿದ್ದಾನೆ. 
ಆತನ ವಿಷಯಕ್ಕೆ ಪ್ರತಿಸ್ಪಂದಿಸಲಾಗುತ್ತಿಲ್ಲ ತನಗೆ. 
ಯಾಕೋ ನಿನ್ನೆಯಿಂದ ಹೇಳಲಾರದ ತಳಮಳ ತನ್ನಲ್ಲಿ 
ಆಗಲೇ ಚಂದ್ರ ಹಾಸನ ಮಾತು ನೆನಪಾಯ್ತು. 
ಎಂತಹ ಕಳಪೆ ಮಾಲು ಉಪಯೋಗಿಸಿದ್ದಾನೆ ನಿನ್ನ ವೆಂಡರ್. 
ಅದ್ಯಾಕೋ ಹಾಗೆ ಹೇಳ್ತೀ..ಮಾರುಕಟ್ಟೆಯ ಅತ್ಯಂತ ಒಳ್ಳೆಯ ಬ್ರಾಂಡ್ ಉಪಯೋಗಿಸಿದ್ದನಲ್ಲ..? 
ಹಾಗಾದರೆ ಅದೇಕೆ ಎಲ್ಲವೂ ತುಕ್ಕು ಹಿಡಿಯತೊಡಗಿದೆ ಬರೇ ಆರು ತಿಂಗಳಲ್ಲಿ..? 
ಹಾಗಾಗಲು ಸಾಧ್ಯವೇ ಇಲ್ಲ.. 
ನನ್ನ ಮೇಲೆ ನಂಬಿಗೆಯಿಲ್ಲವೇ ನಿನಗೆ ಆತನ ಕಣ್ಣುಗಳಲ್ಲಿ ಅಪನಂಬಿಗೆಯಿತ್ತು. 
ಯಾಕೆ ಹಾಗಾಯ್ತು? 
ಅಲ್ಲಿ ಉಪಯೋಗಿಸುತ್ತಿರೋ ನೀರಿನಿಂದ ಏನಾದರೂ… 
ಅದನ್ನೂ ಪರೀಕ್ಷಿಸಿಯಾಯ್ತು.. 
ಅಂತದ್ದೇನಿರಲಿಲ್ಲವಂತೆ. 
ಮತ್ತೆ ಆ ಕಚೇರಿಯ ಕೆಲವರ ಹಲ್ಲುಗಳೂ ಹಳದಿಯಾಗಿ ಕರೆ ಕಟ್ಟಿಕೊಂಡಿವೆಯಂತೆ. 
ವಿಷಯವೇನೂ ಸೀರಿಯಸ್ ಅಲ್ಲದಿದ್ದರೂ ಅವಳ ಮನಸ್ಸಿಗೇನೋ ತಳಮಳ. 
ಎಮ್ಡಿಯ ಮಾತು ನಿಂತದ್ದು ಅರಿವಾಯಿತು. ಯಾರದ್ದೋ ಕರೆ ಬಂದು 
ಏನೂ..? 
ಕೇ ಪಿ ಕಂಪೆನಿಯ ಕಟ್ಟೋಣ ಬಿದ್ದೋಯ್ತಂತೆ… 
ಎದೆ ಉಸಿರಾಡುವದನ್ನೇ ನಿಲ್ಲಿಸಿತು ಆಕ್ಷಣ. 
ಅದು ತನ್ನ ಚಂದ್ರೂನ ಆಫೀಸ್. 
ಕಳೆದ ವರ್ಷವೇ ಕಟ್ಟಿದ ಕಟ್ಟೋಣವದು. 
ತಮ್ಮ ಆಫೀಸಿಗೆ ಬೆಸ್ಟ್ ಆರ್ಕಿಟೆಕ್ಟ್ ಅವಾರ್ಡ್ ಬಂದದ್ದು ಅದೇ ಕಟ್ಟೋಣದ ದೆಸೆಯಿಂದ. 
ಅದು ಬಿತ್ತೆಂದರೆ ಚಂದ್ರೂ…. 
ಕಣ್ಣು ಕತ್ತಲಿಟ್ಟಿತು ಚೈತ್ರಂಗೆ… 
ಕಣ್ಣು ತೆರೆದಾಗ ಇದಿರಿಗೆ ಪೋಲೀಸ್. 
ಆ ಬಿಲ್ಡಿಂಗ್ ಆರ್ಕಿಟೆಕ್ಟ್ ನೀವೇ ಅಲ್ಲವೇ? 
ಹೌದು ಆದರೆ..? 
ಆದರೆ ಏನೂ ಇಲ್ಲ ಮೇಡಮ್ 
ಕಟ್ಟಡ ಹೇಗೆ ಬಿತ್ತೆಂದರೆ ಅದರಡಿಯಲ್ಲಿ ಬಿದ್ದ ಯಾರೂ ಬದುಕುಳಿಯುವ ಸಾಧ್ಯತೆ ಇಲ್ಲವೇ ಇಲ್ಲ. 
ಚೈತ್ರ ಮತ್ತೊಮ್ಮೆ ಕೆಳಗೆ ಬಿದ್ದಳು … 
ಕಣ್ತೆರೆದಾಗ ಅವಳು ಆಸ್ಪತ್ರೆಯಲ್ಲಿದ್ದಳು. 
  

ಚಂದ್ರ ಹಾಸ ಚೈತ್ರ  

ಮನೆಯ ಇದಿರು ಹಾಕಿದ ನಾಮ ಫಲಕ. ರಸ್ತೆಯ ಪಕ್ಕದಲ್ಲಿ ಹಾದು ಹೋದ ಹಸಿರು ಗಡಿಗಳು. ಹಸಿರು ಹಾಸು. ಪಕ್ಕದಲ್ಲಿ ಗೂಡು ಹೊತ್ತ ಪೇರಲೆ ಮಾವು ಮರಗಳು, ಅನತಿ ದೂರದಲ್ಲಿ ಜೇನು ಗೂಡಿನ ಪೆಟ್ಟಿಗೆ, ಪ್ರಕೃತಿ ಪ್ರಿಯರ ಮನೆ ಎಷ್ಟೇ ಚಿಕ್ಕದಾದರೂ ಆಸು ಪಾಸು ನೋಡುವಾಗಲೇ ಅರಿವಾಗುತ್ತದೆ.  
ನಮ್ಮನೆ ಪಕ್ಕದಲ್ಲಿ ಬೋರ್ ಹೊಡೆಸುತ್ತಿದ್ದಾರಂತೆ ಕಣ್ರೀ.  
ಯಾಕೆ ಬೇರೇನೂ ಕೆಲಸ ಇಲ್ಲಂತಾ..?  
ಯಾಕ್ರೀ ಹಾಗೆ ಹೇಳ್ತೀರಾ? ಆ ಜಾಗ ಕೊಂಡ್ಕೋಂಡೋರು ತಮ್ ಜಾಗದಲ್ಲಿ ಮಾಡ್ಕೋತಾ ಇದ್ದಾರೆ, ಅದರಲ್ಲಿ ಏನು ತಪ್ಪಿದೆ.  
ಹೋ ಅದಾ…!! ತಪ್ಪಿಲ್ಲ ಬಿಡು ಈ ಸರಕಾರಿ ನೀರು ಎಲ್ಲಾ ಕಡೆ ಬರೋಲ್ವಲ್ಲಾ, ಅದಕ್ಕೇ ತಮ್ಮದೇ ಅಂತ ಮಾಡ್ಕೊಂಡ್ರೆ ಒಳ್ಳೆಯದು ಅಂತಾನಾ ಏನೋ ಬಿಡು. ಆದರೂ ಇಲ್ಲಿ ನೀರು ಬೇಗ ಸಿಕ್ಕಲ್ಲ ಅನ್ಸತ್ತೆ,,  
ಏನೋ ಕಳೆದ ವರ್ಷ ನಾನ್ನೂರು ಮೀಟರ್ ಹೋದ್ರೂ ಆಚೆ ಬೀದಿಯವರಿಗೆ ನೀರು ಸಿಕ್ಕಿಲ್ಲ ಅಂತೆ, ಇವ್ರು ಎಷ್ಟು ಕೆಳಗಡೆ ಹೋಗ ಬೇಕೋ ಏನೋ..  
ಇರ್ಲಿ ಬಿಡು ನಮ್ಮ ಹಾಗಾ ಬೇಕಾದಷ್ಟು ದುಡ್ಡು ಮಾಡ್ಕೊಂಡಿರ್ತಾರೆ, ಅದನ್ನೇ ಇಲ್ಲಿ ಖರ್ಚು ಮಾಡ್ತಾರೆ ಬಿಡು.  
ಹೋಗಲಿ ತಿಂಡಿ ಏನು ಮಾಡಿದ್ದೀ?  
ನಿಮ್ಮಗನಿಗೆ ಇಡ್ಲಿ ದೋಸೇ ಪಿಜ್ಜಾ ಸ್ಟಾಯಿಲ್ನಲ್ಲಿ ಬೇಕಂತೆ ಅದೇ ಮಾಡ್ತಾ ಇದ್ದೇನೆ.  
ಅಯ್ಯಯ್ಯೋ ಇನ್ನು ಮುಂದೆ ನಾನೂ ನೀನೂ ಮುದುಕರಾದಾಗ ಅದನ್ನೇ ತಿನ್ನ ಬೇಕೇನೋ.  
ಇದೇ ಸರಿ, ಯಾಕೆಂದರೆ ಬೊಚ್ಚು ಬಾಯಲ್ಲಿ ಇದನ್ನು ತಿನ್ನಲು ಅಗಿಯ ಬೇಕಾಗೂ ಇಲ್ಲವಲ್ಲ.  
ಯಾರಿಗೆ ಗೊತ್ತು, ಅಲ್ಲಿಯವರೆಗೂ ನಾನು ಇರುತ್ತೇನೋ ಇಲ್ಲವೋ..  
ಚೀ ಹಾಗೆಲ್ಲಾ ಹೇಳಬೇಡಿ ತಥಾಸ್ತು ದೇವತೆಗಳಿರ್ತಾರಂತೆ.  
ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ನಾವು ಹೇಘಿದ್ದರೂ ಪಡೆದುಕೊಂಡು ಬಂದಷ್ಟು ದಿನ ಮಾತ್ರ ಇರೋದು ತಾನೇ , ಹಾಗಿರುವಾಗ…? ನಮ್ಮ ಇಲ್ಲಿನ ಜೀವನದಲ್ಲಿ ಜನನ ಮರಣಗಳು ಮೊದಲೇ ನಿರ್ಧಾರಿತ ಅಲ್ಲವೇ?  
ನಿಮ್ಮನ್ನು ಯಾರು ವಾದದಲ್ಲಿ ಗೆಲ್ತಾರೆ ಬಿಡಿ..  
ಸರಿ ಹಾಗಾದರೆ ಅರ್ಜೆಂಟಾಗಿ ಒಂದು ಕೊಡು..  
ಏನದು..?  
ಅದನ್ನೂ ಹೇಳಬೇಕ..?  
   
ಎಲ್ಲಿ ಹತ್ತಿರ ಬಂದು ಇನ್ನೇನು ಕೊಟ್ಟೇ ಬಿಡುತ್ತಾನೆ ಅನ್ನುವಾಗ ಗದರಿದಳು ಪ್ರೀತಿಯಿಂದ…  
ನಿಮಗೆ ಹೊತ್ತು ಗೊತ್ತೂ ಇಲ್ಲವೇ, ಪಕ್ಕದಲ್ಲೇ ಸೂರ್ಯ ಬರ್ತಾ ಇದ್ದಾನೆ ನೋಡಿ….  
ಗಾಬರಿಯಿಂದ ಅವಳನ್ನು ತಳ್ಳಿದ ಚಂದ್ರು…  
ಎಲ್ಲೇ…?ಯಾರೂ.?  
ನಕ್ಕು ಓಡುತ್ತಾ ನುಡಿದಳು..ನಿಮ್ಮನ್ನು ಪಳಗಿಸಲು ಅವನೇ ಬರಬೇಕು ಬಿಡಿ..  
ಆಗಲೇ ತೇಜೂನ ನೆನಪಾಯ್ತು. ಅವನೂ ತನ್ನ ಹಾಗೇ ಪ್ರಾಣಿ ದಯಾಪರ, ಪ್ರಕೃತಿ ಪ್ರಿಯ, ಶಾಲೆಯಲ್ಲಿ ಅಧ್ಯಾಪಕರೂ ಮಕ್ಕಳೂ ಎಲ್ಲರ ಪ್ರಾಣ, ವಿಧ್ಯಾರ್ಥಿ ಅಂದರೆ ಹಾಗಿರಬೇಕೂ ಅಂತ ಎಲ್ಲರೂ… ದೊಡ್ಡವನಾಗಿ ಸೈಯ್ನ್ಟಿಸ್ಟ್ ಆಗ್ತಾನೆ ಅಂತ ಎಲ್ಲರೂ. ಶಾಲೆಯ ಸಮಾರಂಭದಲ್ಲಿ ಎಲ್ಲಾದಕ್ಕೂ ಮುಂದು, ಆ ವಯಸ್ಸಿಗೇ ಮೀರಿದ ಬುದ್ದಿಮತ್ತೆ ವಿವೇಕ.  
ನೆನಪಾಯ್ತು ಅವನ ಮಾತು…  
ಪಪ್ಪಾ ಆ ಗುಬ್ಬಚ್ಚಿ ಗೂಡಲ್ಲಿ ಒಂದೇ ಒಂದು ಗುಬ್ಬಚ್ಚಿ ಇತ್ತು . ನಿನ್ನೆಯಿಂದ ಅದೂ ಕಾಣ್ತಾ ಇಲ್ಲಲ್ಲ..  
ಅದೂ ಪ್ರಾಯಷಃ ತನ್ನವರನ್ನು ಕರೆದುಕೊಂಡು ಬರಲು ಹೋಗಿರ ಬೇಕು. ಬೇಗದಲ್ಲೇ ಅದರ ಸಂಸಾರವೂ ಬರುತ್ತೆ.. ನೋಡ್ತಾ ಇರು..  
ಹೌದಾ ಪಪ್ಪಾ… ನಮ್ಮಹಾಗೇ…  
ಆದರೆ .. ಇನ್ನೂ ಬರಲಿಲ್ಲ ಯಾಕೆ..?  
ಆಗಲೇ ಪಕ್ಕದ ಮನೆಯ ಬಂಟಿ ಮತ್ತಿಬ್ಬರು.. ಏದುತ್ತಾ ಓಡಿ ಬರುತ್ತಿದ್ದರು..ಇಬ್ಬರ ಕಣ್ಣಲ್ಲೂ ನೀರು…  
ಏನಾಯ್ತಪ್ಪಾ…?  
ಯಾಕೋ ಸಮಯವೇ ನಿಲ್ಲುವ ಭಾವನೆ..  
ಅಂಕಲ್ ತೇಜೂ…  
ಏನಾಯ್ತು.. ನಮ್ ತೇಜೂಗೆ…  
ಇಬ್ಬರೂ ಓಡಿ ಬಂದರು..  
ತೇಜೂ ತೇಜೂ ..ಕೊಳಚೆ ಕೆರೆಯಲ್ಲಿ ಬಿದ್ದು ಬಿಟ್ಟ….  
ಆಕಾಶವೇ ಕಳಚಿ ಬಿತ್ತು…  
ಎಲ್ಲಿ…  
ಮುಂದೆ ಇಬ್ಬರ ಗಂಟಲಿಂದಲೂ ಸ್ವರ ಹೊರಡಲೇ ಇಲ್ಲ..  
ಪೋಲೀಸ್ ಧವನಪ್ಪ ಚಂದ್ರೂ ದಂಪತಿಗಳನ್ನು ಸಂತೈಸುತ್ತಿದ್ದ..  
ನಾಚಿಕೆಯಾಗುತ್ತಿದೆ ನಂಗೆ, ಆ ಪಾತಕಿಗಳನ್ನು ಏನೂ ಮಾಡಲಾಗುತ್ತಿಲ್ಲವಲ್ಲ ಸಾರ್. ಅಲ್ಲಾ ಆ ಕಳ್ಳರು ತ್ಯಾಜ್ಯ ವಸ್ತುಗಳನ್ನು ಕೆರೆಗಾ ಹಾಕೋದು…ಆ ಮಗು ಎಷ್ಟು ಕಷ್ಟ ಪಟ್ಟಿತೋ ಏನೋ, ಅದು ಖಾಲಿ ಇದ್ದರೂ ಏನಾದರೂ ಮಾಡಿ ಉಳಿಸಿಕೊಳ್ಳ ಬಹುದಿತ್ತು.  
ವೈದ್ಯರೂ ತಿಳಿಸಿದ್ದರು..  
ಸಯನೈಡ್ , ಫ್ಲೋರೈಡ್ ನಂತಹ ರಾಸಾಯನಿಕ ವಸ್ತು ವಿದ್ದ ಆ ಕೆರೆ ಅಕ್ಷರಶಃ ಮೃತ್ಯು ಕೂಪವೇ ಆಗಿ ಬಿಟ್ಟಿತ್ತು…ಅದಕ್ಕೇ ಉಸಿರೂ ತೆಗೆದುಕೊಳ್ಳದಂತೆ ಈ ಕಷ್ಮಲಗಳು ಮಗುವಿನ ದೇಹವನ್ನೇ ಕರಗಿಸಿ ಬಿಟ್ಟಿದ್ದವು.  
ಇದಕ್ಕೆ ಬೇರೆ ಏನೂ ಉಪಾಯ ಇಲ್ವಾ ಸಾರ್. 
ಅಂದರೆ..? 
ಇಂತಹ ಪಾತಕಿಗಳನ್ನು ಶಿಕ್ಷಿಸಲು ಏನೂ ಕನೂನಿಲ್ಲವೇ..? 
  
ಯಾಕಿಲ್ಲಾ, ಆದರೆ ಅವರೆಲ್ಲಾ ಕೊಂಡು ಕೊಳ್ತಾ ಇದ್ದಾರಲ್ಲ, ಕಾನೂನು ಮಾಡುವವರನ್ನು…. 
ಹಾಗಾದರೆ ಇಂತದಕ್ಕೆ ಕೊನೆ ಇಲ್ಲವೇ  
ಯಾರಾದರೂ ತಾವೇ ಸ್ವತಃ ಇದನ್ನು ಅರಿವು ಮಾಡಿಸುವ ವರೆಗೆ ಏನೂ ಸಾಧ್ಯವಿಲ್ಲಪ್ಪಾ.. 
…………………………… 
  
ಚೈತ್ರ ಕಣ್ಣು ತೆರೆದಾಗಲೇ ನೆನಪಾಗಿದ್ದದ್ದು… 
  
ತಾನಿನ್ನೂ ಚಂದ್ರೂಗೆ ಹೇಳಲೇ ಇಲ್ಲ, ತನ್ನಲ್ಲಿ ಹಾಸನ ಕುಡಿ ಬೆಳೆಯುತ್ತಿದೆ ಅಂತ.. 
ಇವತ್ತು ರಾತ್ರಿಯೇ ಹೇಳಬೇಕೆಂದುಕೊಂಡಿದ್ದಳು 
ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿ…?
ನಡೆದದ್ದೆಲ್ಲಾ ಕನಸೇ 
  
ಚಂದ್ರೂ…ಆಕ್ಸಿಡೆಂಟ್!!! 
ಮತ್ತೆ ಅವಳು ಎಚ್ಚರ ತಪ್ಪಿದ್ದಳು. 
 

ನೆರೆ 

ಆಕಾಶ ತೂತಾದಂತೆ ಮಳೆ.  
ಎಡೆಬಿಡದ ಮಳೆ ಎರಡು ದಿನದಿಂದ ಬಿಟ್ಟೂ ಬಿಡದೇ ಸುರಿಯುತ್ತಿತ್ತು.  
ಮೈಕ್ರೋ ಮೆಡಿ ಲ್ಯಾಬ್ ಸಂಸ್ಥೆ ಆವರಣದಲ್ಲಂತೂ ಕೆರೆಯಂತೆ ತುಂಬಿದ ನೀರು ಎಲ್ಲೆಲ್ಲೂ ಕಾಣುತ್ತಿತ್ತು.  
ಆವರಣದಲ್ಲಿ ಭವನದಿಂದ ಭವನಕ್ಕೆ ಕೊಂಡೊಯ್ಯುವ ರಸ್ತೆಯ ಪಕ್ಕದಲ್ಲಿ ನೀರನ್ನು ಕೊಂಡೊಯ್ಯಲು ಚರಂಡಿಗಳಿಲ್ಲ. ಮಳೆಯ ನೀರು ತಾನೇ ಗಮ್ಯವನ್ನರಸಿ ತನ್ನ ಹರಹನ್ನು ವಿಸ್ತಾರಗೊಳಿಸುತ್ತಾ ಮುನ್ನುಗ್ಗುತ್ತಿತ್ತು. ಆವರಣದ ಕೊನೆಯಲ್ಲಿದ್ದ ಮೊದಲನೇ ಯುನಿಟ್ ನ ಪಕ್ಕದಿಂದ ಹಾದು ಹೋಗುತ್ತಾ ಅಲ್ಲೇ ಮಾಡಿದ ಹೊಂಡದಲ್ಲಿ ತಿರು ತಿರುಗಿ ತುಂಬಿಕೊಂಡು ಹೊಂಡದಿಂದ ತೆಗೆದು ಶೇಖರಿಸಿದ ಮಣ್ಣಿನ ಅಡ್ಡಕ್ಕೆ ಹರಿಯಿತು. ಅಲ್ಲೇ ಕಂಪೌಂಡ್ ಗೋಡೆ . ಇನ್ನೆಲ್ಲೂ ಹರಿಯಲು ಜಾಗವಿಲ್ಲದೇ ಅಲ್ಲಲ್ಲೇ ತುಂಭಿಕೊಂಡಿತು. ನೀರ ಮಟ್ಟ ಮಳೆಯ ಕಾರಣ ಇನ್ನೂ ಏರುತ್ತಲೇ ಇತ್ತು. ತುಂಬುತ್ತಿರೋ ನೀರಿನ ವಿಸ್ತಾರ ಹರವನ್ನು ತಡೆದಿಟ್ಟ ಗೋಡೆಗೂ ತಡೆಯಲೊಂದು ಮಿತಿ ಇದೆ. ಎತ್ತರಕ್ಕೆ ಕಟ್ಟಿದ ಗೋಡೆ ತನ್ನ ಭಾರವನ್ನು ತಡೆದುಕೊಳ್ಳಬಹುದು ಆದರೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ನೀರಿನ ಹರಹಿನ ಒತ್ತುವಿಕೆಯೆದುರು ಕೊನೆಗೂ ಸೋಲೊಪ್ಪಲೇ ಬೇಕಾಯ್ತು. ಪರಿಣಾಮ ಗೋಡೆಯನ್ನೇ ಅಡ್ಡಕ್ಕೆ ಬೀಳಿಸಿದ ನೀರು ಪಕ್ಕಕ್ಕೆ ಹರಿಯಿತು. ಕಂಪೆನಿಯ ಆವರಣದ ಹೊರಕ್ಕೆ.  
ಅಲ್ಲೇ ಪಕ್ಕದಲ್ಲಿ ತಗ್ಗು ತೀರಾ ಕೆಳಗಿಳಿದರೆ ವಿಸ್ತಾರಗೊಳ್ಳುತ್ತಿದ್ದ ಜಾಗ. ಅಲ್ಲೇ ಸ್ಲಮ್ಮುಗಳಿವೆ. ತಾತ್ಕಾಲಿಕವಾಗಿ ಮಾಡಿಕೊಂಡ ಗೂಡು.  
ವೇಗವಾಗಿ ಮುನ್ನುಗ್ಗಿದ ನೀರು ಅಲ್ಲಲ್ಲಿ ಸಿಕ್ಕಿದ ಮನೆಯೆಲ್ಲಕ್ಕೂ ತನ್ನ ತೀರ್ಥವನ್ನು ಪಸರಿಸಿತು.  
ಅಲ್ಲೆಲ್ಲಾ ತಮಗೆಂದು ತಂದಿರಿಸಿದ ನೀರನ್ನೂ ಆಪೋಷನ ಮಾಡಿಕೊಳ್ಳುತ್ತಾ ಮುಂದುವರಿಯುತ್ತಾ ಹರಿಯುತ್ತಿದ್ದ ನಾಲೆಗೆ ಸೇರಿತು. ಇಲ್ಲಿಯವರೆಗೆ ಎಷ್ಟು ಬೇಕೋ ಅಷ್ಟು ಅವಗಡ ಮಾಡಿಕೊಂಡಿತ್ತು  
  
ಮಾರನೆಯ ಎರಡು ದಿನ ಆ ನಗರದ ಸ್ಲಮ್ ನ ಬಹಳಷ್ಟು ಜನ ಆಸ್ಪತ್ರೆಗೆ ಸೇರಿದ್ದರು.. ಸರಕಾರೀ ಆಸ್ಪತ್ರೆಗಳಲ್ಲಿ. 
ಸರಕಾರೀ ಮತ್ತು ಗೈರು ಸರಕಾರೀ ಸಂಸ್ಥೆಗಳು ಬಹಳಷ್ಟು ಪ್ರಯತ್ನ ಪಟ್ಟಿದ್ದರೂ ಮುಕ್ಕಾಲು ಪಾಲು ಸಂಸಾರಗಳನ್ನು ಉಳಿಸಿಕೊಳ್ಳಲಾಗಿರಲಿಲ್ಲ. 
ಎಂದಿನಂತೆ ಆಢಳಿತ ಮತ್ತು ವಿರೊಧ ಪಕ್ಷಗಳೊಂದಿಗೆ ಮಾಧ್ಯಮದವರೂ ಪರ ವಿರೋಧೀ ಬಣಗಳಾಗಿ ಆ ಕಾದಾಟವನ್ನು ಬಣ್ಣ ಹಚ್ಚಿ ನವೀಕರಿಸಿದರು ಹೊಸ ವಿವಾದ ಸಿಗುವ ವರೆಗೆ. 
ಇಷ್ಟೇಲ್ಲ ಇದ್ದರೂ ಎಂದಿನಂತೆ ನಡೆಯುತ್ತಿವೆ ಖಾರ್ಖಾನೆಗಳು… ಮತ್ತು ವಾತಾವರಣದ ಕಲುಷಿತತೆ. 
   
೪. ಸಂಶಯ  
   
 ಡಿ ಸಿ  
ಅದು ಆ ಸರಕಾರೀ ಗಾಡಿಯ ಇದಿರಿದ್ದ ಫಲಕ  
ತಡವಾಯ್ತೆಂದು ಅವಸರಿಸುತ್ತಿದ್ದರು ಅಜಯ್ ತಮ್ಮ ವಾಹನ ಚಾಲಕ ಮಂಜುವನ್ನು.  
ಇನ್ನೇನು ಆ ತಿರುವನ್ನು ಅವರ ಕಾರು ದಾಟಬೇಕು,  
ಆಗಲೇ ಎಡಗಡೆಯಿಂದ ಜೋರಾಗಿ ಹಾರ್ನ್ ಮಾಡುತ್ತಾ ಬಂತು ಟ್ಯಾಂಕರ್ ಒಂದು..  
ಅಷ್ಟೊಂದು ಅನುಭವವಿದ್ದ ಸರಕಾರೀ ವಾಹನ ಚಾಲಕನೂ ಬೆಚ್ಚಿದ ಆ ಕ್ಷಣಕ್ಕೆ..  
ಕಪ್ಪು ಟೋಪಿ ಧರಿಸಿದ ಅದರ ಚಾಲಕ ಕಣ್ಣು ಮಾತ್ರ ಬಿಟ್ಟು ಮುಖವೆಲ್ಲಾ ಮುಚ್ಚಿದ್ದ ಆದರೂ ಆತನ ಬೈಗುಳ ಮಂಜು ಕಿವಿಗೆ ತಾಕಿತ್ತು…..  
ಆದರೂ ಚಾಕಚಕ್ಯತೆಯಿಂದ ಆಗಬಹುದಾಗಿದ್ದ ಅಪಘಾತವನ್ನು ತಪ್ಪಿಸಿದ, ಟ್ಯಾಂಕರ್ ಚಾಲಕನನ್ನು ಬೈದುಕೊಳ್ಳುತ್ತಾ…  
ಫೋಲೋ ಮಾಡಲಾ ಸಾರ್  
ಕೇಳಿದ ಮಂಜು… ಬೇಡ ಬಿಡು ಆಗಲೇ ತಡವಾಗಿದೆ…ಈ ಕೇಸು ಪೋಲೀಸರಿಗೇ ಬಿಡುವಾ..  
ಆ ಗಡಿಬಿಡಿಯಲ್ಲೂ ಆ ವಾಹನದ ನಂಬರ್ ನೋಡಿಕೊಳ್ಳಲು ತಿಳಿಸಿದರು ಅಜಯ್.  
ಕೆ ಏ ೦೪ ಎಮ್ ಜಿ ೬೦೩೦ ಹಳದಿ ಬಣ್ಣದ ವಾಹನವದು..  
ಆ ಕೂಡಲೇ ಆ ವಿಭಾಗದ ಪೋಲೀಸರಿಗೆ ವಿಷಯ ತಿಳಿಸಿ ವಿಚಾರಿಸಿಕೊಳ್ಳಲು ತಿಳಿಸಿದರು ಅಜಯ್.  
ಪೋಲೀಸರು ಕೂಡಲೇ ಕಾರ್ಯೋನ್ಮುಖರಾದರು.  
ಮುಂದಿನ ತಿರುವಿನಲ್ಲಿ ಎಡಕ್ಕೆ ಹರಿದ ದಾರಿಯಲ್ಲಿ ಸ್ವಲ್ಪ ದೂರ ವೇಗವಾಗಿ ಚಲಿಸಿದ ಟ್ಯಾಂಕರ್ ನಿಂತಿತು ಅಲ್ಲಿಂದಲೂ ಒಳ ಓಣಿಯಲ್ಲಿ ಚಲಿಸಿ .  
ಆದರೂ ಇನ್ನೊಮ್ಮೆ ಹಿಂದೆ ಮುಂದೆ ಆಚೆ ಈಚೆ ನೋಡಿಕೊಂಡೇ ಕೆಳಕ್ಕಿಳಿದ ವಿಕ್ರಮ್.  
ಇಲ್ಲ ಡಿಸೀಯ ಗಾಡಿ ತನ್ನನ್ನು ಹಿಂಬಾಲಿಸುತ್ತಿಲ್ಲ.  
ಸಾವಿರ ರೂಪಾಯಿ ನೋಟೊಂದನ್ನು ಟ್ಯಾಂಕರ್ ಚಾಲಕನಿಗಿತ್ತ ವಿಕ್ರಮ್ ಪಕ್ಕಕ್ಕೆ ಸರಿದು ಗಾಡಿಯ ನಂಬರ್ ಪ್ಲೇಟ್ ಕಿತ್ತೆಸೆದ.  
ನಿನ್ನ ನಂಬರ್ ಪ್ಲೇಟ್ ಹಾಕಿಕೋ ಅಂದ.  
ನನ್ನನ್ನು ಏನೂ ಮಾಡಲಿಕ್ಕಿಲ್ಲ ಅಲ್ಲಾ ಸಾರ್ ನನಗೆ ಹೆದರಿಕೆಯಾಗುತ್ತಿದೆ  
ಅಂದ ಚಾಲಕ.  
ಏನೂ ಹೆದರಬೇಡ ನೀನು ಹೆದರಿದರೆ ನಿನಗಾದ ಅನ್ಯಾಯ ಯಾರು ಸರಿ ಮಾಡುತ್ತಾರೆ? ಅಲ್ಲದೇ ಅವರು ಕಂಡದ್ದು ನಿನ್ನ ಗಾಡಿಯನ್ನಲ್ಲವಲ್ಲ,  
ಗೊತ್ತಾಯ್ತಾ, ಮತ್ತೆಂದೂ ನಿನ್ನ ಮನಸ್ಸಿನಲ್ಲಿಯೂ ಈ ವಿಷಯ ಬರಬಾರದು ಆಯ್ತಾ…  
ಇನ್ನು ಮೇಲೆ ನನಗೂ ನಿನಗೂ ಪರಿಚಯವೂ ಇಲ್ಲ , ಏನಾದರೂ ಬೇಕಿದ್ದರೆ ನಾನೇ ನಿನ್ನನ್ನು ಭೇಟಿಯಾಗ್ತೇನೆ ಆಯ್ತಾ.  
ಹೊರಡುವ ಮೊದಲು ಇನ್ನೊಮ್ಮೆ ಆಚೆ ಈಚೆ ನೋಡಿ ಖಚಿತ ಪಡಿಸಿಕೊಂಡ…  
ಇಲ್ಲ… ಯಾರೂ ಹಿಂಬಾಲಿಸುತ್ತಿಲ್ಲ…  
ಆದರೆ ಆತನಿಗೆ ಗೊತ್ತಾಗದಿದ್ದುದು ಇನ್ನೂ ಇದೆ..
ಈ ಟ್ಯಾಂಕರ್ರೂ ಖಾನ್ ನದ್ದೇ..
ಅಂದೇ ಸಂಜೆ ಖಾನ್ ನಿಗೆ ವಿಷಯ ತಿಳಿಸಿದ್ದನಾತ.
  
ಮೈಕ್ರೋ ಮೆಡಿ ಲ್ಯಾಬ್ ಸಂಸ್ಥೆ ಆವರಣ.  
ಅದರ ನೂರು ಎಕೆರೆ ಜಾಗ ಮರಗಿಡಗಳಿಂದ ಹಸಿರಾವ್ರತ ಹುಲ್ಲುಗಾವಲುಗಳಿಂದ ಅಂದವಾದ ವಿಧ ವಿಧದ ಹೂವಿನ ಗಿಡಗಳು ತುಂಬಿದ ಲಾನ್ ಗಳಿಂದ ಆ ಕ್ಯಾಂಪಸ್ ಅಲ್ಲಿ ಕೆಲಸ ಮಾಡುವವರು ಸ್ವರ್ಗದಿಂದಲೇ ಬಂದಿರಬೇಕು ಅನ್ನಿಸುತ್ತದೆ.  
ಅದರ ಚೀಫ್ ಸೆಕ್ಯುರಿಟಿ ಆಫೀಸರ್ ಖಾನ್ ದೋಸ್ತ್ ಖಾನ್.  
ತುಂಬಾನೇ ಮೇಧಾವಿ. ತನಗೆ ಒಪ್ಪಿಸಿದ ಕೆಲಸವನ್ನು ಕರಾರುವಾಕ್ಕಾಗಿ ಒಂದೂ ತಪ್ಪಿಲ್ಲದಂತೆ ಮುಗಿಸುವುದು ಆತನ ಹವ್ಯಾಸ.  
ಸರಕಾರೀ ಕಾನೂನಿನನುಗುಣವಾಗಿ ಎಲ್ಲವನ್ನೂ ಪುರಾವೆ ಸಹಿತ ನಿಖರವಾಗಿ ಇಟ್ಟುಕೊಂಡಿದ್ದಾನೆ. ಅವನ ಬಾಸ್ ಕಾರಿಯಪ್ಪನವರ ಬಲಗೈ ಬಂಟ.  
ಫ್ಯಾಕ್ಟರಿಯ ಸೆಕ್ಯುರಿಟಿ ಅವನ ಕಯ್ಯಲ್ಲಿ ಕೊಟ್ಟು ನಿಶ್ಚಿಂತ ಅವರ ಬಾಸ್. ಯಾಕೆಂದರೆ ಅಷ್ಟು ನಂಬಿಗೆ ಉಳಿಸಿಕೊಂಡಿದ್ದಾರೆ. ಸರಕಾರೀ ಕಾನೂನು ಕೂಡಾ ಪ್ರತಿ ಹಂತದಲ್ಲೂ ಮುಷ್ಟಿ ಭದ್ರ ಮಾಡಿಕೊಂಡಿದ್ದರೂ ಕಾನೂನಿನ ಕಣ್ಣು ತಪ್ಪಿಸಿ ಬೇರೆ ಮೆಡಿ ಫ್ಯಾಕ್ಟರಿಗಳಂತೆ ಈ ಫ್ಯಾಕ್ಟರಿಯಲ್ಲಿಯೂ ಲಾಭ ಮಾಡಿಕೊಳ್ಳೋ ಹಲವಾರು ಹುನ್ನಾರಗಳಿವೆ. ಅದೆಲ್ಲಾ ಬಾಸ್ ಮತ್ತು ಖಾನ್ ಹೊರಗಿನ ಯಾರಿಗೂ ಸ್ವಲ್ಪವೂ ಸುಳಿವು ಹತ್ತದಂತೆ ಮಾಡಿ ಮುಗಿಸಿ ಬಿಡುವರು. ಹಾಗಂತ ಇವರ ಕಂಪೆನಿಗೆ ಶತ್ರುಗಳು ಇಲ್ಲವೇಂತಲ್ಲ. ಶತ್ರುಗಳಿಗಿಂತ ಒಂದು ಹೆಜ್ಜೆ ಮುಂದಿರುವುದು ಈ ಜೋಡಿಯ ವೈಶಿಷ್ಟ್ಯ.  
ಆ ದಿನ ಹೀಗೇ ಆಗಿತ್ತು.  
ಆಗಾಗ್ಗೆ ಹೊರಗಿನಿಂದ ಇಂಜಿನೀಯರ್ ನಾಲ್ಕನೆಯ ವರ್ಷದ ವಿಧ್ಯಾರ್ಥಿಗಳು ಬರುತ್ತಿರುತ್ತಾರೆ,  
ಫ್ಯಾಕ್ಟರಿಯ ಒಳಗಿನ ವಿಧ್ಯಮಾನಗಳನ್ನು ಅರಿಯಲು ಅ‌ದರಂತೆ ಕಲಿಯಲು ಬಂದವರು ಆಗು ಹೋಗುಗಳ ಮತ್ತಿತರ ಮಾಹಿತಿ ಕಲಿತುಕೊಳ್ಳುತ್ತಾರೆ. ಅವರಿಗೆ ಅದು ತರಭೇತಿ ಕಾಲ.  
ಅವರ ಕಲಿಕೆ ಆರಂಭವಾಯ್ತು. 
ಇಲ್ಲಿ ಯಾವ ಯಾವ ರಾಸಾಯನಿಕ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ..?
ಪ್ರಶ್ನೆ ಕೇಳಿದ್ದು ನಾಲ್ಕನೆಯ ವಿದ್ಯಾರ್ಥಿ.
*******  
ಅದು ಮುಖ್ಯಸ್ಥರ ಕೊಠಡಿ ಅಂತ ಯಾರು ಬೇಕಾದರೂ ಹೇಳಬಹುದು. ಅಲ್ಲಿನ ಅಲಂಕಾರ ಹಾಗಿತ್ತು. ಹೊರಗಡೆ ಒಂದು ಫಲಕದಲ್ಲಿ ಕೊರೆದ ಅಕ್ಷರವಿತ್ತು.
ಖಾನ್
ಸಿಸೀ ಟೀವಿಯ ಸುಮಾರು ೨೪ ಬೇರೆ ಬೇರೆ ಪರದೆಯನ್ನು ವೀಕ್ಷಿಸುತ್ತಿದ್ದನಾತ ಕೂಲಂಕುಶವಾಗಿ.
ಒಳಗೊಳಗೇ ಸಂಶಯ ಎಡತಾಕಿತು ಖಾನ್ ಮನದಲ್ಲಿ.
ಎರಡನೇ ವರ್ಷದ ಇಂಜಿನೀಯರಿಂಗ್ ವಿಧ್ಯಾರ್ಥಿ ಇಷ್ಟು ಕಲಿತಿರ್ತಾನಾ..? ಕೇಳುತ್ತಿರುವವನ ಪ್ರಶ್ನೆಗಳು ಇಷ್ಟು ಪ್ರೌಢ..!!!
ಪರದೆಯನ್ನು ಮತ್ತಷ್ಟು ಹಿಗ್ಗಿಸಿದ….
ಆಗಲೇ ನೆನಪಾಗಿತ್ತು ಖಾನ್ ಗೆ
ಹಿಂದಿನ ದಿನವೇ ನಡೆದ ಘಟನೆಯದು..
ಅಂದರೆ ಈತನೇ ಈತನೇ ನಮ್ಮ ಆಟೋ ನಂಬರ್ ಹೊತ್ತ ಗಾಡಿಯ ವಿವರ ಕೂಡಾ ಈತನಲ್ಲಿದೆ…
……………..
ಆಗ ವಿಕ್ರಮ್ ಕೇಳುತ್ತಿದ್ದ ಕಫೀಲ್ ನನ್ನು,,,,
ಇಲ್ಲಿ ಯಾವ ಯಾವ ರಾಸಾಯನಿಕ ವಸ್ತುಗಳು ತ್ಯಜಿಸಲ್ಪಡುತ್ತವೆ..?
ಇನ್ನೊಮ್ಮೆ ಸಂಶಯ ಬಲಿಯಿತು….ಖಾನ್ ಮನದಲ್ಲ್ಲಿ.
ಇವನಿಗೆ ಯಾಕೆ ಇವೆಲ್ಲಾ..? ತಾವೇನು ಯಾರೂ ಮಾಡದೇ ಇದ್ದುದನ್ನು ಮಾಡುತ್ತಾ ಇಲ್ಲವಲ್ಲ,
ಅವರಿಬ್ಬರ ಮುಂದಿನ ಮಾತುಕತೆಯಲ್ಲಿ ಆಸಕ್ತಿ ಬಲಿಯಿತು…
ಏನೋ ಇದೆ……
ಇನ್ನು ತಡೆಯಲಾರದೇ ಖಾನ್ ಕುಳಿತಲ್ಲಿಂದ ಎದ್ದ.
ಆತನ ಮುಖ ವ್ಯಘ್ರವಾಗಿತ್ತು. ಮುಖ ನೋಡಿಯೇ ಯಾರನ್ನಾದರೂ ಅಳೆಯುವ ಚಾಣಾಕ್ಷ ಆತ.
ವಿದ್ಯಾರ್ಥಿಯಾಗಿ ತರಭೇತಿಗೆ ಬಂದವ ಕೇಳುವ ಪ್ರಶ್ನೆಯಲ್ಲ , ಅನುಭವೀ ಸಂಶೋಧಕನ ಕೃಷಿಯ ಆಳದಿಂದ ಬಂದವುಗಳ ಹಾಗೆ…
ಇನ್ನೂ ಆಳವಾಗಿ ತಾನೂ ಅವನನ್ನು ಅರಿಯಬೇಕಾಗಿದೆ. ಅವನ ಮುಖ್ಯ ಉದ್ದೇಶ ಏನಿರಬಹುದು..? ಅದ್ರ ಆಳ, ಅವನ ಹಿಂದೆ ಯಾರಿದ್ದಾರೆ? ಯಾರಿಗೆ ಬೇಕಿದೆ ನಮ್ಮ ಇಲ್ಲಿನ ಮಾಹಿತಿ..?
ಕಾದ ಖಾನ್.
ಉತ್ತರ ಸನಿಹದಲ್ಲೇ ಇತ್ತು…
ಯಾಕೆಂದರೆ ಈತ ನಿರ್ವಾಹಕನ ಕಣ್ಣು ತಪ್ಪಿಸಿ ಫೋಟೋ ತೆಗೆದ…
ನಂತರ ಅಲ್ಲಿನ ಮಣ್ಣಿನ ಸ್ಯಾಂಪಲ್, ತ್ಯಾಜ್ಯ ದ್ರವದ ಸ್ಯಾಂಪಲ್ ಕೂಡಾ ತೆಗೆದುಕೊಳ್ಳುವುದನ್ನು ನೋಡಿದ ನಾಗ್ ಗೆ ಅವನ ಸಂಶೋದಕ ಬುದ್ದಿಯ ಜಾಡು ಸಿಕ್ಕಿತು
ಮಧ್ಯೆ ನಗುವೂ ಬಂತು. ಈತ ಇವನ್ನೆಲ್ಲಾ ಹೊರಗೆ ಹೇಗೆ ಕೊಂಡೋಯ್ದಾನು?
ಉಡದ ಹಿಡಿತ, ಗಿಡುಗನ ದೃಷ್ಟಿ, ನರಿ ಬುದ್ದಿಯ ಸಮ್ಮಿಳಿತವೇ ಖಾನ್.
ಈ ಕೇಸಿನಿಂದಲೇ ಈತ ಕಾರಿಯಪ್ಪನ ಬಲಗೈ ಬಂಟನಾದದ್ದು.
ರಾಸಾಯನಿಕ ತ್ಯಾಜ್ಯ ಸಂಗೃಹಿಸೋ ಹೌದಿಯ ಪಕ್ಕದ ಮಣ್ಣನ್ನು ಕದಿಯುತ್ತಿದ್ದವನನ್ನು ಮಾಲು ಸಮೇತ ಹಿಡಿಯಲು ಖುಷಿಯಲ್ಲಿ ಹೊರಟಿದ್ದ.
ಆಗಲೇ ವಾಸನೆ ಬಡಿಯಿತು ವಿಕ್ರಮ್ ಗೆ
ಆತನ ಆರನೆಯ ಇಂದ್ರಿಯ ಎಚ್ಚರಿಸಿತು ಆತನನ್ನು.
ಒಂದೇ ಕ್ಷಣ
ಅತ್ತಿತ್ತ ನೋಡುತ್ತಲೇ ಪರೀಕ್ಷಿಸಿದ. ಪಕ್ಕದಲ್ಲಿ ಮರಗಳ ಗುಂಪು, ತನ್ನ ಮೊಬಾಯಿಲ್ ಮತ್ತು ಕ್ಯಾರಿಯರ್ ಅತ್ತ ಬಿಸುಟ. ಅದೂ ಕಂಪೌಂಡ್ ಆಚೆಗಂತ ಬಿಸುಡಿದ್ದು ಕೊಂಬೆ ತಗುಲಿ ಈ ಕಡೆಯೇ ಬಿತ್ತು. ಕೆಲಸ ಕೆಟ್ಟಿತು ಎಂದುಕೊಂಡ.
ಏನು ಮಾಡುತ್ತಿದ್ದೀರಿ ಇಲ್ಲಿ..
ಗೊಗ್ಗರು ದನಿಯ ಮುಖ ದಲ್ಲೆಲ್ಲಾ ಸಿಡುಬಿನ ಕಲೆ…
ಆತನನ್ನು ನೋಡಿ ಅಂತಾ ವಿಕ್ರಮ್ ನ ತಲೆ ಯಾಕೋ ಜುಮ್ ಅಂತು.
……..
ಬೆನಿಫಿಟ್ ಆಫ್ ಡೌಟ್
ತನ್ನ ಬಳಿ ಸಂಶಯಿಸಲು ಏನಿದೆ..?

*****

೫. ನಡುಕ
ಎಂತಹಾ ಧೈರ್ಯವಂತನೂ ಒಮ್ಮೆ ಗಡ ಗಡ ನಡುಗಿ ಬಿಡಬೇಕು ….ಅದೂ ಸಡನ್ನಾಗಿ ಹಾಗಿನ ಹೆಣ ನೋಡಿದರೆ..?
ನೀರು ಕುಡಿದು ಹೊಟ್ಟೆ ಉಬ್ಬಿತ್ತು… ಮೈ ಕೈ ಎಲ್ಲಾ ಕೊಳೆಯುತ್ತಿರೋ ರೀತಿಯಿದೆ.. ಮುಟ್ಟಿದರೆ ಹೀಗೆ ಮೇಣದ ಮನುಷ್ಯಾಕ್ರತಿ ತರಾ ಅಲ್ಲಲ್ಲ ಬೆರಳಿಗೇ ಅಂಟಿಕೊಳ್ಳೋ ತರ.. ಅಬ್ಬಬ್ಬಾ ತಾನು ವಾಂತಿಯೇ ಮಾಡಿ ಬಿಟ್ಟಿದ್ದೆ. ಗುರುತು ಸಿಗುವ ತರ ಇಲ್ಲವೇ ಇಲ್ಲ.
ಆ ದಿನ ಸಂಜೆಯಾಗಿ ಬಿಟ್ಟಿತ್ತು ರಾತ್ರೆಯ ಕತ್ತಲಿಗೆ ಜಾರುತ್ತಲಿರುವಂತೆ.
ಸಂಜೆಯವರೆಗೆ ಬಂದು ಹೋದವರ ಯಾದಿ ತಯಾರಿಸುತ್ತಲಿದ್ದ ತಾನು ಅದರಲ್ಲೊಂದು ಹೆಸರಿನ ಇದಿರಿಗೆ ಒಳ ಬರೋ ಸಮಯ ಬರೆದಿದೆ ಒಳಗಿಂದ ಹೊರ ಹೋದ ಸಮಯ ಬರೆದಿರಲಿಲ್ಲ.
ಅಂದರೆ ಅತ ಒಳಗೇ ಇದ್ದಾನೆ? ಆದರೆ ವಿಸಿಟರ್ ಪಟ್ಟಿಯಲ್ಲಿ ತಾತ್ಕಾಲಿಕ ಒಳಬರುವವರ ಯಾದಿಯಲ್ಲಿ ಅತನ ಹೆಸರಿದೆ ಅಂದರೆ ಅತ ಹೊರ ಹೋಗಲೇ ಬೇಕಿತ್ತಲ್ಲ.
ಅದನ್ನೇ ಖಾನ್ ಬಳಿ ಕೇಳಿದರೆ ನೀನೇ ಔಟ್ ಮಾಡಿ ಬಿಡು ಅಂದಿದ್ದ, ಹಾಗೇ ಮಾಡಿದ್ದೆ ಕೂಡಾ.
ಮಾರನೆಯ ದಿನ ಬೀಟಿಗೆ ಹೋದಾಗ ಕಂಡಿತ್ತು ಮರಗಳ ಗುಂಪಿನ ಮಧ್ಯೆ ಈ ಹೆಣ…
ಮತ್ತೊಮ್ಮೆ ನೋಡಿದ ಆ ತಾನು ಔಟ್ ಮಾಡಿದ್ದ ಮನುಷ್ಯನ ಹೆಸರು ಮತ್ತು ವಿಳಾಸ ಅವನ ಕಂಪ್ಯೂಟರ್ ನಲ್ಲಿ
ವಿಕ್ರಮ್!!!
ನೆನಪಾಯ್ತು… ತುಂಬಾ ಸುಂದರ ಯುವಕ, ಆತ ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗಿರಲಿಲ್ಲ ತನಗೆ.
ಆತ ನಮ್ಮ ತ್ಯಾಜ್ಯ ಮತ್ತು ತ್ಯಾಜ್ಯಗಳನ್ನು ಸಂಸ್ಕರಣ ಮಾಡೋ ಯಂತ್ರದ ಬಗ್ಗೆ ಅವುಗಳನ್ನು ವಿಲೇವಾರಿ ಮಾಡೋ ಬಗ್ಗೆಯೂ ಕೇಳುತ್ತಲಿದ್ದ.
ಯಂತ್ರ ಹಾಳಾಗಿ ರಿಪೇರಿಗೆ ಬಂದಿದೆ ಅಂದರೂ ಇದನ್ನ ಹಾಗೇ ಯಾಕೆ ಎಲ್ಲಿಗೆ ಕಳುಹಿಸುತ್ತೀರಾ ಅಂತ ಕೇಳಿದ್ದ..
ಅದರಲ್ಲಿ ಅಂತಹ ತಪ್ಪೂ ಇದ್ದಿರಲಿಲ್ಲ. ಸರಕಾರೀ ಕಾನೂನೇ ಹಾಗಿದೆಯಲ್ಲ.
   

******

ಆರಂಭ 
   
ಹದಿನೈದಿಪ್ಪತ್ತು ಜನ ಹಿಡಿಸುವ ಅಷ್ಟು ದೊಡ್ಡ ಜಾಗದಲ್ಲಿನ ಮೇಜು. ನೆಲಕ್ಕೆ ಹಾಸಿದ ತಿವಾಸಿ ಕಾಶ್ಮೀರದ್ದು. ಕಿಟಿಕಿಗೆ ಹಾಕಿದ ಪರದೆ, ಮೇಜು ಎಲ್ಲವೂ ವೈಭವೋಪೇತ.  
ಅಂತ ರೂಮಿನಲ್ಲಿ ಅವರಿಬ್ಬರೇ ಇದ್ದರು.  
ಎಲ್ಲಿಯಾದರೂ ಒಂದು ಕಡೆಯಿಂದ ಆರಂಭವಾಗಲೇ ಬೇಕಲ್ಲ ಸರ್ ಇದು.  
ಹೌದು ಆದರೆ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ ಮಂಡಳಿ ಔದ್ಯೋಗಿಕ ಕ್ಷೇತ್ರದ ಕೆಲಸ ಎಂತಲೂ ಔದ್ಯೋಗಿಕ ಕ್ಷೇತ್ರದವರು ಸರಕಾರದ ಕೆಲಸ ಎಂತಲೂ ಕೆಸರೆರಚಾಟ ಆರಂಭಿಸಿ ನಾಲ್ಕೈದು ವರ್ಷವೇ ಕಳೆದಿದೆ. ಆದರೆ ಪರಿಸರ ಮಾಲಿನ್ಯ ಕಳೆದ ಮೂರು ವರ್ಷಗಳಿಂದ ಇನ್ನಿಲ್ಲದಷ್ಟು ಹೆಚ್ಚಾಗಿದೆ. ಗಾಳಿ ನೆಲ ಜಲ ಎಲ್ಲವೂ ಕಲುಷಿತವಾಗಿವೆ.  
ಅಂದರೆ ಇವೆಲ್ಲಾ ಅಪಾಯದ ಮಟ್ಟದಿಂದ ತುಂಬಾ ಜಾಸ್ತಿಯಾಗಿವೆ ಸರ್. ನಿಮಗೆ ಈಗಾಗಲೇ ಅಂಕಿ ಅಂಶ ಸಿಕ್ಕಿರಬಹುದು ಸರ್. ಆದರೂ ಪುನಃ ತಿಳಿಸ್ತಾ ಇದ್ದೇನೆ ಸರ್.. ನಮ್ಮ ಸಾರ್ಕಾ ಬಡಾವಣೆ ಒಂದನ್ನೇ ತೆಗೆದುಕೊಳ್ಳಿ ಸರ್. ಇಲ್ಲಿ ಸುಮಾರು ಇಪ್ಪತ್ತು ಇಪ್ಪತೈದು ಸಾವಿರ ಕೈಗಾರಿಕೆ ಗಳಿವೆ. ದಿನಕ್ಕೆ ಇಲ್ಲಾ ಅಂದರೂ ೩೦ ಸಾವಿರ ಕಿಲೋ ಲೀಟರ್ ರಾಸಾಯನಿಕ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಸಾರ್. ಸರಕಾರೀ ನಿಯಮಗಳಿಗನುಸಾರವಾಗಿ ತ್ಯಾಜ್ಯ ಸಂಸ್ಕರಣ ಘಟಕ ವನ್ನು ನಿರ್ಮಿಸಿಕೊಳ್ಳಲೇ ಬೇಕು ಆದರೆ ಕೆಲವರು ನಿರ್ಮಿಸಿಕೊಂಡಿದ್ದರೂ ಅದು ಸಮರ್ಪಕವಾಗಿ ನಡೆಯುತ್ತಿಲ್ಲ , ಬದಲು ಸಂಸ್ಕರಿಸದ ತ್ಯಾಜ್ಯ ನೀರನ್ನು ಕಾಲುವೆಯಲ್ಲಿ ಹರಿಯ ಬಿಡುತ್ತಾರೆ. ಇದರಿಂದಾಗಿ ಕೆರೆಗಳು ಕಾಲುವೆ ಸಂಪೂರ್ಣವಾಗಿ ಮಲಿನಗೊಂಡಿವೆ. ಎಲ್ಲಾ ರೆಡ್ ಕೆಟಗರಿಯ ಎಲೆಕ್ಟ್ರೋಪ್ಲೇಟಿಂಗ್, ಪೌಡರ್ ಕೋಟಿಂಗ್, ಆಯಿಲ್ ರಿಫಾಯಿನಿಂಗ್,ಅನೋಡೈಸಿಂಗ್,ಪಿಕ್ಲಿಂಗ್ ಫಾಸ್ಪೇಟಿಂಗ್… ಮುಂತಾದ ಖಾರ್ಖಾನೆಗಳು ಅತ್ಯಂತ ವಿಷಕಾರೀ ಎನಿಸಿವೆ. ಇದರಿಂದಾಗಿ ಅಕ್ಕ ಪಕ್ಕದ ಕೊಳವೆ ಬಾವಿ ನೀರಿನಲ್ಲಿ ಮನುಷ್ಯರನ್ನು ಮತ್ತು ಪ್ರಾಣಿ ಪಕ್ಷಿಗಳನ್ನು ಕೊಲ್ಲುವಂತಹ ಸಲ್ಫೇಟ್, ಫ್ಲೋರೈಡ್, ಸೈಯನೈಡ್, ಸೀಸ, ತಾಮ್ರ, ಸತು,ಮಾಂಗನೀಸ್, ಕಬ್ಬಿಣ, ಕ್ಯಾಡ್ಮಿಯಮ್, ನ್ನೈಟ್ರೇಟ್, ಮತ್ತಿತರ ವಿಷಕಾರೀ ರಾಸಾಯನಿಕಗಳು ಪತ್ತೆಯಾಗಿವೆ.  
ಅಲ್ಲದೇ ಈ ಕ್ರೋಮ್ ನ ವಿಷಾನಿಲ ಎಷ್ಟು ಅಪಾಯಕಾರಿಯೆಂದರೆ ಕಟ್ಟೋಣದ ಸರಳುಗಳನ್ನೇ ತುಕ್ಕು ಹಿಡಿಸಿ ಕಟ್ಟಡವನ್ನೇ ಬೀಳೀಸುವಷ್ಟು. 
ಕೇ ಪೀ ಕಂಪೆನಿಯ ಕಟ್ಟೋಣದ ದ ವಿಷಯವನ್ನೇ ತೆಗೆದುಕೊಳ್ಳಿ. ಅದರಲ್ಲಂತೂ ಎಷ್ಟು ಅಮಾಯಕರು ಜೀವ ತೆತ್ತರು. 
ಅದಕ್ಕೇ ಕಾರಣ ಸನಿಹದ ಕ್ರೋಮಿಯಮ್ ಪ್ಲೇಟಿಂಗ್ ಫ್ಯಾಕ್ಟರಿ ಯಿಂದಾದ ತ್ಯಾಜ್ಯ ಎಂದು ಗೊತ್ತಿದ್ದರೂ ಸಾಬೀತು ಮಾಡಲಾಗದೇ ಈ ಪ್ರಭಾವೀ ಎದುರು ಸೋತು ಹೋದರು. 
ಅಂದೋಲನೆ ಆರಂಭ ಮಾಡಿದರೆ.?  
ಕಳೆದ ವರ್ಷ ರಾಜೇಶ್ ಮಾಸ್ತರರು ಮೆಡಿ ಕಂಪೆನಿಯ ಬಗ್ಗೆ ಅಧ್ಯಯನ ಮಾಡಿ ಬರೆದ ವಿವರವಾದ ಲೇಖನ ಎಷ್ಟು ಜನರ ಕಣ್ಣು ತೆರೆಸಿತ್ತು . ಮೀಡಿಯಾಗಳೂ ಚಾನೆಲ್ ನವರೂ ಹೈಪ್ ಏನೋ ಕ್ರಿಯೇಟ್ ಮಾಡಿದರು ಆದರೆ ಅದೆಷ್ಟು ದಿನ. ಯಾವುದೋ ಒಬ್ಬ ಔದ್ಯೋಗಿಕ ಕ್ಷೇತ್ರದ ಪ್ರಭಾವೀ ಮೇಲಿಂದ ಒತ್ತಡ ತಂದು ಅದನ್ನೆಲ್ಲಾ ಫಲಿತಾಂಶ ಹೀನವನ್ನಾಗಿ ಮಾಡಿ ಬಿಟ್ಟಿದ್ದ. ಸಾಮಾನ್ಯರು ಪಾಪ ಅಷ್ಟು ಪ್ರಭಾವ ಶಾಲಿ ಶಕ್ತಿಯ ಇದಿರು ಸುಮ್ಮನಾಗಿ ಬಿಡುತ್ತಾರೆ. ಸಕಾರಾತ್ಮಕ ಪ್ರಚೋದನೆ, ಉತ್ತೇಜನೆ ಸಿಗಬೇಕಾದ ಇಂತಹ ಪ್ರಯತ್ನಗಳೂ ಮೂಲೆಗುಂಪಾಗುತ್ತವೆ.  
ಒಂದಲ್ಲ ಒಂದು ದಿನ ಬಂದೀತು ಸಾಮಾನ್ಯರ , ಉದ್ಯಮಿಗಳ ಕಣ್ಣು ತೆರೆಸೀತು..  
ಆ ಸಮಯ ಯಾವಾಗ ಬಂದೀತು ಸರ್, ಅಷ್ಟರಲ್ಲಿ ಎಷ್ಟು ಬಡವರ ಎಷ್ಟು ಕೈಲಾಗದವರ ಪ್ರಾಣ ಹಾನಿ ಯಾದೀತೇನೋ..?? ಅಲ್ಲಿಯವರೆಗೆ ಕೈಲಾಗದವರಂತೆ ಕುಳಿತುಕೊಂಡಿರಬೇಕೆ..?  
ಹಾಗಾದರೆ ನಿನ್ನ ಅಭಿಪ್ರಾಯವೇನು..? ನಾವು ಏನು ಮಾಡಬೇಕು..?  
ಸರಿಯಾದ ಪುರಾವೆ. ಮಾಹಿತಿ ಸಿಕ್ಕರೆ ನ್ಯಾಯಾಲಯ ಕೂಡಾ ಒಂದು ಕೈ ನೋಡಿಕೊಳ್ಳಬಹುದೇನೋ ಅಲ್ಲವೇ ಸರ್.. ಈ ಕ್ಷೇತ್ರದಲ್ಲಿ ಸಮಾಜಕ್ಕೆ, ಪರಿಸರಕ್ಕೆ ಅನ್ಯಾಯ ಮಾಡುವವರ ವಿರುದ್ದ ಟೊಂಕ ಕಟ್ಟಿದರೆ..?  
ಯಾವ ಮಾಹಿತಿ ಯಾರು ತರ್ತಾರೆ..?
ನಾನು ತರ್ತೇನೆ ಸಾರ್. ಮಾಹಿತಿ..  
ಆದರೆ ಅಗ್ನಿ ಇದು ಸಾಮಾನ್ಯ ಕೆಲಸವಲ್ಲ.. ನಿನ್ನೆದುರು ಇರೋದು ಎಂತಹ ಜನರೆಂಬುದು ಗೊತ್ತು ತಾನೇ..? 
ಅದು ಗೊತ್ತು ಸಾರ್ ನನಗೆ ಹೆಚ್ಚೆಂದರೆ ಇದರಲ್ಲಿ ನನ್ನ ಪ್ರಾಣ ಹೋಗ ಬಹುದು ಅಷ್ಟೇ ತಾನೇ ಗೆದ್ದರೆ ಇಷ್ಟಾದರೂ ಸಮಾಜ ಸೇವೆ ಮಾಡಿದೆನೆಂಬ ಖುಷಿ ಹೆಮ್ಮೆ ಇರತ್ತೆ ಸರ್ ನಂಗೆ.. ರಾಜೇಶ್ ಮಾಸ್ತ್ರ ಮಗನೆಂಬ ಹೆಮ್ಮೆಯಾದರೂ ಉಳಿಯಲಿ ಸಾರ್.  
ಸರಿ ನಿಮಗೆ ಇದಕ್ಕೆ ಬೇಕಾದ ಎಲ್ಲಾ ಸಹಾಯ ಸರಕಾರದಿಂದ ಕೊಡಿಸೋ ಜವಾಬ್ದಾರಿ ನನ್ನದು…  
ಅಗ್ನಿ ಹೊರ ಹೊರಟ ಕೂಡಲೆ ಹೊರಗೆ ಇದನ್ನೆಲ್ಲಾ ಕೇಳಿಸಿ ಕೊಂಡಿದ್ದ ಗುಮಾಸ್ತ ಪಕ್ಕದಲ್ಲಿನ ಕರೆವಾಣಿ ಎತ್ತಿದ.  
………………….
ಏನೂ 
ಅಗ್ನಿ ರಾಜೇಶ್ ಮಾಸ್ತ್ರರ ಮಗನೇ..?
ಬರಲಿ ಅದೇನು ಕಿಸಿಯುತ್ತಾನೋ ನಾನೂ ನೋಡುತ್ತೇನೆ.
ಖಾನ್ ಕಿರುಚಿದ್ದ.
ಸಿಟ್ಟು ಬಂದರೆ ಆತನು ಮನುಷ್ಯನಲ್ಲ.   
 
೬.  ಘಾತ  
   
ಆ ದಿನ ರಜೆಯಿತ್ತು.  
ಬೆಳಗಿನ ವ್ಯಾಯಾಮ ಮುಗಿಸಿ ಪತ್ರಿಕೆ ಕೈಗೆತ್ತಿಕೊಂಡ .  
ನಾಲ್ಕನೆಯ ಪುಟದಲ್ಲಿ ಜೀರ್ಣಿಸಿಕೊಳ್ಳಲಾಗದಂತ ಆಘಾತಕಾರೀ ಸುದ್ದಿ.  
ರಾಜೇಶ್ ಸರ್… ಇನ್ನಿಲ್ಲ.!!!  
ಅಗ್ನಿ ಬೆಳೆದದ್ದೇ ಅವರ ಮನೆಯಲ್ಲಿ. ಮಕ್ಕಳಿಲ್ಲದ ಅವರು ಅವನನ್ನು ತನ್ನ ಸ್ವಂತ ಮಗನಿಗಿಂತಲೂ ಕಕ್ಕುಲತೆಯಿಂದ ಬೆಳೆಸಿದ್ದರು.  
ಜೀವನದ ಸತ್ಯವನ್ನು ಅರಗಿಸಿ ಕೊಂಡಿದ್ದ ಅವರು ತಮ್ಮ ಪ್ರತಿಯೊಂದೂ ಅನುಭವವನ್ನು ಅಗ್ನಿ ಗೆ ಕುಡಿಸಿ ಅರಗಿಸಿದ್ದರು.  
ಸತ್ಯವೇ ತಂದೆ ಸಚ್ಚರಿತೆ ನಡೆಯೇ ತಾಯಿ ಅವರಿಗೆ ಅಧ್ಯಾಪಕ ವೃತ್ತಿಯನ್ನು ಪರಮೋಚ್ಚ ಧ್ಯೇಯ ವೆಂದು ಭಾವಿಸಿ ಅದರಂತೆ ನಡೆಯುತ್ತಿದ್ದವರು ಅವರು.  
ಅದರೆ ಇಷ್ಟು ಬೇಗ ಸಾಯಲು ಅವರಿಗೇನಾಗಿತ್ತು..?  
  
ಕೂಡಲೇ ಕಾರ್ಯ ತತ್ಪರನಾದ ಅಗ್ನಿ 
ಊರಿಗೆ ಹೊರಟ. 
ಅಲ್ಲಿಯಂತೂ ಇನ್ನೂ ಆಘಾತಕಾರೀ ವಿಷಯ ತಿಳಿಯಿತು.  
ಶಾಲೆಯ ಮಕ್ಕಳ ಮಧ್ಯಾಹ್ನದ ಆಹಾರದಲ್ಲಿ ವಿಷ ಬೆರೆತಿದ್ದು ಮಕ್ಕಳೆಲ್ಲರೂ ಆಸ್ಪತ್ರೆ ಸೇರಿದ್ದಾರೆ…  
ಅದು ಹೇಗೆ ..? ಮಕ್ಕಳಲ್ಲೂ ದೇವರನ್ನೇ ಕಾಣುವ ರಾಜೇಶ್ ಮಾಸ್ತರರು. 
ಅವರದ್ದೇ ಮೇಲ್ವಿಚಾರಣೆಯ ಮಧ್ಯಾಹ್ನದೂಟದ ಶುಚಿ ರುಚಿ ಗುಣ ಮಟ್ಟದಿಂದಾಗಿ ಆ ಸರಕಾರೀ ಶಾಲೆಯ ಮಕ್ಕಳು ಮನೆಯಿಂದ ಊಟ ತರುವುದನ್ನೇ ಬಿಟ್ಟಿದ್ದರು.  
ಹಾಗಿರುವಾಗ..?  
ಎಲ್ಲಿ ಏನಾಯ್ತು ಅಂತ ಗೊತ್ತಾಗ್ತಾ ಇಲ್ಲ ಸಾರ್ ಪಾಪ ರಾಜೇಶ್ ಸರ್ ತುಂಬಾ ಒಳ್ಳೆಯವರು  
ಎಂದಿದ್ದ ವಾಚ್ ಮೆನ್  
ಅವರಿಗೆ ಯಾರೂ ವೈರಿಗಳೇ ಇರಲಿಲ್ಲ ಸರ್, ಊಟದಲ್ಲಿ ವಿಷ ಬೆರೆತಿರಲಿಲ್ಲ ಸರ್, ಆದರೂ ಪೋಲೀಸರು ಅವರನ್ನು ಹಿಡಿದುಕೊಂಡು ಹೋದರು  
ಅದು ಹೇಗೆ ಹೇಳುತ್ತಿಯಪ್ಪಾ, ಮಕ್ಕಳನ್ನು ಪರೀಕ್ಷಿಸಿದ ವೈದ್ಯರೇ ಹೇಳಿದ್ದರಲ್ಲ..?  
ಯಾಕೆಂದರೆ ಸಾರ್ ಹನ್ನೆರಡೂವರೆಗೆ ಶುರುವಾದ ಮೊದಲ ಪಂಕ್ತಿಯ ೩೫೦ ಮಕ್ಕಳಿಗೇನಾಗಿರಲಿಲ್ಲವಲ್ಲ..  
ಆಗಲೇ ಗೊತ್ತಾಗಿದ್ದು ಮೊದಲ ಪಂಕ್ತಿಯ ಮಕ್ಕಳು ತಿಂದ ಆಹಾರದಲ್ಲಿ ವಿಷ ಬೆರೆತಿರಲಿಲ್ಲ.  
ಈ ವಿಷಯ ಹೊಸತು ಅಗ್ನಿ ಗೆ  
ಮತ್ತೆ…. ಅದು ಹೇಗೆ?  
ವೇಗವಾಗಿ ಯೋಚಿಸಿತು ಮನಸ್ಸು..  
ಅಂದರೆ ಮಕ್ಕಳ ಬಟ್ಟಲಿನಲ್ಲಿ..? ಮೊದಲ ಮಕ್ಕಳು ತಿಂದ ಬಟ್ಟಲನ್ನು ತೊಳೆದ ನಂತರ..  
ಬಟ್ಟಲೆಲ್ಲಿ ತೊಳೆದರು..?  
ಅವತ್ತು ನೀರಿರಲಿಲ್ಲ ಸರ್, ಟ್ಯಾಂಕರ್ ಕರೆಸಿದ್ದೆವು…  
ಯಾವ ಟ್ಯಾಂಕರ್, ಕಂಪೆನಿಯಾ ಟ್ರಾನ್ಸ್ ಪೋರ್ಟರ್ ನಂಬರ್ ಇದೆಯಾ..?  
ಇಲ್ಲ ಸಾರ್ ನಂಬರ್ ಅದರ ಹೆಸರು ನೆನಪಿಲ್ಲ, ಆದರೆ…  
ನೆನಪಾಯ್ತು, ಗೇಟಲ್ಲಿ ಎಂಟ್ರಿ ಮಾಡ್ಕೋತಾರೆ ಅಲ್ಲವಾ..? ಹಾಗಾದರೆ ಆ ಇನ್ವರ್ಡ್ ರಿಜಿಸ್ಟರ್ನಲ್ಲಿ ಗಾಡಿ ನಂಬರ್…  
ಸಿಕ್ಕಿತು ಗಾಡಿ ನಂಬರ್.. KA 04 MG 6030  
ಕೂಡಲೇ ಆತನ ಸ್ನೇಹಿತನಿಗೆ ಕರೆ ಮಾಡಿ ಈ ಗಾಡಿಗೆ ಸಂಭಂಧ ಪಟ್ಟ ಎಲ್ಲಾ ವಿಷಯ ತಿಳಿಸಲು ಕೋರಿದ.  
ಆದರೆ ಆ ಹೆಸರಿನ ರಿಜಿಸ್ಟ್ರೇಶನ್ ನಂಬರ್ ಇಲ್ಲವೇ ಇಲ್ಲ…  
ಹಾಗಾದರೆ…..  
ಸಿ ಸಿ ಟೀವಿ ಯಲ್ಲಿ…. ಟ್ರಾಫಿಕ್ …ಸಿಗ್ನಲ್….   

********  

ಇನ್ನೊಮ್ಮೆ ಅಗ್ನಿ ಅವರೆದುರಿದ್ದ. ಆತನ ಬಳಿ ಖಾನ್ ಮಾಡುತ್ತಿರೋ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಯಿತ್ತು.
ರಾಜೇಶ್ ಮಾಸ್ತ್ರರನ್ನು ಅಸಹಾಯಕರನ್ನಾಗಿ ಮಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದ ಘಟನೆಯ ಕಾರಣವಿತ್ತು.
ಕಲುಷಿತ ನೀರನ್ನು ಟ್ಯಾಂಕರಿನಲ್ಲಿ ಕಳುಹಿಸಿ ಮಕ್ಕಳ ಬಟ್ಟಲ ಮೂಲಕ ವಿಷ ಸೇವಿಸುವಂತೆ ಮಾಡಿದ ವಿವರವಿತ್ತು..
ಆತ ಉಪಯೋಗಿಸೋ ಟ್ಯಾಂಕರ್ ಕೂಡಾ ಪರವಾನಗಿಯಿಲ್ಲದ್ದಾಗಿತ್ತು.
ಅದಕ್ಕೆ ಹಾಕಿದ್ದ ನಂಬರ ಕೂಡಾ ಪೋಲೀಸ್ ಠಾಣೆಯಲ್ಲಿ ಹಲವಾರು ವರ್ಷಗಳಿಂದ ಕೊಳೆಯಲು ಬಿದ್ದಿದ್ದ ಅಟೋ ನಂಬರ್.
ಇಲ್ಲ ಅಗ್ನಿ 
ನಿನ್ನ ಈ ಯಾವ ಪುರಾವೆಗಳೂ ಇಂತಹ  ಸಮಾಜ ಘಾತುಕರನ್ನು ಏನೂ ಮಾಡಲಾಗದು 
ಅವರ ಮುಖದಲ್ಲಿ ಅಸಹಾಯಕತೆಯಿತ್ತು. 

ನೀನು ಈಗ ಹೊತ್ತು ತಂದ ಪುರಾವೆ ಏನೂ ಅಲ್ಲ. 
ಆ ಅಟೋ ರಿಕ್ಷಾ ನಂಬರ್ ಹೊತ್ತ ಟ್ಯಾಂಕರ್ ಎರಡೇ ನಿಮಿಷದಲ್ಲಿ ತನ್ನದಲ್ಲವೆಂದು ಪುರಾವೆ ಸಹಿತ ಸಾಬೀತು ಮಾಡುತ್ತಾನೆ ಖಾನ್. 
ನಿಯಮಿತವಾಗಿ ಪ್ರತಿಯೊಂದೂ ತ್ಯಾಜ್ಯವನ್ನು ಸಂಸ್ಕರಣ ಮಾಡಿಯೇ ಬಿಡುಗಡೆ ಮಾಡುತ್ತಿರುವೆನೆಂದು ಪುರಾವೆಗಳ ಸಹಿತ ವಾದ ಮಾಡಿಸುತ್ತಾನೆ ಆತ. 
ನಮ್ಮ ಸರಕಾರದ ಸಂಸ್ಥೆಯಲ್ಲಿನ ಅಧಿಕಾರಿಗಳೇ ಅವನಿಗೆ ಸಹಾಯ ಮಾಡುತ್ತಾರೆ. ಆತನ ಸಹಾಯವನ್ನು ಸಮಾಜದ ಎಲ್ಲಾ ಸ್ಥರದವರೂ ಪಡೆದುಕೊಳ್ಳುವ ಹಾಗೆ ಒಂದಿಲ್ಲೊಂಡು ಕಾರ್ಯ ಯೋಜನೆ ರೂಪಿಸಿಕೊಳ್ಳುತ್ತಾನೆ. 

ಅಧಿಕಾರದಲ್ಲಿರೋ ನೀವೇ ಹೀಗೆ ಹೇಳುವುದನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತೆ ಸಾರ್..  ಪರಿಸರದ ಸಮಾಜದ ಯಾವ ನೋವೂ ತಮಗೆ ತಾಕದಂತೆ ನಿಮ್ಮದೇ ವೃತ್ತ ಕಟ್ಟಿಕೊಂಡಿದ್ದೀರಾ…ಅಗ್ನಿ ಕಟಕಿಯಾಡಿದ 
ರಾಜೇಶ ಮಾಸ್ತರರೂ ಅವರ ಮಗ ಚಂದ್ರೂ ಸಮಾಜ ಘಾತುಕರಿಗೆ ಬಲಿಯಾದರು.. ಇಂತಹ ಅನೇಕಾನೇಕ ಸಂಸಾರಗಳು ಹಾಳಾಗುತ್ತಿವೆ.   

ನಿಮಗೇನು…ನಿಮ್ಮ ಸಂಸಾರವೊಂದು ಹಾಯಾಗಿದ್ದರೆ ಸಾಕಲ್ಲ ನಿಮಗೆ…

ಅವನ ಮಾತಿನ ಮೊನಚು.. 
ಕೇಳಲಾರದೆ ಮುಖ ತಿರುವಿದರು ಅಜಯ್ . 
ಯಾಕೆ ಸಾರ್. ಕ್ಷಣದಲ್ಲಿ ಅವರೆದುರಿದ್ದ ಅಗ್ನಿ. 
ಅವನ ಆಶ್ಚರ್ಯ ಮೇರೆ ಮೀರಿತು 
ಸಾರ್ ನಿಮ್ಮ ಕಣ್ಣಲ್ಲಿ ನೀರು..? 
ಅಗ್ನಿ.. 
ನನ್ನ ಸಂಸಾರದಲ್ಲಿ ನಾನೊಬ್ಬನೇ ,, 
ಏನು ಸಾರ್ ಹಾಗೆಂದ್ರೆ..? 
ವಿಕ್ರಮ್ ನನ್ನ ಮಗ… 
ಅಗ್ನಿ ಸ್ಥಂಭೀ ಭೂತನಾದ… 
ವಿಕ್ರಂ ಕೂಡಾ ಅಗ್ನಿಯಷ್ಟೇ ಬಿರುಸು.
ಆತನೂ ಹೊರಟಿದ್ದ.. 
ಖಾನ್ ನ ವಿರುದ್ಧ ಕತ್ತಿ ಮಸೆದಿದ್ದ… ಆದರೆ…..
ಆತನ ಹೆಣವೂ ಸಿಕ್ಕಿರಲಿಲ್ಲ.

ಆತನ ನಿರ್ಧಾರ ಬಲಿಯಿತು. 

*****

೭. ಉಪಸಂಹಾರ 
  
ಮಾರನೆಯ ದಿನದ ಮುಖ್ಯ ಪತ್ರಿಕೆಗಳಲ್ಲೆಲ್ಲಾ ಅದೇ ಸುದ್ದಿ. 
ಮೈಕ್ರೋ ಮೆಡಿಲ್ಯಾಬ್ನಲ್ಲಿ ಸ್ಪೋಟ. 
ಅಲ್ಲಿನ ಒಬ್ಬರೂ ಬದುಕುಳಿದಿಲ್ಲ. 
ಆ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಹತ್ತು ಎಕರೆಯ ಆ ಫ್ಯಾಕ್ಟರಿಯಲ್ಲಿನ ಎಲ್ಲವೂ ಎಲ್ಲರೂ ಸುಟ್ಟು ಭಸ್ಮೀಭೂತರಾಗಿದ್ದರು. 
ಪೋಲೀಸರಿಗೆ ಶಂಕಿಸಲೂ ಕೂಡಾ ಆಸ್ಪದವೀಯದಂತೆ ಸೆಕ್ಯುರಿಟಿ ಚೀಫ್ ಎಲ್ಲರೂ ಆ ಬೆಂಕಿಗಾಹುತಿಯಾಗಿದ್ದರು. 

ಈಗಂತೂ ಸಂಸ್ಥೆಗಳಲ್ಲಿ ಎಲ್ಲವೂ ವಿದ್ಯುತ್ ನಿಂದಲೇ ನಡೆಯುತ್ತದೆ, ಗಣಕಯಂತ್ರ, ಸುರಕ್ಷಾ ಪ್ರಬಂಧ,  ಸ್ವಯಂ ಚಾಲಿತ ಯಂತ್ರಗಳು ಹೀಗೆ ಪ್ರತೀ ಒಂದಕ್ಕೂ ಅಪಾರ ಪ್ರಮಾಣದ ವಿದ್ಯುತ್  ಬೇಕೇ ಬೇಕು. ಸರಬರಾಜಾಗುತ್ತಿರೋ ವಿದ್ಯುತ್ ನಲ್ಲಿ ಸ್ವಲ್ಪ ಏರು ಪೇರಾದರೂ ಕಷ್ಟವೇ. ಸರಕಾರದಿಂದ ಸಿಗುತ್ತಿರುವ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಬ್ಯಾಟರಿಗಳನ್ನು ಅಳವಡಿಸಬೇಕು. ಅಪಾರ ಪ್ರಮಾಣದಲ್ಲಿ. ಅದಕ್ಕೆಂದೇ ನಿಗದಿತ ಹವಾ ನಿಯಂತ್ರಿತ ರೂಮುಗಳಿವೆ. 
ವಿದ್ಯುತ್ ಉತ್ಪಾದಿಸೋ ಬ್ಯಾಟರಿಗಳಲ್ಲಿ ಅಪಾರ ಪ್ರಮಾಣದ ದಹ್ಯ ಹಾಗೂ ದಹನ ಕಾರೀ ಅನಿಲಗಳೂ ಬಿಡುಗಡೆಯಾಗುತ್ತಲಿರುತ್ತವೆ. ಅದಕ್ಕೇ ಅಂತಹ ರೂಮಿನಲ್ಲಿ ವಾತಾಯನ ವ್ಯವಸ್ಥೆಯೂ ಪ್ರಮಾಣ ಬದ್ಧವಾಗಿರಬೇಕು.  ಬ್ಯಾಟರಿಗಳ ಓವರ್ ಚಾರ್ಜ್ ನಿಂದಾಗಿ ಕೂಡಾ ಜಲಜನಕ ಮತ್ತು ಆಮ್ಲಜನಕದ ಬಿಡುಗಡೆ ಜಾಸ್ತಿಯಾಗುತ್ತದೆ. ಇದಕ್ಕೆ ಔಟ್ ಗ್ಯಾಸ್ಸಿಂಗ್ ಅನ್ನುತ್ತಾರೆ.ಯಾವುದೇ ಕಾರಣದಿಂದ ವಾತಾಯನ ವ್ಯವಸ್ಥೆ ಸರಿಯಾಗಿಲ್ಲವಾದರೆ ಈ ಅನಿಲಗಳು ಸ್ಪೋಟ ಹೊಂದೋ ಅಪಾಯವಿರುತ್ತದೆ. ಸಣ್ಣ ಅತೀ ಸಣ್ಣ ವಿದ್ಯುತ್ ಕಿಡಿ ಆ ಇಡೀ ಕೋಣೆಯನ್ನು ಸ್ಪೋಟಿಸ ಬಲ್ಲುದು. ಜತೆಗೇ ಇಡೀ ಕಾರ್ಖಾನೆಯನ್ನೂ..
ವಿಚಿತ್ರವೆಂದರೆ ಇಂತಹ ಮುಖ್ಯ ವ್ಯವಸ್ಥೆಗಳ ನಿಯಂತ್ರಣವೂ ಗಣಕ ಯಂತ್ರದಿಂದಲೇ ಆಗುತ್ತಿರುತ್ತದೆ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ.  
ಯಂತ್ರಗಳಿಗೆ ಮಿದುಳಿಲ್ಲ….
ಸ್ಪೋಟಕ್ಕೆ ಬೇಕಾದ ವಾತಾವರಣ ಮತ್ತು ಸನ್ನಿವೇಶ ಯಾವಾಗ ಬೇಕಾದರೂ ಸೃಷ್ಟಿಯಾಗ ಬಹುದು.
ರಿಸ್ಕ್ ಅನ್ನೋದು ತಾಂತ್ರಿಕತೆ ಮುಂದುವರಿದಷ್ಟೂ ಹೆಚ್ಚೇ ಆಗುತ್ತಿರುತ್ತದೆ.
ಅಪಾಯದ ತೀವೃತೆಯೂ…
ಇಲ್ಲಾದದ್ದೂ ಅದೇ….. 

ಪಂಚ ಭೂತಗಳಲ್ಲೊಂದಾದ ಅಗ್ನಿ ಶುದ್ಧ. ಮೈಲಿಗೆಯಿಲ್ಲದ್ದು. 
ಅದರ ಬಳಿ ಬಂದ ಎಲ್ಲವೂ ಶುದ್ಧವೇ ಆಗುತ್ತದೆ. ಅದಕ್ಕೇ ದೇವ ದೇವತೆಗಳಿಗೆ ಸಲ್ಲ ಬೇಕಾದ ಹವಿಸ್ಸು ಆತನ ಮೂಲಕವೇ ವರ್ಗಾಯಿಸಲ್ಪಡುತ್ತದೆ. 
ಪ್ರತಿ ಜೀವಿಯಲ್ಲೂ ಈ ಅಂಶವಿದೆ.
 ಒಂದಲ್ಲಾ ಒಂದು ರೀತಿಯಿಂದ ಅದು ಪ್ರಕಟವಾಗುತ್ತಲೇ ಇರುತ್ತದೆ ಕ್ಲಪ್ತ ಸಮಯದಲ್ಲಿ ಕ್ಲಪ್ತ ರೂಪದಲ್ಲಿ. ಆದರೆ ಅದರ ಫಲಿತಾಂಶ ಮಾತ್ರ …. ಬೇರೆ ಬೇರೆ. 
ಹೃದಯ ದೃವಿಸಿ ಅಂತರಾತ್ಮ ರೋಧಿಸಿ ಹೊರಬಂದ ಆರ್ತನಾದದಲ್ಲೂ ಇದೆ ಅಗ್ನಿ. 
ನೀರಿನಲ್ಲಿ ಗುಪ್ತವಾಗಿ ಅಡಗಿದ ದಾವಾನಲದಂತೆ… 
ಭೂಮಿಯನ್ನು ಸ್ಪೋಟಿಸಿ ಹೊರ ಬರೋ ಜ್ವಾಲಾಮುಖಿಯಂತೆ… 
ಎಷ್ಟು ಆಳವೋ ಅಷ್ಟೇ ಶಕ್ತಿಯುತವಾದದ್ದು… 
ತೀವ್ರತೆ ಬರುವುದು ಕ್ಲಪ್ತ ಸಮಯದಲ್ಲಿ 
ಅದಕ್ಕೂ  ಕಾಯಬೇಕು

****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *