ಪಂಜು-ವಿಶೇಷ

ಅಗಾಧ ಬದುಕು – ನಿಗೂಢ ಸಾವು, ಅಳುವ ಮನಸು…..

ಕಣ್ಣಲ್ಲಿ ಸಾವಿರ ಕನಸುಗಳ ಮತಾಪು…

ಬೆನ್ನಲ್ಲಿ ಈಡೇರಿಸಿಕೊಳ್ಳಲಾಗದ ಅಸಹಾಯಕತೆಯ ನಡುಕ…

 

ಬಣ್ಣ ಬಣ್ಣದ ಕತ್ತಲು…

ಭವಿಷ್ಯವನ್ನು ತೋರಲಾರದ ಬೆಳಕು…

ನಮ್ಮೆಲ್ಲ ಪ್ರಯತ್ನವನ್ನೂ ಮೀರಿ ಒಮ್ಮೆಲೇ ಧುತ್ತನೆ ಎದುರಾಗಿ ಕಾಡುವ ಹತಾಶೆ…

ಮನುಷ್ಯನ್ನು ಸಾವು ಮತ್ತು ಸೋಲುಗಳು ಕಂಗೆಡಿಸಿದಷ್ಟು ಮತ್ಯಾವ ವಿಷಯಗಳೂ ಕಂಗೆಡಿಸಲಾರವೇನೋ. 

ಸಾವನ್ನಾದರೂ ಒಪ್ಪಿಕೊಂಡು ಬಿಡಬಹುದು. 

ಏಕೆಂದರೆ ಅದು ಸಾರ್ವಕಾಲಿಕ ಮತ್ತು ಸರ್ವವಿಧಿತ ಸತ್ಯ. 

ಆದರೆ ಸೋಲುಗಳು – 

ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ವಿಧಗಳಲ್ಲೂ ಹಣ್ಣಾಗಿಸುವ ವಿಚಾರವೆಂದರೆ ಸೋಲುಗಳು. 

ಅವು ಸತತ ಹಾಗೂ ನಿರಂತರವಾಗಿದ್ದರಂತೂ ಆ ವ್ಯಕ್ತಿ ಇದ್ದೂ ಸತ್ತಂತಿರುತ್ತಾನೆ. 

ಅದು ಸೋಲಿನ ತಾಕತ್ತು.

ಮತ್ತೆ ಈ ಕಷ್ಟಗಳೂ ಹಾಗೇ ತುಂಬಾ ಒಗ್ಗಟ್ಟು ಪ್ರದರ್ಶಿಸುತ್ತವೆ.

ಯಾವತ್ತೂ ಅವು ಒಂದರೊಡನೊಂದು ಕೂಡಿಕೊಂಡೇ ಬಂದು ಅಮರಿಕೊಳ್ಳುತ್ತವೆ.

 

ಕೆಲವೇ ಕೆಲವು ಸೋಲುಗಳಿರುತ್ತವೆ ಆನಂದವನ್ನೀಯುವಂಥವು. 

ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯಗಳೆದುರಿನ ಸೋಲುಗಳು. 

ಭಿನ್ನ ಲಿಂಗದ ಪ್ರೇಮಕ್ಕೆ ಸೋತ ವ್ಯಕ್ತಿ  ಆ ಸೋಲಿನಲ್ಲೂ ಆನಂದವನ್ನು ಕಾಣ್ತಾನೆ. 

ಆದ್ರೆ ಯಾವ ಕ್ಷಣದಲ್ಲೇ ಆಗ್ಲಿ ಆ ಪ್ರೇಮ ವಿಫಲವಾದರೆ ಆ ವೈಫಲ್ಯವನ್ನಾತ ತನ್ನ ವ್ಯಕ್ತಿತ್ವದ ಸೋಲು ಅಂದ್ಕೋತಾನೆ. 

ಹಾಗಂದುಕೊಂಡ ವ್ಯಕ್ತಿಯ ಬದುಕು ನರಕ. 

ಕನಿಷ್ಠ ಪಕ್ಷ ಆ ಪ್ರೇಮ ವೈಫಲ್ಯದ ಬಿಸಿಯನ್ನು ಬದುಕು ತಣಿಸುವ ತನಕ.

 

ಸೋಲು ನಮ್ಮನ್ನು ಒಮ್ಮೊಮ್ಮೆ ಹಣಿದು ಹಣ್ಣಾಗಿಸಿ – ಸೋಲಿರುವಲ್ಲೇ ನಾವು ಹೆಜ್ಜೆ ಇಡ್ತೀವೋ ಅಥವಾ ಸೋಲೇ ನಾವು ಹೆಜ್ಜೆ ಇಡುವಲ್ಲೆಲ್ಲ ಬಂದು ಕುಳಿತಿರುತ್ತೋ ಎಂದು ಅರ್ಥವಾಗದಂಥ ಸ್ಥಿತಿಗೆ ತಂದು ನಿಲ್ಲಿಸಿ ಕಂಗೆಡಿಸುವುದು ನಿಜವೇ ಆದರೂ ಯಾವ ಸೋಲೂ ಶಾಶ್ವತವೇನಲ್ಲ. 

ಸೋಲು ನಾವು ಸ್ವೀಕರಿಸಿದಂತೆ – 

ಪತನ ಅಂದುಕೊಂಡರೆ ನಾವು ಜೀವಂತ ಹೆಣ. 

ಗೆಲುವಿನ ದಾರಿಯಲ್ಲಿನ ಹೊಸ ಅನುಭವ ಅಂದುಕೊಂಡರೆ ನಿಧಾನವಾಗಿಯಾದರೂ ನಮ್ಮ ಆಟದ ಅಂಗಳ ಗಗನ. 

ಸೋಲಿನ ಕೈಯಳತೆಯಲ್ಲೇ ಗೆಲುವಿನ ಕಣ್ಣಾಮುಚ್ಚಾಲೆ. 

ಅದನ್ನರಿತುಕೊಂಡು ಸೋಲುಗಳನೆಲ್ಲ ಮಣಿಸಿ ಗೆಲುವಾಗಿಸಿಕೊಂಬ ಸಹನೆ ಮತ್ತು ಛಲ ನಮಗಿರಬೇಕಷ್ಟೇ. 

ಬಾಹ್ಯವಾಗಿ ಎಂಥ ಸೋಲೇ ಎದುರಾದರೂ ಮನಸನ್ನು ಸೋಲಗೊಡದಂತೆ ಎಚ್ಚರವಹಿಸಿ  ಅಲ್ಲಿಂದಲೇ ಹೊಸ ಸ್ಫೂರ್ತಿ ಪಡಕೊಂಡು ಮತ್ತೆ ಯುದ್ಧಕ್ಕೆ ಹೊರಡುವ ತಾಕತ್ತು ಬೆಳೆಸಿಕೊಳ್ಳಬೇಕಷ್ಟೇ. 

ಸೋಲು ತರುವ ನೋವನ್ನು ಬಾಗಿಲಾಚೆಯೆ ನಿಲ್ಲಿಸಿ – ಆ ಪಯಣದುದ್ದಕ್ಕೂ ದಾರಿಯಲ್ಲಿ ಸಿಕ್ಕ ಅನುಭವಜನ್ಯ ಪಾಠವನ್ನಷ್ಟೇ ಒಳಗೆಳೆದುಕೊಳ್ಳುವ ಜಾಣ್ಮೆ ಗಳಿಸಿಕೊಳ್ಳಬೇಕಷ್ಟೇ. 

ಸೋಲುಗಳ ಮರುಭೂಮಿಯ ನಡುವೆ ನಿಂತು ಗೆಲುವುಗಳ ಜಲಪಾತದ ಅಪೇಕ್ಷೆ ಪಡದೇ – ಆ ಮರುಭೂಮಿಯ ಮಧ್ಯೆಯೇ ಅಲ್ಲಲ್ಲಿ ಸಿಗುವ ಹೊಸ ಹೊಸ ಅನುಭವಗಳೆಂಬ ಓಯಸ್ಸಿಸ್ಸಿನಿಂದಲೇ ಮನದಲ್ಲಿ ಭರವಸೆಯ ಖರ್ಜೂರದ ಗಿಡ ನೆಟ್ಟು ಹೊಸ ಕನಸಿಗಾಗಿ ಆತ್ಮಬಲವ ವೃದ್ಧಿಸಿಕೊಳ್ಳಬೇಕಿದೆ.

ಆಗ ಮುಂದಾದರೂ ಗೆಲುವಿನ ನಿತ್ಯಹರಿದ್ವರ್ಣ ದಕ್ಕೀತು.

ಗೆಲುವಿನ ಜಲಪಾತದಡಿಯಲಿ ನಿಂತು ಮೀಯುವ ಕನಸ ಕಣ್ಣಲ್ಲಿಟ್ಟುಕೊಂಡು – ಅದು ಕೈಗೂಡುವವರೆಗೆ ಪುಟ್ಟ ಕಲ್ಯಾಣಿಯಲ್ಲೇ ಮೀಯುತ್ತ – ಮೀನುಗಳೊಂದಿಗೆ ಆಟವಾಡುತ್ತ – ಈ ಕ್ಷಣವನ್ನು ಇದ್ದದ್ದು ಇದ್ದ ಹಾಗೇ ಅನುಭವಿಸ್ತಾ ಖುಷಿಯಾಗಿರಬಲ್ಲೆವಾದರೆ ಅದಕಿಂತ ದೊಡ್ಡ ಮಾನಸಿಕ ಗೆಲುವು ಇನ್ನೇನಿದೆ…

ಒಂದು ಸೋಲು ಹೊಸ ಹತ್ತು ಗೆಲುವುಗಳಿಗೆ ನಾಂದಿ ಹಾಡಬೇಕು.

 

ಬದುಕಿಗಾಗಿ – ಗೆಲುವಿಗಾಗಿ ಹೋರಾಡುವ ಮಾತು ಬಂದಾಗಲೆಲ್ಲ ನಂಗೆ ಜೇಡರ ಹುಳ ನೆನಪಾಗುತ್ತೆ. 

ಆ ಪುಟ್ಟ ಜೇಡರ ಹುಳದ ಪ್ರಯತ್ನಶೀಲತೆ ನನ್ನಲ್ಲಿ ಅಚ್ಚರಿ ಮೂಡಿಸುತ್ತೆ.

ಆಗಷ್ಟೇ ಬಲೆ ಹೆಣೆದು ಮುಗಿಸಿ ಬಲೆಗೆ ಬೀಳುವ ಆಹಾರಕ್ಕಾಗಿ ಕಾಯುತ್ತ ಕೂತರೆ ಅಷ್ಟರಲ್ಲಾಗಲೇ ಯಾರೋ ಶತ್ರು ಆ ಬಲೆಯನ್ನು ತುಂಡರಿಸಿರ್ತಾನೆ.

ಆಗ ಮತ್ತೆ ಓಂಕಾರದಿಂದ ಪ್ರಾರಂಭಿಸಬೇಕು. 

ಅದೂ ಹಸಿದ ಹೊಟ್ಟೆಯಲ್ಲಿ. 

ಆದ್ರೂ ಅದು ಕಂಗೆಡದೇ ಮತ್ತೆ ಮತ್ತೆ ಬಲೆ ನೇಯುತ್ತಲೇ ಇರುವ ಪರಿಯಿದೆಯಲ್ಲ ಅದು ಆ ಚಿಕ್ಕ ಜೀವದ ಪ್ರಯತ್ನಶೀಲತೆ, ಸಹನೆ, ಬದುಕಲೇಬೇಕೆಂಬ ಛಲ ಇವಕ್ಕೆಲ್ಲ ಸ್ಪಷ್ಟ ನಿದರ್ಶನ.

ಆ ಪುಟ್ಟ ಹುಳದ ಆಶಾಭಾವ ಪ್ರಕೃತಿಯ ಬಲಿಷ್ಠ ಕೃತಿ ಅನ್ನಿಸಿಕೊಂಡ ನಮ್ಮಲ್ಲೇಕಿಲ್ಲ. 

ಸೋಲಿಗೆ ಯಾಕಿಷ್ಟು ಕಂಗೆಡುತ್ತೇವೆ.

 

ನಮಗೆಲ್ಲ ಗೊತ್ತು – 

ಬದುಕಿನ ಅಗಾಧತೆಗೆ ಈ ಎಲ್ಲ ಸೋಲು ವೈಫಲ್ಯಗಳನ್ನೂ, ಅವುಗಳಿಂದ ಜೊತೆಯಾದ ನೋವುಗಳನ್ನೂ ಮರೆಸಿಬಿಡುವ, ಅಳಿಸಿಹಾಕುವ ದಿವ್ಯ ತಾಕತ್ತಿದೆ. 

ಹಾಗಂತಲೇ ಬದುಕಬೇಕೆಂಬ ಸಣ್ಣ ಆಸೆ ಇದ್ದರೂ ಸಾಕು ನಿರಾಸೆಯ ಕೂಪದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿ ಕೂಡ ಕ್ರಮೇಣ ಎದ್ದು ನಿಲ್ಲಬಲ್ಲ, ಚೇತರಿಸಿಕೊಳ್ಳಬಲ್ಲ. 

ಮತ್ತೆ ಬದುಕ ಕಟ್ಟಿಕೊಂಡು ನಗಬಲ್ಲ. 

ಬದುಕಿನ ಅಗಾಧತೆಗೆ ಅಂಥ ತಾಕತ್ತಿರೋದರಿಂದಲೇ ಪ್ರಾಜ್ಞರು ಬದುಕನ್ನು ಸಾಗರಕ್ಕೆ ಹೋಲಿಸಿದ್ದಾರೆ. 

ಉಕ್ಕಿ ಹರಿವ ನೂರಾರು ನದಿಗಳನ್ನು ತನ್ನಲ್ಲಡಗಿಸಿಕೊಂಡೂ ಕಡಲು ತನ್ನ ಸಮತೋಲನವನ್ನು ಕಾದಿಟ್ಟುಕೊಳ್ಳುವ ಪರಿ ಅಗಾಧ. 

ಎಲ್ಲೆಲ್ಲಿಂದಲೋ ಹರಿದು ಬರುವ ಬೇರೆ ಬೇರೆ ರುಚಿ ಬಣ್ಣಗಳ ನದಿಗಳನೆಲ್ಲ ತನ್ನೊಳಗೆ ಹೀರಿಕೊಂಡು, ತನಗೆ ಬೇಕಾದಂತೆ ಬದಲಿಸಿ ಒಂದೇ ತೆರನಾಗಿಸಿಕೊಂಡು ಗಂಭೀರವಾಗಿ ತೊನೆಯುವ ಶರಧಿಯ ವೈಶಾಲ್ಯವನ್ನು ಬದುಕಿಗೆ ಹೋಲಿಸಿದ್ದು ಎಂಥ ಸಮಂಜಸ ಅಲ್ವಾ…

ಯಾವ್ಯಾವ ಕಡೆಯಿಂದಲೋ ಹ್ಯಾಗ್ಯಾಗೋ ಮುತ್ತಿ ಬರುವ ನೋವು ನಲಿವುಗಳನ್ನೂ ನುಂಗಿಕೊಂಡು ಇಂದಿನ ನೋವು ನಲಿವುಗಳನೆಲ್ಲ ನಾಳೆಗೆ ಕೇವಲ ನೆನಪು ಮಾತ್ರವಾಗಿ ಪರಿವರ್ತಿಸಿ ನಮ್ಮ ನಾಳೆಗಳನ್ನು ಸಹನೀಯವಾಗಿಸಬಲ್ಲ ಸಾಮರ್ಥ್ಯ ಬದುಕಿನ ಅಗಾಧತೆಗಿದೆ. 

ಹಾಗಿರೋದಕ್ಕೇ ಯಾರ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಮಾತಿಗೆ ಬೆಲೆ ಬಂದಿದೆ. 

ಇಂದಿನ ನೋವು, ನಲಿವು – ನಾಳೆಗೆ ಅದು ಬರೀ ನೆನಪು. 

ನೋವಿನದಿರಲಿ ನಲಿವಿನದಿರಲಿ ನೆನಪು ಮೂಡಿಸುವುದು ನಗುವನ್ನೇ.

 

ಇನ್ನು ಬದುಕಿನ ಅಗಾಧತೆಯನ್ನು ಕೂಡ ಅಳಿಸಿಬಿಡುವ ತಾಕತ್ತಿರೋದು ಸಾವಿಗೆ. 

ಸಾವು ಬಿಡಿ. 

ಅದಕ್ಕೆ ಈ ಬದುಕನ್ನೇನು ಈ ಭುವಿಯಲ್ಲಿ ನಮ್ಮದೊಂದು ಕುರುಹನ್ನೂ ಇಲ್ಲದಂತಾಗಿಸಿಬಿಡುವ ತಾಕತ್ತಿದೆ. 

ಸಾವಿನ ನಿಗೂಢತೆ ಬದುಕಿನ ಅಗಾಧತೆಗಿಂತ ಮಿಗಿಲು.

ಯಾವಾಗ..?

ಎಲ್ಲಿ.??

ಯಾವ ರೀತಿ.???

ಎಂಬಂಥ ಯಾವ ಮಾಹಿತಿಯನ್ನೂ ನೀಡದೇ ದಿಢೀರೆಂದು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಎದುರಾಗಿ ಬಿಡಬಲ್ಲ ಸಾವಿನ ಬಗೆಗೆ ಮಾತಾಡದಿರುವುದೇ ಲೇಸು.

ಸಾವು ಉಳಿಸಬಹುದಾದದ್ದು ವಿಷಾದ ಮಾತ್ರ.

ಉಳಿದವರ ಮನದಲ್ಲಿ – ಅಳಿದವರ ಬಗೆಗೆ…

 

ಇಷ್ಟೆಲ್ಲ ತಿಳಿದ ಮೇಲೂ

ಪ್ರಜ್ಞೆಯ ಆಳದಿಂದ

ನಿನ್ನೆ ಸತ್ತ ಕನಸಿನ ಘೋರಿಯ ಮೇಲೆಯೇ

ನಾಳೆ ಹೊಸದೊಂದು ಕನಸಿನ ಹಸಿರು ಚಿಗುರೀತು ಎಂಬ ಭರವಸೆ ಮೂಡಿ ನಿಲ್ಲುತ್ತಿದ್ದರೂ…

ಥೂ –

ಹಾಳಾದ ಈ ಮನಸ್ಯಾಕೆ ಹೀಗೆ…

ಸಿಕ್ಕ ಖುಷಿಗಳ ನೆನೆದು ನಗುತ ಹಾಯಾಗಿರುವುದ ಬಿಟ್ಟು…

ಒಂದ್ಯಾವುದೋ ಕನಸಿನ ಸಾವಿಗೆ…

ಅನುಭವಿಸಿದ ಪುಟ್ಟ ನೋವಿಗೆ ಜೋತು ಬಿದ್ದು ಸದಾ ಕೊರಗುತ್ತಿರುತ್ತದೆ…

ಏನದಕ್ಕೆ ಅಳುವೆಂದರೆ ಆ ಪರಿ ಖುಷಿಯೋ…!!!

-ಶ್ರೀವತ್ಸ ಕಂಚೀಮನೆ

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಅಗಾಧ ಬದುಕು – ನಿಗೂಢ ಸಾವು, ಅಳುವ ಮನಸು…..

 1. ನಿಜ.. ಏನೇನನ್ನೋ ಸವಾಲುಗಳು ಅಂದುಕೊಳ್ಳುವುದಕ್ಕಿಂತ, ಯಾವ್ಯಾವುದನ್ನೋ ನೋವಿನ ಆಗರ ಅಂತ ಉದಾಸೀನ ಮಾಡುವುದಕ್ಕಿಂತ ಸೋಲನ್ನ ಸವಾಲು ಅಂದುಕೊಳ್ತಾ, ನೋಯಿಸ್ಲಿಕ್ಕೆ ಬಂದಾಗ ಮನಸಿಂದಾಚೆ ದೂಡಿ ಉದಾಸೀನ ಮಾಡ್ತಾ ಬಂದರೆ ಅದರ ಕಾಟ ತನ್ನಷ್ಟಕ್ಕೆ ಕಡಿಮೆಯಾಗ್ತದೆ… ಚಂದದ ಚುರುಕು ಬರಹ.

 2.  ಕಷ್ಟಗಳು ಯಾವತ್ತಿದ್ದರೂ ಒಗ್ಗಟ್ಟಿನಿಂದಲೇ ಬರುತ್ತವೆ…
  ನಿಜವಾಗಿಯೂ ಒಪ್ಪುವಂತಹ ಮಾತು… ಕಂಡದ್ದಿದು.
  ಮನದಲ್ಲಿ ನೂರಾರು ಚಿಂತೆಗಳು ಏನೇನಾಗಿ ಹೋಗುತ್ತೋ ಅನ್ನೋ ಭಯ…..
  ನನಗೇ ಇದೆಲ್ಲಾ ಯಾಕೆ…. 4 ಹನಿ ಕಣ್ಣಿರಿಟ್ಟರೆ ಕರಗೀತೇ….
  ಬಿಟ್ಟು ಬಿಡಬೇಕು…… ಎಷ್ಟೋ ಬಾರಿ ಅಂದುಕೊಡದ್ದಿದೆ….
  ಹಾಳಾದ್ದು ಕಣ್ಣಿರೇ ಬಂದು ಸಾಯಲ್ಲಾ……. ಜೀವ ಹೆಣ್ಣಲ್ಲಾ…..
  ಕಷ್ಟಗಳನ್ನು ಎದುರಿಸುವ ಪರಿಯೆಂದರೆ……
  ಬೆಟ್ಟದಲ್ಲಿ ಹೋಗುವಾಗ ಕಾಂಗ್ರೇಸ್ ಜೀಡನ್ನು ಸರಿಸುತ್ತಾ ಮಧ್ಯೆ ತೂರಿದಂತೆ…..
  ನಾಲ್ಕಾರು ಉಣುಗುಗಳು ಮೇಮೇಲೆ ಬೀಳಬಹುದು…
  ಆದರೆ ದಾರಿಯಾದರೂ ಕ್ರಮಿಸಬಹುದಲ್ಲಾ….
  ಮೈಗೆ ಬಿದ್ದ ಉಣುಗುಗಳನ್ನು ಸಿಕ್ಕಿದಷ್ಟು  ತೆಗೆದುಕೊಂಡರಾಯಿತು….
  ಸಿಕ್ಕದಿದ್ದರಷ್ಟೇ ಹೋಯಿತು.. ನಾಲ್ಕಾರು ದಿನ  ತುರಿಸಿಕೊಂಡರಾಯಿತು ಅನ್ನೋ  ಧೈರ್ಯದಲ್ಲಿ…..

 3. "ಬಣ್ಣ ಬಣ್ಣದ ಕತ್ತಲು" – ಸೊಗಸಾದ ಸಾಲು, ಬಣ್ಣಗಳ ನುಂಗುವ ಕತ್ತಲಿಗೂ ಬಣ್ಣಗಳ ಲೇಪ…
  ಸೋಲೆನ್ನುವುದು ಮನಸ್ಸು ಮುನ್ನಡೆಯಲು ರಚ್ಚೆ ಹಿಡಿಯುವುದಕ್ಕಾಗಿ ನಿರ್ಮಿಸಿಕೊಂಡ ಕಾರಣ, ಅದು ಮುನ್ನಡೆಯುವ ಮೊದಲಿನ ವಿಶ್ರಾಂತ ಸ್ಥಿತಿಯೂ ಆಗಬಹುದು…
  ಮಾನಸಿಕವಾಗಿ ಸೋಲಿನೆಡೆಗಿನ ಆತಂಕದಿಂದಲೇ ಗೆಲುವಿಗೊಂದು ಪೂರ್ಣತೆ, ಸೋಲು ಒದಗಿಸಿಕೊಡುವ ಕರುಣೆ ಯಿಂದಲೆ ಭಾವಗಳಿಗೊಂದು  ಸಾರ್ಥಕತೆ – ಸೋಲೂ ಗೆಲುವನ್ನು ಗೆಲ್ಲಿಸುವ ಗೆಲವು, ಬದುಕನ್ನು ಸಂಪೂರ್ಣವಾಗಿಸುವ ಒಲವು…

  ಸಾವು ನಮ್ಮನ್ನು ಬೇರೆಯವರಿಗಾಗಿ ಉಳಿಸುತ್ತದೆ ಕೆಲಕಾಲಕ್ಕಾದರೂ, 
  ಸೋಲೂ ನಮ್ಮನ್ನು ನಮಗೆ ಪರಿಚಯಿಸುತ್ತದೆ ಬದುಕುವುದಕ್ಕಾಗಿಯೂ…
  ಚಂದನೆಯ ಬರಹ… ರಾಘವ ಭಟ್ ಪ್ರತಿಕ್ರಿಯೆಯೂ ಇಷ್ಟವಾಯಿತು…

 4. ಬರಹ ಪ್ರಕಟಿಸಿ ಪ್ರೋತ್ಸಾಹಿಸಿದ 'ಪಂಜು' ಬಳಗಕ್ಕೂ, ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ…
  ವಿಶ್ವಾಸ ವೃದ್ಧಿಸಲಿ – ಶ್ರೀ.

 5. ತುಂಬಾ ಪರಿಣಾಮಕಾರಿ ಬರಹ ಶ್ರೀ. ಇಂಥಾ ಅನರ್ಘ್ಯ ಜೀವನ ಮೌಲ್ಯಗಳು ನಿಮ್ಮ ಲೇಖನಿಯಿಂದ ಹರಿದದ್ದು ನೋಡಿ ಖುಷಿಯಾಯ್ತು. ಸೋಲುಗಳು ಮತ್ತು ಸಾವುಗಳು ಒಬ್ಬ ಮನುಷ್ಯನಲ್ಲಿ ಆಜೀವ ತತ್ವಜ್ಞಾನಿಯನ್ನು ಹುಟ್ಟಿಹಾಕಿಬಿಡಬಲ್ಲವು! ಸಾವುನೋವುಗಳ ಕೂಗಳತೆಗಳನ್ನು ಅಳೆಯುವುದು ಯಾವ ಬರಹಗಾರನಿಗೂ ಸಮರ್ಪಕವಾಗಿ ಸಾಧ್ಯವಾಗಿಲ್ಲ, ಆದರೂ ಸಾಹಿತ್ಯ ಮಾತ್ರ ಸಂಪನ್ನವಾಯ್ತು. ಸಾವುನೋವುಗಳ ವಿವಿಧ ಆಯಾಮಗಳು ಗರಿ ಬಿಚ್ಚಿಕೊಂಡವು. ನಿಮ್ಮ ಬರಹ ಹಿಡಿಸಿತು ಮತ್ತು ಅದರೊಳಗಿನ ಧನಾತ್ಮಕ ಆಶಯಗಳೂ. 🙂
  – ಪ್ರಸಾದ್.ಡಿ.ವಿ.

Leave a Reply

Your email address will not be published. Required fields are marked *