ನನ್ನ ತುಂಬ ಹಳೆಯ ಗೆಳೆಯ, ನನಗಿರುವ ಕೆಲವೇ ಕೆಲವು ಏಕವಚನದ ಮಿತ್ರರಲ್ಲೊಬ್ಬ, ಲೇಖಕ, ಪತ್ರಕರ್ತ ರವಿ ಬೆಳಗೆರೆ ಅನಿರೀಕ್ಷಿತವಾಗಿ ಮತ್ತು ಅಕಾಲಿಕವಾಗಿ ಅಗಲಿದ್ದಾನೆ. ತನ್ನ ಆಪ್ತರು, ಸ್ನೇಹಿತರು, ಸಿಬ್ಬಂದಿ, ಕುಟುಂಬದ ಸದಸ್ಯರು ಬಂಧು-ಬಳಗದಲ್ಲಿ ಒಂದು ಶೂನ್ಯ ಭಾವವನ್ನುಳಿಸಿ ಹೊರಟುಹೋಗಿದ್ದಾನೆ.
ಧಾರವಾಡದ ಕರ್ನಾಟಕ ಕಾಲೇಜಿನ ಪದವಿ ವಿದ್ಯಾಭ್ಯಾಸದ ಅವಧಿಯ ಮೂರು ವರ್ಷಗಳನ್ನು ಗೆಳೆಯ ಗೆಳತಿಯರ ಬೆಚ್ಚಗಿನ ಸ್ನೇಹದ ನಡುವೆ ಕಳೆದಿದ್ದ ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರವೇಶ ದ್ವಾರದಲ್ಲಿ ಮೆಟ್ಟಿಲ ಮೇಲೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಗೊಂದಲದಲ್ಲಿದ್ದಾಗ, 1978 ರ ಜುಲೈ ತಿಂಗಳ ಮೋಡ ಮುಸುಕಿ ಜಿಟಿಜಿಟಿ ಮಳೆ ಹಿಡಿದ ಒಂದು ಮಧ್ಯಾಹ್ನ. “ಹಲೋ ಐ ಯಾಂ ಬಿ.ರವಿ” ಎನ್ನುತ್ತ ಅವನು ನನ್ನ ಕೈಕುಲುಕಿದ್ದ. ಅವನ ಆ ನುಡಿ ಬಹುದೀರ್ಘ ಕಾಲದ ಗೆಳೆತನವೊಂದರ ಮುನ್ನುಡಿಯಾಗುತ್ತದೆಂಬ ಕಲ್ಪನೆ ಕೂಡ ನನಗಿರಲಿಲ್ಲ. ಆಮೇಲೆ ಕರ್ನಾಟಕದ ಉದ್ದಗಲಕ್ಕೂ ಪ್ರಸಾರ ಪಡೆದ “ಹಾಯ್ ಬೆಂಗಳೂರ್!” ಎಂಬ ಪತ್ರಿಕೆಯ ಸಂಪಾದಕನಾದ ರವಿ ಬೆಳಗೆರೆ ಎಂಬಾತ ನಲವತ್ತೆರಡು ವರ್ಷಗಳ ಹಿಂದೆ ನನಗೆ ಪರಿಚಯವಾದದ್ದು ಹಾಗೆ. ಅವನ ಧ್ವನಿಯಲ್ಲಿದ್ದ ಆತ್ಮೀಯತೆ ಕೂಡಲೇ ಅನುಭವೇದ್ಯವಾಗುವಂಥದಾಗಿತ್ತು. ಆಗಲೇ ಒಂದು ವರ್ಷ ಅಲ್ಲಿ ಕಳೆದಿದ್ದ ಆತನ ಸ್ನೇಹಪೂರ್ಣ ಮಾತುಗಳು ನನಗೆ ಸಮಾಧಾನಕರವಾಗಿತ್ತು. ಅದೇಕೋ ಗೊತ್ತಿಲ್ಲ, ತುಂಬ ಎಂದರೆ ತುಂಬ ಬೇಗನೇ ನಾವಿಬ್ಬರೂ ಪರಸ್ಪರರನ್ನು ಗೆಳೆಯರೆಂದು ಒಪ್ಪಿಕೊಂಡಾಯಿತು.
ನಮ್ಮ ಗೆಳೆತನ ಬೆಳೆಯುತ್ತ ಹೋದಂತೆಲ್ಲ ನಾವು ಅಂಡಲೆಯುವದೂ ಅತಿಯಾಯಿತು. ಒಂದು ರಾತ್ರಿ ಫರೀದಾ ಗಣಿಹಾರ್ ಎಂಬ ನಮ್ಮ ಅಧ್ಯಾಪಿಕೆಯೊಬ್ಬರ ಮನೆಗೆ ಊಟಕ್ಕೆ ಹೋಗಿ ಮಟನ್ ಊಟ ಉಂಡು ಕಾಲೆಳೆಯುತ್ತ ಮರಳಿ ಬರುತ್ತಿರಬೇಕಾದರೆ ಆತ ತನ್ನ ಪ್ರೇಮವೈಫಲ್ಯದ ಕಥಾನಕವನ್ನು ಬಿಚ್ಚಿ ಹರಡಿದ. ನಾನೂ ಅಂಥದೇ ಒಂದು ನಿರಾಕರಣೆಗೆ ಒಳಗಾಗಿದ್ದೆನಾಗಿ ಪರಸ್ಪರರು ಹೇಳಿಕೊಳ್ಳಬಹುದಾದ, ಹಂಚಿಕೊಂಡು ಹಗುರಾಗಬಹುದಾದ ಆ ಥೀಮ್ ನನಗೂ ಬಹಳ ಇಷ್ಟದ್ದಾಗಿತ್ತು. ಮುಂದೊಂದು ದಿನ ಬಳ್ಳಾರಿಯ ತನ್ನ ಪುಂಡಾಟದ ಕಥಾನಕ ಬಿಚ್ಚಿದ. ಒಟ್ಟಿನಲ್ಲಿ ಇಷ್ಟವಾಗುತ್ತಲೇ ಹೋದ. ನಮ್ಮ ಸೆಮೆಸ್ಟರ್ ಪರೀಕ್ಷೆಗಳು ಮುಗಿದು ರಜೆ ಪ್ರಾರಂಭವಾದಾಗ ಬಳ್ಳಾರಿಗೆ ಹೋಗೋಣ ನಡೀ ಎಂದ. ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ ದೇವಸ್ಥಾನವೊಂದರ ಮಗ್ಗುಲಿಗೆ ತುಸು ಒಳಗೆ ನಡೆದು ಹೋದರೆ ಇವನ ಮನೆ. ಧೂಳು ಮಣ್ಣಿನ ನೆಲದಗುಂಟ ಅಲ್ಲಲ್ಲಿ ಹರಡಿ ಬೆಳೆದ ಬಳ್ಳಾರಿಯ ಜಾಲಿಯ ಮಧ್ಯೆ ಇದ್ದ ಅವರ ಹಳೇ ಕಾಲದ ಆ ಮೂರಂಕಣದ ಮನೆ, ಅದರ ಮುಂದಿದ್ದ ಬೇವಿನ ಮರ, ಅದರ ನೆರಳಿನ ತಂಪಿನಲ್ಲಿ ಕುಳಿತು ಹೊತ್ತು ನೆತ್ತಿಗೇರುವ ವರೆಗೆ ಅರ್ಧಗಂಟೆಗೊಮ್ಮೆ ಅರ್ಧರ್ಧ ಲೋಟ ಕಾಫಿ ಕುಡಿಯುತ್ತ ನಾನು ಅವನು ಕೂಡಿ ಕಳೆದ ದಿನಗಳು ನನ್ನ ಸ್ಮರಣೆಯ ಭಾಗವಾಗಿ ಸದಾ ಉಳಿದಿವೆ. ಹರ್ಷ, ಉಲ್ಲಾಸ, ಅನಿಶ್ಚಿತತೆ, ಕಳವಳ…, ನಮ್ಮ ಮಾತುಗಳ ಮಧ್ಯೆ ಇವೆಲ್ಲ ಭಾವಗಳಿರುತ್ತಿದ್ದವಾದರೂ ತಮಾಷೆ ಮತ್ತು ನಗೆ ಎಂದೂ ಮಾಸಲಿಲ್ಲ. ದೂರದಲ್ಲಿ ಕಾಣುತ್ತಿದ್ದ ಬಳ್ಳಾರಿಯ ಕೋಟೆಯತ್ತ ನೋಡುತ್ತ ನಿಂತು ಅಥವಾ ಮಾರ್ಗಮಧ್ಯೆ ಇದ್ದ ಶಿಥಿಲ ಕಟ್ಟಡವೊಂದರ ಕಟ್ಟೆಯ ಮೇಲೆ ಕುಳಿತು ರವಿ ತನ್ನ ಬಾಲ್ಯದ ಕಿತ್ತು ತಿನ್ನುವ ನೆನಪುಗಳು, ಸ್ನೇಹಗಳು, ಸಾಮಾಜಿಕ ಅವಮಾನಗಳ ಕುರಿತು ಮಾತನಾಡುತ್ತಿದ್ದ.
೧೯೭೮ ರಲ್ಲಿ ನಾನು ಇವನೊಂದಿಗೆ ಹೋದಾಗ ಅವನ ಬಳ್ಳಾರಿಯ ಮನೆಯಲ್ಲಿದ್ದ ಕುಟುಂಬ ಈಗಿನ ಕುಟುಂಬವಲ್ಲ. ಈಗಿನ ಕುಟುಂಬದ ಬೀಜಾಂಕುರ ಇನ್ನೂ ಆಗಿರಲೇ ಇಲ್ಲ. ಬಹುಶಃ ಲಲಿತಾ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು ಅಷ್ಟೇ. ಆಗ ಅವನ ಮನೆಯಲ್ಲಿ ಇದ್ದವರು ರವಿ, ಅವನ ಅಮ್ಮ ಪಾರ್ವತಮ್ಮ ಮತ್ತು ರವಿಯ ದೊಡ್ಡಪ್ಪ (ಪಾರ್ವತಮ್ಮನ ಅಕ್ಕ, ಕನ್ನಡ ಸಾಹಿತ್ಯದ ನವೋದಯ ಹಂತದ ಕವಯತ್ರಿ ಬೆಳಗೆರೆ ಜಾನಕಮ್ಮನ ಪತಿ ಮಲ್ಲೂರು ಕೃಷ್ಣಶಾಸ್ತ್ರಿಗಳು) ಈ ಮೂವರು ಮಾತ್ರ. ಜಾನಕಮ್ಮ ನಿಧನ ಹೊಂದಿದ ಮೇಲೆ ಅವರ ಪತಿ ಕೃಷ್ಣಶಾಸ್ತ್ರಿಯವರು ಮಗನ ಮನೆಗೂ ಹೋಗದೇ ಬಳ್ಳಾರಿಯ ಇವರ ಮನೆಯಲ್ಲಿ ಇದ್ದು ಬಿಟ್ಟಿದ್ದರು. ಈ ಮೂವರನ್ನು ಹೊರತುಪಡಿಸಿದರೆ ಅಲ್ಲೇ ಸಮೀಪ ಗುಡಿಸಲು ಹಾಕಿಕೊಂಡಿದ್ದ ಗೋವಿಂದಮ್ಮ ಎಂಬ ಬೇಡರ ಹೆಣ್ಣು ಮಗಳೊಬ್ಬಳು ಪಾರ್ವತಮ್ಮನ ಕಷ್ಟ-ಸುಖಕ್ಕೆ ಒದಗುತ್ತ ಮನೆಯ ಸದಸ್ಯೆಯೇ ಆದಂತಿದ್ದಳು. ಆಮೇಲೆ ನಾನು ಹಲವು ಸಲ ರವಿಯ ಮನೆಗೆ ಹೋದೆ. ಅವನ ಎಂ.ಎ ಅಂತಿಮ ಪರೀಕ್ಷೆ ಮುಗಿದ ಬೆನ್ನಿಗೇ ಜರುಗಿದ ಅವನ ಮದುವೆಗೆ ಹೋದೆ, ಮದುವೆಯಾದ ನಂತರ ದೀಪಾವಳಿಯ ಹೊತ್ತಿಗೆ ಮೊದಲ ಅಳಿಯತನದ ಸಂದರ್ಭದಲ್ಲಿ “ಅಳಿಯನ ಜೊತೆ ಗೆಳೆಯನೂ ಇರಬೇಕಂತೆ” ಎಂದು ಅವನ ನಾದಿನಿ ವಿಜಿ ತಮಾಷೆ ಮಾಡಿದ್ದನ್ನು ನಿಜ ಮಾಡಲು ಮತ್ತೆ ಹೋದೆ, ಮತ್ತೊಮ್ಮೆ ಬಳ್ಳಾರಿಯವನೇ ಆದ ಮುಲ್ಲಂಗಿ ದೊಡ್ಡಬಸಪ್ಪ ಎಂಬ ನಮ್ಮಿಬ್ಬರ ಗೆಳೆಯನೊಂದಿಗೆ ರವಿಯ ಜೊತೆ ಕೆಲ ದಿನ ಕಳೆಯಲು ಹೋದೆ, ದೆಹಲಿಯ ಜೆ ಎನ್ ಯೂ ನಲ್ಲಿ ಓದುತ್ತಿದ್ದಾಗಲೂ ರಜೆಗೆಂದು ಧಾರವಾಡಕ್ಕೆ ಬಂದವನು ೧೯೮೫ ರಲ್ಲಿ ಮತ್ತೆ ಬಳ್ಳಾರಿಗೆ ಹೋಗಿದ್ದೆ. ತನ್ನಿಂದ ಸಾಧ್ಯವಾದಷ್ಟು ಸೌಕರ್ಯಗಳನ್ನು ಮುಖ್ಯವಾಗಿ ಬಳ್ಳಾರಿಯ ರಣಧಗೆಯನ್ನು ಸಹಿಸಲಗತ್ಯವಾದ ಒಂದು ಟೇಬಲ್ ಫ್ಯಾನ್ ನ ವ್ಯವಸ್ಥೆಯನ್ನು ರವಿ ನನಗೆ ಒದಗಿಸುತ್ತಿದ್ದ.
ಬಳ್ಳಾರಿಯಲ್ಲಿ ಕಾಲೇಜೊಂದರಲ್ಲಿ ತಾನು ಮಾಡುತ್ತಿದ್ದ ಇತಿಹಾಸ ಉಪನ್ಯಾಸಕ ನೌಕರಿಯಿಂದ ಕಾರಣಾಂತರದಿಂದ ವಜಾ ಆದ ಮೇಲೆ “ಬಳ್ಳಾರಿ ಪತ್ರಿಕೆ”, “ಕ್ರೈಮ್ ಸಮಾಚಾರ” ಎಂಬೆರಡು ಪತ್ರಿಕೆಗಳನ್ನು ಮಾಡಿದ್ದ ರವಿ ಆಮೇಲೆ ಬೆಂಗಳೂರಿಗೆ ಹೋಗಿ ಅದಾಗಲೇ ಅಲ್ಲಿಯ ಹಲವು ಪತ್ರಿಕೆಗಳಲ್ಲಿ ಅಲ್ಪಾವಧಿ ನೌಕರಿ ಮಾಡಿ ಕೊನೆಗೆ ೧೯೮೬ ರಲ್ಲಿ ನಾನು ದೆಹಲಿ ತೊರೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನೆಂದು ನಿಯುಕ್ತನಾದ ಎರಡು ವರ್ಷಗಳ ನಂತರ “ಸಂಯುಕ್ತ ಕರ್ನಾಟಕ” ದಲ್ಲಿ ಉದ್ಯೋಗ ಪಡೆದು ಹುಬ್ಬಳ್ಳಿಗೆ ಬಂದ. ಅದರ ಸಾಪ್ತಾಹಿಕ ಪುರವಣಿಯನ್ನು ನೋಡಿಕೊಳ್ಳುತ್ತಿದ್ದ. ಆಮೇಲೆ ಕೆಲ ವರ್ಷ ಸ್ಥಗಿತಗೊಂಡಿದ್ದ”ಕರ್ಮವೀರ” ಸಾಪ್ತಾಹಿಕದ ಪ್ರಕಟಣೆಯನ್ನು ಪುನರಾರಂಭಿಸಿದಾಗ ಲೋಕ ಶಿಕ್ಷಣ ಟ್ರಸ್ಟಿನ ಎಲ್ಲ ಪ್ರಕಟಣೆಗಳ ಬಾಸ್ ಆಗಿದ್ದ ಶಾಮರಾಯರು ಅದರ ಸಂಪಾದಕತ್ವವನ್ನೇ ಇವನ ಕೈಗಿತ್ತರು. ಮೂವತ್ತೊಂದರ ಹರೆಯದ ಈತ ಅದರ ಸಂಪಾದಕ ಆದದ್ದು ಅಲ್ಲಿ ಹಲವು ಹುಬ್ಬುಗಳು ಮೇಲೇರಲು ಕಾರಣವಾಯಿತು. ಅಲ್ಲಿಂದತ್ತ ಅವನು ಅಸೂಯೆ ಆರಾಧನೆಗಳೆರಡನ್ನೂ ಸಮಾನವಾಗಿ ಸಂಪಾದಿಸಿಕೊಳ್ಳುವದು ಶುರುವಾಯಿತು.
ಅವನು ಹುಬ್ಬಳ್ಳಿಯಲ್ಲಿದ್ದ ವರ್ಷಗಳಲ್ಲಿ ಮತ್ತೆ ನಿಯಮಿತವಾಗಿ ಬೇಟಿಯಾಗುವದು ಹರಟುವದು ನಡೆದೇ ಇತ್ತು. ಆಮೇಲೆ ಅವನನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಿದರು. ಅಲ್ಲಿ” ಸಂಯುಕ್ತ ಕರ್ನಾಟಕ” ದ ಮ್ಯಾನೆಜ್ಮೆಂಟ್ ಜೊತೆಗಿನ ತನ್ನ ಕಿತ್ತಾಟಗಳ ಕುರಿತು ಅವನೇ ಆಗಾಗ ಬರೆದಿದ್ದಾನೆ. ಅಂತಿಮವಾಗಿ “ಸಂಯುಕ್ತ ಕರ್ನಾಟಕ” ದಿಂದ ಹೊರಬಿದ್ದು, “ಲಂಕೇಶ್ ಪತ್ರಿಕೆ” ಗೆ ಕೆಲ ಕಾಲ ಬಿಡಿ ಲೇಖನ ಮತ್ತು ವರದಿಗಳನ್ನು ಬರೆಯುತ್ತಿದ್ದ ರವಿ ೧೯೯೪-೯೫ ರ ಸುಮಾರಿಗೆ ತನ್ನ ಸಂಬಂಧಿಯೊಬ್ಬರ ಯಾವುದೋ ಕಲಹವನ್ನು ಬಗೆಹರಿಸಲು ಗೋವೆಗೆ ಹೋದವನು ಮರಳಿ ಬೆಂಗಳೂರಿಗೆ ಹೋಗಬೇಕಾದರೆ ಧಾರವಾಡದ ಯೂನಿವರ್ಸಿಟಿ ಸ್ಟಾಫ್ ಕ್ವಾರ್ಟರ್ಸ್ ನಲ್ಲಿದ್ದ ನಮ್ಮ ಮನೆಗೆ ಬಂದು ತಾನೇ ಸ್ವಂತ ಪತ್ರಿಕೆಯನ್ನು ಪ್ರಾರಂಭಿಸುವ ತನ್ನ ಕನಸನ್ನು ನನ್ನೊಂದಿಗೆ ಹಂಚಿಕೊಂಡ. ಹುಬ್ಬಳ್ಳಿಯಲ್ಲಿ ಆರಂಭಿಸುವದು ಅವನ ಪ್ರಾರಂಭಿಕ ಯೋಜನೆಯಾಗಿತ್ತು. ಇಲ್ಲಿ ಬರಕತ್ತಾಗುವದಿಲ್ಲ, ಅದಕ್ಕೆ ಬೆಂಗಳೂರು ಸೂಕ್ತ ಎಂದೆ.. ಬಹಳ ಸೀಮಿತ ನಿರೀಕ್ಷೆ ಮತ್ತು ಆಕಾಂಕ್ಷೆಗಳೊಂದಿಗೆ ನಿವೇದಿತಳನ್ನು ಸಹಾಯಕ್ಕಿಟ್ಟುಕೊಂಡು ೧೯೯೫ ರಲ್ಲಿಇವನು ಶುರು ಮಾಡಿದ, “ಹಾಯ್ ಬೆಂಗಳೂರ್” ಎಂಬ ವಿಚಿತ್ರ ಹೆಸರು ಹೊತ್ತ ಕಪ್ಪು ಬಿಳುಪು ಪತ್ರಿಕೆ ಕೆಲವೇ ವಾರಗಳಲ್ಲಿ ಸಂಚಲನವನ್ನೇ ಸೃಷ್ಟಿಸಿತು, .ರಾಜ್ಯಾದ್ಯಂತ ಪ್ರಸಾರ ಗಳಿಸಿಕೊಡಿತು. ಒಂದೆರಡು ವರ್ಷಗಳಲ್ಲಿ ರಾಜ್ಯದ ಹೊರಗೂ, ದೇಶದ ಹೊರಗೂ ಅದಕ್ಕೆ ಓದುಗರು ಸಿಕ್ಕರು. ಅದರಿಂದ ಅವನ ಬರವಣಿಗೆಗೂ ಹೊಸ ಕಸುವು ಪ್ರಾಪ್ತವಾಯಿತು. ತನ್ನ ಒಳಹೊರಗನ್ನೆಲ್ಲ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದ ಅವನ “ಖಾಸ್ ಬಾತ್” ಪುಟ ಜನರನ್ನು ಸೆಳೆಯಿತು. ಆ ಪತ್ರಿಕೆಯನ್ನು ಪ್ರಾರಂಭಿಸಿದ ಮೇಲೆ ಮಿತ್ರರನ್ನು ಗಳಿಸಿಕೊಂಡಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳನ್ನು, ಹಿತಶತ್ರುಗಳನ್ನು ಗಳಿಸಿಕೊಂಡ.
ಬದುಕಿನ ಅನುಭವಗಳಿಗೆ ತುಸು ಬಣ್ಣ ಕಟ್ಟಿ ಹೇಳುವ ಬರವಣಿಗೆಯ ಶೈಲಿಯೊಂದನ್ನು ರೂಡಿಸಿಕೊಂಡು ಲಕ್ಷಾವಧಿ ಓದುಗರನ್ನು ತನ್ನತ್ತ ಸೆಳೆದ. ವಿಷಯಗಳನ್ನು ಸೆನ್ಸೆಶನಲೈಜ್ ಮಾಡಿ ಹೇಳತೊಡಗಿದ. ವಿಚಿತ್ರವಾದ ಸಾಹಸೀ ಆಯಾಮಗಳನ್ನು ಪತ್ರಿಕೋದ್ಯಮಕ್ಕೆ ನೀಡಿದ. ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಹಗಲೂ ರಾತ್ರಿ ಸಾವಿರಾರು ಮೈಲು ಸುತ್ತಿದ. ಬೇರೆ ಪತ್ರಕರ್ತರು ಊಹಿಸಲೂ ಸಾಧ್ಯವಾಗದ ವಿಚಿತ್ರ, ವಿಲಕ್ಷಣ ಲೋಕಗಳ ದರ್ಶನವನ್ನು ತನ್ನ ಓದುಗರಿಗೆ ಮಾಡಿಸಿದ. ತಾನು ಮಾಡುತ್ತಿದ್ದ ಸ್ಟೋರಿಗಳು, ಬರೆಯುತ್ತಿದ್ದ ಪುಸ್ತಕಗಳ ವಸ್ತು-ವಿಷಯಗಳು ರಾಜ್ಯದ ಒಳಗೆ, ಹೊರಗೆ್, ದೇಶದ ಹೊರಗೆ ಕೂಡ ಎಲ್ಲೆಲ್ಲಿ ಕೊಂಡೊಯ್ದವೋ ಅಲ್ಲಲ್ಲಿಗೆ ಹೋದ. ತಾನು ಪ್ರಕಟಿಸಿದ ನಿರ್ಭೀತ ವರದಿಗಳಿಂದಾಗಿ ರಾಜ್ಯಾದ್ಯಂತ ಹಲವೆಡೆ ಕೇಸ್ ಗಳನ್ನು ಮೈ ಮೇಲೆಳೆದುಕೊಂಡು ಕೋರ್ಟು ಕಚೇರಿ ಸುತ್ತಿದ. ಮಾರಿಯೊ ಪುಜೋ ನ “ಗಾಡ್ ಫಾದರ್” ಕಾದಂಬರಿಯ ಡಾನ್ ಕಾರ್ಲಿಯಾನ್ ನ ಹಾಗೆ ಯಾರ ಎಣಿಕೆ ಊಹೆಗಳಿಗೂ ತನ್ನ ಚಲನವಲನಗಳು, ಅಜೆಂಡಾಗಳು ಸುಲಭಸಾಧ್ಯವಾಗಿ ನಿಲುಕದಂತೆ ವಾರ ವಾರವೂ ಅಚ್ಚರಿಯ ಮೇಲೆ ಅಚ್ಚರಿಗಳನ್ನು ಉಂಟು ಮಾಡುತ್ತ ಹೋದ. ಕೆಲ ನಾಮಾಂಕಿತ ಲೇಖಕರೂ ಅದರಲ್ಲಿ ಅಂಕಣಗಳನ್ನು ಬರೆಯತೊಡಗಿದ ಮೇಲೆ ಅದಕ್ಕೆ ಒಂದು ಸಾಹಿತ್ಯಿಕ ಖದರ್ ಕೂಡ ಪ್ರಾಪ್ತವಾಯಿತು. ಮುಖ್ಯವಾಗಿ ಭ್ರಷ್ಟ ಅಧಿಕಾರಿಗಳು, ಪಾತಕಿಗಳು, ಸ್ವಾರ್ಥಿ, ಲೋಭಿ, ಕಾಮಿ ಸ್ವಾಮಿಗಳು, ಮಠ ಪೀಠಗಳ ಕಿತ್ತಾಟಗಳು, ಡೋಂಗೀ ಬಾಬಾಗಳು, ಜ್ಯೋತಿಷಿಗಳು, ಕ್ಯಾಪಿಟೇಶನ್ ಮಾಫಿಯಾಗಳು, ಧರ್ಮರಕ್ಷಣೆಯ ಮುಸುಕಿನಡಿ ಕೆಲವರು ನಡೆಸುತ್ತಿದ್ದ ಬಗೆಬಗೆಯ ಧಂದೆಗಳು, ಹಿಂಡು ಹುಡುಗಿಯರನ್ನು ಸಾಕಿಕೊಂಡು ಘರ್ವಾಲಿಗಳು ನಡೆಸುತ್ತಿದ್ದ ಮಾಂಸದ ಅಡ್ಡೆಗಳ ಲೋಕಗಳು ಅನಾವರಣಗೊಳ್ಳುತ್ತ ಹೋದವು. ಜನಪರ ಹೋರಾಟಗಳ, ಮುಖ್ಯವಾಗಿ ನಕ್ಸಲೀಯ ಚಳುವಳಿಗಳ ವಿಷಯಗಳೂ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಈ ಎಲ್ಲ ತರಹೆವಾರಿ ವಿಷಯಗಳ ಕುರಿತು ಎಲ್ಲೆಡೆಯಿಂದಲೂ ವಿಷಯಗಳು ತನಗೆ ತಲುಪುವ ಹಾಗೆ, ತನ್ನ ಎಷ್ಟ್ಯಾಬ್ಲಿಷ್ಮೆಂಟ್ ನ ವಿಷಯಗಳು ಹೊರಗೆ ನುಸುಳದ ಹಾಗೆ ಅನೌಪಚಾರಿಕ ಬೇಹು ಜಾಲವೊಂದನ್ನು ಅವನು ನಿರ್ಮಿಸಿಕೊಂಡಿದ್ದನೆನ್ನುವದರಲ್ಲಿ ನನಗೆ ಸಂಶಯವಿಲ್ಲ
ತನ್ನ ಟ್ಯಾಬ್ಲಾಯ್ದ್ ಪತ್ರಿಕೆ ರಾಜ್ಯಾದ್ಯಂತ ಸೃಷ್ಟಿಸಿದ ಲಕ್ಷಾವಧಿ ಓದುಗರನ್ನು ರವಿ ವೈವಿಧ್ಯಮಯ ವಿಷಯಗಳ ಕುರಿತು ತಾನು ಬರೆದು ಅಥವಾ ಅನುವಾದಿಸಿ ಪ್ರಕಟಿಸಿದ ಪುಸ್ತಕಗಳ ಮೂಲಕವೂ ತಲುಪತೊಡಗಿದ.. ಕನ್ನಡದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳ ಕರ್ತೃ ಎನ್ನುವ ದಾಖಲೆ ಬರೆದ. “ಮೈ ಬುಕ್ಸ್ ಹ್ಯಾವ್ ಮೇಡ್ ಮಿ ರಿಚ್” ಎಂದಿದ್ದ ಒಮ್ಮೆ. ಆಮೇಲೆ ಟೀವಿ ಚಾನಲ್ ಗೆ ನಿರ್ಮಿಸಿದ ಅವನ ಕ್ರೈಂ ಡೈರಿ ಕಾರ್ಯಕ್ರಮ ಮನೆಮಾತಾಯಿತು. ಟೀವಿಗಾಗಿಯೇ ಎಂದೂ ಮರೆಯದ ಹಾಡು ಎಂಬ ಕಾರ್ಯಕ್ರಮಗಳನ್ನೂ ರವಿ ಮಾಡಿದ, ಆಡಿಯೊ ಸಿ ಡಿ ಮಾಡಿ ಯುವಜನರ ಹೃದಯ ಗೆದ್ದ. “ಲವ್ ಲವಿಕೆ” ಎಂಬ ಶೀರ್ಷಿಕೆಯಡಿ ಈತ ಬರೆಯುತ್ತಿದ್ದ ಬರಹಗಳೂ ಪ್ರೇಮದ ಹಲವು ಮುಖಗಳನ್ನು ಅನಾವರಣಗೊಳಿಸಿದವು. ಅವನು ಆರಂಭಿಸಿದ “ಓ ಮನಸೇ” ಕನ್ನಡದ ಒಂದು ವಿಭಿನ್ನ ರೀತಿಯ ಪತ್ರಿಕೆಯಾಗಿ ಗುರುತಿಸಲ್ಪಟ್ಟಿತು. ತಾನು ಸಂಪಾದಿಸಿದ ಹಣವನ್ನು ಪ್ರಾರ್ಥನಾ ಎಂಬ ಶಾಲೆಯನ್ನು ನಿರ್ಮಿಸಲು ಹಾಕಿದ ರವಿ ತನ್ನೆಲ್ಲ ಸಾಧನೆಗಳ ಪೈಕಿ ಆ ಶಾಲೆಯ ಕುರಿತು ಹೆಚ್ಚಿನ ಹೆಮ್ಮೆಯಿಂದ ಮಾತಾಡುತ್ತಿದ್ದ.
ನನ್ನ- ಅವನ ಸ್ನೇಹದ ನಾಲ್ಕು ದಶಕಗಳ ಅವಧಿಯಲ್ಲಿ ನಮ್ಮಿಬ್ಬರ ಬದುಕಿನ ನದಿಗಳಲ್ಲಿ ಬಹಳಷ್ಟು ನೀರು ಹರಿದಿದೆ. ಅವಘಡಗಳು, ಹುಟ್ಟು-ಸಾವುಗಳು ಏಳುಬೀಳುಗಳು ಸಂಭವಿಸಿವೆ. ಆದರೆ ಸ್ನೇಹದ ಒರತೆ ಬತ್ತಲಿಲ್ಲ. ನಾನು ಇವನು ಪರಸ್ಪರ ಸಂಪರ್ಕವಿಲ್ಲದೇ ವರ್ಷಗಟ್ಟಲೇ ಇದ್ದ ಅವಧಿಗಳಿದ್ದವು, ವಿಶೇಷವಾಗಿ ನಾನು ದೆಹಲಿಯಲ್ಲಿದ್ದ ವರ್ಷಗಳಲ್ಲಿ. ಆದರೆ ನಾವು ಒಬ್ಬರ ನೆನಪಿನಿಂದ ಇನ್ನೊಬ್ಬರು ಮರೆಯಾಗಿಲ್ಲ. ಪರಸ್ಪರರ ವೈಯಕ್ತಿಕ ಮತ್ತು ಕೌಟುಂಬಿಕ ಸೌಖ್ಯದ ಕುರಿತ ಕಾಳಜಿಗಳಿಂದ ದೂರವಾಗಲಿಲ್ಲ. ನಾವು ಸಾಮಾನ್ಯವಾಗಿ ನಮ್ಮನ್ನು ಕಾಡುತ್ತಿದ್ದ ಸಂಗತಿಗಳನ್ನು ಪರಸ್ಪರರಿಂದ ಬಚ್ಚಿಡಲು ನೋಡುತ್ತಿರಲಿಲ್ಲ. ಹೇಳಿಕೊಂಡು ಹಗುರಾಗುತ್ತಿದ್ದುದೇ ಹೆಚ್ಚು. ಒಮ್ಮೆ ಅವನು ತಾನು ಎಡ್ಮಿಟ್ ಆಗಿದ್ದ ಆಸ್ಪತ್ರೆಯಿಂದ ವೈದ್ಯರು ಹಾಕಿದ್ದ ಡ್ರಿಪ್ಸ್ ಪೈಪ್ ಎಲ್ಲ ಕಿತ್ತು ಹಾಕಿ ನಾ ಅಶೋಕನ ಹತ್ತಿರ ಧಾರವಾಡಕ್ಕೆ ಹೋಗ್ತೀನಿ ಎಂದು ಎದ್ದು ಹೊರಟು ಬಿಟ್ಟಿದ್ದನ್ನು ನಿವೇದಿತಾ ನನಗೆ ಫೋನ್ ಮಾಡಿ ಹೇಳಿ ಬಾಸ್, ಮುಂದಿನ ಸಂಚಿಕೆಗೆ ಏನು ಹಾಕಲಿ ಎಂದೆಲ್ಲ ಚರ್ಚಿಸಲು ನೋಡಿದರೆ ಏನಾದ್ರೂ ಮಾಡಿಕೊಂಡು ಹೋಗು, ಸಂಚಿಕೆ ತರುವದಿದ್ದರೆ ತಾ ಇಲ್ಲವಾದ್ರೆ ಬಿಟ್ಟಾಕು ಅಂದ್ರು ಸಾರ್, ನಮ್ಮ ಬಾಸ್ ಹೀಗೆ ಎಂದೂ ಮಾತಾಡಿದವರೇ ಅಲ್ಲ ಸಾರ್, ಈಗ ಚಿತ್ರದುರ್ಗ ಬಳಿ ಇದ್ದಂತಿದೆ, ನಿಮ್ಮ ಬಳಿ ಬರ್ತಾರೆ ಅಂತೆಲ್ಲ ಹೇಳಿದಳು. ಯಶೋಮತಿಯನ್ನು ಕರೆದುಕೊಂಡು ಇವನ ಸವಾರಿ ಆಗಮಿಸಿತು. ಬದುಕಿನಲ್ಲಿ ಎಲ್ಲ ಮಾಡಿಯಾಯಿತು, ಬದುಕಿನ ಸಾಧ್ಯತೆಗಳೆಲ್ಲ ಮುಗಿದಿವೆ ಅನ್ನೋ ಥರ ಯೋಚ್ನೆ ಮಾಡ್ತಿದಾರೆ ಸರ್. ಸ್ವಲ್ಪ ಅವರನ್ನು ಮೋಟಿವೇಟ್ ಮಾಡಿ ಎಂದಳು ಯಶೋಮತಿ. ಇನ್ ಫ್ಯಾಕ್ಟ್ ಆ ಹಂತದಲ್ಲಿನ್ನೂ ಅವನ ಮೂರು ಮಕ್ಕಳ ಪೈಕಿ ಇನ್ನೂ ಯಾರ ಮದುವೆಯೂ ಆಗಿರಲಿಲ್ಲ.
ಅವಲಕ್ಕಿ ತಿಂದು, ತಾಸೊಪ್ಪತ್ತು ಮಲಗಿ ಎದ್ದು ಮಾತಿಗೆ ಸಿಕ್ಕ. ಅಷ್ಟೊತ್ತಿಗೆ ನಮ್ಮ ಮನೆಗೆ ಬರುವ ಮುನ್ನ ಡಾ. ಪಾಂಡುರಂಗಿಯವರು ಇವನಿಗೆ ಕೊಟ್ಟು ಕಳಿಸಿದ್ದ ಮಾತ್ರೆ ಇವನನ್ನು ಸ್ವಲ್ಪ ಟ್ರಾಂಕ್ವಿಲೈಜ್ ಮಾಡಿತ್ತು. ಎಲ್ಲ ಮಾತನಾಡಿ ಆದ ಮೇಲೆ. ಕೃಷ್ಣದೇವರಾಯನ ಕುರಿತು ಕಾದಂಬರಿ ಬರೀತಿನಿ. ನೀನು ಅವ್ನು ಕಳಿಂಗದ ಮೇಲೆ ದಾಳಿ ಮಾಡಿದಾಗೆಲ್ಲ ಆಂಧ್ರದ ರೆಡ್ಡಿಗಳ ಕೋಟೆಗಳನ್ನು ಗೆದ್ದುಕೊಳ್ಳುತ್ತ ಓಡಿಸಾಕ್ಕೆ ಹೋದ ಊರುಗಳ ರೂಟ್ ಹೇಳು, ನಾನೀಗ ಅಲ್ಲೆಲ್ಲ ಹೋಗ್ತೀನಿ ಎಂದ. ಅವನ ಮಾತಿಗೆ ನಕ್ಕು ನೀನೀಗ ಆ ಸ್ಥಿತಿಯಲ್ಲಿಲ್ಲ, ಇತ್ತ ದಾಂಡೇಲಿ ಕಡೆ ಹೋಗು, ಅಲ್ಲೀಗ ಹೋಮ್ ಸ್ಟೇ ಗಳನ್ನು, ಮರದ ಮೇಲೆ ಮನೆಗಳನ್ನೆಲ್ಲ ಮಾಡಿದ್ದಾರೆ ಒಂದೆರಡು ದಿನ ವಿಶ್ರಾಂತಿ ತಗೋ. ಬೇಕಾದರೆ ನರಸಿಂಹ ಛಾಪಖಂಡ್ ಕೆಲ ದಿನಗಳ ಹಿಂದೆ ಜೋಯಿಡಾದ ಬಳಿ ಜಗಲ್ಬೇಟ್ ನಲ್ಲಿ ಕಾಡ ಮಧ್ಯದ ಬಂಗ್ಲೆಯಲ್ಲಿ ವಾಸಿಸುತ್ತಿದ್ದ ಇಂಡಿಯನ್ ಇಂಗ್ಲೀಷ್ ಸಾಹಿತ್ಯದ ಮೇರು ಲೇಖಕ ಮನೋಹರ್ ಮಳಗೋಂಕರ್ ಅವರನ್ನು ನಿನಗೆ ಭೇಟಿ ಮಾಡ್೯ಸ್ತೇನೆ ಅಂತ ಹೇಳಿದ ಬಗ್ಗೆ ಬರೆದಿದ್ದಿಯಲ್ಲ, ಹೋಗಿ ಅವರನ್ನು ಕಾಣು ಎಂದೆ. ಹುಂ ಎಂದು ತನ್ನ ಇಲ್ಲಿಯ ವರದಿಗಾರ ರವಿ ಕುಲಕರ್ಣಿಯನ್ನು ಕರೆದುಕೊಂಡು ಬೀಳ್ಕೊಂಡ.. ಮಳಗೋಂಕರ್ ಅವರನ್ನು ಕಂಡ. ಆಮೇಲೆ ಮತ್ತೊಂದು ಜಗತ್ತೇ ತೆರೆದುಕೊಂಡಂತೆ ಗೆಲುವಾದ. ಮತ್ತೆ ಇತ್ತೀಚೆ ಕೆಲ ವರ್ಷಗಳ ಹಿಂದೆ ಮಳಗೋಂಕರ್ ಅವರ ಮರಣಾನಂತರ ತಾನು ಕೊಂಡ ಅವರ ಬಂಗಲೆಯಿಂದ ಕರೆ ಮಾಡಿ ಮಾತಾಡಿದ ಸಂದರ್ಭದಲ್ಲಿ ” ನಾ ಛಿದ್ರ ಆಗೇನಿ ಅಶಾ” ಎಂದು ಅವನೆಂದ ಮಾತು ಕೆಲ ಕಾಲದಿಂದ ಅವನು ಅನುಭವಿಸುತ್ತಿದ್ದ ದೈಹಿಕ ಮಾನಸಿಕ ಯಾತನೆಗಳೆಲ್ಲ ಘನೀಭವಿಸಿದಂತಿತ್ತು. ಏನೋ ಸಾಂತ್ವನ ಹೇಳಿದೆ.
ನಾವಿಬ್ಬರೂ ಸಂಧಿಸದೇ ಒಂದು ದೀರ್ಘಾವಧಿ ಗ್ಯಾಪ್ ಉಂಟಾದಾಗ ಒಂದು ತಹತಹಿಕೆ ಅನುಭವಕ್ಕೆ ಬರುತ್ತಿತ್ತು. ಬೆಂಗಳೂರಿನಲ್ಲೋ ಧಾರವಾಡದಲ್ಲೋ ಭೇಟಿಯಾಗುತ್ತಿದ್ದೆವು. ಈ ಮಧ್ಯೆ ಎಲ್ಲೋ ಒಂದೆಡೆ, ಏನನ್ನೋ ಮಾಡಿಕೊಂಡು ಇದ್ದಾನೆ ಬಿಡು ಎಂದು ನಾನು ನಿರುಮ್ಮಳವಾಗಿರುತ್ತಿದ್ದೆ. ಅವನೋ ನಾನೋ ಫೋನ್ ಕರೆ ಮಾಡಿ ಸಾಕಷ್ಟು ಹೊತ್ತು ಮಾತನಾಡುತ್ತಿದ್ದೆವು. ಅವನಿಗೆ ಐವತ್ತು ವರ್ಷ ತುಂಬಿದಾಗ ಅವನ ಸಿಬ್ಬಂದಿ ಎಲ್ಲ ಶ್ರಮ ವಹಿಸಿ “ಫಸ್ಟ್ ಹಾಫ್” ಅಂತ ಒಂದು ಪುಸ್ತಕ ತಂದರು. ಅದರಲ್ಲಿ ನಾನು ಬರೆದಿದ್ದೆ: “ಈಗ ರವಿಗೆ ಐವತ್ತು ವರ್ಷ. ಮೋಹನದಾಸ್ ಕರಮಚಂದ್ ಗಾಂಧಿ ಹೇಳಿಕೊಳ್ಳುತ್ತಿದ್ದಂತೆ ರವಿ ಕೂಡ ತಾನು ನೂರು ವರ್ಷ ಬದುಕುವದಾಗಿ ಹೇಳಿಕೊಳ್ಳುತ್ತಾನೆ. ಉನ್ಮಾದಿಯೊಬ್ಬ ಗಾಂಧಿಯನ್ನು ಮುಗಿಸಿ ಹಾಕಿದ್ದರಿಂದ ಗಾಂಧಿ ನೂರು ವರ್ಷ ಬದುಕಲಾಗಲಿಲ್ಲ. ರವಿ ಬದುಕಲಿ. ಎಂ.ಎ ಓದುವಾಗ ರವಿ ನನಗಿಂತ ಒಂದು ವರ್ಷ ಸೀನಿಯರ್ ಆದರೂ ವಯಸಿನಲ್ಲಿ ನಾನು ಅವನಿಗಿಂತ ಒಂದು ವರ್ಷ ಹಿರಿಯ. ನನ್ನ ಈ ಅಲ್ಪ ಪ್ರಮಾಣದ ಹಿರಿತನದಿಂದ ನಾನು ಹೇಳುವ ನನ್ನ ಹಿತೋಕ್ತಿಯನ್ನು ಗೌರವಿಸಿ ತನ್ನ ದೈಹಿಕ ಸಾಮರ್ಥ್ಯಗಳ ಕುರಿತ ಅವನ ಗ್ರಹಿಕೆಗಳಲ್ಲಿ ಆಗೀಗ ತಲೆದೋರುವ ಹುಂಬತನವನ್ನು ಅವನು ಕಡಿಮೆ ಮಾಡಿಕೊಳ್ಳಲಿ”.
ಆದರೆ ಹುಂಬತನದ ಕೈ ಮೇಲಾಯಿತೆಂದು ತೋರುತ್ತದೆ. ಕೊನೆಗೂ ರವಿ ತನ್ನದೇ ಶರತ್ತುಗಳಿಗನುಗುಣವಾಗಿ ಬದುಕಿ ಶಾಶ್ವತವಾಗಿ ನಿರ್ಗಮಿಸಿದ್ದಾನೆ. ನನ್ನ ಮನ ಮ್ಲಾನವಾಗಿದೆ. ಇನ್ನೇನು ಹೇಳಲಿ?
-ಅಶೋಕ ಶೆಟ್ಟರ್
ಸರ್, ನಿಮ್ಮ ರವಿ ಬೆಳಗೆರೆ ಅವರ ಸ್ನೇಹದ ಕುರಿತು ಸಾಕಷ್ಟು ಓದಿದ್ದೆ.. ನೀವು ಮತ್ತೊಮ್ಮೆ ಅವರನ್ನು ನಿಮ್ಮ ಕಾಲದ ದಿನಗಳನ್ನು ನೆನೆದು ಗೆಳೆಯನನ್ನು ಸ್ಮರಿಸಿದ ಬರಹ ಚೆನ್ನಾಗಿದೆ… ಸರ್…. ಇನ್ನೊಂದಿಷ್ಟು ವರ್ಷ ಬದುಕಬೇಕಿತ್ತು ಅವರು.