ಬೆಳಗಿನ ಸೂರ್ಯ ಆಗಲೇ ತೇಲಿ ಬಂದು ೩ನೇಅಂತಸ್ತಿನಲ್ಲಿರೊ ಅವನ ಮನೆಯ ಕಿಟಕಿಯಲ್ಲಿ ಇಣುಕುತ್ತಿದ್ದ, ಹೆಂಡತಿ ಮಗ ಇನ್ನೂ ಸುಖ ನಿದ್ರೆಯಲ್ಲಿದ್ರು. ಬ್ರಾಹ್ಮೀ ಮಹೂರ್ತದಲ್ಲಿ ಏಳಬೇಕಂದು ಎಷ್ಟೋ ಸಲ ಅನ್ನಿಸಿದರೂ ಸಾಧ್ಯವಾಗಿಲ್ಲ. ತಿಂಗಳದ ಮೊದಲ ವಾರವಾದ್ದರಿಂದ ಖುಷಿಯಾಗಿದ್ದ. ರೂಡಿಯಂತೆ ತನ್ನ ಮೊಬೈಲಿನ ಸ್ಕ್ರೀನ್ ಆನ್ ಮಾಡಿದ ಸಾಲು ಸಾಲಾಗಿ ಸಂದೇಶಗಳು ಬಂದಿದ್ವು ಎಲ್ಲವೂ ಸಾಲಕ್ಕೆ ಸಂಭದಿಸಿದ್ದವೆ. ಮನೆಯಲ್ಲಿರುವ ಪ್ರಿಡ್ಜ್, ವಾಷಿಂಗ್ ಮೆಷಿನ್, ಎಲ್ಇಡಿ ಟಿವಿ ಗಳೆಲ್ಲವೂ ಕಂತಿನ ಸರಕುಗಳೆ. ಒಂದೇ ಸಲಕ್ಕೆ ಅವುಗಳ ಕಂತು ಡೆಬಿಟ್ ಆಗಿದ್ದು ತಿಳಿದು ಒಂದು ಕ್ಷಣ ಮ್ಲಾನಗೊಂಡ.
ಮೊಬೈಲ ಬದಿಗೆಸೆದು ಮಂಚದಿಂದ ಎದ್ದ, ಪುಸ್ತಕಗಳ ಕಡೆ ತಲೆ ಹಾಕಿ ಅದೆಷ್ಟೋ ದಿವಸಗಳಾಯ್ತೆಂದು ಷೋ ಕೇಸ್ನಲ್ಲಿರೊ ಪುಸ್ತಕಗಳ ಮೇಲೆ ಕೈಯಾಡಿಸಿದ. ಭಗವದ್ಗೀತೆ, ಸ್ವಾಮಿ ವಿವೇಕಾನಂದರು, ಸ್ವಾಮಿ ಅಭೇದಾನಂದರು, ಓಶೋ, ರವಿ ಬೆಳಗೆರೆಯ ಅದೆಷ್ಟೋ ಬಾಟಮ್ ಐಟೆಮ ಖಾಸ್ ಬಾತಗಳು, ಬೈರಪ್ಪನವರ ಉತ್ಕೃಷ್ಟ ತಾತ್ವಿಕ ಕಾದಂಬರಿಗಳು, ಕುಂವೀ, ಬೀಚಿ, ಜೋಗಿ, ತರಾಸು ರವರ ಕಾದಂಬರಿಗಳು, ಡಿವಿಜಿ ಯವರ ಮಂಕುತಿಮ್ಮನ ಕಗ್ಗ, ಯಶವಂತ ಚಿತ್ತಾಲರ ಶಿಕಾರಿ, ಅರವಿಂದ ಅಡಿಗನ ಖಿhe ವೈಟ್ ಟೈಗರ್, ಹಾಗೂ ಯೋಗದ ಪುಸ್ತಕಗಳಿಂದ ತುಂಬಿ ಹೋಗಿದೆ.
ಹೋದ ತಿಂಗಳು ಅಪ್ಪ ಬಂದಾಗ ಈ ಪುಸ್ತಕಗಳನ್ನು ನೋಡಿ ಕಿರುಚಾಡಿದ್ದು ನೆನಪಿಗೆ ಬಂತು. "ಇದೇ ಏನೊ ನಿನ್ನ ಸಾಧನೆ, ಈ ಹಾಳು ಪುಸ್ತಕ ಓದಿ ಏನ್ ಕಿತ್ತಾಕಿದಿಯೋ. ಎಷ್ಟ ದುಡ್ಡು ಗಳಿಸಿದಿ, ಎಲ್ಲಿ ಜಾಗ ತಗೊಂಡಿದಿ, ಯಾವ ಕಾರ ತಗೊಂಡಿದಿ? ನಿನ್ನ ವಯಸ್ಸಿನವರು ಊರಾಗ ಮನೆ ಕಟ್ಟಿದಾರ ನೀ ಏನ್ ಮಾಡಿದಿ, ಬರಿ ಸಾಲ ಅಂತಿಯಲ್ಲೋ?" ಎಂಬ ಅಪ್ಪನ ಪ್ರಶ್ನೆಗಳಿಗೆ ಇವನ ಬಳಿ ಉತ್ತರವಿರಲಿಲ್ಲ. ಈ ಪುಸ್ತಕಗಳೆಲ್ಲ ತನ್ನನ್ನು ಬೌದ್ಧಿಕವಾಗಿ ಬೆಳೆಸಿದೆಯೆಂದು ತಲೆ ಹೋಳಾಗಿಸಿ ಮೆದಳನ್ನು ತೋರಿಸಲೇ? ಅಪ್ಪ ಹೇಳಿದರಲ್ಲಿ ತಪ್ಪೇನಿಲ್ಲ ಅನ್ನಿಸಿತು. ಇದಾವುದನ್ನೂ ಓದದೇಯೂ ಕೇವಲ ಕೆಲಸ ಮಾಡುತ್ತ ಉದ್ದಾರಾದವರು ತುಂಬಾ ಜನ ಇದ್ದರಲ್ಲ: ಇದು ತನ್ನ ಹಚ್ಚುತನ ಎನ್ನಿಸತೊಡಗಿತು.
ಉಹುಂ ತಾನು ಪುಸ್ತಕದ ಕೀಡೆಯಲ್ಲ ಎಂದು ಬಾಲ್ಕನಿಯಲ್ಲಿ ನಿಂತು ಬೀದಿಯ ಕಡೆ ದೃಷ್ಟಿ ಹಾಯಿಸಿದ. ಎಲ್ಲವೂ ಸಾಮಾನ್ಯವಾಗಿದೆ. ಮೀನು ಮಾರುವ ಇಬ್ರಾಹಿಂ, ಏಳು ಗಂಟೆಗೆ ಚಾಚೂ ತಪ್ಪದೇ ಹಾಲು ಹಾಕಿ ಹೋಗುವ ಹಾಲಿನ ಹುಡುಗಿ ದೀಕ್ಷಾ, ಏಳನೇ ಕ್ಲಾಸಂತೆ ಪುಸ್ತಕ ನೋಡಿದರೆ ಗಬಕ್ಕನೆ ತಿರುವಿ ನೋಡುವ ಗುಣದವಳು, ಮಹಾಭಾರತ ಪುಸ್ತಕ ತಗೊಂಡು ಹೋದದ್ದು ನೆನಪಾಗಿ ಈ ರೈತನ ಮಗಳೂ ಪುಸ್ತಕದ ಕ್ರಿಮಿಯಾದಳೆ ಎಂದು ಯೋಚಿಸತೊಡಗಿದ. ಕೋಶ ಓದಿದ್ದು ಎಷ್ಟು ಸತ್ಯವೋ ದೇಶ ಸುತ್ತಿದ್ದೂ ಅಷ್ಟೇ ಸತ್ಯ. ಪಶ್ಚಿಮ ಘಟ್ಟದ ಈ ಜಿಲ್ಲೆಯಲ್ಲಿ ಬೈಕಿನ ಮೇಲೆ ಒಬ್ಬಂಟಿಯಾಗಿ ಎಲ್ಲೆಲ್ಲೋ ತಿರುಗಿದ್ದಿದೆ, ಮೇಲ್ಜಾತಿಯವನ ದಡ್ಡತನ, ಕೀಳ್ಜಾತಿಯವನ ಅಂಜಬುರುಕತನ, ಬಡವನ ಸ್ನೇಹ, ಶ್ರೀಮಂತನ ಅಹಂ ಎಲ್ಲವನ್ನೂ. ಅನುಭವಿಸಿಯಾಗಿದೆ. ಸಾಹಿತ್ಯ ಕೇವಲ ಮಾಧ್ಯಮವಷ್ಟೆ. 'ಹೊಟ್ಟೆ ಮಾತ್ರ ಬಿಡಬ್ಯಾಡವೋ ಮಾರಾಯಾ ವಾಮನಾವತಾರದಂತೆ ಕಾಣಿಸ್ತಿಯ' ಎಂದು ತನ್ನ ಸುಂದರ ಹೆಂಡತಿ ರೇಗಿಸಿದ್ದು ನೆನಪಾಗಿ ಸೊಂಟದ ಬಳಿ ಕೈಯಾಡಿಸಿದ ಬೊಜ್ಜು ಬೆಳೆಯುತ್ತಿತ್ತು. ಅದೆಷ್ಟು ದಿನ ಆಯ್ತು ಓಡಿ ಕ್ಯಾಸ್ವಾಸ್ ಷೂ ಧೂಳು ಹಿಡಿದಿದೆ. ನಾಳೆಯಿಂದ ಶುರು ಮಾಡಬೇಕೆಂದುಕೊಂಡ. ಏನಾಗಿದೆ ತನ್ನ ಮನಸ್ಥಿತಿಗೆ, ಸುಖಕ್ಕೂ ದುಃಖಕ್ಕೂ ದುಡ್ಡೇ ಕಾರಣವೇ? ಬ್ಯಾಂಕ್ ಬ್ಯಲೆನ್ಸ್ ಆ ಕಡೆ ಅಳುತ್ತಿದೆ ಈ ಕಡೆ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯೂ ಬೆಳೆಯುತ್ತಿದೆ. ಎಲ್ಲ ರೋಗಗಳ ಮೂಲವೂ ಮಾನಸಿಕತೆಯೆಂದು ಎಲ್ಲೋ ಓದಿದ ನೆನಪು. ಎದ್ದು ಡೈನಿಂಗ್ ಹಾಲ್ ನ ಸಿಂಕ್ ಎದುರುಗಡೆ ನಿಂತು ಕನ್ನಡಿಯಲ್ಲಿ ಮುಖ ನೋಡಿಕೊಂಡ ಕಣ್ಣ ಕೆಳಗೆ ಕಪ್ಪು ಪರದೆ ವಯಸ್ಸು ಇನ್ನೂ ಮೂವತ್ತರ ಒಳಗೆ; ಇಷ್ಟು ಬೇಗ ಮುಪ್ಪು ಆವರಿಸತೊಡಗಿತೆ? ದಿಗ್ಭ್ರಾಂತನಾದ.
ಸ್ವಲ್ಪ ಹೊತ್ತಿನ ನಂತರ ನಗುಮೊಗದೊಂದಿಗೆ ಮಗ ಎದ್ದ, ಅದೇ ಮುಗ್ಧತೆ ನಿರ್ಲಿಪ್ತತೆ ಇಡಿ ಬ್ರಂಹಾಡದ ಸುಖಗಳನ್ನೆಲ್ಲಾ ತನ್ನಲ್ಲೇ ಬಚ್ಚಿಟ್ಟುಕೊಂಡಿರುವ ದೇವತೆಯಂತೆ. 'ಪಾ' ಎಂದು ತೊಡೆಯ ಮೇಲೆ ಕೂತ. ತನ್ನಿಂದ ಈಡೇಲರಾದ ಎಲ್ಲಾ ಕನಸುಗಳನ್ನು ಮಗನ ಕಣ್ಣಲ್ಲೆ ಕಾಣುವ ದಡ್ಡ ಬಡ್ಡಿ ಮಕ್ಕಳ ನಡುವೆ ತಾನೂ ಒಬ್ಬ!! ಇನ್ನು ಹೆಂಡತಿಯ ಸರದಿ ರಜೆ ದಿವಸ ಅವಳು ಏಳುವುದೇ ಎಂಟು ಗಂಟೆಗೆ ಇಲ್ಲದಿದ್ದರೆ ಕಿರಿಕಿರಿ ಶುರು. ಹಳ್ಳಿಯಲ್ಲಿ ಬೆಳೆದರೂ ರೈತನ ಮಗಳಾಗಿಯೂ ಯಾವುದೇ ಕಷ್ಟ ಸವೆಸಿ ಗೊತ್ತಿಲ್ಲ ಅದಕ್ಕೇ ಅವಳು ತರುವ ಬೇಡಿಕೆಯ ಚೀಟಿ ಇವನ ಬೆವರಿಳಿಸುತ್ತದೆ. ಬೀಚು , ಪಾರ್ಕು, ಗೋಬಿ ಮಂಚೂರಿ, ಪಂಜಾಬಿ ಥಾಲಿ, ಮಗನ ಹಗ್ಗೀಸ್ ಹೀಗೆ ಮುಗಿದಿತ್ತು ಆ ರವಿವಾರ.
ರಾತ್ರಿ ಹನ್ನೊಂದು ಘಂಟೆ, ಮಗ ರಂಪ ಮಾಡಿ ಈಗ ನಿಧಾನವಾಗಿ ನಿದ್ರಾದೇವತೆಯ ತೆಕ್ಕೆಗೆ ಜಾರಿದ್ದ ಹೆಂಡತಿಯದ್ದೂ ಅದೇ ಸ್ಥಿತಿ ಇವನಿಗೆ ನಿದ್ರೆ ಬರಲೊಲ್ಲದು; ಕೆಲವೊಮ್ಮೆ ಮನುಷ್ಯನಿಗೆ ತಾನು ಒಳ್ಳೆಯವನೆನಿಸಿಕೊಳ್ಳುವ ಚಟ ಶುರುವಾಗುತ್ತೆ ಅದೇ ಕಾರಣಕ್ಕೆ ಬೇರೆಯವರ ಸಹಾಯಕ್ಕಾಗಿ ಅವರ ಮುಂದೆ ದೊಡ್ಡಸ್ತಿಕೆ ತೋರಿಸಲು ನಾವೇ ಸಾಲ ಮಾಡಿಕೊಂಡಿರುತ್ತೆವೆ. ಆದರೂ ಶಹರುಗಳಿಂದ ಹಳ್ಳಿಗಳಿಗೆ ಹೋದಾಗಲೆಲ್ಲ ಜೀನ್ಸ ಕಿಸೆಯಿಂದ ಸ್ಮಾರ್ಟ್ ಫೋನ್ ತೆಗೆದು ಏನೋ ಕಂಪೆನಿಯ ಮಹತ್ವದ ಮೇಲ್ ಬಂದಿದೆಯೆಂದು ಪೋಸ್ ಕೊಟ್ಟು ಅದೇ ಹಳಸಲು ವಾಟ್ಸ್ ಅಪ್ ಮೆಸೇಜ್ ಗಳನ್ನು ಓದುತ್ತಿರುತ್ತೇವೆ. ನಮ್ಮದೇ ಆದ ನಾಟಕೀಯ ಜೀವನ ಶುರು ಮಾಡಿಕೊಂಡಿರುತ್ತೆವೆ ; ಅಲ್ಲಿಂದಲೇ ಶುರುವಾಗೋದು ಎಡವಟ್ಟು.
ಈಗೀಗ ತಾನು ಮಲಗುವುದು ಮಧ್ಯರಾತ್ರಿಯ ವೇಳೆ ಬರೀ ಭೂತ ಭವಿಷತ್ತಿನಲ್ಲೇ ಮಗ್ನನಾಗಿರುವನಂತೆ ಭಾಸವಾಗತೊಡಗಿತು ಅವನಿಗೆ. ಏನೋ ಹೊಳೆದವನಂತೆ ಫೋನ ಹೊರತೆಗೆದು ಡಾಟಾ ಆಫ್ ಮಾಡಿದ, ಫೇಸ್ ಬುಕ್ ಅನ್ನು ನಿಷ್ಕ್ರಿಯಗೊಳಿಸಿದ. ಮುಂಬಯಿನ ಕೊಳಗೆರಿಗಳು, ಹಳೆ ದೆಹಲಿಯ ಫುಟಪಾತುಗಳು, ಚೆನ್ನೈ ರೈಲ್ವೆ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಮಲಗಿರುವ ಉತ್ತರ ಭಾರತದ ಕಾರ್ಮಿಕರು ನೆನಪಾಗತೊಡಗಿದರು ಒಮ್ಮೆ ನಿಟ್ಟುಸಿರಿಟ್ಟ. ತನ್ನ ತಲೆಯ ಮೇಲೆ ಸೂರಿದೆ, ಹೊಟ್ಟೆ ಭರ್ತಿಯಾಗಿದೆ, ತನ್ನ ಕುಟುಂಬ ಸುರಕ್ಷಿತವಾಗಿದೆ!! ಐದು ನಿಮಿಷ ಭ್ರಮರಿ ಮಾಡಿ 5 ಘಂಟೆಗೆ ಅಲಾರ್ಮ್ ಸೆಟ್ ಮಾಡಿ ಮಲಗಿ ಬಿಟ್ಟ. .
5:30ಕ್ಕೆ ಕಾಲನಿಯ ಗ್ರೌಂಡಲ್ಲಿ ಎರಡು ಸುತ್ತು ಹಾಕುವಷ್ಟರಲ್ಲಿ ಹೈರಾಣಾಗಿ ಹೋದ. ಇನ್ನು ರಮ್ಮ ಹಾಕೋದು ಬಿಡಬೇಕೆಂದುಕೊಂಡ ಸಾರಾಯಿ ಯಾವುದಾದರೂ ಸರಿ ಮೊದಲು ಸುಡುವುದು ಕರುಳನ್ನೇ ಅಲ್ಲವೆ! ಒಂದು ಕಡೆ ಕುಳಿತು ಸುಧಾರಿಸಿಕೊಳ್ಳತೊಡಗಿದ ಅಷ್ಟರಲ್ಲಿ ಕಾಲನಿಯ ಕೆಲ ಮಧ್ಯವಯಸ್ಕ ಮಹಿಳೆಯರ ದಂಡು ವಾಕಿಂಗ್ ಮಾಡುತ್ತ ಕಿಲ ಕಿಲ ನಕ್ಕಿದ್ದು ಕೇಳಿ ಕಿವಿಯಲ್ಲಿ ಗಾಳಿ ಹೊಕ್ಕ ಕರುವಿನ ಹಾಗೆ ಮೈದಾನ ಬಿಟ್ಟು, ಗೇಟಲ್ಲಿರೊ ಸೆಕ್ಯುರಿಟಿ ನಮಸ್ತೆ ಸರ್ ಎಂದುದನ್ನೂ ಕೇಳಿಸಿಕೊಳ್ಳದೆ ಒಂದೇ ಸಮನೆ ಓಡಿದ. ಪರಶುರಾಮನ ಸೃಷ್ಟಿಯಿದು ಸಮತಟ್ಟಾದ ಭೂಮಿ ಸಿಗೋದೇ ಇಲ್ಲ. ತಗ್ಗು ದಿನ್ನೆಗಳು ಎಗ್ಗಿಲ್ಲದೆ ದಾಟಿ ಒಂದು ಹಂತದಲ್ಲಿ ಬಳಲಿ ಬೀಳುತ್ತೇನಂದೆನ್ನೆಸ್ಸಿದರೂ ಬಿಡದೆ ವೇಗ ಹೆಚ್ಚಿಸಿದ, ಚರ್ಮದ ಪ್ರತಿ ರಂಧ್ರದಲ್ಲೂ ಬೆವರು ಒಸರತೊಡಗಿತು, ಟ್ಯಾಂಕಿ, ಮರಕಡ ದಾಟಿ ಬಜಪೆ ಕಡೆ ತಿರುಗಿ ಅರ್ಧ ಕಿಲೊಮೀಟರಲ್ಲಿ ಸಿಗೊ ಮರವೂರು ಸೇತುವೆಯ ಮೇಲೆ ತಲೆ ಬಗ್ಗಿಸಿ ಏದುಸಿರು ಬಿಡುತ್ತ ನಿಂತು ಬಿಟ್ಟ. ಬೆವರಿನ ಪ್ರತಿಯೊಂದು ಹನಿಯಲ್ಲೂ ತನ್ನಲ್ಲಿದ್ದ ನಕಾರಾತ್ಮಕ ಅಂಶಗಳೆಲ್ಲವೂ ಹೊರಹೋಯಿತು, ಮನಸ್ಸು ಪ್ರಫುಲ್ಲಗೊಂಡಿತು. ಒಂದೇ ದಿವಸಕ್ಕೆ ಇಷ್ಟು ಓಡಿದರೆ ನಾಳೆ ಬೆಳಗ್ಗೆ ಕಕ್ಕಸಿಗೆ ಹೋಗುವುದು ಕಷ್ಟವಾಗುತ್ತದೆಯೆಂದು ವಿಲಕ್ಷಣ ನಗೆ ನಕ್ಕು ಅಲ್ಲೇ ನಿಂತು ಸುಧಾರಿಸಿಕೊಂಡ, ಆಗಷ್ಟೇ ಏರ್ ಪೋರ್ಟ್ ನಿಂದ ಲೋಹದ ಹಕ್ಕಿ ಪ್ರಯಣಣಿಕರನ್ನು ಹೊತ್ತು ಆಗಸಕ್ಕೆ ಹಾರಿತು. ಬೆಳಂಬೆಳಗ್ಗೆ ನದಿಯಲ್ಲಿ ಮರಳುಗಾರಿಕೆ ಎಥೆಚ್ಚವಾಗಿ ನಡೆಯುತ್ತಿದೆ ಈ ಸೇತುವೆಯ ಇನ್ನೊಂದು ತುದಿ ಮುಗಿದ ಮೇಲೆ ಮರಳು ತೆಗೆಯುವ ಕಾರ್ಮಿಕರ ಗುಡಿಸಲುಗಳಿವೆ. ಅಲ್ಲಿ ಹೋಗಿ ಕುಳಿತು ಕಾರ್ಮಿಕನೊಬ್ಬನನ್ನು ಮಾತಿಗೆಳೆದ. ಜಾರ್ಖಂಡದನಂತೆ "ಧೋನಿ ಸಾಲಾ ಹಮಾರಾ ಗಾಂವ ಕಾ ಹೈ" ಎಂದು ಬೀಗಿದ, ಮೂವರು ಮಕ್ಕಳ ತಂದೆ; ಎಲ್ಲರನ್ನೂ ಎಲ್ಲವನ್ನೂ ಧಿಕ್ಕರಿಸಿ ಕೂಲಿಗಾಗಿ ರೈಲು ಹತ್ತಿ ಬಂದು ಬಿಟ್ಟಿದ್ದ. ಮಕ್ಕಳ ವಿಷಯ ಬಂದಾಗ ಅವನ ಕಠೋರವಾದ ಮುಖದಲ್ಲೂ ಮಂದಹಾಸ ಮೂಡಿತು, ಹರ್ಷಗೊಂಡವನಂತೆ ತಾನೂ ಮಗುವಾಗಿ ಹೋದ, ಮತ್ತೆ ಗಂಭೀರವಾಗಿ ನದಿಯ ನೇರಕ್ಕೆ ದೃಷ್ಟಿ ನೆಟ್ಟು "ಉನಕೊ ಪಡಾಯೆಂಗೆ ನಾ ಸಾಬ್ ಬಹುತ್ ಪಡಾಯೆಂಗೆ ಉನಕೊ" ಎಂದು ಎದ್ದು ನದಿಯಲ್ಲಿ ಕಾಯುತ್ತಿರುವ ಬೋಟು ಹತ್ತಿದ. ತನ್ನನ್ನು ತಾನು ಉಸಿರುಗಟ್ಟಿಸಿ ನದಿಯ ತಳಕ್ಕಿಳಿದು ಮರಳು ತೆಗೆಯುವ ಕಾಯಕವದು :ನಮ್ಮ ನಮ್ಮ ಮನೆಯ ಪ್ರತಿಯೊಂದು ಕಣಕಣದಲ್ಲೂ ಬಡವನೊಬ್ಬನ ಉಸಿರಿದೆ ನೆನಪಿರಲಿ.
ಬೆಳಗಿನ ಸೂರ್ಯ ಇಂಚಿಂಚಾಗಿ ಮೇಲೆರುತ್ತ ತನ್ನನ್ನು ನೋಡಿ "ಶಹಬ್ಬಾಸ್ ಮಗನೇ ಶಹಬ್ಬಾಸ್ ಒಂದೇ ದಿನಕ್ಕೆ ಸುಸ್ತಾಗಬೇಡ ದಿನಾಲೂ ಶುರು ಹಚ್ಕೊ "ಅಂದಗಾಯ್ತು. ತಾನೂ ಸಿರಿವಂತ, ಭಾಗ್ಯವಂತ, ಪುಣ್ಯವಂತ ಹಾಗೂ ಸುಖಿ ಮನುಷ್ಯ ಎಂದೆನಿಸಿ ಅರ್ಜಿತ್ ಸಿಂಗನ ಹಾಡು ಕೇಳುತ್ತಾ ಮನೆಯ ದಾರಿ ಹಿಡಿದ. . . .