ನನ್ನ ಸ್ನೇಹಿತನೊಬ್ಬ ಸೇನೆಯಲ್ಲಿದ್ದಾನೆ. ಕಳೆದ ವಾರವಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದಾನೆ. ಅವನಿಗೆ ಅವನ ತಂಗಿಯ ಕಡೆಯವರು ಅವನ ಮದುವೆಯ ವಾರ್ಷಿಕೋತ್ಸವ ಸಮಾರಂಭಕ್ಕೆಂದು ಸ್ವಲ್ಪ ದುಬಾರಿ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದನ್ನು ಹೆಚ್ಚಿಗೆ ಅನ್ನಿಸುವಷ್ಟು ಉಬ್ಬಿಕೊಂಡು ನನ್ನ ಬಳಿ ಹೇಳಿಕೊಂಡ. ಇಂದು ತನಗೆ ಸಿಕ್ಕ ಈ ಅನಿರೀಕ್ಷಿತ ಉಡುಗೊರೆಯ ಹಿನ್ನೆಲೆಯನ್ನು ಹೇಳಿಕೊಂಡ. ಅದು ಮುಂದಿನಂತಿದೆ. ಕಳೆದ ಎರಡು ವಾರದ ಯಾವುದೋ ದಿನ ಅಕ್ಷಯ ತೃತೀಯವಂತೆ. ಅಂದು ಅವನ ಹೆಂಡತಿ ’ರೀ ಇವತ್ತು ಅಕ್ಷಯ ತೃತೀಯ ಜಾಸ್ತೀ ಅಲ್ಲದಿದ್ದರೂ ಚೂರು ಚಿನ್ನವನ್ನಾದರೂ ಖರೀದಿಸಿದರೆ ತುಂಬಾ ಒಳ್ಳೆಯದು’ ಎಂದಳಂತೆ. ಅಷ್ಟಕ್ಕೆ ಅವಳ ಆಜ್ಞೆಗೋ ಪ್ರೀತಿಗೋ ಮರುಳಾದ ಇವನು ಅಂದು ಪಟಿಯಾಲಾದಿಂದ (ಅವನು ಈಗ ಸೇವೆ ಸಲ್ಲಿಸುತ್ತಿರುವುದು ಹರ್‍ಯಾಣದ ಅಂಬಾಲಾದಲ್ಲಿ) ಮುನ್ನೂರು ರೂಪಾಯಿಗಳ ಮೂಗುನತ್ತನ್ನು ತಂದುಕೊಟ್ಟು ತೃಪ್ತಿಪಡಿಸಿದನಂತೆ. ಅದರ ಫಲವಾಗಿಯೇ ಇಂದು ಈ ದುಬಾರಿ ಉಂಗುರವೆಂದು ಹಿಗ್ಗುತ್ತಿದ್ದ. ನನಗೆ ನಗು ಬಂತು. ಅವನಿಗೇ ಗೊತ್ತಿರುವ ಅಥವಾ ಅವನೇ ಮರೆತಿರುವ ಒಂದು ಕತೆಯನ್ನು ಹೇಳಿದೆ.
ತುಂಬಾ ಹಿಂದೆ ಅಂದರೆ ನಾನು ನನ್ನ ಸ್ನೇಹಿತ ಸ್ಕೂಲಿಗೆ ಹೋಗುತ್ತಿದ್ದ ದಿನಗಳೋ, ಅಥವಾ ಬಾರ್ ಬೆಂಡಿಂಗ್, ಸೆಂಟ್ರಿಂಗ್, ಹೂ, ಸೊಪ್ಪು ಮಾರುವ ಕೆಲಸಕ್ಕೆ ಹೋಗುತ್ತಿದ್ದ ದಿನಗಳು. ದಾರಿಯಲ್ಲಿ ಸಿಕ್ಕ ಸಿಕ್ಕ ಕರಪತ್ರಗಳನ್ನು ಎತ್ತಿಕೊಂಡು ಓದುತ್ತಿದ್ದೆವು. ಹಾಗೆ ಸಿಕ್ಕ ಎಷ್ಟೋ ಕರಪತ್ರಗಳು ಒಂದೇ ಕತೆಯನ್ನು ಹೇಳುತ್ತಿದ್ದವು. ಅದೇನೆಂದರೆ; ಯಾವುದೋ ರಾಜ್ಯದ ಕುಗ್ರಾಮದ ದೇವಾಲಯದ ಪೂಜಾರಿಗೆ ಇದ್ದಕ್ಕಿದ್ದಂತೆ ಅಶರೀರವಾಣಿಯೋ ಅಥವಾ ಹಾವೋ ಕಾಣಿಸಿಕೊಂಡು ’ನಾನು ಅತೀ ಶೀಘ್ರದಲ್ಲಿ ಭೂಮಿಯಲ್ಲಿ ದೈವವಾಗಿ ಕಾಣಿಸಿಕೊಂಡು ಲೋಕ ಕಲ್ಯಾಣ ಮಾಡುತ್ತೇನೆ. ಆದ್ದರಿಂದ ಈ ವಿಷಯ ಎಲ್ಲ ಕಡೆಯೂ ಪ್ರಚಾರವಾಗಬೇಕು. ಅದಕ್ಕಾಗಿ ನೀನು ಈ ಕೂಡಲೆಕೀ ವಿಷಯವನ್ನು ಕುರಿತು ಕನಿಷ್ಟ ಎರಡು ಸಾವಿರ ಕರಪತ್ರಗಳನ್ನು ಮುದ್ರಿಸಿ ಹಂಚಬೇಕು. ಅಲ್ಲದೇ ಆ ಕರಪತ್ರವನ್ನು ಯಾರು ಓದುತ್ತಾರೋ ಅವರೂ ಕೂಡ ಹಾಗೆಯೇ ಮಾಡಬೇಕು. ಇದೆಲ್ಲಾ ಬೂಟಾಟಿಕೆ ಎಂದು ಉಪೇಕ್ಷೆ ಮಾಡಿದರೆ ಊಹಿಸಲು ಅಸಾಧ್ಯವಾದ ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ಹೇಳಿತು ಎಂಬ ಕತೆಯೇ ಇರುತ್ತಿತ್ತು.
ಎಲ್ಲವನ್ನೂ ಟೀಕೆಯ ಧಾಟಿಯಲ್ಲಿ ನೋಡುತ್ತಿದ್ದ ನಮಗೆ ಈ ಕರಪತ್ರದ ಹಿಂದಿನ ಹುನ್ನಾರ ತಿಳಿಯಲು ಹೆಚ್ಚಿನ ಸಮಯವೇನೂ ಹಿಡಿಯಲಿಲ್ಲ. ಅದಾಗ ತಾನೇ ಫ್ಲೆಕ್ಸ್ ಬ್ಯಾನರ್, ಡಿಜಿಟಲ್ ಪ್ರಿಂಟ್ಸ್ ಕಾಲಿಟ್ಟಿದ್ದ ಕಾಲ. ಆ ತಂತ್ರಜ್ಞಾನದ ಭರಾಟೆಗೆ ಸಣ್ಣಮಟ್ಟದ ಮುದ್ರಣ ಉದ್ಯಮ ನೆಲಕಚ್ಚುವ ಸ್ಥಿತಿಯನ್ನು ತಲುಪಿತ್ತು. ಅದರ ಏಳಿಗೆಯ ಪರಿಹಾರವಾಗಿ ಯಾವುದೋ ಅಸಾಮಾನ್ಯ ವ್ಯಕ್ತಿಗೆ ಈ ಉಪಾಯದ ಕತೆ ಹೊಳೆದು ಕತೆ ಕಟ್ಟಿದ್ದ. ಅದರ ಫಲವಾಗಿ ಕರಪತ್ರ ಓದಿದ ದುರ್ಬಲ ಮನಸ್ಸಿನ ಅನೇಕ ವ್ಯಕ್ತಿಗಳು ಎರಡು ಸಾವಿರವಲ್ಲ, ಎರಡು ಲಕ್ಷ ಕರಪತ್ರಗಳನ್ನು ಪ್ರಿಂಟ್ ಮಾಡಿಸಿದ್ದರೂ ಆಶ್ಚರ್ಯವಿಲ್ಲ.
ಇದೇ ಹುನ್ನಾರವನ್ನು ಅಕ್ಷಯ ತೃತೀಯ ದಿನವನ್ನೂ ಆವರಿಸಿದ್ದರೆ ಆಶ್ಚರ್ಯವೂ ಇಲ್ಲ, ಅತಿಶಯೋಕ್ತಿಯೂ ಇಲ್ಲ ಎನ್ನಬಹುದು. ಹಣದುಬ್ಬರ ಮತ್ತು ಚಿನ್ನ-ಬೆಳ್ಳಿ ಬೆಲೆಗಳು ಪಾತಾಳಕ್ಕೆ ಇಳಿದ ಕಾರಣಕ್ಕೆ ಈ ಅಕ್ಷಯ ತೃತೀಯ ಎಂಬ ದಿನ ಹುಟ್ಟಿಕೊಂಡದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಎಂದು ಅವನನ್ನು ಸಮಾಧಾನ ಮಾಡಿದೆ. ಅವನ ಮುಖ ಸಪ್ಪೆಯಾಯಿತು. ತಕ್ಷಣ ’ಯಾವ್ ಥಿಯರೀ ಎಂಗಾದ್ರೂ ಹಾಳಾಗೋಗ್ಲೀ ಬಿಡೋ, ನಿಂಗಂತೂ ಇವತ್ತು ಒಳ್ಳೇದೇ ಆಯ್ತು’ ಎಂದು ಅವನ ಸಪ್ಪೆ ಮುಖಕ್ಕೆ ಒಂದು ಕಲ್ಲು ಉಪ್ಪು ಹಾಕುವ ಪ್ರಯತ್ನ ಮಾಡಿದೆ. ನನ್ನ ಗೆಳೆಯರಾದ ನಾಗತಿಹಳ್ಳಿ ರಮೇಶ್ ಅವರ ’ಸಪ್ಪೇ ಅನ್ಬೇಡ; ಒಂದ್ಕಲ್ ಉಪ್ಪಾಕನ್ನು’ ಎಂಬ ತತ್ವಪದ ನೆನಪಾಯ್ತು…
ನಿಜ ಸರ್…ಇಂತಹ ಎಷ್ಟೋ ಉಪದ್ವಾಪಿ ಮೂಢನಂಬಿಕೆಯನ್ನು ಬೆಂಬಲಿಸುತ್ತಿರುವ ಮೂಢರಿಗೆ ಜಾಗೃತಿಗೊಳಿಸಬೇಕಿದೆ….ಉತ್ತಮ ಮತ್ತು ಸಕಾಲಿಕ ಬರಹ…ವಾಸ್ತವದ ಕುರಿತು ಚಿಂತಿಸಲು ಪ್ರೇರೆಪಿಸಿದ ಬರಹ…ಶುಭದಿನ….
ಉತ್ತಮ ಲೇಖನ.
ಇದನ್ನು ಮೌಢ್ಯವೆನ್ನಬೇಕೋ ಮುಗ್ಧತೆಯೆನ್ನಬೇಕೋ ತಿಳಿಯುತ್ತಿಲ್ಲ.
ನಾಜೂಕಿನ ವಂಚನೆಗೆ ಜನರು ಬಲಿಪಶುಗಳಾಗುತ್ತಿದ್ದಾರೆ.
ಚಿನ್ನದ ವ್ಯಾಪಾರಿಗಳ ವ್ಯಾಪಾರಿ ಮನೋಭಾವದ ಕುಮ್ಮಕ್ಕಿನಿಂದಲೇ "ಅಕ್ಷಯ ತೃತೀಯ"ವೆಂಬ ಮಾರಾಟಜಾಲಕ್ಕೆ ಬಲಿಯಾಗುವುದು ದುರಂತವೇ ಸರಿ……ಲೇಖನ ಸಕಾಲಿಕ ಮತ್ತು ಜಾಗೃತಿಯುತವಾಗಿದೆ.
ಗೆಳೆಯರೇ, ಇಂತಹ ಹುಚ್ಚುತನಗಳ ನೇಣುಗಂಬಗಳು ಬೇಕಾದಷ್ಟಿವೆ…
ಉತ್ತಮ ಲೇಖನ.
ಆ ನೆಪದಲ್ಲಾದರೂ ಚಿನ್ನ ಕೊಳ್ಳಬಹುದು ಅಲ್ವೇ ಸರ್?. ಚೆನ್ನಾಗಿದೆ ಲೇಖನ ಧನ್ಯವಾದಗಳು ಸರ್ 🙂
ಮೂಢನಂಬಿಕೆಗಳ ಬಗ್ಗೆ ಮಾತಾಡಿದರೆ ನಿನಗೇನು ಗೊತ್ತೋ ಮೂಢಾ ಎಂದು ತಿರುಗೇಟು ನೀಡುವ ಜನರೇ ಹೆಚ್ಚು. ಒಳ್ಳೆಯ ಲೇಖನ. ಇಂಥಹ ಲೇಖನಗಳು ಇನ್ನಷ್ಟು ಬರಲಿ.
ಲೇಖನ ಚೆನ್ನಾಗಿದೆ ಸರ್. ಪಂಜು ಒತ್ರಿಕೆಯೂ ಆಕರ್ಷಕವಾಗಿದೆ:-)