ಅಕ್ಕಿ ಭಾಗ್ಯ….: ರಾಘವೇಂದ್ರ ತೆಕ್ಕಾರ್


ನನಗೆ ದೋಸೆ, ಇಡ್ಲಿ, ಕಡುಬು ಈ ತರದ ಅಕ್ಕಿತಿಂಡಿಗಳೆಂದರೆ ಪಂಚ ಪ್ರಾಣ. ಬೆಳಿಗ್ಗಿನ ಉಪಹಾರಕ್ಕೆ ಈ ಚೌ ಚೌ ಬಾತ್, ಬೇಳೆ ಬಾತ್,ಪೂರಿ, ಪಲಾವು, ರೈಸ್ ಬಾತ್ ಇವುಗಳೆಲ್ಲ ಅಷ್ಟಕಷ್ಟೆ. ಏನಿದ್ದರೂ ಅಕ್ಕಿ ರುಬ್ಬಿ ಮಾಡಿದ ತಿಂಡಿಗಳತ್ತಲೆ ನನ್ನೊಲುಮೆ. ಅಪರೂಪಕ್ಕೆ ಅನ್ನವನ್ನು ಲಿಂಬೂ ನೀರು ಹಿಂಡಿದ ಈರುಳ್ಳಿ ವಗ್ಗರಣೆಗೆ ಬೆರೆಸಿದ ಚಿತ್ರಾನ್ನ ತರದೆಂತದ್ದನ್ನೊ ತಿನ್ನುವದು ಇದೆ.ಈ ನನ್ನ ಚಪಲ ನನ್ನ ಮನೆಯಾಕೆಗೆ ನುಂಗಲಾರದ ತುತ್ತು. ಆ ಮಿಕ್ಸಿಯಲ್ಲಿ ಗಿರ ಗಿರ ಸದ್ದು ಮಾಡಿಸುತ್ತಾ ಅಕ್ಕಿ ರುಬ್ಬ ಬೇಕಾದುದು ಅದು ಸರಿಯಾದ ಹದಕ್ಕೆ ಸಣ್ಣವಾಗದೆ ಇರೋದು ಮಗು ಎದ್ದಿರೋದನ್ನು ನೋಡಿಕೊಂಡು ರುಬ್ಬ ಬೇಕಾದುದು ಇತ್ಯಾದಿ ಇತ್ಯಾದಿಗಳು ಅವಳಿಗೆ ತಲೆ ನೋವು ತರಿಸುವ ವಿಷಯಗಳು.ಹಾಗೆಂತ ಆಕೆಗೂ ನನಗಿಷ್ಟವಾದವುಗಳು ಇಷ್ಟವೆ, ಆದರೆ ಆ ಕೆಲಸ ಸರಿಯಾಗಿ ಅಡುಗೆ ಮಾಡಲು ಜಾಗವಿರದ ಕೋಣೆಯೊಂದನ್ನು ಮನೆಯಾಗಿ ಮಾರ್ಪಡಿಸಿದ ನಮ್ಮ ವಾಸಸ್ಥಳದಲ್ಲಿ ಮಾಡುವದೆಂದರೆ ಅತಿ ರಗಳೆ ಎಂಬುದು ಅವಳ ವಾದ. ಸರಿ ಬಿಡು ರೆಡಿಮೇಡ್ ಹಿಟ್ಟನ್ನೆ ತರೋಣವೆಂದು ಬೆಳಿಗ್ಗೆ ಹಾಲು ತರಬೇಕಾದರೆ ಹಿಟ್ಟಿನ ಪ್ಯಾಕೇಟ್ ಖರೀದಿಸಿ ತರೋದನ್ನ ಒಂದು ನಾಲ್ಕು ದಿನ ರೂಢಿಸಿಕೊಂಡೆ. ಅದ್ಯಾಕೊ ಮನೆ ಹಿಟ್ಟಿನ ತಿಂಡಿ ರುಚಿಗೆ ರೀಚ್ ಆಗಲೆ ಇಲ್ಲ.

ಅಸಲಿ ನನ್ನಾಕೆಗೆ ತಲೆ ನೋವಿನ ಕೆಲಸವಾಗಿದ್ದು ಮಿಕ್ಸಿ ಸೌಂಡು ಅಲ್ಲ ಅಥವಾ ಇನ್ಯಾವುದೆ ಮೇಲೆ ವಾದಕ್ಕೆ ಬಿದ್ದ ಆಕೆಯ ರಗಳೆಗಳು ಅಲ್ಲ. ಆಕೆಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದುದು ಮನೆಯನ್ನು ನಡೆಸಬೇಕಾದ ಆರ್ಥಿಕತೆಯನ್ನು ಹೊಂದಿಸುವದು. ಗಂಡನೆಂಬ ಪ್ರಾಣಿಯ ಜಿಹ್ವಾ ಚಪಲ ತೀರಿಸಲು ಊಟದ ಕೆ ಜಿ ಗೊಂದರ 52 ರುಪಾಯಿಯ ಅಕ್ಕಿಯನ್ನು ರುಬ್ಬಲು ಬಳಸುವದೆ ಆಗಿತ್ತು ಎಂಬುದು ನಾನು ಬೆಂಗಳೂರಿಗೆ ಪ್ಯಾಮಿಲಿ ಸಮೇತ ಶಿಪ್ಟ್ ಆದ ಕೆಲವೆ ದಿನಗಳಲ್ಲಿ ತಿಳಿಯಿತು.ಒಂದು ಸಂಜೆ ಇದ್ದಕ್ಕಿಂದ್ದಂತೆ ಸ್ವಲ್ಪ ಮಗುನ ನೋಡ್ಕೊಳ್ಳಿ ಎಂದು ಎಲ್ಲೊ ಸುತ್ತಿ ಕೆ ಜಿ ಗೊಂದರ 22 ರುಗಳ ಅಕ್ಕಿಯನ್ನ ತಲಾಸು ಮಾಡಿ ಸ್ಯಾಂಪಲ್ಗಾಗಿ  3 ಕೆ ಜಿ ತಂದಿದ್ದಳು. ಅಷ್ಟೆ ಅಲ್ಲ ಅಂಗಡಿ ಅಡ್ರೆಸ್ ನನ್ನ ಕೈಗಿಟ್ಟವಳೆ ಬರುವ ವಾರ ಇಲ್ಲಿಂದಲೆ ಈ ರೇಟಿನ ಅಕ್ಕಿಯನ್ನು ರುಬ್ಬಲು ತರಬೇಕೆಂದು ಕಟ್ಟಪ್ಪಣೆಯನ್ನು ಕೂಡ ಹೊರಡಿಸಿ ಬಿಟ್ಟಳೆನ್ನಿ. ಆ ಅಕ್ಕಿಯೊ ಬರೀ ಅಂಟಂಟು. ದೋಸೆ ಕಾವಲಿಗೆ ನಾನಂಟೋದು ಕಾವಲಿನೆ ದೋಸೆಗಂಟೋದೊ ಎಂಬ ಜಿದ್ದಾ ಜಿದ್ದಿಗೆ ಬೀಳುವಂತದ್ದು.ಹೆಂಗೊ ಕೆಲವು ಮಿಕ್ಸಿಂಗ್ ಪ್ರಯೋಗಗಳು ನಡೆದು ಒಂದು ತಹಬಂದಿಗೆ ಮುಂದಿನ ದಿನಗಳಲ್ಲಿ ಬಂದಿತ್ತು.ಅದರೂ…. ನಾಲಿಗೆ ರುಚಿಗೆ ಏನೊ ಒಂದು ಕೊರತೆ!! ನನ್ನ ಪ್ರಲಾಪಗಳು ಯಥಾಪ್ರಕಾರ ಮುಂದುವರೆದಿತ್ತು.

ಹಿಂಗಿರಬೇಕಾದರೆನೆ ಒಂದು ದಿನ ನಮ್ಮಲ್ಲಿಗೆ ಬರುವ ಕೆಲಸದಾಕೆ ಅಕ್ಕಿ ಏನಾದರು ಬೇಕ ಅಣ್ಣೊ ಅಂತ ಕೇಳಿರೋದು.ಬಹುಶಃ ನನ್ನಾಕೆ ಮತ್ತು ಅಕೆಯ ಲೋಕಭಿರಾಮದ ಪಟ್ಟಾಂಗದಲ್ಲಿ ನನ್ನ ಜಿಹ್ವಾ ಚಪಲದ ಸುಳಿವು ಆಕೆಗೆ ಸಿಕ್ಕಿರಬೇಕು. ನನ್ನಲ್ಲಿ ಹೀಗೊಂದು ಪ್ರಶ್ನೆ ಕೇಳಲು ಬಹುಶಃ ನನ್ನಾಕೆಯದೆ ಕುಮ್ಮಕ್ಕು ಇರಬೇಕೆಂದು ಅಂದುಕೊಂಡಿದ್ದೇನೆ. ಏನಮ್ಮ ಅಕ್ಕಿನಾ? ಎಲ್ಲಿಂದಮ್ಮ ಎಂದು ನಾ ಮರು ಪ್ರಶ್ನೆ ಹಾಕಿದ್ದೆ.ಅದೆಲ್ಲಿಂದಲೊ ಐತೆ ತತ್ತೀನಣ್ಣ ಎಷ್ಟು ಬೇಕು ಎಂದಿದ್ದಳು. ಅಲೆಲೆ ಪರವಾಗಿಲ್ವೆ ಅಂದು ಕೊಂಡು ಎಷ್ಟಮ್ಮ ಕೇಜಿಗೆ? ಎಂದಿದ್ದೆ. ಕಾಸು ಗೀಸು ಏನಣ್ಣ ಒಂದು 15 ರುಪಾಯಿ ಕೆ ಜಿ ಗೆ ಕೊಡು ಒಂದು 20 ಕೆಜಿ ತತ್ತೀನಿ ಅಂದಿದ್ದಳು.ನನ್ನಾಕೆಯ ಬಳಿ ವಿಷಯ ಪ್ರಸ್ತಾಪಿಸಲಾಗಿ ಹುಂ ಅನ್ನಿ ಊರಲ್ಲಿ ಅತ್ತೆ (ನನ್ನಮ್ಮ) ಕೂಡ ರುಬ್ಬಲು ಅದೆ ಅಕ್ಕಿ ಬಳಸೋದು, ಚೆನ್ನಾಗಿರುತ್ತೆ ಎನ್ನಲಾಗಿ ಹುಂ ಅಂದಿದ್ದೆ.ಮತ್ತೆ ಗೋದಿ ಬೇಡ್ವಾ? ಎನ್ನಲು ಹುಂ ಅದು ಒಂದೆರಡು ಕೇಜಿ ತಾರತ್ತಾಗೆ ಅಂದಿದ್ದೆ. ತತ್ತಿನಿ ಕಣಣ್ಣೊ ಸುಮ್ನೆ ಹಾಳಾಗುತ್ತೆ ಕೋಳಿಗೆ ಎಷ್ಟೂಂತ ಹಾಕೋಣ, ನೀವಾದ್ರೂ ಏನಾರ ಮಾಡ್ಕೊಂಡು ತಿಂತೀರ ಅಂತಂದೂ ಗೋದಿಗೆ ಒಂದು 20 ರುಪಾಯಿ ಕೊಡಣ್ಣೊ 2 ಕೆ ಜಿ ತತ್ತೀನಿ ಎಂದು ಕೊಟೇಷನ್ ಮುಂದಿಟ್ಟಿದ್ದಲ್ಲದೆ ನಮ್ಮನ್ನು ಅನಾಮತ್ತಾಗಿ ಪಶು ಪಕ್ಷಿಗಳ ಸಾಲಿಗೆ ಸೇರಿಸಿಬಿಟ್ಟಳಲ್ವೆ ಎಂದಂದುಕೊಂಡುಬಿಟ್ಟೆ.ಇರಲಿ ಫಾಯಿದ ನಮ್ ಕಡೆಗೆ ಇರಬೇಕಾದರೆ ಇದೆಲ್ಲ ತಲೆಗೆ ಹಚ್ಚಿಕೊಳ್ಬಾರದೆಂದು ಸುಮ್ಮನಾಗಿ ಬಿಟ್ಟೆ.

ಮರುದಿನದ ಮುಂಜಾನೆ ಅಟೋವೊಂದರಲ್ಲಿ ಅಕ್ಕಿ ಮೂಟೆಯೊಂದಿಗೆ ಹಾಜರಾಗಿ ಅಣ್ಣೋ…. ಎಂದು ಕೂಗು ಹಾಕಿದ್ದಳು. ಅಟೊ ಚಾರ್ಜ್ ಐವತ್ತು ರುಪಾಯಿ ಸಂದಾಯ ಮಾಡುವಂತೆ ತಿಳಿಸಿ ಅವಳ ಆಜ್ಞೆಯನ್ನು ಕಟ್ಟಾಗಿ ಪಾಲಿಸಿದ ನನ್ನ ತಲೆಯ ಮೇಲೆ ಆಕೆ ಸಾಗಿಸಿ ತಂದಿದ್ದ ಮೂಟೆ ಏರಿಸಿದ್ದಳು. ಅದನ್ನು ಹೊತ್ತುಕೊಂಡು ಬಂದು ಮನೆಯೊಳಗಿರಿಸಿ ಸ್ವಲ್ಪ ಉಸಿರಾಡಿ ಉಶ್ಶಪ್ಪ….. ಎಂದು ನನ್ನ ಮುಂಜಾವಿನ ಕೆಲಸ ಕಾರ್ಯಗಳತ್ತ ಗಮನ ಕೊಟ್ಟೆ. ನನ್ನಾಕೆಯ ಗೊರಕೆ ಸದ್ದು ಸುಪ್ರಭಾತ ಹಾಡುತಿತ್ತು.ಹೀಗೆ ರೇಷನ್ ಕಾರ್ಡ್ ರಹಿತವಾದ ನನ್ನ ಕುಟುಂಬವು ಬೆಂಗಳೂರಿನ ನಗರದಲ್ಲಿ ಅನ್ನ ಭಾಗ್ಯ ಸರ್ಕಾರದ ಯೋಜನೆಯೊಂದರ ಫಲಾನುಭವಿಗಳಾದೆವು.

ಅನ್ನಭಾಗ್ಯದ ಪರ ವಿರೋದದ ಬಗ್ಗೆ ಚರ್ಚೆಯ ದಿನಗಳಿವು. ಈ ದಿನಗಳಲ್ಲಿ ನನ್ನೀ ಮೇಲಿನ ಪ್ರಹಸನ ಎಷ್ಟು ಪ್ರಸ್ತುತ ಅನ್ನುವದನ್ನ ನಾ ತಿಳಿಯೆ. ಕಡಲೆಗಾಗಿ ಕಾಯುವ ಹಲ್ಲು ಇದ್ದೆ ಇರುತ್ತೆ ಅನ್ನುವದಂತು ನನ್ನ ಮೇಲಿನ ಪ್ರಹಸನದ ಮೂಲಕ ಸತ್ಯವಾಗಿದೆ.ಮದ್ಯಮ ವರ್ಗದ ಬದುಕಿನ ತುಣುಕಗಳ ಒಂದು ಎಳೆ ಮೇಲಿನ ಪ್ರಹಸನದಲ್ಲಿ ನಿಮಗೆ ಕಂಡೀತೆಂದು ನಾ ನಂಬಿದ್ದೇನೆ.ನಿಮ್ಮ ಮಧ್ಯ ಪ್ರದೇಶ ದೊಡ್ಡದಾಗುತ್ತಿದೆ ಎಂಬ ಸಲಹೆ ನನ್ನಾಕೆಯಿಂದ ಬಂದಿದೆ… ಸೋ ಮುಂದಾದರು ಅಕ್ಕಿ ತಿಂಡಿಯನ್ನ ಕಡಿಮೆ ಉಪಯೋಗಿಸಬೇಕೆಂದಿದ್ದೇನೆ ಬದಲಾಗಿ ಗೋದಿ ರಾಗಿ ಯನ್ನು ನೆಚ್ಚಿಕೊಳ್ಳಬೇಕೆಂದಿರಬೇಕಾದರನೆ ಮತ್ತೆ ಗೋದಿ ಬೇಡ್ವಾ? ಎಂದು ಆಕೆ ಕೇಳಿದ್ದು ನೆನಪಾಗಿ ನಿರಾಳನಾಗಿದ್ದೇನೆ. ತಿಂದು ತೇಗಬೇಕಿರುವದಷ್ಟೆ ಬಾಕಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Soory Hardalli
Soory Hardalli
8 years ago

anna bhagya rice is not clean and also contains insects. I have seen some consumer make powder of this and sell to others. After it became powder, who knows its qulaity?

chaithra
chaithra
8 years ago

ಅಕ್ಕಿಭಾಗ್ಯ ನಮೋ ನಮಃ….. ಚೆನ್ನಾಗಿದೆ……….

2
0
Would love your thoughts, please comment.x
()
x