ಅಂಬಿಕಾತನಯನ ಕಾವ್ಯಾನುಸಂಧಾನ: ಅಶ್ಫಾಕ್ ಪೀರಜಾದೆ

ದಿನಾಂಕ ೦೭/೦೧/೨೦೨೦ ರಂದು ಧಾರವಾಡದ ಬೇಂದ್ರೆ ಭವನದಲ್ಲಿ ವಿಜಯಶ್ರೀ ಸಾಹಿತ್ಯ ಪ್ರಶಸ್ತಿ ವಿಜೇತ ಯುವ ಸಾಹಿತಿ ಶ್ರೀ ಮಾರ್ತಾಂಡಪ್ಪ ಎಂ. ಕತ್ತಿಯವರು ರಚಿಸಿದ “ಅಂಬಿಕಾತನಯನ ಕಾವ್ಯಾನುಸಂಧಾನ” ಗ್ರಂಥ ಲೋಕಾರ್ಪಣೆಗೊಂಡಿತು. ಈ ಪ್ರಯುಕ್ತ ಕೃತಿ ಪರಿಚಯ ಇಲ್ಲಿದೆ.

ಈ ಕೃತಿಯಲ್ಲಿ ಕತ್ತಿಯವರು ಒಟ್ಟು ಮೂವತ್ತಾರು ಬೇಂದ್ರೆ ಕವಿತೆಗಳೊಂದಿಗೆ ಹೃದಯ ಸಂಪರ್ಕ ಸಾಧಿಸಿದ್ದಾರೆ. ವರ ಕವಿ ಬೇಂದ್ರೆಯವರ ವಿವಿಧ ಕಾವ್ಯ ಸಂಕಲನಗಳಿಂದ ಅತಿಮುಖ್ಯ ಅನಿಸುವ ಕವಿತೆಗಳನ್ನು ಅಯ್ದುಕೊಂಡು ಅದರೊಂದಿಗೆ ಅನುಸಂಧಾನ ನಡೆಸಿದ್ದಾರೆ. ನಾಕು ತಂತಿ, ಜೋಗಿ, ಪರಾಗ, ಏಲಾಗೀತ, ನನ್ನವಳು, ಹುಬ್ಬಳ್ಳಿಯಾಂವ, ಹೃದಯ ಸಮುದ್ರ, ಅನಂತ ಪ್ರಣಯ, ಗಂಗಾವತರಣ, ಯುಗಾದಿ, ಸಖಿಗೀತ, ಹಕ್ಕಿ ಹಾರುತಿದೆ ನೋಡಿದಿರಾ?, ಬೆಕ್ಕು ಹಾರುತಿದೆ ನೋಡಿದಿರಾ?, ನೀ ಹಿಂಗ ನೋಡಬ್ಯಾಡ ನನ್ನ, ಚಿಗರಿಗಂಗಳ ಚೆಲುವಿ, ಗಣಪತಿ, ನಾದಲೀಲೆ, ದೀಪ, ಕಾಮ ಕಸ್ತೂರಿ, ಶುಭ ನುಡಿಯ ಶಕುನದ ಹಕ್ಕಿ, ಗೃಹಿಣಿ, ರಾಗರತಿ, ಜನುಮದ ಜಾತ್ರಿ, ಕರಡಿ ಕುಣಿತ, ಚಿತ್ತಿ ಮಳೆಯ ಸಂಜೆ, ಅರಳು ಮರಳು ಹೀಗೆ ಇನ್ನು ಹಲುವಾರು ಕವಿತೆಗಳ ಅರ್ಥದ ಹುಡುಕಾಟಕ್ಕೆ ಕತ್ತಿಯವರು ತಮ್ಮನ್ನು ತಾವು ಒಡ್ಡಿಕೊಳ್ಳುವ ಮೂಲಕ ಒಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಬೇಂದ್ರೆಯವರ ಕವಿತೆಗಳು ಮೇಲ್ನೋಟಕ್ಕೆ ಸರಳ ಸುಂದರ ಎನಿಸಿದರೂ ಕಾವ್ಯ ಮಂಥನಕ್ಕೆ ಇಳಿದಾಗ ಅವು ಎಷ್ಟು ಕ್ಲಿಷ್ಟ ರಚನೆಗಳು ಎಂಬುದು ಅನುಭವಕ್ಕೆ ಬರುವ ಮಾತು.

ಬೇಂದ್ರೆಯವರಿಂದ ಜನ್ಮ ಪಡೆದ ಒಂದು ಶಬ್ಧ ಅಥವಾ ಒಂದು ಪದವೇ ಸಾಕಷ್ಟು ಅರ್ಥಗಳು ಹೊರ ಹೊಮ್ಮಿಸುವಾಗ ಇಡೀ ಕಾವ್ಯದ ಕತೆ ಕೇಳಬೇಕೆ?. ಹೀಗೆ ಒಂದು ಕವಿತೆಯಲ್ಲಿ ಅಡಗಿರುವ ಹಲುವಾರು ಅರ್ಥ ಸಾದ್ಯತೆಗಳನ್ನು ಒಂದೇ ಸಾರಿಗೆ ಗಕ್ಕನೆ ಹಿಡಿಯಲು ಬಲೆ ಬೀಸಿ ಮೀನು ಹಿಡಿಯಲು ಕುಳಿತ ಮೀನುಗಾರನಂತೆ ಕತ್ತಿಯವರು ತೋರುತ್ತಾರೆ. ಕುರುಡರು ಆನೆಯನ್ನು ಮುಟ್ಟಿ ತಮ್ಮ ತಮ್ಮ ಕಲ್ಪನೆಗಳ ಅನುಸಾರ ಆನೆಯ ದಕ್ಕಿಸಿಕೊಳ್ಳುವಂತೆ ಕತ್ತಿಯವರು ಬೇಂದ್ರೆ ಎಂಬ ಆಗಾಧ ಪ್ರತಿಭೆಯನ್ನು ತಮ್ಮದೆ ಆದ ರೀತಿಯಲ್ಲಿ ಪ್ರಶ್ನಿಸುತ್ತ ಅರ್ಥೈಸಿಕೊಳ್ಳಲು ಹೊರಟಿರುವುದು ಶ್ಲಾಘನೀಯ ಎಂದು ಗ್ರಂಥದ ಮುನ್ನುಡಿಯಲ್ಲಿ ಮುನ್ನುಡಿಕಾರ ಡಾ. ಶಶಿಧರ ನರೇಂದ್ರ ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಬೆನ್ನುಡಿ ದಾಖಲಿಸಿರುವ ಹಿರಿಯ ಕವಿ ಸತೀಶ ಕುಲಕರ್ಣಿ ಅವರು ‘ ಕಾವ್ಯಾತಿಹಾಸಕ್ಕೆ ಇಳಿಯುವ ಮುನ್ನ ಅದರಂತರಂಗದ ಸುರಂಗದಲ್ಲಿ ಇಳಿದಾಗ ಮಾತ್ರ ಬೇಂದ್ರೆ ದರ್ಶನವಾಗಲು ಸಾಧ್ಯ ‘ ಇಳಿತಾ ಹೋದಾಂಗ, ತಿಳಿತಾ ಬಂತು’ ಎನ್ನುವ ಬೇಂದ್ರೆಯವರ ಅತಿ ಜನಪ್ರಿಯ ಅನುಭವದ ನುಡಿ ನೆನಪಾಗುತ್ತದೆ ಎಂದಿದ್ದಾರೆ. ಆದರೆ ಕತ್ತಿಯವರದು ಇಳಿಯುತ್ತಿರುವ ವಯಸ್ಸಲ್ಲ, ಈಗ ಏರುತ್ತಿರುವ ವಯಸ್ಸು , ಬಿಸಿ ರಕ್ತ ಇಂಥದರಲ್ಲಿ ಬೇಂದ್ರೆಯಂಥ ಮಾಗಿದ ಕವಿಯನ್ನು ತನ್ನ ಅರಿವಿಗೆ ದಕ್ಕಿಸಿಕೊಳ್ಳಲು ಹೊರಡುವುದು ಸಾಮಾನ್ಯ ಮಾತಲ್ಲ. ಅದಕ್ಕೆ ಅದೊಂದು ಸಾಹಸವೇ ಸರಿ ಅಂದಿದ್ದು. ಕತ್ತಿಯವರು ಬೇಂದ್ರೆ ಕಾವ್ಯರಸದ ಆಸ್ವಾದನೆಗೆಂದು ಸೀದಾ ಜೇನುಗೂಡಿಗೇ ಕೈ ಹಾಕಿದ್ದಾರೆ. ಮತ್ತು ಕಾವ್ಯ ಜೇನು ದಕ್ಕಿಸಿಕೊಳ್ಳುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ ಎಂದು ಹೇಳಬಹುದು. ಒಟ್ಟು ೨೬೪ ಪುಟಗಳ ಈ ಬೃಹತ್ ಗ್ರಂಥದಲ್ಲಿ ಕೇವಲ ೩೬ ಕಾವ್ಯಗಳ ಮೂಲಕ ಬೇಂದ್ರೆ ಕಾವ್ಯದ ಅವರ ಜೀವನದ ಹುಡುಕಾಟಕ್ಕೆ ಮುಂದಾಗಿರುವುದು ವಿಷಯ ವಿಸ್ತಾರವನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಒಂದು ಕಾವ್ಯವನ್ನು ಎತ್ತಿಕೊಂಡು ಅನೇಕ ಆಯಾಮಗಳಲ್ಲಿ ಅದನ್ನು ಅವಲೋಕಿಸುವುದು ಮತ್ತು ಇದ್ದಕ್ಕೆ ಪೂರಕವಾಗಿ ದೇಶಿ ವಿದೇಶಿ ಸಾಹಿತಿಗಳ ಸಾಹಿತ್ಯದ ತೌಲನಿಕ ಅಧ್ಯಯನ ನಡೆಸಿರುವುದು ಕತ್ತಿಯವರ ಓದು ಮತ್ತು ವಿಷಯ ಸಂಗ್ರಹಕ್ಕೆ ಸಾಕ್ಷಿಯಾಗುತ್ತದೆ. ಅದನ್ನು ಮುನ್ನುಡಿಕಾರರು ತುಂಬಾ ಚೆನ್ನಾಗಿ ಗುರ್ತಿಸಿದಾರೆ.

ನಾಕು ತಂತಿ ಕಾವ್ಯಾಲೋಕನ ಮಾಡುತ್ತ ಶಂಕರಾಚಾರ್ಯರು ಪಾರ್ವತಿಯ ವದನವನ್ನು ಶಿವನ ಮುಖಕ್ಕೆ ಹಿಡಿದ ಕನ್ನಡಿ ಎಂದು ವರ್ಣಿಸುತ್ತ ಶಂಕರಾಚಾರ್ಯರ ಸಾಲುಗಳನ್ನು ಉದ್ದರಿಸುವುದು, ಜೋಗಿ ಕವಿತೆಗೆ ಪೂರಕವಾಗಿ ಬಸವಣ್ಣ , ನಿಜಗುಣ ಶಿವಯೋಗಿ ಮತ್ತು ನವ್ಯಕಾಲದ ನಿಸಾರ್ ಅಹಮದ್ ಅವರ ಸಾಲುಗಳನ್ನು ಬೇಂದ್ರೆ ಸಾಹಿತ್ಯಕ್ಕೆ ಹೋಲಿಕೆಯಾಗಿ ಕೊಡುವುದ, ಏಲಾಗೀತದಲ್ಲಿ ಎ ಕೆ ರಾಮಾನುಜನ್, ಕಾಳಿದಾಸ..ನನ್ನವಳು ಗೀತೆಯಲ್ಲಿ ಮಾಸ್ತಿ ಅಷ್ಟೇಯಲ್ಲದೇ ಆಂಗ್ಲ ಬಾಷಾ ಕವಿಗಳಾದ ಶೇಕ್ಸಪೀಯರ್, ಯೇಟ್ಸ್, ಡೇವೀಸ್ ಮುಂತಾದವರನ್ನು ಬೇಂದ್ರೆ ಕಾವ್ಯದ ಸಂದರ್ಭಗಳಲ್ಲಿ ಉಲ್ಲೇಖಿಸುವ ಮೂಲಕ ಬೇಂದ್ರೆ ಯಾವ ಜಗತ್ಪ್ರಸಿದ್ಧ ಕವಿಗಳಿಗಿಂತ ಕಡಿಮೆಯಲ್ಲ ಎಂದು ಕತ್ತಿಯವರು ಪುನಃ ನಿರೂಪಿಸುತ್ತಾರೆ.

ಬೇಂದ್ರೆ ಪ್ರೀತಿಯನ್ನು ಪ್ರತಿಪಾದಿಸುವ ಮೂಲಕ ಜೀವನ ಮೌಲ್ಯಗಳನ್ನು ಹೆಚ್ಚಿಸಿದ ಕವಿ, ಹಲುವಾರು ಸಾಹಿತಿಗಳು ಬೇಂದ್ರೆಯವರು ಮೇರು ಕಾವ್ಯವನ್ನು ಮತ್ತೆ ಮತ್ತೆ ಬೇಂದ್ರೆ ಎನ್ನುವಂತೆ ಮತ್ತೆ ಮತ್ತೆ ಮಥಿಸಿ ಮತ್ತೆ ಮತ್ತೆ ಹೊಸಹೊಸ ಅರ್ಥಗಳನ್ನು ಶೋಧಿಸಿದ್ದಾರೆ. ಬೇಂದ್ರೆ ಕಾವ್ಯವೆನ್ನುವುದು ಮೊಗೆದಷ್ಟು ತುಂಬಿಕೊಳ್ಳುವ ಅಕ್ಷಯ ಪಾತ್ರೆ. ಪ್ರತಿ ಬಾರಿಯೂ ಹೊಸ ಹೊಳವು ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ. ಕತ್ತಿಯವರು ಸಹ ತಮ್ಮ ಅರಿವಿಗೆ ನಿಲುಕಿದಷ್ಟನ್ನು ಬಾಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಕಾವ್ಯದ ಅಂತರಂಗ ಬಹಿರಂಗ ಎರಡನ್ನು ಅರಿತುಕೊಳ್ಳಲು ಪ್ರಯತ್ನಿಸಿದ್ದಾರೆ. ನಾಕು ತಂತಿ ಕಾವ್ಯ ಕಾರಣವನ್ನು ಶೋದಿಸುವ ಕೃತಿಕಾರ ಬೇಂದ್ರೆ ಕಾವ್ಯ ಶಿಲಾಬಾಲಿಕೆಯಿಂದ ಗೋಮಟೇಶ್ವರನ ಭವ್ಯ ಸ್ವರೂಪ ಪಡೆದುಕೊಳ್ಳಬೇಕಾದರೆ ಅವರ ಅರವತ್ತರ ವಯಸ್ಸಿನಲ್ಲಿ ಮಾಗಿದ ಬದಲಾದ ವ್ಯಕ್ತಿತ್ವದ ” ಸಂತ – ಈ ಕರಣ” ಎಂದು ಗುರುತಿಸುತ್ತಾರೆ. ಪ್ರತಿ ಅಧ್ಯಾಯದ ಆರಂಭದಲ್ಲಿ ಕವನದ ಪೂರ್ಣ ಪಾಠವನ್ನು ಕೊಡುವ ಕತ್ತಿಯವರು ಒಂದೊಂದೆ ಭಾಗವನ್ನು ಕ್ರಮವಾಗಿ ಪದರು ಪದರಾಗಿ ಅನ್ಯೂಹ ಅರ್ಥಗಳನ್ನು ಗ್ರಹಿಸುವ ಮೂಲಕ ಓದುಗನನ್ನು ಕಾವ್ಯಾನುಭೂತಿ ರಸ ಆಸ್ವಾದನೆಗೆ ಎಡೆಮಾಡಿ ಕೊಡುತ್ತಾರೆ. ಬೇಂದ್ರೆಯವರ ಮೇಲೆ ರವೀಂದ್ರನಾಥ ಟಾಗೋರ್ ರ ಗಾಢವಾದ ಪ್ರಭಾವ ಇರುವದನ್ನು ಕತ್ತಿಯವರು ಕಂಡುಕೊಳ್ಳುತ್ತಾರೆ. ಅದರಂತೆ ಸಾಕಷ್ಟು ಅಧ್ಯಾತ್ಮ ಜೀವಿಗಳ ಅನುಭಾವಿಗಳ ಪ್ರಭಾವ ಇರುವದನ್ನು ದಾಖಲಿಸುತ್ತಾರೆ. ಅದಕ್ಕೆ ಪೂರಕವಾಗಿ ಅಧ್ಯಾತ್ಮ ಜೀವಿಯೊಬ್ಬನ ಸಾಧನೆ ಕಾವ್ಯಕಥನವನ್ನು ಬೇಂದ್ರೆಯವರು ಜೋಗಿ ಕವನದಲ್ಲಿ ಕಟ್ಟಿಕೊಡುವುದು ಕತ್ತಿಯವರು ಕಾಣುತ್ತಾರೆ. ಇದೇ ಸಂದರ್ಭದಲ್ಲಿ ಬೇಂದ್ರೆಯವರ ಮೇಲೆ ಪ್ರಭಾವ ಬೀರಿದ ಬಸವಣ್ಣ ನಿಜಗುಣಿ ಶಿವಯೋಗಿ ಮುಂತಾದ ಅಧ್ಯಾತ್ಮಿಕರನ್ನು ನೆನಪಿಗೆ ತಂದುಕೊಳ್ಳುತ್ತಾರೆ. ಬೇಂದ್ರೆಯವ ಅದ್ಭುತವಾಾದ ರೂಪಕ ಲೋಕವನ್ನು ಸಹ ಅವರು ವಿಶ್ಲೇಷಿಸುವ ಮೂಲಕ ಕಾವ್ಯಾಸಕ್ತನ ಅರ್ಥ ಗ್ರಹಿಕೆಗೆ ನೆರವಾಗುತ್ತಾರೆ.

ಉದಾಹರಣೆಗೆ ಮಾಮರ, ಕೋಗಿಲೆ, ಕಾಗೆ, ಹಾವುಗಳಂಥ ಪ್ರಾಣಿ ಪಕ್ಷಿಗಳು ಕೂಡ ಬೇಂದ್ರೆ ಕಾವ್ಯಕ್ಕೆ ನವ್ಯ ಅರ್ಥ ಸಾಧನವಾಗುವದನ್ನು ಅವರು ಕಾಣುತ್ತಾರೆ. ಬೇಂದ್ರೆ ಕಾವ್ಯದಲ್ಲಿ ಲೌಕಿಕ ಅಲೌಕಿಕ ವಿಚಾರಗಳು ಮುಖಾಮುಖಿಯಾಗುವದರ ಮೂಲಕ ಜೀವನ ಸಾಧನೆಗೆ ಸೋಪಾನವಾಗುವದನ್ನು ಗ್ರಹಿಸುತ್ತಾರೆ. ಇನ್ನೊಂದು ಕವನ ಪರಾಗದ ಕುರಿತು ಹೇಳುತ್ತ ಈ ಕವನ ತುಂಬ ಸರಳ ಸುಂದರ ಕವನವೆಂದು ಹೇಳುತ್ತಲೇ ‘ ಕವನ ಕೋಶದೀ ಕಮಲ ಗರ್ಭದಲಿ ಪರಾಗವೊರಗಿಹದು ಎನ್ನುವ ನುಡಿಯನ್ನು ಈ ಹೂವು ನಮ್ಮ ಕಣ್ಣಿಗೆ ಕಾಣುವ ಹೂವಲ್ಲ; ಕಾವ್ಯ ವಸ್ತುವೆನ್ನುವ ಹೂವು ಮತ್ತು ಭ್ರಮರವೆಂದರೆ ಕವಿ ಎಂದು ಅರ್ಥೈಸಿಕೊಳ್ಳವ ಮೂಲಕ ಕವನದ ಗೂಡಾರಥವನ್ನ ಕಂಡು ಹಿಡಿಯುತ್ತಾರೆ. ಹೀಗೆ ಬೇಂದ್ರೆಯವರ ಹಲವಾರು ಕವಿತೆಗಳಲ್ಲಿ ಸೂಪ್ತವಾಗಿರುವ ಭಾವನೆ ಮತ್ತು ಕಲ್ಪನೆಗಳ ಅರ್ಥವನ್ನು ಬಿಡುಸುವಲ್ಲಿ ಕತ್ತಿಯವರು ಸಫಲರಾಗಿದ್ದಾರೆ. ಬೇಂದ್ರೆ ಕಾವ್ಯಲ್ಲಿ ಅಡಕವಾಗಿರುವ ಲೌಕಿಕ ವಿಚಾರಗಳು ಅಲೌಕಿಕ ಅರ್ಥ ಸಾಧಿಸುವದನ್ನು ಅವರು ಗಮನಿಸುತ್ತಾರೆ. ನನ್ನವಳು, ಹುಬ್ಬಳ್ಳಿಯಾಂವ, ಅನಂತಪ್ರೇಮ, ನೀ ಹಿಂಗ ನೋಡಬ್ಯಾಡ ನನ್ನ, ಚಿಗರಿಗಂಗಳ ಚೆಲುವಿ, ಸಂಜೀಯ ಜಾವಿಗೆ, ಸಖೀಗೀತ, ನಾದಲೀಲೆ, ದೀಪ, ಕಾಮ ಕಸ್ತೂರಿ, ಒಲುಮೆಯ ಕಿಚ್ಚು, ಕರಡಿ ಕುಣಿತ, ಅರಳು ಮರುಳು ಮುಂತಾದ ಕವನಗಳೊಂದಿಗೆ ಸ್ಪಂದನಕ್ಕೆ ಇಳಿದಿರುವ ಕತ್ತಿಯವರು ಇವುಗಳಲ್ಲಿನ ವ್ಯಕ್ತ ಅವ್ಯಕ್ತ ನೋವು ನಲಿವು, ಜನನ ಮರಣ, ಪ್ರೇಮ ಕಾಮ, ಸರಸ ವಿರಸ, ಬಡತನ ಸಿರಿತನ, ಸಹಾಯ ಶೋಷಣೆಗಳನ್ನೆಲ್ಲ ಒಂದೊಂದಾಗಿ ಹೆಕ್ಕಿ ತಗೆದು ಓದುಗರ ಮುಂದೆ ಹರವಿದ್ದಾರೆ. ಬೇಂದ್ರೆ ಕಾವ್ಯಾಸಕ್ತರಿಗೆ , ವರ ಕವಿಯನ್ನು ಇನ್ನನಷ್ಟು ಅರ್ಥ ಮಾಡಿಕೊಳ್ಳಬೇಕೆನ್ನುವರಿಗೆ ಇದೊಂದು ಉಪಯುಕ್ತ ಗ್ರಂಥ. ಗ್ರಂಥದ ಕೊನೆಗೆ ಕೊಟ್ಟಿರುವ ಬೇಂದ್ರೆಯವರ ಜೀವನ ಮತ್ತು ಸಾಧನೆಯ ಸಂಕ್ಷಿಪ್ತ ವಿವರ ಈ ಕೃತಿಗೆ ಸಮಗ್ರತೆ ತಂದು ಕೊಟ್ಟಿದೆ ಎಂದು ಹೇಳುತ್ತ ಸಾಹಿತಿಗಳಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತ ಗ್ರಂಥವಾಗಿದ್ದು ಇದು ಸಾಹಿತ್ಯಲೋಕದ ಮೈಲುಗಲ್ಲಾಗಲಿ ಎಂದು ಹಾರೈಸುತ್ತ ತುಂಬ ಅದ್ಭುತವಾಗಿ ಅಂಬಿಕಾತನಯನ ಕಾವ್ಯ ಅಸಂಧಾನ ನಡೆಸಿ ಅಮೂಲ್ಯ ಗ್ರಂಥ ತಂದಿದ್ದಕ್ಕೆ ಶ್ರೀ ಮಾರ್ತಾಂಡಪ್ಪ ಎಂ. ಕತ್ತಿಯವರಿಗೆ ಮನದುಂಬಿ ಅಭಿನಂದಿಸುತ್ತೇನೆ.
ಪುುಸ್ತಕ ಬೇಕಾದವರು ಲೇಖಕರಿಗೆ ( +919844127466 ) ಸಂಪರ್ಕ ಮಾಡಬಹುದು.

-ಅಶ್ಫಾಕ್ ಪೀರಜಾದೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x