ಅಂತ್ಯಸಂಸ್ಕಾರ: ಪ್ರಭುರಾಜ್‌ ಹೂಗಾರ್

ಮಗು ಹುಟ್ಟಿದ ನಂತರ ಎಲ್ಲರೂ ಒಳ್ಳೆಯ ಪಾಲನೆ, ಪೋಷಣೆ, ಶಿಕ್ಷಣ ಕೊಡುವ ಕುರಿತು ಯೋಚಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಳ್ಳೆಯ ಸಂಸ್ಕಾರಗಳನ್ನು ನೀಡುವುದು ಪಾಲಕರ ಕರ್ತವ್ಯ/ಜವಾಬ್ದಾರಿ. ಈಗ ನಾನು ಪ್ರಸ್ತಾಪಿಸಬೇಕೆಂದಿರುವುದು ಮರಣೋತ್ತರ ಸಂಸ್ಕಾರದ ಬಗ್ಗೆ, ಅಂತ್ಯಸಂಸ್ಕಾರದ ಆಸುಪಾಸಿನ ಕೆಲ ಸನ್ನಿವೇಶಗಳ ಬಗ್ಗೆ. ಕೆಲವು ವಿಷಯಗಳಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ಧಾರ್ಮಿಕವಾಗಿ ನೋಡದೆ ಮಾನವೀಯ ದೃಷ್ಟಿಯಿಂದ ನೋಡೋಣ, ಮನಸಿದ್ದಲ್ಲಿ ಭಾವನೆಗಳು ಇರಲೇಬೇಕಲ್ಲವೇ.

ದಿನಕ್ಕೆ ನೂರು ರೂಪಾಯಿ ಸಂಪಾದಿಸುವ ಒಬ್ಬ ದಿನಗೂಲಿ ನೌಕರ ದೇವಸ್ಥಾನಕ್ಕೆ ಹೋದಾಗಲೆಲ್ಲ ಹತ್ತು ರೂಪಾಯಿ ದಾನ ಮಾಡುತ್ತಿದ್ದ, ಅವನಂತೆ ದಿನಕ್ಕೆ ಸಾವಿರ ರೂಪಾಯಿ ಸಂಪಾದಿಸುವ ವ್ಯಕ್ತಿಯೊಬ್ಬ ಐವತ್ತು ರೂಪಾಯಿ ದಾನ ಮಾಡುತ್ತಿದ್ದ. ಹೆಚ್ಚು ಕಡಿಮೆ ಇಬ್ಬರೂ ದೇವರ ವಾರದ ದಿನವೇ ಹೋಗುತ್ತಿದ್ದರು, ದಿನಗಳೆದಂತೆ ಐವತ್ತು ರೂಪಾಯಿ ದಾನ ಮಾಡುವ ವ್ಯಕ್ತಿಯು ಅಲ್ಲಿರುವ ಜನರಿಗೆಲ್ಲ ಹೆಚ್ಚು ಆಪ್ತನಾದ. ಅವನಿಂದ ಪಡೆದುಕೊಳ್ಳುವ ಜನರು ಮತ್ತು ಅದನ್ನು ನೋಡುವ ಜನರು ಹೀಗೆ ಎಲ್ಲರಲ್ಲಿಯೂ ಮನೆಮಾತಾದ. ಹೀಗೆ ಏನಾದರೂ ವಿಪತ್ತುಗಳು ಅಥವಾ ಆಚರಣೆಗಳು ಬಂದಾಗ ದಿನಗೂಲಿ ನೌಕರ ಐದುನೂರು ರೂಪಾಯಿ ದಾನ ನೀಡಿದರೆ ಎಲ್ಲರಲ್ಲಿ ಮನೆಮಾತಾದವ ಐದು ಸಾವಿರ ನೀಡುತ್ತಿದ್ದ. ಹೀಗೆ ವರುಷಗಳು ಕಳೆದು ಒಂದು ದಿನ ದಿನಗೂಲಿ ನೌಕರ ಸಾವನ್ನಪ್ಪುತ್ತಾನೆ, ಸಂಬಂಧಿಕರು ಬರುತ್ತಾರೆ, ಜನಗಳಿಗೂ ಸುದ್ದಿ ಮುಟ್ಟುತ್ತದೆ, ಕೆಲವರು ನೆನಪಿಸಿಕೊಂಡು ಮರುಗಿದರೆ, ಕೆಲವರಿಗೆ ನೆನಪೇ ಆಗುವದಿಲ್ಲ ಯಾರು ತೀರಿಕೊಂಡಿದ್ದು ಎಂದು. ಸ್ವಲ್ಪ ದಿನಗಳ ನಂತರ ಇನ್ನೋರ್ವ ವ್ಯಕ್ತಿಯೂ ಸಾವನ್ನಪ್ಪುತ್ತಾನೆ, ಸಂಬಂಧಿಕರೆಲ್ಲ ಬರುತ್ತಾರೆ, ಜನಸಾಗರವೇ ಬರುತ್ತದೆ, ದೇವಸ್ಥಾನದ ಕಡೆಯಿಂದ ಭಜನಾ ಮಂಡಳಿಯು ಬರುತ್ತದೆ. ಜನಸಾಗರದ ಮಧ್ಯೆ ಅಂತ್ಯಸಂಸ್ಕಾರ ನೆರವೇರುತ್ತದೆ.

ನಾವೆಲ್ಲ ಕೇಳಿದಂತೆ ಒಬ್ಬ ವ್ಯಕ್ತಿಯ ಸಾವಿನಲ್ಲಿ ಸೇರುವ ಜನಸಾಗರವನ್ನು ನೋಡಿ ಜಗತ್ತು ಅವನ ಗುಣಗಾನ ಮಾಡುತ್ತದೆ. ನಾವು ನೋಡಿದ ವೃತ್ತಾಂತದಲ್ಲಿ ಸೇರಿದ ಜನ ಅವನು ಮಾಡುತ್ತಿದ್ದ ದಾನ ಧರ್ಮಗಳಿಗೆ ಕೃತಜ್ಞರಾಗಿ ಸೇರಿರುತ್ತಾರೆ. ಹಾಗೆ ನೋಡಿದರೆ ದಿನಗೂಲಿ ನೌಕರನ ಸಾವಿನಲ್ಲಿ ಅಷ್ಟಾಗಿ ಜನ ಸೇರಿರುವದಿಲ್ಲ, ಮೇಲ್ನೋಟಕ್ಕೆ ಇದು ವಾಸ್ತವಿಕವೇ, ಆದರೆ ದಾನ ಧರ್ಮದ ವಿಷಯದಲ್ಲಿ ದಿನಗೂಲಿ ನೌಕರನದೇ ಮೇಲುಗೈ. ತಾನು ದುಡಿಯುತ್ತಿದ್ದುದರಲ್ಲಿ ಪ್ರತಿಶತ ಹತ್ತು ಭಾಗವನ್ನು ದಾನ ಮಾಡುತ್ತಿದ್ದ, ಇನ್ನೋರ್ವ ವ್ಯಕ್ತಿ ಕೇವಲ ಐದು ಪ್ರತಿಶತ ಮಾತ್ರ ದಾನ ಮಾಡುತ್ತಿದ್ದ, ವಿಪತ್ತುಗಳಲ್ಲಿ ಇಬ್ಬರೂ ಸಮಾನ ಪ್ರತಿಶತ ಹಣವನ್ನು ದಾನವಾಗಿ ನೀಡುತ್ತಿದ್ದರು. ಆದರೆ ಹಣದ ಮೊತ್ತ ಮಾತ್ರ ದೊಡ್ಡದಾಗಿ ಕಾಣಿಸುತ್ತಿತ್ತು. ವಿಪರ್ಯಾಸವಲ್ಲವೇ, ಆದರೂ ದಿನನಿತ್ಯ ನಡೆಯುವ ನಂಬಲಸಾಧ್ಯ ವಿಚಿತ್ರ ಸತ್ಯವೇ ಇದು. ಹಾಗಾದರೆ ಪುಣ್ಯ ಸಂಪಾದನೆಗೆ ಅಳತೆ ಯಾವುದು!? ಫಲಾಪೇಕ್ಷೆ ಇಲ್ಲದೆ ಕರ್ಮ ಸಾಧನೆ ಮಾಡಬೇಕಂತೆ, ಹಾಗಿದ್ದರೆ ಭಾವನೆಗಳ ಬೆಲೆ ಏನು? ನಿತ್ಯಜೀವನದಲ್ಲಿ ಇಂತಹ ಅಚಾತುರ್ಯಗಳ ಆದಾರದ ಮೇಲೆ ವ್ಯವಹರಿಸುವವರೊಂದಿಗೆ ಬದುಕುವುದು ಹೇಗೆ?

ಇದೆಲ್ಲವೂ ಎಲ್ಲರೂ ಮತ್ತು ಎಲ್ಲವೂ ಚನ್ನಾಗಿರುವಾಗ ನಡೆಯುವ ಅಚಾತುರ್ಯಗಳ ಬಗ್ಗೆ ಹೇಳಿದ್ದು, ಈಗ ಪರಿಸ್ಥಿತಿ ಕೈಕೊಟ್ಟಾಗ, ಸಂದರ್ಭದ ಸುಳಿಗೆ ಸಿಲುಕಿಕೊಂಡಾಗ ಏನಾಗುವುದು ನೋಡೋಣ ಬನ್ನಿ. ನಿಮಗೆಲ್ಲ ಗೊತ್ತಿರುವಂತೆ ವೈರಾಣುವಿನ ಸುಳಿಗೆ ಸಿಲುಕಿದ ಸಂದರ್ಭವಿದು. ಸಾವು ಬಂದಿದೆ, ಸಂಬಂಧಿಕರು ಹೋಗಲಿ ಮನೆಯವರೂ ಜೊತೆಗಿಲ್ಲ. ಬದುಕಿದ್ದಾಗ ಮಾಡಿದ ದಾನ ಧರ್ಮಗಳ ಪುಣ್ಯ ಸಂದಾಯ ಆಗುವುದು ಎಲ್ಲಿ?, ಎಲ್ಲರಿಗೂ ಒಂದೇ ತರದ ಅಂತ್ಯಸಂಸ್ಕಾರ, ಜನಸಾಗರವಿಲ್ಲ, ಜಾಗಟೆಗಳಿಲ್ಲ. ಇಷ್ಟು ದಿನ ಎಲ್ಲರೂ ಹೇಳುತ್ತಿದ್ದುದು ಸಾವಿನಲ್ಲಿ ಅಂತಲ್ಲವೆ. ಸೇರುತ್ತಿದ್ದ ಜನರೋ ಪ್ರಚಾರದ ಮೇಲೆ ಬರುತ್ತಿದ್ದುದು, ಅದು ಹೇಗೆ ಎಂದು ಅಂಕಿ ಅಂಶಗಳ ಲೆಕ್ಕಾಚಾರ ಆಗಲೇ ನೋಡಿದ್ದೇವೆ. ಹಾಗಾದರೆ ಯಾವುದು ಸತ್ಕರ್ಮ ಫಲ, ಸಾವಿನಲ್ಲಿ ಸಂದಾಯವಾಗುವುದೆ ಅಥವಾ ಸಾವಿನಿಂದಾಚೆಯೋ! ಜನ ಮರುಳೋ ಜಾತ್ರೆ ಮರುಳೋ, ಈಗಲಾದರೂ ಅರ್ಥಮಾಡಿಕೊಳ್ಳೋಣ.
-ಪ್ರಭುರಾಜ್‌ ಹೂಗಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x