ಅಂತೆ ಕಂತೆಗಳ ನಡುವೆ…: ಅಶ್ಫಾಕ್ ಪೀರಜಾದೆ


ಗೆಳೆಯ ಗಂಗಾಧರ ಸತ್ತ ಸುದ್ದಿಯ ಹಿನ್ನಲೆಯಲ್ಲಿ ನಾನು ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಬೆಳಸಬೇಕಾಗಿ ಬಂತು. ಗಂಗಾಧರ ನನ್ನ ಪ್ರಾಣ ಸ್ನೇಹಿತ, ವಾರಿಗೆಯವ, ಹೆಚ್ಚುಕಮ್ಮಿ ನನ್ನಷ್ಟೇ ವಯಸ್ಸು, ನಲವತ್ತೈದು ಸಾಯುವ ವಯಸ್ಸಲ್ಲ, ಅದಕ್ಕೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಗಂಗಾಧರನ ಪತ್ನಿಯೇ ಅಳುತ್ತ ದೂರವಾಣಿಯ ಮುಖಾಂತರ ಇದನ್ನು ಹೇಳಿದಾಗ ನಂಬದೇ ಗತಿಯಿರಲಿಲ್ಲ. ಗಂಗಾಧರನ ಅಗಲಿಕೆಯ ವೇದನೆ ಹೊತ್ತು ಭಾರವಾದ ಮನಸ್ಸಿನಿಂದ ಬೆಳಗಾವಿ ಬಸ್ಸು ಹತ್ತಿದೆ. ಬಸ್ಸು ನಿಲ್ಧಾಣ ಬಿಟ್ಟಾಗ ರಾತ್ರಿ ಹತ್ತರ ಸಮಯ, ಸೀಟಿಗೊರಗಿ ಮಲಗಲು ಪ್ರಯತ್ನಿಸಿದೆ.ಸಾಧ್ಯವಾಗಲಿಲ್ಲ. ಕೇವಲ ಗಂಗಾಧರನದೇ ನೆನಪು. ಮನೆಗಳು ಅಕ್ಕ ಪಕ್ಕದಲ್ಲೆ ಇದ್ದುದರಿಂದ ಯಾವಾಗಲು ಇಬ್ಬರೂ ಕೂಡಿಯೇ ಇರುತ್ತಿದ್ದೆವು. ಜೊತೆಯಾಗಿಯೇ ಆಟ ಆಡುತ್ತಿದ್ದೇವು, ಜೊತೆಯಾಗಿಯೇ ಓದುತ್ತಿದ್ದೆವು. ಅವನ ಮನೆತನದ ಶ್ರೀಮಂತಿಕೆಯಿಂದಲೋ ಏನೋ ಅವನಿಗೆ ಓದಿನಲ್ಲಿ ಅಭಿರುಚಿಯಿರಲಿಲ್ಲ. ಓದಿನಲ್ಲಿ ಜಾಣನಲ್ಲದ ಆತ ಓದಿನ ವಿಷಯದಲ್ಲಿ ನನ್ನನ್ನೇ ಅವಲಂಬಿಸಬೇಕಾಗಿತ್ತು. ನನ್ನ ಸಹಾಯದೊಂದಿಗೆ ಅದ್ಹೇಗೋ ಪಿಯುಸಿಯವರೆಗೆ ಬಂದಾ, ಅದರೆ ಎರಡನೇಯ ವರ್ಷದ ಪಿಯೂ ಪರೀಕ್ಷೆಯಲ್ಲಿ ನಾಲ್ಕು ವಿಷಯ ಫೇಲಾಗಿ ಗೋತಾ ಹೊಡೆಯುವ ಮೂಲಕ ಓದಿಗೆ ಶಾಶ್ವತವಾಗಿ ಬೈಹೇಳಿ ಮನೆತನದ ಉದ್ಯೋಗದಲ್ಲಿ ತೊಡಗಿಕೊಂಡಿದ್ದ. ನಾನು ಮೆಡಿಕಲ್ ಓದಿಗೆ ಬೆಂಗಳೂರ ಸೇರಿ, ಓದಿನ ನಂತರ ವೈದ್ಯನಾಗಿ ಇದೇ ಮಹಾನಗರಿಯಲ್ಲಿ ಸೇವೆಯಾರಂಭಿಸುವ ಮೂಲಕ ಬೆಂಗಳೂರ ರಹವಾಸಿಯೇ ಆಗಿದ್ದೆ. ಈ ಮಹಾನಗರಿಯ ಮಾಯೆಯೇ ಅಂಥದ್ದು ಬಿಟ್ಟೆನೆಂದರೂ ಬಿಡಲಾರದು.

ತಂದೆ-ತಾಯಿ ತಮ್ಮ ಊರಲ್ಲೇ ಇರುವದಾಗಿ ಹಠ ಹಿಡಿದು ಕುಳಿತ್ತಿದ್ದರಿಂದ ವರ್ಷದಲ್ಲಿ ಒಂದೆರಡು ಬಾರಿ ಬೆಳಗಾವಿಗೆ ಬಂದು ಹೋಗುವುದು ಅನಿವಾರ್ಯವಾಗಿತ್ತು. ಆದರೆ ಈಗ ಒಂದೆರಡು ವರ್ಷಗಳ ಹಿಂದೆ ತಂದೆತಾಯಿ ಇಬ್ಬರೂ ಇಹಲೋಕ ತ್ಯಾಜಿಸಿದ್ದರಿಂದ ಈಗ ಆ ಕಷ್ಟವೂ ಇರಲಿಲ್ಲ. ನಂತರ ಬೆಳಗಾವಿಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತಾದರೂ ಗಂಗಾಧರನ ಸ್ನೇಹ ಮಾತ್ರ ಕಡಿಮೆಯಾಗಿರಲಿಲ್ಲ. ಆಗಾಗ ಅವನ ನನ್ನ ನಡುವೆ ಮೊಬೈಲ ಮುಖಾಂತರ ಕುಶಲೋಪರಿ ನಡೆಯುತ್ತಿತ್ತು. ಗಂಗಾಧರ ತನ್ನ ತಂದೆಯ ನಂತರ ಮನೆಯ, ಅಡತಿ ಅಂಗಡಿಯ ಜವಾಬ್ದಾರಿಯನ್ನು ವಹಿಸಿಕೊಂಡು ಒಬ್ಬ ಯಶಸ್ವಿ ಗಣ್ಯ ವ್ಯಾಪಾರಿಯಾಗಿ ಹೆಸರು ಸಂಪಾದಿಸಿದ್ದ. ತನ್ನ ವ್ಯಾಪಾರ ನಿಮಿತ್ತ್ಯ ಬಂಗಳೂರಿಗೆ ಬಂದಾಗಲೆಲ್ಲ ತನ್ನನ್ನು ಕಂಡು, ಕ್ಷೇಮಸಮಾಚಾರ ವಿಚಾರಿಸದ ಹೊರತು ಹೊರಡುತ್ತಿರಲಿಲ್ಲ. ಇಂಥಾ ಸಹೃದಯ ಮಿತ್ರ ಹೀಗೆ ಆಕಸ್ಮಕವಾಗಿ ನಮ್ಮಿಂದ ದೂರವಾಗಿದ್ದಾನೆಂದರೆ ನಿಜಕ್ಕೂ ನಂಬಲು ಆಗುತ್ತಿಲ್ಲ. ಅಗರ್ಭ ಶ್ರೀಮಂತಿಕೆ,ಸುಂದರ ಹೆಂಡತಿ,ಮುದ್ದಾದ ಮಕ್ಕಳು.. ಒಟ್ಟಿನಲ್ಲಿ ಸುಖ ಸಂಸಾರ. ಬಿಜನೆಸ್ ಟೇನಷನ್ ಅವನ ಹೃದಯಾಘಾತಕ್ಕೆ ಕಾರಣವಾಗಿರಬಹುದೇ? ಇದೇ ಯೋಚನೆಯಲ್ಲಿ ಇಡೀ ರಾತ್ರಿಯ ಪಯಣ ಮುಗಿದು ಚುಮ..ಚುಮ..ಬೆಳಕಿನಲಿ ಬೆಳಗಾವಿ ತೆರೆದುಕೊಳ್ಳಲಾರಂಭಿಸಿತ್ತು.

ಗಂಗಾಧರನ ಭವ್ಯವಾದ ಬಂಗ್ಲೆಯ ಮುಂದೆ ಅಟೋ ನಿಂತಾಗ ಸುದ್ದಿ ತಿಳಿದ ನೂರಾರು ಜನ ಅಗಲೇ ಮನೆಯಾವರಣದಲ್ಲಿ ಜಮಾಯಿಸಿದ್ದರು.ನಿನ್ನೆ ರಾತ್ರಿನೇ ಸುದ್ದಿ ತಿಳಿದಿದ್ದರಿಂದ ಹೊರಗಿದ್ದ ಸಂಬಂಧಿಕರಿಗೂ ಬರಲು ಅನುಕೂಲವಾಗಿತ್ತು. ಬರಬೇಕಾದವರಿಗೆ ಇನ್ನೂ ಸಮಯವಿತ್ತು. ಊರಿನ ಗಣ್ಯರು, ಸ್ನೇಹಿತರು, ಕುಟುಂಬದವರು, ನೆರೆಹೊರೆಯವರು ಎಲ್ಲ ಸೇರಿದ್ದರು, ಸೇರುತ್ತಿದ್ದರು. ಆವರಣದೊಳಕ್ಕೆ ನಾನು ಕಾಲಿಡುವದಷ್ಟೆ ತಡ ನನಗೆ ಪರಿಚಯ ಹಿಡಿದ ಹಿರಿಯರೊಬ್ಬರು..
“ನಿನ್ನ ಪ್ರಾಣ ಸ್ನೇಹಿತ ವಿನಾಕಾರಣ ಹೋಗಿ ಬಿಟ್ಟ, ಇದು ಹೋಗುವ ವಯಸ್ಸಲ್ಲ”
ಅಂದಿದ್ದು ಅದರಲ್ಲೇ ವಿನಾಕಾರಣ ಎನ್ನುವ ಪದ ಬಳಸಿದ್ದು ನನಗೆ ವಿಚಿತ್ರವಾಗಿ ತೋರಿದಷ್ಟೆಯಲ್ಲ, ಮುಗಿಲು ಕಳಚಿ ತೆಲೆಯ ಮೇಲೆ ಬಿದ್ದಂತಾಗಿತ್ತು.

ಒಂದು ಕ್ಷಣ ಅವನ ಸಾವಿನಲ್ಲಿ ಅದೇನೋ ರಹಸ್ಯ ಅಡಗಿದೆ ಅಂತಾ ಅನಿಸದಿರಲಿಲ್ಲ. ನನ್ಮುಂದೆ ಅದೇ ಪ್ರಶ್ನೆ ಗಂಗಾಧರನ ಸಾವಿಗೆ ಕಾರಣವಾದರು ಎನು?. ಆ ಹಿರಿಯರನ್ನೆ ಕೇಳಬಹುದಿತ್ತು.ಆದರೆ ಈ ಸಂದರ್ಭಕ್ಕೆ ಸೂಕ್ತವೆನಿಸದೆ ಸುಮ್ನಾದೆ. ಜನ ಜಾತ್ರೆಯ ನಡುವೆ ದಾರಿ ಮಾಡಿಕೊಂಡು ಮುನ್ನಡದಂತೆ ಗಂಗಾಧರನ ಸಾವಿನ ಕುರಿತಾದ ಅದೇನೋ ಗುಸು..ಗುಸು ಗದ್ದಲ ಕಿವಿಗಪ್ಪಳಿಸುತಿತ್ತು. ಮನೆಯೊಳಗೆ ಪ್ರವೇಶಿಸಿದಾಗಲೂ ಹೆಂಗಳೆಯರಲ್ಲೂ ಅದೇ ಮಾತು. ಹಾಲ್‍ನ ಮಧ್ಯದಲ್ಲಿ ಮಲಗಿಸಲಾಗಿದ್ದ ಗಂಗಾಧರ ಚಿರನಿದ್ರೆಗೆ ಜಾರಿದ್ದ, ಅವನ ಮುಂದೆ ಕುಳಿತ ಸಹಧರ್ಮಿಣಿ ಶೀಲಾ ಎದೆಬಡಿದುಕೊಂಡು ಅಳುತ್ತಿದ್ದಳು. ಬಹುಶಃ ಗಂಡನನ್ನು ಕಳೆದುಕೊಂಡು ವಿಧುವೆಯಾದ ದುಃಖ ಅವಳಿಂದ ಭರಿಸಿಕೊಳ್ಳಲು ಆಗುತ್ತಿಲ್ಲ. ಹದಿನಾರು,ಹದಿನೆಂಟು ವರ್ಷದ ಇಬ್ಬರು ಹೆಣ್ಮಕ್ಕಳು ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ರೋಧಿಸುತ್ತಿದ್ದರು. ಸಾಂತ್ವನ ಹೇಳಲು ಬಂದವರು ಅವರನ್ನು ಸಮಾಧಾನ ಪಡಿಸಲಾಗದೆ ಸೋಲುತ್ತಿದ್ದರು. ನಡುನಡುವೆ ಶೀಲಾ ಪ್ರಜ್ಞಾಹೀನಳಾಗಿ ಬೀಳುತ್ತಿದ್ದಳು. ನೆತ್ತಿಯ ಮೇಲೆ ನೀರು ಚುಮುಕಿಸುವ ಮೂಲಕ ಅವಳನ್ನು ಮತ್ತೇ ಸಹಜ ಸ್ಥಿತಿಗೆ ತರಲಾಗುತಿತ್ತು. ಆ ಎರಡೂ ಮಕ್ಕಳು ಕರುಳು ಕಿತ್ತು ಬರುವ ಹಾಗೆ ಅಳುತ್ತಿರುವದನ್ನು ಕಂಡು ಅಲ್ಲಿದ್ದವರೂ ಕಣ್ಣೀರಾಗಿ ಬಿಡುತ್ತಿದ್ದರು. ಈ ನಡುವೆ ನನ್ನ ಗಮನಿಸಿದ ಶೀಲಾ “ಅಣ್ಣಾ ನಿಮ್ಮ ಸ್ನೇಹಿತರು ನಮಗೆಲ್ಲ ತಬ್ಬಲಿ ಮಾಡಿ ಹೊರಟಹೋದ್ರು..”ಎಂದ್ಹೇಳಿ ವ್ಯಥಿಸುವುದನ್ನು ಕಂಡು ನನಗೆ ದುಃಖ ತಡೆದುಕೊಳ್ಳಲಾಗದೆ, ಕಣ್ಣೀರು ವರೆಸಿಕೊಳ್ಳುತ್ತ ಅಲ್ಲಿಂದ ದೂರ ಸರಿದು ಬಂದು ಕುರ್ಚಿಯ ಮೇಲೆ ಕುಳಿತರೆ, ಅಲ್ಲೇ ಹತ್ತಿರದಲ್ಲಿ ಸೇರಿದ್ದ ಹೆಂಗಸರ ಗುಂಪು ಸತ್ತವನ ನೆನಪಿನಲ್ಲಿ ಗುಣಗಾನ ಶುರು ಮಾಡಿದ್ದರು.

“ಚಿಕ್ಕ ವಯಸ್ಸು.. ಅದೇನಾಗಿತ್ತೋ ಬೇಗ ಆ ದೇವ್ರು ಕರ್ಕೊಂಡ ಬಿಟ್ಟ..”
“ಹೆಂಡ್ತಿಮಕ್ಳು ಅನ್ಯಾಯವಾಗಿ ಅನಾಥರಾದರು..”
“ಹಾರ್ಟ ಅಟ್ಯಾಕ ಅಗಿತ್ತೇನೋ..”
“ಅದೇನೆಯಾಗಲಿ ಇಂಥ ಒಳ್ಳೇ ಮನುಷ್ಯನಿಗೆ ಇಷ್ಟು ಬೇಗ ಸಾವಬರಬಾರದಾಗಿತ್ತು” ಎಂಬ ಅನುಕಂಪದ ಸುರಿಮಳೆಗೈಯುತ್ತಿದ್ದರು. ಇದನ್ನೆಲ್ಲ ಕೇಳುತ್ತಿದ್ದ ನಡು ವಯಸ್ಸಿನವಳೊಬ್ಬಳು-
“ಅವನ ಮೈಯೊಳಗಿನ ಸೊಕ್ಕುದಿಂದ ಸತ್ತರೆ ದೇವರೇನ್ಮಾಡ್ತಾನೆ!” ಎಂದಳು.
ಈ ಮೊದಲು ಮಾತಾಡುತ್ತಿದ್ದವರು ಅಶ್ಚರ್ಯಗೊಂಡು-
“ಅಂದ್ರೇ..?” ಎಂದು ಪ್ರಶ್ನಿಸಿದರು.
“ಅವನಿಗೆ ಕುಡಿಯುವ ಅಭ್ಯಾಸವಿತ್ತಂತೆ, ಕುಡಿಕುಡಿದು ಸತ್ತನಂತೆ”

ನಾನು ಕುಳಿತಲ್ಲಿಂದಲೇ ಈ ಸಂಭಾಷಣೆಯನ್ನು ಆಲಿಸುತ್ತಿದ್ದೆ. ಅತ್ತ ಶವದ ಮುಂದೆ ಕುಳಿತವರು ದುಃಖಿಸುತ್ತಿದ್ದರೆ ಇದ್ಯಾವದರ ಪರ್ವೆ ಇಲ್ಲದಂತೆ ಇವರು ಚರ್ಚಿಸುತ್ತಲೇ ಇದ್ದರು. ಹೌದು ಗಂಗಾಧರ ಬಿಜನೆಸ್ ಟೇನಷನ್ ದ ಕಾರಣ ಅಲ್ಪ ಸ್ವಲ್ಪ ಕಡಿಯುತ್ತಿದ್ದ ಆದರೆ ಕುಡಿದೇ ಸಾಯುವಷ್ಟು ಟೇನಷನ್ ಅವನಿಗೇನು ಇರಲಿಲ್ಲ ಅನ್ನಿಸುತ್ತೆ. ಆತ ಬೆಂಗಳೂರಿಗೆ ಬಂದಾಗಲೂ ಇಬ್ಬರೂ ಬಾರಿಗೆ ಹೋದರೆ ಒಂದೆರಡು ಪೆಗ್ಗದಲ್ಲಿ ಮುಗಿಸಿ ಬಿಡುತ್ತಿದ್ದೆವು. ಅದಕ್ಕಿಂತ್ ಹೆಚ್ಚಿಗೆ ಕುಡಿದಿದ್ದು ನಾನೆಂದೂ ನೋಡೇ ಇಲ್ಲ ಎಂದು ನಾ ಯೋಚಿಸುತ್ತಿರುವಾಗಲೇ ನನ್ನ ಮಾತಿನ ಸಮರ್ಥನೆಯಂತೆ ಮೊದಲಿನವಳೊಬ್ಬಳು ಪುನರುಚ್ಚಿಸಿದಳು.
“ಅದೆಲ್ಲ ಸುಳ್ಳ ಬಿಡೇ..ಜೀವ ಹೋಗುವಂತೆ ಅವನೆಂದು ಕುಡದಿರಲಿಲ್ಲ, ಅದೇನೋ ಮಕ್ಕಳು ಪರೀಕ್ಷೆಯಲ್ಲಿ ಫೇಲಂತೆ..ಅದೇ ಚಿಂತೆ.. ಟೇನಷನಿಂದ.. ಬಿ ಪಿ ಹಾಯ್ ಆಗಿ ಹಾರ್ಟ ಆಗಿದೆಯಂತೆ”
ಮೂಗು, ಬಾಯಿಗೆ ಸೀರೆ ಸೆರಗು ಮುಚ್ಚಿಕೊಂಡು ನಿಂತಿದ್ದ ಇನ್ನೊಬ್ಬಳು ತಗ್ಗಿದ ಧ್ವನಿಯಲ್ಲಿ ಮಾತಾಡುವುದು ಅಸಷ್ಟವಾಗಿ ನನ್ನ ಕಿವಿ ಕೊರೆಯುತ್ತಿದ್ದವು.
“ನೀವು ಹೇಳುವ ವಿಷ್ಯಾ ಯಾವುದು ನಿಜವಲ್ಲ, ಈ ಸಾವು ಒಂದು ಸಾಮಾನ್ಯ ಸಾವಲ್ಲ…”
ಇವಳ ಈ ಮಾತಿಗೆ ನನ್ನ ಎದೆ ನಡುಗಿತು. ಇವಳೇನು ಹೇಳುತ್ತಿದ್ದಾಳೆ ಎಂದು ಕೇಳಲು ನನ್ನ ಎರಡೂ ಕಿವಿ ನಿಮಿರಿ ನಿಂತವು. ಅವಳ ಜೊತೆ ಮಾತಿಗೆ ನಿಂತವರು ಕೂಡ ಅಷ್ಟೇ

ಕುತೂಹಲದಿಂದ –
“ಸಾಮಾನ್ಯ ಸಾವಲ್ಲ..ಅಂದರೆ !?” ಅವರ ಮಾತಿನಲ್ಲಿ ಆತಂಕ. ಧಾವಂತವಿತ್ತು.
“ಹೌದು ಅವನ ಸಾವು ಸಹಜ ಸಾವಲ್ಲ ; ಪೂರ್ವ ನಿಯೋಜತ ಸಂಚು”
‘ಸಂಚು..!!?…ಅಂದ್ರೆ…”
“ಅಂದರೆ ಅಂದರೆ ಅದೊಂದು”
“ಅದೊಂದು ..???” ಎಲ್ಲರ ಹೃದಯ ಬಡಿತ ಹೆಚ್ಚಾಗಿತ್ತು.
“ಅಂದರೆ ಅದೊಂದು ಕೊ.. ಲೆ” ಎಂದು ಕೊನೆಗೂ ಸಣ್ಣ ಧ್ವನಿಯಲ್ಲಿ ಸಾವಿನ ರಹಸ್ಯ ಬಿಚ್ಚಟ್ಟಳು, ಆದರೆ ಕೊಲೆ ರಹಸ್ಯ ಮಾತ್ರ ಮುಂದವರೆದಿತ್ತು.
“ಕೊಲೆನಾ?”
“ಹೌದು ಕೊಲೆ”
ಇವರ ಮಾತು-ಕತೆ ಕೇಳಿ ನನ್ನ ತೆಲೆ ಗಿರ್ರನೆ ಸುತ್ತಿ ಬಂದಂತಾಗಿತ್ತು. ಅವರ ಮಾತು ಮುಂದವರೆದಿತ್ತು.
“ಅದೇನು ಹೇಳಬಿಡೆ ಕೊಲೆಗೆ ಕಾರಣ ! ತುಂಬಾ ಉತ್ತಮ ಮನುಷ್ಯ,ಅಜಾತ ಶತ್ರು ,ನಾಲ್ಕು ಜನರಿಗೆ ಬೇಕಾದವ, ಕೈಲಾದಷ್ಟು ಸಹಾಯ ಮಾಡುವ, ಕೊಲೆಯಾಗಿ ಸತ್ತ ಅಂದರೆ ನಂಬೋಕಾಗುತ್ತಾ” ಈ ಪ್ರಶ್ನೆಯಿಂದ ನನಗೆ ಸ್ವಲ್ಪ ಸಮಾಧಾನವಾಗಿತ್ತು.ಆದರೆ ಆ ವಿಷಯ ಹೇಳಿದಾಕೆ ತನ್ನ ವಾದ ಸಮರ್ಥನೆಗೆ ತೊಡಗಿದಳು.

“ನಂಬಿ ಬೇಕಾದ್ರೆ ಬಿಡಿ ಅದು ಕೊಲೆಯೇ..”
“ಅದೇನೇ ಅಷ್ಟು ಖಚಿತವಾಗಿ ಹೇಳತಿ?” ಪ್ರಶ್ನಸಿದಳು ಮತ್ತೊಬಾಕೆ ನಾನು ಹೇಳತೀನಿ ಕೇಳು ಎಂದು ಮುಂದವರೆದಳು “ಯಾರ ಜೊತೆನೋ ಕೂಡಿಕೊಂಡು ಫೈನಾನ್ಸ ಉದ್ಯೋಗ ನಡೆಸುತ್ತಿದ್ದನಂತೆ, ಲಾಸಾಗಿ ಆತ್ಮಹತ್ಯೆ ಮಡಿಕೊಂಡನಂತೆ”
“ಇಲ್ಲ ಇಲ್ಲ ಆತ್ಮಹತ್ಯೆಯಲ್ಲ….. ಅದೊಂದು ಕೊಲೆಯೇ” ಮೊದಲಿನಾಕೆ ಸಮರ್ಥಿಸಿಕೊಳ್ಳುತ್ತಿದ್ದಳು.
“ನೀನು ಹೇಳುವಂತೆ ಫೈನಾನ್ಸು. ಲಾಸು ಎಲ್ಲಾ ನಿಜ ಆದರೆ ಅದು ಅವನನ್ನು ಕೊಂದವರು ಇನ್ನಾರು ಅಲ್ಲ ಈಗ ಅಳುವ ನಾಟಕ ಮಾಡುತ್ತಿದ್ದಾಳಲ್ಲ ಈ ಬಿನ್ನಾಣಗಿತ್ತಿಯೇ ವಿಷಾ ಹಾಕಿ ಕೊಂದಿದ್ದಾಳಂತೆ” ಎಂದವಳು ಹೇಳಿದಾಗ ನನ್ನ ಕಾಲು ಕೆಳಗಿನ ಭೂಮಿಯೇ ಬಾಯ್ದೆರದಂತೆ ಭಾಸವಾಯಿತು. ಆದರೂ ಆ ಚರ್ಚೆ ಕೇಳಲೇಬೇಕಾಗಿತ್ತು, ಏಕೆಂದರೆ ಅದರಲ್ಲಿ ಗಂಗಾಧರನ ಮರಣ ರಹಸ್ಯ ಅಡಗಿತ್ತು. ಹಲವು ಸಂದೇಹಗಳನ್ನು ಹೊರಹಾಕುತ್ತಿರುವ ಚರ್ಚೆಯಲ್ಲಿ ನಿಜವಾದದ್ದು ಯಾವುದೆಂದು ಅರಿಯಲೇಬೇಕಾಗಿತ್ತು, ಸಾವಿಗೆ ಕಾರಣವಾದ ನಿಜವಾದ ಕಾರಣ ತಿಳಿಯಲೇಬೇಕಾಗಿತ್ತು.ಆದರೆ ಶೀಲಾ ವಿಷ ಹಾಕಿ ಕೊಂದಳು ಎನ್ನುವ ವಿಷಯ ನನ್ನನ್ನು ಅಲ್ಲಾಡಿಸಿ ಬಿಟ್ಟಿತ್ತು. ನನಗೆ ತಿಳಿದಂತೆ ಅವರಿಬ್ಬರೂ ಅನುರಾಗದಿಂದ ಅನ್ಯೋನ್ಯವಾಗಿದ್ದರು. ಹಾಗಿದ್ದಾಗ ಅವಳು ಅವನನ್ನು ಯಾಕೆ ಸಾಯಿಸ್ತಾಳೆ? ಎನ್ನುವ ಪ್ರಶ್ನೆ ಕಾಡಿತು. ಅದೇ ಪ್ರಶ್ನೆ ಮತ್ತೊಬಾಕೆ ಅವಳನ್ನು ಕೇಳಿದಳು.

“ವಿನಾಕಾರಣ ಅವಳು ತನ್ನ ಗಂಡನ್ನೆ ಯಾಕೆ ಕೊಲಬೇಕು? ತನ್ನ ತಾಳಿ ತಾನೇ ಯಾರಾದರು ಕಿತ್ತು ಹಾಕಬಹುದೇ? ಯಾರೇ ಒಳ್ಳೆ ಹೆಣ್ಣು ಹೀಗೆ ಮಾಡಬಹುದೆ? ನಂಬೋಕಾಗೋಲ್ಲ”
“ನಿನಗೆ ಗೊತ್ತಿಲ್ಲ ಬಲು ಚಾಲಾಕಿ ಹೆಣ್ಣವಳು. ತುಂಬಾ ಜೋರು , ಮಹಾ ಜಗಳಗಂಟಿ ಗಂಡನ ಜತೆ ಯಾವತ್ತೂ ಜಗಳಾ ಕಾಯುತ್ತಿದ್ದಳು. ಪ್ರತಿ ಮಾತಿಗೂ ಸಿಟ್ಟು ಸಿಡಿಕು, ಮೇಲಿನಿಂದ ಬೆಣ್ಣೆ – ಒಳಗಿಂದ ಬೆಂಕಿ..ಬೆಂಕಿ ಆಗಿದ್ದಳು”
“ಅದೇನೋ ಗಂಡಾ ಹಂಡತಿ ಜಗಳ, ಜಗಳಾಡ್ತಾರೆ ಕೂಡ್ತಾರೆ.. ಆದರೆ ತನ್ನ ಗಂಡನ್ನೇ ಬಲಿ ತಗೆದುಕೊಳ್ಳುವಂಥದ್ದೇನಾಗಿತ್ತು..?”
ಕುತೂಹಲದ ಬಾಲ ಹಣುಮನ ಬಾಲದಂತೆ ಬೆಳೆಯುತ್ತಲೇ ಸಾಗಿತ್ತು.
“ಅದೇನೋ ಇವ್ಳಿಗೂ ಮತ್ತು ಅವ್ನ ಪಾರ್ಟನರಗೂ ಅದೇ ಬಿಜನೆಸ್ನಲ್ಲಿ ತಕರಾರ ಇತ್ತಲ್ಲ ..ಅವನಿಗೂ ಇವಳಿಗೂ ಏನೋ ಕನೆಕ್ಷನ್ ಇತ್ತಂತೆ..” ಇದನ್ನು ಕೇಳಿ ನನ್ನ ಮೇಲೆ ಸಿಡಿಲೇ ಎರಗಿದಂತಾಯಿತು. ಶೀಲಾ ಇನ್ನೊಬ್ಬನ ಜೊತೆ ಸಂಬಂಧ..ಛೇ..ಛೇ ನನಗೆ ಯಾವುದು ನಂಬಬೇಕು ಯಾವುದು ಬಿಡಬೇಕು ತಿಳಿಯದಾಗಿತ್ತು, ಅವರಲ್ಲೇ ಒಬ್ಬಳು ಆಕ್ಷೇಪ ಯತ್ತಿದಳು.

“ಅದೇನಿದ್ರೇನಂತೆ..ಬೆಳೆದ ಮಕ್ಕಳ ಕಣ್ಮುಂದೆ ಇದ್ದಾಗ ಇದ್ನೆಲ್ಲ ಮಾಡಲು ಅವಳ ಮನಸ್ಸಾದರು ಹೇಗೆ ಒಪ್ಪಬೇಕು ?”
“ಅವಳು ಹಾಗೆ ಮಾಡಲು ಬೇರೊಂದು ಕಾರಣವೂ ಇದೆಯಂತೆ”
“ಗಂಡಾಹೆಂಡ್ತಿ ನಡುವೆ ಮನಸ್ತಾಪ ಮೊದಲಿಂದಲೂ ಇತ್ತಂತೆ.. ಸತ್ತವನಿಗೆ ಇನ್ನೊಂದು ಸಂಬಂಧ ಸಹ ಇತ್ತಂತೆ, ಅದ್ಕೇ ಅವಳು ಅವನನ್ನು ವಿಷಾ ಹಾಕಿ ಕೊಂದಿರಬೇಕು”
“ಹೌಹೌದು..ಅವನಿಗೆ ಇನ್ನೊಂದು ಹೆಣ್ಣಿನ ಸಂಪರ್ಕ ಇತ್ತಂತೆ..”
‘ಆದರೂ ಶೀಲಾ ಅವನ್ನ ಕೊಂದು ಹಾಕುವಷ್ಟು ಕೆಟ್ಟವಳಲ್ಲ”
“ಮತ್ತೇ..?”
“ಅದೇ..ಇವ್ನ ಇಟಕೊಂಡಿದಳಲ್ಲ ಅವಳೇ ಆ ಹಾದರಗಿತ್ತಿ ಇವನನ್ನು ಮದ್ವೆಯಾಗಬೇಕಂತ ಬ್ಲ್ಯಾಕಮೇಲ ಮಾಡತ್ತಿದ್ದಳಂತೆ.. ಈತನಿಂದ ಸಾಕಷ್ಟು ಹಣ ಕಿಳುತ್ತಿದ್ದಳಂತೆ..ಹೀಗಾಗಿ ಆತ ತುಂಬಾ ಲಾಸ ಆಗಿದ್ನಂತೆ ..ಅದಕೇ ಅವನು ಆತ್ಮ ಹತ್ಯೆ ಮಾಡಕೊಂಡನಂತೆ’
ಈ ನಡುವೆ ಇನ್ನೊಬ್ಬಾಕೆ ಬಾಯಿಹಾಕಿದಳು.

“ಹೌದಹೌದು..ಇದು ನನಗೂ ಗೊತ್ತು, ಮದ್ವೆಯಾಗದಿದ್ದರೆ ಕೋರ್ಟು, ಕಚೇರಿ ಅಂತೆಲ್ಲ ಹೇಳಿ ಹೆದರಿಸುತ್ತಿದ್ದಳಂತೆ, ಪಾಪ ಮರ್ಯಾದೆಗೆ ಅಂಜುವ ಗಂಡಸು. ಸಮಾಜದಲ್ಲಿ ಎಲ್ಲಿ ತನ್ನ ಬಣ್ಣ ಬಯಲಾಗುವುದೋ ಎಂದು ಆತ್ಮಹತ್ಯೆ ಮಾಡಕೊಂಡಿರಬೇಕಂತೆ”
ಶೋಕ ಸಾಗರದಲ್ಲಿ ಮುಳಗಿದ ಗಂಗಾಧರನ ಕುಟುಂಬದ ಬೆನ್ನ ಹಿಂದೆ ನೂರಾರು ಮಾತುಗಳು. ಸಂದೇಹಗಳ ಗೊಂದಲವನ್ನೇ ಸೃಷ್ಟಿಸಿದ್ದವು. ಅಷ್ಟರಲ್ಲಿ ಇನ್ನೊಂದು ಬಾಂಬ್ ಸಿಡಿಯಿತು.
“ಅವ್ನಗೆಲ್ಲಿ ಮರ್ಯಾದೆ ಬಿಡೇ..ಅವ್ನಗೆ ಒಂದೇನು ಹತ್ತಾರು ಸಂಬಂಧಗಳು ಇದ್ದವುಂತೆ..ಹೆಣ್ಣು ಅವ್ನ ದೌರ್ಬಲ್ಯವಂತೆ !”
“ಅವನು ವ್ಯೆಶ್ಯಯರ ಮನೆಗೂ ಹೋಗುತ್ತಿದ್ದನಂತೆ !!”
ಶಿವ್ ಶಿವಾ! ಅವರ ಮಾತುಗಳು ನನ್ನ ಕಿವಿಗಳಿಗೆ ಅಗ್ನಿ ದ್ರವ್ಯವಾಗಿ ಇಳಿಯುತ್ತಿದ್ದರೆ ಹೊಟ್ಟೆಯಲ್ಲಿ ಸಂಕಟ-ತಳಮಳ.ಅತ್ತ ಗಂಗಾಧರನ ಹಂಡ್ತಿ ಮಕ್ಕಳು ಅವನ ಸಾವಿಗೆ ದುಃಖಿಸುತ್ತಿದ್ದರೆ ಇತ್ತ ಅವನ ಅಂತಿಮ ದರ್ಶನಕ್ಕೆ ಬಂದವರು ಅರ್ಧ ಸತ್ಯಗಳನ್ನು(ಅಸತ್ಯಗಳನ್ನು) ಹರಡುತ್ತಿದ್ದರು. ನಾನು ಸತ್ಯ ಅಸತ್ಯಗಳನ್ನು ತಿರ್ಮಾನಿಸಲಾಗದೆ ಒದ್ದಾಡುತ್ತಿದ್ದೆ. ಅವರ ಚರ್ಚೆ ಮಾತ್ರ ನಿರಾತಂಕವಾಗಿ ಮುಂದವರದಿತ್ತು. ಆ ಚರ್ಚೆಯಲ್ಲಿ ಭಾಗವಹಿಸಿದಾಕೆಯೊಬ್ಬಳು _
“ಹಾಗಾದರೆ ಅವನಿಗೆ ಖಂಡಿತ ಏಡ್ಸ್ ಬಂದಿರಬೇಕು” ಸಂದೇಹ ವ್ಯಕ್ತ ಪಡಿಸಿದಳು.

“ಸಂಶಯವೇಕೆ? ಖಂಡಿತ ಬಂದಿರುತ್ತೆ , ಏಕೆಂದ್ರೇ ಅವನು ಇಟ್ಕೋಂಡಿದ್ದಳಲ್ಲ ಅವಳ ಗಂಡ ಅದೇ ಕಾಯಿಲೆಯಿಂದ ತೀರಿಕೊಂಡಿದ್ದನಂತೆ”
ನಾನಂತೂ ಅವರ ಮಾತಿನ ವಿಷ ಚಕ್ರದಲ್ಲಿ ಬಿದ್ದು ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನಂತಾಗಿದ್ದೆ. ಅವನ ಸಾವಿನ ರಹಸ್ಯ ಭೇಧಿಸದವನಾಗಿದ್ದೆ. ಒಂದು ಕೆಟ್ಟ ಸಾವಿಗೆ ಕಾರಣವಾಗುವಂಥ ಎಲ್ಲ ಕಾರಣಗಳು ಇಲ್ಲಿ ವ್ಯಕ್ತವಾಗಿದ್ದವು. ಸಾವಿಗೆ ಕಾರಣ ಏನೇಯಾಗಿರಲಿ ಸಾವು ಒಂದು ಸಾವೇ. ನನ್ನಂಥ ಆತ್ಮೀಯರಿಗೆ. ಪ್ರೀತಿಸಿದವರಿಗೆ ನಿಜವಾಗಿಯೂ ನಷ್ಟವೇ!. ಆದರೆ ಕೆಲವರಿಗೆ ಸಾವು ಎನ್ನುವುದು ಕೇವಲ ಹುಡಗಾಟದ ಸಂಗತಿ. ಗಾಳಿ ಸುದ್ದಿಗಳು ಹರಡುವ ಮಾರ್ಗ ಮಾತ್ರ. ಯಾರಾದರು ಸತ್ತರೆ ಅಲ್ಲಿ ಹೋಗಿ ಅತ್ತವರಂತೆ ನಾಟಕವಾಡಿ ಅವರ ಮನೆಯವರಿಗೆ ನಾಲ್ಕು ಕೊಂಕು ಮಾತು ಮಾತಾಡಿ ಬಂದರೆನೇ ಅವರಿಗೆ ಊಟ ರುಚಿಸುವುದು. ಶವ ಅಂತಿಮ ಯಾತ್ರೆಗೆ ಅನಿಗೊಳಿಸಿದಂತೆ ಆ ಹೆಂಗಸರೆಲ್ಲ ಶವದ ಹತ್ತಿರಕ್ಕೆ ಹೋಗಿ ಅತ್ತು ಕರೆದು ಮಾಡಿ ಮತ್ತೇ ಸತ್ತವನ ಗುಣಗಾನ ಆರಂಭಿಸಿದರು.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಯಬಾರದಾಗಿತ್ತು.. ಮಕ್ಕಳು ಅನಾಥರಾದರು.. ಹೆಂಡ್ತಿ ಸಣ್ಣ ವಯಸ್ಸಿನಲ್ಲೆ ವಿಧವೆಯಾದಳು.. ಪಾಪ ಹೆಂಡ್ತಿ ಮಕ್ಕಳು ಹೇಗೆ ಬದುಕುಬೇಕು? ಸತ್ತವನ ಬಾಯಲ್ಲಿ ಮಣ್ಣು.. ಹಿಂದೆ ಉಳಿದವರು ಏನು ಮಾಡಬೇಕು?.. ಇದ್ದವರಗೇನು ಧಾಡಿ ..ಜೀವನ ಹೇಗೋ ಬದುಕು ಕಲಿಸುತ್ತದೆ… ಒಂದನಾಲ್ಕು ದಿನ ಅತ್ತು ಮರೆತು ಬಿಡ್ತಾರೆ…ಇತ್ಯಾದಿ ಇತ್ಯಾದಿಯಾದ ವಿಚಾರಗಳು ವ್ಯಕ್ತವಾಗುತ್ತಿದ್ದವು. ಆ ಸಮಯದಲ್ಲಿ ಅವರೆಲ್ಲ ನನಗೆ ದೊಡ್ಡ ತತ್ತ್ವಜ್ಞಾನಿಗಲ್ಲ ಸೇರಿ ಸಾವಿನ ಕುರಿತು ಚಿಂತನೆ ನಡೆಸುತ್ತಿರುವಂತೆ ತೋರುತ್ತಿದ್ದರು.

ದುಃಖದ ಮಹಾಪುರದ ನಡುವೆಯೇ ಗಂಗಾಧರನನ್ನು ಅಂತಿಮ ಯಾತ್ರೆಗೆ ಹೊರಡಿಸಲಾಯಿತು. ಸಾವಿಗೆ ಕಾರಣವಾಗುವ ಸಂದರ್ಭಗಳು ಕೇವಲ ನೆಪಗಳು ಮಾತ್ರ, ಸಾವು ಹೇಗಿದ್ದರೂ ಸಾವೇ!, ಒಂದು ದುರಂತವೇ!!. ಸಾವಿಗೆ ಕಾರಣ ಹುಡುಕು ಹೋಗುವುದು ತಪ್ಪು ಎನ್ನುವ ನಿರ್ಧಾರದೊಂದಿಗೆ ಗಂಗಾಧರನ ಪಾರ್ಥಿವ ಶರೀರದ ಹಿಂದೆ ರುದ್ರ ಭೂಮಿಯತ್ತ ಭಾರವಾದ ಹಜ್ಜೆ ಹಾಕಿದೆ. ಎಕೆಂದರೆ ಇಂದು ಅವನ ಸರದಿಯಾದರೆ ನಾಳೆ ನಮ್ಮ ಸರದಿ.. ಇದೇ ಜನ ನಾಳೆ ನಾವು ಸತ್ತಾಗ ಅದೇನು ಹೊಗಳಿ ಹಾಡುತ್ತಾರೋ! ಯಾರಿಗೆ ಗೊತ್ತು?

-ಅಶ್ಫಾಕ್ ಪೀರಜಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x