ಈಗೊಂದು 25 ವರ್ಷಗಳ ಹಿಂದೆ ಧಾರವಾಡಕ್ಕೆ ಹೋಗಿದ್ದೆ. ಆವಾಗಿನ ನಮ್ಮ ಮನಸ್ಥಿತಿಗೂ ಇವತ್ತಿನ ಸ್ಥಿತಿಗೂ ವ್ಯತ್ಯಾಸವಿದೆ. ಫೆಬ್ರುವರಿ 18 ಮತ್ತು 19ರಂದು ಧಾರವಾಡದಲ್ಲಿ “ಅಂತಾರಾಷ್ಟ್ರೀಯ ಪರಿಸರ ಚಲನಚಿತ್ರೋತ್ಸವ” ಕಾರ್ಯಕ್ರಮ ಇತ್ತು. ಮೂಲತ: ಹೊನ್ನಾವರದ ಸಮೀಪದವರಾದ ಡಾ:ಪ್ರಕಾಶ್ ಭಟ್ ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಪರಿಸರ ಎಂದ ಕೂಡಲೇ ಕಿವಿ ನಿಮಿರುವ ನಮಗೆ (ನಾನು, ಚಾರ್ವಾಕ ರಾಘು ಹಾಗೂ ಏಸು ಪ್ರಕಾಶ್) ಇದೊಂದು ಅಪ್ಯಾಯಮಾನವಾದ ಹಾಗೂ ಜರೂರತ್ತಾದ ಕಾರ್ಯಕ್ರಮವೇ ಆಗಿತ್ತು. ಸುಸ್ಥಿರ ಅಭಿವೃದ್ಧಿ ವೇದಿಕೆಯ ಮುಖ್ಯಸ್ಥರಾದ ಸಜ್ಜನ ಡಾ:ಪ್ರಕಾಶ್ ಭಟ್ ನೇತೃತ್ವದಲ್ಲಿ ಕಿರ್ಲೋಸ್ಕರ್ ವಸುಂಧರ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ರೀತಿಯ ಭಿನ್ನ ಕಾರ್ಯಕ್ರಮ ಧಾರವಾಡದಲ್ಲಿ ಮೊಟ್ಟಮೊದಲ ಬಾರಿಗೆ ಏರ್ಪಟ್ಟಿತ್ತು. ಮೂಲತ: ಕುರಿಗಾಹಿ ಕುಟುಂಬದಿಂದ ಬಂದ ಶ್ರೀ ಶಿವಾಜಿ ಕಾಗನೀಕರ್ ಎಂಬ ಸಂತರಿಗೆ “ವಸುಂಧರಾ ಪ್ರಶಸ್ತಿ”ಯನ್ನು ನೀಡಲಾಯಿತು.
ಕಾಲೇಜು ಮುಗಿಸಿದ ನಂತರ ಅನಿವಾರ್ಯವಾಗಿ ಯಾವುದಾದರೂ ಸರ್ಕಾರಿ ಕೆಲಸಕ್ಕೆ ಸೇರಿ ಜೀತ ಮಾಡಬೇಕಲ್ಲ ಎಂಬ ಚಿಂತೆ ಆ ಯುವಕನಿಗೆ ಶುರುವಾಗಿತ್ತು. 1972ರಲ್ಲಿ ಕಡೆಯ ವರ್ಷದ ಡಿಗ್ರಿಯ ಒಂದು ವಿಷಯದ ಪರೀಕ್ಷೆಗೆ ಹಾಜರಾಗದೇ ಫೇಲಾಗುವ ನಿರ್ಧಾರ ತೆಗೆದುಕೊಂಡ ಯುವಕ ಮತ್ತೆ ತಿರುಗಿ ಹಳ್ಳಿಯೆಡೆಗೆ ಮುಖ ಮಾಡುತ್ತಾನೆ. ಕಟ್ಟನಬಾವಿ ಎಂಬ ಹಳ್ಳಿ ಆಗ ತೀವ್ರವಾದ ನೀರಿನ ಬರವನ್ನು ಅನುಭವಿಸುತ್ತಿತ್ತು. ಸುಮಾರು 1200 ಜನಸಂಖ್ಯೆ ಇರುವ ಆ ಹಳ್ಳಿಗೆ ಇದ್ದದ್ದು ಒಂದೇ ಬಾವಿ! ಊರಿನ ಹೆಂಗಳೆಯರಿಗೆ ನೀರು ಹೊಂದಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಏನಾದರೂ ಮಾಡಬೇಕು ಎಂದು ಹೊರಟ ಆ ಯುವಕನ ಎದುರಿಗೆ ಇದ್ದಿದ್ದು ಬೆಟ್ಟದಷ್ಟು ದೊಡ್ಡ ಸವಾಲು. ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕಟ್ಟನಬಾವಿಯ ಯುವಕರಿಗೆ ಇನ್ಯಾವುದೇ ಹಳ್ಳಿಗಳಿಂದ ಹೆಣ್ಣುಗಳನ್ನು ಕೊಡುತ್ತಿರಲಿಲ್ಲ. ಹೆಚ್ಚಿನ ಯುವಕರು ಬಲವಂತದ ಬ್ರಹ್ಮಚಾರಿಯಾಗಿದ್ದರು. ಅದು ಯಾರೋ ಸಲಹೆ ಕೊಟ್ಟರು, ಅಣ್ಣಾ ಹಜಾರೆಯನ್ನು ಕಂಡು ಮಾತನಾಡಿದರು. ಮಳೆಗಾಲದ ನೀರಿಂಗಿಸುವ ಕಾಯಕಕ್ಕೆ ಬೀಜ ನೆಟ್ಟರು. ಗುಡ್ಡಗಳ ಮೇಲೆ ಇಂಗು ಗುಂಡಿಗಳನ್ನು ತೋಡಿದರು. ಊರಿನಲ್ಲಿ ಕೆರೆಗಳನ್ನು ನಿರ್ಮಿಸಿದರು. ಮೇಲ್ಮಣ್ಣು ಸವಕಳಿಯಾಗದಂತೆ ಸಸಿಗಳನ್ನು ನೆಟ್ಟರು. ಇಷ್ಟೆಲ್ಲಾ ಮಾಡಲು ಇವರಿಗೆ ಪ್ರೇರಣೆಯಾಗಿದ್ದು, ಇವರು ಬಾಲ್ಯದಿಂದ ಆರಾಧಿಸುತ್ತಿದ್ದ ಸಾನೆ ಗುರು. ಇವರ ಆದರ್ಶಗಳು ಈ ಯುವಕನಿಗೆ ಸ್ಪೂರ್ತಿಯಾಗಿದ್ದವು. ಆಹಾರ ಬೇಯಿಸಲು ಇದ್ದ ಅಲ್ಪ-ಸ್ವಲ್ಪ ಗಿಡ-ಗಂಟಿಗಳನ್ನೇ ಊರಿನವರು ಕಡಿಯುತ್ತಿದ್ದರು. ಕಾಡುಳಿಸುವ ಕಾಯಕಕ್ಕೆ ಇದರಿಂದ ತೊಂದರೆಯಾಗುತ್ತಿತ್ತು. ಇದಕ್ಕೆ ಪರ್ಯಾಯವಾಗಿ ಗೋಬರ್ ಗ್ಯಾಸ್ ಉತ್ಪಾದನೆ ಮಾಡಲು ಪ್ರೇರಪಿಸಿದರು. ಇದರಿಂದ ಹಸುರು ನಾಶವಾಗುವುದು ತಪ್ಪಿತು, ಮಹಿಳೆಯರು ಹೊಗೆಯ ಕಾರಣಕ್ಕೆ ಅನಾರೋಗ್ಯವಾಗುವುದು ತಪ್ಪಿತು. ಇದುವರೆಗೆ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿದ, 20 ಸಾವಿರ ಗೋಬರ್ ಗ್ಯಾಸ್ ಸ್ಥಾವರಗಳನ್ನು ನಿರ್ಮಿಸಿದ, ಸಾವಯವ ಬೇಸಾಯಕ್ಕೆ ಒತ್ತು ನೀಡಿದ, ಈ ಮೂಲಕ ಊರಿನ ಗಂಡುಮಕ್ಕಳಿಗೆ ಸ್ವಾವಲಂಬಿ ಬದುಕನ್ನು ಕಲಿಸಿದವರೇ ಮೇಲೆ ಹೇಳಿದ ಶ್ರೀ ಶಿವಾಜಿ ಕಾಗನೀಕರ್. ಕಾಲಲ್ಲಿ ಸರಳವಾದ ಚಪ್ಪಲಿ, ಚಡ್ಡಿ ಹಾಗೂ ಮುಂಡಂಗಿ ಜೊತೆಗೆ ತಲೆಯ ಮೇಲೊಂದು ಗಾಂಧಿ ಟೋಪಿಯ ಈ ಸಂತನಿಗೆ ಸನ್ಮಾನ ಮಾಡಿದ್ದು ಇಡೀ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿತು.
ಇನ್ನುಳಿದಂತೆ ಪರಿಸರ ಚಲನಚಿತ್ರೋತ್ಸವದಲ್ಲಿ 2 ನಿಮಿಷದ ಕಿರುಚಿತ್ರದಿಂದ ಹಿಡಿದು 50 ನಿಮಿಷದ ಧೀರ್ಘದ ಚಿತ್ರಗಳೂ ಇದ್ದವು. ಹೆಚ್ಚಿನವು ವನ್ಯಜೀವಿಗಳ ಸಂಕಷ್ಟಗಳಿಗೆ ಸೇರಿದವು. ನೀರಿನ ಮಿತಬಳಕೆ, ನೀರಿನ ಅಲಭ್ಯತೆಯಿಂದಾಗಿಯೇ ನಗರದೆಡೆಗೆ ಗುಳೆಹೋಗುವ ಚಿತ್ರಗಳು, ನೀರಿನ ವ್ಯಾಪಾರೀಕರಣದ ಒಳಹುನ್ನಾರವನ್ನು ಬೆತ್ತಲಾಗಿಸುವ ಕಿರುಚಿತ್ರಗಳು, ನದಿಗೆ ಜೀವ ತುಂಬಿದ ಯಶೋಗಾಥೆಗಳು, ಜೀವಜಾಲದ ಸಂಕೀರ್ಣತೆಯನ್ನು ತಿಳಿಸುತ್ತಾ ಸುಸ್ಥಿರವಾಗಿ ಬದುಕುವ ಕಲೆಯನ್ನು ಪ್ರಚುರಪಡಿಸುವ ಚಿತ್ರಗಳೂ ಇದ್ದವು. ಇಡೀ ಎರಡು ದಿನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿತು.
ಸುಸ್ಥಿರ ಅಭಿವೃದ್ಧಿಯ ಮಾದರಿಯ ಕುರಿತೇ ಚಿಂತಿಸುತ್ತಾ ನಡೆಯುತ್ತಿದ್ದವನಿಗೆ ರಸ್ತೆಯ ಮೇಲೊಂದು ದರಗೆಲೆಗಳ ತೊಪ್ಪೆ ಕಂಡಿತು. ಮಲೆನಾಡಿನಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಜಿಗಳಿಯ ಗೂಡು ಅದು. ಗೂಡಿನೊಳಗೆ ಇರುವೆಗಳೇನು ಇರಲಿಲ್ಲ. ತಲೆಯತ್ತಿ ನೋಡಿದರೆ ಇನ್ನೂ ನೆಲಕ್ಕೆ ಬೀಳುವ ಹತ್ತಾರು ಗೂಡುಗಳು ಅಳಲೆ ಮರದಲ್ಲಿ ನೇತಾಡುತ್ತಾ ಇದ್ದವು. ಆ ಮರ ಸಂಪೂರ್ಣವಾಗಿ ಎಲೆಯುದುರಿಸಿ ಬೋಳಾಗಿತ್ತು. ಮತ್ತೆ ಚಿಗುರುವ ಪ್ರಯತ್ನದಲ್ಲಿತ್ತು. ಜಿಗಳಿಗಳಿಗೆ ಇಂಗ್ಲೀಷ್‍ನಲ್ಲಿ ವೀವರ್ ಆಂಟ್ ಎನ್ನುತ್ತಾರೆ. ಬಲು ವಿಶಿಷ್ಟವಾದ ಮತ್ತು ಸಂಕೀರ್ಣವಾದ ತಾಂತ್ರಿಕತೆಯನ್ನು ಬಳಸಿ ಇವು ಗೂಡು ಕಟ್ಟುತ್ತವೆ. ಒಂದು ಎಲೆಯ ತುದಿಯಿಂದ ಇನ್ನೊಂದು ಎಲೆಯ ತುದಿಗೆ ಕೆಲಸಗಾರ ಇರುವೆಗಳು ಸೇತುವೆಯನ್ನು ನಿರ್ಮಿಸಿಕೊಳ್ಳುತ್ತವೆ. ವಿದ್ಯುತ್ ಕಂಬಗಳನ್ನು ನಿಲ್ಲಿಸುವಾಗ ಅಥವಾ ಇನ್ಯಾವುದೇ ಭಾರವಾದ ಕೆಲಸವನ್ನು ಮಾಡುವಾಗ ಕಾರ್ಮಿಕರು ಒಟ್ಟಿಗೆ ಐಸ್ಸಾ ಎಂದು ಕೂಗುತ್ತಾ ಆ ಕೆಲಸವನ್ನು ಮಾಡುತ್ತಾರಲ್ಲ (ಈಗ ಎಲ್ಲಾ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುವುದರಿಂದ, ಈ ಐಸ್ಸಾ-ಐಸ್ಸಾ ಕೂಗು ಮಾಯವಾಗಿದೆ) ಹಾಗೆಯೇ ಇರುವೆಗಳು ಏಕತ್ರವಾಗಿ ತಮ್ಮೆಲ್ಲ ಬಲವನ್ನು ಬಿಟ್ಟು ತಮ್ಮ ದೇಹವನ್ನು ಸಂಕುಚಿತಗೊಳಿಸಿಕೊಳ್ಳುತ್ತವೆ. ಆಗ ಎರಡೂ ಎಲೆಗಳು ಒಂದಕ್ಕೊಂದು ಹತ್ತಿರವಾಗುತ್ತವೆ ಹೀಗೆ ಆ ಎರಡೂ ಎಲೆಗಳೂ ಕೂಡುವವರೆಗೂ ಈ ಪ್ರಕ್ರಿಯೆ ಮುಂದುವರೆಯುತ್ತದೆ. ನಂತರ ಅಂಟಿನಂತಹ ಜೊಲ್ಲಿನಿಂದ ಎಲೆಗಳನ್ನು ಬೆಸೆಯುತ್ತವೆ. ಹೀಗೆ ಹತ್ತಾರು ಎಲೆಗಳನ್ನು ಬೆಸೆದರೆ ಗೂಡು ತಯಾರಾಗಿದೆ ಎಂದು ಅರ್ಥ.
ಮನುಷ್ಯನ ಹೊರತುಪಡಿಸಿ ಪ್ರಪಂಚದ ಇನ್ಯಾವುದೇ ಪ್ರಾಣಿಗೆ ತನ್ನ ಬದುಕು ಕಟ್ಟಿಕೊಳ್ಳಲು ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವ ಅನಿವಾರ್ಯತೆ ಇಲ್ಲ. ಯಾವ ಮರದ ಎಲೆ ಯಾವಾಗ ಉದುರುತ್ತದೆ ಎಂಬುದು ಜಿಗಳಿಗಳಿಗೆ ಗೊತ್ತು. ಎಲೆಯೊಣಗಿ ಉದುರುವ ಒಳಗಾಗಿ ತಮ್ಮ ವಂಶಾಭಿವೃದ್ಧಿಯನ್ನು ಅವು ಮಾಡಿಕೊಳ್ಳುತ್ತವೆ. ಗೂಡು ನಿರ್ಮಿಸುವ ಶ್ರಮ ಕಡಿಮೆ ಮಾಡಿಕೊಳ್ಳುವ ಅವುಗಳ ಯೋಚನೆಯೂ ಹಾಗೆಯೇ ಇರುತ್ತದೆ. ಹುಣಿಸೆ ಮರದಲ್ಲಿ ಜಿಗಳಿ ಗೂಡು ಕಟ್ಟುವುದಿಲ್ಲ. ದೊಡ್ಡ ಎಲೆಗಳೇ ಅವುಗಳಿಗೆ ಬೇಕು. ಎಲೆಗಳು ದೊಡ್ಡದಾಗಿಯೂ ಇರಬೇಕು, ಮೃದುವಾಗಿಯೂ ಇರಬೇಕು. ಆಲದ ಮರದಂತಹ ದಪ್ಪ ಎಲೆಗಳನ್ನು ಎಳೆದು ಕಟ್ಟುವುದು ಅವುಗಳಿಗೆ ಕಷ್ಟ. ನೈಸರ್ಗಿಕವಾದ ಎಲ್ಲಾ ಮುನ್ಸೂಚನೆಗಳು ಅವುಗಳಿಗೆ ಸಿಗುತ್ತವೆ. ಸಾಯುತ್ತಿರುವ ಮರಗಳಲ್ಲಿ ಅವು ಗೂಡು ನಿರ್ಮಿಸುವುದಿಲ್ಲ. ಅವುಗಳಿಗೆ ಕಷ್ಟ ಬರುವುದು ಪ್ರಕೃತಿಯಿಂದ ಅಲ್ಲ. ಮನುಷ್ಯರಿಂದ. ಗೂಡು ಇರುವ ಯಾವುದಾದರೂ ಹಸೀ ಮರವನ್ನು ನಾವೇನಾದರೂ ಕಡಿದರೆ, ಅವು ಮತ್ತೆ ಗುಳೇ ಹೋಗುವುದು ಅನಿವಾರ್ಯ. ಆದರೂ ಹಸಿ ಮೊಟ್ಟೆಗಳನ್ನೇ ಬಾಯಲ್ಲಿ ಕಚ್ಚಿಕೊಂಡು, ಮತ್ತೆ ಗೂಡು ಕಟ್ಟಿ ರಕ್ಷಿಸುವ ಪ್ರಯತ್ನ ಮಾಡುತ್ತವೆ. ಸಾಮೂಹಿಕ ಒಗ್ಗಟ್ಟಿಗೊಂದು ಅತ್ಯುತ್ತಮ ಮಾದರಿ ಈ ಚಿಗಳಿ ಇರುವೆಗಳು. ನೆಲಕ್ಕೆ ಬಿದ್ದ ಆ ದರಗೆಲೆಯ ತೊಪ್ಪೆ ಮತ್ತೆ ಮಣ್ಣಿಗೆ ಸೇರಿ ಸಾವಯವ ಗೊಬ್ಬರವಾಗುತ್ತದೆ. ಅಲ್ಲೊಂದು ಮರುಸೃಷ್ಟಿಗೆ ಕಾರಣವಾಗುತ್ತದೆ.
ಮನೆಯೆದುರಿಗೆ ಐದು ನಂದಿ ಮರಗಳಿವೆ. ಎಲ್ಲಾ ಮರಗಳೂ ಎಲೆಯುದುರಿಸಿ, ಬೋಳಾಗಿ ನಿಂತಿವೆ. ಭೂಮಿಯಲ್ಲಿ ತೇವಾಂಶದ ಕೊರತೆ ಇದೆ. ಹಾಲಿ ನಂದಿ ಮರಗಳು ಸತ್ತೇ ಹೋಗಿವೆಯೇನೋ ಎಂಬಂತೆ ತೋರುತ್ತಿದೆ. ಬೆಳಗಿನ ಅಷ್ಟೊತ್ತಿಗೆ ಕಾಕಾ ಜೋಡಿ ಎದುರಿನ ಅಡಕೆ ತೋಟದಲ್ಲಿರುವ ಒಂದೇ ರಾಮಡಿಕೆ ಮರದ ಚಂಡೆಯ ಮೇಲೆ ಗೂಡು ನಿರ್ಮಿಸುವ ಕಾಯಕ ಶುರು ಮಾಡಿದ್ದವು. ನಂದಿ ಮರದಲ್ಲಿನ ಒಣಗಿದ ಕಡ್ಡಿಗಳೇ ಅವುಗಳ ಗೂಡಿಗೆ ಕಚ್ಛಾವಸ್ತು. ಒಣಗಿದ ನಂದಿ ಮರದ ಕಡ್ಡಿಗಳನ್ನು ಹುಡುಕಿ, ಕೊಕ್ಕಿನಿಂದ ಮುರಿದು, ಕಚ್ಚಿಕೊಂಡು ರಾಮಡಿಕೆ ಮರದ ಚಂಡೆಯತ್ತ ಹಾರುವುದು. ಕಾಗೆ ಗೂಡು ಯಾವಾಗಲೂ ಆಕರ್ಷಕವಲ್ಲ. ಹೊರಗಿನ ಭದ್ರಕೋಟೆಗೆ ಮರದ ಕಡ್ಡಿಗಳು, ಬೈಂಡಿಂಗ್ ತಂತಿಗಳು, ಲೋಕ ಚಿಕ್ಕ ತುಂಡುಗಳಾದರೂ ಆದೀತು. ಒಳಗಿನ ಮೆತ್ತೆಗೆ ಸ್ವಲ್ಪ ಮೃದುವಾದ ವಸ್ತುಗಳನ್ನು ಹುಡುಕುತ್ತವೆ. ಮೆಲುಕುತ್ತಾ ಮಲಗಿರುವ ಎಮ್ಮೆ ಅಥವಾ ದನದ ಬಾಲದ ಕೂದಲುಗಳು ಇವುಗಳ ಗೂಡಿಗೆ ಕಚ್ಛಾವಸ್ತುವಾಗಿ ಬಿಡುತ್ತವೆ. ಹಾಗಂತ ಕಾಗೆಗಳ ಗೂಡು ಚೋರೆ ಹಕ್ಕಿಗಳ ಗೂಡಿನಂತೆ ತೀರಾ ದುರ್ಬಲವಲ್ಲ. ಗಾಳಿ-ಮಳೆಗೆ ಚೆಲ್ಲಾಡಿ ಬೀಳುವುದಿಲ್ಲ. ಕಾಗೆಗಳು ಒಮ್ಮೆ ಗೂಡು ಮಾಡಲು ಜಾಗ ಗೊತ್ತು ಮಾಡಿಕೊಂಡರೆ, ಅಲ್ಲೇ ಗೂಡು ಮಾಡುತ್ತವೆ. ಅಂದರೆ ಆ ಋತುಮಾನದ ಎಲ್ಲಾ ಸಂಭಾವ್ಯ ಪ್ರತಿಕೂಲ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿಯೇ ಅವು ಗೂಡು ಕಟ್ಟಲು ತಯಾರಿ ಮಾಡಿಕೊಂಡಿರುತ್ತವೆ. ಜನವಸತಿ ಇರುವಲ್ಲೇ ವಾಸಿಸುವ ಕಾಗೆಗಳು ನೈಸರ್ಗಿಕ ಜಾಡಮಾಲಿಗಳೂ ಹೌದು. ಮನುಷ್ಯ ಮಾಡಲಾಗದ ಕೆಲಸವನ್ನು ಅವು ಮಾಡುತ್ತವೆ. ಊರನ್ನು ಶುಚಿಯಾಗಿಡಲು ಸಹಕರಿಸುತ್ತವೆ.
ನಾವು ಮನುಷ್ಯರೂ ಮನೆ ಕಟ್ಟುತ್ತೇವೆ. ನಮಗೆ ನೆಲದೊಳಗಿನ ಕಲ್ಲು, ಮಣ್ಣು, ಕಬ್ಬಿಣ, ನೀರೊಳಗಿನ ಮರಳು, ನೆಲದ ಮೇಲಿನ ಮರ, ಕಾರ್ಖಾನೆಯಲ್ಲಿ ತಯಾರಾದ ಸಿಮೇಂಟ್, ವಿವಿಧ ವಿಷಯುಕ್ತ ರಾಸಾಯನಿಕಗಳಿಂದ ಬಣ್ಣಗಳೂ, ಗ್ರಾನೈಟ್, ಟೈಲ್ಸ್‍ಗಳು ಹೀಗೆ ಲೆಕ್ಕವಿಲ್ಲದಷ್ಟು ಪ್ರಕೃತಿಯಿಂದ ಲಭ್ಯವಾಗುವ ಕಚ್ಛಾವಸ್ತುಗಳು ಬೇಕು. ಅದರಲ್ಲೂ ಐಷಾರಾಮಿ ಮನೆಯೆಂದರೆ, ಮುಗಿದೇ ಹೋಯಿತು, ಗೋಡೆಗೂ ಮರ ಬೇಕು. ಸರಿಯಾಗಿ ಬೆಳಕು ಬಾರದ ಮನೆಗೆ ವಿದ್ಯುತ್ ಬೇಕು. ಹೀಗೆ ಎಲ್ಲಾ ತರಹದ ವಸ್ತುಗಳೂ ನಮಗೆ ಬೇಕು. ಮನುಷ್ಯರು ಒಂಥರಾ ವಿದ್ವಂಸಕರೇ ಆಗಿದ್ದಾರೆ. ನಮಗೆ ಹೋಲಿಸಿದರೆ, ಕೀಟ-ಪಕ್ಷಿ ಪ್ರಪಂಚವೇ ಎಷ್ಟೋ ಮೇಲು, ಸುಸ್ಥಿರದ ಕಲ್ಪನೆಗೆ ಪೂರಕವಾಗಿ ಇಲ್ಲಿ ಜಿಗಳಿ-ಕಾಗೆಗಳು ನುಸುಳಿದ್ದಾವೆ. ಅನುಕರಣನೀಯವಲ್ಲವೆ???