ಲೇಖನ

ಅಂತರ ರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಮಹೇಶ್: ಎಂ.ಎನ್.ಸುಂದರ ರಾಜ್

ಪ್ರಕೃತಿ ಛಾಯಾಚಿತ್ರಗಳು ಕೇವಲ ಬಣ್ಣಬಣ್ಣದ ಚಿತ್ರಗಳಲ್ಲ, ಪ್ರಕೃತಿಯಲ್ಲಿ ಮೂಡಿಬಂದ ಸುಂದರ ಕಲಾಕೃತಿಗಳು. ಅವುಗಳನ್ನು ಕೆಮರಾದಲ್ಲಿ ಸೆರೆಹಿಡಿದು ಕಣ್ಮನಗಳಿಗೆ ಮುದನೀಡುವಂತೆ ಸಮಾಜಕ್ಕೆ ನೀಡಿರುವುದರ ಹಿಂದೆ, ಅಪಾರ ಪರಿಶ್ರಮ ಮತ್ತು ತನ್ಮಯತೆಯಿದೆ. ಅದೊಂದು ತಪಸ್ಸು. ನಾವು ಆ ಚಿತ್ರಗಳನ್ನು ನೋಡಿ ಚೆನ್ನಾಗಿದೆ ಎಂದು ಒಂದೇ ಮಾತಿನಲ್ಲಿ ಹೇಳುತ್ತೇವೆ. ಆದರೆ ಅಂತಹ ಫೋಟೋ ತೆಗೆಯಲು ಪಟ್ಟ ಪಾಡು, ತಿರುಗಿದ ಕಾಡು ಮೇಡುಗಳು, ಜೀವದ ಹಂಗು ತೊರೆದು ವನ್ಯ ಜೀವಿಗಳ ಅಪಾಯವನ್ನೂ ಲೆಕ್ಕಿಸದೆ ಒಂದು ಉತ್ತಮ ಚಿತ್ರಕ್ಕೆ ದಿನಗಟ್ಟಲೆ ಆಹಾರ ನಿದ್ರೆಯಿಲ್ಲದೆ ಕಾದು ಕುಳಿತುಕೊಳ್ಳುವ ಮನೋವಾಂಛಲ್ಯ ಇವೆಲ್ಲವುಗಳನ್ನು ಪರಿಗಣಿಸಿದಾಗ ಛಾಯಾಚಿತ್ರ ಕಲೆ ಅದೆಷ್ಟು ಕಷ್ಟದ್ದು ಎಂದು ತಿಳಿದುಬರುತ್ತದೆ.

ಇಂತಹ ಕಲೆಯನ್ನು ಕರಗತ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಶಿವಮೊಗ್ಗದ ಎಂ.ಮಹೇಶ್ ಎಲೆಮರೆಯ ಕಾಯಂತೆ, ಪ್ರಚಾರಬಯಸದ ಓರ್ವ ಕರ್ಮಯೋಗಿ. ವನ್ಯಜೀವಿಗಳ ಛಾಯಾಚಿತ್ರಕ್ಕಾಗಿ ಅಲೆಯದ ಕಾಡು ಮೇಡುಗಳಿಲ್ಲ, ಸುತ್ತದ ಸ್ಥಳಗಳಿಲ್ಲ. ಭಾರತದ ಕಜಿರಂಗ, ಭರತ್‍ಪುರ್, ಅಂಡಮಾನ್ ಮತ್ತು ನಿಕೋಬಾರ್, ಮಧ್ಯಪ್ರದೇಶ, ಉತ್ತರ್ ಕಾಂಡದ ಜಿಮ್ ಕಾರ್ಬೆಟ್, ಕೌಸನಿ, ನೈನಿತಾಲ್, ಕೀನ್ಯಾ, ಮನೈಮ್ಮಾರ್, ಸರಂಗೇಟ್ ಅಮೇರಿಕಾದ ಎಲ್ಲೋಸ್ಟೋನ್ ಪಾರ್ಕ್, ಯೋಜೋಮೀಟ್, ಕಿಂಗ್ಸ್ ಕೆನಿಯನ್, ಯೂಟಾ ಮುಂತಾದ ಹಲವಾರು ಪ್ರದೇಶಗಳಿಗೆ ಹೋಗಿ ತಿಂಗಳುಗಟ್ಟಲೆ ಬೀಡು ಬಿಟ್ಟು, ಅಪಾಯವನ್ನೂ ಲೆಕ್ಕಿಸಿದೆ, ಲಕ್ಷಾಂತರ ಹಣ ವ್ಯಯಿಸಿ ಕ್ಲಿಕ್ಕಿಸಿದ ಅಪರೂಪದ ಪೋಟೋಗಳು ಇವರ ಸಂಗ್ರಹದಲ್ಲಿದೆ. ಒಂದೊಂದೂ ಅದ್ಭುತ, ರಮಣೀಯ, ಅಮೂಲ್ಯ.

ಇತ್ತೀಚೆಗಷ್ಟೆ ಅವರು ದಿನಗಟ್ಟಲೆ ಆಫ್ರಿಕಾದ ಕಾಡಿನಲ್ಲಿ ಕುಳಿತು ತೆಗೆದ “ಕಾಡು ಪ್ರಾಣಿಯನ್ನು ಕೊಲ್ಲುತ್ತಿರುವ ಹೈನಾಗಳು” ಚಿತ್ರಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಅದರಲ್ಲಿ ಅತಿ ಮುಖ್ಯವಾದವುಗಳೆಂದರೆ, 2019ರ ಪಿ.ಹೆಚ್.ಎ. ಗ್ರಾಂಡ್ ಪ್ರಶಸ್ತಿ, 2018ರ 3ನೇ ಬರಕ್‍ಪೋರ್ ಫಹೋಟೋ ಲವರಸ್ ಸೋಷಿಯೇಷನ್ನಿನ ಚಿನ್ನದ ಪದಕ, ಲೋಫ್ಟ್ ಮನ್ ಎರಡನೇ ಅಂತತರರಾಷ್ಟ್ರೀಯ ಸಲನ್ 2019 ಚಿನ್ನದ ಪದಕ, 51ನೇ ಹೌರಾ ಕಲರ್ ಸಲೋನ್ ಚಿನ್ನದ ಪದಕ, ಅಂತರರಾಷ್ಟ್ರೀಯ ನಾಲ್ಕನೇ ಭಾರತೀಯ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಪ್ರಶಸ್ತಿ, ಭಾರತದ ವನ್ಯ ಜೀವಿ ಫೋಟೋಗ್ರಫಿಕ್ ಅಸೋಷಿಯೇಷನ್, ಪ್ರಿಸಂ ಅಂತರರಾಷ್ಟ್ರೀಯ ಸಕ್ರ್ಯೂಟ್ ಪ್ರಶಸ್ತಿಗಳು ಸೇರಿವೆ ಅದಲ್ಲದೆ ಬಂದಿರುವ ಪದಕಗಳ ಸಂಖ್ಯೆ 80ಕ್ಕೂ ಹೆಚ್ಚು.

ವನ್ಯಜೀವಿ ಛಾಯಾಗ್ರಹಣ ಮತ್ತು ಸ್ಥಿರ ಚಿತ್ರ ಛಾಯಾಗ್ರಹಣದಲ್ಲಿ ಅಪಾರ ಪರಿಣತಿ ಹೊಂದಿರುವ ಮಹೇಶ್ ಈಗಾಗಲೇ ಎರಡು ಬಾರಿ ವಿದೇಶ ಪ್ರವಾಸ ಕೈಗೊಂಡು ಸಹಸ್ರಾರು ಫೋಟೋಗಳನ್ನು ತೆಗೆದಿದ್ದಾರೆ. ಈ ಹಿಂದೆ ಅಮೇರಿಕಾದ ಎಲ್ಲೋಸ್ಟೋನ್ ಪಾರ್ಕಿನಲ್ಲಿ ತೆಗೆದ ‘ಗೀಸರ್ ಬೇಸಿನ್’ ಚಿತ್ರಕ್ಕೆ 2010ರ ಅತ್ಯುತ್ತಮ ಭೂದೃಶ್ಯ (ಲ್ಯಾಂಡ್ ಸ್ಕೇಪ್) ಪ್ರಶಸ್ತಿಯನ್ನು ಭಾರತೀಯ ಫೋಟೋಗ್ರಫಿ ಫೆಡರೇಷನ್ನನಿಂದ ಪಡೆದುಕೊಂಡಿದ್ದಾರೆ. ಹೀಗೆ ಅವರು ತೆಗೆದ ನೂರಾರು ಚಿತ್ರಗಳಿಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿದ್ದು ಶಿವಮೊಗ್ಗದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಮಹೇಶ್ ಅವರು ಇಷ್ಟೆಲ್ಲಾ ಸಾಧನೆ ಮಾಡಿದರೂ ಸಹ ಅವರೆಂದೂ ತಮ್ಮ ಬಗ್ಗೆ ಹೇಳಿಕೊಳ್ಳುವುದಿಲ್ಲ. ಆದರೆ ಅವರ ಗೆಳೆಯರು ಮತ್ತು ಅಭಿಮಾನಿಗಳು ಅವರ ಬಗ್ಗೆ ಶ್ಲಾಘನೆಯ ಮಾತನ್ನಾಡುತ್ತಿರುತ್ತಾರೆ. ಕೆಲ ಪ್ರತಿಷ್ಠಿತ ಸಮಾರಂಭಗಳ ಮತ್ತು ಕಾರ್ಯಕ್ರಮಗಳ ಛಾಯಾ ಚಿತ್ರ ತೆಗೆಯಲು ಮಹೇಶ್ ಅವರನ್ನೇ ದುಂಬಾಲು ಬೀಳುತ್ತಿರುವುದು ಅವರ ಕೌಶಲ್ಯತೆ ಮತ್ತು ವೃತ್ತಿಪರತೆಯನ್ನು ತೋರಿಸಿಕೊಡುತ್ತದೆ., ಹಲವಾರು ಚಿನ್ನದ ಮತ್ತು ರಜತ ಪದಕಗಳಿಗೆ ಭಾಜನರಾಗಿರುವ ಮಹೇಶ್ ಅವರಲ್ಲಿ ಬೆಲೆಬಾಳುವ ಕ್ಯಾಮರಾ ಸದಾ ಸಂಗಾತಿ. ಇಂತಹ ಛಾಯಾಚಿತ್ರ ಕಲವಿದನಿಗೆ ನಿಮ್ಮ ಒಂದು ದೂರವಾಣಿ ಕರೆ ಸಂತಸವನ್ನುಂಟು ಮಾಡಬಹುದು. ಅವರ ದೂರವಾಣಿ ಸಂಖ್ಯೆ: 9886523228.
-ಎಂ.ಎನ್.ಸುಂದರ ರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *