ಅಂತರ ನಿರಂತರವಾಗದೆ ಕಾವ್ಯ ಹೂವುಗಳು ಪರಿಮಳಿಸುತಿರಲಿ: ಅನಿತಾ ಪಿ.ಪೂಜಾರಿ ತಾಕೊಡೆ

ಲೇಖಕರು: ಡಾ.ವಿಶ್ವನಾಥ ಕಾರ್ನಾಡ್
ಪ್ರಕಾಶನ: ಗಾಯತ್ರೀ ಪ್ರಕಾಶನ
ಮುದ್ರಕರು: ಅನಂತ ಪ್ರಕಾಶ ಕಿನ್ನಿಗೋಳಿ
ಪುಟ: 96. ಬೆಲೆ: ರೂ 120/-

ಡಾ. ವಿಶ್ವನಾಥ ಕಾರ್ನಾಡ್ ಅವರು ಸೌಮ್ಯಭಾವದ ಕವಿ. ಕಳೆದ ಹಲವಾರು ದಶಕಗಳಿಂದ ತಮ್ಮನ್ನು ಎಲ್ಲ ಪ್ರಕಾರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ. ಇವರು ಕನ್ನಡದ ಬರವಣಿಗೆ ಆರಂಭಾವದದ್ದು ಕವಿತೆಯಿಂದಲೇ. ಅವರ ಮೊದಲ ಕವಿತೆ ‘ದಿಬ್ಬಣ’ ಮಾಸ್ತಿಯರ ‘ಜೀವನ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದೇ ಅವರಿಗೆ ಇನ್ನಷ್ಟು ಕಾವ್ಯ ಬರೆಯುವಲ್ಲಿ ಪ್ರೇರಣೆಯಾಯಿತೆಂದು ಅವರೇ ಹೇಳಿಕೊಂಡಿದ್ದಾರೆ. “ಪ್ರತಿಯೊಬ್ಬನಲ್ಲಿಯೂ ಭಾವನೆ ಇದೆ. ತುಡಿಯುವ ಮನಸ್ಸಿದೆ” ಅನ್ನುವ ಕಾರ್ನಾಡ್ ಅವರು ಕತೆಯಲ್ಲಿ ಹಿಡಿದಿಡಲಾಗದ ವಿಷಯ ಕೀಟದಂತೆ ಕಾಡಿದಾಗ ಮಾತ್ರ ಕವಿತೆ ಬರೆಯುತ್ತೇನೆ ಅನ್ನುತ್ತಾರೆ. ಇವರ ಅಂತರ ಮತ್ತು ನಿರಂತರ ಎರಡು ಕವನ ಸಂಕಲನಗಳು ಬೆಳಕಿಗೆ ಬಂದಿವೆ. ಕಾರ್ನಾಡ್ ಅವರ ನಿರಂತರ ಕವನ ಸಂಕಲನ 2019ರಲ್ಲಿ ಗಾಯತ್ರಿ ಪ್ರಕಾಶನದ ಮುಖಾಂತರ ಬೆಳಕು ಕಂಡಿದೆ. ಈ ಕವನ ಸಂಕಲನದಲ್ಲಿ ಒಟ್ಟು ಐವತ್ತೊಂದು ಕವಿತೆಗಳಿವೆ. ಶ್ರೀಮತಿ ಶಾರದಾ ಅಂಚನ್ ಅವರು ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಡಾ. ಕಾರ್ನಾಡರ ಕಾವ್ಯಪ್ರಪಂಚದಲ್ಲಿ ತೀವೃವಾದ ಭೌತಿಕ ಸಂಘರ್ಷವಾಗಲಿ, ಪ್ರೀತಿಯ ಹೆಸರಿನಲ್ಲಿ ಕಾಮದ ಕಾತರವಾಗಲಿ ಇಲ್ಲದೆ, ಸಾಮಾಜಿಕ ಸಾಂಸ್ಕೃತಿಕ ಸಂಘರ್ಷಗಳನ್ನು ಸಮಾಜ, ಮನುಷ್ಯ ಮತ್ತು ಸಮಾಜದ ತೊಳಲಾಟಗಳನ್ನು ವ್ಯಕ್ತಿಗತ ನೆಲೆಯಲ್ಲಿಯೇ ಶೋಧಿಸುತ್ತಾರೆ. ಎಂದು ಕಾರ್ನಾಡರ ಕಾವ್ಯಸತ್ವವನ್ನು ವಿ. ಎನ್ ಶ್ಯಾನ್ ಬಾಗ್ ಅವರು ಈ ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ

ಈ ಸಂಕಲನದ ಹೆಸರಿನ ‘ನಿರಂತರ’ ಕವಿತೆಯು ನಿರಂತರವಾದ ಅಂತರದಿಂದ ನೆಲಮುಗಿಲುಗಳ ಮಿಲನವಾಗುವುದಿಲ್ಲ ಅನ್ನುವ ವಾಸ್ತವತೆಯನ್ನು ಪ್ರತಿಬಿಂಬಿಸುತ್ತಲೇ ಮುಂದುವರಿಯುತ್ತವೆ.

ಎಷ್ಟು ಕಾಲದಿಂದ ಒಳ ಮಾತುಗಳು
ತುಟಿಯವರೆಗೆ ಬಂದು ಬಿಡುತ್ತವೆ.
ಒಳಗಿನ ಭಾವತೆರೆಗಳು ಒಂದರ ಮೇಲೊಂದು ಉರುಳುತ್ತ
ದಡ ಮುಟ್ಟಲು ಕಾತರಿಸಿ ಮರು ಉರುಳಿ ಸಾಗಿಬಿಡುತ್ತವೆ.

ಕೆಲವೊಮ್ಮೆ ಮನಸ್ಸಿನೋವರಿಯಲ್ಲಿ ಹೇಳಲಸಾಧ್ಯವಾದ ಬಹಳಷ್ಟು ಮಾತುಗಳಿರುತ್ತವೆ. ಆದರೆ ಎಲ್ಲವನ್ನೂ ಹೇಳವುದು ಆ ಸಮಯ ಸಂದರ್ಭಕ್ಕೆ ಸೂಕ್ತವಾಗದೆ ಇರಬಹುದು. ನಾವಾಡುವ ಮಾತು, ಮೌನ ಭಾವಗಳ ಪರಿಮಿತಿ ಈ ಕವಿತೆಯಲ್ಲಿ ಧ್ವನಿತವಾಗಿದೆ.

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ
ತಲೆಯಲ್ಲಿದ್ದುದು ಪೆನ್ನಿಗೆ ಇಳಿದು
ಕಾಗದದ ಮೇಲೆ ಮೂಡುವುದಿಲ್ಲ
ಕಾಗದದ ಮೇಲೆ ಪೆನ್ನಿನ ಮಸಿ ಬೀಳುವುದು ಅಲ್ಲ,
ವಿಚಾರ ವಸ್ತು ಅದೇ ತಲೆಯೊಳಗಿನ ಕಸರತ್ತು

ಕವಿತೆ ಸುಮ್ಮನೆ ಅರಳುವುದಿಲ್ಲ. ಭಾವಗಳು ಪರಿಪಕ್ವವಾಗಿ ಪದಪುಂಜವಾಗಲು ಹಾತೊರೆಯುತಿರಬೇಕು. ಕಾವ್ಯ ಬರೆಯಲೂ ಚಾಕಚಕ್ಯತೆ ಇರಬೇಕು ಅನ್ನುವುದು ಕವಿಯ ನಿಲುವು.

ಈ ಸಂಕಲನದಲ್ಲಿ ಪುರಾಣ ಪಾತ್ರಗಳನ್ನಾಧರಿಸಿ ಬರೆದ ಕವಿತೆಗಳು ನಮ್ಮ ಗಮನ ಸೆಳೆಯುತ್ತವೆ.

ಶಂತನು ಮರಳಿ ಬಂದಾಗ ಈ ಕವಿತೆಯಲ್ಲಿ
ಸತ್ಯವತಿ ನೀನು
ಸಿಕ್ಕಿದರೆ ಹಲೋ ಎಂದು ತೆರಳು
ತಡೆಯದಿರು ನುಡಿಯದಿರು
ಮತ್ತೊಮ್ಮೆ ಕನ್ಯೆಯಾಗಿ ನನ್ನೆದುರು ಸುಳಿಯದಿರು
ನಾನು ಮತ್ತೊಮ್ಮೆ ಮಂಕಾಗಿ
ಮುಂದಿನ ಭಾರತಕ್ಕೆ ಕಾರಣವಾಗಲಾರೆ

ಬದುಕು ಹಾಗೆಯೇ ಅನುಭವಿಸಿದ ಮೇಲೆಯೇ ಅದರ ಒಳಿತು ಕೆಡುಕುಗಳ, ತಳೆದ ನಿರ್ಧಾರಗಳ ಬಗ್ಗೆ ಪಶ್ಚಾತಾಪದ ಅರಿವು ಆಗುವುದು. ಇಲ್ಲಿ ಬರುವ ಶಂತನುವಿನ ಪಾತ್ರದ ಹೇಳಿಕೆ ಇದಕ್ಕೆ ಉದಾಹರಣೆಯಾಗಿದೆ.

ಸ್ವಗತ ಕವಿತೆಯಲ್ಲಿ ದ್ರೋಣನನ್ನು ಕವಿ ಚಿತ್ರಿಸಿದ ಬಗೆ ಹೀಗಿದೆ.

ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ
ದೇವತೆಗಳು ಬಂದು ಕರೆದರೂ ದೇವ ಸಭೆಯಲ್ಲಿ
ಕರ್ಮ ವಿಮರ್ಶೆಯಾಗಲಿದೆ ಎಂದು ಹೊಳೆದರೂ
ಕಡಿಮೆಯಾಗಲಿಲ್ಲ ಯೋಚನೆಗಳ ಏರಿಳಿತ
ಇಲ್ಲಿ ದ್ರೋಣರೇ ತಾನೆಗಿಸಿದ ಪಕ್ಷಪಾತ ನೀತಿಯನ್ನು ನೆನಪಿಸುತ್ತ
ಒಂದು ಕುಲದ ಒಂದು ಬಲದ
ಒಂದು ತತ್ವದ ಕೊಲೆಗೆ ಹೇತುವಾದಾತ ಒಲ್ಲ
ಸಗ್ಗ ಸುಖ ನನಗೆ ಸಲ್ಲ

ಎಂಬುದನ್ನು ಕವಿ ದ್ರೋಣನ ಮೂಲಕವೇ ಹೇಳಿಸಿದ್ದಾರೆ. ಗುರುವಾದವನು ಹೇಗಿರಬೇಕು ಎಂಬ ಕವಿಯ ಆಶಯ ಇಲ್ಲಿ ಧ್ವನಿತವಾಗಿದೆ.

ಕಾವ್ಯಕ್ಕೂ ಪ್ರೀತಿಗೂ ಅವಿನಾಭಾವ ಸಂಬಂಧವಿದೆ. ಸೃಜನಶೀಲ ಕ್ರಿಯೆಯ ಅಂತಃಶಕ್ತಿ ಪ್ರೀತಿ. ಒಲವೇ ಭಾವಪೂರ್ಣ ಬರಹದ ಜೀವರಸ. ಇದು ನಿರ್ಜೀವ ವಸ್ತುಗಳಲ್ಲಿಯೂ ವ್ಯಕ್ತವಾಗಬಹುದು. ಈ ಸಂಕಲನದಲ್ಲಿಯೂ ಪ್ರೀತಿಯ ಕುರಿತಾಗಿ ಹಲವು ಕವಿತೆಗಳಿವೆ. ದಾಂಪತ್ಯ ಗೀತೆಗಳಿವೆ. ಅಗಲಿಕೆಯ ನೋವು, ವಿರಹದ ವೇದನೆಗಳು ಇಲ್ಲಿನ ಹಲವಾರು ಕವಿತೆಗಳಲ್ಲಿ ಕಾಣಸಿಗುತ್ತವೆ.

ನೀನೇ ಕವಿತೆಯ ಉಸಿರಾಗು ಕವಿತೆಯಲ್ಲಿ
‘ಓದಿದೆನು ನಿನ್ನ ಗೀತೆಗಳ ನಲ್ಲ
ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ’ ಎನ್ನುತ್ತಲೇ ಕವಿ ತನ್ನ ನಲ್ಲೆಗೆ ನೀನೇ ನನ್ನ ಕವಿತೆಯ ಕಲ್ಪನೆಯಾಗು, ಉಸಿರಾಗು ಎನ್ನುವ ಕವಿ ಮನಸ್ಸಿನ ಪ್ರೇಮ ನಿವೇದನೆಯ ಸೊಗಸು ಓದುಗನಿಗೆ ವೇದ್ಯವಾಗುತ್ತದೆ

ಬದುಕಿನ ಹಾದಿಯಲ್ಲಿ ನಾವು ಬಹಳಷ್ಟು ಮಂದಿಯನ್ನು ಸಂಧಿಸುತ್ತೇವೆ. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ನಮಗೆ ಆಪ್ತರಗುತ್ತಾರೆ. ಅದರಲ್ಲೂ ಜೀವನಪೂರ್ತಿ ಜೊತೆಯಿರುವ ಬಾಂಧವ್ಯಕ್ಕೆ ಒಳಗಾದವರು ಹಟಾತ್ತನೆ ಎದ್ದು ಹೋದಾಗ ಆ ಆಘಾತವನ್ನು ಸಹಿಸುವುದು ಕಷ್ಟವೇ. ಮಾನವ ಸಂಬಂಧಗಳೇ ಹೀಗೆ. ಸುಖ ದುಃಖ ನೋವು ನಲಿವುಗಳ ಜೊತೆ ಜೊತೆಯಲಿ ಸಾಗಬೇಕು. ಅಂಥದ್ದೇ ಒಂದು ಕವಿತೆ,

ಆಕಾಶದಲ್ಲೊಂದು ನೆಲೆಯ ಹುಡುಕುತ್ತಾ ಈ ಕವಿತೆಯಲ್ಲಿ
ಕೇವಲ ಮೂರು ತಾಸಿನೊಳಗೆ
ಯಾರಿಗೂ ತ್ರಾಸು ಕೊಡದೆ
ಇದ್ದಕ್ಕಿದ್ದಂತೆ ಅವಸರದಲ್ಲಿ ಎದ್ದು ಹೋದದ್ದು ಎಲ್ಲಿಗೆ?
ಯಾರ ಮೇಲೆ ಮುನಿಸು? ಯಾಕೆ ನೊಂದಿತು ಮನಸು?
ಆಕಾಶದ ನೆಲೆಯ ಶೋಧನೆಯಲ್ಲಿ ಹೊರಟದ್ದು
ಅದೆಂಥಾ ನಿರ್ವಾಣದೆಡೆಗೆ

ನಾನು ನೀನಿಲ್ಲದ ಭಾವಲೋಕದ ಅಂಚಿಗೆ..! ಕವಿಯ ಮನಸ್ಸಿನೊಳಗೆ ಎಂದಿಗೂ ಅರಗಿಸಿಕೊಳ್ಳಲಾಗದ ನೋವೇ ಕಾವ್ಯ ರೂಪದಲ್ಲಿ ಹೊರ ಹೊಮ್ಮಿದೆ.

ತನ್ನ ಬಾಳಲ್ಲಿ ಆಪ್ತವೆನಿಸಿದ ಜೀವ ದೂರ ಸರಿದರೂ ಮನಸ್ಸು ಅಷ್ಟು ಬೇಗನೇ ಒಪ್ಪಿಕೊಳ್ಳುವುದಿಲ್ಲ. ಬೇಕು ಬೇಕೆಂದು ಹಂಬಲಿಸುವ ಜೀವದ ಹುಡುಕಾಟ ಕಾದಿಹೆನು ನಿನಗಾಗಿ ಕವಿತೆಯಲ್ಲಿ ನಾವು ಕಾಣಬಹುದು.

ನನ್ನೊಳಗಿದ್ದು ಹೋದೆಯೆಲ್ಲಿಗೆ?
ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ ದಿಟ್ಟಿ ಮಿಟುಕದೆ
ಮೋಡಗಳಾಚೆಗೊಮ್ಮೆ ನೋಡಿದ್ದೇ ಬಂತು
ನಿನ್ನ ಸುಳಿವು ಸಿಗಲಿಲ್ಲ.

ಇದೇ ಭಾವ ಮರಳಿ ಬಾ ಸುರಂಜನಾ ಕವಿತೆಯಲ್ಲಿಯೂ ಇದೆ.
ಆಕಾಶ ಪರ್ಯಂತ ಹರಡಿರುವ
ಬೆಳ್ಳಿ ಬೆಳಕಿಗೆ ಮರಳಿ ಬಾ ಸುರಂಜನಾ
ಮರಳಿ ಈ ಬಯಲಿಗೆ ತೆರೆಗಳಿಗೆ
ಬಾ ಮರಳಿ ನನ್ನ ಹೃದಯಕೆ
ಅವನ ಜೊತೆ ನಡೆದು ಹೋಗದಿರು ದೂರ ದೂರ ಅನಂತಕೆ.

ಮಾನವ ಸಂಘಜೀವಿ ಜೊತೆಯಲ್ಲಿ ಇರುವಾಗ ನಮಗೆ ತಿಳಿಯದಂತೆಯೇ ಒಬ್ಬರನ್ನೊಬ್ಬರು ಅವಲಂಬಿಸಿಬಿಡುತ್ತೇವೆ. ಈ ಅವಲಂಬನೆಯೇ ನಂತರದಲ್ಲಿ ನಮಗೆ ಬಹಳಷ್ಟು ನೋವು ಕೊಡುತ್ತದೆ. ಕಾಡಿಸುತ್ತದೆ. ಆದರೆ ಅವೆಲ್ಲವನ್ನೂ ಮೀರಿ ಮುನ್ನಡೆಯುವ ಆತ್ಮಸ್ಥೈರ್ಯವೂ ಇಲ್ಲಿನ ಇನ್ನಿತರ ಕವಿತೆಗಳಲ್ಲಿ ಕಾಣಬಹುದು

ಹುಟ್ಟಿನಿಂದ ಸಾವಿನವರೆಗೆ ದೈಹಿಕವಾಗಿ ಮಾನಸಿಕವಾಗಿ ಬದಲಾವಣೆಗಳಿಗೆ ಒಗ್ಗಿಕೊಂಡೇ ನಮ್ಮ ಜೀವನ ಸಾಗುತ್ತಿರಬೇಕು. ನಾವು ಸ್ವಂತವನ್ನು ಹೆಚ್ಚಾಗಿ ಪ್ರೀತಿಸುವುದರಿಂದ ದೈಹಿಕ ಬದಲಾವಣೆಗಳು ಕೆಲವೊಮ್ಮೆ ನಮ್ಮನ್ನು ಬೆಚ್ಚಿ ಬೀಳಿಸುವುದುಂಟು. ಕನ್ನಡಿಯಲ್ಲಿ ನರೆಗೂದಲನ್ನು ಕಂಡು ವೈರಾಗ್ಯ ಬಂದ ಪ್ರಸಂಗಗಳು ಜೈನ ಸಂಪ್ರದಾಯದ ಕಥೆಗಳಲ್ಲಿ ನಮಗೆ ಕಾಣಸಿಗುತ್ತದೆ. ಇಲ್ಲಿನ
ಈಗೇಕೆ ಮರುಗುವೆ ಮರುಳೆ ಕವಿತೆಯಲ್ಲಿ

ಮುಪ್ಪಿನ ಯೋಚನೆಗೆ ಯೋಜನೆಗೆ
ಹೌಹಾರಿ ಹೆದರಿ ಕನ್ನಡಿಯೆದುರಿಗೆ ನಿಂತು
ನರೆಕೂದಲನು ಹೆಕ್ಕುತಾ
ಹಣೆಯ ಕಣ್ಣ ಸುತ್ತ ಹಬ್ಬಿರುವ ಸುಕ್ಕನು ಕಂಡು
ಜೋಲು ರಟ್ಟೆಯನು ಮುಟ್ಟಿ ಮುಟ್ಟಿ
ಅಯ್ಯಾ ಮುಪ್ಪೇ ಎಂದು ನಿಡುಸಿರು ಬಿಡುವೆಯೇಕೆ?
ಎಂದೋ ಒಂದು ದಿನ ಅಳಿಯುವ ಮುಳಿಯುವ
ಈ ಸೊತ್ತಿನ ಮೋಹವೇತಕೆ?

ಕವಿ ಇಲ್ಲಿ ವಾಸ್ತವವನ್ನು ಒಪ್ಪಿಕೊಂಡು ನಡೆಯಬೇಕೆನುವ ಮಹತ್ವದ ಸಂದೇಶವನ್ನು ನೀಡಿದ್ದಾರೆ.

ಅರಿಷಡ್ವರ್ಗಗಳನ್ನು ಮನುಷ್ಯನನ್ನು ಮುತ್ತಿಕೊಂಡಿರುವವರೆಗೆ ಮನಸ್ಸಿನ ಶಾಂತಿ ಕದಡುತ್ತಲೇ ಇರುತ್ತದೆ. ಶಾಂತಿಯ ಕನಸು ಕವಿತೆಯಲ್ಲಿ

ಕಂಬನಿ ಸುರಿಯದಿರು
ವಂಚಿಸಿತು ಜಗ ಜನವು
ಸಂಚಿನಲಿ ಬದುಕನ್ನು

ಇಂಚರದ ಸುಳಿಗಾಳಿ ವಂಚಿಸಿತು ಹೂವನ್ನು ಮೋಸ ವಂಚನೆಗಳು ಈ ಜಗತ್ತಿನಲ್ಲಿರುವ ವರೆಗೆ ಶಾಂತಿ ಬರೀ ಕನಸು ಅನ್ನುವ ತಾತ್ಪರ್ಯ ಈ ಕವಿತೆಯಲ್ಲಿದೆ.

ಬದುಕಿನ ಏರಿಳಿತಗಳಲ್ಲಿ ಏಗಿ ಮಾಗಿ ಬಂದ ಕವಿಯ ಮನಸ್ಸು,
ಹಾರು ಹಾರೆಲೆ ಚೆಲುವಕ್ಕಿ ಹಾರು
ಬದುಕಿನ ದಿನಗಳ ಮರೆತು

ಅನ್ನುತ್ತಾ ಹಕ್ಕಿಯಾಗಿ ಸ್ವಚ್ಛಂದವಾಗಿ ಹಾರಬಯಸುತ್ತದೆ. ಎಲ್ಲ ಬಂಧನಗಳ ಬಿಡುಗಡೆಗಾಗಿ ಹಾತೊರೆಯುತ್ತದೆ.

ಈ ಸಂಕಲನದಲ್ಲಿ ಮುಂಬೈ ಬದುಕು ಎಂಬ ಕವಿತೆಯು ನಗರದ ಬದುಕಿನ ಸಂಕ್ಷಿಪ್ತ ಚಿತ್ರಣವನ್ನು ನೀಡುತ್ತದೆ. ಹಣತೆಯ ಕೊರಗು ಕವಿತೆಯಲ್ಲಿ ಕವಿಯ ಮನಸ್ಸು ನಿರ್ಜೀವ ವಸ್ತುಗಳ ಕೊರಗನ್ನು ತಿಳಿಯ ಬಯಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಇಲ್ಲಿನ ಕವಿತೆಗಳ ವಸ್ತು ವಿಷಯಗಳಲ್ಲಿ ಭಿನ್ನತೆಯಿದೆ. ಪ್ರಕೃತಿ ಪ್ರೀತಿ ಸಂಬಂಧ ಆಸೆಗಳು ಪುರಾಣ ಪಾತ್ರಗಳನ್ನು ಬಳಸಿಕೊಂಡು ಬರೆದ ಕವಿತೆಗಳು, ಸಾಮಾಜಿಕ ನೆಲೆಯಲ್ಲಿ ಹಾಗೂ ದೇಶಪ್ರೇಮವನ್ನು ಸ್ಫುರಿಸುವ ಕವಿತೆಗಳು, ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಕವಿತೆಗಳು ಈ ಸಂಕಲನದಲ್ಲಿ ಒಳಗೊಂಡಿವೆ. ಇಲ್ಲಿನ ಕವಿತೆಗಳಲ್ಲಿ ಮಾನವೀಯ ಕಳಕಳಿಯೊಂದಿಗೆ ಸಕಾರಾತ್ಮಕ ಚಿಂತನೆಗಳಿವೆ. ಸದ್ಭಾವನೆಯ ನುಡಿಗಳೊಂದಿಗೆ ಉತ್ತಮ ಸಂದೇಶಗಳಿದ್ದು, ಹೆಚ್ಚಿನ ಕವಿತೆಗಳು ಸುಲಭವಾಗಿ ಅರ್ಥವಾಗುವ ಶೈಲಿಯಲ್ಲಿವೆ. ನಿರಂತರ ಕವನ ಸಂಕಲನ ಕಾವ್ಯ ಕ್ಷೇತ್ರಕ್ಕೆ ಒಂದು ಉತ್ತಮ ಕೊಡುಗೆಯೆನ್ನಬಹುದು. ಸದಾ ಹೊಸದನ್ನು ಕಾಣುವ ಹಂಬಲದೊಂದಿಗೆ, ಆಳವಾಗಿ ಚಿಂತನ, ಮಂಥನ, ಅಧ್ಯಯನ ನಡೆಸಿ ಅದನ್ನು ತಮ್ಮ ಬರವಣಿಗೆಯ ಮೂಲಕ ಸಹೃದಯರಿಗೆ ನೀಡುವ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಡಾ. ವಿಶ್ವನಾಥ್ ಕಾರ್ನಾಡ್ ನಿಜಕ್ಕೂ ಅಭಿನಂದನಾರ್ಹರು.

ಅನಿತಾ ಪಿ.ಪೂಜಾರಿ ತಾಕೊಡೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Adv R.M.Bhandari, Mumbai
Adv R.M.Bhandari, Mumbai
3 years ago

Your foreword about Dr. Vishwanath Karnad is extremely matured one. You got rich commond over the Kannada language. Exellant Anita n keep it up😊👍

ಅನಿತಾ ಪಿ ಪೂಜಾರಿ ತಾಕೊಡೆ
ಅನಿತಾ ಪಿ ಪೂಜಾರಿ ತಾಕೊಡೆ
3 years ago

ಧನ್ಯವಾದ ಸರ್

Dr.Badarinath Jahagirdar

ಸಹೋದರಿ ಅನಿತಾ.

ಡಾ. ವಿಶ್ವನಾಥ ಸರ್ ಅವರ ಕಾವ್ಯ ಕೃತಿಗಳ ಕುರಿತು ಬರೆದಿರುವ ಲೇಖನ ಇಷ್ಟವಾಯಿತು. ಅವರ ಸಾಹಿತ್ಯವನ್ನ ಪರಿಚಯಿಸಿದ ರೀತಿ ಮನಸ್ಸಿಗೆ ತುಂಬಾ ಹಿಡಿಸಿತು. ನೀವು ಕೂಡ ಪ್ರಬುದ್ಧ ಬರಹಗಾರರು ಹೀಗಾಗಿ ನೀವು ಬರೆದ, ವಿವರಿಸಿದ ಸಂಗತಿಗಳು ಓದಲು ಖುಷಿ ಕೊಡುತ್ತವೆ. ವಂದನೆಗಳು

ಅನಿತಾ ಪಿ ಪೂಜಾರಿ ತಾಕೊಡೆ
ಅನಿತಾ ಪಿ ಪೂಜಾರಿ ತಾಕೊಡೆ
3 years ago

ಧನ್ಯವಾದ ಸರ್ 😊🙏

4
0
Would love your thoughts, please comment.x
()
x