ಅಂತರಾಷ್ಟ್ರೀಯ ಸಿನಿಮೋತ್ಸವ ಹಾಗೂ ನಾ ಮೆಚ್ಚಿದ ಸಿನೆಮಾಗಳು: ಮಂಸೋರೆ

ಸಿನೆಮಾ ಜಗತ್ತೊಂದು ಅಕ್ಷಯ ಪಾತ್ರೆಯಿದ್ದಂತೆ. ಇಲ್ಲಿ ಎಷ್ಟೇ ಬಗೆದರೂ ಮತ್ತಷ್ಟು ತುಂಬಿಕೊಳ್ಳುತ್ತದೆ. ಜಗತ್ತನ್ನು ಸಿನೆಮಾ ಮಾಧ್ಯಮ ಆವರಿಸಿರುವ ಪರಿ ಹಾಗಿದೆ. ಬೇರೆಲ್ಲಾ ಅಭಿವ್ಯಕ್ತಿ ಮಾಧ್ಯಮಗಳಿಗಿಂತ ವೇಗವಾಗಿ ತನ್ನನ್ನು ತಾನು ಪುನರ್‌ವಿಮರ್ಶಿಸಿಕೊಂಡಿರುವ ಮಾಧ್ಯಮವೆಂದರೆ ಅದು ಸಿನೆಮಾ ಮಾತ್ರ. ಹಾಗಾಗಿಯೇ ಜಗತ್ತಿನ ಅಷ್ಟೂ ಇತಿಹಾಸವನ್ನು ತನ್ನೊಳಗಿನಿಂದ ಅಭಿವ್ಯಕ್ತಿಗೊಳಿಸುತ್ತಾ ಸಾಗುತ್ತಿದೆ. ಹಾಗಾಗಿ ಇದು ಜಗತ್ತಿನೊಳಗಿನ ಬಹುಮುಖಿ ಸಂಸ್ಕೃತಿಯಂತೆ ತನ್ನ ಅಭಿವ್ಯಕ್ತಿಯ ವ್ಯಾಪ್ತಿ, ಆಶಯ, ಆಸ್ಥೆಗಳಲ್ಲೂ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ.

ಜಗತ್ತಿನ ಕೆಲವು ಭಾಗಗಳಿಗೆ ಸಿನೆಮಾ ಒಂದು ಸಮಯ ಕಳೆಯಲು ಮನರಂಜನಾ ಮಾಧ್ಯಮವಾಗಿ ಮಾತ್ರ ಉಳಿದುಕೊಂಡಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಜಗತ್ತಿಗೆ ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳುವುದರ ಮೂಲಕ ತಮ್ಮ ಉಳಿವಿಗಾಗಿ ಜಗತ್ತಿನ ಮುಂದೆ ನಗ್ನರಾಗುವ ತುಡಿತದ ಮಾಧ್ಯಮವಾಗಿದೆ. ಮತ್ತೂ ಕೆಲವು ಭಾಗದ ಜನರಿಗೆ ಸಿನೆಮಾದ ಮೂಲಕ ತಾವು ನಡೆದು ಬಂದ ಹಾದಿಯಲ್ಲಿ ಮೆತ್ತಿರುವ ನೆತ್ತರನ್ನು ತೊಳೆದುಕೊಳ್ಳಲು ಒಂದು ಸಾಧನವಾಗಿದ್ದರೆ, ಅದೇ ಹಾದಿಯಲ್ಲಿ ಚೆಲ್ಲಿದ ತಮ್ಮ ಪೂರ್ವಜರ ನೆತ್ತರನ್ನು, ಆ ನೆತ್ತರು ಹರಿಸಿದ ದುರಂತ ಅಧ್ಯಾಯದ ಹಿನ್ನಲೆಯನ್ನು ಜಗತ್ತಿಗೆ ಪರಿಚಯಿಸುವುದರ ಮೂಲಕ ಆ ಹಾದಿಯಲ್ಲಿ ಕ್ರಮಿಸಿದವರನ್ನು ಬೆತ್ತಲಾಗಿಸುವ ಮಾಧ್ಯಮ ಮತ್ತೊಬ್ಬರಿಗೆ.

ಹೀಗೆ ಸಿನೆಮಾ ಮಾದ್ಯಮವು ಜಗತ್ತಿನ ಅಷ್ಟೂ ಸಂಗತಿಗಳನ್ನು ತನ್ನೊಡಲೊಳಗೆ ತುಂಬಿಕೊಳ್ಳುತ್ತಲೇ ಇದೆ. ಇಂತಹ ಜಗತ್ತನ್ನು ನೋಡುವ ಬೆಳಕಿಂಡಿಯಾಗಿ ‘ಐದನೇ ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ’ ಕನ್ನಡಿಗರಿಗೆ ದಕ್ಕುತ್ತಿರುವುದು ಸಂತಸದ ಸಂಗತಿ. ಈಗಿನ ತಂತ್ರಜ್ಞಾನದ ಯುಗದಲ್ಲಿ ಈ ಸಿನೆಮಾಗಳನ್ನು ದಕ್ಕಿಸಿಕೊಳ್ಳುವುದು ಅಂತಹ ಕಷ್ಟದ ಸಂಗತಿಯಲ್ಲವಾದರೂ, ಉತ್ಸವದ ಧನಾತ್ಮಕ ಫಲಿತವೆಂದರೆ ಅಷ್ಟೂ ಸಿನೆಮಾ ಪ್ರೇಮಿಗಳೊಂದಿಗೆ ಕೂತು ನೋಡುವುದು. ಮತ್ತು ಸಿನೆಮಾ ನೋಡಿ ಬಂದ ನಂತರ ಅದರ ಕುರಿತಾದ ಲಘು ಚರ್ಚೆ, ವಾದ, ಅದ್ಭುತವೆನಿಸಿದ, ಮೆಚ್ಚಿದ ಸಂಗತಿಗಳ ವಿನಿಮಯ ಒಂದಿಡೀ ವಾರ ಸಿನೆಮಾ ಗುಂಗಲ್ಲೆ ಕಳೆಯುವುದು.

ಒಂದಿಡೀ ವಾರ ನೋಡುವ ಸಿನೆಮಾಗಳಲ್ಲಿ ಅತ್ತ್ಯುತ್ತಮ ಸಿನೆಮಾ ಎಂದು ವರ್ಗೀಕರಿಸುವುದು ತುಸು ಕ್ಲಿಷ್ಟಕರವಾದ ಕೆಲಸ. ಕೆಲವು ಸಿನೆಮಾಗಳು ಮೊದಲ ನೋಟಕ್ಕೆ ಇಷ್ಟವಾದರೆ, ಮತ್ತೂ ಕೆಲವು ಸಿನೆಮಾಗಳು ಹಲವು ದಿಗಳನಂತರ ಕಾಡಲು ತೊಡಗುತ್ತವೆ. ಮೆಚ್ಚಿದ ಮೂರು ಸಿನೆಮಾಗಳನ್ನು ಆಯ್ಕೆ ಮಾಡುವುದಾದರೆ ಈ ಮೂರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ೧. ಆಸ್ಟ್ರಿಯಾ ದೇಶದ ಆಮೋರ್, ೨. ಲೆಬನಾನ್‌ನ ವೇರ್ ಡು ವಿ ಗೋ ನೌ, ೩. ಬ್ರೆಜಿಲ್‌ನ ದಿಕ್ಲೌನ್

೧. ಆಮೋರ್

ಮಿಶೆಲ್ ಹನೇಕೆ ನಿರ್ದೇಶನದ ಆಮೋರ್ (ಕನ್ನಡದಲ್ಲಿ ಅರ್ಥ ‘ಪ್ರೀತಿ’) ಸಿನೆಮಾ ಈ ಬಾರಿಯ ಆಸ್ಕರ್‌ನ ವಿದೇಶಿ ಸಿನೆಮಾಗಳ ಸಾಲಿನಲ್ಲಿ ನಮ್ಮ ಭಾರತದ ಬರ್ಫಿಯನ್ನು ಹಿಂದಿಕ್ಕಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಂತಹ ಸಿನೆಮಾ. ೮೦ರ ಗಡಿ ಮುಟ್ಟಿರುವ ವಯೋವೃದ್ದ ದಂಪತಿಗಳ ಕಥೆಯನ್ನು ಹೊಂದಿರುವ ಈ ಸಿನೆಮಾದಲ್ಲಿ ಮಾಗಿದ ದಂಪತಿಗಳ ನಡುವಿನ ಸಂಬಂಧ ಮತ್ತು ಆ ಸಂಬಂಧದೊಂದಿಗೆ ಬೆಸೆದುಕೊಂಡಿರುವ ಪ್ರೀತಿಯ ಮತ್ತೊಂದು ಮುಖವನ್ನು ನೋಡುಗನ ಅನುಭವಕ್ಕೆ ದಕ್ಕುವಂತೆ ಮಾಡುತ್ತದೆ. ‘ಜಾರ್ಜಸ್’ ಮತ್ತು ‘ಅನ್ನೆ’ ಇಬ್ಬರೂ ನಿವೃತ್ತಿ ಹೊಂದಿರುವ ಸಂಗೀತ ಶಿಕ್ಷಕರು. ಆವರ ಒಬ್ಬಳೇ ಮಗಳೂ ಕೂಡ ಸಂಗೀತಗಾರ್ತಿ. ಆಕೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ಬೇರೆ ದೇಶದಲ್ಲಿ ವಾಸಿಸುತ್ತಿರುತ್ತಾಳೆ. ಒಂದು ದಿನ ಇದ್ದಕ್ಕಿದ್ದಂತೆ ಉಪಹಾರ ಮಾಡುವ ಹೊತ್ತಲ್ಲಿ ನಿಶ್ಚಲವಾಗುವ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ‘ಜಾರ್ಜ್’ಗೆ, ಪತ್ನಿಗೆ ಪಾರ್ಶ್ವವಾಯುವಿನಿಂದಾಗಿ ದೇಹದ ಒಂದು ಬದಿ ಸ್ವಾಧೀನರಹಿತವಾಗಿರುವ ಸಂಗತಿ ತಿಳಿಯುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡ ಮೇಲೆ ‘ಅನ್ನೆ’ ಪತಿಯ ಬಳಿ ಮತ್ತೆಂದೂ ಆಸ್ಪತ್ರೆಗೆ ಕರೆದೊಯ್ಯಬಾರದೆಂದು ಪ್ರಮಾಣ ಮಾಡಿಸಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ತನ್ನ ಪತ್ನಿಯ ಆರೈಕೆಯನ್ನು ಜಾರ್ಜೇ ಮಾಡುತ್ತಾನೆ. ಔಷಧೋಪಚಾರಕ್ಕೆಂದು ಮಾತ್ರ ನರ್ಸೊಬ್ಬಳನ್ನು ನೇಮಿಸಿಕೊಳ್ಳುವ ಜಾರ್ಜ್, ಉಳಿದ ಪ್ರತಿಯೊಂದು ಆರೈಕೆಯನ್ನು ತಾನೇ ಸ್ವತಃ ಮಾಡುತ್ತಾನೆ. ಚಿತ್ರದ ಕೊನೆಗೆ ಭೌತಿಕವಾಗಿ ಪತಿ ಪತ್ನಿ ಇಬ್ಬರೂ ಮನೆಯಿಂದ ಹೊರನಡೆಯುವುದರೊಂದಿಗೆ ಅಂತ್ಯವಾಗುವ ಸಿನೆಮಾ ಆರಂಭವಾಗುವುದು, ಪೋಲೀಸ್‌ನವರು ಅಗ್ನಿಶಾಮಕದವರ ಸಹಾಯದೊಂದಿಗೆ ಮನೆ ಬೀಗ ಬಾಗಿಲು ಮುರಿದು ಪ್ರವೇಶಿಸುವುದರ ಮೂಲಕ. ಇಡೀ ಸಿನೆಮಾದ ನಿರೂಪಣೆಯ ಹಿಡಿತವನ್ನು ಕಾಯ್ದಿರಿಸುವುದು ವೃದ್ದ ದಂಪತಿಗಳ ನಟನೆ ಮತ್ತು ಆ ಮನೆಯೊಳಗಿನ ಪ್ರತೀ ಚಟುವಟಿಕೆ ಉಂಟುಮಾಡುವ ಶಬ್ದದ ಹಿನ್ನಲೆಯಲ್ಲಿ. ಚಿತ್ರದ ಕೊನೆಯ ಭಾಗದಲ್ಲಿ ಹೆಂಡತಿಯ ಸ್ಥಿತಿಯನ್ನು ಪಾರಿವಾಳದ ರೂಪಕದಲ್ಲಿ ನಿರೂಪಿಸಲ್ಪಟ್ಟಿರುವ ಸಿನೆಮಾ ಭೌತಿಕವಾಗಿ ಅನುಭವಿಸುವ ಹಿಂಸೆಗೆ ಮಾನಸಿಕ ಹಿಂಸೆ ಜೊತೆಯಾದರೆ, ಅದರಿಂದ ಮುಕ್ತಿ ಪಡೆಯುವ ಮಾರ್ಗವನ್ನು ಹೊಸ ಚೌಕಟ್ಟಲ್ಲಿ ಕಟ್ಟಿಕೊಡಲು ಪ್ರಯತ್ನಿಸುವುದರ ಮೂಲಕ ನೋಡುಗನನ್ನು ಸದಾ ಕಾಡಲು ತೊಡಗುತ್ತದೆ.

೨. ವೇರ್ ಡು ವಿ ಗೋ ನೌ?

ಲೆಬನಾನಿನ ‘ನದಿನೆ ಲಬಾಕಿ’ ಎಂಬ ನಟಿ-ನಿರ್ದೇಶಕಿ ನಿರ್ದೇಶಿಸಿರುವ ಈ ಸಿನೆಮಾ ತನ್ನ ಕಥೆಯಿಂದಲೇ ಹೆಚ್ಚು ಇಷ್ಟವಾಗುತ್ತದೆ. ಈ ಕಥೆ ನಡೆಯುವುದು ಲೆಬನಾನಿ ಒಂದು ಅನಾಮಧೇಯ ಪುಟ್ಟ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿರುತ್ತಾರೆ. ಹಾಗಂತ ಇದು ಪರಿಪೂರ್ಣವಾಗಿ ಮಾದರಿ ಗ್ರಾಮವೂ ಅಲ್ಲ. ಆ ಹಳ್ಳಿ ಮತ್ತು ದೇಶದಲ್ಲಿ ನಡೆಯುವ ಕೋಮು ಗಲಭೆಗಳ ಪ್ರಭಾವದಿಂದ ಈ ಎರಡೂ ಧರ್ಮಗಳ ನಡುವೆ ಕಲಹವುಂಟಾಗಿ ಬಹಳಷ್ಟು ಗಂಡಸರು ಸಾವನ್ನಪ್ಪಿರುತ್ತಾರೆ. ಇಂತಹ ಸಾವು ನೋವನ್ನು ಕಣ್ಣಾರೆ ಕಂಡಿದ್ದ ಹಿರಿಯ-ಕಿರಿಯ ಮಹಿಳೆಯರು ಸಾಧ್ಯವದಷ್ಟೂ ಮತ್ತೆಂದೂ ಅಂತಹ ಕಲಹಗಳು ಅವರಲ್ಲಿ ಬರದಂತೆ ತಡೆಯುವ ಪ್ರಯತ್ನಗಳೇ ಚಿತ್ರದ ಕಥಾವಸ್ತು. ಆ ಹಳ್ಳಿಯ ಮತ್ತೊಂದು ವಿಶೇಷತೆಯೆಂದರೆ ಅಲ್ಲಿಗೆ ಬರುವುದಕ್ಕೆ ಅಥವ ಹೊರಗೆ ಹೋಗುವುದಕ್ಕೆ ಇರುವುದು ಒಂದೇ ಕಿರಿದಾದ ಮಣ್ಣಿನ ಸೇತುವೆ. ಸುತ್ತಲೂ ಆಳವಾದ ಕಂದಕ ಜೊತೆಗೆ ಎಲ್ಲೆಂದರಲ್ಲಿ ಹುದುಗಿಸಿರುವ ನೆಲಬಾಂಬುಗಳಿಂದಾಗಿ ಇರುವ ಒಂದೇ ಸೇತುವೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ. ಆ ಊರಿಗೆ ಹೊರಪ್ರಪಂಚದೊಂದಿಗೆ ಯಾವುದೇ ಸಂವಹನಾ ಮಾಧ್ಯಮ ಇರುವುದಿಲ್ಲ. ಇರುವ ಒಂದೇ ಮಾರ್ಗ ನಸ್ಸೀಮ್ ಮತ್ತು ರುಕ್ಕೋಜ್ ಎಂಬಿಬ್ಬರು ಯುವಕರು ಪ್ರತಿದಿನ ಹತ್ತಿರದ ನಗರಕ್ಕೆ ಹೋಗಿ ಆ ಹಳ್ಳಿಯವರಿಗೆ ಬೇಕಾದ ವಸ್ತುಗಳು, ದಿನಸಿ, ದಿನಪತ್ರಿಕೆ ಮತ್ತು ಸುದ್ದಿಯ ಮೂಲಕ ಮಾತ್ರ. ಆದರೆ ಹೊರಗಿನ ಜಗತ್ತಿನಲ್ಲಿ ನಡೆಯುತ್ತಿರುವ ಗಲಭೆಗಳನ್ನು ಸದಾ ಗಮನಿಸುತ್ತಿರುವ ಮಹಿಳೆಯರು ಆ ವಿಷಯವು ಗಂಡಸರ ಕಿವಿಗೆ ಬೀಳದಂತೆ ಸರ್ವಪ್ರಯತ್ನಗಳೂ ಮಾಡುತ್ತಿರುತ್ತಾರೆ. ರುಕ್ಕೋಜ್ ಟಿವಿ, ರೇಡಿಯೋ ರಿಪೇರಿ ಮಾಡಿ ಕೆಲಸ ಮಾಡುವಂತೆ ಮಾಡಿದರೆ ರಾತ್ರೋ ರಾತ್ರಿ ವಯಸ್ಸಾದ, ಹರೆಯದ ಹೆಂಗಸರೆಲ್ಲ ಸೇರಿ ಅದನ್ನು ಒಡೆದು ಹಾಕಿ ಹಾಳು ಮಾಡುತ್ತಾರೆ. ದಿನಪತ್ರಿಕೆ ಬರುವ ನಸುಕಿನ ವೇಳೆಗೆ ಎದ್ದು ಅದು ಮತ್ತೊಬ್ಬರ ಕೈಗೆ ಸಿಗದಂತೆ ಸುಟ್ಟು ಹಾಕುತ್ತಾರೆ. ಗಂಡಸರ ಮನಸ್ಸು ಗಲಭೆಯೆಡೆಗೆ ವಾಲದಂತೆ ತಡೆಯಲು ತಾವೇ ಹಣ ಒಟ್ಟುಮಾಡಿ ನಗರದಿಂದ ಬ್ಯಾಲೆ ಹುಡುಗಿಯರನ್ನು ಕರೆತಂದು ಹಳ್ಳಿಯಲ್ಲಿ ಕೆಲಕಾಲ ಇರುವಂತೆ ಮಾಡುತ್ತಾರೆ.

ಕೊನೆಗೆ ತಮ್ಮ ಪ್ರಯತ್ನಗಳೆಲ್ಲ ವಿಫಲವಾಗುವಂತೆ ನಗರಕ್ಕೆ ಹೋಗಿದ್ದ ನಾಸಿರ್ ಆಕಸ್ಮಿಕದಲ್ಲಿ ಗುಂಡೇಟು ತಿಂದು ಮೃತನಾದಾಗ, ಈ ಸುದ್ದಿಯನ್ನು ಸಾಧ್ಯವಾದಷ್ಟು ಗೌಪ್ಯವಾಗಿಡಲು ನಾಸಿರ್‌ನ ತಾಯಿ ಮತ್ತು ಸೋದರಿ ಪ್ರಯತ್ನಿಸಿದರೂ ನಾಸಿರ್‌ನ ಅಣ್ಣನಿಗೆ ತಿಳಿದುಬಿಡುತ್ತದೆ. ತನ್ನ ಮಗ ಮತ್ತೆಲ್ಲಿ ಹಳ್ಳಿಯಲ್ಲಿ ಎಲ್ಲರಿಗೂ ತಿಳಿಸಿ ಗಲಭೆ ಉಂಟುಮಾಡುತ್ತಾನೋ ಎಂದು ಆತಂಕಗೊಳ್ಳುವ ತಾಯಿ ಸ್ವಂತ ಮಗನ ಕಾಲಿಗೆ ಬಂದೂಕಿನಿಂದ ಸುಟ್ಟು ಮನೆಯೊಳಗೆ ಕೂಡಿ ಹಾಕುತ್ತಾಳೆ. ಚಿತ್ರದ ಕೊನೆಗೆ ಕೋಮು ಗಲಭೆಗಳಿಗೆ ಶಾಶ್ವತ ಪರಿಹಾರ ಹುಡುಕಲು ಮಹಿಳೆಯರೆಲ್ಲಾ ಸೇರಿ ದಿಟ್ಟವಾದ ನಿರ್ಧಾರ ತಳೆದು ಪರಸ್ಪರ ಧರ್ಮವನ್ನೇ ಬದಲಾಯಿಸಿಕೊಳ್ಳುತ್ತಾರೆ, ಏಸುವನ್ನು ಪೂಜಿಸುವ ತಾಯಿ ನಮಾಜ್ ಮಾಡುತ್ತಾಳೆ, ನಮಾಜ್ ಮಾಡಬೇಕಾದ ಪತ್ನಿ, ಮೇರಿಯ ಮುಂದೆ ಮೊಂಬತ್ತಿ ಬೆಳಗುತ್ತಾಳೆ. ಜಗತ್ತಿನಾದ್ಯಂತ ಕಾಡುತ್ತಿರುವ ಈ ಕೋಮು, ಗಲಭೆಗಳು ಪರಸ್ಪರ ಸ್ನೇಹ, ಸಾಮರಸ್ಯಗಳನ್ನು ಕದಡಿ ಶಾಶ್ವತ ಶತ್ರುಗಳನ್ನು ಮಾಡುವುದಲ್ಲದೆ, ಅಪಾರ ಜೀವಹಾನಿಗೆ ಕಾರಣವಾಗುತ್ತಿರುವ ಸಂದರ್ಭದಲ್ಲಿ ಈ ಸಿನೆಮಾ ಪರಿಹಾರ ತೋರಿಸುವ ಅಪಾರ ಭರವಸೆ ಹುಟ್ಟುಹಾಕುವ ಸಣ್ಣ ಆಶಾಕಿರಣದಂತೆ ಗೋಚರವಾಗುತ್ತದೆ.

೩. ದಿ ಕ್ಲೌನ್

ಸೆಲ್ಟನ್ ಮೆಲ್ಲೋ ನಿರ್ದೇಶನದ ಬ್ರೆಜಿಲ್ ದೇಶದ ಪೋರ್ಚುಗೀಸ್ ಭಾಷೆಯಲ್ಲಿರುವ ಸಿನೆಮಾ ‘ದಿ ಕ್ಲೌನ್’. ಈ ಸಿನೆಮಾದ ಕಥೆ ವಿದೂಷಕನಾಗಿ ಜನರನ್ನು ನಗಿಸುತ್ತಾ ‘ಹೋಪ್ ಟ್ರೂಪ್’ ಹೆಸರಿನ ತಮ್ಮದೇ ಸಂಚಾರಿ ಸರ್ಕಸ್ ಕಂಪೆನಿಯನ್ನು ನಡೆಸುತ್ತಾ ಜೀವನ ಸಾಗಿಸುವ ಅಪ್ಪ ಮಗನ ಕುರಿತದ್ದು. ಇವರಿಗೆ ಯಾವುದೇ ಸ್ವಂತ ಗುರುತು, ಆಸ್ತಿ, ವಿಳಾಸ ಇರುವುದಿಲ್ಲ. ಸಿನೆಮಾ ಆರಂಭವಾಗುವುದೇ ಸಮಸ್ಯೆಗಳ ಹೊರೆಯನ್ನೇ ಹೊತ್ತಂತ ಮುಖಭಾವದಲ್ಲಿರುವ ನಾಯಕ ಬೆಂಜಮಿನ್ ವಿದೂಷಕನಾಗಿ ಜನರನ್ನು ನಗಿಸುವ ದೃಶ್ಯದಿಂದ. ಇವನ ತಂದೆ ವಾಲ್ದೆಮರ್ ಕೂಡ ವಿದೂಷಕ. ಇವರಿಬ್ಬರ ಜೋಡಿ ಒಂದು ಕಾಲದಲ್ಲಿ ತುಂಬಾ ಹೆಸರುವಾಸಿಯಾಗಿರುತ್ತದೆ. ಆಧುನೀಕರಣದ ಪ್ರಭಾವದಿಂದಾಗಿ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಇವರ ಕಂಪೆನಿಯನ್ನು ನಡೆಸುವುದೇ ನಾಯಕನಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಕಂಪೆನಿಯಲ್ಲಿರುವ ಇನ್ನಿತರರನ್ನು ಸಾಕುವ ಮತ್ತು ಅವರಿಗೆ ಭತ್ಯೆ ನೀಡಲು ಸಾಕಾಗುವಷ್ಟು ಹಣ ಪ್ರದರ್ಶನಗಳಿಂದ ಬರುತ್ತಿರುವುದಿಲ್ಲ. ತಮ್ಮ ಗಾಡಿ ಕೆಟ್ಟು ನಿಂತಾಗ ತಂಡದ ಪ್ರತಿಯೊಬ್ಬರ ಬಳಿ ಚಿಲ್ಲರೆ ಹಣವನ್ನು ಪಡೆದು ರಿಪೇರಿ ಮಾಡಿಸಬೇಕಾದ ಅನಿವಾರ್ಯತೆ, ತಂಡದಲ್ಲಿನ ನಗಿಸುವ ಮತ್ತೊಬ್ಬ ದಡೂತಿ ಕಾಯದ ಹಿರಿಯ ಸದಸ್ಯೆಯೊಬ್ಬರಿಗೆ ಧರಿಸಲು ಒಳ ಅಂಗಿ ಇಲ್ಲವೆನ್ನಲು, ತನ್ನ ಬಳಿ ಬರುವ ವೇಶ್ಯೆಯೊಬ್ಬಳಲ್ಲಿ ಹಳೆಯದ್ಯಾವುದಾದರೂ ಇದ್ದರೆ ಕೊಡಲು ಸಾಧ್ಯವೇ ಎಂದು ಕೇಳಬೇಕಾದ ಅಸಹಾಯಕತೆ, ನಾಯಕನಿಗೆ ತನ್ನ ನಗಿಸುವ ಕಾಯಕವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದೆನಿಸಿ ಕಂಪೆನಿಯ ಜವಬ್ದಾರಿಯನ್ನು ಅಪ್ಪನಿಗೆ ವಹಿಸಿ, ಅನಾಮಧೇಯ ಹಳ್ಳಿಯಲ್ಲಿ ಪರಿಚಿತವಾದ ಹೆಣ್ಣಿನ ರೂಪಕದಲ್ಲಿ ಫ್ಯಾನ್ ಕೊಳ್ಳಲು ನಡೆದುಬಿಡುತ್ತನೆ.

ಆದರೆ ರೂಪಕದ ಪ್ರತಿಮೆಯು ವಾಸ್ತವದಲ್ಲಿ ತನಗೆ ದಕ್ಕುವುದಿಲ್ಲ ಎಂಬ ಅರಿವಿನೊಂದಿಗೆ ತನ್ನ ಕಾಯಕವೇ ತನ್ನ ಭವಿಷ್ಯ ಎಂದರಿವಾಗಿ ಮತ್ತೆ ಕಂಪೆನಿಗೆ ವಾಪಸ್ಸಾಗಿ ವಿದೂಶಕನಾಗಿ ಮುಂದುವರೆಯುತ್ತಾನೆ. ಈ ಸಿನೆಮಾದಲ್ಲಿ ಬಹಳ ಕಾಡುವ ಸಂಗತಿಗಳೆಂದರೆ, ನಾಯಕ ಎದುರಿಸುವ ಪ್ರತಿ ಸಮಸ್ಯೆಯನ್ನು ತೆಳು ಹಾಸ್ಯದ ಮೂಲಕ ನಿರೂಪಿಸಿರುವುದು. ಅದಕ್ಕೆ ಪೂರಕವಾಗಿ ಸರ್ಕಸ್‌ನ ದೃಶ್ಯಗಳು ಮತ್ತು ತೆರೆಯ ಹಿಂದಿನ ಚಟುವಟಿಕೆಗಳನ್ನು ಬಳಸಿಕೊಂಡಿರುವುದು. ಅದರಲ್ಲೂ ಕಂಪೆನಿಗೆ ಹಿಂದಿರುಗುವ ದೃಶ್ಯದಲ್ಲಿ ಅವನಿಗೆ ಕಾಡುತ್ತಿದ್ದ ಆಸೆಯ ಫ್ಯಾನ್ ಪಕ್ಕದಲ್ಲಿರುತ್ತದೆ, ಈ ಹಿಂದೆ ಅಂತಹ ಫ್ಯಾನ್ ಮುಂದೆ ಮಾತ್ರ ತಾನು ಉಲ್ಲಾಸಿತನಾಗಬಹುದೆಂಬ ಭ್ರಮೆಯಲ್ಲಿದ್ದವನು, ಕೊನೆಯ ದೃಶ್ಯದಲ್ಲಿ ಫ್ಯಾನ್ ಪಕ್ಕದಲ್ಲಿರಿಸಿಕೊಂಡು ಬೀಸುವ ತಂಗಾಳಿಗೆ ಮುಖವೊಡ್ಡಿ ಉಲ್ಲಾಸದಿಂದ ನಗುತ್ತಿರುವ ದೃಶ್ಯ ಭ್ರಮೆಯ ಪೊರೆಯನ್ನು ಕಳಚಿಕೊಂಡು ವಾಸ್ತವದಲ್ಲಿ ಸುಖವನ್ನನುಭವಿಸುವ ದೃಶ್ಯವಾಗಿ ಸದಾ ಕಾಲ ಅಚ್ಚಳಿಯದೇ ಉಳಿದುಬಿಡುತ್ತದೆ.

ಮಂಸೋರೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ramachandra shetty
ramachandra shetty
11 years ago

೩ ಸಿನಿಮಾಗಳ ವಿವರಣೆಯನ್ನು ನಮ್ಮೆದುರು ತ೦ದಿತ್ತಿದ್ದೀರಿ ಧನ್ಯವಾದಗಳು..ವಿವರಿಸಿದ ರೀತಿ ಸೊಗಸಾಗಿದೆ..ಸಿನಿಮಾರ೦ಗದಲ್ಲಿ ಹೊಡಿಬಡಿ ಹೊಡೆತ ಕಡಿಮೆಯಾಗಿ ಉತ್ತಮ ಸ೦ದೇಶವನ್ನು ಹೊತ್ತ ಸಿನಿಮಾಗಳು ಬ೦ದರೆ ಉತ್ತಮ..ನಮ್ಮಲ್ಲು ಉತ್ತಮ ಆಶಯ ಹೊತ್ತು ಬ೦ದ ಸಿನಿಮಾಗಳು ಬಹಳಷ್ಟಿವೆ.ಆದರೆ ಜನರ ಸಹಕಾರ ದೊರೆಯದೆ ಹೋದ ಪುಟ್ಟ ಬ೦ದ ಪುಟ್ಟ ಲೆಕ್ಕದಲ್ಲಿ ಮರೆಯಾಗಿವೆ..

ಆತ್ರಾಡಿ ಸುರೇಶ ಹೆಗ್ಡೆ

ಮಂಸೋರೆ,
ಸಿನಿಮೋತ್ಸವಕ್ಕೆ ಹೋಗಲಾಗದವರನ್ನೂ ಒಂದು ಸುತ್ತು ತಿರುಗಾಡಿಸಿದ್ದೀರಿ. 
ಖುಷಿ ನೀಡಿತು.

Utham Danihalli
11 years ago

Navu nodada nodalagada cinemavanu namage lekanada mulaka thorisidakke danyavadagallu shubhavagali

ಮಂಸೋರೆ
ಮಂಸೋರೆ
11 years ago

ಉತ್ತಮ್ ದನಿಹಳ್ಳಿ : ಇವು ನೋಡಲಾಗದ ಸಿನೆಮಾಗಳೇನೂ ಅಲ್ಲ. ಆನ್ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಲಲು ಸಿಗುತ್ತವೆ. 

ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.
 
ಮಂಸೋರೆ

4
0
Would love your thoughts, please comment.x
()
x