ಕೊರೋನಾ ಬಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ನಾಂದಿಯಾಗಿದೆ. ಅದು ಅಂತರ್ಜಾಲ ಬಳಸಿ ಮನೆಯಿಂದಲೇ ಪಾಠವನ್ನು ಬೋಧನೆ ಮಾಡುವ ಮೂಲಕ ಎಲ್ಲರೂ ಈಗ ಅಂತರ್ಜಾಲ ಬಳಸುವ ಅನಿವಾರ್ಯತೆ ಎದುರಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಟೆಲಿ ಎಜುಕೇಶನ್ ಈಗಾಗಲೇ ಸೀಮಿತ ಶಾಲೆಗಳಿಗೆ ಬಂದಿತ್ತು. ಅಲ್ಲಿ ಕಂಪ್ಯೂಟರ ಮತ್ತು ಅಂತರ್ಜಾಲ ಸೌಕರ್ಯ ಬ್ಯಾಟರಿ ಇತ್ಯಾದಿ ಪರಿಕರಗಳನ್ನು ನೀಡಲಾಗಿತ್ತು. ಆ ರೀತಿ ವೇಳಾಪಟ್ಟಿಯ ಮೂಲಕ ಪಾಠಬೋಧನೆ ಕೂಡ ಸಾಗಿತ್ತು. ಹಾಗೆಯೇ ಹಲವಾರು ಸಭೆಗಳು ತರಭೇತಿಗಳು ಕೂಡ ಅಂತರ್ಜಾಲ ಬಳಸಿ ಸೆಟ್ ಲೈಟ್ ಆಧಾರಿತ ಡಿಶ್ ಅಂಟಿನಾ ಹೊಂದಿ ನಡೆಯುತ್ತಿದ್ದವು. ಇಂದಿಗೂ ನಡೆಯುತ್ತಿವೆ ಕೂಡ. ಇದರ ಜೊತೆಗೆ ಸ್ಮಾರ್ಟ ಕ್ಲಾಸ್ ಎಂಬ ಹೆಸರಿನಲ್ಲಿ ಸೌಲಭ್ಯಗ¼ನ್ನು ಹೊಂದಿದ ತರಗತಿಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಹಂತ ಹಂತವಾಗಿ ಶಾಲೆಗಳಲ್ಲಿ ತರಗತಿಯಲ್ಲಿ ಬಂದಿವೆ. ಎಷ್ಟೋ ಜನ ಶಿಕ್ಷಕರು ತಮ್ಮ ಮೋಬೈಲ್ ಬಳಸಿ ಪ್ರೊಜೆಕ್ಟರ್ ಮೂಲಕ ಪಾಠ ಕೂಡ ಮಾಡುತ್ತಿದ್ದಾರೆ. ಇನ್ನು ಪೋನ್ ಬಳಸಿ ತಮಗೆ ಯಾರಿಗೆ ಮಾಹಿತಿ ನೀಡಬೇಕೋ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸುವ ವ್ಯವಸ್ಥೆ ಕೂಡ ಇತ್ತು. ಇವೆಲ್ಲವನ್ನೂ ಮೀರಿ ಈಗ ಕೋರೋನಾ ಬಂದಿದ್ದರಿಂದ ಝೂಮ್ ದಂತಹ ತಂತ್ರಜ್ಞಾನ ಬಳಸಿ ಅವರು ಎಲ್ಲಿರುವರೋ ಅಲ್ಲಿಂದಲೇ ಏಕಕಾಲಕ್ಕೆ ತಂತ್ರಜ್ಞಾನ ಬಳಸಿ ಪಾಠ ಬೋಧನೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ಈ ಆನ್ ಲೈನ್ ತರಗತಿಗಳು ಏಕಕಾಲಕ್ಕೆ ಎಲ್ಲ ವಿದ್ಯಾರ್ಥಿಗಳನ್ನು ಅವರಿರುವ ಸ್ಥಳದಲ್ಲಿ ಸಂಪರ್ಕಿಸುವ ತಂತ್ರಜ್ಞಾನ ಬಳಸಿ ಬೋಧಿಸುವ ವ್ಯವಸ್ಥೆ ಹೊಂದಿದೆ. ಅದು ಜೂಮ್ ಇರಬಹುದು. ಯುಟ್ಯೂಬ್ ತಂತ್ರಜ್ಞಾನ ಬಳಸಿಕೊಂಡು ಇತರೆ ವಿವಿಧ ತಂತ್ರಜ್ಞಾನದ ಪರಿಕರಗಳನ್ನು ಬಳಸಿ ಪಾಠಬೋಧನೆ ಮಾಡುತ್ತಿರುವುದು ನಡೆದಿದೆ. ಇದು ತಮ್ಮ ಮನೆಯಲ್ಲಿ ಕುಳಿತು ಏಕಕಾಲಕ್ಕೆ ಎಲ್ಲ ವಿದ್ಯಾರ್ಥಿಗಳು ಹಾಜರಾಗುವಂತೆ ಮಾಡುವ ವ್ಯವಸ್ಥೆ ಇಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಪೋನ್ ಮೂಲಕ ನೋಡಬಹುದು. ಪೋನ್ ನಲ್ಲಿ ಮಾತನಾಡುವ ಮೂಲಕ ಪ್ರಶ್ನೆ ಕೇಳುವ ಮೂಲಕ ಪಾಠದ ಕ್ಲಿಷ್ಟತೆ ಕೇಳಿ ಪರಿಹರಿಸಿಕೊಳ್ಳುವ ವ್ಯವಸ್ಥೆ ಹೊಂದಿದೆ ಆನ್ಲೈನ್ ಪಾಠ ಸಾಗುತ್ತಿದೆ.
ಮೊದಲು ಪೋನ್ ತಂದವರಿಗೆ ತರಗತಿ ಕೊಠಡಿಯಲ್ಲಿ ಪೋನ್ ಬಳಸುವಂತಿಲ್ಲ ಎಂಬ ನಿರ್ಬಂಧ ಹೇರಿದ್ದ ಶಿಕ್ಷಣ ಇಲಾಖೆ ಈಗ ಕಡ್ಡಾಯವಾಗಿ ಆನ್ ಲೈನ್ ಸೌಲಭ್ಯವನ್ನು ಹೊಂದಿದ ಪೋನ್ ಬಳಸುವುದು ಕಡ್ಡಾಯ ಎಂಬ ವಿಚಾರ ಹೇಳುವಷ್ಟರ ಮಟ್ಟಿಗೆ ಕೋರೋನಾ ಅನಿವಾರ್ಯ ತಂದಿಟ್ಟಿದೆ. ಅದ್ಯಾಪಕರು ಕೂಡ ಈ ತಂತ್ರಜ್ಞಾನ ಕಲಿಯುವುದು ಅನಿವಾರ್ಯವಾಯಿತು. ಹೀಗೆ ಪಾಠ ನಡೆದಿವೆ ಕೂಡ. ಲಾಕ್ ಡೌನ್ ಬಂದು ಎಲ್ಲರೂ ಇದಕ್ಕೆ ಹೊಂದಿಕೊಳ್ಳುವುದು ಕೂಡ ಅನಿವಾರ್ಯವಾಗಿದೆ. ಇದರ ಬಹುಮುಖ್ಯ ಪ್ರಯೋಜನವೆಂದರೆ ನಾವು ಎಲ್ಲಿದ್ದೆವೆಯೋ ಅಲ್ಲಿಯೇ ಕುಳಿತು ಪಾಠ ಕೇಳಬಹುದು. ಈ ರೀತಿ ಪಾಠ ಸಾಗಿದ್ದಾಗ ಏನಾದರೂ ಗೊತ್ತಾಗದಿದ್ದರೂ ಕೂಡ ಆನ್ ಲೈನ್ ರಿಕಾರ್ಡಿಂಗ ವ್ಯವಸ್ಥೆ ಹೊಂದಿದ ಪೋನ್ ಇದ್ದರಂತೂ ಮುಗಿಯಿತು. ರಿಕಾರ್ಡಿಂಗ್ ಮಾಡಿಕೊಂಡು ಮತ್ತೆ ಮತ್ತೆ ಕೇಳಿ ವಿಷಯ ದೃಡೀಕರಿಸಿಕೊಳ್ಳುವಕ್ಕೆ ಅನುಕೂಲತೆ ಒದಗಿಸಿಕೊಂಡಿದೆ.
ಆನ್ ಲೈನ್ ಪಾಠದ ದೊಡ್ಡ ಲಾಭವೆಂದರೆ ನಾವು ಎಲ್ಲಿಯೇ ಇದ್ದರೂ ತರಗತಿಗೆ ಹಾಜರಾಗಬಹುದು. ಅಷ್ಟೇ ಅಲ್ಲ ಅದನ್ನು ರೆಕಾರ್ಡ ಮಾಡಿಕೊಂಡು ಕೇಳಬಹುದು. ಇಲ್ಲಿ ತರಗತಿಯಲ್ಲಿ ನಮ್ಮ ಮುಂದೆ ನಿಂತು ಪಾಠ ಮಾಡಬೇಕಾದ ಉಪನ್ಯಾಸಕರು ಮೋಬೈಲ್ ಅಥವ ಕಂಪ್ಯೂಟರ್ ಪರದೆ ವೀಕ್ಷಿಸುತ್ತ ಪಾಠ ಮಾಡಬೇಕಾದದ್ದು. ಅಲ್ಲಿ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತ ಪಾಠ ಮಾಡಿದವರಿಗೆ ಇಲ್ಲಿ ಸ್ವಲ್ಪ ಗೊಂದಲವುಂಟಾಗುತ್ತದೆ. ತಮ್ಮಷ್ಟಕ್ಕೆ ತಾವು ಹೇಳುತ್ತ ಸಾಗಿ ನಂತರ ಸಂದೇಹ ಪರಿಹರಿಸಿಕೊಳ್ಳಲು ಸಮಯ ನೀಡುವ ವ್ಯವಸ್ಥೆ ಇದೆ. ಅಂದರೆ ಎಷ್ಟು ಬೇಕೋ ಅಷ್ಟು ಹೇಳುವುದರಿಂದಾಗಿ ಸಮಯದ ಮಿತಿ ಹೆಚ್ಚು ಕಡಿಮೆ ಆಗುತ್ತದೆ. ಇದರ ಜೊತೆಗೆ ತಾವು ಹೇಳಿದ ಪಾಠದ ಸಾರಾಂಶವನ್ನು ಪಿ. ಡಿ. ಎಫ್ ಪೈಲ್ ಹಾಕುವ ಮೂಲಕ ಅದನ್ನು ಕೂಡ ಓದಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವರು. ಹೀಗೆ ಆನ್ ಲೈನ್ ತರಗತಿಗಳು ಹಲವು ಉಪಯೋಗಗಳನ್ನು ನೀಡಿವೆ.
ಇನ್ನು ಈ ತಂತ್ರಜ್ಞಾನ ಬಳಸಿ ನಡೆಸುವ ಬೋಧನೆ ಅನಾನುಕೂಲತೆಗಳನ್ನು ಸೃಷ್ಟಿಸಿದೆ. ತಂತ್ರಜ್ಞಾನ ಗೊತ್ತಿಲ್ಲದವರು ಕಲಿತು ಅದನ್ನು ಬಳಸಬೇಕಾದ ಅನಿವಾರ್ಯತೆ ಇದ್ದರೆ ಪಾಠ ಬೋಧನೆ ಮಾಡುವ ನಿಗದಿತ ಸಮಯ ನಿಮ್ಮ ಮೋಬೈಲ್ ಬ್ಯಾಟರಿ ಚಾರ್ಜ ಇರಬೇಕಾಗುತ್ತದೆ. ಅದು ಕೂಡ ಒಂದು ತಾಸೋ ಎರಡು ತಾಸೋ ಎಷ್ಟು ಸಮಯ ನಿಗದಿಯಾಗಿರುತ್ತದೆಯೋ ಅಷ್ಟು ಅವಧಿ ನಿಮ್ಮ ಮೋಬೈಲ್ ಚಾರ್ಜ ಹೊಂದಿರುವುದು ಕಡ್ಡಾಯ. ಇಲ್ಲಿ ನೀವೇನಾದರೂ ಚಾರ್ಜ ಮಾಡಿಕೊಳ್ಳುವುದನ್ನು ಮರೆತಿದ್ದಿರೋ ಮೋಬೈಲ್ ಆಪ್ ಆದರೆ ಮುಗಿಯಿತು ನಿಮ್ಮ ಪಾಠ ತಪ್ಪಿ ಹೋದಂತೆ ಇದು ಮುಂಜಾಗರೂಕತೆ ಇರುವುದು ಅವಶ್ಯ. ಇನ್ನು ಈ ರೀತಿ ಪಾಠ ಕೇಳಬೇಕೆಂದರೆ ಸಾಮಾನ್ಯ ಮೋಬೈಲ್ ದಲ್ಲಿ ಸಾಧ್ಯವಿಲ್ಲ. ಅಂಡ್ರಾಯಿಡ್ ಸೆಟ್ ಇರಬೇಕು. ಬಡವಿದ್ಯಾರ್ಥಿಗಳಿದ್ದರೆ ಅವರು ಸಾಲ ಮಾಡಿಯಾದರೂ ಕನಿಷ್ಟ ಬೆಲೆಯ ಅಂಡ್ರಾಯಿಡ್ ಮೋಬೈಲ್ ಖರೀದಿಸಿರಬೇಕು. ಹಾಗೂ ಅವರು ಹೇಳಿದ ತಂತ್ರಾಂಶವನ್ನು ಡೌನ್ಲೋಡ್ ಮಾಡಿಟ್ಟುಕೊಂಡಿರಬೇಕು.
ನಮ್ಮಲ್ಲಿ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಇರುವುದರಿಂದ ನೆಟವರ್ಕ ಸಮಸ್ಯೆ ಕೂಡ ಕಾಡುತ್ತಿರುತ್ತದೆ. ಮರದ ಮೇಲೆ ಕುಳಿತೋ ಮನೆಯ ಮಹಡಿಯ ಮೇಲೆ ಕುಳಿತೋ ಒಟ್ಟಾರೆ ನೆಟವರ್ಕ ಬರುವ ಸ್ಥಳದಲ್ಲಿ ಕುಳಿತು ಪಾಠ ಕೇಳುವುದು ಕೂಡ ಒಂದು ಸಮಸ್ಯೆ. ನಿಮ್ಮ ಪಾಠ ಇದ್ದ ದಿನ ಏನಾದರೂ ನೆಟವರ್ಕ ಸಮಸ್ಯೆ ಎದುರಾದರೆ ಮುಗಿಯಿತು. ಅವತ್ತಿನ ಪಾಠ ಹಾಳಾದಂತೆ. ಇನ್ನು ಧ್ವನಿ ವ್ಯವಸ್ಥೆ. ಪಾಠ ಮಾಡುವವರ ಧ್ವನಿಯ ಸ್ಪಷ್ಟತೆ ನಿಮ್ಮ ಪೋನ್ ಹೊಂದಿದ ಸ್ಪೀಕರ್ ಮೂಲಕ ಕೇಳುವಂತಿದ್ದರೆ ಒಳ್ಳೆಯದು. ಅವರೂ ಕೂಡ ತಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ತಮ್ಮ ಪೋನ್ ಬಳಸಿದರೆ ಅನುಕೂಲ ಇಲ್ಲದಿದ್ದರೆ ಪಾಠ ಹಚ್ಚಿದರೂ ನಷ್ಟವೇ. ಎಲ್ಲರೂ ಇದನ್ನು ಕೇಳುತ್ತಾರೆ ಎಂಬುದು ಖಚಿತವಾಗಲಿಕ್ಕಿಲ್ಲ. ಕೆಲವು ಸಲ ಅದು ಅವರಿಗೆ ಹಿಡಿಸದಿದ್ದಲ್ಲಿ ಕೇಳಿದಂತೆ ಮಾಡುವುದನ್ನು ವಿದ್ಯಾರ್ಥಿಗಳು ಮಾಡಬಹುದು.
ಪಾಠ ಬೋಧಿಸುವ ಶಿಕ್ಷಕರು ಕೂಡ ತಮ್ಮ ಮನೆಯಲ್ಲಿ ಪ್ರಶಾಂತ ವಾತಾವರಣದಲ್ಲಿ ಕುಳಿತು ಪಾಠ ಬೋಧನೆ ಮಾಡಿದರೆ ಉತ್ತಮ. ಅವರ ಮನೆ ಚಿಕ್ಕದಿದ್ದೋ ಅಥವ ಇವರು ಇರುವ ಕೊಠಡಿಯಲ್ಲಿ ಇವರ ಮನೆಯವರು ಓಡಾಡುತ್ತಿದ್ದರೆ ಪಾಠದ ವಿಡಿಯೋ ನೋಡುತ್ತಿದ್ದವರು ಅದನ್ನೆಲ್ಲ ನೋಡತೊಡಗಿ ಅವರ ಗಮನ ಪಾಠದ ಕಡೆಗಿಂತ ಅವರ ಮನೆಯ ವಾತಾವರಣ ನೋಡುವಂತಾಗುತ್ತದೆ. ಇದಕ್ಕೊಂದು ಹಾಸ್ಯದ ತುಣುಕು ಇತ್ತೀಚಿಗೆ ಬಂದಿತ್ತು. ಹೀಗೆ ಅಂತರ್ಜಾಲ ಬಳಸಿ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರು ತಮ್ಮ ಪಾಠ ಮುಗಿಸಿ ಕೊನೆಯಲ್ಲಿ ತಮ್ಮ ಸಂದೇಹಗಳಿಗೆ ಪ್ರಶ್ನೆ ಕೇಳಲು ಐದು ನಿಮಿಷ ಕಾಲಾವಕಾಶವಿದೆ ಕೇಳಿ ಎಂದರಂತೆ ವಿಡಿಯೋದಲ್ಲಿ ಪಾಠ ನೋಡುತ್ತಿದ್ದ ಕಿತಾಪತಿ ವಿದ್ಯಾರ್ಥಿಯೊಬ್ಬ ತನ್ನ ತರ್ಲೆ ಪ್ರಶ್ನೆ ಕೇಳಿಯೇ ಬಿಟ್ಟ. “ಸಾರ್ ನೀವು ಪಾಠ ಮಾಡುತ್ತಿದ್ದಾಗ ಹಿಂದುಗಡೆ ಬಂದು ಹೋದರಲ್ಲ ಅವರು ನಿಮ್ಮ ಪತ್ನಿಯಾ. ?”ಎಂದು ಆಗ ಮೇಷ್ಟ್ರು ನೀನು ಪಾಠ ಕೇಳ್ತಿದ್ದ್ಯೋ ಅಥವ ನನ್ನ ವಿಡಿಯೋದಲ್ಲಿ ಯಾರು ಯಾರು ಬರುತ್ತಿದ್ದರು ಅಂತಾ ನೋಡುತ್ತಿದ್ದಿಯೋ. ? ಎಂದರಂತೆ ಖಾರವಾಗಿ.
ಇದು ಹಾಸ್ಯ ಪ್ರಸಂಗವೆನಿಸಿದರೂ ಕೂಡ ಬೋಧಕ ಒಂದು ವ್ಯವಸ್ಥಿತ ಕೊಠಡಿಯಲ್ಲಿ ಯಾರೂ ತನ್ನ ಅಕ್ಕಪಕ್ಕ ಸುಳಿಯದಂತೆ ನೋಡಿಕೊಂಡು ಪಾಠ ಮಾಡಿದರೆ ಅದು ವಿದ್ಯಾರ್ಥಿಗಳಿಗೆ ಪರಿಣಾಮ ಬೀರಬಹುದು. ಇನ್ನು ತಂತ್ರಜ್ಞಾನವನ್ನು ಒಮ್ಮೆಯೂ ಬಳಕೆ ಮಾಡದ ಅದ್ಯಾಪಕರು ಮೊದಲ ಬಾರಿ ಪಾಠ ಮಾಡುತ್ತಿದ್ದಾಗ ಎಲ್ಲರೂ ಬಂದಿದ್ದೀರೇನೋ. ? ಎಂದು ಕೇಳುವುದು. ಅಲ್ಲಿ ಗಲಾಟೆಯ ಸದ್ದು ಕೇಳಿದರೆ ನಿಮ್ಮ ನಿಮ್ಮ ಸೌಂಡ ಕಡಿಮೆ ಇಟ್ಕೋಳ್ರೋ ಎನ್ನುವುದು. ಅವರು ಎಲ್ಲರ ಸೌಂಡ ತಗ್ಗಿಸುವ ಉಪಾಯ ತಮ್ಮ ಮೋಬೈಲ್ ದಲ್ಲಿ ಇದ್ದರೂ ಅದನ್ನು ಅರಿಯದೇ ಹೋದಲ್ಲಿ ಪಾಠ ಪರಿಣಾಮಕಾರಿಯಾಗದು.
ಏನೇ ಸಾಧಕ ಬಾಧಕಗಳಿರಲಿ ಸದ್ಯದ ಮಟ್ಟಿಗೆ ಕೋರೋನಾ ಸಲುವಾಗಿ ಆನ್ ಲೈನ್ ವ್ಯವಸ್ಥೆ ಬಂದಿರುವುದರಿಂದ ಇದು ಅನಿವಾರ್ಯವೂ ಕೂಡ. ಶಾಲೆ ಕಾಲೇಜುಗಳು ಮತ್ತೆ ತೆರೆಯುವವರೆಗೆ ಈಗ ನಡೆದಿರುವ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕು. ಆದರೆ ಮುಖಾಮುಖಿ ಪಾಠದಷ್ಟು ಇದು ಪರಿಣಾಮಕಾರಿಯಾಗದು. ಅನಿವಾರ್ಯ ಕೂಡ. ಯ್ಯೂಟ್ಯೂಬ್ ವ್ಯವಸ್ಥೆ ಇದ್ದರೂ ಕೂಡ ಒಳ್ಳೆಯ ರಿಕಾರ್ಡಿಂಗ ಮತ್ತು ಚಿತ್ರೀಕರಣ ಅವಶ್ಯ. ಅದು ಕೂಡ ಬೇಗ ನಡೆಯುವ ಪ್ರಕ್ರಿಯೆಯಲ್ಲ ಎಂಬುದೂ ಅವಟೇ ಸತ್ಯ. ಎಲ್ಲವನ್ನು ನೋಟ್ಸ ಮೂಲಕ ಹಾಕಬಹುದಾದರೂ ಸರ್ಕಾರ ಆನ್ಲೈನ್ ತರಗತಿ ಕಡ್ಡಾಯಗೊಳಿಸಿರುವುದರಿಂದ ಬದಲಾವಣೆಯ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅವಶ್ಯಕ.
ಇನ್ನೂ ಕೆಲವರು ಪಾಠ ಮಾಡುವ ಬದಲು ನೋಟ್ಸಗಳನ್ನು ಕೊಟ್ಟು ಈ ಆನ್ಲೈನ್ ವ್ಯವಸ್ಥೆಯ ಗೋಜಿಗೆ ಹೋಗದೇ ಸುಮ್ಮನಿದ್ದು ಒಳ್ಳೆಯವರೆನಿಸಿಕೊಳ್ಳುವುದೂ ಕೂಡ ಪ್ರಸಕ್ತ ಸಂದರ್ಭದಲ್ಲಿ ನಡೆದರೂ ತಪ್ಪಲ್ಲ. ಅದು ಅವರವರ ಆಲೋಚನೆಗೆ ಬಿಟ್ಟ ಸಂಗತಿ ಕೂಡ. ಒಬ್ಬ ವಿದ್ಯಾರ್ಥಿ ಆನ್ಲೈನ್ ಪಾಠ ಕೇಳಿದರಷ್ಟೇ ಜಾಣನಾಗುತ್ತಾನೆಂದಲ್ಲ ಆತ ತನ್ನ ತಿಳುವಳಿಕೆಯ ಮಟ್ಟಿಗೆ ಪುಸ್ತಕಗಳನ್ನು ಓದಿ ಸಂದೇಹ ಬಂದಲ್ಲಿ ನೇರವಾಗಿ ಕರೆ ಮಾಡಿ ಪೋನ್ ಮೂಲಕ ಪರಿಹಾರ ಕಂಡುಕೊಂಡೂ ಕೂಡ ಪರೀಕ್ಷೆ ಉತ್ತೀರ್ಣನಾಗಲು ಸಾಧ್ಯ. ಏನೇ ಅಡತಡೆಗಳು ಬಂದರೂ ಕೂಡ ಓದಬೇಕೆನ್ನುವವರಿಗೆ ದಾರಿಗಳು ಹಲವಾರು. ಎಲ್ಲ ಇದ್ದರೂ ಕೂಡ ಕುಂಟು ನೆಪ ಹೇಳುವವರಿಗೂ ಕೂಡ ಹಲವು ದಾರಿಗಳು ತಪ್ಪಿಸಿಕೊಳ್ಳಲು ಇರುತ್ತವೆ. ಎರಡೂ ಸಾಧಕ ಬಾಧಕಗಳ ನಡುವೆ ಆನ್ ಲೈನ್ ಎಂಬು ಪಾಠಗಳು ಜರುಗುತ್ತಿವೆ ಜರುಗಿವೆ ಕೂಡ.
ಕಪ್ಪು ಹಲಗೆ ಬಳಸಿ ಮತ್ತು ಹಲವು ಬೋಧನೋಪಕರಣಗಳನ್ನು ಬಳಸಿ ಪಾಠ ಮಾಡಿ ರೂಢಿ ಇದ್ದವರಿಗೆ ಈ ಸಂಗತಿ ಸರಿ ಎನಿಸದು. ಅವರು ತಾವಿರುವ ಸ್ಥಳದಲ್ಲಿ ಇದೆಲ್ಲ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವಾಗದಿರದು. ಅವರು ನೇರವಾಗಿ ವಿಷಯ ನಿರೂಪಿಸಬೇಕಾಗುತ್ತದೆ. ಹೀಗಾಗಿ ಅವರಿಗೂ ಇದೊಂದು ರೀತಿ ಗೊಂದಲದ ವಾತಾವರಣ ಎನಿಸಿದರೆ ಅವರ ಪಾಠ ಮುಖಾಮುಖಿ ನೋಡಿದ ವಿದ್ಯಾರ್ಥಿಗಳಿಗೂ ಕೂಡ ಇದೆಂತಹ ಪಾಠ ಎಂದು ಬೋರ್ ಕೂಡ ಹೊಡಿಸಬಹುದು.
–ವೈ. ಬಿ. ಕಡಕೋಳ