ಅಂತರ್ಜಾಲದ ಖೆಡ್ಡಾಗಳು ಮತ್ತು ಕಾಟಕೊಡೋ ಕುಕ್ಕಿಗಳು: ಪ್ರಶಸ್ತಿ. ಪಿ.

ದಿನ ಬೆಳಗಾದಾಗ ಮುಖ ತೊಳೆಯೋ ಮುನ್ನವೇ ವಾಟ್ಸಾಪು ಮೆಸೇಜು ನೋಡ್ಲಿಲ್ಲ ಅಂದ್ರೆ ರಾತ್ರೆಯೊಳಗೆ ಒಮ್ಮೆಯೂ ಫೇಸ್ಬುಕ್ಕು ಹೊಕ್ಕಿಲ್ಲ ಅಂದ್ರೆ ನಮ್ಮ ಆ ದಿನವೇ  ಅಪೂರ್ಣವಾದ ಭಾವ !.

ಈ ಅಂತರ್ಜಾಲದಲ್ಲಿ ನಾವು ಎಷ್ಟು ಮುಳುಗಿ ಹೋಗಿದ್ದೇವೆ ಅಂದ್ರೆ ಕಾಲ್ಪನಿಕ ಜಗತ್ತೇ ಸರ್ವಸ್ವವೂ ಆಗಿ ಇಲ್ಲೇ ಕೃಷಿ ಮಾಡೋದ್ರಿಂದ(farm villa), ಓಡೋವರೆಗೆ(temple run) ನಿಜಜೀವನದ ಎಲ್ಲವನ್ನೂ ಅನುಕರಿಸೋ ತಂತ್ರಾಂಶಗಳನ್ನು ಬರೆದು ಅವುಗಳಲ್ಲೇ ಮುಳುಗಿ ಹೋಗಿ ಒಂಥರಾ ಕಾಲ್ಪನಿಕ ಜಗತ್ತಲ್ಲೇ ಕಳೆದುಹೋಗಿದ್ದೇವೆ. ಒಂದು ವಾರ ಫೇಸ್ಬುಕ್ಕಲ್ಲಿ ದಿನಾ ರಾತ್ರಿ ಹರಟಿದವ ನಂತರ ಎದುರಿಗೆ ಸಿಕ್ಕರೂ ಗುರುತಿಸಲಾಗದ ಪರಿಸ್ಥಿತಿ, ಹಿಂಜರಿಕೆಗಳು ಇರುತ್ತೆ ಅಂದ್ರೆ ಅದಕ್ಕಿಂತ ವಿಪರ್ಯಾಸ ಬೇಕಾ ?  ಜೀವನದ ಭಾಗವೇ ಆಗೋಗಿರೋ ಈ ಅಂತರ್ಜಾಲವಿಲ್ಲದಿದ್ದರೆ ನಾವು ಎಷ್ಟೊತ್ತು ಇರಬಹುದು ಅಂತೊಮ್ಮೆ ಯೋಚ್ನೆ ಮಾಡೋಕಾಗುತ್ತಾ ? (ಬದುಕಿರಬಹುದು ಅನ್ನೋ ಪ್ರಶ್ನೆಯಲ್ಲ. ಖುಷಿಯಿಂದ ಇರಬಹುದು ಅಂತಷ್ಟೇ.). ಎಲ್ಲೋ ಊರಿಗೋ, ಚಾರಣಕ್ಕೋ ಹೋದಾಗ ಒಂದೆರಡು ದಿನ ಇರಬಹುದೇನೋ. ಅದೇನು ದೊಡ್ಡ ವಿಷಯವಲ್ಲ ಅನ್ನೋ ದೊಡ್ಡ ಮನಸ್ಸಿನವರು ಸಿಕ್ಕರೂ, ಒಂದು ವಾರ, ಎರಡು ವಾರ, ಒಂದು ತಿಂಗಳು.. ನೆಟ್ಟಿಲ್ಲದೇ ..? ಊಹೂಂ. ನೆಟ್ಟೇ ಪ್ರಪಂಚವಾಗಿರೋ ಈ ಜಮಾನಾದಲ್ಲಿ ಅದರಿಂದ ಹೊರಬಂದು ಆದಿವಾಸಿಯ ತರ ಬದುಕಿರೋದು ಸಾಧ್ಯವೇ ಇಲ್ಲ ಅಂತೀರಾ ? ಹೌದು. ದಿನದ ಹಲವು ಅಗತ್ಯಗಳಿಗಾಗಿ , ಬೇಸರ ಕಳೆಯೋಕಾಗಿ .. ಒಂದಿಷ್ಟು ಜ್ನಾನ ಸಂಪಾದನೆಗಾಗಿ , ಜನರೊಂದಿಗೆ ಬೆರೆಯೋಕಾಗಿ ಅಂತರ್ಜಾಲದೊಂದಿಗೆ ಒಡನಾಡೇ ಒಡನಾಡ್ತೀವಿ. ಆದ್ರೆ ನಮ್ಮ ಈ ಅಗತ್ಯತೆಗಳನ್ನ ದುರುಪಯೋಗ ಪಡಿಸಿಕೊಳ್ಳೋಕೆ ಹಲತರದ ಖೆಡ್ಡಾಗಳು ಅಂತರ್ಜಾಲದಲ್ಲಿ ಯಾವಾಗ್ಲೂ  ಕಾಯ್ತಾ ಇರುತ್ವೆ. ಅಂತದ್ದೇ ಒಂದಿಷ್ಟು ಖೆಡ್ಡಾಗಳ ಬಗ್ಗೆ ಅರಿವು ಮೂಡಿಸೋದೇ ಈ ಲೇಖನದ ಉದ್ದೇಶ.

ಕುಕ್ಕಿಗಳು: 

ನೀವು ಫೇಸ್ಬುಕ್ ಉಪಯೋಗಿಸ್ತಿರ್ತೀರ. ಯಾವುದೋ ಜ್ನಾನದಲ್ಲಿ ಆ ಕಿಟಕಿಯನ್ನು ಮುಚ್ಚಿ ಬಿಡ್ತೀರ. ಮತ್ತೊಮ್ಮೆ ಫೇಸ್ಬುಕ್ ಅಂತ ಕೊಟ್ರೆ ಪಾಸ್ವರ್ಡನ್ನೇ ಕೇಳದೆ ಫೇಸ್ಬುಕ್ಕಿನ ಒಳಹೋಗುತ್ತೆ.ಮೊಬೈಲಲ್ಲಿ ಜೀಮೈಲಂತ ಐಕಾನ್ ಕ್ಲಿಕ್ ಮಾಡಿದ್ರೆ ಸೀದಾ ಒಳಹೋಗತ್ತೆ. ಇದಕ್ಕೆಲ್ಲಾ ಕಾರಣ ಕುಕ್ಕಿಗಳು(cookies). ಅಂದ್ರೆ ನೀವು ಯಾವುದೇ ವೆಬ್ ತಾಣದಲ್ಲಿ ಬಳಸಿದ ಕೆಲ ಅಂಶಗಳನ್ನು ನೆನಪಿಟ್ಟುಕೊಂಡ ಇದು ನೀವು ಮತ್ತೊಮ್ಮೆ ಅದೇ ತಾಣಕ್ಕೆ ಹೋದಾಗ ಬಳಸಿಕೊಳ್ಳತ್ತೆ. ಈ ಕುಕ್ಕಿಗಳು ನಿಮ್ಮ ಬ್ರೌಸರಿನಲ್ಲೇ ಕುಳೀತಿರುತ್ತೆ. ನೀವಾಗೇ ಅವನ್ನು ತೆಗೆಯೋ ತನಕ. ಒಳ್ಳೇದಲ್ವಾ ? ಇದರಿಂದ . ಪದೆ ಪದೆ ಪಾಸ್ವರ್ಡ್ ಕೊಡೋದು ತಪ್ಪತ್ತೆ. ಅಂದಾಗೆ ನಮ್ಮ ಕಂಪ್ಯೂಟ್ರನ್ನ ನಮ್ಮನ್ನಲ್ದೇ ಇನ್ಯಾರು ಬಳಸ್ತಾರೆ ಅಂದ್ರಾ ? ಅಲ್ಲೇ ಇರೋದು ಸಮಸ್ಯೆ. ಈ ಕುಕ್ಕಿಗಳಲ್ಲಿರೋ ಸುರಕ್ಷಾ ವ್ಯವಸ್ಥೆಯ ಲೋಪಗಳನ್ನು ಹುಡುಕ್ತಿರೋ ಹ್ಯಾಕರ್ಗಳಿಗೆ ನಿಮ್ಮ ಮಾಹಿತಿ ಸುಲಭವಾಗಿ ಸಿಗುತ್ತೆ. ಹಾಗಾಗಿ  ಈ ಕುಕ್ಕಿಗಳಲ್ಲಿರೋ ಮಾಹಿತಿಯನ್ನುಪಯೋಗಿಸಿಕೊಂಡು ನಿಮ್ಮ ಫೇಸ್ಬುಕ್ಕನ್ನೋ, ಜೀಮೇಲನ್ನೋ ಆರಾಮಾಗಿ ಹ್ಯಾಕ್ ಮಾಡಬಹುದು. ಈ ಕುಕಿಗಳನ್ನೇ ಕೆಲವು ಮಾಲ್ವೇರುಗಳು, ಟ್ರೋಜನ್ ಹಾರ್ಸುಗಳು(ಏನೆಂದು ಮುಂದೆ ನೋಡೋಣ) ದುರುಪಯೋಗಪಡಿಸಿಕೊಂಡು ನಿಮಗೆ ನಿತ್ಯ ತಲೆನೋವಾಗಬಹುದು. ಹಾಗಾಗಿ ನಿಯಮಿತವಾಗಿ ಈ ಕುಕ್ಕಿಗಳನ್ನು ಖಾಲಿ ಮಾಡುತ್ತಿರಿ. 

ಚಿತ್ರ scrap 1, scrap2 ನೋಡಿ ಕುಕ್ಕಿಗಳಿಂದ ಏನಾಗಬಹುದು. ಮತ್ತು ಅವನ್ನು ಹೇಗೆ ತೆಗೆಯೋದು ಅಂತ ಅರಿಯೋಕೆ..

ಅಂದಂಗೆ ಈ ಕುಕ್ಕಿಗಳನ್ನೋದು ಉಪಯೋಗಿಸೋ ಬ್ರೌಸರ್ನ ಮೇಲೆ ನಿರ್ಧರಿತವಾಗಿರುತ್ತೆ. ಉದಾಹರಣೆಗೆ ಚಿತ್ರ scrap 1 ರಲ್ಲಿ ತೋರಿಸಿದ ತೊಂದರೆ ನಿಮ್ಮ ಮೋಜಿಲ್ಲಾದಲ್ಲಿ ಮಾತ್ರ ಕಾಣ್ತಿರಬಹುದು. ಇಂಟರ್ನೆಟ್ ಎಕ್ಸಪ್ಲೋರರ್ ನಲ್ಲಿ ಕಾಣದಿರಬಹುದು. ಹಾಗೇನಾದ್ರೂ ಆಗಿದ್ರೆ ಮೊಜಿಲ್ಲಾದಲ್ಲಿರೋ ಎಲ್ಲಾ ಕುಕಿಗಳನ್ನು ಕಿತ್ತಾಕಿ. ಮತ್ತೆ ಅದೇ ಸಮಸ್ಯೆ ಬಂತಂದ್ರೆ ಮೊಜಿಲ್ಲಾವನ್ನೇ ಕಿತ್ತಾಕಿ ಹೊಸ ಮೋಜಿಲ್ಲಾ ಹಾಕಿ 🙂

ಮಾಲ್ವೇರುಗಳು:

ಇನ್ನು ಮುಂಚೆನೇ ಹೇಳಿದಂಗೆ ಕುಕಿಗಳೊಂದ್ರಿಂದ ಏನೂ ಆಗೋಲ್ಲ. ಅವುಗಳನ್ನು ಉಪಯೋಗಿಸಿಕೊಂಡು ನಿಮ್ಮ ತಲೆ ತಿನ್ನೋ ಅಂತರ್ಜಾಲೀಯ ಪಿರಿಪಿರಿಗಳೇ ಈ ಮಾಲ್ವೇರುಗಳು. ಅಂದ ಹಾಗೆ ಈ ಮಾಲ್ವೇರುಗಳು ಹೆಂಗೆ ಬರುತ್ವೆ ಅಂದ್ರಾ ? ಅದು ನಮ್ಮಿಂದಲೇ. ಫ್ರೀ ಕೊಟ್ರೆ ನಂಗೂ ಇರ್ಲಿ. ನಮ್ಮ ಪಕ್ಕದ ಮನೆಗೂ ಒಂದಿರ್ಲಿ ಅನ್ನೋ ಮನೋಭಾವ ನಮ್ಮದು. ಅದರ ದುರುಪಯೋಗ ಪಡಿಸಿಕೊಳ್ಳೋಕೆ ಅಂತರ್ಜಾಲದಲ್ಲಿ ಹಲವರು ಕಾಯ್ತಿರ್ತಾರೆ. ಉದಾಹರಣೆಗೆ ಯಾವುದೋ ಒಂದು ತಂತ್ರಾಂಶ ಬೇಕಿರುತ್ತೆ. ಅದನ್ನ ದುಡ್ಡು ಕೊಟ್ಟು ತಗೋಳ್ಳೋದೇನು ಅಂತ ಫ್ರೀಯಾಗಿ ಸಿಗುತ್ತಾ ಅಂತ ಹುಡುಕ್ತೀವಿ ನೆಟ್ಟಲ್ಲಿ. ಕೆಲವೊಂದು ಜಾಲತಾಣಗಳು ನಾವು ಕೊಡ್ತೀವಿ, ತಾವು ಕೊಡ್ತೀವಿ ಅಂತ ಮುಂದೆ ಬರುತ್ವೆ . ಉದಾ: softtonic,..ತಗೋ, ಫ್ರೀ ಸಿಗ್ತಲ್ಲಾ . ಎಷ್ಟೋ ದುಡ್ಡು ಉಳೀತು ಅಂತ ಖುಷಿ ಪಟ್ಟು ಆ ಫ್ರೀ ಸಿಕ್ಕ ತಂತ್ರಾಂಶವನ್ನು ಬಳಸೋಕೆ ಶುರು ಮಾಡ್ತೀವಿ. 

ಆದ್ರೆ ಕತೆ ಇಲ್ಲಿಗೆ ಮುಗ್ಯಲ್ಲ. ನಾವು ಡೌನಲೋಡ್ ಮಾಡಿದ ತಂತ್ರಾಂಶದ ಜೊತೆಗೆ ಒಂದಿಷ್ಟು ಮಾಲ್ವೇರ್(malware) ಗಳು ಬಂದು ನಮ್ಮ ಕಂಪ್ಯೂಟರಲ್ಲಿ ಕೂತ್ಕೋಳತ್ತೆ. ನಮ್ಮ ಕಂಪ್ಯೂಟರ್ ಬಳಕೆಯ ಮಾಹಿತಿಗಳನ್ನ ಯಾರ್ಯಾರಿಗೋ ಕೊಡೋದೇ ಈ ಮಾಲ್ವೇರುಗಳ ಕೆಲ್ಸ. ಇದರಿಂದ ನಮ್ಮ ಕಂಪ್ಯೂಟರಿಗೆ ಏನೂ ಹಾನಿಯಿಲ್ಲದಿದ್ರೂ ಪ್ರತೀ ಸಲ ಜಾಲಾಡುವಾಗ ಕಿರಿ ಕಿರಿ ತಪ್ಪಿದ್ದಲ್ಲ. ಉದಾಹರಣೆಗೆ ಪಂಜು ಅಂತರ್ಜಾಲ ತಾಣದಲ್ಲಿ ಏನೋ ಓದ್ಬೇಕು ಅಂತ ಬರ್ತೀರ. ಆದ್ರೆ ಅಷ್ಟರಲ್ಲಿ ನಾಲ್ಕು ಕಿಟಕಿಗಳು ತಾನಾಗೇ ತೆರೆದುಕೊಳ್ಳುತ್ತೆ. ಒಂದರಲ್ಲಿ ನಿಮ್ಮ ಕಂಪ್ಯೂಟರನ್ನ ವೈರಸುಗಳಿಗಾಗಿ ಹುಡುಕುತ್ತಿದ್ದೇವೆ ಅನ್ನುತ್ತೆ. ಮತ್ತೊಂದರಲ್ಲಿ ನೀವು ಒಂದು ಲಕ್ಷ ಗೆದ್ದಿದ್ದೀರ ಅನ್ನೋ ಚೌಕಾಕಾರ ಕುಣೀತಿರತ್ತೆ. ಇನ್ನೊಂದ್ರಲ್ಲಿ ಯಾವುದೋ ಮಾನಿನಿ ಬಂದು ನುಲೀತಿರ್ತಾಳೆ. ಮತ್ತೊಂದ್ರಲ್ಲಿ ಮತ್ತಿನ್ನೇನೋ ಮಂಗಾಟ. ಇದಿಷ್ಟೇ ಅಲ್ಲ. ಕಂಪ್ಯೂಟರ್ ತೆರೆ ಮೇಲೆ ಬಗೆ ಬಗೆಯ ಜಾಹೀರಾತುಗಳು ಪ್ರದರ್ಶಿತವಾಗಿ ನೀವು ಬಂದಿದ್ದ ಉದ್ದೇಶವೇ ಮರೆತುಹೋದಂತಾಗುತ್ತೆ. ಈ ಮಾಲ್ವೇರುಗಳಿಗೆಲ್ಲಾ ಇಂತದ್ದೇ ಒಂದು ಔಷಧಿ ಅಂತ ಇಲ್ಲ. ಪ್ರತಿಯೊಂದರ ರೋಗ ಲಕ್ಷಣಗಳ ಮೇಲೆ ಹಲವಿಧ ಔಷಧ ಅವಕ್ಕೆ. ಒಟ್ನಲ್ಲಿ ಈ ಮಾಲ್ವೇರುಗಳ ಕಾಟಕ್ಕೊಳಗಾಗೋದ್ರಿಂದ ಪಾರಾಗೋದು ಹೇಗೆ ? ಮತ್ತೆ ಅಪ್ಪಿ ತಪ್ಪಿ ಇವುಗಳ ಬಲೆಗೆ ಬಿದ್ರೂ ಅದರಿಂದ ಹೊರಬರೋದು ಹೇಗೆ ಅನ್ನೋದ್ನ ನೋಡೋಣ.  ಹಂಗೇ ಒಣದಾಗಿ ಹೇಳೋ ಬದಲು ಇತ್ತೀಚೆಗೆ ತುಂಬಾ ಕಾಟ ಕೊಟ್ಟ torntv ಅನ್ನೋ ಮಾಲ್ವೇರಿನ ಕತೆ ಮತ್ತು ಅದರಿಂದ ಪೀಡಿತನಾದವನೊಬ್ಬ ಹೇಗೆ ಅದರಿಂದ ಹೊರಬಂದ ಅನ್ನೋ ಪ್ರಸಂಗವನ್ನು ಬಳಸೋಣ.

ಇತ್ತೀಚೆಗೆ ಮೋಜಿಲ್ಲಾ ಬಳಕೆದಾರರಿಗೆ ಒಂದು ಮಿನಿ ತಂತ್ರಾಂಶ(addon) ತರ ಕಂಡು, ಬಹೂಪಯೋಗಿ ಪೋಸು ಕೊಟ್ಟ ಗೋಮುಖದ ಗುಳ್ಳೇನರಿ ಈ torntv. ನೀವು ಇದನ್ನುಪಯೋಗಿಸಿಕೊಂಡು ಆನಲೈನಲ್ಲೇ ಟೀವಿ ನೋಡಬಹುದು ಅಂತ ಒಳಸೇರಿದ(ಚಿತ್ರ scrap 4) ಇದರಿಂದ ಶುರುವಾದ ತಲೆನೋವುಗಳು ಒಂದೆರಡಲ್ಲ. ಯಾವುದೇ ಪೇಜಿಗೆ ಹೋದ್ರೂ ಇದರದ್ದೊಂದು ಜಾಹೀರಾತಿನ ಗೋಳು. ವಿಕಿಪೀಡಿಯಾಕ್ಕೆ ಹೋದ್ರೂ ಬೆಂಬಿಡದ ಬೇತಾಳನಂತೆ ಹಿಂಬಾಲಿಸುತ್ತಿತ್ತು ಈ ಟಾರ್ನು!(ಚಿತ್ರ scrap 3). ಮೊದಲು ಇದು ಆ ಸೈಟಿನ ಧನದಾಹ ಅಂತ್ಕೊಂಡಿದ್ದ ಗ್ರಾಹಕರಿಗೆ ಇದೊಂದು ಮಾಲ್ವೇರಿನ ಕಿತಾಪತಿ ಅಂತ ನಿಧಾನವಾಗಿ ತಿಳಿತು. ಈಗ ಗೂಗಲ್ಲಲ್ಲಿ torntv ಅಂತ ಕೊಟ್ರೆ ಇದರ ಬಗ್ಗೆ ಎಚ್ಚರಿಸೋ ಹಲವು ಕೊಂಡಿಗಳು ಸಿಗುತ್ವೆ(ಚಿತ್ರ scrap 5).

ಇದೊಂದು ಉದಾಹರಣೆ ಅಷ್ಟೇ. ಈ ತರಹ ಜನರ ನೆಮ್ಮದಿಯೊಂದಿಗೆ ಆಟವಾಡಿದ ಎಷ್ಟೋ ಮಾಲ್ವೇರುಗಳು ಬಂದಿದೆ. ನಿತ್ಯ ಹುಟ್ಟಿಕೊಳ್ಳೂತ್ತಿದೆ. ಹಾಗಾಗಿ ಇಂತವುಗಳಿಂದ ಹುಷಾರಿರುವುದು ಒಳ್ಳೇದು. ಉದಾಹರಣೆಗೆ ಈ ಕೆಲ ಕ್ರಮ ಕೈಗೊಳ್ಳಬಹುದು. 

ಅ. ಜೀಮೇಲಿಗೆ ಮೊಬೈಲ್ ನಂಬರನ್ನ ಸೆಕ್ಯುರಿಟಿಯಾಗಿ ಕೊಡೋದು. ಅಂದ್ರೆ ನೀವು ಪ್ರತೀ ಸಲ ಲಾಗಿನ್ ಆಗೋಕೆ ಹೋದಾಗ ನಿಮ್ಮ ಮೊಬೈಲ್ ನಂಬರಿಗೊಂದು ಪಾಸ್ ಕೋಡ್ ಬರುತ್ತೆ. ಅದನ್ನ ಕೊಟ್ಟ ನಂತರವೇ ನೀವು ಲಾಗಿನ್ ಆಗೋಕೆ ಆಗೋದು. ಹಾಗಾಗಿ ಹ್ಯಾಕರಿನ ಕೆಲ್ಸ ನಿಜಕ್ಕೂ ಕಷ್ಟವಾಗುತ್ತೆ.

ಆ. ಅದೇ ತರ ಫೇಸ್ಬುಕ್ಕಿಗೆ http ಬದ್ಲು https ಬಳಸುವಂತೆ ಮತ್ತೆ ನಿಮ್ಮ ಸ್ಥಳ, ಕಂಪ್ಯೂಟರ್ ನೆನಪಿಟ್ಟುಕೊಳ್ಳುವಂತೆ ಆದೇಶಿಸೋದು. ಇದರಿಂದ ನೀವೇ ಬೇರೆ ಬ್ರೌಸರ್ ಅಥವಾ ಕಂಪ್ಯೂಟರಿಂದ ಲಾಗಿನ್ ಆದ್ರೆ ನಿಮ್ಮ ಮಿಂಚೆ ವಿಳಾಸಕ್ಕೊಂದು ಮಿಂಚೆ ಬರುತ್ತೆ. ಇಷ್ಟು ಹೊತ್ತಿಗೆ ಇಂತಾ ಸ್ತಳದಿಂದ ನಿಮ್ಮ ಫೇಸ್ಬುಕ್ಕಿಗೆ ಲಾಗಿನ್ ಆಗಲಾಗಿದೆ ಅಂತ ! ಹಂಗಾಗಿ ಯಾರಾದ್ರೂ ನಿಮ್ಮ ಅಕೌಂಟ್ ಹ್ಯಾಕ್ ಮಾಡಿದ್ರೆ ತಕ್ಷಣ ಗೊತ್ತಾಗಿಹೋಗತ್ತೆ.

ಇ. Antivirus ಇದ್ರೆ ಅದನ್ನು ನಿಯಮಿತವಾಗಿ ಅಪ್ಡೇಟ್ ಮಾಡೋದು

ಈ. ಉಚಿತ ಅಂತ ಹೋಗೋ ಬದಲು ಉಚಿತ ತಂತ್ರಾಂಶಗಳನ್ನು ( open source). ಉದಾಹರಣೆಗೆ ಮೈಕ್ರೋಸಾಫ್ಟ್ ವರ್ಡಿನ ಉಚಿತ ಅವತರಣಿಕೆ ಹುಡುಕೋ ಬದ್ಲು ಅಷ್ಟೇ ಕೆಲಸ ಮಾಡೋ ಉಚಿತ ತಂತ್ರಾಂಶಗಳನ್ನು ಬಳಸೋದು..

ಉ. ಇನ್ನೂ ಒಳ್ಳೇ ಸಲಹೆ ಅಂದ್ರೆ ಈ ವಿಂಡೋಸ್ಗೆ ಒಂದು ನಮಸ್ಕಾರ ಹಾಕಿ ಉಚಿತ ತಂತ್ರಾಂಶಗಳಾದ ಲಿನಕ್ಸು ಅಥವಾ ಅದರ ಅಣ್ಣ ತಮ್ಮಂದಿರಾದ ಉಬುಂಟು, ಕುಬುಂಟು, ಎಡುಬುಂಟು, ಸೂಸೇ(suse ಸೊಸೆ ಅಲ್ಲ ಮತ್ತೆ 🙂 ) ಇತ್ಯಾದಿ ಬಳಸೋದು. 

ಹೇಳೋಕೆ ಎಲ್ಲಾ ಸುಲಭ. ಆದ್ರೆ ಮಾಡೋ ಮನಸ್ಸು ಬೇಕಷ್ಟೇ. ಸರಿ, ತುಂಬಾ ಆಯ್ತು ಒಮ್ಮೆಗೆ ಅಂತ್ಕೋತೀನಿ. ಮತ್ತೆ ಸಿಗೋಣ. ಇದರಲ್ಲೇನಾದ್ರೂ ಹೇಗೆ, ಎತ್ತ ಎಂಬ ಸಂದೇಹಗಳಿದ್ರೆ ಇಲ್ಲೇ ಕಮೆಂಟಿಸಿ. ನನಗೆ ತಿಳಿದ ಮಟ್ಟಿಗೆ, ಅಥವಾ ತಿಳಿದ ತಜ್ನರಿಂದ ಕಮೆಂಟು ರೂಪದಲ್ಲಿ ಉತ್ತರ ಒದಗಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲಾ ಅದೇ ಒಂದು ದೊಡ್ಡ ಸಂಗತಿಯಾಗಿದ್ದರೆ ಮುಂದಿನ ವಾರದ ಅಂಕಣದಲ್ಲಿ ಅದಕ್ಕೆಂದೇ ಒಂದಿಷ್ಟು ಜಾಗ ಮೀಸಲಿಡುತ್ತೇನೆ. ಒಟ್ನಲ್ಲಿ ನಮ್ಮೆಲ್ಲರಿಗೂ ಒಂದು ಆಹ್ಲಾದಕರ, ತಲೆನೋವಿಲ್ಲದ ನೆಟ್ಟಿನ ನಾಳೆಗಳು ಸಿಗಬೇಕೆಂಬುದೇ ಈ ಲೇಖನದ ಆಶಯ.

ಮಾಹಿತಿ ಮೂಲ: http://computervirusremovaltips.blogspot.in/2014/03/what-is-torntv-how-to-remove-torntv.html

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Anitha Naresh Manchi
Anitha Naresh Manchi
9 years ago

ಒಳ್ಳೆಯ ಮಾಹಿತಿ 

Akhilesh Chipli
Akhilesh Chipli
9 years ago

ಮಾಹಿತಿಗಳು ಚೆನ್ನಾಗಿವೆ

prashasti.p
9 years ago

ಧನ್ಯವಾದಗಳು ಅನಿತಾಕ್ಕ ಮತ್ತು ಅಖಿಲೇಶ್ ಭಾಯ್.. 🙂
ಒಂದು ಮಾಹಿತಿ ಇದರಲ್ಲೇ ಸೇರಿಸಬಹುದಿತ್ತೇನೋ . ಮಿಸ್ಸಾಗಿದೆ. ಈ torntv ಅನ್ನೋದು ಮೋಜಿಲ್ಲಾ ಮಾತ್ರವಲ್ಲ. ಗೂಗಲ್ ಕ್ರೋಮಿನೊಂದಿಗೂ ಬರಬಹುದು !.. ಒಮ್ಮೆ ಬಂದಿದ್ದರೆ ಇದೇ ತರದ ವ್ಯವಸ್ಥೆ ಉಪಯೋಗಿಸಬಹುದು

3
0
Would love your thoughts, please comment.x
()
x