ಅಂತರಾಗ್ನಿ (ಭಾಗ 5): ಕಿರಣ್. ವ್ಹಿ

ಇಲ್ಲಿಯವರೆಗೆ..

” ಆಮೇಲೆ ಇಲ್ಲಿಗೆ ಹೊರಟದ್ದು ಮಧ್ಯದಲ್ಲಿ ನೀವು ಸಿಕ್ಕಿದ್ದು. ನಿಮ್ಮ ಪರಿಚಯ. ಇದೆಲ್ಲ ನಡೆದದ್ದು. ಇಲ್ಲಿ ಕೂತುಕೊಂಡು ಗುಂಡು ಹಾಕುತ್ತಿರೋದು. ಅಷ್ಟೇ ಅಂಕಲ್. ಹೆಂಗಿತ್ತು ನನ್ನ ಪ್ಲಾಪ್ ಲವ್ ಸ್ಟೋರಿ?” ಎನ್ನುತ್ತಾ ನಕ್ಕ ಹರಿ. ಅಷ್ಟರಲ್ಲಿ ನಶೆಯಲ್ಲಿ ತೇಲುತ್ತಿದ್ದ.

” ಇಷ್ಟೆಲ್ಲಾ ಆಗಿದೆ ನಿನ್ನ ಲೈಫ್ನಲ್ಲಿ ಅಂತಾಯ್ತು..”

” ಹಂ ಅಂಕಲ್. ಎಲ್ಲರೂ ಮೋಸಗಾರು……. ಮೋಸಗಾರರು.” ಎನ್ನುತ್ತ ಧೊಪ್ಪನೆ ಬಿದ್ದುಬಿಟ್ಟ. ಹುಡುಗ ಫುಲ್ ಟೈಟ್ ಆಗಿದ್ದಾನೆ ಎಂದುಕೊಂಡು, ಎಲ್ಲವನ್ನೂ ನೀಟಾಗಿ ತೆಗೆದಿಟ್ಟು, ತಮ್ಮ ರೂಮಿಗೆ ನಡೆದರು ವರ್ಮ. ಅಷ್ಟೆಲ್ಲಾ ಕಥೆ ಕೇಳಿದ್ದರೂ, ಗೋಪಾಲ್ ವರ್ಮಾ ಕೇವಲ ಅರ್ಧ ಬಾಟಲಿ ಕುಡಿದಿದ್ದರು. ಸ್ವಲ್ಪವೇ ಸ್ವಲ್ಪ ನಶೆ ಏರಿತ್ತು.

ಬೆಳಗ್ಗೆ ಎದ್ದು ಕನ್ನಡಿಯಲ್ಲಿ ನೋಡಿಕೊಂಡಾಗ, ಹರಿಯ ಕಣ್ಣುಗಳು ಊದಿಕೊಂಡಿದ್ದವು. ರಾತ್ರಿ ಕುಡಿದ ನಶೆಯಲ್ಲಿ ಏನೇನು ಮಾತನಾಡಿ ಬಿಟ್ಟೆನೊ ಎಂಬ ಭಯ ಅವನಲ್ಲಿ ನೆಲೆಯೂರಿತ್ತು. ಜಾಗಿಂಗ್ ಹೋಗುವ ನೆಪದಲ್ಲಿ ಅವರನ್ನು ಮಾತನಾಡಿಸಿ, ಕಳೆದ ರಾತ್ರಿ ಕೆಟ್ಟದಾಗಿ ವರ್ತಿಸಿದೆನೆ ಎಂದು ತಿಳಿದುಕೊಳ್ಳಬೇಕೆಂದು ಹೊರಟ. ಅಂದು ತಾನೆ ವರ್ಮಾರನ್ನು ಜಾಗಿಂಗ್ ಗೆ ಕರೆಯಲು ಹೊರಟ. ಸಮಯ ಇನ್ನು ಆರಾಗಿತ್ತು. ವರ್ಮಾ ಇನ್ನೂ ಎಚ್ಚರಗೊಂಡಿರಲಿಲ್ಲ. ಆಕಾಶದಲ್ಲಿ ಆಗತಾನೆ ಸೂರ್ಯ ಇಣುಕಿ ನೋಡುತ್ತಿದ್ದ. ಸೂರ್ಯನ ಎಳೆಯ ಕಿರಣಗಳು ಪೃಥ್ವಿಯನ್ನು ಆಗಷ್ಟೇ ಚುಂಬಿಸುತ್ತಿದ್ದವು. ವರ್ಮಾರವರ ರೂಮಿನ ಬಾಗಿಲನ್ನು ಬಡಿಯುತ್ತಾ ನಿಂತ.

” ಅಂಕಲ್, ಗುಡ್ ಮಾರ್ನಿಂಗ್. ಎದ್ದೇಳಿ ಸಿಕ್ಸ್  ಆಯ್ತು” ಎಂದು ಮತ್ತೆ ಮತ್ತೆ ಬಡೆದ.

” ಓಹ್ ಹರಿ, ವೆರಿ ಗುಡ್ ಮಾರ್ನಿಂಗ್. ರಾತ್ರಿ ಲೇಟಾಗಿ ಮಲ್ಕೊಂಡೆ ನೋಡು, ಬೇಗ ಎಚ್ಚರವೆ ಆಗಲಿಲ್ಲ. ಥ್ಯಾಂಕ್ ಯೂ ಸೋ ಮಚ್ ಎಬ್ಸಿದಕ್ಕೆ”

” ಇಟ್ಸ್ ಓಕೆ ಅಂಕಲ್. ಬನ್ನಿ ಬೇಗ, ಹೊರಗಡೆ ವೇಟ್ ಮಾಡ್ತಿರ್ತಿನಿ”

” ಎಸ್ ಎಸ್ ಬಂದೇಬಿಟ್ಟೆ.” ಎಂದು ಫ್ರೆಶ್ ಆಗಲು ಹೊರಟರು. ಕರೆಕ್ಟ್ ಹದಿನೈದು ನಿಮಿಷದ ನಂತರ ಬಂದರು  ವರ್ಮಾ.

” ನಡಿ ಹರಿ, ಐಯಾಮ್ ರೆಡಿ. ಹೋಗೋಣ.” ಎಂದು ಇಬ್ಬರೂ ಸೇರಿ ಹೊರಟರು ವಿಷಯವನ್ನು ಹೇಗೆ ತಿಳಿದುಕೊಳ್ಳಬೇಕೆಂದು ಆತನಿಗೆ ಗೊತ್ತಾಗಲಿಲ್ಲ, ” ಮತ್ತೆ ಅಂಕಲ್? ನಿನ್ನೆ ಫುಲ್ ಟೈಟಾ?”  ಎನ್ನುತ್ತಾ ಮಾತನ್ನು ಆರಂಭಿಸಿದ.

” ಅಷ್ಟೇನೂ ಇಲ್ಲಪ್ಪ. ನೀನ್ ಮಾತ್ರ ಫುಲ್ ಔಟ್ ಆಗಿದ್ಯಲ್ಲೊ” ಎನ್ನುತ್ತಾ ಜೋರಾಗಿ ನಕ್ಕರು. ಹರಿಗೆ ಕೊಂಚ ಮುಜುಗರವಾಯಿತು.

” ಇಟ್ಸ್ ಓಕೆ  ಯಂಗ್ ಮ್ಯಾನ್” ಎನ್ನುತ್ತಾ ಸಣ್ಣದಾಗಿ ನಕ್ಕರು.

” ಅಂಕಲ್ ಮತ್ತೆ ನಿನ್ನೆ ಎಷ್ಟೊತ್ತಿಗೆ ಹೋದ್ರಿ ರೂಮಿಗೆ?”

” ನಾನಾ….. ಸುಮಾರು ಒಂದು ಗಂಟೆ ಆಗಿರಬಹುದೇನೊ.”

” ಅಷ್ಟೊತ್ತಾ?…. ಮೈ ಗಾಡ್..! ಏನ್ ಮಾಡಿದ್ರಿ ಅಂಕಲ್ ಅಷ್ಟೊತ್ತು?”

” ಏನಿಲ್ಲ ಹರಿ, ನೀನು ಏನು ಹೇಳ್ತಾ ಇದ್ದೆ. ನಾನು ಕೇಳ್ತಾ ಕೂತಿದ್ದೆ ಅಷ್ಟೇ.” ಎಂದರು ವರ್ಮ. ಹರಿ ತಾನು ಕಳೆದ ರಾತ್ರಿ ಏನೇನು ಹೇಳಿರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಹೀಗೆಲ್ಲ ಮಾಡುತ್ತಿದ್ದಾನೆಂದು ಅವರಿಗೆ ಅರ್ಥವಾಯಿತು. ಆದರೂ ಏನನ್ನು ಬಿಡಿಸಿ ಹೇಳಲು ಮುಂದಾಗಲಿಲ್ಲ. ಕ್ಷಣಕಾಲ ಮೌನ ಆವರಿಸಿತು ಅವರ ಮಧ್ಯ. ಒಂದೇ ಸಮನೆ ಕೇಳಿದರೆ ಅವರಿಗೆ ಅನುಮಾನ ಬರಬಹುದೆಂದು ಸುಮ್ಮನಿದ್ದನೇನೊ. ಸ್ವಲ್ಪ ಹೊತ್ತು ಬಿಟ್ಟು ಹರಿ ಏನನ್ನೊ ಹೇಳಲು ಬಂದ, ಆದರೆ ವರ್ಮಾ ಅವನನ್ನು ತಡೆದುರು,

” ಯಂಗ್ ಮ್ಯಾನ್ ಯಾಕೆ ತಲೆಕೆಡಿಸಿಕೊಳ್ತೀಯಾ? ಕಮಾನ್ ನಾನೇನು ಅಂದುಕೊಳ್ಳಲ್ಲ. ನೀನು ನಿನ್ನ ಸ್ಟೋರಿನೆಲ್ಲ ನನ್ನ ಮುಂದೆ ಹೇಳಿಕೊಂಡೆ, ದಟ್ಸ್ ಆಕ್ಚುವಲಿ ಗುಡ್ ಫಾರ್ ಯುವರ್ ಮೆಂಟಲ್ ಹೆಲ್ತ್…!” ಅದನ್ನು ಕೇಳುತ್ತಲೇ ಹರಿಯ ಮುಖ ಸಪ್ಪಗಾಗಿಬಿಟ್ಟಿತು.

” ಎಲ್ಲ ಹೇಳಿಬಿಟ್ನ…. ಓಹ್ ಶಿಟ್.”  ಎನ್ನುತ್ತಾ ಗೊಣಗಿದ.

” ಇಟ್ಸ್ ಓಕೆ. ಕಮಾನ್ ಎಂದು ಸುಮ್ಮನಾದರು. ಹರಿಗಾಗಿ ಕೊಂಚ ಸ್ಪೇಸ್ ಕೊಡಬೇಕೆಂದು ಎನಿಸಿತು ಅವರಿಗೆ. ಕೊಂಚ ಹೊತ್ತು ಏನನ್ನು ಮಾತನಾಡಲಿಲ್ಲ ಇಬ್ಬರು.

” ನಿನ್ನೆ ಏನೆಲ್ಲ  ಹೇಳಿದ್ನೋ ನನಗಂತೂ ನೆನಪಿಲ್ಲ. ಆದರೆ ಅದೆಲ್ಲ ನನ್ನ ಮನಸ್ಸಿನಾಳದಲ್ಲಿ ಇರೋದು ಅಂಕಲ್. ಐ ಕಾಂಟ್ ಫಾರ್ಗಿವ್ ಹರ್ ಅಂಡ್ ಫಾರ್ಗೆಟ್ ಇಟ್, ಎನ್ನುತ್ತಿದ್ದಂತೆ ಕಣ್ಣಿನಲ್ಲಿ ಹನಿಗಳು ಒಡೆದವು.

” ಸಮಾಧಾನ ಮಾಡ್ಕೋ ಹರಿ, ಬಂದದ್ದನ್ನು ಎದುರಿಸಬೇಕು. ಒಪ್ಪಿಕೊಂಡು ಮುನ್ನಡಿತಾ ಇರಬೇಕು.”

” ಹೌದು ಅಂಕಲ್. ಆದರೆ ಅದನ್ನೆಲ್ಲ ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ ನನಗೆ.”

”  ಮರಿಬೇಕು ಹರಿ. ಮರೀಲೇಬೇಕು. ಅದೇ ಜೀವನಕ್ಕೆ ಹೊಸ ಹುರುಪನ್ನು ಕೊಡೋದು.”

”  ಹೂ” ಎಂಬ ದೀರ್ಘವಾದ ಶಬ್ದವನ್ನು ಬಿಟ್ಟು ಬೇರೇನು ಕೇಳಿಸಲಿಲ್ಲ ವರ್ಮರವರಿಗೆ. ಕೆಲಹೊತ್ತಿನ ನಂತರ ಹರಿಯೇ ಮಾತನ್ನು ಆರಂಭಿಸಿದ.

” ಎಷ್ಟು ವಿಚಿತ್ರ ಅಲ್ವಾ ಅಂಕಲ್ ಈ ಜೀವನ. ಇವತ್ತು ನಮ್ಮವರು ಅಂತ ಅಂದ್ಕೊಂಡವರು ನಾಳೆ ಅನ್ನುವಷ್ಟರಲ್ಲಿ ಬೇರೆಯವರಾಗಿಬಿಡುತ್ತಾರೆ. ಬುಲ್ ಶಿಟ್…! ಜೀವನ ಸಾಕಾಗಿದೆ. ಯಾರಿಗೆ ಬೇಕು ಈ ಜೀವನ.” ಎಂದು ಕೂಗಿದ.

” ನೋ…ನೋ… ಹಾಗೆಲ್ಲ ಡಿಪ್ರೆಸ್ ಆಗಿ ಮಾತನಾಡಬಾರದು ಯಂಗ್ ಮ್ಯಾನ್. ಸೀ, ನಾವು ಬಿದ್ದಾಗಲೇ ನಮ್ಮ ಅಸ್ತಿತ್ವ, ನಾವು ಎಂಥವರು ಜೊತೆ ಇದ್ದೀವಿ, ಹೇಗೆ ನಡೆದರೆ ಅದು ಸರಿಯಾದ ಮಾರ್ಗ ಎಂಬುದು ತಿಳಿಯುವುದು.”

” ಅದ್ಸರಿ ಅಂಕಲ್, ಇಂಥವರ ಅವಶ್ಯಕತೆಯಾದರೂ ಈ ಜಗತ್ತಿಗೆ ಏನಿದೆ? ಇವರನ್ನೆಲ್ಲ ಕೊಂದುಬಿಡಬೇಕು ಅನ್ಸತ್ತೆ ನಂಗೆ.”

” ಹ್ಹ….ಹ್ಹ….ಚೆನ್ನಾಗಿ ಮಾತನಾಡುತ್ತಿಯ. ಹಾಗೆ ನೋಡಿದ್ರೆ ಈ ಭೂಮಿ ಮೇಲೆ ಇರೋರ್ನೆಲ್ಲ ಸಾಯಿಸಬೇಕಾಗುತ್ತದೆ. ಎಲ್ಲರೂ ಒಂದು ತರದಲ್ಲಿ ಮೋಸಗಾರರು ಅಲ್ವಾ? ಈಗ, ನೀನು ನಿನ್ನ ಅಪ್ಪ ಅಮ್ಮಂಗೆ ಹೇಳ್ದೆ ಪ್ರೀತಿ ಮಾಡಿದೆ. ಅದು ಮೋಸ ಅಲ್ವಾ? ಎಷ್ಟೋ ಜನ ಅಪ್ಪ-ಅಮ್ಮಂದಿರು ತಮ್ಮ ಸುಖ ಸಂತೋಷಕ್ಕಾಗಿ ಮಕ್ಕಳನ್ನು ಹುಟ್ಟಿಸುತ್ತಾರೆ. ನಂತರ ಎಲ್ಲವೂ ನಿನ್ನದೇ ನಿನಗೋಸ್ಕರವೇ ಎನ್ನುತ್ತಾ ಉದ್ಗಾರವನ್ನೆತ್ತುತ್ತಾರೆ. ಇದು ಒಂದು ರೀತಿಯ ಮೋಸವೇ ಅಲ್ಲವೇ? ಆದರೆ ಇದನ್ನು ಮೋಸ ಅಂತ ಕರೆಯೋದಕ್ಕೆ ಆಗಲ್ಲ. ಕರೆದರೆ ನನ್ನನ್ನ ಫೂಲ್ ಅಂತಾರೆ. ಯಾಕೆ ಗೊತ್ತಾ? ಅದು ಮಾನವನ ಸಹಜ ಗುಣ. ಇರುವುದೇ ಹಿಂಗೆ.  So the thing that matters here is your perspective and the way you approach the situation. ನಿನಗೆ ಮೋಸ ಅನಿಸಿದ್ದು ಅವಳಿಗೆ ಸರಿ ಅನಿಸಿರಬಹುದಲ್ಲವೇ?”

” ನೀವ್ ಏನೇನೋ ಹೇಳ್ತಿದ್ದೀರಿ ಅಂಕಲ್. ನಾನಂತೂ ಇದನ್ನು ಒಪ್ಪಲ್ಲ. ಅವಳು ಮಾಡಿದ್ದು ನಂಗ್ ಅಷ್ಟೇ ಯಾಕೆ ಮೋಸ ಅಂತ ಅನ್ಸತ್ತೆ. ಅದು ಇಂದಿಗೂ ಎಂದೆಂದಿಗೂ ಮೋಸವೆ. ಅಷ್ಟೇ.” ಎನ್ನುತ್ತಾ ನಾಲ್ಕು ಹೆಜ್ಜೆ ಮುಂದಿಟ್ಟ. ಹರಿಗೆ ತಮ್ಮ ಮಾತುಗಳಿಂದ ಸಿಟ್ಟು ಬಂತೆಂದು ವರ್ಮಾರವರಿಗೆ ಗೊತ್ತಾಯ್ತು.

” ಸರಿ ಹೋಗ್ಲಿ ಬಿಡಪ್ಪ, ಕ್ಷಮಿಸು ನನ್ನ.” ಎನ್ನುತ್ತಾ ಅವನ ಸಮನಾಗಿ ನಡೆಯಲು ಯತ್ನಿಸಿದರು.

”  ಕ್ಷಮೆ ಎಲ್ಲ ಯಾಕೆ ಕೇಳ್ತೀರಾ ಅಂಕಲ್. ಹೋಗ್ಲಿ ಬಿಡಿ.” ಸ್ವಲ್ಪ ಕ್ಷಣಗಳ ಮೌನದ ನಂತರ ಮತ್ತೆ ಹರಿಯೆ ಪ್ರಶ್ನೆ ಕೇಳಿದ. ದುಃಖದಲ್ಲಿದ್ದ ಹರಿಗೆ ಅದೆಲ್ಲಿಂದಲೋ, ಹೀಗ್ಯಾಕೆ ಮಾಡುತ್ತಾರೆ? ಅದು-ಇದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಮೂಡಿತ್ತು. ಹೀಗಾಗಿ ವರ್ಮರವರನ್ನು ಪ್ರಶ್ನಿಸತೊಡಗಿದ.

” ಸರ್ ನೀವು ಸೈಕಾಲಜಿಸ್ಟ್ ತಾನೆ, ನಿಮ್ಮ ಪ್ರಕಾರ ಮನುಷ್ಯ ಯಾಕೆ ಮೋಸ ಮಾಡುತ್ತಾನೆ? ಆಕ್ಚುವಲಿ ಈ ಮೋಸಾನಾ ಹೇಗೆ ಡಿಫೈನ್ ಮಾಡ್ತೀರಾ?”

” ಇದಂತ ಪ್ರಶ್ನೆ ಕೇಳಿದೆಯಪ್ಪ ನೀನು.” ಎಂದು ತಲೆ ಕೆರೆದುಕೊಂಡರು. ” ಸರಿ ನನ್ನ ಥಿಯರಿಯನ್ನು ಎಕ್ಸ್ಪ್ಲೈನ್ ಮಾಡ್ತೀನಿ ಕೇಳು. ಮೊದಲಿಗೆ, ಮೋಸ ಅಂದ್ರೆ ಒಬ್ಬ ವ್ಯಕ್ತಿಯನ್ನು ಮನಸ್ಸಿನ ಅಂತರಾಳದಲ್ಲಿ ಕೂರಿಸಿ, ಅವರಿಗೆ ವಿಶೇಷ ಸ್ಥಾನವನ್ನು ಕೊಟ್ಟು, ಅವರನ್ನು ಮನಃಪೂರ್ವಕವಾಗಿ ನಂಬುವುದು ಹಾಗೂ ಅವರಿಂದ ಕೆಲವೊಂದಿಷ್ಟುನ್ನು ಅಪೇಕ್ಷಿಸುವುದು. ಈ ಸಂಬಂಧದಲ್ಲಿ ಮುಂದೊಂದು ದಿನ ಅನಿರೀಕ್ಷಿತವಾಗಿ ಆ ವ್ಯಕ್ತಿ ನಡೆದುಕೊಂಡರೆ ಅಥವಾ ನಮ್ಮ ನಿರೀಕ್ಷೆಯಂತೆ ವರ್ತಿಸದೆ ಇದ್ದರೆ ಹಾಗು ನಮ್ಮ ಅಹಂಗೆ ಹಾನಿ ಉಂಟು ಮಾಡಿದರೆ, ಅದನ್ನು ನಾವು ಮೋಸ ಎಂದು ಹೆಸರಿಸುತ್ತೇವೆ.

ಇನ್ನು ಎರಡನೆಯದಾಗಿ ಮೋಸ ಯಾಕೆ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಸಂಗತಿ. ಯಾಕೆಂದರೆ ಮೋಸ ಮಾಡುವವರಿಗೆ ಅದು ಮೋಸವೆಂದು ಅನಿಸಲಿಕ್ಕಿಲ್ಲ. ಅವರ ದೃಷ್ಟಿಕೋನದಲ್ಲಿ ಸರಿಯಾಗಿರಬಹುದು. ಮೊದಲಿಗೆ ಹೇಳಿದಂತೆ it all depends on your perspective” ಎಂದು ಹೇಳುತ್ತಿದ್ದಂತೆಯೆ ಹರಿ ಪ್ರಶ್ನಿಸಿದ,  ” ಅಂದರೆ ನಿಮ್ಮ ಪ್ರಕಾರ ಮೋಸ ಅನ್ನೋದೇ ಇಲ್ವಾ? ನಂಬಿಕೆ ದ್ರೋಹ ಅನ್ನೋದು ಇದೆಯಲ್ವಾ. ಅದಕ್ಕೇನಂತೀರಿ?”

” ನಿಜವಾಗಿಯೂ ಹೇಳಬೇಕೆಂದರೆ ಈ ಜಗತ್ತಿನಲ್ಲಿ ಏನು ಅಂದರೆ ಏನು ಇಲ್ಲ. ಎಲ್ಲವೂ ಶೂನ್ಯವೇ. ಕೇವಲ ಮನುಷ್ಯನ ಮನಸ್ಸಿನಲ್ಲಿದೆ. ಸುಮ್ನೆ ಯೋಚನೆ ಮಾಡು, ಒಂದು ಪ್ರಾಣಿಯನ್ನು ಹೋಗಿ ಕೇಳು. ನಿನಗೆ ಯಾರಾದರೂ ಮೋಸ ಮಾಡಿದರೆ? ಎಂದು. ಅದಕ್ಕೇನು ತಿಳಿಯಬೇಕು ಪಾಪ ಹ್ಹ….ಹ್ಹ….”

” ಈ ಮಾತನ್ನ ನಾನು ಒಪ್ಪಲ್ಲ ಅಂಕಲ್….. ಮೂಕ ಪ್ರಾಣಿಗಳಿಗೂ ಮನಸ್ಸು ಅನ್ನೋದಿದೆ. ಅವುಗಳೂ ರೋಧಿಸುತ್ತವೆ. ತಮಗೆ ಪ್ರೀತಿಪಾತ್ರರಾದವರು ನಂಬಿಕೆ ದ್ರೋಹ ಮಾಡಿದರೆ, ಅಂದರೆ ಮನೆಯಲ್ಲಿ ಅದನ್ನು ಕೆಲದಿನಗಳ ಕಾಲ ಪ್ರೀತಿಯಿಂದ ನೋಡಿಕೊಂಡು, ನಂತರ ಹೊರ ದೂಡಿದರೆ, ಅದು ಕೂಡ ಖಿನ್ನನಾಗುತ್ತದೆ. ಇದಕ್ಕೇನಂತೀರಿ?”

” ಎಸ್…ಇಲ್ಲೇ ನೋಡು ಅತಿ ಸೂಕ್ಷ್ಮವಾದ ವಿಷಯವೂಂದು ಇರೋದು. ಇಲ್ಲಿ ಸೈಕಾಲಜಿ ಜೊತೆಜೊತೆಗೆ ಪ್ರಾಣಿಗಳ ವಿಕಾಸನದ ಹಾದಿಯನ್ನು ಕೂಡ ಪರಿಗಣಿಸಬೇಕು.” ಎನ್ನುವ ವಾಕ್ಯ ಮುಗಿಯುವಷ್ಟರಲ್ಲಿ ದೂರದಿಂದ ಅಪ್ಪ ಅಪ್ಪ ಎಂದು ಯಾರೋ ಕರೆದಂತಾಯಿತು. ಯಾರು ಎಂದು ಹಿಂತಿರುಗಿ ನೋಡಿದರೆ ವರ್ಮಾರವರ ಮಗ ಬಂದು ನಿಂತಿದ್ದ.

” ಅಪ್ಪ ಏನ್ ಮಾಡ್ತಿದ್ದೀಯಾ ಇಷ್ಟೊತ್ತಾದರೂ? ಈಗ ಟೈಮ್ ಎಷ್ಟು ಅಂತ ಗೊತ್ತಾ? ಒಂಭತ್ತಾಗಿದೆ. ಹೊಟ್ಟೆ ಗಿಟ್ಟೆ ಹಸಿತಾ ಇಲ್ವೇನು?” ಎಂದು ಅಪ್ಪನನ್ನು ಗದರಿಸಿದ.

” ಹುಂ ಕಣ್ಣಪ್ಪ ಬಂದೆ. ಕೂಲ್ ಕೂಲ್….” ” ಅಂದಹಾಗೆ ಹರಿ ನಿನಗೆ ಇವನನ್ನು ಪರಿಚಯ ಮಾಡಿ ಕೊಡಲೆ ಇಲ್ಲ ನೋಡು. ಮೊನ್ನೆ ಕಾರಿನಲ್ಲಿ ಮಲಗಿಬಿಟ್ಟಿದ್ದ. ಇವನು ನನ್ನ ಮಗ ರಾಹುಲ್, ಮೈಸೂರಲ್ಲಿ ಸೈಕಾಲಜಿ ಓದುತ್ತಿದ್ದಾನೆ.”

” ಓಹೋ ನಿಮ್ಮ ಹಾಗೆ ಅನ್ನಿ. ಅಪ್ಪನಂತೆ ಮಗ. ನೈಸ್ ಟು ಮೀಟ್ ಯು ರಾಹುಲ್”

” ನೈಸ್ ಟು ಮೀಟ್ ಯು ಬ್ರದರ್.” ಎಂಬ ರಾಹುಲ್ ನ ಪ್ರತ್ಯುತ್ತರದಿಂದ ಮೂವರು ರೂಮಿನೆಡೆಗೆ ಹೆಜ್ಜೆ ಹಾಕಿದರು.

” ಒಂಭತ್ತು ಗಂಟೆಯಾದದ್ದು  ಗೊತ್ತೇ ಆಗಲಿಲ್ಲ ಹರಿ. ಮಾತಿನಲ್ಲಿ ಮುಳುಗಿ ಬಿಟ್ಟಿದ್ವಿ ಅಲ್ವಾ”

” ಹಾ ಅಂಕಲ್. ಅದು ಬೇರೆ ಸಪ್ತಗಿರಿಯಲ್ಲಿ ಟೈಮ್ ಎಷ್ಟಾಗಿದೆ ಅಂತ ವಾಚ್ ನೋಡ್ಕೊಂಡೆ ಪಕ್ಕಾ ಮಾಡ್ಕೋಬೇಕು.”

” ಎಕ್ಸಾಕ್ಟ್ಲಿ.” ಎಂದರು ವರ್ಮಾ. ಇಬ್ಬನಿಯಿಂದ ಸಪ್ತಗಿರಿಯಲ್ಲಿ ಬೆಳಗಿನ ಸಮಯ ಸಂಪೂರ್ಣವಾಗಿ ಮಂಜು ಆವೃತವಾಗಿ ಬಿಡುತ್ತಿತ್ತು. ಮಧ್ಯಾಹ್ನದವರೆಗೆ ಪ್ರಖರವಾದ ಬಿಸಿಲು ನೋಡಲು ಅಪರೂಪವಾಗಿ ಸಿಗುತ್ತಿತ್ತು. ನೋಡಿದವರು ನಿಜವಾಗಿಯೂ ಅಚ್ಚರಿಗೊಳಗಾಗುತ್ತಿದ್ದರು.

” ಓಕೆ ಹರಿ, ಬಾಯ್. ಮತ್ತೆ ಕಂಟಿನ್ಯೂ ಮಾಡೋಣ. ನೀನು ಫ್ರೆಶ್ ಆಗಿ, ತಿಂಡಿಯಲ್ಲ ತಿನ್ನು. ಸಿಗೋಣ ಮತ್ತೆ.”

” ಓಕೆ ಅಂಕಲ್, ಬಾಯ್. ಸೀ ಯು.” ಎನ್ನುತ್ತಲೇ ರೂಮಿನೊಳಗೆ ಹೋದ. ಗೋಪಾಲ್ ವರ್ಮಾರಿಗೆ ದಿನೇದಿನೇ ಹತ್ತಿರವಾಗುತ್ತಿದ್ದ. ಅದೇನೊ ಅದಮ್ಯವಾದ ಶಕ್ತಿ ಅವರಲ್ಲಿದೆ ಎನ್ನಿಸತೊಡಗಿತ್ತು. ಅವನಲ್ಲಿದ್ದ ದುಃಖ ಕ್ರಮೇಣವಾಗಿ ಕಡಿಮೆಯಾಗತೊಡಗಿತ್ತು. ಏನನ್ನೊ ತಿಳಿಯುವ ಹಂಬಲ ಅವನಲ್ಲಿ ನೆಲೆಯೂರಿತ್ತು. ಪರಿ ಪಕ್ವವಾಗಲು ಜ್ಞಾನದ ಹಸಿವಿನಿಂದ ಒದ್ದಾಡಬೇಕು. ಜ್ಞಾನಕ್ಕಾಗಿ ಹಂಬಲಿಸಬೇಕು. ಒಂದು ಬಾರಿ ಜ್ಞಾನದ ಖನಿಜ ಸಿಕ್ಕಮೇಲೆ ಬಕಾಸುರನಂತೆ ಸೇವಿಸಬೇಕು. ಅಂದಾಗಲೇ ಪರಿಪೂರ್ಣತೆ ಪ್ರಾಪ್ತವಾಗುವುದು. ಈಗ ಹರಿಯೂ ಅದೇ ಹಂತದಲ್ಲಿದ್ದ. ಜ್ಞಾನದ ಹಸಿವು ಈಗಷ್ಟೇ ಏರತೊಡಗಿತ್ತು. ಹಂಬಲ ಪ್ರಾರಂಭವಾಗಿತ್ತು. ಜಗತ್ತಿನ ಅತಿ ಕಠಿಣಾತಿಕಠಿಣ ಕಷ್ಟಗಳು ಸಹ ನಿರ್ಣಾಣಮಗೊಳ್ಳುವುದು ಜ್ಞಾನವೆಂಬ ಜ್ಯೋತಿಯಿಂದಲೇ. ಈ ಜ್ಯೋತೆಯಡೆಗೆ ಹರಿ ಸಾಗುತ್ತಿದ್ದ. ಹೊರಟಿದ್ದು, ಅವನ ಅರಿವಿಗೆ ಕೂಡ ಬಂದಿರಲಿಲ್ಲ.

ಬೇಗಬೇಗನೇ ಗೋಪಾಲ ವರ್ಮಾರವರ ಹತ್ತಿರ ಹೋಗಬೇಕು, ಅವರ ಜೊತೆ ಮಾತನಾಡಬೇಕು ಎಂದು ಹರಿಯ ಮನ ಹಂಬಲಿಸುತ್ತಲೇ ಇತ್ತು. ಆದರೆ ಅವರು ತಮ್ಮ ಫ್ಯಾಮಿಲಿಯ ಜೊತೆ ಬಂದಿದ್ದಾರೆ ಎನ್ನುವ ಸಂಗತಿ ಮಾತ್ರ ಅವನನ್ನು ತಡೆಯುತ್ತಲೇ ಇತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಮೊಬೈಲ್ನಲ್ಲಿ ಕಾಲಕಳೆದ. ಸಂಜೆ ಸಪ್ತಗಿರಿ ಪೇಟೆಯನ್ನು ಸುತ್ತಿಕೊಂಡು ಬರಬೇಕೆಂದು ರೆಡಿಯಾಗುವಷ್ಟರಲ್ಲಿ ಗೋಪಾಲ್ ವರ್ಮಾರವರೇ ಹರಿಯ ರೂಮಿನ ಹತ್ತಿರ ಬಂದರು. ಅವರನ್ನು ಕಂಡು ಹರಿಗೆ ಸಂತೋಷ ಉಕ್ಕಿಬಂತು. ಅದೇನೋ ವಿವರಿಸಲಾಗದಂತಹ ಆನಂದ.

” ಬನ್ನಿ ಅಂಕಲ್. ಇದೇನು ಇಲ್ಲಿದೆ ಬಂದಿದ್ದೀರಾ?”

” ಸುಮ್ಮನೆ ಬಂದೆ ಹರಿ. ನಡಿ ಇಲ್ಲಿ ಹತ್ತಿರದಲ್ಲಿ ಒಂದು ಪುರಾತನ ಕಾಲದ ದೇವಸ್ಥಾನವಿದೆ ಅಂತೆ ನೋಡಿಕೊಂಡು ಬರೋಣ.” ಎಂದು ರೋಮಿನ ಆಚೆ ನಡೆದರು. ಹರಿಯು ಸಹ ರೆಡಿಯಾಗಿದ್ದರಿಂದ ತುಂಬಾ ಹೊತ್ತು ತಡವಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಬೆಟ್ಟದ ಹತ್ತಿರ ಬಂದರು. ಮುಂದೆ ಹತ್ತು ನಿಮಿಷ ನಡೆದ ನಂತರ ಒಂದು ದೊಡ್ಡ ದೇವಸ್ಥಾನ ಕಾಣಿಸಿತು. ಇದೆ ತಾವು ಹುಡುಕುತ್ತಿದ್ದ ದೇವಸ್ಥಾನವೆಂದು ಒಳಗೆ ಹೊರಟರು.

” ಬನ್ನಿ ಅಂಕಲ್, ಈ ಕಟ್ಟೆಯ ಮೇಲೆ ಕೂತ್ಕೊಳ್ಳೋಣ.” ಇಬ್ಬರು ಕುಳಿತು ಮುಳುಗುತ್ತಿದ್ದ ಸೂರ್ಯನನ್ನೇ ನೋಡುತ್ತಿದ್ದರು. ಸೂರ್ಯಾಸ್ತ ಹಾಗೂ ಸೂರ್ಯೋದಯ ಎರಡು ಅದ್ಭುತವಾದ ಗಳಿಗೆಗಳು ಎಂದು ಹೇಳಬಹುದು ಆ ಸಮಯದಲ್ಲಿನ ಪ್ರಶಾಂತತೆ ಎಂಥವರನ್ನು ಮಂತ್ರಮುಗ್ಧರನ್ನಾಗಿಸಿಬಿಡುತ್ತದೆ. ಮನಸ್ಸನ್ನು ಒಂದು ರೀತಿಯ ಪ್ರಶಾಂತತೆ ಆವರಿಸಿಬಿಡುತ್ತದೆ. ಅಂತೆಯೇ ಅವರಿಬ್ಬರ ಮನಸ್ಸನ್ನು ಪ್ರಶಾಂತತೆ ಆವರಿಸಿತ್ತು.

ಮೌನವನ್ನು ಸೀಳುವಂತೆ ಹರಿ ಮಾತನ್ನು ಆರಂಭಿಸಿದ ” ಅಂಕಲ್ ಬೆಳಗ್ಗೆ ಏನನ್ನೋ ಹೇಳ್ತಾ ಇದ್ರಿ, ಅಷ್ಟರಲ್ಲೇ ನಿಮ್ಮ ಮಗ ಬಂದುಬಿಟ್ಟ. ಕಂಟಿನ್ಯೂ ಮಾಡಿ ಪ್ಲೀಸ್.”

” ಏನ್ ಹೇಳ್ತಾಯಿದ್ನೊ ಏನೊ, ನನಗೆ ನೆನಪೇ ಆಗ್ತಿಲ್ಲವಲ್ಲ. ಸ್ವಲ್ಪ ಏನಾದ್ರು ಹೇಳು, ನೆನಪಾಗಬಹುದು.” ಎಂದು ಯೋಚಿಸತೊಡಗಿದರು. ಬೆಳಗ್ಗೆ ಏನಲ್ಲ ವಿವರಿಸಿದ್ದರು, ತಾನು ಏನು ಪ್ರಶ್ನೆ ಕೇಳಿದ್ದ ಎಲ್ಲವನ್ನೂ ವಿವರಿಸಿದ.

” ಹಾ…ಗಾಟ್ ಇಟ್. ಅದೇ ಪ್ರಾಣಿ ಬಗ್ಗೆ ಏನೋ ಕೇಳ್ತಿದ್ದೆ ಅಲ್ವಾ?”

” ಎಸ್ ಅಂಕಲ್”

” ಓಕೆ ಕೇಳು. ನಿನ್ನ ಪ್ರಶ್ನೆ ಕರೆಕ್ಟಾಗ್ ಇದೆ ಆದರೆ ಅಲ್ಲೊಂದು ಸೂಕ್ಷ್ಮ ಅಡಗಿದೆ. ಅದೇನು ಅಂತೀಯ.? ನೋಡು ಹರಿ ಸಾಕುಪ್ರಾಣಿಗಳೇನು ಮಾನವನಿಗಿಂತ ತುಂಬಾನೆ ವಿಭಿನ್ನವಾಗಿಲ್ಲ. ಅವು ಮನುಷ್ಯರಂತೆಯೆ. ಆದರೆ ಮನುಷ್ಯರ ಬುದ್ಧಿಮಟ್ಟವನ್ನು ವಿಕಸನದ ಹಂತದಲ್ಲಿ ಅವುಗಳಿಗೆ ತಲುಪಲಾಗಲಿಲ್ಲ. ನಾಯಿಯನ್ನು ಉದಾಹರಣೆಗೆ ಇಟ್ಕೋ. ಸಣ್ಣ ಮರಿ ಇರುವಾಗಲೇ ಅದನ್ನು ತರ್ತೀಯಾ ಅನ್ಕೋ. ಅದಕ್ಕೆ ಪ್ರೀತಿ ತೋರಿಸಿ, ಪ್ರತಿನಿತ್ಯ ಊಟ ಹಾಕಿ ಮಲಗಲು ಭದ್ರವಾದ ಜಾಗವನ್ನು ಕೊಡುತ್ತೀಯಾ. ಆಗ ಅದು ಬೆಳೆದಂತೆ ಅದರ ಮನಸ್ಸಿನಲ್ಲಿ ನಿನ್ನ ಬಗ್ಗೆ ಒಂದು ಬಗೆಯ ಗೌರವ ಬೆಳೆಯುತ್ತದೆ. ನಿನ್ನನ್ನು ಒಂದು ರೀತಿಯಾದ ಉತ್ತಮ ಸ್ಥಾನದಲ್ಲಿ ಕೂರಿಸುತ್ತದೆ. ಈ ಬಗೆಯ ಚಿಂತನೆಗಳು ಬೆಳೆದು ದೊಡ್ಡದಾದ ಹಂತದಲ್ಲಿ, ನೀನು ಅದಕ್ಕೆ ಹಾನಿ ಉಂಟುಮಾಡಿಬಿಟ್ಟರೆ ಅಥವಾ ಅನಿರೀಕ್ಷಿತವಾದದ್ದನ್ನು ಅದಕ್ಕುಂಟು ಮಾಡಿದರೆ ಅದು ಖಿನ್ನತೆಗೊಳಗಾಗುತ್ತದೆ. ಅಂದರೆ ನಿನ್ನ ಬಗ್ಗೆ ಎಷ್ಟು ದಿನಗಳಿಂದ ಉಳಿಸಿಕೊಂಡು ಬಂದಂತಹ ನಂಬಿಕೆ, ಗೌರವ ಇತ್ಯಾದಿ ಎಲ್ಲವೂ ಒಂದೇ ಕ್ಷಣದಲ್ಲಿ ಕುಸಿಯುತ್ತವೆ. ಮನಸ್ಸಿಗೆ ಶಾಕಾಗುತ್ತದೆ. ಅಷ್ಟೇ, ಮುಂದೆ ನಡೆಯುವುದನ್ನು ನಾನು ವಿವರಿಸಬೇಕೆಂದಿಲ್ಲ. ನಿನಗೆ ಅರ್ಥವಾಗಿರಬೇಕು.”

” ಅಂದರೆ ನಿವು, ನಾಯಿಯೂ ಮನುಷ್ಯನಂತೆ ಎನ್ನುತ್ತೀರಿ”

” ಹೌದು. ಪರಿಪೂರ್ಣವಾಗಿ ಅಲ್ಲದಿದ್ದರೂ ತೊಂಭತ್ತು ಪರ್ಸೆಂಟ್ ನಷ್ಟಾದರೂ ಅದು ಮನುಷ್ಯನ ಮನಸ್ಸನ್ನು ಹೋಲುತ್ತದೆ. ಈಗ ಇದೇ ಪ್ರಶ್ನೆಯ ಮುಂದುವರೆದ ಉತ್ತರ ಹೇಳ್ತೀನಿ ಕೇಳು. ನಾಯಿಯ ಜಾಗದಲ್ಲಿ ಒಂದು ಜಿರಲೆಯನ್ನ ಅಥವಾ ಯಾವುದೋ ಒಂದು ಹುಳವನ್ನು ಕಲ್ಪಿಸಿಕೋ. ಅದನ್ನ ಯಾರು ಸಾಕೋದಿಲ್ಲ, ಅದು ಬೇರೆಯ ಸಂಗತಿ. ಆದರೆ ಸಾಕುತ್ತಾರೆ ಅಂತ ಇಟ್ಕೊಳ್ಳೋಣ. ಅದನ್ನು ಮರಿ ಇದ್ದಾಗಲೇ ಸಾಕು, ಆಶ್ರಯ ನೀಡು, ಚೆನ್ನಾಗಿ ಊಟ ಕೊಡು. ನಂತರ ಅದನ್ನು ಹಿಂಸಿಸು. ಆಗ ಅದು  ಖಿನ್ನನಾಗುತ್ತದೆಯೇ? ಕೊರಗುತ್ತದೆಯೇ? ಸಾಧ್ಯವೇ ಇಲ್ಲ. ಹಿಂಸಿಸುವಾಗ ನಿನ್ನಿಂದ ಪಾರಾಗಿ ಹೊಸಜೀವನ ಕಟ್ಟಿಕೊಳ್ಳುತ್ತದೆಯೆ ವಿನಃ ಕೊರಗುತ್ತಾ ಕೂರುವುದಿಲ್ಲ. ಯಾಕೆ ಗೊತ್ತಾ? ಮೊದಲ ಹಂತದಲ್ಲಿ ಅದು ನಿನ್ನನ್ನ ಮನಸ್ಸಿನಾಳದಲ್ಲಿ ಕೂರಿಸಿಕೊಳ್ಳುವುದಿಲ್ಲ. ನಿನಗೆ ಅಂತಲೇ ಒಂದು ಸ್ಥಾನವನ್ನು ಕೊಡುವುದಿಲ್ಲ. ನಂತರ ನಿನ್ನ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಕೊನೆಗೆ ಕೊರಗುವುದೂ ಇಲ್ಲ.

The conclusion of my answer is that everything lies in your mind, but not in the reality. ಪ್ರತಿಕ್ಷಣವೂ ನೀನು ಅನುಭವಿಸುತ್ತಿರುವುದು, ಕೇವಲ ನಿನ್ನ ಮನಸ್ಸಿನಲ್ಲಿ ಇದೆಯೇ ಹೊರತು, ವಾಸ್ತವದಲ್ಲಿ ಇಲ್ಲ. reality is filled  with a big zero.”

” ಓಕೆ. ಹಾಗಿದ್ರೆ ನಿಮ್ಮ ಪ್ರಕಾರ ಎಲ್ಲವು ಅನುಭವಿಸುವವನ ಅಂತರಾಳದಲ್ಲಿ ಇರುತ್ತೆ. ಹೌದಾ ?”

” Exactly.”

” ಈಗ ಮೋಸ ಅನ್ನೋದರ ಹಿಂದೆ ದುಃಖ ಅಡಗಿದೆ. ಅದೇ ರೀತಿ ಬೇರೆ ಬೇರೆ ತರಹದ ದುಃಖಗಳು, ಫಾರ್ ಎಕ್ಸಾಂಪಲ್, ನಮಗೆ ಕ್ಲೋಸ್ ಇರುವವರನ್ನು ಕಳಕೊಳ್ಳುವುದು, ಇತ್ಯಾದಿ ಬಗೆಯ ದುಃಖಗಳು ಕೇವಲ ಎಕ್ಸ್ಪೆಕ್ಟೇಶನ್ಸ್ ಎಂಬ ಭೂತದಿಂದ ಹುಟ್ಟಿಕೊಳ್ಳುತ್ತವೆ ಅಂತಾಯ್ತು. ಅಲ್ವಾ ಇಂಕಲ್?”

” ಹೌದು ಎಕ್ಸ್ಪೆಕ್ಟೇಶನ್ಸ್ ಗಳು ನೇರವಾಗಿ ಇಲ್ಲದೆ ಇದ್ದರೂ ಮನಸ್ಸಿನಲ್ಲಿ ಇರುವಂತಹ ಎಕ್ಸ್ಪೆಕ್ಟೇಶನ್ಸ್ ಎಡೆಮಾಡಿಕೊಡುತ್ತವೆ.”

” ಅಂದ್ರೆ?”

” ಅಂದ್ರೆ ಯಾರ್ನಾದ್ರೂ ಕಳ್ಕೊಂಡ್ರೆ ದುಃಖ ಆಗುತ್ತೆ ಅಂತ ನೀನೇ ಹೇಳಿದೆ. ಕಳಕೊಳ್ಳೋಕು ಮುಂಚೆ ನೀನು ಅವರ ಜೊತೆ ಭಾವನಾತ್ಮಕವಾದ ಸಂಬಂಧವನ್ನು ಇಟ್ಟುಕೊಂಡಿರ್ತೀಯ. ಇಟ್ಕೊಂಡಿರ್ಲೇಬೇಕು. ಅಂದ್ರೆ ನಿನಗೆ ಗೊತ್ತಿಲ್ಲದೆ ಕೆಲವೊಂದಿಷ್ಟು ನಿರೀಕ್ಷೆಗಳು ನಿನ್ನ ಮನಸ್ಸಿನಲ್ಲಿ ಬೆಳ್ಕೊಂಡು ಬಿಟ್ಟಿರುತ್ತವೆ. ಫಾರ್ ಎಗ್ಜಾಂಪಲ್,  ಅವರಿದ್ರೆ ನಿನಗೆ ಒಂದು ತರಹದ ಧೈರ್ಯ. ಅವರಿದ್ದರೆ ನಿನ್ನ ಸಂಗಡ ಯಾರೋ ಒಬ್ಬರು ಇದ್ದಾರೆ ಅನ್ನೋ ಸಮಾಧಾನ. ಹೀಗಾಗಿ ಅವರನ್ನು ಕಳೆದುಕೊಂಡಾಗ ದುಃಖ ಆಗುತ್ತೆ. ಇಂಡೈರೆಕ್ಟ್ ಆಗಿ ಎಕ್ಸ್ಪೆಕ್ಟೇಶನ್ಸ್ ಗಳೆ ಕಾರಣ.”

” ಹಾಗಿದ್ರೆ ಎಕ್ಸ್ಪೆಕ್ಟೇಶನ್ಸ್ ಗಳನ್ನೇ ಇಟ್ಕೊಳ್ಳೋದು ಬಿಟ್ರೆ, ಎಲ್ಲರೂ ಹ್ಯಾಪಿಯಾಗಿ ಇರಬಹುದಲ್ಲವೇ? ಯಾಕೆ ಇದು ಸಾಧ್ಯ ಆಗ್ತಿಲ್ಲ ? ಯಾಕೆ ತನ್ನಲ್ಲಿ ಅಡಗಿರುವ ಆಶಯಗಳು ಅವನಿಗೆ ಗೊತ್ತಾಗುವುದಿಲ್ಲ? ಅದು ಗೊತ್ತಾಗಿಬಿಟ್ಟರೆ ಅದನ್ನು ಅಳಿಸಿಹಾಕಿ ಆರಾಮಾಗಿ ಇರಬಹುದಲ್ಲ?”

” ಎಕ್ಸ್ಪೆಕ್ಟೇಷನ್ಸ್ ಗಲೆ ಇಲ್ಲದೆ ಬದುಕೋದು ತುಂಬಾನೇ ಕಷ್ಟ ಹರಿ. ನೀನೇ ಹೇಳಿದಂಗೆ ಅವುಗಳನ್ನು ಪ್ರಾರ್ಥಮಿಕ ಹಂತದಲ್ಲೆ ಅಳಿಸಿ ಹಾಕಿಬಿಟ್ಟರೆ ನಾವು ಆರಾಮಾಗಿ ಇರಬಹುದು. ಬಟ್ ಅದನ್ನ ಮಾಡುವುದು ಒಂದು ತಪಸ್ಸು ಇದ್ದಹಾಗೆ. ಅಷ್ಟು ಸುಲಭವಾಗಿ ಅವುಗಳನ್ನೆಲ್ಲ ಬಿಟ್ಟು ಬದುಕುವುದು ಸಾಧ್ಯವಿಲ್ಲ.

ನಿನ್ನನ್ನೇ ಉದಾಹರಣೆಗೆ ತಗೊಳ್ಳೋಣ. ನಿನಗೆ ಬೆಂಗಳೂರಲ್ಲಿ ಸುಮಾರು ಜನ ಸ್ನೇಹಿತರಿರಬಹುದು. ಅವರನ್ನೆಲ್ಲ ಯಾಕೆ ಪರಿಚಯ ಮಾಡಿಕೊಂಡೆ? ಅವರು ಕೂಡ ನಿನ್ನನ್ನು ಯಾಕೆ ಪರಿಚಯ ಮಾಡಿಕೊಂಡರು? ಸುಮ್ಮನೆ ಯೋಚಿಸಿ ನೋಡು, ಮನುಷ್ಯ ಸಾಮಾಜಿಕ ಜೀವನ ಪದ್ಧತಿಯನ್ನು ರೂಢಿಸಿಕೊಂಡವ. ಅವನು ಹುಟ್ಟುತ್ತಾ ಏಕಾಂಗಿಯಾಗಿದ್ದವ. ನಿಸರ್ಗದಲ್ಲಿನ ವಿಕೋಪಗಳು ಅಥವಾ ಬೇರೆ ಪ್ರಾಣಿಯಿಂದ ಆಗುವ ಹಾನಿಯನ್ನು ತಡೆಗಟ್ಟಲು ರೂಢಿಸಿಕೊಂಡು ಬಂದಿರುವ ಪದ್ಧತಿ ಇದು. ವಿಕಸನದ ಹಂತದಲ್ಲಿಯೇ ಪ್ರಾಣಿಗಳಲ್ಲಿ ನೆಲೆಯೂರಿದೆ. ಕೇವಲ ಮನುಷ್ಯ ಅಷ್ಟೇ ಅಲ್ಲ, ಅನೇಕ ಪ್ರಾಣಿಗಳು ಸಹ ಈ ಬಗೆಯ ಜೀವನ ಪದ್ಧತಿಯನ್ನು ರೂಢಿಸಿಕೊಂಡಿವೆ. ಅದನ್ನು ಗಮನಿಸಬಹುದು ಕೂಡ. ಈ ರೀತಿ ಇದ್ದಾಗ ನಿಸರ್ಗದತ್ತವಾಗಿ ಬಂದ ಈ ಗುಣವು ಎಲ್ಲರಿಗೂ ಸಹಜವೆನಿಸಿಬಿಡುತ್ತದೆ. ಅದರಲ್ಲೇನೊ ವಿಶೇಷವಾದ ಸಂಗತಿಯೊಂದು ಅಡಗಿದೆ ಎಂದು ಸಾಮಾನ್ಯ ಜನರಿಗೆ ಅನ್ನಿಸುವುದೇ ಇಲ್ಲ. ಹೀಗಾಗಿ ತನ್ನಲ್ಲಿ ಬೆಳೆಯುವಂತಹ ಈ ರೀತಿಯ ಆಶಶಯಗಳು ಗುರುತು ಹಿಡಿಯಲಾಗದಂತೆ ಉಳಿದುಬಿಡುತ್ತವೆ.

” ಸಾಮಾಜಿಕ ಜೀವನ ಪದ್ಧತಿಯನ್ನು ಅಳವಡಿಸಿಕೊಂಡರೆ ಏನಾಯ್ತು? ಅಲ್ಲಿ ಆಶಯಗಳು ಹೇಗೆ ಬೆಳೆಯುತ್ತವೆ ಅಂಕಲ್ ?”

” ಇಲ್ಲಿ ಕೇಳು. ಅವಾಗ್ಲೇ ಹೇಳಿದಂತೆ ಮನುಷ್ಯ ತನ್ನ ಅಂತರಾಳದಲ್ಲಿ ಏಕಾಂಗಿಯಾಗಿ ಉಳಿದಿರುತ್ತಾನೆ. ಏಕಾಂಗಿತನವನ್ನು ಹೊಡೆದೋಡಿಸಲು ಮತ್ತು ತನ್ನಲ್ಲಿ ಅಡಗಿರುವಂತಹ ಭಯದಿಂದ ದೂರ ಉಳಿಯಲು ಅಥವಾ ಅವುಗಳಿಂದ ಸರಿಯಾದ ಪರಿಹಾರ ಹುಡುಕಿಕೊಳ್ಳುವ ಹಾದಿಯಲ್ಲಿ, ಈ ರೀತಿ ಗುಂಪಾಗಿ ಅಥವಾ ಸಾಮಾಜಿಕ ಜೀವನ ಪದ್ಧತಿ ಎಂದೇನು ಕರೆಯುತ್ತೇವೆಯೋ, ಅದನ್ನು ರೂಢಿಸಿಕೊಂಡ. ಪ್ರತಿಯೊಬ್ಬ ಮನುಷ್ಯನು ತನ್ನ ಹಿತಕ್ಕಾಗಿ ಈ ರೀತಿ ಮಾಡಲು ಮುಂದಾದನೆ ಹೊರತು ಬೇರೆ ಇನ್ಯಾವ ಕಾರಣಕ್ಕೂ ಅಲ್ಲ. ಹೀಗಾಗಿ ಸಹಜವಾಗಿಯೇ ಅವನಲ್ಲಿ ಆಶಯಗಳು ಹುಟ್ಟುತ್ತವೆ. ನಿರೀಕ್ಷೆಗಳು ಬೆಳೆಯುತ್ತವೆ. ಇವನು ನನ್ನ ಜೊತೆಗಿದ್ದರೆ ನನಗೆ ಸುರಕ್ಷತೆ ಇರುತ್ತದೆ, ಕೆಲಸವನ್ನು ಇಬ್ಬರು ಸೇರಿ ಮಾಡಬಹುದು, ಇತ್ಯಾದಿ. ಇಂತಹುದೇ ಅಂತ ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಹೀಗಾಗಿ ಸಂಗಡಿಗನನ್ನು ಕಳೆದುಕೊಂಡಾಗ ದುಃಖವಾಗುತ್ತದೆ. ಅಂದರೆ ಪರೋಕ್ಷವಾಗಿ ನಿರೀಕ್ಷೆಗಳು ಅಥವಾ ಎಕ್ಸ್ಪೆಕ್ಟೇಶನ್ ಗಳೆ ಕಾರಣ ಎಂದಾಯಿತಲ್ಲ.

ವಿಕಸನದ ಹಾದಿಯಲ್ಲಿ ಇದು ಬದಲಾವಣೆಗೊಂಡಿದೆಯೆ ಹೊರತು ಸಂಪೂರ್ಣವಾಗಿ ನಾಶವಾಗಿಲ್ಲ. ಈಗಿನವರು ತಮಗೆ ಇಚ್ಚೆ ಇದ್ದವರ ಜೊತೆ, ತಮ್ಮ ಮನಸ್ಸಿಗೆ ಹೊಂದಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಬರಬರುತ್ತಾ ಹೇಗಾಗಿದೆ ಎಂದರೆ, ವಿಜ್ಞಾನದ ಆವಿಷ್ಕಾರದಿಂದ ಇನ್ನೊಬ್ಬ ಸಂಗಡಿಗನ ಅವಶ್ಯಕತೆಯೇ ಇಲ್ಲದಂತಾಗಿದೆ. ಆದರೆ ಸಂಪೂರ್ಣವಾಗಿ ಒಬ್ಬ ಇನ್ನೊಬ್ಬನನ್ನು ಬಿಟ್ಟಿರಲು ಸಾಧ್ಯವಿಲ್ಲ.”

” ಓಕೆ…. ಹಾಗಿದ್ದರೆ ಈ ನಿರೀಕ್ಷೆಗಳು ಅಥವಾ ಎಕ್ಸ್ಪೆಕ್ಟೇಶನ್ ಗಳ, ಮೂಲ ಯಾವುದು ಅಂಕಲ್? ಅವು ಹೇಗೆ ಹುಟ್ಟಿಕೊಳ್ಳುತ್ತವೆ?”

” ಆಸೆಗಳು…! Desires are the main cause for everything. ಹೌದು ಆಸೆಗಳೇ ಎಲ್ಲದಕ್ಕೂ ಮೂಲ. ಅವುಗಳು ನಿರೀಕ್ಷೆಗಳನ್ನು ಹುಟ್ಟುಹಾಕುತ್ತವೆ. ಈ ನಿರೀಕ್ಷೆಗಳು ದುಃಖವನ್ನು ತಂದೊಡ್ಡುತ್ತವೆ. ಬದುಕಬೇಕೆಂಬ ಆಸೆ ಹಾಗೂ ಎಲ್ಲರಿಗಿಂತ ಚೆನ್ನಾಗಿ ಬದುಕಬೇಕೆಂಬ ದುರಾಸೆ, ಜೀವನದಲ್ಲಿ ಅನೇಕ ನಿರೀಕ್ಷೆಗಳನ್ನು ಹುಟ್ಟುಹಾಕುತ್ತವೆ. ಈ ನಿರೀಕ್ಷೆಗಳು ಹುಸಿಗೊಂಡಾಗ ದುಃಖಕ್ಕೆ  ದಾರಿಮಾಡಿಕೊಡುತ್ತವೆ. ನಿರೀಕ್ಷೆಗಳು ಒಂದಲ್ಲ ಒಂದು ಹುಸಿಗೊಳ್ಳಲೇಬೇಕು. ಅದು ಪ್ರಕೃತಿಯ ನಿಯಮ. ಕೆಲವೊಬ್ಬರು ಅದರಿಂದ ಬೇಗ ಹೊರಬರುತ್ತಾರೆ. ಇನ್ನು ಕೆಲವರು ಅದರಲ್ಲಿ ಬಿದ್ದು ನರಳಾಡುತ್ತಾರೆ. ಒಟ್ಟಿನಲ್ಲಿ ಕೊರಗುವುದಂತು ನಿಜ.”

” ಅಂದ್ರೆ ಆಸೆಗಳೆ ದುಃಖಕ್ಕೆ ಮೂಲ ಎಂದು ಪ್ರೊವ್ ಮಾಡಿದಿರಿ. ಆದರೆ ಆಸೆಗಳು ಯಾಕೆ ಹುಟ್ಟಿಕೊಳ್ಳುತ್ತವೆ ಅಂಕಲ್? . Bloody desires…!”

” ಗುಡ್ ಕ್ವೆಶ್ಚನ್……ಆಸೆಗಳು ಅಂದರೆ ಯಾವ ಚಿಂತನೆಗಳು ನಿರೀಕ್ಷೆಗಳನ್ನು ಹುಟ್ಟುಹಾಕುತ್ತವೆಯೇ, ಆ ನಿರೀಕ್ಷೆಗಳು ‘ನಾನು’ ಎಂಬುವುದನ್ನು ಉದ್ದಾರ ಮಾಡುತ್ತವೆಯೊ ಹಾಗು ಅದಕ್ಕೆ  ಪುಷ್ಟಿಯನ್ನು ನೀಡುವಂತಿರುತ್ತವೊ, ಆ ಭಾವನೆಗಳು ಅಥವಾ ಚಿಂತನೆಗಳೆ ಆಸೆಗಳು.”

” ಇನ್ನೊಂದು ಸ್ವಲ್ಪ ಕ್ಲಿಯರ್ ಆಗಿ ಎಕ್ಸ್ಪ್ಲೈನ್ ಮಾಡಿ ಅಂಕಲ್. ”

” ಓಕೆ ಕೇಳು. ಈಗ ನೀನು ಹುಟ್ಟಿ ದೊಡ್ಡವನಾಗುತ್ತಿದ್ದಂತೆ ನಿನ್ನಲ್ಲಿ ‘ನಾನು’ ಎಂಬುವವನು ಜಾಗೃತನಾಗುತ್ತಾ ಹೋಗುತ್ತಾನೆ. ಅವನ ಅಸ್ತಿತ್ವವನ್ನು ಪ್ರಕಟಿಸಲು ಪ್ರಾರಂಭಿಸುತ್ತಾನೆ. ಆಗ ನಿನ್ನಲ್ಲಿರುವ ‘ನಾನು’  ಎಂಬುವವನ ಪರಮೋದ್ದೇಶ, ತಾನು ಸದಾ ಬೆಳಗುತ್ತಿರಬೇಕು. ಎಲ್ಲರಿಗಿಂತಲೂ ಮೇಲಿರಬೇಕು, ತಾನೇ ಸರ್ವಾಧಿಕಾರಿಯಾಗಬೇಕು  ಎಂದು. ಹೀಗಾಗಿ ಅದರ ಉದ್ದಾರಕ್ಕಾಗಿ ನಿನ್ನ ಅಂಗಾಂಗಗಳು ದುಡಿಯಲು ಪ್ರಾರಂಭಿಸುತ್ತವೆ. ‘ನಾನು’ ವಿನ ಅಗ್ನೆಯಂತೆ, ಅದಕ್ಕನುಗುಣವಾಗುವಂತೆ ಎಲ್ಲ ಕಾರ್ಯಗಳು ನಡೆಯುತ್ತವೆ. ಬೇರೆಯವರೊಂದಿಗೆ ಸ್ನೇಹ ಬೆಳೆಸುವುದು, ದಿನನಿತ್ಯದ ಕೆಲಸಗಳು, ಇತ್ಯಾದಿ ಯಾವುದಾದರೂ ಒಂದು ಅಂಶ ‘ನಾನು’ ವಿಗೆ ಧಕ್ಕೆಯುಂಟು ಮಾಡಿದರೆ ಅದು ದುಃಖಕ್ಕೆ ದಾರಿಮಾಡಿಕೊಡುತ್ತದೆ. ಇಲ್ಲಿ ‘ನಾನು’ ವಿನ ಉದ್ಧಾರವಾಗುವ ಸಂದರ್ಭದಲ್ಲಿ, ಅನುವಾಗುವಂತಹ ಹಾಗೂ ಅದಕ್ಕೆ ಸಹಾಯವಾಗುವಂತಹ ಚಿಂತನೆಗಳು ಜನ್ಮವನ್ನು ತಾಳುತ್ತವೆ. ಈ ಪ್ರಕಾರದಲ್ಲಿ ಉದಯಿಸಿದ ಭಾವನೆಗಳೇ, ಆಸೆಗಳು.”

” ಹಾಗಿದ್ರೆ ಈ ಥಾಟ್ಸ್ ಗಳು ಹೇಗೆ ಹುಟ್ಕೊಳ್ಳೋದು? ಅವುಗಳಿಂದ  ಹೇಗೆ ಈ ಆಸೆಗಳು ಹುಟ್ಕೊಳ್ಳೋದು?”

” ನೀನು ಚಿಕ್ಕವನಾಗಿದ್ದಾಗ ಏನೇನೋ ಯೋಚನೆ ಮಾಡುತ್ತಿದ್ದೆ ಅಂತ ನೆನಪು ಮಾಡಿಕೊಂಡು ಹೇಳಬಲ್ಲೆಯಾ?”

” ಚಿಕ್ಕವನು ಎಂದ್ರೆ?. ಸ್ವಲ್ಪ ಸ್ಪೆಸಿಫಿಕ್ ಆಗಿ ಹೇಳಿ ಅಂಕಲ್”

” ಓಕೆ. ಒಂದು ನಾಲ್ಕೈದು ವರ್ಷದ ಮಗುವಾಗಿದ್ದಾಗ ಏನೆಲ್ಲ ಯೋಚನೆ ಮಾಡುತ್ತಿದ್ದೆ?”

” ಇಷ್ಟು ಚಿಕ್ಕವನಾಗಿದ್ದಾಗ ಏನು ಯೋಚನೆ ಮಾಡುತ್ತಿದ್ದೇನೆ ನೆನಪಿಲ್ಲ ಅಂಕಲ್, ಆದ್ರೆ ಚಾಕಲೇಟ್ ತಗೋಬೇಕು ತಿನ್ನಬೇಕು ಅಂತ ಆಸೆ ಇರುತ್ತಿತ್ತು. ಅದನ್ನೇ ಯೋಚನೆ ಮಾಡುತ್ತಿದ್ದೆ ಅನ್ಸುತ್ತೆ”

” ಅದನ್ನು ಬಿಟ್ಟರೆ ಬೇರೆ ಏನು ಇಲ್ವಾ? ನೆನಪು ಮಾಡ್ಕೋ, ನಿನ್ನ ಗೆಳೆಯರಿಗಿಂತ ಒಳ್ಳೆಯ ಪೆನ್ಸಿಲ್, ರಬ್ಬರ್ ತಗೋಬೇಕು ಅಂತ ಅನಿಸ್ತಾ ಇರಲ್ವ?”

” ಎಸ್ ಅಂಕಲ್ ಅದೇನೊ ಅನ್ಸೋದು.”

” ವೆಲ್. ಅದಕ್ಕೂ ಮುಂಚೆ ಏನು ಬೇಕು ಅನ್ನಿಸ್ತಾ ಇತ್ತು ನೆನಪಿದೆನಾ?”

” ಇಲ್ಲ ಅಂಕಲ್, ನೆನಪಿಲ್ಲ. ಯಾವುದಾದರೂ ಸಣ್ಣಪುಟ್ಟ ಆಸೆಗಳು ಇರುತ್ತಿದ್ದವೊ ಏನೊ.”

” ಎಸ್. ನೀನೆ ಉತ್ತರವನ್ನು ಹೇಳಿಬಿಟ್ಟೆ ನೋಡು. ನೀನೆ ಹೇಳಿದಂತೆ, ದೊಡ್ಡವನಾದಂತೆ ನಿನ್ನ ಆಸೆಗಳು ಬೆಳೆಯುತ್ತಾ ಹೋದವು ಅಥವಾ ಬೇಕು ಎನ್ನುವ ಭಾವನೆಗಳು ಹುಟ್ಟಿಕೊಳ್ಳುತ್ತಾ ಹೋದವು. ಇದರ ಅರ್ಥ ಏನು ಗೊತ್ತಾ? ಆಸೆಗಳು ಅಥವಾ ಬೇಕು ಎಂಬ ಭಾವನೆಗಳು ಹುಟ್ಟಿಕೊಳ್ಳುವುದು ನಿನ್ನ ಅನುಭವಗಳಿಂದ. ನೀನು ಪ್ರತಿನಿತ್ಯ ಏನು ನೋಡುತ್ತೀಯೊ, ಅನುಭವಿಸುತ್ತಿಯೊ, ಕೇಳುತ್ತೀಯೊ ಎಲ್ಲವೂ ನಿನ್ನ ಸೃತಿಪಟಲದಲ್ಲಿ ಉಳಿದುಬಿಡುತ್ತದೆ. ಈ ಎಲ್ಲ ಅನುಭವಗಳಲ್ಲಿ ಯಾವುದು ಉತ್ತಮವಾಗಿದೆಯೊ ಹಾಗೂ ಆನಂದವನ್ನು ನೀಡುತ್ತದೆಯೋ ಅದನ್ನು ಪಡೆಯಬೇಕೆಂಬ ಹಂಬಲ ಮೂಡುತ್ತದೆ. ಅಂದರೆ ಆಸೆಗಳು ಉಗಮಗೊಳ್ಳುತ್ತವೆ ಎಂದರ್ಥ. ನಿನ್ನ ಬಾಲ್ಯವನ್ನು ಉದಾಹರಣೆಗೆ ತೆಗೆದುಕೋ ಮೊದಮೊದಲು ಅದು ಬೇಕು, ಇದು ಬೇಕು ಎಂಬ ಹುಚ್ಚು ಆಸೆಗಳು ತುಂಬಾ ವಿರಳವಾಗಿ ಕಂಡುಬರುತ್ತಿದ್ದವು. ಅದೇ ನೀನು ಬೆಳೆಯುತ್ತ ಹೋದಂತೆ ಎಲ್ಲವನ್ನೂ ಗಮನಿಸುತ್ತಿದ್ದೆ ಹಾಗು ಅನುಭವಿಸುತ್ತಿದ್ದೆ. ಅಲ್ಲಿಂದ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಸ್ನೇಹಿತರದೊ ಅಥವಾ ಇನ್ಯಾರದೋ ನೋಡಿ ಬೇಕು ಎಂಬ ಹಂಬಲ ಮೂಡುತ್ತದೆ. ಈ ಅನುಭವಗಳೆ ಆಸೆಗಳನ್ನು ಹುಟ್ಟಿಸೋದು. ನಂತರ ನೀನು ಬೆಳೆದಂತೆ ಅವುಗಳು ಬೆಳೆಯುತ್ತಾ ಹೋಗುತ್ತವೆ. ದೊಡ್ಡ ದೊಡ್ಡ ಆಸೆಗಳ ಸಾಲೆ ನಿನ್ನ ಮನದಲ್ಲಿ ನೆಲೆಯೂರುತ್ತವೆ. ಇಷ್ಟೇ ಜೀವನ. ಎಲ್ಲಾ ಆಸೆಗಳು ಕೇವಲ ಅನುಭವಗಳಿಂದ ಹುಟ್ಟಿಕೊಳ್ಳುವುದಿಲ್ಲ. ಕೆಲವೊಂದಿಷ್ಟು ವಿಕಾಸದ ಹಾದಿಯಲ್ಲಿ ನಾವು ಅವುಗಳನ್ನು ಪಡೆದುಕೊಂಡಿರುತ್ತೇವೆ. ಬೆಸ್ಟ ಎಕ್ಸಾಂಪಲ್ ಎಂದರೆ ನಾನು ಮೇಲುಗೈ ಸಾಧಿಸಬೇಕು, ಎಲ್ಲರಿಗಿಂತ ಪ್ರಬಲವಾಗಿ ಬೆಳೆಯಬೇಕೆಂಬ ಕೆಲವು ಆಸೆಗಳು ಹುಟ್ಟಿನಿಂದಲೇ ಜನ್ಮಕ್ಕೆ ಅಂಟಿಕೊಂಡಿರುತ್ತವೆ. ಅವುಗಳ ಮೇಲೆ ಮುಂಬರುವ ಆಸೆಗಳು ಹುಟ್ಟಿಕೊಳ್ಳುವುದು.”

” ನಮ್ಮ ಮನಸ್ಸುನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದರೆ ನಾನಾತರಹದ ಅನುಭವಗಳನ್ನು ಹೊಂದಬಾರದು. ಅಲ್ಲವಾ ಅಂಕಲ್ ?”

” ಉಹುಂ…ಹಾಗಲ್ಲ. ಅನುಭವಗಳನ್ನು ಹೊಂದದೇ ಇರಲು ಸಾಧ್ಯವಿಲ್ಲ. ಏಕೆಂದರೆ ಜೀವನವೇ ಒಂದು ಅನುಭವ. ಆದರೆ ಇವು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಪಾಠವನ್ನು ಮನಸ್ಸಿಗೆ ಹೇಳಿಕೊಡಬೇಕು. ‘ನಾನು’ ಎಂಬ ಅಹಂ ಅನ್ನು ಜ್ಞಾನದಿಂದ ಹಾಗೂ ಅರಿವಿನಿಂದ ಶಮನಗೊಳಿಸಬೇಕು. ಅಂದಾಗ ದುಃಖದಿಂದ ಪಾರಾಗಲು ಸಾಧ್ಯವಾಗುವುದು. ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ದುಃಖದಿಂದ ಬಹುಬೇಗನೆ ಹೊರಬರಬಹುದು. ಹಾಗೂ ಅದರಿಂದ ಪಾಠವನ್ನು ಕಲಿಯಬಹುದು.”

” ಹೂ.” ಎಂಬ ಮಾತಿನ ನಂತರ ದೀರ್ಘವಾದ ಮೌನ ಅವರಿಬ್ಬರ ನಡುವೆ ಅವರಿಸಿತು. ಕತ್ತಲಾಗಿ ತುಂಬಾ ಹೊತ್ತಾದದ್ದು ಅವರಿಬ್ಬರ ಅರಿವಿಗೆ ಬರಲಿಲ್ಲ. ಕೊರೆಯುವ ಚಳಿ ಇನ್ನು ಹೆಚ್ಚು ಹೊತ್ತು ಕೂರಲು ಬಿಡುವುದಿಲ್ಲ ಎಂಬುದನ್ನು ಅರಿತ ಇಬ್ಬರು ರೂಮಿನ ಕಡೆಗೆ ಹೊರಟರು.

” ಥ್ಯಾಂಕ್ಸ್ ಅಂಕಲ್….! ಅಂಧಕಾರದಲ್ಲಿದ್ದ ನನ್ನನ್ನು ಬೆಳಕಿಗೆ ಕರೆದುಕೊಂಡು ಹೊರಟಿದ್ದೀರಿ. ಎಷ್ಟು ಥ್ಯಾಂಕ್ಸ್ ಹೇಳಿದರು ಸಾಕಾಗಲ್ಲ.”

” ಕಮಾನ್ ಹರಿ…..ನನಗೆ ಗೊತ್ತಿರುವುದನ್ನು ನಿನಗೆ ಹೇಳ್ತಿದಿನಿ ಅಷ್ಟೇ. ಯಾರು ಎಷ್ಟೇ ಹೇಳಿದರೂ, ಅದನ್ನು ಕೇಳುವ ಮನಸ್ಸು ಹಾಗು ಅದನ್ನು ಒಪ್ಪಿಕೊಳ್ಳುವ ಗುಣ ಕೇಳುಗನಲ್ಲಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ, ಗೊತ್ತಾ…. You are willing to come out of your misery. ಈ ಪ್ರಯತ್ನಾನೇ ಬೇಕಾಗಿರೋದು ಮತ್ತೇನೂ ಅಲ್ಲ.”

” ನಂಗಂತೂ ಏನು ಗೊತ್ತಿಲ್ಲ ಅಂಕಲ್. ನಿಮ್ಮಲ್ಲಿ ಅದೇನೊ ಒಂದು ಶಕ್ತಿ ಇದೆ. ಎಲ್ಲರನ್ನು ಸೆಳ್ಕೊಂಡು ಬಿಡ್ತೀರಿ. ಅದ್ಹೇಗೆ ನಿಮಗೆ ಕ್ಲೋಸ್ ಆದೆನೊ, ನನಗೆ ಗೊತ್ತಿಲ್ಲ. ಕೆಲ ಕ್ಷಣದ ಮೌನದ ನಂತರ ಮತ್ತೆ ನುಡಿದ ಹರಿ, ” ಹಾ…ಇನ್ನೊಂದು ವಿಷಯವನ್ನ ಹೇಳೋದು ಮರೆತುಬಿಟ್ಟಿದ್ದೆ ಅಂಕಲ್. ನಿಮ್ಮ ಜೊತೆ ಸೇರಿದಾಗಿನಿಂದ ನನ್ನ ಕನ್ನಡ ಎಷ್ಟು ಇಂಪ್ರೂವ್ ಆಗಿದೆ ಎಂದರೆ, ನನಗೇ ಆಶ್ಚರ್ಯ ಆಗುತ್ತೆ.”

” ಓಹೋ….ಒಳ್ಳೆದು. ಕನ್ನಡನಾ ಹೆಚ್ಚು ಹೆಚ್ಚು ಬಳಸಬೇಕು. ನಾವು ಕನ್ನಡಿಗರೆ ಕನ್ನಡವನ್ನು ಮರೆತು ಕುಳಿತರೆ ಹೆಂಗಪ್ಪ. ನಮ್ಮ  ಮಾತೃಭಾಷೆಯನ್ನು ಉಳಿಸುವುದು ನಾವಲ್ಲದೆ ಮತ್ಯಾರು?”

” ಕರೆಕ್ಟ್ ಹೇಳಿದ್ರಿ ಅಂಕಲ್. ಸರಿ ರೂಮಿಗೆ ಹೋಗೋಣ ನಡೆಯಿರಿ. ಚಳಿ ತುಂಬಾನೇ ಹೆಚ್ಚಾಯ್ತು, ನಾಳೆ ಬೆಳಗ್ಗೆ ಸಿಗೋಣ. ಮತ್ತಷ್ಟು ಜ್ಞಾನದ ಸುರಿಮಳೆಯಾಗಬೇಕು ನಿಮ್ಮಿಂದ…..ಹ್ಹ….ಹ್ಹ…”  ಎನ್ನುತ್ತಾ ನಕ್ಕು ಬಾಯ್ ಹೇಳಿ, ರೂಮಿಗೆ ಹೊರಟ.

” ಸರಿ ಬಾಯ್ ಹರಿ. ಸೀ ಯು.”

” ಗುಡ್ ನೈಟ್ ಅಂಕಲ್”

” ಗುಡ್ ನೈಟ್”

-ಕಿರಣ್. ವ್ಹಿ


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x