ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ..

ಒಂದು ವಾರದಿಂದ ಅನೂಷಾ ಸರಿಯಾಗಿ ಮಾತನಾಡುತ್ತಿರಲಿಲ್ಲ. ಏನಾಯಿತು ಎಂದು ಕೇಳಿದರೆ ಬಾಯಿ ಸಹ ಬಿಡಲಿಲ್ಲ. ಇಗ್ನೋರ್ ಮಾಡುತ್ತಿದ್ದಾಳೆ ಎಂಬ ಭಾವನೆ ಹರಿಯಲ್ಲಿ ಮೂಡಲಾರಂಭಿಸಿತು. ಮುಂದಿನವಾರ ಊರಿಗೆ ಹೋಗುವ ಯೋಚನೆಯಲ್ಲಿದ್ದ ಹರಿ, ಅದೇ ಶುಕ್ರವಾರದ ರಾತ್ರಿ ಬಸ್ ಹತ್ತಿದ. ಏನಾಗಿದೆಯೋ ಎಂಬ ಚಿಂತೆ ಅವನನ್ನು ಬಹಳವೇ ಕಾಡುತ್ತಿತ್ತು. ರಾತ್ರಿಯಿಡಿ ನಿದ್ರೆ ಮಾಡಲಿಲ್ಲ ಹರಿ. ಏನೇನೋ ಯೋಚನೆಗಳು ಬೆಳಗು ಯಾವಾಗ ಆದೀತು, ಯಾವಾಗ ತಲುಪುತ್ತೇನೊ, ಎನ್ನುವ ಅವಸರ. ಬೆಳಗ್ಗೆ ಏಳರ ಸುಮಾರು ಬೆಂಗಳೂರು ತಲುಪಿದ. ಮನೆಗೆ ಹೋದವನೇ ಫ್ರೆಶ್ ಆಗಿ, ತಿಂಡಿಯೂ ಕೂಡ ತಿನ್ನದೆ ಬೈಕ್ ಹತ್ತಿ ಅನೂಷಾಳ ಆಫೀಸ್ ಹತ್ತಿರ ಬಂದ. ನಾಲ್ಕನೆಯ ಬಾರಿ ಕಾಲ್ ಮಾಡಿದಾಗ ರಿಸೀವ್ ಮಾಡಿದ ಅನೂಷಾ, “ನಾನೀಗ ಬಿಜಿ ಇದೀನಿ. ಸಿಗೋದಕ್ಕಾಗುವುದಿಲ್ಲ.” ಎಂದು ಹೇಳಿ ಕಟ್ ಮಾಡಿದಳು. ಈ ಬಾರಿ ಹರಿಗೆ ರೇಗಿ ಹೋಯಿತು. ಮತ್ತೆ ಫೋನ್ ಮಾಡಿದ. ಆದರೆ ಉತ್ತರ ಬರಲೇ ಇಲ್ಲ. ಏನು ಮಾಡಬೇಕೆಂದು ತೋಚಲಿಲ್ಲ. ಮಧ್ಯಾಹ್ನ ಲಂಚ್ ಅವರ್ನಲ್ಲಿ ಊಟಕ್ಕೆ ಕ್ಯಾಂಟೀನ್ ಗೆ ಬಂದೇ ಬರುತ್ತಾಳೆ. ಅಲ್ಲಿಯವರೆಗೆ ಕಾಯೋಣವೆಂದು ಕಾಯತೊಡಗಿದ. ಮನೆಯಿಂದ ಅಮ್ಮನ ಕರೆ ಬಂತು, ಅಪರೂಪಕ್ಕೆ ಬಂದ ಮಗ ಹೀಗೆ ಯಾಕೆ ಮಾಡಿದ ಎಂದು ಚಿಂತೆಗೊಳಗಾದರು. ಕಾಲ್ ರಿಸೀವ್ ಮಾಡಲಿಲ್ಲ ಹರಿ. ಅಲ್ಲಿ ಅಮ್ಮ ಚಡಪಡಿಸುತ್ತಲೆ ಇದ್ದರು.

ಮಧ್ಯಾಹ್ನ ಒಂದು ಗಂಟೆಯಾಗುತ್ತಿದ್ದಂತೆ, ಹೊರಬಂದ ಗುಂಪಲ್ಲಿ ಅನೂಷಾ ಕೂಡ ಇದ್ದಳು. ಅವಳನ್ನು ನೋಡುತ್ತಲೇ ಓಡಿಹೋದ ಹರಿ. ಮಾತನಾಡಿಸಲು ಮುಂದಾದ.
” ಹೇಯ್ ಅನೂಷಾ. ಏನಾಗಿದೆ ನಿಂಗೆ.? ಯಾಕೆ ಕಾಲ್ ರಿಸೀವ್ ಮಾಡ್ತಿಲ್ಲ?”
” ಹರಿ ಪ್ಲೀಸ್ ಇಲ್ಲಿ ಬೇಡ. ನನ್ನ ಕೊಲೀಗ್ಸ್ ಇಲ್ಲೇ ಇದ್ದಾರೆ. ನಂಗೆ ಇನ್ಸಲ್ಟ್ ಆಗುತ್ತೆ.” ಎಂದಳು ಅನೂಷಾ. ಅದನ್ನು ಕೇಳುತ್ತಲೇ ಸಿಟ್ಟಾದ ಹರಿ, ಅವಳ ಕೈಯನ್ನು ಹಿಡಿದು ದರದರನೆ ಬೆಳೆದುಕೊಂಡು ಹೊರಟ. ಬಿಡು ಬಿಡು ಎಂದು, ಅನೂಷಾ ಗಟ್ಟಿಯಾಗಿ ಕೂಗತೊಡಗಿದಳು. ಹರಿಯ ಕೋಪ ನೆತ್ತಿಗೇರಿದೆ ಎಂದು ಅರಿತಳು ಅವಳು. ” ಕೈಬಿಡು. ಎಲ್ಲ ಹೇಳ್ತೀನಿ.” ಎಂದು ಬಿಡಿಸಿಕೊಂಡಳು

” ಮೊದಲಿಗೆ ಊಟ ಮಾಡೋಣ ಆಮೇಲೆ ಎಲ್ಲಾ ವಿವರಿಸ್ತೀನಿ.”
” ಬೇಡ. ಊಟವಾದಮೇಲೆ ನಿಂಗೆಲ್ಲಿದೆ ಸಮಯ. ಓಡಿ ಹೋಗ್ತಿಯಾ. ಈಗಲೇ ಹೇಳು.”
” ಇಲ್ಲ. ಹಾಫ್ ಡೇ ಲೀವ್ ಹಾಕ್ತೀನಿ. ಆಯ್ತಾ. ಮೊದಲು ಬಾ ಊಟ ಮಾಡೋಣ.” ಇಬ್ಬರು ಹೋಟೆಲ್ ನಡೆಗೆ ನಡೆದರು. ಸೇರದಿದ್ದರೂ ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾದರು ಸ್ವಲ್ಪ ಮಾಡಬೇಕೆಂದು, ಊಟ ಮಾಡಿದ. ಮುಗಿದ ನಂತರ ಅನೂಷಾಳೇ ಅವನನ್ನು ಪಾರ್ಕಿಗೆ ಕರೆದೊಯ್ದಳು.
” ಈಗ್ಲಾದ್ರೂ ಹೇಳು ಏನಾಗಿದೆ ನಿಂಗೆ? ಯಾಕೆ ನನ್ನ ಇಗ್ನೋರ್ ಮಾಡ್ತಿದ್ದೀಯಾ? ಪ್ಲೀಸ್ ಹೇಳು.” ಎಂದು ಬೇಡಿಕೊಂಡ.
” ಓಕೆ ಹರಿ. ಹೇಳ್ತೀನಿ ಕೇಳು, ಈಗ ವಾರದ ಹಿಂದೆ ನನ್ನ ಮದುವೆ ವಿಷಯ ಪ್ರಸ್ತಾಪ ಆಯ್ತು ಮನೆಯಲ್ಲಿ. ಇವಾಗ್ಲಿಂದಾನೆ ಗಂಡು ಹುಡುಕುವುದಕ್ಕೆ ಸ್ಟಾರ್ಟ್ ಮಾಡಿದರೆ ಮುಂದಿನ ವರ್ಷ ಅನ್ನೋದ್ರೊಳಗಡೆ ಮದುವೆ ಮಾಡಬಹುದು ಅನ್ನೋದು ನನ್ನ ಅಪ್ಪನ ವಿಚಾರ.”

” ನಾನು ಒಬ್ಬನನ್ನ ಇಷ್ಟಪಡುತ್ತಿದ್ದೇನೆ ಅಂತ ಹೇಳಬೇಕಿತ್ತು ನಿನ್ನ ಅಪ್ಪನಿಗೆ.”
” ಹಾ.. ಹೇಳಿದೆ. ಆಶ್ಚರ್ಯ ಏನಂದ್ರೆ, ನಿನ್ನ ಬಗ್ಗೆ ನನ್ನ ಅಪ್ಪಂಗೆ ಕಂಪ್ಲೀಟ್ ಗೊತ್ತಪ್ಪ. ನಿನ್ನ ಇಷ್ಟಪಡ್ತಿದಿನಿ ಅಂದ ತಕ್ಷಣ, ಇವ್ನಾ? ಬೇಡ್ವೇಬೇಡ ಅಂತ ಹಠ ಹಿಡಿದಿದ್ದಾರೆ. ಯಾಕೆ ಅಪ್ಪ ಏನಾಯ್ತು ಅಂತ ಕೇಳಿದ್ರೆ ಹುಡುಗಂಗೆ ಬೇರೆ ಗರ್ಲ್ ಫ್ರೆಂಡ್ ಇದ್ದಾಳೆ ಅನ್ಸುತ್ತೆ. ನನ್ನ ಫ್ರೆಂಡ್ ಜಾರ್ಜ್ ಇದಾನ್ನಲ್ಲ, ಅವನ ಮಗಳು ಮೆಲಿಟಾ ಮತ್ತು ಇವ್ನು ತುಂಬಾ ಕ್ಲೋಸ್ ಅಂತೆ. ಮೊನ್ನೆ ಬಂದಾಗ ಯಾವುದೊ ವಿಷಯದ ಬಗ್ಗೆ ಮಾತನಾಡುವಾಗ ಹೇಳ್ದ. ಅವನಿಗೆ ಕೊಟ್ಟು ಮದುವೆ ಮಾಡ್ತಿಯೆನೊ ಅಂತ ಕೇಳಿದರೆ ನಕ್ಕು ಸುಮ್ಮನಾಗಿಬಿಟ್ಟ, ಅಂದ್ರು.” ಮಾತು ಮುಂದುವರಿಸುತ್ತಿದ್ದಂತೆ ತಡೆದ ಹರಿ.
” ಓಹ್ ಗಾಡ್…!” ಎಂದು ಕಿರುಚಿದ. ” ನಿನಗೆ ಗೊತ್ತಿದೆಯಲ್ಲ ಅನೂಷಾ. ನಾವು ಜಸ್ಟ್ ಫ್ರೆಂಡ್ಸ್. ಅದು ಬೇರೆ ಅವಳು ನನ್ನ ಚೈಲ್ಡ್ ಹುಡ್ ಫ್ರೆಂಡ್. ನಿನ್ನ ಅಪ್ಪ ಅವಳಪ್ಪ ಫ್ರೆಂಡ್ಸ್ ಅಂತ ನಂಗೆ ಗೊತ್ತಿರಲಿಲ್ಲ.”

” ಅದು ಬಿಡು ಹರಿ. ಅವನಿಗೆ ಕೊಟ್ಟು ಮದುವೆ ಮಾಡ್ತೀಯಾ ಅಂತ ಕೇಳಿದಾಗ, ಯಾಕೆ ಏನೂ ಹೇಳಲಿಲ್ಲ? ಸುಮ್ಮನಿದ್ದಾರೆ ಅಂದ್ರೆ ಮದುವೆ ಮಾಡ್ತಾರೆ ಅಂತ ಅರ್ಥ ತಾನೆ?”
” ಶಟಪ್..! ಏನೇನೋ ಮಾತನಾಡಬೇಡ ಅನೂಷಾ. ಅವರಪ್ಪನ ತಲೇಲಿ ಏನಿದೇನೊ ಏನೊ, ನನಗೇನು ಗೊತ್ತು. ಸಣ್ಣ ವಿಷಯ ದೊಡ್ಡದು ಮಾಡ್ತಿದಿಯಾ.”
” ಇಲ್ಲಪ್ಪ ಇದು ಸಣ್ಣ ವಿಷಯಾನೂ ಅಲ್ಲ, ನಾನು ದೊಡ್ಡದು ಮಾಡ್ತಾನೂ ಇಲ್ಲ. ಅಪ್ಪನಿಗೆ ಹಂಗೆ ಅನಿಸಿದೆ ಅಂದ್ರೆ ನಾನಾದ್ರು ಏನು ಮಾಡ್ಲಿ?”
” ಕನ್ವಿನ್ಸ್ ಮಾಡು, ಅವರು ಹಾಗಿಲ್ಲ ಬರಿ ಫ್ರೆಂಡ್ಸ್ ಅಂತ ಹೇಳು. ಎಲ್ಲ ಪ್ರಾಬ್ಲಮ್ ಸಾಲ್ವ್ ಆಗುತ್ತೆ.”
” ಹಾ ಹೇಳ್ಬಹುದು, ಆದ್ರೆ ನಂಗೆ ಹಾಗೆಲ್ಲ ಅನಿಸಿಬಿಟ್ಟಿದೆ ಅಲ್ಲ. ಏನ್ ಮಾಡೋದು..!”
” ಶಟಪ್ ಅನೂಷಾ. ಬುದ್ಧಿ ಇಲ್ದೆ ಇರೋರ ಹಾಗೆ ಮಾತಾಡಬೇಡ”

” ಡಾಮಿನೇಟ್ ಮಾಡೋಕೆ ನೋಡಬೇಡ ಹರಿ.” ಎಂದು ಮೆಲು ಧ್ವನಿಯಲ್ಲಿ ಪ್ರತ್ಯುತ್ತರ ನೀಡಿದಳು. ನಾನೇನು ಚಿಕ್ಕವಳಲ್ಲ, ನನಗೂ ಅರ್ಥವಾಗುತ್ತೆ. ಈಗ ನಮ್ಮೆದುರು ಇದೊಂದೆ ಪ್ರಾಬ್ಲಮ್ ಇಲ್ಲ. ಅಪ್ಪ ಹೇಳಿದ ಇನ್ನೊಂದು ಮಾತು ಕೂಡ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿದೆ ಹರಿ”
“ಏನದು ಪ್ರಾಬ್ಲಮ್? ಸಾಲ್ವ್ ಮಾಡೋಣ ಪ್ಲೀಸ್ ಹೇಳು.”

” ನೋಡು ಹರಿ, ಮದುವೆ ಅಂತ ಆದಮೇಲೆ ಸುಮಾರು ಖರ್ಚುಗಳಿರುತ್ತವೆ. ಜವಾಬ್ದಾರಿ ಹೆಚ್ಚುತ್ತೆ. ದುಡ್ಡು ಎಷ್ಟಿದ್ದರೂ ಸಾಕಾಗಲ್ಲ. ಇಬ್ಬರೂ ಕೆಲಸ ಮಾಡಿದ್ರು ಈಗ ಬರ್ತಿರೋ ಸಂಬಳದಲ್ಲಿ ಜೀವನ ನಡೆಸೋದು ತುಂಬಾನೇ ಕಷ್ಟ. ನಾನು ಹೇಳೋದು ಅರ್ಥ ಆಯ್ತು ಅನ್ಕೋತೀನಿ…!”
” ಏನು ನೀನು ಹೇಳೋ ಮಾತಿನ ಅರ್ಥ? ನಾನು ತರೊ ಸಂಬಳ ಸಾಕಾಗೋದಿಲ್ಲ ಅಂತ ಅರ್ಥಾನ? ಮುಂದೆ ಪ್ರಮೋಷನ್ ಆಗೆ ಆಗುತ್ತೆ. ಸ್ಯಾಲರೀನು ಹೈಕ್ ಆಗುತ್ತೆ. ಅದಕ್ಕೆಲ್ಲ ಇಷ್ಟ್ಯಾಕೆ ತಲೆಕೆಡಿಸಿಕೊಳ್ತಿದೀಯಾ?. ಪ್ಲೀಸ್ ಇದ್ನಲ್ಲ ಬಿಟ್ಟಾಕು. ಹೇಗಾದ್ರು ಮಾಡಿ ಜೀವನ ನಡೆಸೋಣ. ಪ್ರೀತಿಸಿದ್ದೀವಿ ಅಂದಮೇಲೆ ಕಷ್ಟ-ಸುಖ ಎಲ್ಲ ಇದ್ದೆ ಇರುತ್ತೆ. ಅದೆಲ್ಲ ಯೋಚನೆ ಮಾಡ್ತಾ ಕೂತ್ರೆ ಜೀವನ ನಡೆಸೋದು ತುಂಬಾ ಕಷ್ಟ…. ಕಮಾನ್ …ಚಿಯರ್ ಅಪ್.” ಎಂದು ಅವಳ ಭುಜವನ್ನು ಹಿಡಿದು ಆಲಿಂಗಿಸಲು ಹೋದ. ತಕ್ಷಣವೇ ಅನೂಷಾ ಅವನನ್ನು ನೂಕಿದಳು.

” ಹೇ ಯಾಕೆ ಹೀಗೆ ಮಾಡ್ತಾ ಇದೀಯಾ? ನಾನೇನ್ ಮಾಡಿದೀನಿ ನಿಂಗೆ? ನಿನಗೋಸ್ಕರ ಹೈದರಾಬಾದಿನಿಂದ ಅರ್ಜೆಂಟ್ ಮಾಡ್ಕೊಂಡು ಬಂದೆ ಗೊತ್ತ. ಬೆಳಗ್ಗೆ ತಿಂಡಿ ಕೂಡ ತಿಂದಿಲ್ಲ. ಎಲ್ಲ ನಿನ್ಗೋಸ್ಕರ ಅನೂಷಾ. ಪ್ಲೀಸ್ ಅರ್ಥಮಾಡ್ಕೊ” ಎಂದು ಕಣ್ಣೀರಿಟ್ಟ.

” ಸಾರಿ ಹರಿ, ನನ್ನಿಂದ ಏನೇ ತಪ್ಪಾಗಿದ್ರು ಅದನ್ನು ಕ್ಷಮಿಸಿಬಿಡು. ನಾನು ನೀನು ಜೊತೆಗಿರೋದಕ್ಕೆ ಆಗಲ್ಲ ಅನ್ಸುತ್ತೆ. ಐ ಯಾಮ್ ರಿಯಲಿ ಸಾರಿ.” ಎಂದು ಅಳುತ್ತಾ ಹೊರಟೇಬಿಟ್ಟಳು. ಅಲ್ಲಿ ಏನಾಗುತ್ತಿದೆ ಎಂದು ಹರಿಗೆ ಗೊತ್ತಾಗಲೇ ಇಲ್ಲ. ಎಲ್ಲವನ್ನು ಕಳೆದುಕೊಂಡವರಂತೆ ಕುಳಿತುಬಿಟ್ಟ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಮುಂದೇನು ಮಾಡಬೇಕು, ಇದೆಲ್ಲ ಯಾಕೆ ಹೀಗಾಯ್ತು, ಏನಾಯ್ತು ಎನ್ನುವುದು ಯಾವುದೂ ತಿಳಿಯಲಿಲ್ಲ. ಕೆಲಕಾಲ ಅಲ್ಲಿಯೇ ಕುಳಿತುಬಿಟ್ಟ. ಎಷ್ಟೋ ಹೊತ್ತಿನ ನಂತರ ಪಾರ್ಕಿನಿಂದ ಹೊರನಡೆದ. ಮನೆಗೆ ಹೋಗಲೂ ಮನಸ್ಸಾಗಲಿಲ್ಲ ಅವನಿಗೆ. ಎಲ್ಲಿಗಾದರೂ ಒಬ್ಬನೇ ಹೋಗಬೇಕೆನಿಸಿತು. ಏಕಾಂತ ಬೇಕು ಎಂದೆನಿಸಿತು. ಎಲ್ಲಿ ಹೋಗಬೇಕೆಂದು ತಿಳಿಯದೆ ಸುಮ್ಮನೆ ನೇರವಾಗಿ ಮನೆಗೆ ಹೋದ. ಕುಗ್ಗಿ ಹೋಗಿದ್ದ ಹರಿಯನ್ನು ನೋಡಿ ಮತ್ತಷ್ಟು ಆತಂಕಕ್ಕೊಳಗಾದರು ಅವನ ಅಮ್ಮ. ಅವನನ್ನು ಮಾತನಾಡಿಸಲು ಪ್ರಯತ್ನಿಸಿದರು, ಸರಿಯಾಗಿ ಉತ್ತರಿಸದೇ ನೇರವಾಗಿ ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟ. ಸಂಜೆಯಾದ ಮೇಲೆ ಬಾಗಿಲು ತೆಗೆದು, ಅಮ್ಮನಿಗೆ ತಾನು ಇವತ್ತು ರಾತ್ರಿಯೇ ಹೊರಡಬೇಕು ಎಂದು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡ.

” ಯಾಕೆ ಹಿಂಗಾಗಿದೀಯ? ಏನಾಯ್ತು ಅಂತ ಹೇಳಿದ್ರೆ ನಮಗೂ ಸಮಾಧಾನ ಆಗುತ್ತೆ.” ಎಂದು ಪದೇಪದೇ ಕೇಳತೊಡಗಿದರು.
” ಏನಿಲ್ಲಾ ಅಮ್ಮ, ಬಿಡು. ನಿಂಗೆ ಇನ್ನೊಂದು ದಿನ ಹೇಳ್ತೀನಿ. ಎಂದು ರೆಡಿಯಾಗಿ ಹೊರಟೆ ಬಿಟ್ಟ. ಮಗನನ್ನು ತನ್ನ ಪಾಡಿಗೆ ಬಿಟ್ಟರೆ ಒಂದೆರಡು ದಿನದಲ್ಲಿ ಸರಿಯಾಗಬಹುದೆಂದು ಸುಮ್ಮನಾದರು. ಬಸ್ ಹತ್ತಿದ ನಂತರ ಅಮ್ಮನಿಂದ ಕರೆಬಂತು.

” ಎಲ್ಲಿದಿಯೋ? ಬಸ್ ಸಿಕ್ತ?”
” ಹುಂ ಅಮ್ಮ ಸಿಕ್ಕಿದೆ. ನೀನೇನು ತಲೆ ಕೆಡಿಸ್ಕೋಬೇಡ, ನಂಗೇನೂ ಆಗಿಲ್ಲ. ಇನ್ನೊಂದು ದಿನ ಎಲ್ಲಾ ವಿವರಿಸಿ ಹೇಳ್ತೀನಿ. ಊಟ-ತಿಂಡಿ ಚೆನ್ನಾಗಿ ಮಾಡು. ಅಪ್ಪಂಗೆ ಜಾಸ್ತಿ ಏನು ಹೇಳಬೇಡ ಆಯ್ತಾ. ಸರಿ ಬಾಯ್, ಗುಡ್ ನೈಟ್.”
” ಹೂ ಕಣೋ. ಗುಡ್ ನೈಟ್, ಬಾಯ್” ಎನ್ನುತ್ತಲೇ ಕಾಲ್ ಕಟ್ಟಾಯ್ತು. ಕಟ್ ಮಾಡುತ್ತಲೇ ಅನೂಷಾಳಿಗೆ ಕಾಲ್ ಮಾಡಿದ. ಆದರೆ ಅವಳು ರಿಸೀವ್ ಮಾಡಲಿಲ್ಲ. ಮತ್ತೆ ಮಾಡಿದ, ರಿಸೀವ್ ಮಾಡಲಿಲ್ಲ. ಮೆಸೇಜ್ ಮಾಡಿದ ಕೆಲ ಹೊತ್ತಿನ ನಂತರ ರಿಪ್ಲೈ ಬಂತು.
” ಹರಿ ಪ್ಲೀಸ್ ನನ್ನನ್ನು ಬಿಟ್ಟುಬಿಡು. ನಾನು ಅಪ್ಪನ ಮಾತನ್ನು ತೆಗೆದುಹಾಕುವುದಿಲ್ಲ. ಅವರು ಹೇಳುವುದರಲ್ಲಿ ಸತ್ಯವಿದೆ ಅಂತ ಅನಿಸ್ತಾ ಇದೆ. ಇಷ್ಟು ದಿನ ಆಗಿರೋದೆಲ್ಲ ಮರೆತುಬಿಡು. ಐ ಆಮ್ ರಿಯಲಿ ಸಾರಿ. ಪ್ಲೀಸ್ ಮರೆತು ಬಿಡು ನನ್ನನ್ನ.”
” ಇದೇ ನಿನ್ನ ಕೊನೆಯ ಡಿಸಿಜನ್?”
” ಹೌದು. ಐ ಆಮ್ ಸಾರಿ.”

” ಗುಡ್ ಬಾಯ್.” ಎಂಬ ಉತ್ತರದೊಂದಿಗೆ ಮೊಬೈಲನ್ನು ಬೀಸಿ ಒಗೆಯಬೇಕೆನಿಸಿತು ಅವನಿಗೆ. ಅದ್ಹೇಗೋ ತನ್ನ ಕೋಪವನ್ನು ನಿಯಂತ್ರಿಸಿಕೊಂಡ. ಮುಗ್ಧ ಹುಡುಗಿಯೆಂದು ಪ್ರೀತಿಸಿ ತಪ್ಪು ಮಾಡಿಬಿಟ್ಟೆ, ಎಂದು ಕೊರಗಿದ. ಅವಳು ಹೇಳಿದ್ದನ್ನು ಮೆಲುಕು ಹಾಕಿದ. ಅವಳು ಹೇಳಿದ್ದು ನಿಜವೆನ್ನಿಸಿತು. ಒಂದೂವರೆ ವರ್ಷವಾದರೂ ಇದ್ದ ಜಾಗದಲ್ಲೆ ಇದ್ದೇನೆ. ಪ್ರಮೋಷನ್ ಇಲ್ಲದಿದ್ದರೂ ಕಡೇಪಕ್ಷ ಟ್ರಾನ್ಸ್ಫರ್ ಕೂಡ ಮಾಡಿಸಿಕೊಳ್ಳಲಾಗಲಿಲ್ಲ ನನ್ನಕೈಲಿ ಎಂದು ಖಿನ್ನನಾದ. ಯಾವಾಗ ನಿದ್ದೆ ಬಂದಿತೋ ಗೊತ್ತಾಗಲಿಲ್ಲಾ. ಬೆಳಗ್ಗೆ ಕಣ್ಣುಬಿಟ್ಟಾಗ ಹೈದರಾಬಾದಿನಲ್ಲಿದ್ದ. ಅವತ್ತು ರಜೆ ಹಾಕಿಬಿಡಬೇಕು ಎನಿಸಿತು. ಆದರೆ ಅವಳಿಗೋಸ್ಕರ ತನ್ನ ವೃತ್ತಿ ಜೀವನಕ್ಕೆ ಏಕೆ ಧಕ್ಕೆ ಮಾಡಬೇಕೆಂದು, ಅದೆಲ್ಲಿಂದಲೋ ಅದಮ್ಯ ಶಕ್ತಿಯನ್ನು ತುಂಬಿಕೊಂಡು ರೆಡಿಯಾಗಿ ಆಫೀಸಿಗೆ ಹೊರಟ. ಹರಿಯ ಶರೀರ ಮಾತ್ರವೇ ಅಲ್ಲಿತ್ತು, ಮನಸ್ಸು ಎಲ್ಲೋ ಮಾಯವಾಗಿತ್ತು. ಸಂಜೆಯಾಗುವುದರೊಳಗೆ ರಸವಿಲ್ಲದ ಜೀವಿಯಂತವಾಗಿದ್ದ. ರೂಮಿಗೆ ಬಂದ ಹರಿ, ಸ್ವಲ್ಪ ತಿಂಡಿ ತಿಂದು, ಕಾಲ ಕಳೆಯಲೆಂದು ಮೊಬೈಲ್ ಹಿಡಿದ. ಏನೇ ಮಾಡಿದರೂ ಅವನ ದುಃಖ ಕಡಿಮೆಯಾಗಲಿಲ್ಲ.

ಏನು ಮಾಡಿದರು ಪದೇ ಪದೇ ಅದೆ ನೆನಪು. ಮರೆಯಲಾಗಲಿಲ್ಲ. ಕಡೆಯ ಬಾರಿ ಪ್ರಯತ್ನಿಸೋಣ ಎಂದು ಗಟ್ಟಿಮನಸ್ಸು ಮಾಡಿ ಕರೆಮಾಡಿಯೆ ಬಿಟ್ಟ. ಆದರೆ ಈ ಬಾರಿಯ ಉತ್ತರವನ್ನು ಆತ ನಿರೀಕ್ಷಿಸಿರಲಿಲ್ಲ. ಹೌದು, ಕರೆ ಮಾಡಿದ ವ್ಯಕ್ತಿ ಸ್ವಿಚ್ ಆಫ್ ಮಾಡಿದ್ದಾರೆ ಎನ್ನುವ ವಾಕ್ಯವನ್ನು ಕೇಳುತ್ತಲೇ ಅವನಿಗೆ ಖಾತ್ರಿಯಾಯಿತು, ಅನೂಷಾ ತನ್ನನ್ನು ಸಂಪೂರ್ಣವಾಗಿ ದೂರ ಮಾಡಲು ಅವಳ ನಂಬರನ್ನು ಕೂಡ ಚೇಂಜ್ ಮಾಡಿದ್ದಾಳೆ. ಸಿಟ್ಟು, ದುಃಖ, ಹತಾಶೆ ಎಲ್ಲವೂ ಒದ್ದುಕೊಂಡು ಬಂತು. ಮೊಬೈಲನ್ನು ಬೀಸಿ ಒಗೆದ ಪರಿಣಾಮ ಒಂದು ಸಣ್ಣ ಭಾಗವು ಸಿಗಲಾರದಷ್ಟು ಚೂರುಚೂರಾಗಿ ಹೋಯ್ತು. ಸ್ನೇಹಿತರು, ಹರಿಯ ಮುಖದಲ್ಲಿದ್ದ ಕೋಪವನ್ನು ನೋಡಿ ಗಾಬರಿಗೊಂಡರು. ಅವನನ್ನು ಸಮಾಧಾನ ಪಡಿಸಿ ಕುಡಿಯಲು ನೀರು ಕೊಟ್ಟರು. ಕೆಲಹೊತ್ತಿನ ನಂತರ ಚೇತರಿಸಿಕೊಂಡ ಹರಿ. ಹೊರಗೆ ಹೋದರೆ ಫ್ರೆಶ್ ಆಗಬಹುದೆಂದು ಅವನನ್ನು ಹೊರಗೆ ಕರೆದುಕೊಂಡು ಹೋದರು. ಬಹಳ ದಿನದ ನಂತರ ಬಿಯರ್ ಕುಡಿಯಬೇಕೆನಿಸಿತು ಅವನಿಗೆ. ಸೀದಾ ಬಾರಿಗೆ ನಡೆದರು. ಮಿನುಗುವ ಬೆಳಕಿನಡಿಯಲ್ಲಿ ಎಷ್ಟೋ ಹೃದಯಗಳನ್ನು ತಣಿಸುವ ಪ್ರಯತ್ನ ಆ ಮಾದಕ ದ್ರವ್ಯದಿಂದ ನಡೆದಿತ್ತು. ಅವರಲ್ಲಿ ಹರಿಯೂ ಒಬ್ಬನಾದ.

*****

ತುಂಬಾ ದಿನಗಳಿಂದ ಬೆಂಗಳೂರಿಗೆ ಹೋಗಿರದೆ ಇದ್ದುದರಿಂದ ಹರಿ ಬೆಂಗಳೂರಿಗೆ ಹೊರಟು ನಿಂತಿದ್ದ. ಶುಕ್ರವಾರದ ರಾತ್ರಿಯಾಗಿತ್ತು. ಸ್ನೇಹಿತರಿಬ್ಬರು ಬಸ್ಟ್ಯಾಂಡಿನವರೆಗೂ ಬಂದಿದ್ದರು. ಹರಿ ಈಗ ಎಲ್ಲದರಿಂದ ಚೇತರಿಸಿಕೊಳ್ಳುತ್ತಿದ್ದ. ಒಂದು ತಿಂಗಳಷ್ಟೇ ಆಗಿತ್ತು, ಎಲ್ಲ ನಡೆದು. ಗೆಳತನ, ಕೆಲಸ, ಬಿಯರ್ ಎಲ್ಲವೂ ಅವನ ದುಃಖವನ್ನು ದೂರಮಾಡಲು ಪ್ರಯತ್ನಿಸುತ್ತಿತ್ತು. ಬೆಳಗ್ಗೆ ಮನೆಗೆ ಬಂದ ಮಗನ ಮುಖದಲ್ಲಿ ಇದ್ದ ಕಳೆಯನ್ನು ನೋಡಿ ಅಪ್ಪ-ಅಮ್ಮ ಸಮಾಧಾನ ಪಟ್ಟರು. ಫ್ರೆಶ್ ಆಗಿ ತಿಂಡಿ ತಿಂದು ಸ್ನೇಹಿತರನ್ನು ಭೇಟಿಯಾಗಿ ಬರಲೆಂದು ಮನೆಯಿಂದ ಹೊರಟ. ಅಷ್ಟರಲ್ಲೇ ಅವಿನಾಶನ ಕರೆ ಬಂತು.
” ಹೇ ಹರಿ ಎಲ್ಲಿದ್ದೀಯಾ? ನಿಂಜೊತೆ ಅರ್ಜೆಂಟಾಗಿ ಮಾತನಾಡಬೇಕು.”ಎಂದ.

” ನಾನು ಬೈಕ್ ಮೇಲೆ ಇದ್ದೀನಿ. ಬೆಂಗಳೂರಲ್ಲೆ ಇದೀನಿ. ಸರಿ ಮಾತನಾಡೋಣ ಅಲ್ಲಿಗೆ ಬರ್ತೀನಿ.” ಎಂದು ಕಟ್ ಮಾಡಿದ. ಅವಿನಾಶನ ರೂಮ್ಗೆ ಅರ್ಧಗಂಟೆಯಲ್ಲಿ ತಲುಪಿದ.
” ಹೇ ಹರಿ ಹೆಂಗಿದ್ದೀಯಾ? ಎಷ್ಟು ದಿನ ಆಗಿತ್ತಲ್ಲೊ ಮೀಟಾಗಿ.” ಎಂದ. ಬ್ರೇಕಪ್ ಆದಾಗಿನಿಂದ ಬೆಂಗಳೂರಿನ ಸ್ನೇಹಿತರಿಂದ ಕೊಂಚ ದೂರವೇ ಉಳಿದುಬಿಟ್ಟಿದ್ದ. ಹೀಗಾಗಿ ಅವಿನಾಶ್ ಗೆ ಕಾಲ್ ಆಗಲಿ, ಮೆಸೇಜ್ ಆಗಲಿ ಮಾಡಿರಲಿಲ್ಲ.
” ನಾನು ಚೆನ್ನಾಗಿದಿನಪ್ಪಾ… ನೀನು ಹೆಂಗಿದ್ದೀಯಾ?”
” ನಾನು ಚೆನ್ನಾಗಿದ್ದೀನಿ. ಇದೆಲ್ಲ ಬಿಡು. ನಿನ್ನ ಹತ್ತಿರ ಒಂದು ಸೀರಿಯಸ್ ವಿಷಯ ಮಾತನಾಡಬೇಕು.”
” ಏನೊ ಅದು ಹೇಳು.”

” ಹೆಂಗ್ ಹೇಳೋದು ಗೊತ್ತಾಗ್ತಿಲ್ಲಪ್ಪ.”
” ಹೇಳು, ನನ್ ಮುಂದೆ ಏನು?”
” ಅಲ್ಲಾ ಹರಿ ನಿನ್ನ ಮತ್ತು ಅನೂಷಾಳ ವಿಷಯ. ಅದು, ಹೆಂಗಿದ್ದೀರಿ ಇಬ್ಬರೂ?”
” ಅಯ್ಯೋ ಮಚ್ಚಾ ಅದ್ಯಾಕೆ ಕೇಳ್ತಿಯ. ಮುಗಿತು ಆ ಚಾಪ್ಟರ್, ಬಿಡು ಅದೆಲ್ಲ ಯಾಕೆ ಈಗ.”
” ಅಂದ್ರೇನು ಹರಿ? ನಂಗೊಂದು ಅರ್ಥ ಆಗ್ತಿಲ್ಲ. ನೀನ್ ನೋಡಿದ್ರೆ ಹಿಂಗ್ ಅಂತಿಯ. ಅನೂಷಾ ನೋಡಿದ್ರೆ ಇನ್ನೊಬ್ಬರನ್ನು ಮದುವೆಯಾಗ್ತಿದ್ದಾಳೆ. ಏನಾಯ್ತಪ್ಪ ನಿಮಗೆ ಅಂತ ತಲೆ ಕೆಟ್ಟುಹೋಯಿತು.”

” ಅದು ಆಗಲೇ ಬೇಕಿತ್ತು ಬಿಡು. ಸ್ವಲ್ಪ ಲೇಟಾಗಿದೆ ಅಷ್ಟೇ. ಅಂದಹಾಗೆ ಯಾರಂತೆ ಹುಡುಗ?”
” ಹುಡುಗ ಬೇರೆ ಯಾರು ಅಲ್ಲಪ್ಪ, ನಮ್ಮ ಹತ್ತಿರದ ಸಂಬಂಧಿ ಶರತ್ ಅಂತ. ಅಮೇರಿಕಾಲಿ ಇರ್ತಾನೆ. ತುಂಬಾ ಶ್ರೀಮಂತರು. ಅವರಪ್ಪ ದೊಡ್ಡ ಬಿಜಿನೆಸ್ ಮ್ಯಾನ್, ಕೋಟಿ ಕೋಟಿ ದುಡ್ಡಿದೆ ಅವರ ಹತ್ರ.”
” ಓಹೋ…ದುಡ್ಡು ಬೇಕಾಗಿತ್ತು ಅವಳಿಗೆ….. ಸಿಕ್ತಲ್ಲಪ್ಪ. ಇನ್ನೇನು ಸಕ್ಕತ್ತಾಗಿ ಇರ್ತಾರೆ ಬಿಡು. ಅದಿರಲಿ, ಯಾವಾಗ ಇದೆಲ್ಲ ಅರೇಂಜ್ಮೆಂಟ್ ಆಯ್ತು?”
” ಈಗ ಸುಮಾರು ಎರಡು ತಿಂಗಳ ಹಿಂದೆ ಮಾತುಕತೆ ಆಯ್ತಂತೆ. ನೋಡಿದಾಗಲೇ ಒಪ್ಪಿಕೊಂಡ್ಲಂತೆ. ಶರತ್ ಹೇಳ್ತಿದ್ದ.”
“ಹಂ….. ಎಲ್ಲಾ ಪ್ರೀ ಪ್ಲಾನ್ಡು….” ಎಂದು ಜೋರಾಗಿ ನಕ್ಕ. ಆ ನಗುವಿನಲ್ಲಿ ಅಪಹಾಸ್ಯವಿತ್ತು ಹಾಗು ದುಃಖವೂ ಇತ್ತು.ಮನದಾಳದಲ್ಲಿ ಗುಡ್ಡದಷ್ಟು ನೋವನ್ನು ಇಟ್ಟುಕೊಂಡಿದ್ದ. ಆದರೆ ಅದನ್ನು ಅವಿನಾಶನ ಮುಂದೆ ವ್ಯಕ್ತಪಡಿಸಲಿಲ್ಲ.

” ಏನಾಯ್ತು ಕೇಳೋಣ ನಿನ್ನ ಅಂತ ಕಾಲ್ ಮಾಡಿದೆ ಕಣೋ. ಅವಳನ್ನ ಕೇಳಿದ್ರೆ ಶರತ್ ಗೆ ಗೊತ್ತಾಗಿಬಿಟ್ಟರೆ ಕಷ್ಟ ಅಂತ ಸುಮ್ಮನಾದೆ.”
” ಏನಿಲ್ಲ ಬಿಡು ಗುರು, ನನ್ನ ಸಂಬಳ ಅವಳಿಗೆ ಸಾಕಾಗಲ್ವಂತೆ. ನಿಂಗೆ ಬೇರೆ ಗರ್ಲ್ ಫ್ರೆಂಡ್ ಇದಾಳೆ, ಹಂಗೆ ಹಿಂಗೆ ಅಂತ ಕತೆ ಹೊಡೆದು, ನನ್ನ ಮತ್ತು ಮೆಲಿಟಾ ಫ್ರೆಂಡ್ ಶಿಪ್ಪನ್ನು ಸರಿಯಾಗಿ ಯೂಸ್ ಮಾಡಿಕೊಂಡ್ಲು. ಈಗ ದುಡ್ಡಿರೋವ್ನ ಕಟ್ಕೋತಿದ್ದಾಳೆ. ಇದನ್ನೇ ಅಲ್ವಾ ಇಂಟಲಿಜೆನ್ಸ್ ಅಂತ ಕರೆಯೋದು. ಮೋಸಗಾರರು……ಎಲ್ಲ ಮೋಸ.” ಹರಿಯ ಕಣ್ಣಂಚಿನಲ್ಲಿ ನೀರಿತ್ತು.

” ನೀನ್ಯಾಕೋ ಸುಮ್ಮನೆ ಇದ್ದೀಯ? ಶರತ್ ಗೆ ಎಲ್ಲ ವಿಷಯ ತಿಳಿಸೋಣ. ಅವಳು ನೀನು ಪ್ರೀತಿಸಿದ ಹುಡುಗಿ ಅಂತ ಹೇಳೋಣ.”
” ಹೇ ಬೇಡಪ್ಪ….ಅವಳಿಗೇ ಇಷ್ಟವಿಲ್ಲದಿದ್ದರೆ, ನಾನೇನು ಒತ್ತಾಯ ಮಾಡೋದು. ಇದು ಮನಸ್ಸಿಗೆ ಸಂಬಂಧಪಟ್ಟಿದ್ದು. ಅವಳ ಮನಸ್ಸಿಗೆ ದುಡ್ಡು ಬೇಕು. ದುಡ್ಡನ್ನು ಶರತ್ ರೂಪದಲ್ಲಿ ಕಟ್ಕೋತಿದ್ದಾಳೆ. ಇರ್ಲಿ ಬಿಡು ಲೆಟ್ ಇಟ್ ಬಿ. ಹ್ಯಾಪಿಯಾಗಿರಲಿ ” ಅಳುವನ್ನು ಬಲವಂತವಾಗಿ ತಡೆದುಕೊಂಡ.
” ಸರಿ ಮತ್ತೆ ಮೀಟ್ ಆಗೋಣ್ವಪ್ಪ… ಅಂದಹಾಗೆ ಥ್ಯಾಂಕ್ಸ್, ಸುದ್ದಿ-ಸಮಾಚಾರ ಹೇಳಿದ್ದಕ್ಕೆ.”
” ಓಕೆ ಮಚ್ಚಾ ಸಿಗೋಣ….. ಬಾಯ್.. ಟೇಕ್ ಕೇರ್.”
” ಬಾಯ್.”

ಅಲ್ಲಿ ಕೂರಲಾಗಲಿಲ್ಲ ಅವನಿಗೆ. ಎದ್ದು ಹೊರಟ. ದೂರ ಓಡಿ ಹೋಗಬೇಕೆಂದೆನಿಸಿತು. ಕಾಂಕ್ರೀಟ್ ಕಾಡಿನಲ್ಲಿ ಓಡಿಹೋಗಲು ಜಾಗವಾದರೂ ಎಲ್ಲಿದ್ದೀತು? ಮನುಷ್ಯರೇ ತುಂಬಿದ ಕಾಂಕ್ರೀಟ್ ಕಾಡಿನಲ್ಲಿ ಕಾಲಿಡಲು ಎಲ್ಲಿದೆ ಜಾಗ? ಕಾಲಿಡಲು ಅಷ್ಟೇ ಅಲ್ಲ ಕನಸುಗಳಿಗೂ ಜಾಗವಿಲ್ಲ. ಕೇವಲ ಹಣಕ್ಕೆ ಜಾಗವಿದೆ. ಅಷ್ಟೇ….ಅಷ್ಟೇ. ಪವಿತ್ರ ಪ್ರೇಮ ಅಪರೂಪವಾಗಿದೆ. ಏನಾಗಿದೆ ಮಾನವಕುಲಕ್ಕೆ? ಆಸೆಯೆಂಬ ಬಿಸಿಲುಕುದುರೆ ಏರಿ ಕುಳಿತ ಮಾನವ ದೂರದೂರ ಸಾಗುತ್ತಲೇ ಇದ್ದಾನೆ ಹೊರತು, ಇಳಿಯಬೇಕೆಂಬ ಆಶಯ ಅವನಲ್ಲಿ ಮೂಡುತ್ತಿಲ್ಲ. ಇಳಿಯಲು ಶತಮಾನಗಳೇ ಬೇಕಾಗುತ್ತವೋ ಏನೊ. ಅವನೇ ಬಲ್ಲ.
ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು. ಒರೆಸಿಕೊಂಡವನೆ ಬೈಕನ್ನು ಏರಿದ. ಮಳೆ ಬರುವ ಮುನ್ಸೂಚನೆ ಇತ್ತು. ನಾಳೆ ಹಾಕಿಕೊಳ್ಳಲು ಇನ್ನೊಂದು ಜೊತೆ ಬಟ್ಟೆ ತಂದಿಲ್ಲವೆಂದು ಅರಿತ ಹರಿ, ಬೇಗನೆ ಮನೆ ಸೇರಿದ. ಯಾರಿಗೆ ಬೇಕು ಈ ಜೀವನ ಎನಿಸಿತು. ಮನುಷ್ಯನಲ್ಲಿ ಗಾಢವಾದ ಹತಾಶೆ ಮಾಡುವುದು, ಪ್ರೀತಿಸಿದವರಿಂದ ತಿರಸ್ಕೃತವಾದ. ಪ್ರೀತಿಸಿದವರು ಕೈ ಬಿಟ್ಟ ಮೇಲೆ ಇನ್ನೇನಿದೆ ಜೀವನದಲ್ಲಿ ಎಂಬ ಶೂನ್ಯತಾ ಭಾವ ಮನಸ್ಸನ್ನು ಆವರಿಸಿಬಿಡುತ್ತದೆ. ಅದರಲ್ಲೂ ಅವರ ಸ್ವಾರ್ಥಕ್ಕಾಗಿ ಇಷ್ಟು ದಿನ ಅವರೊಂದಿಗೆ ಕಳೆಯಬೇಕಾಯಿತು ಎಂಬುದನ್ನು ಅರಿತ ಮೇಲಂತು ಜೀವ ಹಿಂಡಿದಂತಾಗುತ್ತದೆ. ಮನುಷ್ಯನ ಮನಸ್ಸು ಪುಕ್ಕಲು ಮನಸ್ಸು. ಸದಾ ಏನನ್ನಾದರೂ ಕಳೆದುಕೊಳ್ಳುವ ಭಯದಲ್ಲಿ ಜೀವಿಸುತ್ತದೆ.ಆ ಭಯವನ್ನು ಗೆಲ್ಲಬೇಕು. ಗೆದ್ದಾಗಲೆ ಜೀವನಕ್ಕೊಂದು ಅರ್ಥ. ಆದರೆ ಅದು ಅಷ್ಟು ಸುಲಭದ ಮಾತಲ್ಲ ಬಿಡಿ.

ಯಾವ ಕೆಲಸವನ್ನೂ ಮಾಡಲು ಮನಸ್ಸಿರಲಿಲ್ಲ ಅವನಿಗೆ. ಸುಮ್ಮನೆ ಮಲಗಿಬಿಟ್ಟ. ನಿದ್ರೆಯೂ ಕೂಡ ಬಂತು. ದುಃಖದಲ್ಲಿರುವಾಗ ನಿದ್ರೆ ಎಂಬುದು ಅವರಿಸಿಬಿಟ್ಟರೆ, ಅದಕ್ಕಿಂತ ಉಪಕಾರಿ ಮಾನವನ ದೇಹಕ್ಕೆ ಮತ್ತೊಂದಿರುವುದಿಲ್ಲ. ಎದ್ದಾಗ ಸಂಜೆಯಾಗಿತ್ತು. ವರುಣನ ಆರ್ಭಟ ನಡೆದಿತ್ತು. ಎದ್ದು ಮುಖ ತೊಳೆದುಕೊಂಡ. ಮನೆಯಲ್ಲಿ ಯಾರು ಕಾಣಿಸಲಿಲ್ಲ. ಅಪ್ಪ ಹೊರಗೆ ಹೋಗಿದ್ದರು, ಅಮ್ಮ ಯಾವುದು ಕೆಲಸದಲ್ಲಿ ಮುಳುಗಿದ್ದರು. ಯಾಕೊ ಹರಿಗೆ ಮಳೆಯಲ್ಲಿ ನೆನೆಯ ಬೇಕೆಂಬ ಆಸೆ ಮೂಡಿತು. ನೇರವಾಗಿ ಟೆರೆಸ್ ಗೆ ನಡೆದ…..

-ಕಿರಣ್. ವ್ಹಿ


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ.. […]

1
0
Would love your thoughts, please comment.x
()
x