ವಿಶಾಲವಾದ ಹಾಲ್. ಕಿಕ್ಕಿರಿದು ತುಂಬಿರುವ ಜನ, ಚಪ್ಪಾಳೆ ಹೊಡೆದಾಗಲೆಲ್ಲ ಸೀಲಿಂಗ್ ಸೀಳಿಹೋಗುವುದೇನೊ ಎಂಬಂತೆ ಭಾಸವಾಗುತ್ತಿತ್ತು. ಅದು ‘ Reflection ‘ ಎಂಬ ಅಂಧಮಕ್ಕಳ ಶಾಲೆಯ ಉದ್ಘಾಟನಾ ಸಮಾರಂಭವಾಗಿತ್ತು.
” ಈಗ ನಮ್ಮೆಲ್ಲರ ಅಕ್ಕರೆಯ ‘Reflection charitable trust’ ನ ಮುಖ್ಯಸ್ಥರಾದ ಶ್ರೀಯುತ ಹರಿಯುವರನ್ನು, ಈ ಸಂಸ್ಥೆಯ ಕುರಿತು ಒಂದೆರಡು ಮಾತನಾಡಬೇಕೆಂದು ಕೋರಿಕೊಳ್ಳುತ್ತೇನೆ.” ಎಂಬ ಆಹ್ವಾನಕ್ಕೆ ಎದ್ದುನಿಂತ ಹರಿ, ವೇದಿಕೆ ಮೇಲೆ ಹೊರಡಲು ಸಿದ್ಧನಾದ. ಚಪ್ಪಾಳೆಗಳ ಸುರಿಮಳೆಯೆ ಹರಿಯಿತು.
” ಎಲ್ಲರಿಗೂ ನಮಸ್ಕಾರ ನಮ್ಮ ಈ ‘Reflection charitable trust’ ಸ್ಥಾಪನೆಯಾಗಿ ಇಂದಿಗೆ ಮೂರು ವರ್ಷಗಳಾದವು.” ಜೋರಾದ ಚಪ್ಪಾಳೆ ಎಲ್ಲೆಡೆ ಕೇಳಿಸಿತು. ” ನಮ್ಮ ಟ್ರಸ್ಟ್ ನ ಮೂರನೇ ಸಂಸ್ಥೆ ಇದಾಗಿದೆ. ಇನ್ನೆರಡು ಸಂಸ್ಥೆಗಳು, ‘Reflection rehabilitation center’ ಹಾಗು ‘Reflection self help’ ಜನರ ಸೇವೆಯಲ್ಲಿ ತೊಡಗಿವೆ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ. ನಾನು ಇದರ ಮುಖ್ಯಸ್ಥನಾಗಿರಬಹುದು, ಆದರೆ ಈ ಒಂದು ಟ್ರಸ್ಟ್ ಹೆಮ್ಮರವಾಗಿ ಬೆಳೆದು ಮನೆ-ಮನಗಳನ್ನು ತಲುಪುವಂತಾಗಲು ಅವಿಶ್ರಾಂತವಾಗಿ ದುಡಿಯುತ್ತಿರುವ ಎಲ್ಲ ಸಹೋದ್ಯೋಗಿಗಳಿಗೂ ನನ್ನ ಅನಂತ ಧನ್ಯವಾದಗಳು. ಅವರಿಗಾಗಿ ಜೋರಾದ ಚಪ್ಪಾಳೆ ಬರಲಿ.” ಮತ್ತೆ ಜೋರಾದ ಚಪ್ಪಾಳೆ ಸದ್ದು ಮೂಲೆಮೂಲೆಗೂ ಹರಡಿತು. ” ಒಂದು ವರ್ಷದ ಹಿಂದೆ, ನಮ್ಮ ಮ್ಯಾನೇಜರ್ ಅರವಿಂದ್ ರವರು ಬಂದು, ನಮ್ಮ ಸಮಾಜದಲ್ಲಿ ಸುಸಜ್ಜಿತವಾದ ಅಂಧರ ಶಾಲೆಯ ಕೊರತೆ ಇದೆ. ಇದನ್ನು ನೀಗಿಸಲು ನಾವು ಒಂದು ಅತ್ಯಾಧುನಿಕ ಶಾಲೆಯನ್ನು ಕಟ್ಟಿಸಬೇಕು ಎಂದಾಗ, ಈ ಯೋಚನೆಯನ್ನು ಯೋಜನೆಯನ್ನಾಗಿ ಪರಿವರ್ತಿಸಿ, ಇಂದು ಈ ಶಾಲೆಯೊಂದಿಗೆ ನಿಮ್ಮೆದುರಿಗೆ ನಿಂತಿದ್ದೇವೆ. ಕೇವಲ ಒಂಭತ್ತು ತಿಂಗಳಲ್ಲಿ ಕಟ್ಟಡವನ್ನು ಕಟ್ಟುವಲ್ಲಿ ಯಶಸ್ವಿಯಾದ ‘ಪವನ್ ಬಿಲ್ಡರ್ಸ್’ ಗೆ ನನ್ನ ಧನ್ಯವಾದಗಳು. ಈ ಸಂಸ್ಥೆ ಒಂದು ನಾನ್ ಪ್ರಾಫಿಟೆಬಲ್ ಸಂಸ್ಥೆಯಾಗಿದೆ. ಕೇವಲ ಪಾಠವನ್ನು ಹೇಳಿಕೊಡುವುದು ಅಷ್ಟೇ ಈ ಸಂಸ್ಥೆಯ ಕೆಲಸವಾಗಿರದೆ, ಕುರುಡುತನವನ್ನು ಹಿಮ್ಮೆಟ್ಟಲು ಬೇಕಾಗುವಂತಹ ವೈದ್ಯಕೀಯ ಸೌಲಭ್ಯಗಳನ್ನೂ ಮಕ್ಕಳಿಗೆ ನಾವು ದೊರಕಿಸಿ ಕೊಡಲಿದ್ದೇವೆ. ಇದಕ್ಕಾಗಿ ಎಲ್ಲಾ ಟ್ರಸ್ಟ್ನ ಸದಸ್ಯರಿಗೆ ಜೋರಾದ ಚಪ್ಪಾಳೆ ಬರಲಿ.” ಎನ್ನುತ್ತಲೇ ಜೋರಾದ ಚಪ್ಪಾಳೆ, ಹಾಲ್ ತುಂಬಾ ಕೇಳಿಸಿತು. ಈ ಸಂಸ್ಥೆಯನ್ನು ಉಳಿಸಿ ಹಾಗೂ ಬೆಳೆಸಲು ತಮ್ಮೆಲ್ಲರ ಸಹಕಾರ ಅಗತ್ಯ. ಹೀಗಾಗಿ ಎಲ್ಲರೂ ನಮ್ಮ ಜೊತೆಗಿದ್ದು, ಸಂಸ್ಥೆಯನ್ನು ಬೆಳೆಸಬೇಕೆಂದು ಕೋರಿಕೊಳ್ಳುತ್ತೇನೆ.
ಇಷ್ಟನ್ನು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ. ಎಲ್ಲರಿಗು ನಮಸ್ಕಾರ.” ಮತ್ತೆ ಚಪ್ಪಾಳೆ ತಟ್ಟಿದರು ಜನ. ತನ್ನ ಮಾತನ್ನು ಮುಗಿಸಿ ಸೀಟಿನ ಮೇಲೆ ಹೋಗಿ ಕುಳಿತ ಹರಿ. ಸಮಾರಂಭ ಮುಂದೆ ಎರಡು ಗಂಟೆಗಳ ಕಾಲ ಮುಂದುವರೆಯಿತು. ಕೆಲವೊಂದಿಷ್ಟು ಜನರ ಭಾಷಣ, ಪಾಲಕರ ಅನಿಸಿಕೆ, ಇತ್ಯಾದಿ. ಸಮಾರಂಭ ಮುಗಿದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಇತ್ತು. ಎಲ್ಲರೂ ಹರಿ ಮತ್ತು ಅವರ ತಂಡವನ್ನು ಪ್ರಶಂಸಿಸುತ್ತಿದ್ದರು. ಊಟವನ್ನು ಹರಿಯೇ ಉಸ್ತುವಾರಿ ತೆಗೆದುಕೊಂಡು, ಯಾವುದೇ ಲೋಪವಿಲ್ಲದೆ ಹಾಕಿಸಿದ. ಊಟ ಮುಗಿದ ನಂತರ ಹಾಲ್ ಖಾಲಿಯಾಯಿತು. ಕೇವಲ ಸಂಸ್ಥೆಯ ಸದಸ್ಯರು ಮಾತ್ರ ಉಳಿದಿದ್ದರು. ಅವರು ಸಹ ಊಟ ಮುಗಿಸಿ ಹೊರಡಲು ಸಿದ್ಧರಾದರು. ಎಲ್ಲರನ್ನೂ ಕಳುಹಿಸಿ ತಾನು ಹೊರಟ. ಅಂದು ಅವನ ಮನಸ್ಸು ಖುಷಿಯಿಂದ ಅರಳಿತ್ತು. ವ್ಯಕ್ತಪಡಿಸಲಾಗದ ಸಂತಸ ಅವನಲ್ಲಿ ಮೂಡಿತ್ತು. ಜನರ ಸೇವೆಯಲ್ಲಿ ತೊಡಗಿದ್ದ ಹರಿಗೆ, ಒಂದು ಬಗೆಯ ಸಂತೃಪ್ತಿ ಮನೆ ಮಾಡಿತ್ತು. ಒಬ್ಬನೇ ಎಲ್ಲಿಗಾದರೂ ಹೋಗಬೇಕು ಎಂದೆನಿಸಿತು. ಬೈಕ್ ರೈಡ್ ಗೆ ಹೋಗದೆ ಎಷ್ಟೊ ತಿಂಗಳುಗಳೇ ಆಗಿಹೋದವು. ಇಂದು ಹೋಗಬೇಕು ಎನಿಸಿತು. ಮನೆಗೆ ಹೋದವನೆ, ” ಅಮ್ಮ ನಾನು ಹೊರಗಡೆ ಹೋಗಬೇಕು. ಬರೋದು ನಾಳೆ ಆಗಬಹುದು.” ಎಂದು ರೂಮಿನೊಳಗೆ ಹೋದವನೇ, ರೆಡಿಯಾಗತೋಡಗಿದ.
” ಅಲ್ವೊ ಹರಿ, ಈಗಷ್ಟೇ ಬಂದಿದೆಯಾ. ಸ್ವಲ್ಪ ರೆಸ್ಟ್ ಮಾಡಬಾರದಾ.” ಎಂದು ಬೈದರು ಅಮ್ಮ.
” ಇಲ್ಲ ಅಮ್ಮ. ಇವತ್ತು ಒಬ್ಬನೇ ಎಲ್ಲಿಗಾದರೂ ಹೋಗಿ ಬರಬೇಕು ಅನ್ನಿಸ್ತಾ ಇದೆ. ಒಂದು ಸಣ್ಣ ಟ್ರಿಪ್ ಗೆ ಹೋಗಿ ಬರ್ತೀನಿ.” ಎಂದು ಕಣ್ಣುಹೊಡೆದ.
” ಏನು ಹುಡುಗನೊ ನೀನು. ಸರಿ, ಸಮಾರಂಭ ಹೇಗಾಯಿತು ಹೇಳಲೇ ಇಲ್ಲವಲ್ಲ?”
” ಚೆನ್ನಾಗಿ ಆಯ್ತಮ್ಮ. ತುಂಬಾನೇ ಖುಷಿಯಾಗ್ತಿದೆ ಇವತ್ತು. ಆದರೆ, ನಮ್ಮ ಅಂಕಲ್ ಒಬ್ಬರು ಮಿಸ್ಸಿಂಗ್. ಎಷ್ಟು ಕಾಲ್ ಮಾಡಿದ್ರೂ ರಿಸೀವ್ ಮಾಡ್ತಿಲ್ಲ. ಎಲ್ಲಿದ್ದಾರೊ ಏನೊ.”
” ಹೌದಾ. ಎಲ್ಲಿಗಾದರೂ ಕೆಲಸದ ಮೇಲೆ ಹೋಗಿರಬಹುದು. ಬರ್ತಾರೆ, ವೇಟ್ ಮಾಡಿ ನೋಡೋಣ.”
” ಹಾ ಅಮ್ಮ.” ಹರಿ ರೆಡಿಯಾಗುತ್ತಲೆ ಅಮ್ಮನ ಜೊತೆಗೆ ಮಾತನಾಡುತ್ತಿದ್ದ.
” ಅಪ್ಪ ಎಲ್ಲಿ ಕಾಣ್ತಾನೆ ಇಲ್ವಲ್ಲ?”
” ಎಲ್ಲೋ ಹೋಗಿರಬೇಕು. ರಿಟೈರ್ಡ್ ಆದಮೇಲೆ ಬೇಜಾರು ಅಂತ ಮನೆಯಲ್ಲಿ ಕೂರುವುದೇ ಇಲ್ಲ. ಕಾಲು ಕಿತ್ತು ಬಿಡ್ತಾರೆ.”
” ಹೋಗ್ಲಿ ಬಿಡು. ಅವರಿಗೂ ಹೇಳ್ಬಿಡು ಹೋಗಿ ಬರ್ತೀನಿ ಅಂತ.”
” ಸರಿ ಕಣೋ ಹುಷಾರು. ಅದೆಲ್ಲಿಗೆ ಹೋಗ್ತಿಯೊ ನಿನಗೆ ಗೊತ್ತು. ಎಲ್ಲಿಗೆ ಹೋಗ್ತೀನಿ ಅಂತನಾದ್ರೂ ಹೇಳಬಾರದ?”
” ಎಲ್ಲಿಗೆ ಹೋಗ್ತಾ ಇದೀನಿ ಅಂತ ನನಗೆ ಗೊತ್ತಿಲ್ಲ ಅಮ್ಮ. ಮನಸ್ಸು ಎಲ್ಲಿಗೆ ದಾರಿ ತೋರಿಸತ್ತೊ ಅಲ್ಲಿಗೆ ಹೋಗ್ತೀನಿ. ಬಾಯ್ ಅಮ್ಮ.”
” ಹುಷಾರು.”
ತನ್ನೆಲ್ಲ ರೈಡಿಂಗ್ ಗೇರ್ ಗಳನ್ನು ಧರಿಸಿ, ಒಂದು ಬ್ಯಾಗನ್ನು ಹಾಕಿಕೊಂಡು ಹೊರಡಲು ಸಿದ್ಧನಾದ. ಮತ್ತೊಮ್ಮೆ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ಹೊರಟ್ಟಿದ್ದು ಅದೇ ಸಪ್ತಗಿರಿಯ ಕಡೆಗೆ. ಅವನ ಮನಸ್ಸಿಗೆ ಗೋಪಾಲ್ ವರ್ಮಾ ಅಲ್ಲಿಯೇ ಇರುತ್ತಾರೆ ಎಂದು ಬಲವಾಗಿ ಅನಿಸುತ್ತಿತ್ತು. ಹೀಗಾಗಿ ನೇರವಾಗಿ ಅಲ್ಲಿಗೆ ಹೊರಟ. ಮಳೆಗಾಲದ ಒಂದು ಸಂಜೆ, ಜೋರಾಗಿ ಮಳೆ ಬರುತ್ತಿತ್ತು. ಎಲ್ಲವೂ ಮರುಕಳಿಸುತ್ತಿದೆ ಎಂಬಂತೆ ಭಾಸವಾಯಿತು. ಸಪ್ತಗಿರಿ ಕಾಟೇಜ್ ತಲುಪಿದಾಗ ಸಂಜೆಯಾಗಿತ್ತು. ತನ್ನ ಬೈಕನ್ನು ಪಾರ್ಕ್ ಮಾಡಿ ರೂಮಿನ ಕಡೆಗೆ ಹೋಗುವಾಗ, ಕಣ್ಣಿಗೆ ಯಾವುದೊ ಪರಿಚಿತ ವ್ಯಕ್ತಿ ನಿಂತಂತೆ ಅನ್ನಿಸಿತು. ದಿಟ್ಟಿಸಿ ನೋಡಿದ, ಅದೇ ಎತ್ತರ, ಅದೇ ಸುತ್ತಳತೆ, ಅದೇ ಸ್ಟೈಲ್. ಅರೆರೆ…..ವರ್ಮಾ ಅಂಕಲ್ ಅವರು. ” ” ಅಂಕಲ್ ” ಎಂದು ಕೂಗುತ್ತಾ ಓಡೆದ. ಹೌದು ಗೋಪಾಲ್ ವರ್ಮಾರವರೇ ಅವರು. ಒಬ್ಬರೇ ನಿಂತು ದೂರದ ಬೆಟ್ಟಗಳನ್ನು ನೋಡುತ್ತಾ, ನಿಸರ್ಗದ ಪ್ರಶಾಂತತೆಯಲ್ಲಿ ಮುಳುಗಿಹೋಗಿದ್ದರು. ಹರಿಯನ್ನು ನೋಡಿ, ” ಹರಿ….. What a pleasant surprise…. ನೀನೇನು ಇಲ್ಲಿ?” ಎಂದರು.
” ಅದೇನೋ ಗೊತ್ತಿಲ್ಲ ಅಂಕಲ್. ಇವತ್ತು ತುಂಬ ಖುಷಿಯಾಗಿದ್ದೀನಿ. ಅದಕ್ಕೆ ಬಂದೆ. ಈ ಬಾರಿಯ ಪ್ರೋಗ್ರಾಮ್ ಮಿಸ್ ಮಾಡಿಕೊಂಡ್ರಿ ನೀವು. ನಿಮಗೆ ಕಾಲ್ ಮಾಡಿ ಮಾಡಿ ಸಾಕಾಯ್ತು. ನೀವು ಕೂಡ ಇಲ್ಲೆ ಇರಬಹುದೆಂದು ತುಂಬಾನೇ ಅನಿಸ್ತಾ ಇತ್ತು. ಅದಕ್ಕೆ ಇಲ್ಲಿಗೆ ಬಂದ್ಬಿಟ್ಟೆ. ಏನಾಯ್ತು ನಿಮಗೆ? ಯಾಕೆ ಬಂದಿದ್ದೀರಿ?”
” ಸಾರಿ…..ಏನ್ ಮಾಡ್ಲಿ. ಇಲ್ಲಿ ನೆಟ್ವರ್ಕ್ ಬರಲ್ಲ ಅಂತ ನಿನಗೆ ಗೊತ್ತಿಲ್ಲ. ನಾನು ಹೀಗೆ ಸುಮ್ಮನೆ ಬಂದೆ. ತುಂಬಾ ದಿನ ಆಗಿತ್ತು ಇಲ್ಲಿಗೆ ಬರದೆದೆ. ಹೀಗಾಗಿ ಕಳೆದ ವಾರ ಇಲ್ಲಿಗೆ ಬಂದೆ.”
” ಹೌದಾ. ಇರ್ಲಿ ಬಿಡಿ ಅಂಕಲ್. ಇವತ್ತು ಮತ್ತೊಂದು ಶಾಲೆ ಪ್ರಾರಂಭವಾಯಿತು. ಅದೂ ಅಂಧ ಮಕ್ಕಳ ಶಾಲೆ ಅಂಕಲ್.”
” ಓಹ್…… ಕಂಗ್ರಾಜುಲೇಷನ್ಸ ಯಂಗ್ ಮ್ಯಾನ್. Proud of you…! ”
” ಥ್ಯಾಂಕ್ಯು ಅಂಕಲ್. ಇದೆಲ್ಲ ಸಾಧ್ಯವಾದದ್ದು ನಿಮ್ಮಿಂದಲೇ, ನಿಮ್ಮ ಮಾತುಗಳಿಂದಲೇನೆ.”
” ನಾನೇನು ಮಾಡಿದೆನಪ್ಪ. It’s all your efforts.”
” ಸುಮ್ನಿರಿ ಅಂಕಲ್….ನಿಮಗೆ ನೆನಪಿದೆನಾ? ಅವಾಗ ನೀವು ನನಗೆ ಪರಿಚಯವಾದದ್ದು. ಎಲ್ಲವನ್ನು ಅರ್ಥೈಸಿ, ನಂತರ ಹೋಗುವಾಗ ಗಿಫ್ಟ್ ಜೊತೆಗೆ ಒಂದು ಲೆಟರ್ ಕೂಡ ಕೊಟ್ಟಿದ್ದು. ಅಬ್ಬಾ….! ಅದೆ ಅಂಕಲ್ ನನ್ನ ಬದಲಾಯಿಸಿದ್ದು.”
” ಹೌದು ನಂಗೆ ನೆನಪಿದೆ.”
” ನಂತರ, ಅವತ್ತು ನಾನು ಬೆಂಗಳೂರಿಗೆ ಹೋಗಿ, ಮಾರನೇ ದಿನವೆ ರಿಸೈನ್ ಕೂಡ ಮಾಡಿದ್ದೆ. ಇದ್ದಬಿದ್ದ ಹಣವನ್ನೆಲ್ಲ ಸೇರಿಸಿ ಒಂದು ಕಂಪನಿ ಸ್ಟಾರ್ಟ್ ಮಾಡಿದೆ. ಯಶಸ್ಸು ಕೂಡ ಸಿಕ್ಕಿತು. ಈಗ ಈ ಸಂಸ್ಥೆಗಳನ್ನೆಲ್ಲ ನೋಡಿದರೆ ತುಂಬಾನೇ ಖುಷಿಯಾಗುತ್ತೆ ಅಂಕಲ್. ಇದೆಲ್ಲ ಸಾಧ್ಯವಾದದ್ದು ನಿಮ್ಮಿಂದಲೇ, ನಿಮ್ಮ ಮಾತುಗಳಿಂದಲೇ. ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು.”
” ಹ್ಹ……ಹ್ಹ……ಒಟ್ಟಿನಲ್ಲಿ ನನ್ನ ದೊಡ್ಡ ಅವತಾರ ಪುರುಷನನ್ನಾಗಿ ಮಾಡಿಬಿಟ್ಟೆ ಅನ್ನು.”
” ಒಂದು ರೀತಿಯಲ್ಲಿ ನೀವು ಅವತಾರ ಪುರುಷರೆ ಅಂಕಲ್.” ಎಂದು ಕೈಮುಗಿದ.
” ಸಾಕು ಮಾಡಪ್ಪ ನಿನ್ನ ಈ ಹುಚ್ಚಾಟವನ್ನು….ಹ್ಹ….ಹ್ಹ….. ಅಂದ್ಹಾಗೆ ಹರಿ, ನಾನೊಂದು ಹೊಸ ಬುಕ್ ಬರೀಬೇಕು ಅಂದುಕೊಳ್ತಾ ಇದ್ದೀನಿ.”
” ಹೌದಾ… ವೆರಿ ನೈಸ್. ಯಾವ ಟಾಪಿಕ್ ಮೇಲೆ ಅಂಕಲ್?”
” ನಿನ್ನ ಜೀವನದ ಆಧಾರದ ಮೇಲೆನೆ ಹರಿ. ಅದರ ಹೆಸರು ಏನಿಡಬೇಕು ಅನ್ಕೊಂಡಿದ್ದೀನಿ ಗೊತ್ತಾ?
-ಅಂತರಾಗ್ನಿ….!”
-ಕಿರಣ್. ವ್ಹಿ
ಮುಗಿಯಿತು..