ಅಂತರಾಗ್ನಿ: ಕಿರಣ್. ವ್ಹಿ

ಧೋಧೋ ಎಂದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ನೆಲವೆಲ್ಲ ತೋಯ್ದು ಘಮ್ ಎಂದು ಹೊರಸೂಸುವ ಮಣ್ಣಿನ ಸುವಾಸನೆಗೆ ಎಂತಹವರೆ ಆದರು ಮೈಮರೆಯುವರು. ಅಂತಹ ಸಮಯವದು. ಸಂಜೆಯಾಗಿದ್ದರಿಂದ, ಸೂರ್ಯ ತನ್ನ ಪ್ರತಾಪವನ್ನು ಇಳಿಮುಖಗೊಳಿಸಿ ಮರಳುತ್ತಿದ್ದ. ದೂರದ ಬಾನಂಚಿನಲ್ಲಿ ಮುಳುಗುತ್ತಿದ್ದ  ನೇಸರನನ್ನೆ ದಿಟ್ಟಿಸಿ ನೋಡುತ್ತಿದ್ದ ಹರಿ. ಅವನ ಮನಸ್ಸು ಅಲ್ಲಿರಲಿಲ್ಲ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವಂತೆ ನಿಂತಿದ್ದ. ರಪರಪನೆ ಹೊಡೆಯುವ ಹೊಡೆತವು ಅವನ ಅರಿವಿಗೆ ಬರಲಿಲ್ಲ.

“ಥೋ  ಇದೇನು ಮಳೆ. ಬೆಳಗ್ಗೆಯಲ್ಲ ನೆತ್ತಿ ಸುಡುವಂತೆ ಬಿಸಿಲಿರತ್ತೆ. ಈಗ ನೋಡಿದ್ರೆ ಹಿಂಗೆ ಎನ್ನುತ್ತಾ ಧಪ್-ಧಪ್ ಹೆಜ್ಜೆಹಾಕುತ್ತ, ಹರಿಯ ತಾಯಿ ಸೀತಾ ಅವರು ಬಂದರು. ನೆನೆಯುತ್ತಾ ನಿಂತಿದ್ದ ಹರಿಯನ್ನು ನೋಡಿ, “ಅಯ್ಯೋ ಇದೇನೊ ಹುಚ್ಚ, ಇಷ್ಟು ಜೋರಾಗಿ ಮಳೆ ಬರ್ತಿದೆ ಹಂಗೇ ನಿಂತಿದಿಯಲ್ಲ, ನಡಿ ಕೆಳಗೆ.” ಎಂದು ಬೈದರು. ಅವರ ಮಾತಿಗೆ ಯಾವುದೇ ಉತ್ತರ ಬಾರದಿದ್ದಕ್ಕೆ ” ಏ ಹರಿ ಏನಾಯ್ತು? ನಡಿ ಕೆಳಗೆ.” ಎಂದು ಜೋರಾಗಿ ಕೂಗಿದರು.

”  ಹಾ ….?ಏನು ಇಲ್ಲ ಅಮ್ಮ”  ಎಂದು ಹೇಳಿ, ಪೆಚ್ಚುಮೋರೆ ಹಾಕಿಕೊಂಡು ದಡದಡನೆ ಕೆಳಗಿಳಿದು ಹೋಗಿಬಿಟ್ಟ.

“ಥೋ ಏನು ಹುಡುಗರಪ್ಪ ಇವರು, ಮಳೆಯನ್ನಲ್ಲ ಚಳಿಯನ್ನಲ್ಲ ಎಲ್ಲೆಂದರಲ್ಲಿ ನಿಂತು ಬಿಡುತ್ತಾರೆ” ಅಂತ ಗೊಣಗುತ್ತ, ಮೇಲೆ ಒಣ ಹಾಕಿದ ಅಕ್ಕಿಯನ್ನು ಗಂಟುಕಟ್ಟಿ ತೆಗೆದುಕೊಂಡು ಹೋದರು.

ಒದ್ದೆ  ಕಾಲಿನಲ್ಲೆ  ಮನೆಯ ತುಂಬಾ ನಡೆದುಕೊಂಡು ಹೋಗಿ ಮನೆಯಲ್ಲ ಹಸಿ ಮಾಡಿಬಿಟ್ಟ. ಕಾಲು ಒರೆಸಿಕೊಂಡು ಹೋಗಬೇಕೆಂದು ಸಹ ಅವನ ಅರಿವಿಗೆ ಬರಲಿಲ್ಲ. ರೂಮಿನೊಳಗೆ ಹೋದವನೆ ಬಾಗಿಲನ್ನು ಹಾಕಿಕೊಂಡು, ಬಾತ್ ರೂಮಿಗೆ ಹೋದ.ಕೊರೆಯುವ ಚಳಿ ಅವನನ್ನು ಈ ಲೋಕಕ್ಕೆ ಮರಳಿಸಿತು. ಗೀಸರ್ ಆನ್ ಮಾಡಿ ನೀರು ಬಿಸಿ ಆಗಲೆಂದು ಸ್ವಲ್ಪ ಹೊತ್ತು ಅಲ್ಲೇ ಕುಳಿತ. ನೂರೆಂಟು ವಿಚಾರಗಳು, ಮುಂದೆ ಏನು ಮಾಡಬೇಕೆಂದು ತೋಚಲಿಲ್ಲದು ಅವನಿಗೆ. ಏನೋ ನೆನಪಾಗಿ ಅಳು ಒಳಗಿನಿಂದ ಗುದ್ದಿಕೊಂಡು ಬಂತು. ಎಷ್ಟೇ ಪ್ರಯತ್ನಿಸಿದರು ತಡೆಯಲಾಗಲಿಲ್ಲ. ಹೊರಗೆ ಶಬ್ದ ಕೇಳಿಸೀತು ಎಂದು ಜೋರಾಗಿ ನೀರು ಬಿಟ್ಟ. ಅತ್ತು-ಅತ್ತು ಕಣ್ಣುಗಳು ಊದಿಕೊಂಡುಬಿಟ್ಟವು. ಕಣ್ಣುಗುಡ್ಡೆಗಳು ಕೆಂಡದಂತಾಗಿದ್ದವು. ಟಕ್ ಎಂದು ಗೀಜರ್ ನಿಂದ ಶಬ್ದ ಬರುತ್ತಲೇ, ಬಿಸಿನೀರು, ತಣ್ಣೀರು ಎರಡನ್ನು ಹದವಾಗಿ ಬರಲೆಂದು ಎರಡು ನಲ್ಲಿಗಳನ್ನು ತಿರುಗಿಸಿ, ಅಡ್ಜಸ್ಟ್ ಮಾಡಿಕೊಂಡ. ಅದೆಷ್ಟು ಹೊತ್ತು ನಿಂತಿದ್ದನೊ ಏನೊ. ಬಿಸಿ ನೀರು ಖಾಲಿಯಾಗಿ ತಣ್ಣೀರು ಬರಲಾರಂಭಿಸಿತ್ತು. ನೀರು ಬರುತ್ತಿದ್ದುದನ್ನು ನೋಡಿ ಬಂದು ಮಾಡಿ ಸ್ನಾನ ಮಾಡಲು ಮುಂದಾದ.

“ಹರಿ…ಹರಿ ಬಾರೊ ಹೊರಗೆ. ಬಿಸಿ ಬಿಸಿ ಕಷಾಯ ಮಾಡಿಕೊಡ್ತಿನಿ, ಕುಡಿಯುವಂತೆ” ಎಂದು ಕರೆದರು ಅಮ್ಮ. ಎಷ್ಟೇ ಕೂಗಿದರು ಬಾಗಿಲು ತೆಗೆಯಲಿಲ್ಲ ಹರಿ. ಒಂದೆರಡು ನಿಮಿಷ  ಬಾಗಿಲ ಮುಂದೆ ನಿಂತು, ಏನು ಮಾಡಬೇಕೆಂದು ತೋಚದೆ ಸುಮ್ಮನೆ ಹೊರಟು ಹೋದರು. ಒಂದೆರಡು ಗಂಟೆಯ ನಂತರ ಹರಿಯೇ  ಹೊರಗೆ ಬಂದ.

“ಬಾರೊ ಕಷಾಯ ಕುಡಿ.” ಎಂದು ಕರೆದರು ಅಮ್ಮ.

” ಬೇಡ ಅಮ್ಮ. ನಂಗೆ ಕುಡಿಯೋ ಮೂಡ್ ಇಲ್ಲ ಈಗ. ”

” ಸರಿ. ಏನಾದ್ರೂ ತಿಂತೀಯಾ? ಏನಾದ್ರೂ ಮಾಡಿಕೊಡ್ಲಾ?”

” ಏನೂ ಬೇಡ ಅಂತ ಹೇಳಿದೆನಲ್ಲ ಅಮ್ಮ. ಸುಮ್ನೆ ಅದು ಬೇಕಾ…ಇದು ಬೇಕಾ ಅಂತ ಕೇಳ್ತಾ ಇರಬೇಡ.” ಎಂದು ರೇಗಿದ. ಮಗನ ಮನಸ್ಸು ಯಾಕೋ ಸರಿಯಿಲ್ಲವೆಂದು ಸುಮ್ಮನಾಗಿಬಿಟ್ಟರು. ಫ್ರಿಜ್ಜಿನಲ್ಲಿದ್ದ ಜ್ಯೂಸ್ ಬಾಟಲನ್ನು ತೆಗೆದು ಕುಡಿದು ಮತ್ತೆ ರೂಮಿನೊಳಗೆ ಹೋದ. ಇವನಿಗೇನಾಯಿತೋ ಏನೋ ಎಂದು ಚಿಂತಿಸತೊಡಗಿದರು ಸೀತಮ್ಮನವರು. ಅವನ ಅಪ್ಪ ಬಂದಮೇಲೆ ಅವರೇ ವಿಚಾರಿಸಲಿ ಎಂದು ಸುಮ್ಮನಾದರು.

ಕೆಲಹೊತ್ತಿನ ನಂತರ ರೂಮಿನಿಂದ ದಡಬಡ ಶಬ್ದ ಕೇಳಿಸಿತು.ಏನಾಯ್ತು ಎಂದು ನೋಡಲು ಹೊರಡುವಷ್ಟರಲ್ಲಿ ಹರಿಯೇ ಹೊರಗಡೆ ಬಂದ .ಅವನ ಕೈಯಲ್ಲಿ ಹೆಲ್ಮೆಟ್ ಇತ್ತು ಜಾಕೆಟ್ ಧರಿಸಿದ್ದ ಎಲ್ಲಿಗೂ ಹೋಗುವವನಂತೆ  ರೆಡಿಯಾಗಿದ್ದ. ಅವನನ್ನ ನೋಡಿಯೆ ಎಲ್ಲಿಗೋ ದೂರ ಹೊರಟಿದ್ದಾನೆ ಎಂದು ಊಹಿಸಿದರು ಸೀತಮ್ಮ.

“ಫ್ರೆಂಡ್ಸ್ ಜೊತೆ ಹೋಗ್ತಾ ಇದೀಯ?” ಎಂದು ಕೇಳಿದರು.

” ಇಲ್ಲ ಒಬ್ಬನೇ ಹೋಗ್ಬೇಕು ಅನ್ನಿಸ್ತಿದೆ.”

” ಎಲ್ಲಿದೆ ಅಂತನಾದ್ರೂ ಹೇಳಿಹೋಗೊ ಹರಿ……..” ಎಂದು ಹೋಗುತ್ತಿರುವಾಗಲೇ ಹರಿ ಮನೆಯ ಹೊರಕ್ಕೆ ಕಾಲಿರಿಸಿದ್ದ.

” ಮಳೆ ಜೋರಾಗಿದೆ ನಿಂತ ಮೇಲಾದರೂ ಹೋಗಬಾರ್ದೆ.” ಎಂದು ಕೂಗುತ್ತಿರುವುದು ಅವನ ಕಿವಿಯ ಮೇಲೆ ಬೀಳಲೇ ಇಲ್ಲ. ಹಾಗೆಯೇ ಹೊರಡಲು ಸಿದ್ಧನಾದ. ಅವನ ಅಪ್ಪ ಬಂದರೆ ಅವರಿಗೆ ಏನಂತ ಹೇಳಬೇಕು, ಎಂದು ಚಿಂತೆಗೊಳಗಾದರು ಸೀತಮ್ಮನವರು. ಹರಿಗೆ ಅದ್ಯಾವುದರ ಚಿಂತೆಯೇ ಇರಲಿಲ್ಲ. ಎಲ್ಲಾದರೂ ದೂರ ಹೋಗಬೇಕು ಎಂದು ದೃಢವಾಗಿ ನಿಶ್ಚಯಿಸಿ ಬಿಟ್ಟಿದ್ದ. ಬಹುಷಃ  ಅವನ ತಂದೆಯಿಂದಲೂ ಅವನನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲವೇನೋ.

ಹರಿ ಹೊರಟುಹೋಗಿ ಎರಡು ಗಂಟೆಗಳು ಕಳೆದಿದ್ದವು. ಇನ್ನೇನು ಯಜಮಾನರು ಬರುವ ಹೊತ್ತಾಯಿತು, ಏನು ಉತ್ತರಿಸಬೇಕು ಎಂದು ಚಿಂತೆಗೊಳಗಾದರು. ಪ್ರತಿದಿನ ಆಫೀಸಿನಿಂದ ಬಂದ ಮೇಲೆ ಮಗನ ಬಗ್ಗೆ ವಿಚಾರಿಸಿ ಮುಂದಿನ ಕೆಲಸವನ್ನು ಮಾಡುತ್ತಿದ್ದರು, ವಿಶ್ವನಾಥರಾಯರು. ಇದನ್ನು ನೆನೆಸಿಕೊಂಡು ಮತ್ತಷ್ಟು ಗಾಬರಿಯಾದರು ಸೀತಮ್ಮನವರು. ಮನೆಗೆ ಬಂದವರೇ ಚಹಾ ಕುಡಿಯುತ್ತಾ,” ಎಲ್ಲಿದ್ದಾನೆ ಮಗರಾಯ? ಕಾಣಿಸುತ್ತಿಲ್ಲವಲ್ಲ.” ಎಂದು ಕೇಳಿದರು. ಏನು ಹೇಳಬೇಕೆಂದು ತಿಳಿಯದೆ, ತಬ್ಬಿಬ್ಬಾದರು ಸೀತಮ್ಮ. ಪತ್ನಿಯ ಮುಖವನ್ನು ನೋಡಿ ಏನೋ ಆಗಿದೆ ಎಂದು ಊಹಿಸಿದರು ವಿಶ್ವನಾಥರಾಯರು.

” ಏನಾಯ್ತು ಹೇಳು? ಎಲ್ಲಿ ಹರಿ?” ಎಂದು ಮತ್ತೆ ಕೇಳಿದರು. ಈ ಬಾರಿ ಅವರಿಗೆ ತಡೆಯಲಾಗಲಿಲ್ಲ, ಅಳುತ್ತಾ ನಡೆದದ್ದನ್ನೆಲ್ಲ ವಿವರಿಸಿದರು. ವಿಶ್ವನಾಥರಾಯರು ಕೂಡ ಗಾಬರಿಯಾದರು. ಬೆಳೆದ ಮಗ ಇದ್ದಕ್ಕಿದ್ದಂತೆ ಹೀಗೆ ಮನೆ ಬಿಟ್ಟು ಹೋದರೆ ಏನೆಂದು ತಿಳಿಯಬೇಕು? ಎಲ್ಲಿಗೆ ಹೋದನೊ ಎಂದು ಚಿಂತೆಗೊಳಗಾದರು. ಕೂಡಲೇ ಮಗನಿಗೆ ಕರೆ ಮಾಡಿದರು.ಆದರೆ ಹೋಗಲಿಲ್ಲ, ನಾಟ್ ರೀಚಬಲ್ ಎಂದು ಬಂತು. ಮತ್ತಷ್ಟು ಗಾಬರಿಯಾದರು. ಕೂಡಲೇ ಅವನ ಸ್ನೇಹಿತ  ಅವಿನಾಶ್ ಗೆ ಕರೆ ಮಾಡಿದರು.

“ಹಲೋ ಅವಿನಾಶ್ ನಾನು ಹರಿಯ ಅಪ್ಪ ಮಾತನಾಡೋದು. ಹರಿ ಅಲ್ಲಿಗೇನಾದರೂ ಬಂದಿದ್ದಾನಾ? ಅಥವ ಎಲ್ಲಿಗೆ ಹೋಗ್ತೀನಿ ಅಂತ ಹೇಳಿದ್ದಾನಾ? ಗಾಡಿ ಹತ್ತಿ ಹೋದನು ಇನ್ನು ಮನೆಗೆ ಬಂದಿಲ್ಲ. ಕಾಲ್ ಕೂಡ ಕನೆಕ್ಟ್ ಆಗ್ತಿಲ್ಲ. ಅದಕ್ಕೆ ನಮಗೆ ಟೆನ್ಶನ್ ಆಗ್ತಿದೆ.”

” ಹಲೋ ಅಂಕಲ್ ಹರಿ ಇಲ್ಲಿಗೇನು ಬಂದಿಲ್ಲ. ಆದ್ರೆ ಒಬ್ಬನೇ ಎಲ್ಲಿಗಾದರೂ ಹೋಗಿರಬಹುದು. ಅದೇನೋ ಆಫೀಸ್ನಲ್ಲಿ ಬಾಸ್ ಕಿರಿಕಿರಿ ಅಂತ ಹೇಳ್ತಿದ್ದ ಮೊನ್ನೆ. ಬರ್ತಾನೆ ಬಿಡಿ, ನೀವೇನು ಟೆನ್ಶನ್ ಮಾಡ್ಕೋಬೇಡಿ. ನಾನು ವಿಚಾರಿಸಿ ಹೇಳ್ತೀನಿ ನಿಮಗೆ.” ಹರಿ ಯಾಕೆ ಹೀಗೆ ಮಾಡಿದ, ಅಲ್ಲೇನಾಗಿದೆ ಎಂದು ಅವನಿಗೆ ಅರ್ಥವಾಗಿತ್ತು. ಹೀಗಾಗಿ ಹರಿಯ ತಂದೆಗೆ ಸಮಾಧಾನದ ಮಾತುಗಳನ್ನು ಹೇಳಿ, ರಾತ್ರಿಯೊಳಗಾಗಿ ಬರಬಹುದೆಂದು ಹೇಳಿ ಕಾಲ್ ಕಟ್ ಮಾಡಿದ.

ಅವಿನಾಶನ ಜೊತೆ ಮಾತನಾಡಿದ ಮೇಲೆ ಇಬ್ಬರಿಗೂ ಸಮಾಧಾನವಾಯಿತು. ರಾತ್ರಿ ಹೊತ್ತಿಗೆ ಬರಬಹುದೆಂದು ಸುಮ್ಮನಾದರು.

” ಅದೇಲ್ಲಿಗೆ ಹೋದ್ನೊ ನಿನ್ನ ಮಗ. ವಿಚಿತ್ರವಾಗಿ ಆಡ್ತಾನೆ. ಕಾಲ್ ಕನೆಕ್ಟ್ ಆದ್ರೆ ಹೇಳು.” ಎಂದು ಗೊಣಗುತ್ತಾ ವಿಶ್ವನಾಥರಾಯರು ರೂಮಿನೊಳಗೆ ಹೊರಟು ಹೋದರು.

ಒಂಭತ್ತುವರೆಗೆ, ಅವಿನಾಶ್ ಸೀತಮ್ಮನವರಿಗೆ ಕಾಲ್ ಮಾಡಿ ,ಹರಿ, ಸಪ್ತಗಿರಿ ಕಡೆಗೆ ಹೋಗಿದ್ದೇನೆ, ಒಂದೆರಡು ದಿನ ಬಿಟ್ಟು ಬರುತ್ತೇನೆ ಎಂದು ಮೆಸೇಜ್ ಮಾಡಿದ್ದಾನೆ. ಇನ್ನೊಂದೆರಡು ದಿವಸ ಬಿಟ್ಟು ಬರಬಹುದೆಂದು ಸುಳ್ಳು ಹೇಳಿ, ಅವರನ್ನು ಸಮಾಧಾನ ಪಡಿಸಿದ. ಆದರೆ ಅವನು ಹೇಳಿದ್ದು ಸತ್ಯವೇ ಆಗಿತ್ತು…!

*****

ಮಳೆಯ ಹೊಡೆತವನ್ನು ಲೆಕ್ಕಿಸದೆ ಚಲಿಸುತ್ತಿರುವ ಗಾಲಿಗಳು. ಶಕ್ತಿ ಗಾಲಿಗಳದಲ್ಲ ಚಾಲಕನದು. ಹೌದು ಮಳೆಯ ಹೊಡೆತವನ್ನೂ ಲೆಕ್ಕಿಸದೆ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ಓಡಿಸುತ್ತಿದ್ದ ಹರಿ. ತತ್ಪರ ಕಣ್ಣುಗಳು, ಗುರಿಯಿಲ್ಲದ ಪಯಣ, ಒಂದೇಸಮನೆ ಚಲಿಸುತ್ತಿದ್ದಾನೆ. ಮಳೆ ರಪರಪನೆ ಸುರಿಯುತ್ತಲೇ ಇತ್ತು. ಕೊಂಚ ದೂರ ಪಯಣಿಸಿದ ನಂತರ ಅವನಿಗೆ ಅರಿವಾಯಿತು, ತಾನು ಸಪ್ತಗಿರಿಯ ಕಡೆಗೆ ಹೊರಟಿದ್ದೇನೆಂದು. ಸಪ್ತಗಿರಿ, ಬೆಂಗಳೂರಿನಿಂದ ನೊರ ಐವತ್ತು ಕಿಲೋಮೀಟರ್ ದೂರದಲ್ಲಿತ್ತು. ರಜೆ ಬಂದಾಗಲೆಲ್ಲ ಸ್ನೇಹಿತರ ಜೊತೆ ಕಾಲಕಳೆಯಲು ಹೋಗುತ್ತಿದ್ದ. ಆ ದಾರಿ  ಹೊಸತೇನಾಗಿರಲಿಲ್ಲ ಅವನಿಗೆ. ಮೊದಮೊದಲು, ಬೈಕ್ ಇಲ್ಲದಿದ್ದಾಗ, ಸ್ನೇಹಿತರ ಬೈಕ್ ಏರಿ ಬಂದು ಬಿಡುತ್ತಿದ್ದ. ನಂತರ ಇಂಜಿನಿಯರಿಂಗ್ ನ ಎರಡನೇ ವರ್ಷದಲ್ಲಿದ್ದಾಗ, ಅಪ್ಪನನ್ನು ಕಾಡಿ ಬೇಡಿ ರಾಯಲ್ ಎನ್ಫೀಲ್ಡ್ ಬೈಕ್ ತೆಗೆಸಿಕೊಂಡಿದ್ದ. ಬೈಕ್ ಕೊಡಿಸಲು ಹಣದ ಕೊರತೆ ಇಲ್ಲದಿದ್ದರೂ, ಮಗ ಹಾಳಾಗಿ ಬಿಡುತ್ತಾನೆಂದು ವಿಶ್ವನಾಥರಾಯರು ಮೊದಲಿಗೆ ನಿರಾಕರಿಸಿದ್ದರು. ಒಂದುದಿನ ಹರಿಯ ಹಟ ಅಂತಿಮ ಹಂತವನ್ನು ತಲುಪಿದ್ದರಿಂದ ಸೀತಮ್ಮನವರು,” ಏನೊ ಮಗ ಕೇಳ್ತಾ ಇದ್ದಾನೆ, ಒಂದು ಬೈಕ್ ಕೊಡಿಸಿ ಬಿಡಬಾರ್ದೆ. ಅದೆಷ್ಟು ಹಠ ನಿಮ್ದು.” ಎಂದು ಬೈದಿದ್ದರು.

” ನಾನು ಹಟ ಮಾಡ್ತಾ ಇದ್ದೀನಿ ಅಥವಾ ನಿನ್ನ ಮಗನಾ? ಬರಿ ಮಗನ ಪರ ವಹಿಸಿಕೊಂಡು ಮಾತಾಡೋದೆ ಆಯ್ತು ಜೀವನ.” ಎಂದು ಕೈಯಲ್ಲಿದ್ದ ಪೇಪರನ್ನು ರಪ್ಪನೆ ಎಸೆದು, “ಇನ್ನೊಂದೆರಡು ತಿಂಗಳು ಬಿಟ್ಟು ಕೊಡುಸ್ತೀನಿ ಅಂತ ಹೇಳು ನಿನ್ನ ಮಗನಿಗೆ.” ಎಂದು ಎಂದು ರೂಮಿನೊಳಗೆ ಹೋಗಿದ್ದರು. ಮಾತುಕೊಟ್ಟಂತೆ ಅಪ್ಪ, ಹರಿಗೆ ಹೊಸ ಬೈಕನ್ನು ಕೊಡಿಸಿದ್ದರು. ಅಂದಿನ ದಿನ ಹರಿಯ ಖುಷಿಗೆ ಪಾರವೇ ಇರಲಿಲ್ಲ. ಊರೆಲ್ಲ ಸುತ್ತಿಕೊಂಡು ಬಂದು ” ಥ್ಯಾಂಕ್ಯು ಅಪ್ಪ” ಎಂದು ಅಪ್ಪನನ್ನು ಬಿಗಿದಪ್ಪಿದ್ದ.

” ಅಣ್ಣ ಒಂದ್ ಟೀ …..” ಎಂದು ಅಂಗಡಿಯವನಿಗೆ, ಕೈಯಲ್ಲಿ ಧರಿಸಿದ್ದ ಗ್ಲೌಸನ್ನು ಬಿಚ್ಚುತ್ತಾ ಹೇಳಿದ ಹರಿ. ರೈಡಿಂಗ್ ಜಾಕೆಟ್, ಗ್ಲೌಸ್, ಹೆಲ್ಮೆಟ್ ಎಲ್ಲವನ್ನು ಯಾವಾಗ ಧರಿಸಿದ್ದನೆಂದೇ ಗೊತ್ತಿರಲಿಲ್ಲ ಅವನಿಗೆ.

” ಏನ್ ಹರಿ ಅಣ್ಣ ಇತ್ತೀಚೆಗೆ ಈಕಡೆ ಬಂದೇ ಇಲ್ಲ?” ಎಂದು ಟೀ ಕೊಡುತ್ತಾ’ ಟೀ ಪಾಯಿಂಟ್ ಸತೀಶ ಕೇಳಿದ. ಸತೀಶ ಮತ್ತು ಹರಿಯ ನಡುವೆ ನಾಲ್ಕು ವರ್ಷಗಳ ಗೆಳೆತನವಿತ್ತು. ಸಪ್ತಗಿರಿಗೆ ಬಂದಾಗಲೆಲ್ಲ, ಸ್ನೇಹಿತರ ಜೊತೆ ಟೀ ಕುಡಿದು, ಏನಾದರೂ ಬಿಸಿಬಿಸಿ ಸ್ನಾಕ್ಸ್ ತಿಂದೇ ಹೋಗುತ್ತಿದ್ದರು.

” ಹಿಂಗೆ ಸತೀಶಣ್ಣ, ಕೆಲಸ ಅಂತ ಬ್ಯೂಸಿ ಆಗ್ಬಿಟ್ಟೆ, ಟೈಮೇ ಸಿಕ್ಕಿರಲಿಲ್ಲ”

” ಓಹ್  ಹೌದಾ…! ತಿನ್ನೋಕೆ ಏನಾದ್ರೂ ಕೊಡ್ಲಾ?. ಹಸಿವಾಗಿರಬೇಕು.” ಬೆಳಿಗ್ಗೆಯಿಂದ ಏನೂ ತಿನ್ನದೇ ಇದ್ದಿದ್ದರಿಂದ ಹೊಟ್ಟೆ ತಾಳ ಹಾಕುತ್ತಿತ್ತು. ಈ ಅಂಗಡಿ ಬಿಟ್ಟರೆ ಮುಂದೇನು ಸಿಗುವುದಿಲ್ಲವೆಂದು ಹರಿಗೆ ಚೆನ್ನಾಗಿ ಗೊತ್ತಿತ್ತು, ಯಾಕೆಂದರೆ ಮುಂದೆ ಇದ್ದುದ್ದೆಲ್ಲ ಕಾಡು ಮಾತ್ರ.

ಟೈಮ್ ನೋಡಿಕೊಂಡ. ಮಧ್ಯಾಹ್ನ ಮೂರಾಗಿತ್ತು. ಈಗ ಬಿಟ್ಟರೂ ರಾತ್ರಿ ಎಂಟರ ವೇಳಗೆ ಸಪ್ತಗಿರಿ ತಲುಪಬಹುದೆಂದು ಲೆಕ್ಕ ಹಾಕಿದ. ಟೀ ಕುಡಿಯುತ್ತ ಕುಳಿತಾಗ, ಹಳೆಯದಲ್ಲ ಸಿನಿಮಾದಂತೆ ಕಣ್ಣೆದುರು ಬಂದುಹೋಯಿತು. ಅವನ ಕಣ್ಣುಗಳು ತೇವಗೊಂಡವು. ನೋಡನೋಡುತ್ತಲೇ ಮೂರೂವರೆಯಾಗಿಬಿಟ್ಟಿತು. ಮಳೆಯೂ ನಿಂತಿತ್ತು. ಈಗಲೇ ಹೊರಟರೆ ಒಳ್ಳೆಯದು ಎಂದು ಹೊರಡಲು ಸಿದ್ಧನಾದ.

” ಎಷ್ಟಾಯ್ತು ? “ಎಂದು ಸತೀಶನಿಗೆ ಕೇಳಿದ ಹರಿ.

” ಒಂದು ಪ್ಲೇಟ್ ಬೋಂಡಾ, ಒಂದು ಟೀ  ಅಲ್ವಾ? ಐವತ್ತು ರೂಪಾಯಿ ಆಯ್ತು.” ಎಂದ.

“ತಗೋ…..ಬರ್ತೀನಿ ಸತೀಶಣ್ಣ.”

” ಆಯ್ತು. ಮತ್ತೆ ಬನ್ನಿ.” ಎಂದ ಸತೀಶ. ಹರಿ, ತನ್ನ ಜಾಕೆಟ್, ಗ್ಲೌಸ್ ಹಾಗು ಹೆಲ್ಮೆಟ್ ಧರಿಸಿ ಬೈಕ್ ಸ್ಟಾರ್ಟ್ ಮಾಡಿ, ಪ್ರಯಾಣ ಮುಂದುವರಿಸಿದ.

“ಸಪ್ತಗಿರಿ ಸಂರಕ್ಷಿತ ಅರಣ್ಯ ಪ್ರದೇಶ ಆರಂಭ. ನಿಧಾನವಾಗಿ ಚಲಿಸಿರಿ” ಎಂಬ ಬೋರ್ಡನ್ನು ಓದಿದ. ಅದು ಎಷ್ಟನೇ ಬಾರಿ ಓದುತ್ತಿದ್ದಾನೊ, ಅವನಿಗೆ ನೆನಪಿಲ್ಲ. ಅಷ್ಟು ಬಾರಿ ಸಪ್ತಗಿರಿಗೆ ಹೋಗಿದ್ದ. ಅಲ್ಲಿಯ ಅರಣ್ಯ ಪ್ರದೇಶ ತುಂಬಾ ದಟ್ಟವಾದದ್ದಾಗಿತ್ತು. ರಾತ್ರಿಯಂತೂ ಅಲ್ಲಿ ಪ್ರಯಾಣಿಸಲು ಹುಚ್ಚು ಧೈರ್ಯವೇ ಬೇಕಿತ್ತು. ಅದೊಂದು ದುಸ್ಸಾಹಸವೆ  ಸರಿ . ರಾತ್ರಿಯ ಹೊತ್ತು ಆನೆಗಳು, ಹುಲಿಗಳು ಮತ್ತು ಬೇರೆಬೇರೆ ಪ್ರಾಣಿಗಳು ರಸ್ತೆಯ ಮೇಲೇ ಓಡಾಡುವುದನ್ನು ಹಲವಾರು ಬಾರಿ ಜನರು ನೋಡಿದ್ದರು. ಒಮ್ಮೆಯಂತೂ ಪಕ್ಕದ ಹಳ್ಳಿಯ ಹುಡುಗನೊಬ್ಬನನ್ನು ಆನೆ ತುಳಿದು ಅಪ್ಪಚ್ಚಿ ಮಾಡಿತ್ತು. ಈ ಘಟನೆಯಾದಾಗಿನಿಂದಂತೂ ಜನ ಗಡಗಡ ನಡುಗುತ್ತಿದ್ದರು.


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ […]

1
0
Would love your thoughts, please comment.x
()
x