ಸುಮ್ ಸುಮನಾ ಅಂಕಣ

ಅಂತರಂಗದ ಗೆಳೆಯ: ಸುಮನ್ ದೇಸಾಯಿ ಅಂಕಣ


ಸಂಜಿಮುಂದ ದೇವರಿಗೆ ದೀಪಾ ಹಚ್ಚಿ. ಅಂಗಳದಾಗಿನ ತುಳಸಿ ಕಟ್ಟಿ ಮ್ಯಾಲೆ ಕೂತು ಮಕ್ಕಳಿಗೆ ಸಾಯಂಕಾಲದ ಪೂರೋಚಿ(ಸಾಯಂಕಾಲದ ಸ್ತೊತ್ರಗಳು) ಹೇಳಿಕೊಡಲಿಕತ್ತಿದ್ದೆ. ಮೊಬೈಲ್ ರಿಂಗಾಗಿದ್ದು ಕೇಳಿ ಎದ್ದು ಒಳಗ ಹೋದೆ. ಯಾವದೊ ಅಪರಿಚಿತ ನಂಬರ್ ಇತ್ತು. ಅಂಥಾಪರಿ ಏನು ಕೂತುಹಲ ಇಲ್ಲದ ಫೋನ್ ತಗೊಂಡು ಹಲೊ ಅಂದೆ. ಅತ್ಲಾಕಡೆಯಿಂದ ಬಂದ ಧ್ವನಿ ನನ್ನ ಉಸಿರಿಗೆ ಪರಿಚಿತ ಅದ ಅನ್ನೊ ಭಾವನೆ ಬರಲಿಕತ್ತು. ಕ್ಷಣ ಮಾತ್ರ ಆಧ್ವನಿಯ ಒಡತಿ ನನ್ನ ಬಾಲ್ಯದ ಗೆಳತಿ ಜಾನು ದು ಅಂತ ಗೊತ್ತಾತು. ಎಷ್ಟು ವರ್ಷದ ಮ್ಯಾಲೆ ಆಕಿ ಧ್ವನಿ ಕೇಳಲಿಕತ್ತಿದ್ದೆ. ಕಣ್ಣೊಳಗ ನನಗ ಗೊತ್ತಿಲ್ಲದನ ನೀರು ಚಿಮ್ಮಲಿಕತ್ತಿದ್ವು. ಜೀವನದ ಒಂದ ಹಂತದೊಳಗ ನನ್ನಿಂದ ಅಗಲಿ ದೂರದ ವಿದೇಶದಾಗ ಇದ್ದ ನನ್ನ ಜೀವದ ಗೇಳತಿ ನಾಳೆ ನನ್ನ ಭೆಟ್ಟಿಯಾಗಲಿಕ್ಕೆ ಬರೊ ಸುದ್ದಿ ಕೇಳಿ ಮನಸ್ಸು ತುಂಬಿ ಬಂದಿತ್ತು. ಇಷ್ಟು ದೀರ್ಘ ಅಗಲಿಕೆ ನೋವನ್ನ ತಂದಿದ್ರು ಮತ್ತ ನಾಳೆ ಆಕಿನ್ನ ನೋಡ್ತೇನಿ ಅನ್ನೊ ಭಾವನೆನ ಎಷ್ಟು ಹಿತಾ ಅನಿಸ್ತಿತ್ತು.   ಈ ಹೆಣ್ಣಿನ ಜೀವನಾನು ಭಾಳ ವಿಚಿತ್ರ ಇರತದ. ನಮ್ಮವರನ್ನ ಬಿಟ್ಟು ಹೋಗಿ ಬೇರೊಬ್ಬರನ್ನ ಮತ್ತ ಅವರ ಪರಿವಾರದವರನ್ನ ನಮ್ಮವರು ಅಂತ ಸ್ವೀಕಾರ ಮಾಡಿ ಅದರೊಳಗನ ಜೀವನ ಸಾಕಾರ ಮಾಡ್ಕೊಳ್ಳೊದು. ಒಂದೊಂದ ಸಲಾ ನೆನಪಿನ ಹಾಳಿ ಹಣಕಿ ಹಾಕಿ ನೋಡಿದ್ರ ಯಾವುದೊ ಅಮೂಲ್ಯವಾದ ಸಮಯ,ಅನುಭವ,ಅಮೂಲ್ಯವಾದ ವ್ಯಕ್ತಿಗಳನ್ನ ಕಳಕೊಂಡೆವಿ ಅನಸ್ತದ.

ನಾನು ಗೆಳತ್ಯಾರನ ಆರಿಸ್ಕೊಳ್ಳೊದ್ರಾಗ ಭಾಳ ಚ್ಯೂಸಿ ಅಂತಾರಲ್ಲಾ ಹಂಗ ಹಿಂಗಾಗಿ ನಂಗ ಗೆಳತ್ಯಾರು ಭಾಳ ಕಡಿಮಿ ಇದ್ರು.ಜಾಹ್ನವಿ ನನ್ನ ಬಾಲ್ಯದ ಗೆಳತಿ ನಾನು ಪಿ.ಯು.ಸಿ ಬರೊತನಕಾ ಆಕಿ ಒಬ್ಬಾಕಿನ ನನ್ನ ಪೆಟ್ ಫ್ರೇಂಡ್. ಜಾನು ಭಾಳ ಸೌಮ್ಯ ಮತ್ತ ಸೂಕ್ಷ್ಮ ಹುಡುಗಿ, ಖರೆ ಹೇಳಬೇಕಂದ್ರ  ನಾನು ಮತ್ತ ಆಕಿ ಗೆಳತ್ಯಾರ ಆಗಿದ್ದ ಭಾಳ ವಿಚಿತ್ರ ಯಾಕಂದ್ರ ಆಕಿ ಸ್ವಭಾವಕ್ಕ ಮತ್ತ ನನ್ನ ಸ್ವಭಾವಕ್ಕ ಭಾಳ ಫರಖ ಇತ್ತು. ನಾ ಹುಡುಗುರ ಜೊಡಿ ಕ್ರಿಕೇಟ್ ಮತ್ತ ಕಬ್ಬಡ್ಡಿ ಆಡಿದ್ರ ಆಕಿ ಚೀಟಿ ಬರದು ಕಳ್ಳಾಪೋಲಿಸ್ ಮತ್ತ ಆಣಿಕಲ್ಲ್ ಆಟಾ ಆಡತಿದ್ಲು, ನಾ ಗಿಡಾ ಹತ್ತಿ ಗಿಡಮಂಗ್ಯಾ ಆಟಾ ಆಡಿದ್ರ ಆಕಿ ಗಿಡದ ಬುಡಕ ಕೊತು ನಾ ಆಡೊದನ್ನ ನೋಡ್ಕೊತ ಚಂದಾಮಾಮಾ ಓದತಿದ್ಲು. ಆದರು ನನಗ ಆಕಿ, ಆಕಿಗೆ ನಾನು ಹಿಂಗ ಯಾವಾಗಲು ಜೊಡಿ ಇರತಿದ್ವಿ. ಬೆಳದಿಂಗಳ ರಾತ್ರಯೊಳಗ ಮಾಳಗಿ ಮ್ಯಾಲೆ ಹೋಗಿ ತುಂಬಿದ ಚಂದಪ್ಪನ್ನ ನೋಡಕೊತ ಆಟಾ ಆಡೊದು ನಮಗಿಬ್ಬರಿಗು ಭಾಳ ಸೇರತಿತ್ತು. ಎಷ್ಟೊಸಲಾ ಚಂದಪ್ಪ ನನ್ನ ಫ್ರೇಂಡ್ ನಿನ್ನ ಫ್ರೇಂಡ್ ಅಂತ ಇಬ್ಬರು ಒಬ್ಬರಿಗೊಬ್ಬರು ಜಗಳಾಡಿದ್ದು ಅದ.

ಹಂಗ ಬರಬರತ ಚಂದ್ರನ ಒಡನಾಟದೊಳಗ ದಿನಾ ಹೆಂಗ ಕಳದು ಹರೆಯಕ್ಕ ಕಾಲಿಟ್ವಿಗೊತ್ತಾಗಲಿಲ್ಲ. ಆವಾಗಿನ್ನು ಅರಳಲಿಕತ್ತ ಹೂವಿನಹಂಗ ಇರತದ ಜೀವನ. ಸುತ್ತಲು ಹಾರ್ಯಾಡೊ ದುಂಬಿಗೋಳ ಮನಸನ್ಯಾಗ ಮೂಡಸೊ ಬಯಕಿಗೊಳಿಗೆ ಒಂದ ರೂಪ ಕೊಟ್ಟು ಕನಸಕಾಣೊ ವಯಸ್ಸು. ಆವಾಗೆಲ್ಲಾ ನಾ ಚಂದಾಮಾಮಾನ ಜೋಡಿ ಮಾತಾಡೊದ ಕಡಮಿ ಮಾಡಿದ್ದೆ. ಯಾಕೊ ಅವನ್ನ ಬರೆ ನೋಡಕೊತ ಕೂಡಬೇಕನಿಸ್ತಿತ್ತು. ಯಾಕೊ ಮದಲಿನಂಘ ಆಂವನ್ನ ನೋಡಲಿಕ್ಕಾಗತಿದ್ದಿಲ್ಲಾ. ಒಂಥರಾ ನಾಚಿಕ್ಯಾಗಿ ಕಣ್ಣು ತಮ್ಮ ತಾವ ಮುಚ್ಚತಿದ್ವು. ನಾಚಿಕಿಯಿಂದ ಮುಖಾ ಎತ್ತಲಿಕ್ಕಾಗತಿದ್ದಿಲ್ಲಾ. ತನ್ನ ತುಂಟ ನೋಟದಿಂದ ನನ್ನ ಕಾಡಲಿಕತ್ತಾನ ಅನಿಸ್ತಿತ್ತು. ಹುಣ್ಣಿವಿದಿನಾ ತನ್ನ ಕಿರಣಗಳಿಂದ ನನ್ನ ಬಿಗಿಯಾಗಿ ಅಪ್ಪಿಕೊಂಡಾನ, ನಾ ಬಿಡಿಸಿಕೊಂಡಷ್ಟು ತನ್ನ ಅಪ್ಪುಗಿ ಬಿಗಿಯಾಗಸಲಿಕತ್ತಾನ ಅನಿಸಿ ನಾಚಿಕಿಯಾಗ್ತಿತ್ತು. ನನ್ನ ಬಿಡು ಹಿಂಗ ಕಾಡಬ್ಯಾಡಾ, ಯಾರರ ನೋಡಿದ್ರ ಎನ್ಮಾಡ್ಲಿ ಅಂತ ಗೋಗರಿತಿದ್ದೆ. ಆವಾಗೆಲ್ಲಾ ಆಂವಾ ತನ್ನ ತುಂಟ ನೊಟದಿಂದ ನಕ್ಕೊತ ನನ್ನ ಕಾಡಲಿಕತ್ತಾನ ಅನಿಸ್ತಿತ್ತು. ಮಾಳಗಿಮ್ಯಾಲೆ ಮಲ್ಕೊಂಡಾಗ ಈಡಿ ರಾತ್ರಿ ಅಂಗಾತ ಮಲ್ಕೊಂಡ ಚಂದ್ರನ್ನ ನೋಡಕೊತ ಆಂವನ ಸಾಮಿಪ್ಯನ ಅನುಭವಿಸ್ಕೊತ ಮಲ್ಕೊಳ್ಳೊದ ಅಂದ್ರ ನನಗ ಮತ್ತ ಜಾನುಗ ಭಾಳ ಸೇರತಿತ್ತು. ಚಳಿಗಾಲದ ಸಂಜಿಮುಂದ ತಂಪಗಾಳಿಗೆ ಮೈಯ್ಯೊಡ್ಡಿ ಚಂದ್ರನ ಮ್ಯಾಲೆ ಇರೊ ರೊಮ್ಯಾಂಟಿಕ್ ಹಾಡುಗೊಳ ಕ್ಯಾಸೆಟ್ ಹಾಕ್ಕೊಂಡ ಹಾಡ ಕೇಳ್ಕೊತ ಚಂದ್ರನ್ನ ನೋಡ್ಕೊತ  ಹೊತ್ತ ಕಳಿತಿದ್ವಿ . ಎಷ್ಟೊ ರಾತ್ರಿ ಚಂದ್ರನ ನೋಡಕೊತ ಪ್ರೀತಿ ಮಾಡೊದ್ರಾಗ ರಾತ್ರಿ ಕಳದು ನಸಕಾಗಿರ್ತಿತ್ತು. ಹಿಂಗ ನನ್ನ ಅವ್ಯಕ್ತ ಬಯಕೆಗಳಿಗೆ ಚಂದ್ರನ ರೂಪಾ ಕೋಡತಿದ್ದೆ. ಒಂದ ದಿನಾನು ಚಂದ್ರನ ಜೋಡಿ ಮಾತಾಡದ ಇರತಿರಲಿಲ್ಲಾ.ಇವೆಲ್ಲಾ ಅನುಭವ ನಂಗ ಎಷ್ಟ ಖುಷಿ ಕೋಡತಿದ್ವು ಅಂದ್ರ, ನಾ ಯಾವದೊ ಒಂದ ಛಂದನ ಲೋಕದಾಗ ಇಧ್ಧಂಗ ಅನಿಸ್ತಿತ್ತು. ಅಮವಾಸಿ ಮುಂದ ಆಂವನ್ನ ನೋಡಲಾರದ ಎಷ್ಟ ವಿಲಿ ವಿಲಿ ಒದ್ದಾಡತಿದ್ದೆ. ಅವನ ವಿರಹದೊಳಗ ಒಂಥರಾ ಸಿಹಿನೋವನ್ನ ಅನುಭವಿಸ್ತಿದ್ದೆ.

ಆವತ್ತ ನನ್ನ ಮದವಿ ಮಾತುಕತಿ ಆದಮ್ಯಾಲೆ  ನಾನು ಜಾನು ಇಬ್ಬರು ಮಾಳಗಿ ಮ್ಯಾಲೆ ಹೋಗಿದ್ವಿ. ಜೀವದ ಗೆಳತಿನ್ನ ಅಗಲಿ ಹೋಗಬೇಕಲ್ಲಾ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಆ ಚಂದ್ರಗ ಅದನ್ನ ನೋಡಲಿಕ್ಕಾಗಂಗಿಲ್ಲಂತೊ ಅಥವಾ ಆಂವಗು ನನ್ನಷ್ಟ ನೋವಾಗಿತ್ತೊ ಗೊತ್ತಾಗಲಿಲ್ಲಾ, ಮೋಡದ ಮರಿಯೋಳಗ ಅಡಿಕ್ಕೊಂಡ ಕೂತ ಬಿಟ್ಟಾ. ಇಡಿ ರಾತ್ರಿ ಹೋರಗ ಬರಲಿಲ್ಲಾ.. ಮದವಿ ಹಿಂದಿನ ದಿನಾ ರಾತ್ರಿ ಮಲ್ಕೊಂಡಾಗ ಖಿಡಕಿ ಒಳಗಿಂದ ಕಾಣಸಲಿಕತ್ತಿದ್ದಾ. ನಾಳೆಯಿಂದ ನೀ ನನ್ನಾಕಿಯಾಗಿರಂಗಿಲ್ಲಾ, ಇವತ್ತ ನಾ ನಿನ್ನ ಒಂದಸಲಾ ಅಫ್ಕೊತೇನಿ ಅಂತ ಯಥಾಪ್ರಕಾರ ತನ್ನ ಕಿರಣಗಳಿಂದ ನನ್ನ ಬಿಗಿಯಾಗಿ ಅಪ್ಪಿಕೊಂಡಾ. ಅವತ್ತ ನಾ ಎನ ಬಿಡಿಸ್ಕೊಳ್ಳಿಲ್ಲಾ.ಇಡಿ ರಾತ್ರಿ ನಾ ಅಂವನ ಎದಿಮ್ಯಾಲೆ ತಲಿ ಇಟ್ಟು ಆರಾಮ ನಿದ್ದಿ ಮಾಡಿದೆ. ಮದುವ್ಯಾದ ದಿನಾ ಸಂಜಿಮುಂದ ಮನಿಗೆ ಬರಬೇಕಾದ್ರ ತಂಪಸೂಸ ಗಾಳಿ ಬಿಸಲಿಕತ್ತಂತ ಕಾರಿನ ಖಿಡಕಿ ಒಳಗಿಂದ ಹೊರಗ ಹಣಿಕಿ ಹಾಕಿ ನೋಡಿದೆ ನಮ್ಮ ಕಾರಿನ ಜೋಡಿನ ತೇಲಿ ಬರ್ಲಿಕತ್ತ ಆಕಶದಾಗಿನ ನನ್ನ ಚಂದ್ರನ್ನ ನೋಡಿ ನಂಗ ಭಾಳ ಖುಷಿ ಆತು. ತವರನ್ನ, ಜೀವದ ಗೆಳತಿನ್ನ ಬಿಟ್ಟಬಂದ ಬ್ಯಾಸರಾ ಒಂದ ಘಳಿಗ್ಯಾಗ ಹೋತು.ನನ್ನ ಬಾಲ್ಯದ ಸಂಗಾತಿ ನನ್ನ ಅಂತರಂಗದ ಗೇಳೆಯನರ ನನ್ನ ಜೋತಿಗೆನ ಬಂದಾನಲ್ಲಾ ಅಂತ ಕಣ್ಣ ತುಂಬ ಆಂವನ್ನ ತುಂಬಕೊಂಡು ಅವನಿಗೆ ಥ್ಯಾಂಕ್ಸ ಹೇಳಿದೆ.

ನನ್ನ ಹೊಸಾ ಜೀವನದ ಅನುಭವಗಳನ್ನ ಆಂವನ ಮುಂದ ಬಂದ ಹೇಳ್ತಿದ್ದೆ. ಒಂದೊಂದ ಸಲಾ ನಡದ ನೋವಿನ ಕ್ಷಣಗಳನ್ನ ಅವನ ಮುಂದ ಹೇಳ್ಕೊಂಡ ಅಳತಿದ್ದೆ. ಒಂದೊಂದ ಸಲಾ ನಾ ಅವರ ಜೋಡಿ ಎಕಾಂತದಾಗ ಇದ್ದಾಗ ಖಿಡಕ್ಯಾಗಿಂದ ಹಣಿಕಿ ಹಾಕಿ ನೋಡೊ ಪ್ರಯತ್ನನು ಮಾಡತಿದ್ದಾ. ಎಷ್ಟೊ ವರ್ಷ ನಂಗ ಮಕ್ಕಳಾಗಲಾರದಾಗ ನಾ ಅನಭೊಗಿಸಿದ ನೋವಿನ ಎಳಿ ಎಳಿನು ಆಂವಗ ಗೊತ್ತದ. " ಎಷ್ಟೊ ಸಲಾ ನನ್ನ ನಿರಾಸೆಯ ನೋವನ್ನ ಸಿಟ್ಟಿನ ರೂಪದಾಗ ಆಂವನ ಮ್ಯಾಲೆ ಹೇರಿ ಆಂವಗ " ನಿಂಗೇನ ಗೊತ್ತಾಗತದ ನನ್ನ ನೋವು,ಸಂಕಟಾ ನೀ ಒಂದ ಕಲ್ಲ ಇದ್ದಿ, ನಾ ಎಷ್ಟ ಅತ್ತರ ನಿನಗೇನಾಗಬೇಕೆದ. ನೀ ಒಂದ ಆರಾಮ ಇರತಿ ಮುಗಿತ" ಅಂಥೇಳಿ ಸಿಕ್ಕಾಪಟ್ಟೆ ಬೈದಿದ್ದೆ. ಮುಂದ ಎರಡ ತಿಂಗಳಾ ಮ್ಯಾಲೆ ಸಿಹಿ ಸುದ್ದಿ ಮದಲ ಆಂವಗ ಹೇಳಿ ಖುಷಿ ಪಟ್ಟಿದ್ದೆ. ಅದರ ಅದ ಖುಷಿಯ ಫಲಾನ ನಾ ಮತ್ತ ಹುಟ್ಟಿದ ೩ ತಿಂಗಳಿನಾಗ ಕಳ್ಕೊಂಡ ಗೋಳೊ ಅಂತ ಆಂವನ ಮುಂದ ಅತ್ತಾಗ ನಿನ್ನ ಕಣ್ಣಿರ ಹಾಕಿ ಸಂಕಟಾಪಡೊದ ನನಗ ನೊಡಲಿಕ್ಕಾಗುದಿಲ್ಲಾ ಅಂತ ಒಂದವಾರಾ ಹತ್ತದಿನತನಕಾ ಮಾಡದಾಗ ಮಾರಿ ಮುಚಗೊಂಡಾವಾ ಹೊರಗ ಬಂದಿದ್ದಿಲ್ಲಾ. ಮುಂದ ಸ್ವಲ್ಪ ದಿನಾ ನಾ ಆಂವನ ಜೋಡಿ ಮಾತಾಡಿದ್ದೆ ಇಲ್ಲಾ. ಸುಮ್ನ ಹೋಗಿ ಕೂತು ಅಂವನ್ನ ದಿಟ್ಟಿಸಿ ನೋಡಿ ಬಂದಬಿಡತಿದ್ದಾ. ನನ್ನ ಮೌನ ವೇದನೆ ಆಂವಾ ಅರ್ಥಾ ಮಾಡಕೊತಿದ್ದಾ. "ಯಾಕ ಬ್ಯಾಸರಾ ಮಾಡಕೊತಿ ಮುಂದ ಇದರಕಿಂತ ಛೊಲೊದೊಂದು ಫಲಾ ಕೋಡಲಿಕ್ಕಂತ ಈಗಿದ್ದದ್ದನ್ನ ದೇವರು ಕಸಗೊಂಡಿರತಾನ. ಈಗ ಸಂಕಟಾಪಡಲಾರದ ತಾಳ್ಮಿಯಿಂದ ಇರು ಅಂಥೇಳಿ ಸಮಾಧಾನಾ ಮಾಡಲಿಕತ್ತಾನ ಅನಿಸ್ತಿತ್ತು.

ಯಥಾಪ್ರಾಕಾರ ಆಂವಾ ನನ್ನ ನೋವಿನಾಗ ನಲಿವಿನ್ಯಾಗ ಜೋಡಿಯಾಗಿ ತನ್ನ ಗೆಳೆತನಾ ನಿಭಾಯಿಸ್ತಿದ್ದಾ. ಮುಂದ ನನ್ನ ಎರಡನೆ ಖುಷಿ ನನ್ನ ಮಡಿಲಿನಾಗ ಆಡಲಿಕತ್ತಾಗ ಮತ್ತ ಆಂವಾ ಖುಷಿಯಿಂದ ಪ್ರಖರ ಆಗ್ಯಾನ ಅನಿಸ್ಲಿಕತ್ತು. ನಾನ ಕೂಸಿದ್ದಾಗಿಂದ ನನ್ನ ನಗು ನೋಡಿದ ಆಂವಗ ನನ್ನ ಮಗುವಿನ ನಗು ಮುಖಾನೋಡಿ ತೄಪ್ತಿ ಆಧಂಗ ಅನಿಸ್ತಿತ್ತು. ನನ್ನ ಮಗಾ ಚಂದಪ್ಪನ್ನ ಬಾ ಬಾ ಅಂತ ಕರೆಯೋದ ನೋಡಿ ಮನಸ್ಸು ಖುಷಿಯಿಂದ ಕುಣಿತಿತ್ತು. ಮದಲನೆ ಸಲಾ ನನ್ನ ಮಗಾ ನನ್ನ ಅಮ್ಮಾ ಅಂದಾಗ ಆದಂಥಾ ಸಂತೋಷಕ್ಕ ಮಾಳಗಿ ಮ್ಯಾಲೆ ಹೋಗಿ ಆಂವನ ಮುಂದ ಹೇಳಿ ಕುಣದಾಡಿ ಬಿಟ್ಟಿದ್ದೆ. ನಾ ಸಣ್ಣಾಕಿದ್ದಾಗಿಂದ ನನ್ನ ಮನಸಿಗಾದ ಸಂತೋಷ,ಆಘಾತ, ಆಶ್ಚರ್ಯಗಳನ್ನ ಆಂವನ ಮುಂದ ಹೇಳ್ಕೊಳ್ಳಿಲ್ಲಂದ್ರ ಸಮಾಧಾನ ಆಗತಿರಲಿಲ್ಲ. ನನ್ನ ಮನಸಿನ ಎಳಿ ಎಳಿನು ಆ ಚಂದ್ರಗ ಗೊತ್ತದ. ಆಂವಾ ನನ್ನ ಅಂತರಂಗದ ಸಂಗಾತಿ ಇದ್ದಾನ.ಈಗಲೂ ಆಂವಾ ನನ್ನ ಎಲ್ಲಾ ಮಾತುಗಳನ್ನ ಸ್ಥಿರ ಚಿತ್ತದಿಂದ ಕೇಳ್ತಾನ. ಸಂಸಾರದ ಜಂಜಾಟದಿಂದ ಬೆಸತ್ತ ನನ್ನ ಮನ್ಸಿಗೆ ತನ್ನ ತಂಪ ಕಿರಣಗಳಿಂದ ಸಮಾಧಾನ ಮಾಡತಾನ. ಆಂವನ ಶಿತಲ ಸ್ಪರ್ಷದೊಳಗ " ನಾನಿದ್ದೇನಿ ನಿನ್ನ ಜೋಡಿ,ಯಾಕ ಚಿಂತಿ ಮಾಡ್ತಿ. ಅಂತ ಅನ್ನೊ ಸಮಾಧಾನ ಇರತದ. 

ನನ್ನ ಜಾನು ಬರಾಕಿದ್ದಾಳಂತ ಅನ್ನೊ ಸಂತೊಷದ ಸುದ್ದಿ ಚಂದಪ್ಪಗ ಹೇಳಬೇಕಂತ ಮಾಳಗಿ ಮ್ಯಾಲೆ ಹೋದೆ. ಸ್ವಚ್ಛ ಆಕಾಶದೊಳಗ ಮಂದವಾಗಿ ತೇಲಾಡ್ಕೊತ ಆಂವಾ ಮುಗುಳನಗಿ ನಕ್ಕೊತ “ ನಾ ನಿನ್ನ ಅಂತರಂಗದ ಒಡನಾಡಿ ಇದ್ದೇನಿ ನೀ ಹೇಳೊಕಿಂತಾ ಮೊದಲನ ನಿನ್ನ ಖಷಿಗೆ ಕಾರಣ ಏನಂತ ನಂಗ ಗೊತ್ತಾಗೇದ “ ಅಂತ ಹೇಳಲಿಕತ್ತಾನ ಅನಿಸ್ಲಿಕತ್ತಿತ್ತು. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಅಂತರಂಗದ ಗೆಳೆಯ: ಸುಮನ್ ದೇಸಾಯಿ ಅಂಕಣ

  1. ಏನು ದೇಸಾಯ್ರ ಚಂದಪ್ಪನೂ ಗೆಳೆಯ ಆಗತಾನ? ಯಾಕಂದ್ರ ನಮ್ಮೂರಾಗ ಅವಕಾಣಸೂದು ಅಪರೂಪ..
     
    ಬಿಲ್ಡಿಂಗಿನ ಲೈಟ್ ನಡುವೆ..ಸೊಗಸಾದ ಶೈಲಿ

  2. ಎನೋ ಒ೦ದು ರೀತಿ ಸೆಳೆತ ಅದ ನಿಮ್ಮ ಲೇಖನ ಒಳಗ…
    ಓದಬೇಕು ಅನಸ್ತದ,,,, ಲೇಖನ ಓದ್ಕೋತ ನಮ್ಮನ್ನ ನಾವ ಕಳಕೋತೀವಿ ಅನಸ್ತದ…

  3. ಲೇಖನ ಮೆಚ್ಚಿದ ಎಲ್ಲರಿಗೂ ನನ್ನ ಧನ್ಯವಾದಗಳು…….

Leave a Reply

Your email address will not be published. Required fields are marked *