ಆಫೀಸ್‍ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು ನಿಂತಿರುವುದನ್ನು ಗಮನಿಸಿದ ಆಕೆ ಬೇಗ-ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿಹೊರಬಂದಳು. ಒಳಗೆ ಗುಡಿಸಿದಾಗ ಎದ್ದ ಧೂಳು ಸ್ವಲ್ಪ ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೋ ಗಮನಿಸಿದಳು. ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು ವಿಷೇಶವಿರುತ್ತೆ, ಅವರುಕೆಲವು ಪತ್ರಗಳನ್ನು ಮುಖ್ಯ ಎಂದು ಅವರದೇ ಆದ ರೀತಿಯಲ್ಲಿ ನಿರ್ಧಾರ ಮಾಡಿ ತೆಗೆದಿಡುತ್ತಾರೆ.
ಆಕೆ ಒಂದು ಪತ್ರವನ್ನು ನನ್ನ ಕೈಗೆ ಕೊಡುತ್ತ "ಇದೇನೊ ನೋಡಿ ಸಾರ್, ಕಸದ ಜೊತೆ ಬಂದು ಬಿದ್ದಿದೆ, ಯಾವುದೊ ಡಭ್ಭಿಯದು " ಎನ್ನುತ್ತಕೊಟ್ಟಳು.ಗಮನಿಸಿದೆ, ಅದೊಂದು ಕನ್ನಡದಲ್ಲಿ ಬರೆದ ಪತ್ರ, ಎರಡು ಪುಟಗಳಷ್ಟಿದ್ದು, ಸ್ಟಾಪ್ಲರ್ ನಿಂದ ಪಿನ್ ಮಾಡಲಾಗಿತ್ತು. ಅದನ್ನು ಹಿಡಿದು ಒಳಬಂದುನನ್ನ ಟೇಬಲ್ಲಿನ ಮೇಲಿಟ್ಟೆ. ಯಾವುದೋ ಕೆಲಸದ ಮೇಲೆ ಗಮನಹರಿಸುತ್ತ, ಆ ಪತ್ರದ ಬಗ್ಗೆ ಮರೆತೇಬಿಟ್ಟಿದ್ದೆ.
ಊಟದ ನಂತರ, ಅತ್ತಿತ್ತ ನೋಡುವಾಗ ಮತ್ತೆ ಆ ಪತ್ರ ಟೇಬಲಿನ ಮೇಲೆ ಗಮನ ಸೆಳೆಯಿತು. ಯಾರಿಗೆ ಸೇರಿರಬಹುದು ಎನ್ನುತ್ತ ಕಣ್ಣಾಡಿಸಿದೆ. ಆದರೆಅದು ಆಫೀಸ್‍ಗೆ ಸೇರಿದ ಪತ್ರವಾಗಿರದೆ, ಯಾರದೋ ಸ್ವಂತ ಪತ್ರವಾಗಿತ್ತು. ಮೇಲೆ, ಬರೆದ ದಿನಾಂಕವಾಗಲಿ ಸ್ಥಳವಾಗಲಿ ಇಲ್ಲ. ಕಡೆಯಲ್ಲಿ ನೋಡಿದೆ,ನಿನ್ನ ಒಲವಿನ ವಿಶು.. ಅಂತಿತ್ತು.
ಯಾರ ಪತ್ರ ಎಂದು ತಿಳಿಯುತ್ತಿಲ್ಲ ಯಾರಿಗೆ ಎಂದು ಕೊಡುವುದು ಪತ್ರದ ಸಾರಂಶದಿಂದ, ಪತ್ರದ ಒಡೆಯರು ಸಿಗಬಹುದೆ ಅನ್ನಿಸಿತು ಸುಮ್ಮನೆಕಣ್ಣಾಡಿಸಿದೆ. ಸಾರಾಂಶ ಹೀಗಿತ್ತು.
ನನ್ನ ಪ್ರೀತಿಯ ಹುಡುಗಿ ನಿಮ್ಮಿ
ನನ್ನ ಪತ್ರದಿಂದ ನಿನಗೆ ಆಶ್ಚರ್ಯವಾಗಬಹುದು, ಮತ್ತೆ… ನಿಮ್ಮಿ ಎಂದು ಕರೆದು ನಿನಗೆ ಬರೆದಿರುವ ಪತ್ರ ಅನಿರೀಕ್ಷಿತವೂ ಅನ್ನಿಸಬಹುದು, ಎಸ್ ಎಮ್ಎಸ್ , ಮೊಬೈಲ್, ಈ ಮೈಲ್ ಗಳ ನಡುವೆ ಈ ಪತ್ರವು ನಗು ತರಿಸಲೂ ಬಹುದು ಅಲ್ಲವೇ? ಆದರೆ ನಿನ್ನನ್ನು ಬಹಳ ವರ್ಷಗಳ ನಂತರ ಮತ್ತೆಕಾಣುವಾಗ ನನಗೆ ಆದ ಸಂತೋಷವನ್ನೆಲ್ಲ ವಿವರಿಸಲು ಈ ಎಲ್ಲ ಅದುನಿಕ ಸಾಧನಗಳು ವಿಫಲವಾಗಬಹುದು ಅನಿಸಿತು ಹಾಗಾಗಿ ಪತ್ರಬರೆಯುತ್ತಿರುವೆ. ಈಗಿನ ನಿನ್ನ ಭಾವನೆಗಳು ಹೇಗಿವೆಯೋ, ನಿನ್ನ ಮನಸಿನಲ್ಲಿ ನನಗೆ ಯಾವ ಜಾಗವಿದೆಯೊ ಯಾವ ಕಲ್ಪನೆಯೂ ನನಗಿಲ್ಲ.
ನನಗೆ ಸದಾ ಕಾಡುವುದು, ನಮ್ಮ ಅದೇ ಹೈಸ್ಕೂಲು ಹಾಗು ಕಾಲೇಜಿನ ದಿನಗಳು. ಬಹುಷಃ ನಮ್ಮ ಕಾಲೇಜಿನಲ್ಲಿ ನನ್ನ ಹಾಗು ನಿನ್ನ ಎಲ್ಲ ಸ್ನೇಹಿತರುನಿರೀಕ್ಷಿಸಿದ್ದರು ನಾನು ಹಾಗು ನೀನು ಓದಿನ ನಂತರ ಮದುವೆಯಾಗುವೆವು ಎಂದು. ಆದರೆ ಎಲ್ಲ ಪ್ರೀತಿಗಳು ಮದುವೆಯಲ್ಲಿ ಕೊನೆಗೊಳ್ಳುವುವುಎನ್ನುವುದು ಕೇವಲ ಕಲ್ಪನೆ. ನಾನು ಹಾಗು ನೀನು ಅದೆಷ್ಟು ಬಾರಿ ನಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದೆವು ಲೆಕ್ಕವಿಲ್ಲ. ನಮ್ಮ ಕನಸುಗಳಿಗೆ ಕೊನೆಯೂಇರಲಿಲ್ಲ. ನಮ್ಮ ಕನಸುಗಳಿಗೆ ಯಾರಾದರೂ ಅಡ್ಡಿ ಬರುವರೆಂಬ ನಿರೀಕ್ಷೆಯೂ ಇರಲಿಲ್ಲ. ಹಾಗೆ ನೋಡಿದಲ್ಲಿ ನನ್ನ ಕನಸಿಗೆ ಯಾರೂ ಅಡ್ಡಬರಲಿಲ್ಲಆದರೂ ಕನಸು ನನಸಾಗಿ ನೆರವೇರಲಿಲ್ಲ ಅಲ್ಲವೇ?
ಶಾಲೆಯ ಹಿಂದಿನ ಮರಗಳ ಕೆಳಗೆ ಕುಳಿತು ನಾವು ಆಡಿದ ಅದೆಷ್ಟು ಪಿಸುನುಡಿಗಳು ಗಾಳಿಯಲ್ಲಿ ಕರಗಿ ಹೋಯಿತು, ಹಾಗೆ ನಮ್ಮ ಕನಸುಗಳು ಸಹನಿದ್ದೆಯಲ್ಲಿ ಕರಗಿ ಹೋಯಿತೇನೊ. ಇಷ್ಟು ವರ್ಷಗಳ ನಂತರವೂ ನಿನ್ನ ನೆನಪಾದರೆ ನಾನು ಅದೇಕೊ ಚಿಕ್ಕವಯಸ್ಸಿನ ಪ್ರೇಮಿಯಂತೆ ಆಗಿಬಿಡುವೆ.ಯಾವುದೊ ಮರದ ಕೆಳಗೆ ಕಣ್ಮುಚ್ಚಿ ಕುಳಿತರೆ ಬೀಸುವ ಗಾಳಿಯಲ್ಲಿ ನಿನ್ನ ಪಿಸುನುಡಿ ಇಂದಿಗೂ ಇದೆ ಅನ್ನಿಸುತ್ತದೆ. ಮರಗಳಿಗೂ ಪ್ರೇಮಿಗಳಿಗೂ ಅದೇನು ಬಂಧವೊ ಅರಿಯೆ.
ನಮ್ಮ ಕನಸು ಅದೇಕೊ ಮಧ್ಯದಲ್ಲಿಯೆ ನಿಂತು ಹೋಯಿತು. ಅದಕ್ಕೆ ಕಾರಣವನ್ನು ನಾನು ಎಂದೂ ಅರಿಯಲಿಲ್ಲ. ನಿನಗೆ ಗೊತ್ತಿತ್ತೇನೋ! ನೀನುತಿಳಿಸಲಿಲ್ಲ. ನನ್ನ ಪ್ರತಿ ಮಾತು ನಿನಗೆ ಇಷ್ಟ ಅಂದಿದ್ದೆ, ನನ್ನ ಬರುವಿಕೆಯನ್ನು ಕಾಯುವುದು ನಿನಗೆ ಅಮೂಲ್ಯ ಕ್ಷಣ ಅನ್ನುತ್ತಿದೆ. ನಮ್ಮ ಅಗಲಿಕೆಯ ಕ್ಷಣವೇ ನನಗೆ ಮರಣ ಎಂದು ನೀನೇ ನುಡಿದಿದ್ದೆ. ಆದರೆ ಅದೇನು ಆಯಿತು ಎಂದು ನನಗೆ ತಿಳಿಯಲಿಲ್ಲ. ನನ್ನ ಪ್ರತಿ ಮಾತಿನಲ್ಲೂ ನೀನು ಅದೇಕೊತಪ್ಪನ್ನೇ ಹುಡುಕಿ ತೆಗೆಯುತ್ತಿದ್ದೆ. ನಾನು ಬರಲು ತಡವಾದರೆ ನನ್ನ ಪ್ರೀತಿಯನ್ನೆ ಶಂಕಿಸಿ ದೂರುತ್ತಿದ್ದೆ. ನನ್ನ ಅಗಲಿಕೆ ನಿನಗೆ ಮರಣ ಎಂದಿದ್ದ ನೀನುಅದೇಕೊ, ಏನಾದರು ನೆಪ ಒಡ್ಡಿ ನನ್ನನ್ನು ತಪ್ಪಿಸಲು , ದೂರ ಇರಿಸಲು ಪ್ರಯತ್ನಿಸುತ್ತಿದ್ದೆ.
ನನಗೆ ತಿಳಿಯುತ್ತಿತ್ತು, ನಿನ್ನ ವರ್ತನೆಯಲ್ಲಿ ಅದೇನೊ ಅಸಹಜತೆ ಇದೆ ಎಂದು. ನೀನು ನನ್ನ ಮೇಲೆ ತಪ್ಪು ಹೊರೆಸಿ ಮಾತನಾಡುವಾಗಲೆಲ್ಲ ನೀನುಸಹಜವಾಗಿರುತ್ತಿರಲಿಲ್ಲ, ಕೋಪದ ಅಭಿನಯ ತೋರಿಸುತ್ತಿದ್ದೆ ಅಷ್ಟೆ. ನನ್ನನ್ನು ದೂರ ತಳ್ಳುವಾಗಲೂ ನಿನ್ನಲ್ಲಿ ಅದೆಂತದೊ ನೋವು ಕಣ್ಣಗಳಲ್ಲಿಕಾಣುತ್ತಿತ್ತು. ಆದರೆ ನೀನು ಹೊರಗೆ ಬೇರೆ ರೂಪ ಧರಿಸಿರುತ್ತಿದ್ದೆ. ನನಗೆ ಅಪರಿಚಿತಳಂತೆ ವರ್ತಿಸಲು ಕಷ್ಟ ಪಡುತ್ತಿದ್ದೆ.
ಇದ್ದಕ್ಕಿದ್ದಂತೆ ನಿನ್ನ ಮದುವೆ ನಿಶ್ಚಯವಾಗಿರುವ ವಿಷಯ ತಿಳಿದಾಗ , ನನಗೆ ಅದು ಅನಿರೀಕ್ಷಿತ ಸುದ್ದಿ, ನೀನು ಕಡೆ ಕ್ಷಣದವರೆಗು ಆ ಸುದ್ದಿಯನ್ನು ಅದೇಕೆಮುಚ್ಚಿಟ್ಟೆ ಎಂದು ನನಗೆ ತಿಳಿಯಲೆ ಇಲ್ಲ. ನನ್ನನ್ನು ದೂರ ಮಾಡಲು ನಿನಗೆ ಅದೇನೊ ಕಾರಣವಿತ್ತು, ಬಲವಂತವಿತ್ತು ಎಂದು ಒಂದು ಕ್ಷಣವೂ ನೀನು ತೋರಿಸಿಕೊಳ್ಳಲಿಲ್ಲ. ನನಗಂತೂ ದೊಡ್ಡ ಅಘಾತವಾಗಿತ್ತು. ನಿನ್ನ ವಿಚಿತ್ರ ವರ್ತನೆಯ ಹಿಂದೆ ಇಂತದೊಂದು ಕಾರಣವಿರಬಹುದೆಂದು ನಾನು ಊಹೆಮಾಡಿರಲಿಲ್ಲ ಬಿಡು.
ನಾನು ನಿನ್ನ ಮದುವೆಗೂ ಬಂದೆ, ಅಪರಿಚಿತನಂತೆ ನಿನ್ನ ಎದುರಿಗೆ ನಿಂತು ಮದುವೆಗೆ ಶುಭ ಹಾರೈಸಿದೆ. ಆಗಿನ ನಿನ್ನ ಮುಖದ ಭಾವನೆಯನ್ನು ಅರ್ಥಮಾಡಿಕೊಳ್ಳಲು ನನಗೆ ಇಂದಿಗೂ ಸಾದ್ಯವೇ ಆಗಿಲ್ಲ. ನಾನು ಅಲ್ಲಿಂದ ಹೊರಡುವ ಮುಂಚೆ ನೀನು ನನ್ನತ್ತ ನೋಡುವಾಗ ಇದ್ದ ಭಾವನೆಏನು? ವಿಶ್ವದ ಎಲ್ಲ ಭಾವನೆಗಳನ್ನು ಒಟ್ಟಿಗೆ ಸೇರಿಸಿ, ಬಿಂದು ಗಾತ್ರಕ್ಕೆ ತಂದು ನಿನ್ನ ಕಣ್ಣಲ್ಲಿಟ್ಟಂತೆ ಕಾಣಿಸಿ ನಾನು ಬೆಚ್ಚಿ ಬಿದ್ದಿದ್ದೆ, ಕನಲಿಹೋಗಿದ್ದೆ. ಅದಾಗಿಈಗ ವರ್ಷಗಳೇ ಕಳೆದವು , ಗಿಡವನ್ನು ಬೇರು ಸಮೇತ ಕಿತ್ತು, ಮತ್ತೊಂದಡೆ ನೆಟ್ಟರೆ ಹೇಗಿರುತ್ತೆ, ಹಾಗೆ ಮತ್ತೆ ಮನ ಹೊರಗಿನ ಪ್ರಪಂಚದಲ್ಲಿ ನಿಧಾನಕ್ಕೆಬೇರು ಬಿಟ್ಟಿತ್ತು. ಮದುವೆಯೂ ಆಯಿತು ನನಗೆ ಈಗ ಮಗನೂ ಸಹ ಇದ್ದಾನೆ ಅದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ.
ಇಷ್ಟು ವರ್ಷಗಳ ನಂತರ ಒಮ್ಮೆಲೆ ನಮ್ಮ ಆಫೀಸಿನಲ್ಲೆ ಪ್ರತ್ಯಕ್ಷಳಾಗಿ ನನ್ನಲ್ಲಿ ಅಚ್ಚರಿ ಮೂಡಿಸಿದೆ. ನೀನು ನಮ್ಮದೆ ಕಂಪನಿಯಲ್ಲಿ ಕೆಲಸಕ್ಕೆಸೇರಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ ಬಿಡು.
ಈಗ ಹೇಗಿದ್ದೀಯ? ಬಹುಷಃ ನೀನು ನಿನ್ನದೆ ಸಂಸಾರದಲ್ಲಿ , ಸುಖದಲ್ಲಿ ಇದ್ದಿರಬಹುದು. ಈಗ ನನ್ನನ್ನು ಕಂಡು ನಿನಗೂ ಗಲಿಬಿಲಿಯಾದಂತೆ ಕಾಣಿಸಿತು.ಈಗ ಯಾವ ಗಾಬರಿಗೂ ಕಾರಣವಿಲ್ಲ ಬಿಡು. ಜೀವನ ಕಂಡವರು. ಆದರೂ ಒಂದೇ ಒಂದು ಕುತೂಹಲ. ನಿನ್ನ ಜೊತೆ ಒಂದು ಸಾರಿ ವಿರಾಮವಾಗಿಕುಳಿತು ಮಾತನಾಡಬೇಕು ಎಂದು. ಸಾದ್ಯವಾದರೆ ಹಿಂದಿನ ನೆನಪುಗಳ ಪುನರಾವಲೋಕನ ಸಾದ್ಯವಿದೆ ಅಲ್ಲವೆ.
ಈ ಸಂಜೆ ಆಫೀಸಿನ ನಂತರ , ಸಿಗಲು ಸಾದ್ಯವೆ. ಇದರಲ್ಲಿ ಯಾವ ಬಲವಂತವೂ ಇಲ್ಲ. ಒಮ್ಮೆಯಾದರೂ ಎದುರಿಗೆ ಕುಳಿತು ನಿನ್ನ ಅಂದಿನ ನಿಗೂಢವರ್ತನೆಗೆ ಕಾರಣ ಹೇಳಿಬಿಡು. ನಾವಿಬ್ಬರೂ ಈಗ ಸಮಾನಂತರ ರೇಖೆಯ ಮೇಲೆ ಚಲಿಸುವ ಜೀವನ ಮಾರ್ಗದಲ್ಲಿರುವವರು. ಸಂಜೆ ಆರು ಘಂಟೆಗೆರಾಜಾಜಿನಗರದ ಕಾಫಿಡೇಯಲ್ಲಿ ನಿನ್ನನ್ನು ಭೇಟಿಮಾಡುವೆ ಎಂಬ ನಿರೀಕ್ಷೆಯಲ್ಲಿರುವೆ. ಒಮ್ಮೆ ನಿನಗೆ ಇಷ್ಟವಾಗಲಿಲ್ಲ ಅಂದರೆ ಯಾವ ಬೇಸರವೂ ಬೇಡ.ಪತ್ರವನ್ನು ಹರಿದುಹಾಕಿ ಸುಮ್ಮನಾಗಿಬಿಡು. ಎಲ್ಲರ ಕಣ್ಣುಗಳಲ್ಲಿ ಅಪರಿಚಿತರಾಗಿಯೇ ಉಳಿದುಬಿಡೋಣ
ಇಂತಿ ನಿನ್ನ ಪ್ರೀತಿಯ …. ವಿಶು
…………………………
ಪತ್ರವನ್ನು ಓದಿ ಮುಗಿಸಿದಾಗ ನನಗೆ ವಿಚಿತ್ರವೆನಿಸಿತು. ಮೊದಲೆನೆಯದಾಗಿ ಪತ್ರವನ್ನು ಯಾರು ಯಾರಿಗೆ ಬರೆದಿರಬಹುದು ಎನ್ನುವದನ್ನು ತಿಳಿಯಲಾಗುತ್ತಿಲ್ಲ. ಇಲ್ಲಿ ಅನೇಕ ಸಾಧ್ಯತೆಗಳಿದ್ದವು. ಬರೆದವನು ಅದನ್ನು ಅವನ ಪ್ರೀತಿಯ ಹುಡುಗಿಗೆ ತಲುಪಿಸದೆ ಹಾಗೇ ಅದನ್ನು ಬುಟ್ಟಿಗೆ ಎಸೆದಿರುವಸಾಧ್ಯತೆ. ಎರಡನೆಯದು ಪತ್ರ ಸ್ವೀಕರಿಸಿದ ಆಕೆ ಅದನ್ನು ಓದದೆ ಅಥವ ಓದಿ ಎಸೆದಿರುವ ಸಾಧ್ಯತೆ. ಪತ್ರದ ಓದಿದ ನಂತರ ಅವರು ಕಾಫಿಗೆ ಹೋಗಿಹಳೆಯ ವಿಷಯಗಳನ್ನೆಲ್ಲ ಮೆಲುಕುಹಾಕಿ ನಂತರ ಈಗಿನ ಸಂದರ್ಭಕ್ಕೆ ಅನಿವಾರ್ಯವಾಗಿ ಹೊಂದುಕೊಳ್ಳುವ ಪರಿಸ್ಥಿತಿ. ಅಥವಾ ಮತ್ತೆ ಅವರಿಬ್ಬರನಡುವೆ ಚಿಗುರಿರಬಹುದಾದ ಪ್ರೀತಿಯ ಸಾದ್ಯತೆ, ಇದೊಂದು ಪತ್ರಕ್ಕೆ ಎಷ್ಟೊಂದು ಆಯಾಮಗಳು.
ನಾನು ಕುಳಿತಿದ್ದ ಜಾಗ ವಿಷೇಶವಾಗಿತ್ತು. ನಾನು ಸೆಕ್ಷನ್ ನಲ್ಲಿ ಇರುವ ಎಲ್ಲರನ್ನು ಕುಳಿತಲ್ಲಿಂದ ಕಾಣಬಹುದಿತ್ತು. ಸುಮಾರು ಮೂವತ್ತು ಜನರಿದ್ದ ಜಾಗಅದು. ಸುಮ್ಮನೆ ತಲೆ ಎತ್ತಿ ಸುತ್ತಲು ಕಣ್ಣು ಹಾಯಿಸಿದೆ. ಎಲ್ಲರು ಅವರವರ ಕೆಲಸದಲ್ಲಿ ಮಗ್ನರಾಗಿದ್ದಾರೆ. ಗಂಡಸರು , ಹೆಂಗಸರು ಎಲ್ಲರೂ ಇದ್ದಾರೆ.ಕೆಲವರು ಪೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿರುವರು. ನೋಡಿದರೆ ಕೆಲಸಕ್ಕೆ ಸಂಭಂದಪಟ್ಟಂತೆ ಅನಿಸುವ ರೀತಿ ಇದೆ. ಕೆಲವರು ಗಂಭೀರ,ಕೆಲವರು ನಗು, ಕೆಲವರ ಮುಖದಲ್ಲಿ ಆಯಾಸ. ಈ ಪತ್ರ ಯಾರಿಗೆ ಸೇರಿರಬಹುದೆಂದು ಕಲ್ಪಿಸಲು ಕಷ್ಟವಾಗುತ್ತಿದೆ, ಪತ್ರದಲ್ಲಿ ಉಪಯೋಗಿಸಿರುವ ಎರಡುಹೆಸರುಗಳು ನಿಜ ನಾಮಗಳಲ್ಲ. ಪರಸ್ಪರ ಪ್ರೀತಿಯಿಂದ ಗುರುತಿಸಲು ಇಟ್ಟುಕೊಂಡಿರುವ ಮುದ್ದು ಹೆಸರುಗಳು ಅಂತ ಗೊತ್ತಾಗುತ್ತಿದೆ.
ಇಲ್ಲಿ ಕುಳಿತಿರುವರಲ್ಲಿ ಒಬ್ಬರು ಯಾರೊ ನಿಮ್ಮಿ ಇರಬಹುದು, ಯಾರೊ ವಿಶು ಇರಬಹುದು, ಇಲ್ಲಿ ಏಕೆ? ಇಂಥ ವಿಶು ಅಥವ ನಿಮ್ಮಿ ಹೊರಗೆ ರಸ್ತೆಯಲ್ಲಿ,ಮನೆಗಳಲ್ಲಿ, ವಾಹನಗಳಲ್ಲಿ, ಪಾರ್ಕಗಳಲ್ಲಿ , ಸಿನಿಮಾಹಾಲಿನಲ್ಲಿ ಎಲ್ಲೆಲ್ಲೊಇರಬಹುದು.
ನನ್ನೊಳಗೆ ಎಂತದೋ ಭ್ರಮೆಯೊಂದು ತುಂಬಿತು. ನಾನು ನೋಡುವ ಹೊರಗಿನ ವ್ಯವಹಾರಿಕ ಪ್ರಪಂಚವೆ ಬೇರೆ. ಈ ಪ್ರೀತಿ ಪ್ರೇಮ ಅನ್ನುವ ಲೋಕವೇ ಬೇರೆ. ಮನುಷ್ಯನ ಬದುಕಿನ ಇತಿಹಾಸದುದ್ದಕ್ಕೂ, ಗುಪ್ತಗಾಮಿನಿಯಂತೆ, ಅಂತರಂಗದಲ್ಲಿನ ಗಂಗೆಯಂತೆ ಹರಿಯುತ್ತಲೇ ಬರುತ್ತಿದೆ . ಈ ಪ್ರೇಮಿಗಳ ನಡುವಿನ ಈ ಪ್ರೀತಿ. ಅದರ ಹರಿವನ್ನು ಗುರುತಿಸುವುದೇ ಒಮ್ಮೊಮ್ಮೆ ಕಷ್ಟ. ನಾವು ನಿಂತ ನೆಲದ ಕೆಳಗೆ ಎಷ್ಟು ಆಳದಲ್ಲಿ ಪ್ರವಹಿಸುತ್ತಿರಬಹುದಾದ ಅಂತರ್ಜಲದಂತೆ ಈ ಪ್ರೀತಿ ಅನ್ನಿಸಿತು. ಕಣ್ಣಿಗೆ ಕಾಣಿಸದು. ದ್ವನಿಯು ಕೇಳಿಸದು. ಆತ್ಮ ಆತ್ಮಗಳ ನಡುವಿನ ಪ್ರವಾಹ ಈ ಪ್ರೀತಿ ಪ್ರೇಮ ಎಂಬ ಭಾವ ಪ್ರವಾಹ. ಒಮ್ಮೆ ಕಣ್ಣು ಮುಚ್ಚಿದೆ. ಯಾರೋ ಪಾಪ ನನಗೆ ಪರಿಚಿತರಾಗಿರಬಹುದಾದ ಅಪರಿಚಿತರು ಈ ಪ್ರೇಮಿಗಳು. ತಮ್ಮ ಜೀವನಕ್ಕೆ ಅನಿವಾರ್ಯವಾಗಿ ಹೊಂದಿಕೊಂಡವರು ಅನ್ನಿಸಿತು.
ಮತ್ತೆ ಪತ್ರದ ಕಡೆಗೊಮ್ಮೆ ನೋಡಿದೆ. ಆ ಪತ್ರ ಅಪ್ರಸ್ತುತ ಅನ್ನಿಸಿತು.
ಅದನ್ನು ಮಧ್ಯಕ್ಕೆ ಮಡಿಚಿ ಎರಡು ಭಾಗವಾಗಿ ಹರಿದೆ,
ಮತ್ತೆ ಸೇರಿಸಿ, ಮಧ್ಯಕ್ಕೆ ಎರಡು ಭಾಗವಾಗಿ ಹರಿದೆ,
ಮತ್ತೆ ಸೇರಿಸಿ ಎರಡು ಭಾಗವಾಗಿ ಹರಿದೆ…….
-ಮುಗಿಯಿತು
-ಪಾರ್ಥಸಾರಥಿ ನರಸಿಂಗರಾವ್
"ನನ್ನೊಳಗೆ ಎಂತದೋ ಭ್ರಮೆ……..ಅನಿವಾರ್ಯವಾಗಿ ಹೋಂದಿಕೊಂಡರು ಅನಿಸಿತು" – ಇಷ್ಟವಾಯಿತು. ಸಧಾರಣ ಕಥೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.
ಹೌದು ಸರ್ , ಹಾಗೆ ನೋಡುವಲ್ಲಿ ಯಾವ ಕತೆಯ ವಸ್ತುವು ಅದ್ಬುತವಾಗಿರಲ್ಲ, ಏಕೆಂದರೆ ನಮ್ಮ ಹಿರಿಯರು ಎಲ್ಲ ಕತೆಗಳನ್ನು ಬರೆದು ಮುಗಿಸಿಬಿಟ್ಟಿದ್ದಾರೆ, ಅದರಲ್ಲಿ ಪ್ರೀತಿ ಯ ವಿಷಯ ಬಂದರಂತು, ಎಲ್ಲ ಭಾಷೆಗಳಲ್ಲಿ ಸಾಹಿತ್ಯದಲ್ಲಿ ಸಿನಿಮಾದಲ್ಲಿ ನಾಟಕದಲ್ಲಿ ಎಲ್ಲ ರೀತಿಯ ಪ್ರಯೋಗವನ್ನು ಮಾಡಿರುತ್ತಾರೆ, ನಾವು ಅದೆ ವಿಷಯ ತೆಗೆದುಕೊಂಡಾಗ ಅದೆ ಕತೆಯನ್ನು ಬೇರೆ ರೀತಿಯ ನಿರೂಪಣೆಯಿಂದೆ ಗಮನ ಸೆಳೆಯಲು ಯತ್ನಿಸಬೇಕಷ್ಟೆ
ಅ೦ತರ೦ದೊಳು ಹರಿದೋಡುವ ಬತ್ತದ ಗ೦ಗೆ ಪ್ರೀತಿ ..ಎದೆಯೊಳಗೆ ಕಚಗುಳಿತಯಿಡುತ್ತ ಸಾಗುವ ಭಾವವದು. ಚೆನ್ನಾಗಿದೆ ನಿಮ್ಮ ಬರಹ ..ಧನ್ಯವಾದಗಳು
ಮೆಚ್ಚುಗೆಗೆ ವಂದನೆಗಳು ಸಾರ್
ಕಥೆ ತುಂಬಾ ಚನ್ನಾಗಿದೆ, ಸರ್!
ವಾಸುಕಿರರವರಿಗೆ ನಮಸ್ಕಾರ ತಮ್ಮ ಮೆಚ್ಚುಗೆಗೆ ನನ್ನ ವಂದನೆ
ಪರಿಚಿತರಾಗಿರಬಹುದಾದ ಅಪರಿಚಿತರು… Bahala chennagide sir 🙂
ವಂದನೆಗಳು ಕಿರಣ್ ರವರೆ
chenda bandide sir..:)))
ತಮ್ಮ ಮೆಚ್ಚುಗೆಗೆ ಸುನೀತರಿಗೆ ವಂದನೆ
ನಿರೂಪಣೆ ಹಿಡಿಸಿತು. ಭಗ್ನ ಪ್ರೇಮವೊಂದರ ಪಳೆಯುಳಿಕೆಯಾಗಬಯಸಿದ ಪ್ರೇಮ ಪತ್ರವೇ ಕಥೆಯಾಗಿದೆ ಇಲ್ಲಿ, ಪ್ರೇಮಿಗಳಿಬ್ಬರೂ ಅಪ್ರಕಟಿತ ಪಾತ್ರಧಾರಿಗಳು!
ಹೌದು ಇಲ್ಲಿ ಪ್ರೇಮಿಗಳ ಮುಖ್ಯವಲ್ಲ , ಒಂದು ಸಂಕೇತವಷ್ಟೆ , ಕತೆಯ ಉದ್ದೇಶ ಪ್ರೇಮವೆಂಬ ಭಾವ ಶತಶತಮಾನಗಳಿಂದ ಹರಿಯುತ್ತಲೆ ಇದೆ, ಅದು ಬಡವ ಬಲ್ಲದರ ಮದ್ಯೆ, ಜಾತಿ ಜಾತಿಗಳ ನಡುವೆ , ದೇಶ ದೇಶಗಳ ನಡುವೆ ಎಂದು ಹೇಳುವುದೆ ಆಗಿದೆ ಕತೆಯ ಗುರಿ. ತಮ್ಮ ಮೆಚ್ಚುಗೆಗೆ ವಂದನೆಗಳು ಪ್ರಸಾದ್ ವಿ ಮೂರ್ತಿಯವರೆ
ಯಾವದೋ ಎರಡು ಹೃದಯಗಳ ನಡುವೆ ಅಂಕುರಿಸಿ ಬೆಳೆಯುವ ಮೊದಲೇ ಮುದುಡಿದ ಪ್ರೀತಿಯನ್ನು, ಪ್ರೇಮ ಪತ್ರ ಆಧಾರವಾಗಿಟ್ಟುಕೊಂಡು ವಿವರಿಸಿದ ರೀತಿ ವಿಭಿನ್ನ ಎನ್ನಿಸಿತು.ನಿಮ್ಮಿಂದ ಇನ್ನಷ್ಟು ಕಥಾನಕಗಳು ಹೊರ ಬರಲಿ … ಶುಭವಾಗಲಿ ಸರ್…………….
ವಂದನೆಗಳು ಚಿನ್ಮಯರವರೆ ನಿಮ್ಮ ಸರಣಿ ಬರಹ ನನ್ನೊಳಗಿನ ಗುಜರಾತ ಓದುತ್ತಿರುವೆ
ಮತ್ತೆ ಸೇರಿಸಿ ಎರಡು ಭಾಗವಾಗಿ ಹರಿದೆ…….
ಆ ಭಾವವೇ ಕಥೆಗೆ ಒಳ್ಳೆಯ ಮುಕ್ತಾಯವನ್ನು ಕೊಡುತ್ತದೆ. ಕಥೆ ಇಷ್ಟವಾಯ್ತು ಪಾರ್ಥಸಾರಥಿ ಸರ್:)
ತಮ್ಮ ಮೆಚ್ಚುಗೆಯ ವಿಮರ್ಷೆಗೆ ವಂದನೆಗಳು ಸಂತೋಷಕುಮಾರ ರವರಿಗೆ
ವಾಸ್ತವದೊಂದಿಗೆ ಭೂತಕಾಲದ ಪ್ರೇಮವನ್ನು ಹೆಣೆದಿಡುವ ಕಥಾ ನಿರೂಪಣೆ ಚೆನ್ನಾಗಿದೆ ಸರ್, ಧನ್ಯವಾದಗಳು.
ವಂದನೆಗಳು ದಿವ್ಯ ಅಂಜನಪ್ಪನವರಿಗೆ ತಮ್ಮ ವಿಮರ್ಷಪೂರ್ಣ ಮೆಚ್ಚುಗೆಗೆ
ಚೆನ್ನಾಗಿದೆ ಸರ್.
ಕೃಷ್ಣಮೂರ್ತಿರವರಿಗೆ ತಮ್ಮ ಮೆಚ್ಚುಗೆಗೆ ವಂದನೆಗಳು
ನಾವು ನಿಂತ ನೆಲದ ಕೆಳಗೆ ಎಷ್ಟು ಆಳದಲ್ಲಿ ಪ್ರವಹಿಸುತ್ತಿರಬಹುದಾದ ಅಂತರ್ಜಲದಂತೆ ಈ ಪ್ರೀತಿ ಅನ್ನಿಸಿತು. ಕಣ್ಣಿಗೆ ಕಾಣಿಸದು. ದ್ವನಿಯು ಕೇಳಿಸದು. ಆತ್ಮ ಆತ್ಮಗಳ ನಡುವಿನ ಪ್ರವಾಹ ಈ ಪ್ರೀತಿ ಪ್ರೇಮ ಎಂಬ ಭಾವ ಪ್ರವಾಹ.ಎಷ್ಟು ಚಂದದ ಬರಹ..ತುಂಬಾ ಇಷ್ಟ ವಾಯಿತು
ವಂದನೆಗಳು ಮಮತಾರವರಿಗೆ
ನಿಮ್ಮ ಅಂತರ್ಜಾಲದ ಹುಡುಗನ ಕತೆ ಓದಿದೆ, ಆದರೆ ಅದಕ್ಕೆಸಾಕಷ್ಟು ಮುಖಗಳಿವೆ, ಈಗ ಯಾರನ್ನು ಅಷ್ಟು ಸುಲುಭವಾಗಿ ನಂಬಲಾಗದು, ನಂಬುವ ಕಾಲವು ಅಲ್ಲ. ಅಮಾಯಕತೆಗಂತು ಪ್ರಪಂಚದಲ್ಲಿ ಸ್ಥಳವಿಲ್ಲ
ಕಥೆ ತುಂಬಾ ಸ್ವಾರಸ್ಯವಾಗಿದೆ. ಇಷ್ಟ ಆಯ್ತು ಸರ್…..
ವಂದನೆಗಳು ಸುಮತಿ ದೀಪ ಹೆಗ್ಡೆರವರಿಗೆ . ನಿಮ್ಮ ಮೆಚ್ಚುಗೆ ನನಗೆ ಸಂತಸ ತಂದಿದೆ
ಕಥೆ ಚೆನ್ನಾಗಿದೆ ಸರ್