ಪ್ರೇಮ ಪತ್ರಗಳು

ಅಂತರಂಗದಾ ಮೃದಂಗ: ರೇಣುಕಾ ಶಿಲ್ಪಿ

ಅಂದು ಮಧ್ಯಾಹ್ನ ಊಟ ಮಾಡಿ ಟಿ.ವಿ ಅನ್ ಮಾಡಿ ಕುಳಿತೆ.ಸಿಟಿ ಚಾನಲವೊಂದರಲ್ಲಿ ಕಿಚ್ಚ ಸುದೀಪನ 'ಸವಿ ಸವಿ ನೆನೆಪು' ಹಾಡು ಬರುತ್ತಿದ್ದಂತೆ ಕೆ.ಇ.ಬಿ ಯವರು ವಿದ್ಯುತ್ ಶಾಕ್ ಕೊಟ್ಟರು, ಏನ್ಮಾಡೋದು? ಅದೇ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮಲಗುತ್ತಿದ್ದಂತೆಯೇ ನನಗರಿವಿಲ್ಲದಂತೆ ನನ್ನ. ಕಾಲೇಜು ದಿನಗಳ ನೆನಪುಗಳಿಗೆ ಜಾರಿಕೊಂಡೆ …

ಹದಿಹರೆಯದ ದಿನಗಳು ಬಲು ಸೊಗಸು..! ಆಗಿನ ಆಕರ್ಷಣೆ-ವಿಕರ್ಷಣೆಗಳು, ಆಸೆ-ನಿರಾಸೆಗಳು, ಧಿಡೀರ್ ಬದಲಾಗುವ ಚಿತ್ತವೃತ್ತಿಗಳು, ಜಗತ್ತನ್ನೇ ಗೆಲ್ಲುವೆನೆಂಬ ಮನೋಇಚ್ಛೆಗಳು, ಸ್ನೇಹಿತರ ಒಡನಾಟಗಳು….ಹೀಗೆ ಎಲ್ಲವೂ ಅವಿಸ್ಮರಣೀಯ…

'ಹುಚ್ಚು ಕೋಡಿ ಮನಸುಃ ಅದು ಹದಿನಾರರ ವಯಸು..'
ಎಲ್ಲರಂತೆ ನಾನು ಪ್ರೀತಿಯ ಆಕರ್ಷಣೆಗೊಳಪಟ್ಟಿದ್ದು, ನಮ್ಮ ಇಡೀ ಕಾಲೇಜಗೆ 'ಅಘೋಷಿತ ಹೀರೋ'ಆಗಿ ಮೆರೆಯುತ್ತಿದ್ದ ನನ್ನ ಗೆಳೆಯನಡೆಗೆ. ಅವನ ಸ್ನಿಗ್ಧ ಮುಗಳ್ನಗೆ ಕೋಲ್ಮಿಂಚಿನ ನೋಟಕ್ಕೆ ನಾ ಶರಣಾದೆನು. ಕಾಲೇಜಿನ ಪ್ರತಿಯೊಂದು ಸಭೆ-ಸಮಾರಂಭಗಳಿಗೂ ಅವನದೇ ಮುಂದಾಳತ್ವ. ಅವನೊಳಗೊಬ್ಬ ಪ್ರತಿಭಾವಂತನಿದ್ದ. ಪ್ರತಿಯೊಬ್ಬರನ್ನೂ ಕಣ್ಮನ ಸೆಳೆಯುವ ನೈಜ ಸೌಂದರ್ಯ ಅವನದು, ನನಗಂತೂ ಅವನ ಬಾಲ್ಯದ ತುಂಟತನಕ್ಕೆ ಸಾಕ್ಷಿಯಾಗಿದ್ದ ಹಣೆಯ ಮೇಲಿನ ಗಾಯದ ಗುರುತು ಮನಮೋಹಕ.. .!

ಒಂದು ದೊಡ್ಡ ಮೌನವೇ ಮೈದಳೆದಂತಿದ್ದ ಅವನ ವ್ಯಕ್ತಿತ್ವಕ್ಕೆ ಮೌನವೇ ಆಭರಣವಾಗಿತ್ತು. ಸದಾ ಸ್ನೇಹಿತರ ಮಧ್ಯೆದಲ್ಲಿದ್ದುಕೊಂಡೂ ಮಿತಭಾಷಿಯೆನಿಸಿದ್ದ. ಅನೇಕ ಹುಡುಗಿಯರು ಅವನ ಪ್ರೇಮದ ಆಕಾಂಕ್ಷಿಗಳಾಗಿದ್ದರೂ ಅದಾವ ಘಳಿಗೆಯಲ್ಲಿ ನನ್ನಡೆಗೆ ಮೌನಪ್ರೀತಿಯ ನಾಂದಿ ಹಾಡಿದನೋ ನಾ ತಿಳಿಯದಾದೆ, ಒಲಿದು ಬಂದ ಒಲುಮೆಯನ್ನು ಮೌನವಾಗಿಯೇ ಸ್ವಿಕರಿಸಿದೆ. ಅಂದಿನ ನನ್ನ ಹರೆಯದ ಹೃದಯಕ್ಕೆ ಅದು ಪ್ರೇಮವೊ, ಮೋಹವೊ ತಿಳಿಯದೆ ಹೋದರೋ, ಇಂದು  ನನಗನಿಸುತ್ತಿದೆ ಅದೊಂದು ನಿಷ್ಕಲ್ಮಷ ಪರಿಶುದ್ಧ ಪ್ರೀತಿಯೆಂದು. ನಿನ್ನ ಮೌನಕ್ಕೆ ಅದೆಷ್ಟು ಪ್ರೀತಿಗಳು ವಿಮುಖವಾದವು ಎಂಬುದನ್ನು ನೀ ಅರಿಯದೆ ಹೋದರೂ.. ಮೌನ ಕೂಡ ಒಂದು ಭಾಷೆಯೆಂದು ನೀನು ಕಲಿಸಿಕೊಟ್ಟವನು.

ಹೀಗೆಯೇ ನಮ್ಮಿಬ್ಬರ ಪ್ರೀತಿಯ ಮೌನದ ಸಂಭಾಷಣೆ,ಕಣ್ಣಿನ ವಾರೆ ನೋಟಗಳು ಹೃದಯದ ಜ್ಞಾನಕ್ಕೆ ಅರ್ಥವಾಗುತ್ತಿತ್ತೇ ವಿನ:ಮನದಾಸೆಗಳಿಗಲ್ಲ,ನೂರಾರು ಹುಚ್ಚು ಭಾವನೆಗಳು, ಮನೋಇಂಗಿತಗಳು ನಿನ್ನ ಸಾನಿಧ್ಯ ಬಯಸುವಂತೆ ಪ್ರೇರಪಿಸ ತೊಡಗಿದವು, ಪ್ರೇಮದಲೆಯಲ್ಲಿ ತೇಲಿಸಿದವು.ನೇರವಾಗಿ ವ್ಯಕ್ತಪಡಿಸಲಾರದ ನನ್ನ ಬಲಹೀನ ಮನಸ್ಸು ನಿನ್ನನ್ನು ಸೆಳೆಯಲು ಆಯ್ದುಕೊಂಡ ಅಸ್ತ್ರ 'ಪ್ರೇಮಪತ್ರ ', ಅಂದೇ ರಾತ್ರಿ ನೂರಾರು ಪ್ಶಯತ್ನಗಳೊಂದಿಗೆ ಚೆಂದವೂ ಅಲ್ಲದ:ಛಂಧಸ್ಸು ಇಲ್ಲದ. ಕವಿತೆಯೊಂದಿಗೆ ಪ್ರೇಮಪತ್ರ ಬರೆದೆಬಿಟ್ಟೆ. ಆದರೆ ನಿನ್ನ ಮೌನದ ದಬ್ಬಾಳಿಕೆಗೆ, ಭಾಷಾ ಪ್ರಭುತ್ವಕ್ಕೆ ಹೆದರಿಕೊಂಡ ಪತ್ರ ಬೆಳ್ಳಂಬೆಳ್ಳಗೆಯೇ ಆತ್ಮ ಹತ್ಯೆಗೆ ಶರಣಾಗಿ ಸರ್ವಾಂಗಛೇದನಗೊಂಡು ಕಸದ ಬುಟ್ಟಿಗೆ ಸೇರಿಬಿಟ್ಟಿತು..! ಹೀಗೆಯೇ ವ್ಯರ್ಥ ಪ್ರಯತ್ನಗಳು ಸಾಗತ್ತಲಿದ್ದರೂ ನಿನ್ನೋಡನಾಟದ ನೆನಪುಗಳನ್ನು ಮರೆಯಲು ಸಾಧ್ಯ ವೇ ಗೆಳೆಯಾ..?

'ಸವಿನೆನೆಪುಗಳು ಬೇಕು,ಸವಿಯಲು ಬದಕು'
ಅದೊಂದು ಸುಂದರ ಮುಂಜಾವಿನ ನೀರವತೆಯ ಹಾದಿಯಲ್ಲಿ ನಾವಿಬ್ಬರೂ ಜೊತೆ ಜೊತೆಯಾಗಿಯೇ ಕಾಲೇಜಿನತ್ತ ಹೆಜ್ಜೆ ಹಾಕಿದ್ದು, ಇಳಿಸಂಜೆ ಹೊತ್ತಿನ ತಿಂಗಳ ಬೆಳಕಿನಲ್ಲಿ ನೆಡದ ಕಾಲೇಜಿನ ಕಾರ್ಯಕ್ರಮದಲ್ಲಿ ನೀ ಹಾಡಿದ ಗೀತೆ.."ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ, ಕಂಡು ನಿಂತೆ, ನಿಂತು ಸೋತೆ.. ಸೋತು ಕವಿಯಾಗಿ ಕವಿತೆ ಹಾಡಿದೆ.."ಯಾವುದೇ ಸ್ಪರ್ಧೆಯಲ್ಲಿ ನೀ ಗೆದ್ದರೂ ನನ್ನದೆರುಗೆ ವಿಜಯದ ಸಂಕೇತದೊಂದಿಗೆ ನಗೆ ಬೀರುತ್ತಿದ್ದು.. ಹೀಗೆ ಯಾವುದನ್ನು ಮರೆಯಲಿ ಗೆಳೆಯಾ..? ನೆನೆಪುಗಳು ನೂರಾರು, ಸಾವಿರಾರು..ಅವುಗಳೆಲ್ಲಾ ಅಂತರಾಳದಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿವೆ. ನೆನೆಪುಗಳು ನಮ್ಮ ಪ್ರೇಮದ ಬತ್ತಲಾರದ ಜಲದ ಬಿಂದುಗಳು.

'ಹೇಳಿ ಹೋಗು ಕಾರಣ'
ನಮ್ಮ ಓದು ಮುಗಿಯುತ್ತಿದ್ದಂತೆಯೇ ನೀನು ದೂರದ ಊರಿಗೆ ಹೋದೆಯೆಂದು ಕೇಳಲ್ಪಟ್ಟೆ. ಆ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾರದ ನನ್ನ ಮನಸ್ಸು ತೊಳಲಾಡಿದ್ದು ಅಷ್ಟಿಷ್ಟಲ್ಲ. ನೀನೇ ಬಿತ್ತಿ ಬೆಳೆಸಿದ ನೂರಾರು ಭಾವನೆಗಳು, ಕನಸುಗಳು ಹೆಮ್ಮರವಾಗುತ್ತಿದ್ದಂತೆಯೇ ಕಡಿದು ಹಾಕಿ ಕೊನೆಗೂ ನನ್ನಿಂದ  ಮೌನವಾಗಿಯೇ ದೂರ ಸರಿದಿದ್ದು ನಿನಗೆ ಅದೆಷ್ಟು ಸರಿಯೆನಿಸಿತೋ ಗೆಳೆಯಾ..?ಆದರೆ ನಾನು ಕಾಲನ ನಿರ್ಣಯಕ್ಕೆ ತಲೆಬಾಗಿ ನಿನ್ನ ನೆನಪುಗಳೊಂದಿಗೆ ಬದುಕುತ್ತಿರುವೆ ಇನಿಯಾ…

'ನೀ ಸಿಗದ ಬಾಳೊಂದು ಬಾಳೇ…'
  ಒಂದಂತೂ ಸತ್ಯ ಗೆಳೆಯಾ,ನೀನು ನನ್ನ ಬದುಕಿನಂಗಳಕ್ಕೆ ಹುಣ್ಣಿಮೆಯ ತಂಗಾಳಿಯಲ್ಲಿ ಬೆಳದಿಂಗಳ ಸೂಸುವ ಪೂರ್ಣ ಚಂದ್ರನಾಗಿ ಬರದಿದ್ದರೂ ಭೂಮಿಯಿಂದ ಅದೆಷ್ಟು ಜ್ಯೋರ್ತಿವರ್ಷಗಳ ಅಂತರದಲ್ಲಿ ಬೆಳಗುವ ನಕ್ಷತ್ರದಂತೆ ನನ್ನ ಮನದಂಗಳದಲ್ಲಿ ಸದಾ ಮಿನುಗುತ್ತಿರುವೆ. ಆದರೆ ನನ್ನ ಬಾಳಿನೊಲುಮೆಗೆ ನೀನೆಂದೂ ನಿಲುಕದ ನಕ್ಷತ್ರ..! ಎಂದೆಂದಿಗೂ ನಿಲುಕದ ನಕ್ಷತ್ರ.. .!! ನಿಲುಕುವುದೇ ನಕ್ಷತ್ರ.. .?!!

*****

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಅಂತರಂಗದಾ ಮೃದಂಗ: ರೇಣುಕಾ ಶಿಲ್ಪಿ

  1. ಓ ಹೋ ಅತ್ಯಂತ ಸುಂದರ ನೆನಪುಗಳನ್ನು ಪಂಜುವಿನೊಂದಿಗೆ ಹಂಚಿಕೊಂಡಿರುವಿರಿ ಈ ಪ್ರೀತಿಯನ್ನುವ ಮಾಯೆ ಹೀಗೆ ನಾವು ಅಂದುಕೊಳ್ಳದ ಹಾಗೆ ಮುಂದುವರೆಯಲಿ ಬರವಣಿಗೆ 

  2. ಗಾಳಿಪಟ ಎಷ್ಟೇ ದೂರ ಹೊದರೂ ಅದರ ದಾರ ನಮ್ಮಕೈಯಲ್ಲಿ ಇರುತ್ತದೆ . ಹಾಗೆಯೇ ನಿಮ್ಮ ಗೆಳೆಯ ಎಷ್ಟೇದೂರವಿದ್ದರೂ ಅವರ ನೆನಪು ನಿಮ್ಮ ಮನದಂಗಳದಿ ಸದಾ ಹಸಿರೆಂದು ನಿಮ್ಮ ಮನದ ಕನ್ನಡಿಯಲ್ಲಿ ಪ್ರತಿಭಿಂಬಿಸಿದ್ದೀರಿ,ನಿಮ್ಮ ಪ್ರೇಮಪತ್ರದ ಸಾವಿನರೀತಿ , ನಿಮ್ಮ ತವಕ ತಲ್ಲಣಗಳು ಹೀಗೆ ಎಲ್ಲ ನೆನಪಿನ ಸುನಾಮಿಯನ್ನೂ ಆಸ್ಪೋಟಿಸಿದ್ದೀರಿ.ಬರಹ ತಂಬ ಚೆನ್ನಾಗಿದೆ

Leave a Reply

Your email address will not be published. Required fields are marked *