ಕಳೆದ ಒಂದು ತಿಂಗಳಿನಿಂದ ಶುರುವಾಗಿದ್ದ ರಾಮೇಗೌಡನ ಕಲ್ಲಿನ ಪುರಾಣ ಅವನ ಹೆಂಡತಿ ಮಗನ ತಲೆ ಕೆಡಿಸಿತ್ತು. ಅನ್ನ ಕಲೆಸಿ ಒಂದು ತುತ್ತು ಬಾಯಿಗಿಟ್ಟು ಅಗಿಯುತ್ತಿದ್ದಂತೆ, ‘ಅಯ್ಯೋ!ಕಲ್ಲು!ಕಲ್ಲು!’ ಅಂತ ರಾಮೆಗೌಡ ಕೂಗಾಡಲು ಪ್ರಾರಂಭಿಸುತ್ತಿದ್ದ. ಇದರಿಂದ ರೋಸತ್ತ ತಾಯವ್ವ ಪ್ರತಿ ಸಾರಿಯೂ ತಾನೇ ಅನ್ನ ಸಾರು ಕಲೆಸಿ ಒಂದೊಂದು ಅಗುಳನ್ನೂ ಹಿಚುಕಿ ನೋಡಿಊಟ ಬಡಿಸುತ್ತಿದ್ದಳು. ಅಷ್ಟಾದರು ಬಾಯಿಗಿಟ್ಟ ತುತ್ತನ್ನು ಉಗಿದು ಕಲ್ಲು, ಕಲ್ಲು ಎಂದು ಕೂಗಾಡುವುದನ್ನೇನು ರಾಮೇಗೌಡ ಬಿಟ್ಟಿರಲಿಲ್ಲ. ಜೊತೆಗೆ ‘ಬಡ್ಡೆತ್ತದೆ, ಬರೀ ಕಲ್ಲೇ ಉಣ್ಣಾಕಿಕ್ತಿಯಲ್ಲೇ ಬೇವಾರ್ಸಿ’ ಅಂತ ತಾಯವ್ವನ ಮೇಲೆ ಕೂಗಾಡುತ್ತಿದ್ದ. ವಯಸ್ಸಿಗೆ ಬಂದ ಮಗನೆದುರು ಗಂಡ ಮಾಡುತ್ತಿದ್ದ ಅವಾಂತರಗಳಿಂದ ತಾಯವ್ವ ರೋಸಿ ಹೋಗಿದ್ದಳು.
ಅವನ ಇಂತಹ ವಿಚಿತ್ರ ನಡವಳಿಕೆ ಶುರುವಾದ ಮೇಲೆ ಮೂರು ದಿನ ಆಫೀಸಿಗೂ ಹೋಗದೆ, ಯಾರೊಂದಿಗೂ ಮಾತಾಡದೆ ತನ್ನ ರೂಮಲ್ಲಿ ಮೌನಿಯಾಗಿ ಮಲಗೇ ಇರುತ್ತಿದ್ದ. ನಾಲ್ಕನೇ ದಿನ ಅವನ ಕೈ ಕೆಳಗಿನ ನೌಕರನೊಬ್ಬ ಸಾಹೇಬರು ಆಫೀಸಿಗೆ ಯಾಕೆ ಬಂದಿಲ್ಲವೆಂದು ನೋಡಲು ಬಂದಾಗ ರಾಮೇಗೌಡÀ ಆ ಬಡಪಾಯಿಯ ಮೇಲೂ ರೇಗಿ ‘ನೋಡಯ್ಯಾ ನಾನು ಇನ್ನು ಮೆಲೆ ಆ ದರಿದ್ರದ ಆಫೀಸಿಗೆ ಬರಲ್ಲ ಅಂತ ಆ ಮುಂಡೇಮಗ ಕಮಿಷನರ್ರಿಗೆ ಹೇಳಿ ಬಿಡು’ ಅಂತ ಕೂಗಾಡಿದ್ದ. ಹಾಗೆ ಕೂಗಾಡಿ ಅವನು ರೂಮೊಳಗೆ ಹೋದಮೇಲೆ ತಾಯವ್ವನೇ ಅವನಿಗೆ ಸಾಹೇಬರಿಗೆ ಹುಷಾರಿಲ್ಲ,ಅದಕ್ಕೆ ಹೀಗಾಡ್ತಾರೆ ಅಂತ ಸಮಾದಾನ ಮಾಡಿ ಕಳಿಸಿದ್ದಳು. ಆಮೇಲೆ ಗಂಡನಿಗೆ ಗೊತ್ತಾಗದಂತೆ ಕಮಿಷನರಿಗೆ ಫೋನ್ ಮಾಡಿ ರಾಮೇಗೌಡನ ವಿಚಾರ ಹೇಳಿ ಸದ್ಯಕ್ಕವರಿಗೆ ರಜ ನೀಡುವಂತೆ ಕೇಳಿಕೊಂಡಿದ್ದಳು.
ಇದಾದ ಮೇಲೆ ಗಂಡ ಊಟವನ್ನಂತು ಸರಿ ಮಾಡ್ತಿಲ್ಲ, ಪಾಪ ಅಂತ ಹಾಲನ್ನೊ ಜ್ಯೂಸನ್ನೊ ತಗೊಂಡೋಗಿ ಕೊಟ್ಟರೆ ಅದನ್ನೂ ಒಂದೆರಡು ಗುಟುಕು ಕುಡಿದಿದ್ದೆ ಇದಕ್ಕೂ ಕಲ್ಲುಮಣ್ಣಾಕಿ ಕೊಟ್ಟಿದಿಯಲ್ಲೇ, ಏಳು ಮಿಂಡರಿಗೆ ಹುಟ್ಟಿದೋಳೆ ಅನ್ನುತ್ತ ಲೋಟ ಎಸೆಯುತ್ತಿದ್ದ.
ದಿನೆ ದಿನೆ ಪರಿಸ್ಥಿತಿ ಕೈಮೀರುತ್ತೀರುವುದನ್ನು ನೋಡಿದ ಮಗ ಫ್ಯಾಮಿಲಿ ಡಾಕ್ಟರನ್ನು ಮನೆಗೇ ಕರೆತಂದ. ರಾಮೇಗೌಡನನ್ನು ಪರೀಕ್ಷಿಸಿದ ಡಾಕ್ಟರ್ ತಾಯವ್ವನಿಗೆ, “ಮೇಡಂ ನನಗನ್ನಿಸುವಂತೆ ಇದು ದೇಹದ ಕಾಯಿಲೆ ಅಲ್ಲ. ಅವರ ಮನಸ್ಸಿಗೆ ಎಂತಹುದೋ ಆಘಾತವಾಗಿದೆ. ಚಂದ್ರಪ್ಪ ಅಂತ ನನ್ನ ಪರಿಚಯದ ಮನಶಾಸ್ತ್ರಜ್ಞರೊಬ್ಬರಿದ್ದಾರೆ. ನಾಳೇನೆ ಗೌಡರನ್ನ ಅವರ ಹತ್ತಿರ ಕರೆದುಕೊಂಡು ಹೋಗಿ. ನೀವು ಬರ್ತಿರೋ ವಿಚಾರವನ್ನು ಪೋನು ಮಾಡಿ ಅವರಿಗೆ ಹೇಳಿರ್ತೀನಿ.” ಅಂತ ಹೆಳಿ ಹೋದರು.
ಅವತ್ತು ರಾತ್ರಿಯಿಡೀ ತಾಯವ್ವನಿಗೆ ನಿದ್ದೆ ಹತ್ತಲಿಲ್ಲ. ಮನಸ್ಸಿಗೆ ಹಚ್ಚಿಕೊಂಡು ಕೊರಗೊ ಅಂತದ್ದು ಇವರಿಗೆ ಏನಾಯಿತು ದೇವರೆÉ ಅನ್ನುತ್ತ ಅಳುತ್ತಲೇ ಮಲಗಿದಳು. ಮಾರನೆ ದಿನ ಚಂದ್ರಪ್ಪನವರ ಕ್ಲೀನಿಕ್ಕಿಗೆ ಹೋದಾಗ ಅವರು ಮೊದಲು ತಾಯವ್ವ ಒಬ್ಬಳನ್ನೇ ಕರೆಸಿಕೊಂಡರು. ಕಳೆದ ಒಂದು ತಿಂಗಳಿನಿಂದಲೂ ನಡೆದ ಎಲ್ಲ ಘಟನೆಗಳನ್ನು, ರಾಮೇಗೌಡನ ವಿಚಿತ್ರ ನಡವಳಿಕೆಗಳನ್ನು ತಾಯವ್ವನ ಬಾಯಿಂದ ಕೇಳಿದ ಚಂದ್ರಪ್ಪ ಇದೇನು ಅಂತಹ ಗಂಬೀರವಾದ ಸಮಸ್ಯೆಯಲ್ಲ. ಮಾನಸಿಕವಾಗಿ ಮನುಷ್ಯ ದುರ್ಬಲನಾದಾಗ ಅವನ ನಡವಳಿಕೆಯಲ್ಲಿ ಈ ರೀತಿಯ ಬದಲಾವಣೆಗಳಾಗೋದು ಸಹಜ. ಈಗ ನಿಮ್ಮ ಯಜಮಾನರು ಹೀಗೆ ವರ್ತಿಸಲು ಪ್ರಾರಂಭಿಸಿದ್ದು ಯಾವತ್ತಿನಿಂದ ಮತ್ತು ಅದರ ಹಿಂದಿನ ಎರಡು ಮೂರು ದಿನಗಳಲ್ಲಿ ಏನಾದರು ವಿಶೇಷ ಘಟನೆಗಳು ನಡೆದಿದ್ದರೆ ಅದರ ವಿವರಗಳನ್ನು ಹೇಳಿ ಅಂದರು.
“ ಸಾರ್, ನನಗೆ ನೆನಪಿರುವಂತೆ ಕಳೆದ ತಿಂಗಳು ಎಂಟನೆ ತಾರೀಖಿನಿಂದ ಇವರು ಹೀಗೆ ವರ್ತಿಸಲು ಶುರು ಮಾಡಿದ್ದಾರೆ. ಅದರ ಹಿಂದಿನ ಒಂದು ವಾರದಲ್ಲಿ ಮನೆಯಲ್ಲಂತು ಯಾವುದೆ ವಿಶೇಷ ಘಟನೆಗಳು ನಡೆದಿಲ್ಲ. ಆದರೆ ಆರನೆ ತಾರೀಖು ಬೆಳಗಿನ ಟಿ.ವಿ.ನ್ಯೂಸಲ್ಲಿ ನಗರಪಾಲಿಕೆಯ ಅಧಿಕಾರಿಗಳ ಮನೆ ಮೆಲೆ ಲೋಕಾಯುಕ್ತ ದಾÀಳಿ ಅನ್ನುವ ಸುದ್ದಿ ನೋಡಿ ಸ್ವಲ್ಪ ಮಂಕಾದಂತೆ ಕಂಡರು. ಆಮೇಲವತ್ತು ಸರಿಯಾಗಿ ತಿಂಡಿಯನ್ನೂ ತಿನ್ನದೆ ಸಿಡಿಸಿಡಿ ಅನ್ನುತ್ತಲೇ ಆಫೀಸಿಗೆ ಹೋದರು. ರಾತ್ರಿ ತಡವಾಗಿ ಮನೆಗೆ ಬಂದವರು ಯಾವತ್ತಿಗಿಂತ ಹೆಚ್ಚಾಗಿ ಕುಡಿದಿದ್ದರು. ಬಹುಶ: ಅವರ ಸಹೋದ್ಯೋಗಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿಯಿಂದ ಬೇಜಾರಾಗಿರಬೇಕೆಂದುಕೊಂಡು ನಾನು ಹೆಚ್ಚಿಗೇನು ಕೇಳಲು ಹೋಗಲಿಲ್ಲ. ಅದಾದ ಮೇಲೆ ಇವರು ಹೀಗೆ ವರ್ತಿಸತೊಡಗಿದರು.. ಆಮೇಲಿನ್ನೊಂದು ಮಾತು ಸರ್. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಇವರ ಬಾಯಲ್ಲಿ ನಾನು ಒಂದೇ ಒಂದು ಕೆಟ್ಟ ಮಾತು ಕೇಳಿದೋಳಲ್ಲ. ಆದರೆ ಇವರು ಹೀಗಾದ ಮೆಲೆ ಮಾತ್ರ ಪ್ರತಿಯೊಂದಕ್ಕು ನನ್ನ ಮೇಲೆ ರೇಗುತ್ತಿರುತ್ತಾರೆ. ಕಿವಿಯಲ್ಲಿ ಕೇಳೋಕೆ ಅಸಹ್ಯವಾದ ಬಯ್ಗುಳವನ್ನು ಆಡಲು ಶುರು ಮಾಡಿದ್ದಾರೆ. ಹೇಗಾದರು ಮಾಡಿ ಇವರನ್ನು ಮೊದಲಿನಂತೆ ಮಾಡಿ ಸರ್” ಅನ್ನುತ್ತಾ ತಾಯವ್ವ ನಿಟ್ಟುಸಿರು ಬಿಟ್ಟಳು.
ತಾಯವ್ವನ ಮಾತುಗಳನ್ನು ಕೇಳಿಸಿಕೊಂಡ ಚಂದ್ರಪ್ಪ ಅವಳನ್ನು ಹೊರಗೆ ಕಳಿಸಿ,ರಾಮೇಗೌಡರೊಬ್ಬರನ್ನೆ ಒಳಗೆ ಕರೆಸಿಕೊಂಡರು..ಎದುರಿಗೆ ಕೂತ ರಾಮೇಗೌಡನ ಜೊತೆಹತ್ತು ನಿಮಿಷ ಔಪಚಾರಿಕವಾಗಿ ಮಾತಾಡಿದ ಚಂದ್ರಪ್ಪ, ನಂತರ ಅವನನ್ನು ಒಳಗಿನ ರೂಮಿಗೆ ಕರೆದುಕೊಂಡು ಹೋದ. ಸ್ವಲ್ಪವೇ ಬೆಳಕಿದ್ದ ಆ ರೂಮಲ್ಲಿನ ಒಂದು ಮಂಚದ ಮೇಲೆ ಅವನನ್ನು ಮಲಗಿಸಿ ಒಂದು ಇಂಜೆಕ್ಷನ್ ಕೊಟ್ಟು, “ ಗೌಡರೇ ಹಾಗೇ ಮಲಗಿರಿ, ನಿಮಗೀಗ ಇಂಜೆಕ್ಷನ್ ಕೊಟ್ಟಿದ್ದೀನಿ. ನಿಮಗೆ ನಿದ್ರೆ ಬಂದಂತಾಗುತ್ತೆ. ನನ್ನ ಮಾತುಗಳನ್ನೆ ಕೇಳಿ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಹೋಗಿ ಅಂದರು
ರಾಮೇಗೌಡನ ಬಾಲ್ಯದ ಬಗ್ಗೆ, ಓದು ಕೆಲಸದ ಬಗ್ಗೆ ಕೇಳುತ್ತಾ ಹೋದರು. ಅರೆಮಂಪರಿನಲ್ಲಿದ್ದ ಗೌಡರಿ ನಿದಾನವಾಗಿಗಿ ಉತ್ತರ ಕೊಡ್ತಾ ಹೋದ. ಸತತ ಒಂದು ಗಂಟೆಯ ನಂತರ ರಾಮೆಗೌಡನನ್ನು ಮಮೂಲಿ ಸ್ಥಿತಿಗೆ ತಂದ ಚಂದ್ರಪ್ಪ ಹೊರಗೆ ಬಂದು ತಾಯವ್ವನಿಗೆ “ಮೇಡಂ. ಇವತ್ತು ನೀವಿವರನ್ನುಕರೆದುಕೊಂಡು ಹೋಗಿ. ಎರಡು ದಿನ ಬಿಟ್ಟು ನೀವೊಬ್ಬರೆ ಬಂದು ನನ್ನ ಕಾಣಿ. ರಾಮೇಗೌಡರ ಬದುಕಿನ ಬಗ್ಗೆ ನನಗೆ ಪೂರ್ಣ ಮಾಹಿತಿ ಬೇಕು ಅಂದರು.
ಎರಡು ದಿನದ ನಂತರ ತಾಯವ್ವ ಚಂದ್ರಪ್ಪನ ಕ್ಲೀನಿಕ್ಕಿಗೆ ಹೋದಾಗ ಅವಳಿಗೇ ಕಾಯುತ್ತ ಕುಳಿತಿದ್ದ ಚಂದ್ರಪ್ಪ “ಮೇಡಂ. ನನಗೀಗ ಗೌಡರ ಜೀವನದ ಬಗ್ಗೆ ಅಂದರೆ ಅವರ ಬಾಲ್ಯ ಓದು ನೌಕರಿ ಮತ್ತು ನಿಮ್ಮ ದಾಂಪತ್ಯ ಜೀವನದ ಬಗ್ಗೆ ಎಲ್ಲವನ್ನು ಹೇಳಿ. ಯಾವೊಂದು ಸಣ್ಣ ಸಂಗತಿಯನ್ನೂ ಬಿಡದೆ ವಿವರಿಸಿ” ಅಂದ ಚಂದ್ರಪ್ಪನ ಮಾತಿಗೆ ಸರಿ ಎಂದ ತಾಯವ್ವ ರಾಮೇಗೌಡನ ಕಥೆ ಹೇಳತೊಡಗಿದಳು.
ಇವರು ಹುಟ್ಟಿದ್ದು ಮಂಡ್ಯದ ಹತ್ತಿರದ ತುಂಬಕೆರೆ ಅನ್ನೋ ಪುಟ್ಟ ಹಳ್ಳಿಯಲ್ಲಿ. ಇವರಿಗೆ ವರ್ಷ ತುಂಬುವಷ್ಟರಲಿ ಮನೆಗೆ ಬೆಂಕಿ ಬಿದ್ದು ಅಪ್ಪ ಅಮ್ಮ ಇಬ್ಬರೂ ತೀರಿಕೊಂಡಿದ್ದರು. ನಂತರ ಇವರು ಚನ್ನಪಟ್ಟಣದ ಹತ್ತಿರದ ಶೆಟ್ಟಿಹಳ್ಳಿಯಲ್ಲಿದ್ದ ತನ್ನ ವಿಧವೆ ದೊಡ್ಡಮ್ಮನ ಆಶ್ರಯಕ್ಕೆ ಹೋಗಬೇಕಾಯಿತು. ದೊಡ್ಡಮ್ಮ ಅಂದರೆ ತಾಯಿಯ ಅಕ್ಕ. ಆಕೆ ತಕ್ಕ ಮಟ್ಟಿಗೆ ಶ್ರೀಮಂತಳಾಗಿದ್ದಳು. ಮಕ್ಕಳಿಲ್ಲದ ದೊಡ್ಡಮ್ಮ ಅವನನ್ನು ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕಿದಳು. ಆ ಹಳ್ಳಿಯಲ್ಲಿ ದೊಡ್ಡಮ್ಮನಿಗೆ ವಿಶೇಷ ಗೌರವವಿತ್ತು. ಅದಕ್ಕೆ ಕಾರಣ ಅವಳ ಪರೋಪಕಾರಿ ಗುಣ. ಕಷ್ಟಕೋಟಲೆ ಅಂತ ಮನೆಬಾಗಿಲಿಗೆ ಬಂದ ಯಾರನ್ನೂ ಅವಳು ಬರಿಗೈಲಿ ಕಳಿಸುತ್ತಿರಲಿಲ್ಲ. ಹಳ್ಳಿಯ ಯಾವುದೇ ಜಾತಿಯ ಯಾರದೇ ಮನೆಯ ಮದುವೆ ನಾಮಕರಣ ಸಾವು ತಿಥಿಯಿರಲಿ ಅಲ್ಲಿ ದೊಡ್ಡಮ್ಮನ ನೆರವಿನ ಹಸ್ತ ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತಿತ್ತು.
ಅಂತಹ ಹೆಣ್ಣುಮಗಳ ಆಶ್ರಯದಲ್ಲಿ ಬೆಳೆದ ರಾಮೇಗೌಡ ಮೈಸೂರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ. ವರ್ಷ ಕಳೆಯೋದರಲ್ಲಿ ಈಗ ಕೆಲಸ ಮಾಡುತ್ತಿರುವ ಮಹಾನಗರ ಪಾಲಿಕೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸವೂ ಸಿಕ್ಕಿತ್ತು. ಓದು ಮುಗಿಸಿ ಕೆಲಸ ಸಿಗುವ ನಡುವಲ್ಲಿ ಹತ್ತಿರದ ಸಂಬಂದಿಯಾದ ನನ್ನ ಜೊತೆ ಮದುವೆಯೂ ಆಗಿತ್ತು.
ಇವರು ಮೊದಲನೇ ಸಾರಿ ಕೆಲಸಕ್ಕೆ ಅಂತ ಬೆಂಗಳೂರಿಗೆ ಹೊರಟಾಗ ಇವರೊಬ್ಬರನ್ನೇ ತೋಟಕ್ಕೆ ಕರೆದುಕೊಂಡು ಹೋಗಿ, ನೋಡು ಮಗಾ, ನೀನೆಂತ ದೊಡ್ಡ ಕೆಲಸಕ್ಕೆ ಹೋದರೂ,ಕೊನೆಗೆ ಮಾತ್ರ ಈ ಹಳ್ಳಿಗೆ ಬಂದು ಈ ತೋಟ ನೋಡಿಕೊಳ್ಳಬೇಕು. ಅನ್ನ ಕೊಟ್ಟ ಭೂಮಿತಾಯನ್ನು ಬಂಜರಾಗದಂತೆ ನೋಡಿಕೊಳ್ಳಬೇಕು. ಹಾಗೇ ಬಿಟ್ಟರೆ ನಮ್ಮ ಮನೆತನಕ್ಕೆ ಒಳ್ಳೆಯದಾಗಲ್ಲ ಅಂತ ಹೇಳಿ ಇವರ ಹತ್ತಿರ ಆಣೆ ಮಾಡಿಸಿಕೊಂಡಳು.ಜೊತೆಗೆ ಸರಕಾರ ಕೊಟ್ಟಿರೋ ಕೆಲಸವನ್ನ ನಿರ್ವಂಚನೆಯಿಂದ ಮಾಡು,ಯಾರ ಹತ್ತಿರಾನು ಎಂಜಲು ಕಾಸಿಗೆ ಕೈ ಒಡ್ಡಬೇಡ.ಸಾದ್ಯವಾದರೆ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡು ಅಂತ ತೆಂಗಿನ ಮರ ಮುಟ್ಟಿಸಿ ಪ್ರಮಾಣ ಮಾಡಿಸಿದ್ದಳು.
ಬೆಂಗಳೂರಿಗೆ ಕೆಲಸಕ್ಕೆ ಬಂದ ಮೇಲೆ ವರ್ಷಕ್ಕೆ ಎರಡುಮೂರು ಸಾರಿಯಾದರು ಹಳ್ಳಿಗೆ ಹೋಗಿ ಇದ್ದು ಬರ್ತಾ ಇದ್ದೆವು. ಅದರಲ್ಲೂ ಮಹಾಲಯದಲ್ಲಿ ಒಂದುವಾರ ರಜಾ ಹಾಕಿ ಪಕ್ಷದ ದಿನ ಹಿರಿಯರಿಗೆಲ್ಲ ಎಡೆಯಿಟ್ಟು ಕೈಮುಗಿದು ಬರ್ತಾ ಇದ್ವಿ. ದೊಡ್ಡಮ್ಮ ಮಾತ್ರ ವರ್ಷಕ್ಕೊ ಎರಡು ವರ್ಷಕ್ಕೊ ಬೆಂಗಳೂರಿಗೆ ಬಂದರೂ ಒಂದು ರಾತ್ರಿಗಿಂತ ಹೆಚ್ಚು ಇರ್ತಿರಲಿಲ್ಲ.
ಸರ್ವೀಸಾದಂತೆಲ್ಲ ಇವರು ಬದಲಾಗತೊಡಗಿದರು. ಬಡ್ತಿಗಳ ಮೇಲೆ ಬಡ್ತಿ ದೊರೆಯುತ್ತ ಎತ್ತರದ ಸ್ಥಾನಕ್ಕೆ ತಲುಪಿದ ಮೇಲಂತು ಇವರ ಹಣದ ವ್ಯಾಮೋಹ ಜಾಸ್ತಿಯಾಗತೊಡಗಿತು. ಅದೇನು ಮಾಡ್ತಾ ಇದ್ದರೊ ಗೊತ್ತಿಲ್ಲ. ಮನೆಯಲ್ಲಿ ಹಣದ ಹೊಳೆ ಹರಿಯ ತೊಡಗಿತು. ಈಗ ಆರು ತಿಂಗಳ ಹಿಂದೆ ಸುಮಾರು ಒಂದು ಕೋಟಿ ಖರ್ಚುಮಾಡಿ ಮನೆಕಟ್ಟಿಸಿದೆವು. ಅವರ ವ್ಯವಹಾರವನ್ನಾಗಲಿ, ಹಣದ ಮೂಲದ ಬಗ್ಗೆಯಾಗಲಿ ಪ್ರಶ್ನೆ ಮಾಡುವ ಧೈರ್ಯವಾಗಲಿ ಬುದ್ದಿವಂತಿಕೆಯಾಗಲಿ ನನಗಿರಲಿಲ್ಲ. ಮನೆಯ ಗೃಹ ಪ್ರವೇಶಕ್ಕೆ ಅಂತ ಹಳ್ಳಿಯಿಂದ ಬಂದ ದೊಡ್ಡಮ್ಮ ಅಷ್ಟು ದೊಡ್ಡ ಮನೆ ನೋಡಿ ದಂಗಾದಳು. ಮಗನಿಗೆ ಅದರ ಬಗ್ಗೆ ಕೇಳಿದರೆ ಇವರು ಅವಳ ಹತ್ತಿರ ಮುಖ ಕೊಟ್ಟೇ ಮಾತಾಡಲಿಲ್ಲ. ಆಮೇಲೆ ನನ್ನ ಹತ್ತಿರ ಬಂದು ಅಲ್ಲಾ ಕಣೆ ಇಂತ ದೊಡ್ಡಮನೆ ಕಟ್ಟೋಕೆ ನಿನ್ನ ಗಂಡನಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬಂತು? ಇವತ್ತಿನ ಕಾಲದಲ್ಲಿ ಸಂಬಳದಲ್ಲಿ ಸಂಸಾರ ನಡೆಸೋದೆ ಕಷ್ಟ ಅಂತಾದ್ರಲ್ಲಿ ಇದೇನಿದು ವಿಚಿತ್ರ ಅಂದು ನಿನ್ನ ಗಂಡ ನಿಯತ್ತಾಗಿ ಬದುಕ್ತಾ ಇಲ್ಲ ಕಣವ್ವ. ಇಂತವನ ಮನೇಲಿ ನಾನೊಂದು ಲೋಟ ನೀರು ಕುಡಿಯಲ್ಲ ಅಂತೇಳಿ ನನ್ನ ಒತ್ತಾಯಕ್ಕೂ ಮಣಿಯದೆ ಅವರಿಗೂ ಹೇಳದೆ ಆ ಕ್ಷಣವೇ ಹಳ್ಳಿಗೆ ಹೊರಟು ಹೋಗಿಬಿಟ್ಟಳು. ಹಾಗೆ ಊರಿಗೆ ಹೋದವಳಿಗೆ ಇವರು ಫೋನ್ ಮಾಡಿದರೆ ಸರಿಯಾಗಿ ಮಾತೇ ಆಡುತ್ತಿರಲಿಲ್ಲ.ನಾವು ಹೊಸಮನೆಗೆ ಹೋದರೂ ಇವರಿಗಾಗಲಿ ನನಗಾಗಲಿ ಮಗನಿಗಾಗಲಿ ಸಂತೋಷ ಅನ್ನೋದೇ ಇರಲಿಲ್ಲ. ಒಂದೆರಡು ಸಾರಿ ಊರಿಗೆ ಹೋಗಿ ಬರೋಣ ಅಂದರೂ ಇವರ್ಯಾಕೊ ಬೇಡ ಅಂದುಬಿಟ್ಟರು. ಆಮೇಲೆ ಸ್ವಲ್ಪ ದಿನಗಳಲ್ಲೇ ಇವರ ಕಛೇರಿಯ ಇತರೇ ಸಿಬ್ಬಂದಿಗಳ ಮನೆ ಮೇಲೆ ಲೋಕಾಯುಕ್ತದ ದಾಳಿ ನಡೆದಾಗ ಇವರು ಇದ್ದಕ್ಕಿದಂತೆ ಬದಲಾಗಿ ಬಿಟ್ಟರು.ಒಂದೆರಡು ದಿನ ಸಪ್ಪಗಿದ್ದಂತೆ ಕಂಡವರುಕ್ರಮೇಣ ಅನ್ನ ಕಂಡರೆ ಕಲ್ಲು ಅಂತ ಕೂಗಾಡತೊಡಗಿದರು. ಈಗೀಗಂತು ಹುಚ್ಚುಚ್ಚಾಗಿ ಆಡ್ತಾರೆ. ಇಷ್ಟೇ ಡಾಕ್ಟ್ರೇ ಇವರ ಕತೆ ಈಗವರು ಹಿಂದಿನ ರೀತಿ ನಾರ್ಮಲ್ ಆಗೋಕೆ ಏನು ಮಾಡಬೇಕು ಹೇಳಿ” ಅಂದಳು.
ಮಾತು ನಿಲ್ಲಿಸಿದ ತಾಯವ್ವನ ಕಡೆ ನೋಡಿ ನಸುನಕ್ಕ ಚಂದ್ರಪ್ಪ ಹೆದರಬೇಡಿ ಮೇಡಂ ಇನ್ನೊಂದೆರಡು ತಿಂಗಳಲ್ಲಿ ಇವರು ಸರಿಯಾಗ್ತಾರೆ. ಇನ್ನೊಂದೆರಡು ಮೂರು ಬಾರಿ ಅವರನ್ನು ಕರೆದುಕೊಂಡು ಬನ್ನಿ ಸಾಕು.ನಾನಷ್ಟರಲ್ಲಿ ಅವರು ಹಳ್ಳಿಗೆ ಬರುವಂತೆ ಮಾಡುತ್ತೇನೆ. ಆಮೇಲೆ ನೋಡಿ ಅವರು ತಾನಾಗಿಯೇ ಸರಿಯಾಗುತ್ತಾರೆ.
ಆಮೇಲೆರಡು ಮೂರು ಬಾರಿ ರಾಮೇಗೌಡನನ್ನು ಏಕಾಂತದಲ್ಲಿ ಮಾತಾಡಿಸಿದ ಚಂದ್ರಪ್ಪ ಒಂದು ತಿಂಗಳ ನಂತರ ಒಂದು ದಿನ ರಾಮೇಗೌಡನ ಎದುರಿಗೆ ತಾಯವ್ವನಿಗೆ ಮೇಡಂ ನಾಳೆ ಇವರನ್ನು ಕರೆದುಕೊಂಡು ಹಳ್ಳಿಗೆ ಹೋಗಿ ಒಂದೆರಡು ದಿನ ಇದ್ದು ಬನ್ನಿ. ಹೋಗ್ತೀರಾ ಗೌಡರೆ ಅಂದಾಗ ರಾಮೇಗೌಡ ಸರಿಯೆನ್ನುವಂತೆ ತಲೆಯಾಡಿಸಿದ.
ಅವತ್ತು ರಾತ್ರಿಯೇ ತಾಯವ್ವ ದೊಡ್ಡಮ್ಮನಿಗೆ ಪೋನು ಮಾಡಿ ಅದುವರೆಗು ನಡೆದ ಎಲ್ಲ ವಿಷಯವನ್ನೂ ತಿಳಿಸಿ ನಾಳೆ ಬರುತ್ತಿರುವುದಾಗಿ ತಿಳಿಸಿದಳು.
ಮಾರನೆ ದಿನ ಮದ್ಯಾಹ್ನ ಬಸ್ಸಿಗೆ ರಾಮೇಗೌಡ ಮತ್ತು ತಾಯವ್ವ ಊರಲ್ಲಿಳಿದಾಗ ಬಿಸಿಲು ಹತ್ತಿ ಉರಿಯುತ್ತಿತ್ತು. ಬಹಳ ವರ್ಷಗಳ ನಂತರದ ಬಸ್ಸಿನ ಪ್ರಯಾಣ ಇಬ್ಬರನ್ನೂ ಸುಸ್ತು ಮಾಡಿತ್ತು. ಬೆಳಿಗ್ಗೆ ಹೊರಡುವಾಗ ಮಗ ಡ್ರೈವರ್‍ಗೆ ಶೆಡ್ಡಿಂದ ಕಾರು ತೆಗೆಯಲು ಹೇಳಿದಾಗ ರಾಮೇಗೌಡ ಬೋಳಿಮಗನೆ ಕಾರು ಬೇಡ ಏನೂ ಬೇಡ, ಸರಕಾರಿ ಬಸ್ಸಿಲ್ವೇನ್ಲಾ ಎಂದು ರೇಗಿದ್ದ. ಹೆದರಿದ ಮಗ ಆಟೋದಲ್ಲಿ ಅವರನ್ನು ಕರೆತಂದು ಹಳ್ಳಿಯ ಬಸ್ ಹತ್ತಿಸಿದ್ದ.
ಗಂಡ ಹೆಂಡತಿ ಮನೆ ತಲುಪಿದಾಗ ದೊಡ್ಡಮ್ಮ ಹಜಾರದ ಕಂಬಕ್ಕೊರಗಿ ಕುಂತು ಏನೋ ಮಾಡುತ್ತಿದ್ದಳು. ಮಗಸೊಸೆಯನ್ನು ನೋಡಿದ ಕೂಡಲೆ ಎದ್ದು ಚಾಪೆ ಹಾಸಲು ಹೋದಾಗ ರಾಮೇಗೌಡ ಚಾಪೆ ಹಾಸಬೇಡವ್ವಾ, ಗರೆ ನೆಲಾನೆ ತಣ್ಣಗಿದೆ ಇಲ್ಲೇ ಕೂರ್ತೀನಿ ಅಂತ ಇನ್ನೊಂದು ಕಂಬಕ್ಕೊರಗಿ ಕುಂತ. ಹಾಗೆ ಸ್ವಲ್ಪಹೊತ್ತು ಮೌನವಾಗೆ ಕೂತಿದ್ದ ರಾಮೇಗೌಡ, ಅವ್ವಾ ಸ್ವಲ್ಪ ತೋಟದ ಕಡೆ ಹೋಗಿ ಬರ್ತೀನಿ ಅಂತ ಎದ್ದು ಹೊರಟ. ಅವನ ಮನಸ್ಸನ್ನು ಅರ್ಥಮಾಡಿಕೊಂಡಂತೆ, ತಡೀ ಮಗ ನಾನೂ ಬರ್ತೀನಿ ಅಂತ ದೊಡ್ಡಮ್ಮನೂ ಅವನ ಜೊತೆ ಹೊರಟಳು.
ಇಬ್ಬರೂ ತೋಟಕ್ಕೆ ಬಂದು ಅಲ್ಲೆ ಇದ್ದ ಒಂದು ಮಾವಿನ ಮರದಡಿ ಕುಂತರು. ಏನೋ ಕೆಲಸ ಮಾಡ್ತಿದ್ದ ಮನೆಯಾಳು ಸೋಮನಿಗೆ ದೊಡ್ಡಮ್ಮ ಎಳನೀರು ಕೀಳುವಂತೆ ಹೇಳಿದಳು. ಸೋಮ ಕೆತ್ತಿಕೊಟ್ಟ ಎಳನೀರನ್ನು ರಾಮೇಗೌಡನಿಗೆ ಕೊಟ್ಟ ದೊಡ್ಡಮ್ಮ ಕುಡೀ ಮಗ ಹೊಟ್ಟೆ ತಣ್ಣಗಾಗುತ್ತೆ ಅಂದಳು. ಏನೂ ಮಾತಾಡದ ರಾಮೇಗೌಡ ಎಳನೀರು ಎತ್ತಿ ಒಂದೇ ಉಸಿರಿಗೆ ಕುಡಿದ. ಹೀಗೆ ದೊಡ್ಡಮ್ಮ ಕೆತ್ತಿಸಿಕೊಟ್ಟ ಎರಡು ಮೂರು ಎಳನೀರನ್ನು ಮಾತಿಲ್ಲದೆ ಕುಡಿದ ರಾಮೇಗೌಡನ ಹೊಟ್ಟೆ ತಣ್ಣಗಾದಂತಾಗಿ, ಪ್ರಯಾಣದ ಆಯಾಸವೆಲ್ಲ ಮಾಯವಾಗಿ ಮನಸ್ಸು ಹಗುರವಾದಂತಾಗಿ ಹಾಗೆ ದೊಡ್ಡಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ನಿದ್ರೆಗೆ ಜಾರಿದ.
ದೊಡ್ಡಮ್ಮ ಮತ್ತು ಗಂಡನಿಗೆ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿಕೊಂಡು ಬಂದ ತಾಯವ್ವನಿಗೆ ಗಂಡ ಏನೂ ಮಾತಾಡದೆ, ಕಲ್ಲು ಅಂತ ಕೂಗಾಡದೆ ಸಮಾದಾನದಿಂದ ಎಳನೀರು ಕುಡಿಯುವುದನ್ನು ಕಂಡು ಆಶ್ಚರ್ಯಚಕಿತಳಾದಳು.
ಮಾವಿನ ಮರದ ಬುಡದಲ್ಲಿ ದೊಡ್ಡಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ ರಾಮೇಗೌಡ, ತಾಯವ್ವನ ಕಣ್ಣುಗಳಿಗೆ ಈಗತಾನೆ ಮೊಲೆಹಾಲು ಕುಡಿದು ಹುಸಿ ನಿದ್ದೆ ಮಾಡುತ್ತಿರುವ ತುಂಟ ಮಗುವಿನಂತೆ ಕಂಡ!
-ಕು.ಸ.ಮಧುಸೂದನ್
******