ಅಂಗೈ ರೇಖೆಗಳಲ್ಲಿ ನದಿಗಳನ್ನು ಹರಿಸುವ ಕಾವ್ಯ ಕಡಮೆ: ನಾಗರಾಜ್ ಹರಪನಹಳ್ಳಿ

ಯುವ ಪ್ರತಿಭೆ  ಕಾವ್ಯ ಕಡಮೆಗೆ ೨೦೧೪ನೇ ಸಾಲಿನ ಕೇಂದ್ರ  ಸಾಹಿತ್ಯ ಅಕಾಡೆಮಿ ಯುವಪುರಸ್ಕಾರ ದೊರೆತಿದೆ. ೫೦ ಸಾವಿರ ರೂ. ಬಹುಮಾನ ರೂಪದಲ್ಲಿ ಸಹ ಸಿಗಲಿದೆ. ಈ ಪುರಸ್ಕಾರಕ್ಕೆ ಕಾರಣವಾದುದು ಆಕೆಯ  ‘ಧ್ಯಾನಕೆ ತಾರೀಖಿನ ಹಂಗಿಲ್ಲ’ ಎಂಬ ಮೊದಲ ಕವಿತಾ ಸಂಕಲನ. ಕುತೂಹಲದಿಂದಲೇ ಆ ಕವಿತಾ ಸಂಕಲನವನ್ನು ಕೈಗೆತ್ತಿಕೊಂಡು ಓದಿದರೆ ಅಲ್ಲಿನ ಭಾವಲೋಕ ಮತ್ತು ಮನಸ್ಸೊಂದು ತನ್ನ ಸುತ್ತಲ ಜಗತ್ತಿಗೆ ತೆರೆದುಕೊಳ್ಳುವ ಬಗೆ ಒಡೆದು ಕಾಣಿಸುತ್ತದೆ. ಕವಿತೆಗಳನ್ನು ಕಟ್ಟುವ ಬಗೆಯಲ್ಲೂ ತಾಜಾತನ ಮತ್ತು ಪ್ರತಿಮೆಗಳನ್ನು ಕಟ್ಟುವ ಬಗೆ ಸೊಗಸಾಗಿದೆ. ತಣ್ಣಗೆ ನದಿ ಹರಿದಂತೆ ಬಳಸುವ ಭಾಷೆ ಮತ್ತು ಭಾಷಾ ಬಳಕೆ ಕಾರಣವಾಗಿ ಕವಿತೆಗಳಿಗೆ ದಕ್ಕುವ ಹೊಸ ಅರ್ಥ , ವ್ಯಾಖ್ಯಾನ ಆಕೆಯನ್ನು ಕವಯತ್ರಿಯ ಸ್ಥಾನದಲ್ಲಿ ನಿಲ್ಲಿಸುತ್ತವೆ. ಫೆಮಿನಿಜಂ ಮತ್ತು ವೈಚಾರಿಕತೆಯ ಹೊಳಹುಗಳು ಆಕೆಯ ಮೊದಲ ಕವಿತೆಗಳಲ್ಲಿ ಕಾಣಿಸಿಕೊಂಡಿದೆ. ಸೇಫರ್ ಝೋನ್ ನಲ್ಲಿ ನಿಂತು ಬರೆಯುತ್ತಾಳೆ ಅಂತನಿಸಿದರೂ, ಕವಯತ್ರಿಯೊಬ್ಬಳ  ಆರಂಭಿಕ ಹೆಜ್ಜೆಗಳು ದೃಢವಾಗಿವೆ. ಕಾವ್ಯ ಪ್ರಜ್ಞಾಪೂರ್ವಕವಾಗಿ ಬೆಳೆದ , ಓದಿದ ಊರು ಸಾಹಿತ್ಯ ವಾತಾವರಣದ್ದೇ ಆದ ಕಾರಣವಾಗಿಯೂ ಸಾಹಿತ್ಯ ಕ್ಷೇತ್ರದ ಪ್ರವೇಶ ಉತ್ತಮ ರೀತಿಯಲ್ಲೇ  ಆಗಿದೆ.  ಸೂಕ್ಷ್ಮ ಸಂವೇದಿ ಮನಸ್ಸೊಂದು  ಸುತ್ತಲ ಸಮಾಜ ಮತ್ತು ಬದುಕಿಗೆ ಸ್ಪಂದಿಸುವ , ಪ್ರತಿಕ್ರಿಯಿಸುವ ಬಗೆ  ಕವಿತೆಗೆ ದಕ್ಕಿರುವುದು ವಿಶೇಷ. 

ಕವಿತೆ ಎಂಬುದು  ಭಾವಲೋಕಕ್ಕೆ ಅಕ್ಷರಗಳ ಸ್ವರೂಪ ಕೊಡುವಂತಹದ್ದು. ಅಕ್ಷರಗಳು ಶಬ್ದಗಳಾಗಿ, ಶಬ್ದ ಸಮೂಹ ಒಂದು ಬೆಳಕಾಗಿ ಓದುಗನನ್ನು ಹೊಸ ದಾರಿಯತ್ತ, ಮಾನವೀಯತೆಯನ್ನು ಬೆಸೆಯುವತ್ತ ಕೊಂಡೊಯ್ಯುವಂತಹದ್ದು. ಒಂದು ಕವಿತೆ ಓದಿದ ತಕ್ಷಣ ಸಹೃದಯನನ್ನು ತಟ್ಟಿ ಅದು ಬಹುಕಾಲ  ಕಾಡುವಂತಿದ್ದರೆ ಅದು ಕವಿತೆಯ ಮತ್ತು ಕವಿಯ ಯಶಸ್ಸು ಕೂಡಾ. ಕವಿತೆ ಒಳಗಣ್ಣಿನಿಂದ ಮೂಡಿದ್ದರೆ ಅದಕ್ಕೆ ಅಂತಃಶಕ್ತಿ ತಾನಾಗಿಯೇ ಪ್ರಾಪ್ತವಾಗಿರುತ್ತದೆ. ಧ್ಯಾನಕ್ಕೆ ತಾರೀಖಿನ ಹಂಗಿಲ್ಲ ಸಂಕಲನದಲ್ಲಿ ಅಂತಹ ಕವಿತೆಗಳಿವೆ. ಯುವ ಮನಸ್ಸುಗಳನ್ನು ಕವಿತೆಯಲ್ಲಿ ಕಟ್ಟುವ ಬಗೆಯನ್ನೇ ನೋಡಿ

ನಮ್ಮಿಬ್ಬರ ಹಸ್ತಗಳ ಮೇಲೆ ಅಚ್ಚಾದ
ಅಸಂಖ್ಯ ರೇಖೆಗಳು ಮಾತ್ರ ದಾರಿ
ತೋರುವ ಹುನ್ನಾರದಲ್ಲಿವೆ ತಾವೇ ನದಿಗಳಾಗಿ
ಹರಿದು

ನಮ್ಮಿಂದಲೇ ಹುಟ್ಟಿದ ಸಾವಿರ ನದಿಗಳ 
ವಿಸ್ಮಿತ ತೀರದಲ್ಲಿ ನಿಂತೇ ಇದ್ದೇವೆ
ಅನಂತ ಬಿಂಬಗಳ ಪ್ರತಿಬಿಂಬವಾಗಿ
ಪ್ರಭು ಬರೆದ ಚಿತ್ರವೇ
ನಿಜದ ನಾವಾಗಿ (ನಮ್ಮ ಚಿತ್ರ )

ಎರಡು ಮನಸುಗಳ ಚಿತ್ರ ಬರೆಯಲು‘ದೇವರೇ ಕಾಫಿ ತಿಂಡಿ ಮುಗಿಸಿಕೊಂಡು ಪುರುಸೊತ್ತಾಗಿದ್ದಾನೆ’ ಎನ್ನುತ್ತಾಳೆ ಕವಯತ್ರಿ. ಹೀಗೆ ಯುವ ಮನಸ್ಸುಗಳಿಗೆ ಮತ್ತು ಕಾವ್ಯ ಓದುಗನಿಗೆ ಅಚ್ಚರಿ ಮತ್ತು ದಿಗಿಲು ಹುಟ್ಟಿಸುವಂತಹ  ಕವಿತೆ ಸಾಲುಗಳನ್ನು ತೀರಾ ಸಹಜವಾಗಿ ಕಟ್ಟುವ ಕಲೆ ಮತ್ತು ಅದರಲ್ಲಿ ಹೊಸತನ್ನು ಹೊಳೆಯಿಸುವ ಸಾಮರ್ಥ್ಯ ಕಾವ್ಯಳಿಗೆ ಚೆನ್ನಾಗಿ ದಕ್ಕಿದೆ ಎನ್ನಬಹುದು. ಹಸ್ತ ರೇಖೆಗಳಲ್ಲಿ ನದಿಗಳನ್ನು ಹರಿಯಿಸುವ ಪ್ರತಿಮೆ  ಕವಿಯ ಪ್ರತಿಭೆಗೆ ಸಾಕ್ಷಿ. 

ಈ ಸಂಜೆ ಗಾಳಿಗೆ 
ಎಂಥ ನೋವುಗಳನ್ನು ಕೆದುಕಬಲ್ಲ
ಕೆಟ್ಟ ಶಕ್ತಿಯಿದೆ 

ಹೆರಳು ಬೆಸದಂತೆ ಕಲ್ಪಿಸಿದ್ದರೆ ಸಂಬಂಧವ ಕೊರಳ
ದನಿಗೆ ಒಂದಾಗಬಹುದಿತ್ತು ನಾವು ಕಣ್ಣಾಚೆಗಿನ
ಲೋಕದಲಿ

ಇಲ್ಲಿ ಈ ಲೋಕದಲಿ ನನಗೆ ನಾಲಿಗೆಯಿಲ್ಲ
ನಿನಗೆ ಹೃದಯವೂ
ನಡೆಯಬೇಕು ನಾವೀಗ ಸುಮ್ಮನೇ
ಈ ಧ್ಯಾನಕೆ ತಾರೀಕುಗಳ ಹಂಗಿಲ್ಲ ( ಸರೀ ತಾರೀಕು ಬರೆದುಕೋ)

ವಾಸ್ತವದ ಅರಿವನ್ನು ಈ ಕವಿತೆ ತುಂಬಾ ಸಮರ್ಥವಾಗಿ ದಾಖಲಿಸಿದೆ. ಹೆಣ್ಣೊಬ್ಬಳ ಎಚ್ಚರಿಕೆಯ ನಡೆಯನ್ನು ಇಲ್ಲಿ ಕಾಣಬಹುದು. ಕಟು ವಾಸ್ತವವನ್ನು ನುಂಗಿ  ಹೆರಳು ಬೆಸೆದಂತೆ ಸುಲಭವಾಗಿ ಸಂಬಂಧಗಳು ಕೊರಳ ದನಿಗೆ ಒಂದಾಗುವುದಿಲ್ಲ ಎಂಬ ಎಚ್ಚರ ಅದು. ಕವಿತೆಯಲ್ಲಿ ಧ್ವನಿಯನ್ನು ಹಿಡಿದಿಡುವುದು ಹೇಗೆ ಎಂಬುದಕ್ಕೆ ‘ಸರೀ ತಾರೀಕು ಬರೆದುಕೋ’ ಕವಿತೆಯನ್ನು ಎರಡೆರಡು ಸಲ ಓದಬೇಕು. ಭಾರತೀಯ ಕಾವ್ಯ ಮೀಮಾಂಸೆ ಓದಿ ಕವಿತೆಯಲ್ಲಿನ ಧ್ವನಿ ತರುವುದಲ್ಲ ಅದು. ಸಹಜವಾಗಿ ಕವಿ ಭಾವಗಳನ್ನು ಧ್ವನಿಪೂರ್ಣವಾಗಿ ಕವಿತೆಯಲ್ಲಿ ಹಿಡಿದಿಡುವುದು ಸಹಜ ಪ್ರತಿಭೆಗೆ ದಕ್ಕುತ್ತದೆ. ಇದೇ ಮಾದರಿಯ ಇನ್ನೊಂದು ಕವಿತೆ ‘ನಿಶಬ್ದ’

“ಏಕೆ ಹೀಗೆ ಸತಾಯಿಸುತ್ತೀ?
ನಾನೇನು ನಿನ್ನ ಹತ್ತಿರ ಚಿನ್ನ
ಬಣ್ಣ ಕೇಳಲಿಲ್ಲ”

ಅಂದುಕೊಂಡೆ. ಹೇಳಿರಲಿಲ್ಲ

ಕೇಳಿಸಿತು ಅವನಿಗೆ.

“ಅದಾದರೂ ಕೇಳಿದ್ದರೆ ಚೆನ್ನಾಗಿತ್ತು
ಯಾವಾಗೆಂದರಾವಾಗ ಕೊಟ್ಟುಬಿಡಬಹುದಿತ್ತು”

ಹೇಳಿದನಂತೆ ಅವನೂ
ನನಗೇ ಕೇಳಿಸಲಿಲ್ಲ.

ದೃಶ್ಯ ಸಾದೃಶ್ಯತೆಯನ್ನು ಕವಿತೆ ಕಟ್ಟಿಕೊಡಬೇಕು. ದೃಶ್ಯ ಕಾವ್ಯವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಶಕ್ತಿ ‘ನಿಶಬ್ದ’ ಕವಿತೆಗೆ ಇದೆ. ಇಲ್ಲಿ ಒಂದು ಅನುಭವ ಸಾರ್ವತ್ರಿಕವಾಗುವುದು ಸಹ ಹೀಗೆಯೇ. ಕವಿ ಮಗುವಿನಂತೆ ಮುಗ್ಧತೆಯನ್ನು ಹೊಂದಿರಬೇಕು. ಕವಿತೆ ಮಗು ಕಂಡ ಕನಸಿನಂತಿರಬೇಕು.  ಸುತ್ತಣ ಜಗತ್ತನ್ನು ತೆರೆದ ಕಣ್ಣು ಮನಸ್ಸಿಂದ ಗ್ರಹಿಸಬೇಕು. ಆಗ ಅನುಭವಗಳು ದಕ್ಕುತ್ತವೆ. ಅಂಥ ಮುಗ್ಧತೆ ಕಾರಣವಾಗಿ ಇಲ್ಲಿನ  ಅನೇಕ ಕವಿತೆಗಳು  ಸಾರ್ವತ್ರಿಕವಾಗುತ್ತವೆ.
‘ನಿನ್ನ ಧ್ಯಾನ’ ಮತ್ತು ‘ನೀನು’ ಎಂಬ ಶೀರ್ಷಿಕೆಯ ಸರಣಿ ಪದ್ಯಗಳು ಸಶಕ್ತವಾಗಿ ಬಂದಿವೆ; ನೆನಪಲ್ಲಿ ಉಳಿಯುವಂತೆ.  

‘ಎಂದಾದರೂ ಒಮ್ಮೆ ಗಾಜಿಗೆ ದೀಪ ತಗುಲಿ
ನೀನು ನನ್ನ ಗುರುತು ಹಿಡಿಯಲ್ಲಿಲ್ಲ ಅಂದರೆ 
ಖಂಡಿತ ಅದು ನಿನ್ನ ತಪ್ಪಲ್ಲ

ಸೂರ್ಯನ ಕಿರಣಗಳೇ ಅರ್ಧದಿನ 
ತಡವಾಗಿ ತಲುಪುವಾಗ ಈ
ಪುಟ್ಟ ಪುಟ್ಟ ಹಣತೆಗಳ ಕುರಿತು
ಯಾರಲ್ಲಿ ಫಿರ್ಯಾದಿ ಹೇಳಲಿ ?

ಅಥವಾ ಹೀಗೂ ಮಾಡಬಹುದು
ಇಡೀ ಜಗದ ಗಡಿಯಾರಗಳ ಕಿತ್ತು
ಒಮ್ಮೆ ಹೂತು ಬಿಡಬಹುದು’ 

ಎನ್ನುವ ಕವಯತ್ರಿ ‘ಗಡಿಯಾರದ ಹಂಗಿಲ್ಲದ ಕಾಲದಲ್ಲಿ ನಾನು ನೀನು ಹಗಲಿರಲಿ ರಾತ್ರಿಯಿರಲಿ ಒಂದೇ ಬಾರಿಗೆ ಕನಸು ಕಾಣಬಹುದು’ ಎನ್ನುತ್ತಾಳೆ. ತೀವ್ರವಾಗಿ ಒಂದು ಭಾವವನ್ನು  ಹೇಳುವ ಬಗೆಯಿದು. ಸಂಬಂಧಗಳನ್ನು ಮತ್ತು ಅದರ ಸಾಧ್ಯತೆಗಳನ್ನು ಕಾಲ ಹೇಗೆ ಕಿತ್ತುಕೊಂಡು ಬಿಡುತ್ತದೆ ಎನ್ನುವ ಕ್ರೂರತೆಯನ್ನು ದಾಖಲಿಸುವ ಪರಿಯಿದು. 

ಹೆಣ್ಣೊಬ್ಬಳ ಆಸೆ, ಆಶಯ, ಕನಸು, ಬದುಕು ಎಲ್ಲವೂ ಆಗಿರುವ ‘ರೆಕ್ಕೆ’ ರೂಪಕಕ್ಕೆ ಕಾವ್ಯ ಕೊಡುವ ಅರ್ಥವ್ಯಾಪ್ತಿ ಬಹು ವಿಶಾಲವಾದುದು. ಗಂಡನ್ನು ‘ಮುಗಿಲು’ನಂತೆ ನೋಡುವ  ಮತ್ತು ಉಸಿರಾಡುವ ‘ಗಾಳಿ’ಯನ್ನಾಗಿ ಕಾಣುವ ಕವಿತೆ ‘ನೀನು’. ನೀನು ಸರಣಿ ಪದ್ಯಗಳು ಹೊಳೆಯಿಸುವ ಕಾವ್ಯಾರ್ಥ  ಸಾಧ್ಯತೆಗಳು, ಧ್ವನಿಗಳು ಆಳವಾಗಿವೆ. ಹೆಣ್ಣಿನ ಕನಸಿನ ರೆಕ್ಕೆ ಕಲ್ಪಿಸಿಕೊಂಡದ್ದಲ್ಲ, ಅಂಟಿಸಿಕೊಂಡದ್ದು ಅಲ್ಲ; ರೂಢಿಸಿಕೊಂಡದ್ದು ಅಲ್ಲ. ಅದು ದೇಹದೊಳಗೆ ಗಾಯವಾಗಿ ಮಾಯ್ದು, ತಲೆಯೊಳಗೆ ಸೇರಿದೆ. ಕನಸಿನ ರೆಕ್ಕೆ ‘ಕಲೆ ಉಳಿಸುವ ಗಾಯ ಚರ್ಮವೇ ಆದಂತೆ’ಆಗಿದೆ ಎಂಬ ಕವಿಯ  ಕಲ್ಪನಾ ವಿಲಾಸ ಇಲ್ಲಿದೆ. 

ಮತ್ತೊಂದು ನೀನು ಪದ್ಯದಲ್ಲಿ ‘ ಮೈಗೆ ಆತುಕೊಳ್ಳುವುದು ಹೋಗಲಿ ಕೈಗೆ ಕೈ ತಾಗಿಸದೆಯೂ ನಾವು ಬಹು ದೂರ ನಡೆಯಬಲ್ಲೆವು ಜತೆಗೆ ’ ಎಂಬ ಸಾಲುಗಳು ಭಾರತೀಯ ಸಮಾಜದಲ್ಲಿ ಯುವ ಮನಸ್ಸುಗಳ ತಲ್ಲಣವನ್ನು, ಸಂಪ್ರದಾಯ ಕಟ್ಟಳೆಗಳನ್ನು ದಾಖಲಿಸುವುದೇ ಆಗಿದೆ.

ಅಂಗೈ ರೇಖೆ, ಗಡಿಯಾರ, ಹಣತೆ, ಉಸಿರು, ನೆರಳು  ಪ್ರತಿಮೆಗಳು ಕೆಲ ಕವಿತೆಗಳಲ್ಲಿ ಪದೇ ಪದೇ ರೂಪಕಗಳಾಗಿ ಪುನರಾವರ್ತನೆಯಾಗಿವೆ. ಹೆಚ್ಚಿನ  ಕವಿತೆಗಳಲ್ಲಿ  ಎರಡು ಮನಸುಗಳ ಸಂವೇದನೆ ಇದೆ. ಅದರಲ್ಲೂ ಹೆಣ್ಣೊಬ್ಬಳ ಆರ್ಥನಾದ ನದಿಯಾಗಿ, ದಟ್ಟ ಕಾಡಾಗಿ, ಭೂಮಿಯ ಸಹನೆಯಾಗಿ, ಕಡಲಾಗಿ ದಾಖಲಾಗಿದೆ. ರೇಖೆಗಳು ನಿರ್ಜೀವವಲ್ಲ. ಮಾತಷ್ಟೇ ಬರುವುದಿಲ್ಲ ನನ್ನ ರೇಖೆಗಳಿಗೆ, ಆದರವು ನಿನ್ನ ಗಣಕಯಂತ್ರದ ಕೀಲಿ ಮಣೆಯಷ್ಟು ನಿರ್ದಯಿಯಲ್ಲ. ಆ ಸಹಯಾತ್ರೆಯ ಕೊನೆಯ ಸಾಕ್ಷಿಯಾಗಿ ನನ್ನ ರೇಖೆಗಳನೇ ಬೆಳೆಸುತಿರುವೆ ಎನ್ನುವಲ್ಲಿ ಹೆಣ್ಣೊಬ್ಬಳ ಕರುಣೆಯೂ ಇದೆ.
ಉತ್ತರ ಕನ್ನಡ ಜಿಲ್ಲೆಯ ಕಾವ್ಯ ಪರಂಪರೆಯಲ್ಲಿ ಗಂಗಾಧರ ಚಿತ್ತಾಲ, ಜಯಂತ ಕಾಯ್ಕಿಣಿ, ವಿಷ್ಣು ನಾಯ್ಕ ರಂಥ ಬಹುದೊಡ್ಡ ಪಡೆಯೇ ಇದೆ. ಇದೇ ನೆಲದ ಯುವ ಬರಹಗಾರ್ತಿ ಕಾವ್ಯ ಸಂತೋಷ ನಾಗರಕಟ್ಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಒಲಿದು ಬಂದಿರುವುದು ಸಹ ‘ಧ್ಯಾನಕ್ಕೆ ತಾರೀಖಿನ ಹಂಗಿಲ್ಲ’ ಸಂಕಲನದ ಮಹತ್ವವನ್ನು ಸಾರುತ್ತದೆ. ಇಲ್ಲಿನ ಕವಿತೆಗಳು ಮೊದಲ ಸಂಕಲನದ ಕವಿತೆಗಳು ಅನ್ನಿಸುವುದಿಲ್ಲ. ಅಂಥ ಪ್ರಬುದ್ಧತೆ ಇಲ್ಲಿದೆ. ಹೊಸ ತಲೆಮಾರಿನ ಮಹಿಳಾ ಬರಹಗಾರ್ತಿಯರಲ್ಲಿ ಸಂಪ್ರದಾಯ ಮತ್ತು ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಮತ್ತು ಆಕ್ರೋಶ ವ್ಯಕ್ತಪಡಿಸುವ ಬಂಡುಕೋರುತನ ಈ ಕವಯತ್ರಿಯಲ್ಲಿ ಇಲ್ಲ. ಆದರೆ ವ್ಯವಸ್ಥೆಯನ್ನು ಮುಗ್ಧತೆಯಿಂದ ಗಮನಿಸುತ್ತಲೇ, ತಣ್ಣನೆಯ  ಬದಲಾವಣೆಯನ್ನು ಪ್ರೀತಿಯಿಂದ  ಬಯಸುವ ಮತ್ತು ಇದು ಹೀಗೂ ಇರಬಹುದು ಎಂದು ಓದುಗನ ಚಿಂತನಾ ಲಹರಿಯನ್ನು ತಿದ್ದುವ ಶಕ್ತಿ ಇಲ್ಲಿನ ಕವಿತೆಗಳಿದೆ. ಹೊಸ ಬರಹಗಾರ್ತಿಯರಲ್ಲಿ ಈ ಗುಣ ಕಾಣುವುದು ವಿರಳ. ಈ ಕಾರಣಕ್ಕಾಗಿ ತನ್ನ ತಲೆಮಾರಿನ ಯುವ ಬರಹಗಾರರಿಗಿಂತ ವಿಭಿನ್ನ ನೆಲೆ ಕಾವ್ಯ ನಾಗರಕಟ್ಟೆ (ಕಡಮೆ)ಗೆ ದಕ್ಕಿದೆ ಎನ್ನಬಹುದು. ಮಗ್ಗಲು ಬದಲಿಸುತ್ತಿರುವ ಸಮಾಜದಲ್ಲಿ ಮಹಿಳೆಯರ ಎದುರು, ಯುವ ಲೇಖಕಿಯರ ಕಣ್ಮುಂದೆ ಸಾವಿರಾರು ಸವಾಲುಗಳಿವೆ. ಜಾಗತೀಕರಣ ಮತ್ತು ಸಂಪ್ರದಾಯವಾದಿ ಸಮಾಜದ ಸಂಘರ್ಷ ತೀವ್ರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಕಾವ್ಯ ಮಹಿಳಾ ಸಂಘರ್ಷವನ್ನು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ, ಸಾಧ್ಯವಾದರೆ ಹೋರಾಟದ ನೆಲೆಯಲ್ಲಿ ಉತ್ಕರ್ಷಗೊಳಿಸಲಿ ಎಂಬ ಹೊಸ ಆಹ್ವಾನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಈ ಕವಯತ್ರಿಯ ಮುಂದೆ ಇಟ್ಟಿದೆ ಎಂದುಕೊಳ್ಳೋಣ. 
…….

* ಕಾವ್ಯಾ ಕಡಮೆ (ಕಿರು ಪರಿಚಯ):
ಕಾವ್ಯಾ ಹುಟ್ಟಿದ್ದು ೧೯೮೮ ರಲ್ಲಿ. ಬಿ.ಎಸ್ಸಿ ಪದವೀಧರಳಾಗಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದ ಕಾವ್ಯಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ೨೦೧೦-೨೦೧೨ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಕುಮಾರಿ ಲೀಲಾ ಮಹದೇವ ಕೇಸರಿ ಚಿನ್ನದ ಪದಕ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಚಿನ್ನದ ಪದಕ, ಶ್ರೀ ಕೆ. ಎಂ. ರಾಜಶೇಖರ ಹಿರೇಮಠ ಚಿನ್ನದ ಪದಕ, ದಿವಂಗತ ಶ್ರೀ ಎಚ್. ಆರ್. ಮೊಹರೆ ಚಿನ್ನದ ಪದಕ, ಶ್ರೀ ಕೆ. ಶ್ಯಾಮರಾವ ಚಿನ್ನದ ಪದಕ, ದಿವಂಗತ ಶ್ರೀ ಲಕ್ಷ್ಮಣ ಶ್ರೀಪಾದ ಭಟ್ ಜೋಷಿ ಸ್ಮಾರಕ ಚಿನ್ನದ ಪದಕ- ಹೀಗೆ ೬ ಚಿನ್ನದ ಪದಕಗಳನ್ನು ಪಡೆದಿದ್ದಾರೆ.


ಸಮಕಾಲೀನ ಸಾಹಿತ್ಯದ ಓದು, ನಾಟಕ, ಕವನ ಹಾಗೂ ಚಿತ್ರಕಲೆಗಳಲ್ಲಿ ಆಸಕ್ತಿ ಹೊಂದಿದ ಕಾವ್ಯಾ, ಕನ್ನಡದಲ್ಲಿ ಉತ್ತಮ ಸೃಜನಶೀಲ ಯುವ ಬರಹಗಾರರಿಗೆ ನೀಡುವ ೨೦೧೨ ರ ಇಪ್ಪತ್ತೈದು ಸಾವಿರ ರೂಪಾಯಿ ‘ಟೋಟೋ ಪುರಸ್ಕಾರ’ ಪಡೆದು ಕನ್ನಡದ ಹೊಸ ತಲೆಮಾರಿ ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. 
…..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x