ಸಮಾಜದಲ್ಲಿ ಎಲ್ಲರೂ ಗುರುತಿಸುವದು ಒಂದು ಒಳ್ಳೆಯ ಕೆಲಸಗಳಿಗೆ ಅಥವಾ ಅವರು ಮಾಡುವ ಕೆಟ್ಟ ಕೆಲಸಗಳಿಂದ ತಮ್ಮ ಹೆಸರನ್ನು ಮಾಡಿಕೊಂಡಿರುತ್ತಾರೆ. ಸಮಾಜದಲ್ಲಿರುವ ಕೆಲವರು ಸಮಾಜಕ್ಕೆ ಏನಾದರೂ ಮಾಡಬೇಕೆನ್ನುವ ಇಚ್ಚೆ ಹೊಂದಿರುತ್ತಾರೆ. ಆದರೆ ಕೆಲವು ತಾವಾಯಿತು ತಮ್ಮ ಪಾಡಾಯಿತು ಎನ್ನುವ ಮನೋಭಾವದವರೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ವಿಕಲಾಂಗನಾದರೂ ತನ್ನ ವಿಕಲತೆಯನ್ನು ನುಂಗಿಕೊಂಡು ಶಿರಹಟ್ಟಿ ತಾಲೂಕಿನಲ್ಲಿನ ಅಂಗವಿಕಲರ ಸಮಸ್ಯೆಗಳಿಗೆ ದ್ವನಿಯಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೌಲ್ಯಗಳನ್ನು ಬೆಳೆಸುತ್ತಿರುವ ಬಾಳೇಹೊಸೂರು ಗ್ರಾಮದ ಫಕ್ಕೀರೇಶ ಮ್ಯಾಟಣ್ಣವರ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ.
ಫಕ್ಕೀರೇಶ ಮ್ಯಾಟಣ್ಣವರ
ಶಿರಹಟ್ಟಿ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಬಾಳೇಹೊಸೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಬಡ ಕುಟುಂಬದಲ್ಲಿ ಹುಟ್ಟಿನಿಂದಲೆ ಅಂಗವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ ಫಕ್ಕೀರೇಶ ತಮ್ಮ ಮನೆತನಕ್ಕೆ ಎಂದಿಗೂ ಭಾರ ಎನಿಸಿಕೊಳ್ಳಲಿಲ್ಲ. ಅಂಗವಿಕಲ ಮಕ್ಕಳು ಜನಿಸಿದರೆ ಅದೊಂದು ಶಾಪ ಎನ್ನುವಂತಾಗಿರುವಾಗ, ಫಕ್ಕೀರೇಶ ಅವರ ತಂದೆ ತಾಯಿಗಳು ಎಂದಿಗೂ ಹಾಗೆ ಅಂದುಕೊಳ್ಳಲಿಲ್ಲ. ವಿದ್ಯೆಯ ಕಡೆಗೆ ಹೆಚ್ಚು ಒತ್ತು ನೀಡಿದ ತಂದೆ ತಾಯಿಯರು ಅವನನ್ನು ಪಿಯುಸಿವರೆಗೆ ಓದಿಸಲು ಬಹಳ ಕಷ್ಟಪಟ್ಟರು. ಮುಂದೆ ತನ್ನ ವಿಕಲತೆಯನ್ನು ಮರೆಮಾಚುವಂತೆ ೧೯೯೭ ರಿಂದಲೆ ಅನೇಕ ಸಂಘಟನೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜದಲ್ಲಿನ ನೊಂದ ಜೀವಿಗಳ ಪಾಲಿಗೆ ಸ್ಪಂಧಿಸುವ ವ್ಯಕ್ತಿಯಾಗಿ ಗುರುತಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ತನ್ನ ಲವಲವಿಕೆಯ ನಡೆಯಿಂದ ಅನೇಕ ಸಂಘಟನೆಗಳು ಬೆಳೆದು ನಿಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ.
ಸದಾ ಜನರೊಂದಿಗೆ ಬೆರೆಯುವ, ಸಮಸ್ಯೆಗಳಿಗೆ ಸ್ಪಂದಿಸುವ ಫಕ್ಕೀರೇಶ ಅವರು ಸಾರ್ವಜನಿಕವಾಗಿ ತನ್ನ ಹೆಸರನ್ನು ಗುರುತಿಸಿಕೊಂಡಿದ್ದಾನೆ. ೨೦೦೩ ರಲ್ಲಿ "ಆಸರೆ" ಎಂಬ ಅಂಗವಿಕಲ ಕ್ಷೇಮಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿಯ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಶಿರಹಟ್ಟಿ ತಾಲೂಕಿನ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಸಂಸ್ಥೆಯನ್ನು ಹುಟ್ಟು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಕಾಲಿನ ವಿಕಲತೆಯಿಂದ ಬಳಲುತ್ತಿರುವ ಈತ ಕೋಲು ಹಿಡಿದುಕೊಂಡೆ ಎಲ್ಲ ಕಡೆಗಳಲ್ಲಿಯೂ ಚಟುವಟಿಕೆಯಿಂದ ಭಾಗವಹಿಸುತ್ತಾನೆ. ಗ್ರಾಮದಲ್ಲಿ ಈತನ ಸಾರ್ವಜನಿಕ ಸ್ಪಂದನೆ ಈತನನ್ನು ರಾಜಕೀಯಕ್ಕೆ ಎಳೆದು ತರುವಂತೆ ಮಾಡಿದೆ. ಬಾಳೇಹೊಸೂರಿನ ಗ್ರಾಮದ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ವಿಕಲತೆಯ ತೊಂದರೆಯ ನಡುವೆ ಅವರು ಜನರ ನೋವಿಗೆ ಸ್ಪಂದಿಸುವ ರೀತಿ ಎಲ್ಲರಿಗೂ ಆಶ್ಚರ್ಯ ತರುವಂತಿದೆ. ಎಂದಿಗೂ ಆತನಿಗೆ ಬೇಸರವೆಂಬುದಿಲ್ಲ, ಬಡವರ, ನೊಂದವರ ಕೆಲಸಗಳನ್ನು ತಾನೆ ಕಚೇರಿಗಳಿಗೆ ಅಲೆದಾಡಿ ಎಲ್ಲ ರೀತಿಯಿಂದಲೂ ಸಹಾಯಕವಾಗುವಂತೆ ಮಾಡುವ ರೀತಿ ಉಳಿದವರಿಗೆ ಮಾದರಿ ಎನ್ನುವಂತಿದೆ.
ಭವ್ಯ ಕನಸುಗಳನ್ನು ಹೊತ್ತಿರುವ ಅಂಗವಿಕಲ ಆಶಾಕಿರಣವಾಗಿರುವ ಫಕ್ಕೀರೇಶ ಅವರು ಇದಿಗ ರಾಜ್ಯದ ಜವಳಿ ಸಚಿವ ಆರ.ವರ್ತೂರ ಪ್ರಕಾಶ ಅವರ ಯುವಸೇನೆಯ ಗದಗ ಜಿಲ್ಲಾ ಅಧ್ಯಕ್ಷನಾಗುವ ಮೂಲಕ ರಾಜ್ಯಮಟ್ಟದಲ್ಲಿ ತನ್ನ ಹೆಸರನ್ನು ಬೆಳೆಸಿಕೊಂಡಿದ್ದಾನೆ. ಆರ್.ವರ್ತೂರ ಪ್ರಕಾಶ ಅವರ ಆಪ್ತವಲಯದಲ್ಲಿ ಫಕ್ಕೀರೇಶ ಸಹಾ ಗುರುತಿಸಿಕೊಂಡಿರುವದು ವಿಶೇಷವಾಗಿದೆ. ಫಕ್ಕೀರೇಶ ಅವರ ಉದ್ದೇಶಿತ ಕಾರ್ಯ ಸಫಲವಾಗಲಿ ಎನ್ನುವದು ಹಾರೈಕೆಯಾಗಿದೆ.
-ದಿಗಂಬರ ಎಂ. ಪೂಜಾರ
*****