ಸಹಜ ನಗು ಆರೋಗ್ಯದ ಆಗರ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ

‘ ನಗು ‘ ಎಂಬುದು ಮುಖದಲ್ಲಿ ಪ್ರಕಟವಾಗುವ ಒಂದು ಭಾವ! ಮನಸ್ಸು ಒಳಗಿರುವುದರಿಂದ ಅದರ ನೇರ ಸಾಕ್ಷಾತ್ ದರುಶನ ಕಷ್ಟ. ಮನ ಭಾವಗಳ ಮೂಲಕ ತನ್ನ ಸಾಕ್ಷಾತ್ ದರುಶನ ಮಾಡಿಸುವುದು! ಮುಖದಲ್ಲೆ ಮನದ ಭಾವಗಳು ಮೇಳೈಸುವುದು! ಮುಖದಲ್ಲೆ ಮನ ಬಂದು ನರ್ತಿಸಿ ತನ್ನ ಖುಷಿಯ ಪ್ರಕಟಿಸುವುದು! ದುಃಖವ ಅನಾವರಣಗೊಳಿಸುವುದು. ಮುಖವೆ ಮನದ ಆಡೊಂಬಲ. ಮುಖ ಎಂಬುದು ಆತ್ಮದ ಭಾವಗಳನ್ನು ಪ್ರಕಟಿಸುವ ಜೀವಂತ ಸ್ವಾಭಾವಿಕ ಕಿರು ಪರದೆ! ಮುಖದಲ್ಲೇ ನಗುವೆಂಬ ಅಮೂಲ್ಯ ಆಭರಣ ಮೈದೋರಿ ಮುಖದ ಸೊಗಸು ಹೆಚ್ಚಿಸುವುದು! ಮತ್ತೆ ಮತ್ತೆ ಮೈದೋರಿ ಮುಖಕೆ ವ್ಯಾಯಾಮ ಮಾಡಿಸಿ ರಕ್ತ ಸಂಚಲನ ಹೆಚ್ಚಿಸಿ ರಂಗೇರಿಸಿ ಆರೋಗ್ಯ ಕಾಪಾಡುವುದು! ಅದಕ್ಕೆ ಹೆಚ್ಚು ನಗಬೇಕು! ಮುಖದಲ್ಲಿ ಪ್ರಕಟವಾಗುವ ಭಾವಗಳು ಮನದ ಪ್ರತಿಬಿಂಬಗಳು.

ನಗುವಿನಲ್ಲಿ ಅನೇಕ ವಿಧ. ತನಗಾದ ಸಂತಸವನ್ನು ಅವು ವಿವಿಧ ರೀತಿ ವ್ಯಕ್ತಪಡಿಸುವುವು. ಅವು ವ್ಯಕ್ತವಾಗುವ ರೀತಿ ಕಂಡು ಅವರಿಗಾಗಿರಬಹುದಾದ ಸಂತಸದ ಪ್ರಮಾಣವನ್ನು ಅರಿಯಬಹುದು. ಕೆಲವೊಮ್ಮೆ ಅವರಿಗಿರುವ ಗರ್ವ, ಅಸಹನೆ, ಕುಹಕತೆ, ವ್ಯಂಗ್ಯ ಮುಂತಾದವೂ ಪ್ರಕಟವಾಗುವುವು. ಸನ್ಮಾನಿಸಿದಾಗ ಮನಃಪೂರಕ ಸಂತೋಷವಾಗುವುದು. ಸಂತಸ ಎದೆ ತುಂಬಿ ಬರುವುದು. ಎದೆ ತುಂಬಿ ಬಂದ ಸಂತಸ ಮುಖದಿ ನಗುವಾಗಿ ಪ್ರಕಟವಾಗುವುದು. ನಗು ಮಾನವನೆಂಬ ಸಸ್ಯದಲ್ಲಿ ಸಂಪೂರ್ಣ ವಿಕಸಿಸಿದ ಸೌಗಂಧ ಸೂಸುವ ಕುಸುಮ! ಮೊಗ್ಗು ಹಿಗ್ಗಲು ಪರಿಮಳ ಸೂಸಲು ಪ್ರಾತಃಕಾಲ, ಬೆಳಗಿನ ತಂಪು ಗಾಳಿ, ಹಿತವಾದ ಹವಾಮಾನ, ಸೂರ್ಯನ ಹೊಂಗಿರಣಗಳ ಮೃದು ಸ್ಪರ್ಷ, ಅದರದೇ ಆದ ಮುಂಜಾವಿನ ವಾತಾವರಣ ಅವಶ್ಯಕ! ಹಾಗೆ ಮನೆಯಲ್ಲಿ ನಗು ಚಿಮ್ಮಲು ಒಂದು ಸಂತಸದ ಮಾತು, ಹಾಸ್ಯದ ತುಣುಕು, ಒಂದು ಸುಂದರ ದೃಶ್ಯ, ಮನಕೆ ಹಿತವಾದ ಸುದ್ದಿ, ಮಧುರ ಘಟನೆ, ಸುಮಧುರ ಸವಿನೆನಪು, ಇಷ್ಟರ ಆಗಮನ, ತಾನು ಯಾವುದರಲ್ಲಾಗಲಿ ಗೆದ್ದ ಸುದ್ದಿ, ಎಲ್ಲರಿಗಿಂತ ಮುಂದಿರುವ ವಿಷಯ, ಖುಷಿ ತರುವ ಭಾವಚಿತ್ರಗಳೋ ಅವಶ್ಯಕ. ಅದಕ್ಕೇ ನಮ್ಮ ಪೂರ್ವಜರು ಹಬ್ಬ ಹರಿದಿನ, ಉತ್ಸವ, ಜಾತ್ರೆ ಮದುವೆ, ಮುಂಜಿ, ನಾಮಕರಣ, ಷಷ್ಠಿ ಆಚರಣೆ, ಮದುವೆಯಲ್ಲಿ ನೆಂಟರ ನಡುವೆ ಸಂಬಂಧಗಳ ಬೆಸೆಯುವ ಆಟಗಳ ರೂಪದ ಆಚರಣೆಗಳು, ಮುಂತಾದ ಸಂಭ್ರಮಗಳ ವರುಷದುದ್ದಕ್ಕೂ ಇರುವಂತೆ ನೋಡಿಕೊಂಡಿದ್ದರು. ಅನೇಕ ಕಾರಣಗಳಿಂದ ಬಂಧು ಬಾಂಧವರು ಆಗಾಗ ನೆರೆದು ಇಷ್ಟದ ನುಡಿಗಳಲಿ ಮಿಂದು ಸವಿ ಭೋಜನ ಕೂಟದಿ ಮುಳುಗುತ್ತಿದ್ದರು. ಜತೆಗೆ ಕೋಲಾಟ, ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ, ಒಗಟು, ಭಜನೆ, ಜಾನಪದ ನೃತ್ಯಗಳು : ವೀರಗಾಸೆ, ಸೋಮನ ಕುಣಿತ ತೊಗಲು ಗೊಂಬೆಯಾಟ, ಓಲೆಬಸವ, ಮೋಡಿ ಮುಂತಾದವು ಮನರಂಜನೆಯ ಮೂಲವಾಗಿದ್ದವು. ಅವು ನಗು ಹೊಮ್ಮಿಸಲು ಸಹಕಾರಿಯಾಗಿದ್ದವು.

‘ ನಗು ‘ ಮಾನವನಿಗೆ ಪ್ರಕೃತಿ ನೀಡಿರುವ ವಿಶಿಷ್ಟ ವರ! ಯಾವುದೇ ಜೀವಿಗಳು ಮಾನವನಂತೆ ನಗಲಾರವು, ಯಾವುದೇ ಭಾವನೆಗಳನ್ನು ಮುಖದ ಮೂಲಕ ಹೊರ ಹಾಕಲಾರವು. ಮಾನವನ ಮುಖವನ್ನು ನೋಡಿದಾಕ್ಷಣ ಅವನು ಸಂತಸದಿಂದಿರುವನೋ ದುಃಖದಲ್ಲಿರುವನೋ ಎಂದು ತಿಳಿಯಬಹುದು. ಪ್ರಾಣಿಗಳ ಮುಖವನ್ನು ನೋಡಿ ಅದರ ಭಾವನೆಗಳನ್ನು ತಿಳಿಯಲಾಗದು! ಏಕೆಂದರೆ ಪ್ರಾಣಿಗಳ ಮುಖದಲ್ಲಿರುವ ಸ್ನಾಯುಗಳು ಮಾನವನ ಸ್ನಾಯುಗಳಂತೆ ವಿಕಸಿಸಿ ಸಂಕುಚಿಸಿ ಸಂತಸ ತೋರಲು, ನಾನಾ ಭಾವನೆಗಳ ಅಭಿವ್ಯಕ್ತಿಸಲು ಸಮರ್ಥವಾಗಿಲ್ಲ. ಮಾನವನಿಗೆ ಮಾತ್ರ ಮುಖದಲ್ಲಿ ಭಾವನೆಗಳ ಪ್ರಕಟಿಸುವ ಕೊಡುಗೆ ಪ್ರಕೃತಿ ನೀಡಿರುವುದು ಅವನ ಭಾಗ್ಯ. ಮುಖ ಭಾವನೆಗಳ ವ್ಯಕ್ತಪಡಿಸುವುದರಿಂದ ಮುಖವನ್ನು ಮನಸ್ಸಿನ ಕನ್ನಡಿ ಎನ್ನಬಹುದು!

ಲೀಯಾನಾರ್ಡೋ ಡಾವಿಂಚಿಯ ಪ್ರಸಿದ್ದ ಕಲಾಕೃತಿಯಾದ ಮೊನಾಲಿಸಾಳದು ಮುಗ್ದ ಸಹಜ ನಗುವಾದುದರಿಂದ ಇಂದಿಗೂ ಎಲ್ಲರ ಗಮನ ಸೆಳೆಯುತ್ತಿರುವುದು! ಸುಂದರವಾಗಿ ಕಾಣುತ್ತಿರುವುದು! ಸಹಜ ನಗು ನಿಷ್ಕಲ್ಮಷವಾದುದು. ಸಹಜವಾಗಿ ನಕ್ಕಾಗ ಮುಖದಲ್ಲಿರುವ ಸ್ನಾಯುಗಳು ಹಿಗ್ಗುವುದು ಕುಗ್ಗುವುದು ಮಾಡುವುದರಿಂದ ಅಲ್ಲಿರುವ ಸ್ನಾಯುಗಳಿಗೆ ವ್ಯಾಯಾಮವಾಗಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಇಡೀ ಮುಖ ಸಬಲವೂ ಕಾಂತಿಯುತವೂ ಆರೋಗ್ಯಪೂರ್ಣವೂ, ಸುಂದರವೂ ಆಗುವುದು! ಆತ್ಮಕ್ಕೆ ಆನಂದವಾಗುವುದು. ನಗು ಇತರರಿಗೆ ಮುದನೀಡಬೇಕು. ಆಗ ನಮ್ಮ ಸಂತಸ ಇಮ್ಮಡಿಯಾಗುತ್ತದೆ.

‘ ನಗು ‘ ಆರೋಗ್ಯದ, ದೀರ್ಘಾಯುಷ್ಯದ ಗುಟ್ಟು! ಇದು ತಿಳಿದಮೇಲೆ ನಗೆಗೆ ಮಹತ್ವ ಬಂದಿದೆ. ಅದಕ್ಕಾಗಿಯೇ ಎಲ್ಲಾ ಕಡೆ ನಗೆ ಕೂಟಗಳು, ನಗೆ ಹಬ್ಬಗಳು, ಬೆಳದಿಂಗಳ ಚುಟುಕು ಗೋಷ್ಟಿಗಳು, ಸಾಹಿತ್ಯ ಗೋಷ್ಠಿಯಲ್ಲಿ ಹಾಸ್ಯದ ಚಟಾಕೆಗಳು ಹಾರಿಸುತ್ತಿರುವುದು! ಕೃತಕ ನಗುವಿಗಿಂತ ಸಹಜ ನಗು ಹೆಚ್ಚು ಆರೋಗ್ಯಕಾರಿ. ಕೃತಕವಾಗಿ ನಕ್ಕಾಗ ಮುಖಕ್ಕಷ್ಟೇ ವ್ಯಾಯಾಮವಾಗುತ್ತದೆ. ಸಹಜವಾಗಿ ನಕ್ಕಾಗ ಮುಖದ ಜತೆಗೆ ಮನಸ್ಸಿಗೆ ಇಡೀ ದೇಹಕ್ಕೆ ಸಂತೋಷವವಾಗುತ್ತದೆ. ಅದರಲ್ಲಿ ಇಡೀ ದೇಹವೇ ತೊಡಗುವುದರಿಂದ ದೇಹ ಹಗುರವಾಗಿ ಮುಖಕ್ಕೆ ವ್ಯಾಯಾಮವಾಗುವುದರ ಜತೆಗೆ ಆರೋಗ್ಯ, ಆಯಸ್ಸು, ಸೌಂದರ್ಯ ಅಧಿಕವಾಗುತ್ತದೆ! ಆದ್ದರಿಂದ ನಗುವ ಸಂದರ್ಭಗಳು ಬಂದಾಗ ಅವುಗಳ ಸದ್ಬಳಕೆ ಮಾಡಿಕೊಂಡು ಮನಸಾರೆ ನಕ್ಕುಬಿಡಬೇಕು. ನಗು ಆರೋಗ್ಯ ಉತ್ತಮವಾಗಲು ಕಾರಣವಾಗುವುದರಿಂದ ಬದುಕನ್ನು ಸಂತಸ ಉಂಟಾಗುವಂತೆ ರೂಪಿಸಿಕೊಳ್ಳಬೇಕು. ಅವಕಾಶವಾದಾಗ ಚಿಕ್ಕ ಮಗ್ದ ಮಕ್ಕಳೊಂದಿಗೆ ಬೆರೆತಾಗ ಅವು ನೀಡುವ ನಿಷ್ಕಲ್ಮಷ ಆನಂದದಿಂದ ಸಂತಸವಾಗುವುದು, ಅವರಿಗೆ ಸ್ಪಂದಿಸಿದಾಗ ಅವರ ಕಲ್ಪನಾ ಶಕ್ತಿಗೆ, ಪ್ರಶ್ನೆಗಳಿಗೆ ಬೆರಗಾಗುವಿರಿ. ಅವರ ತೊದಲುವಿಕೆ, ಅಪ್ರಬುದ್ದ ಸಹಜ ಮಾತು, ನಿಮಗೂ ನಿಲುಕದ ಪ್ರಶ್ನೆ, ಅವಕ್ಕೆ ಅರ್ಥ ಮಾಡಿಸಲಾಗದ ಕಷ್ಟ ಸಂತಸ ತಂದು ಆನಂದ ನೀಡುವುದು. ಬೀಚಿ, ಚಾರ್ಲಿ ಚಾಪ್ಲಿಯನ್, ಮಿಸ್ಟರ್ ಬೀನ್, ಪ್ರೋಪೇಸರ್ ಕೃಷ್ಣೇ ಗೌಡರು, ಗಂಗಾವತಿ ಪ್ರಾಣೇಶ್ , ರಿಚರ್ಡ್ಲೂಯೀಸ್, ಮಾಮನಿ ಮುತಾದವರ ನಗೆ ಚಟಾಕೆಗಳಿಗೆ ಸಮಯಕೊಡಿ! ಮೊದಲು ಮನಸ್ಸನ್ನು ನಗಲು ಸಿದ್ದಗೊಳಿಸಿಕೊಳ್ಳಬೇಕು. ಒಡನಾಡಿಗಳು ತಪ್ಪು ಮಾಡುವುದು, ವಸ್ತುಗಳನ್ನು ಮಕ್ಕಳು ಒಡೆದು ಹಾಕುವುದು ಸಾಮಾನ್ಯ ಅಗ ಕೋಪ ಮಾಡಿಕೊಳ್ಳದೆ ಇವು ಬದುಕಿನ ಭಾಗ, ಕಲಿಯುವವರು ಮಾಡುವ ಸಹಜ ತಪ್ಪುಗಳು, ನಡೆಗಲಿಯುವವರು ಎಡವುದು ಸಹಜ. ಅವುಗಳನ್ನು ತಪ್ಪೆಂದು ಭಾವಿಸಿ ತಿದ್ದಿ ಅವುಗಳ ಸಂಭಾಳಿಸುವ ಕಲೆ ತೋರಿಸಿ ಆ ಕಲೆಯಲ್ಲಿ ಸಂತಸ ಕಾಣಬೇಕು.

ಬದುಕಿನಲ್ಲಿ ನಗು ಇರುವಂತೆ ಬದುಕುವ ಶೈಲಿ ರೂಪಿಸಿಕೊಳ್ಳಬೇಕು. ಕರುಬುವುದು ಬಿಡಬೇಕು. ಏಕೆಂದರೆ ಅದು ಆನಾರೋಗ್ಯಕ್ಕೆ ರಹದಾರಿ. ಬದುಕಿನ ಅನೇಕ ಸಂದರ್ಭಗಳಲ್ಲಿ ಬೆಳಗಿನಿಂದ ಸಂಜೆಯವರೆಗೂ ನಗು ಸಹಜವಾಗಿ ಬರುತ್ತದೆ. ನಗು ಇಲ್ಲದೆ ಬದುಕು ಇರಲಾರದು! ಆದರೆ ಅಹಂ, ಬಿಗುಮಾನ, ಪ್ರತಿಷ್ಟೆ, ನಾಗರೀಕತೆಯ ಸೋಗು, ತಂದೆ, ಒಡೆಯ, ಅಧಿಕಾರಿ ಎಂಬ ಸ್ಥಾನಮಾನ ನಗುವನ್ನು ಅದುಮಿಡುವಂತೆ ಮಾಡುತ್ತದೆ. ನಗುವನ್ನು ಅದುಮಿಡುವುದು ಆರೋಗ್ಯಕ್ಕೆ ಪೂರಕವಲ್ಲ! ನಕ್ಕರೆ ಎಲ್ಲಿ ಬೆಲೆ ತೂಕ ಕಡಿಮೆಯಾಗಿಬಿಡುತ್ತದೋ, ತನ್ನ ಮಾತಿನ ಮಹತ್ವ ಹೊರಟುಹೋಗಿಬಿಡುತ್ತದೋ, ನಾನು ಸದರ ಆಗುತ್ತೇನೋ ಎಲ್ಲಿ ನನಗೆ ಮುಂದೆ ಬೆಲೆ ಕೊಡದಂತಾಗಿಬಿಡುವರೋ ಎಂದು ನಾಗರೀಕ ಮಾನವ ನಗಲಿಕ್ಕೆ ಚೌಕಾಸಿ ಮಾಡುತ್ತಿದ್ದಾನೆ. ನಗಲಷ್ಟೇ ಅಲ್ಲ, ಸೀನಲು, ಕೆಮ್ಮಲು, ಆಕಳಿಸಲು, ಅಳಲು ಮುಂತಾದ ಸಹಜ ಕ್ರೀಯೆಗಳನ್ನು ಮಾಡಲು ಹಿಂದು ಮುಂದು ನೋಡಿ ಅವುಗಳನ್ನೆಲ್ಲಾ ಕರ್ಚಿಫಿನಲ್ಲಿ ಅದುಮಿಡುವುದು, ಮುಚ್ಚಿಡುವುದು ಮಾಡುತ್ತಿದ್ದಾನೆ! ಮದುವೆ, ಹಬ್ಬ, ಹಾಸ್ಯ, ಋತುಮಾನ, ವಾತಾ ಪಿತ್ತ ವಿಕಾರಗಳಿಗನುಗುಣವಾಗಿ ಇವೆಲ್ಲಾ ಸಹಜವಾಗಿ ಬರುತ್ತವೆ. ಬರಬೇಕು. ಸಹಜವಾಗಿ ಬರುವ ಇವುಗಳ ಪೂರ್ಣವಾಗಲು ಬಿಡಬೇಕು. ಆದರೆ ಸೀನಿದರೆ, ಕೆಮ್ಮಿದರೆ, ಆಕಳಿಸಿದರೆ ಪಕ್ಕದವರು ಅನಾಗರಿಕ, ಸೋಮಾರಿ ಎಂದುಕೊಂಡಾರು ಎಂದು ಅವುಗಳನ್ನು ನಿಯಂತ್ರಿಸುವರು. ಪೂರ್ತಿ ಆಕಳಿಸಲು ಬಿಡುವುದೇ ಇಲ್ಲ. ಹೀಗೆ ಮಾಡುವುದರಿಂದ ಕ್ರಮೇಣ ಬಾಯಿ ತೆರೆಯುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಅದರಿಂದ ಬಾಯಿಗಾಗುವ ವ್ಯಾಯಾಮದ ಲಾಭವನ್ನು ಇಲ್ಲವಾಗಿಸಿಕೊಳ್ಳುತ್ತೇವೆ. ನಗು, ಸೀನು, ಆಕಳಿಕೆ, ಕೆಮ್ಮು, ಮೈಮುರಿಯುವಿಕೆ ದೇಹದ ಅಂಗಾಂಗಗಳ ಪರೀಕ್ಷೆಗಳೂ ಸಹ ಆಗುತ್ತವೆ. ಅವುಗಳನ್ನು ನಿಯಂತ್ರಿಸಬಾರದು. ಬೇರೆಯವರಿಗೆ ತೊಂದರೆಯಾಗದಂತೆ ಅನಭವಿಸಬೇಕು! ಕೆಲವು ಸಹಜ ಕ್ರೀಯೆಗಳು ಅಶುಭವೆಂದು ಔಷಧಿ ಸೇವಿಸಿ ಮುಂದೂಡುತ್ತಿರುವುದು ಅಪಾಯ! ಸಂತಸದ ಸಮಯ ಬಂದಾಗ ನಕ್ಕು ಆರೋಗ್ಯದಿಂದಿರಬೇಕೇ ಹೊರತು ನಾಗರೀಕತೆಯ ಸೋಗು ಹಾಕಿ ನಗದಂತೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಾರದು. ಒಂದು ಪದ್ಯದಲ್ಲಿ ಡಿವಿಜಿಯವರು ಎಲ್ಲರ ಜೀವನದಲ್ಲಿ ನಗು ತುಂಬಿರಲಿ ನಗಿ ಇತರರನ್ನೂ ನಗಿಸಿ ನಗುತಾ ಬದುಕಿ ಎಂಬ ಸದಾಶಯದಿಂದ ನಗಿಸುವ ನಗುತ ಬಾಳುವ ವರವ ಕೊಡೋ ಎಂದು ಬೇಡಿಕೊಳ್ಳೋ ಮಂಕುತಿಮ್ಮ ಎಂದು ಹೇಳುತ ನಗುವಿನ ಮಹತ್ವ ಸಾರಿರುವರು!

 ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ!
 ನಗುವ ಕೇಳುತ ನಗುವುದತಿಶಯ ದರ್ಮ!!
 ನಗುವ ನಗಿಸುವ ನಗಿಸಿ ನಗುತ ಬಾಳುವ ವರವ!
ಮಿಗೆ ನೀನು ಬೇಡಿಕೊಳೋ ಮಂಕುತಿಮ್ಮ!!

ಕೆ ಟಿ ಸೋಮಶೇಖರ್ ಹೊಳಲ್ಕೆರೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x