Facebook

ಮಕ್ಕಳ ಆರೈಕೆ ಹೆತ್ತವರಿಗೊಂದು ಸವಾಲೇ ಸರಿ: ಸಿಂಧು ಭಾರ್ಗವ್

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದೇ ಬಳ್ಳಿಯ ಎರಡು ಸುಮಗಳ ನೋಡಲು ಎಲ್ಲರಿಗೂ ಇಷ್ಟ. ಅಂದರೆ ದಂಪತಿಗಳಿಗೆ ಮುದ್ದು ಮುದ್ದಾದ ಎರಡು ಮಕ್ಕಳು ಮನೆ ತುಂಬಾ ಓಡಾಡಿಕೊಂಡಿದ್ದರೆ ನೋಡಲು ಬಲುಸೊಗಸು. ಕೆಲವರು ಉದ್ಯೋಗ,ಬಡ್ತಿ ಮೇಲೆ ಬಡ್ತಿ ,ಲಕ್ಷ ಲಕ್ಷ ಸಂಬಳ , ಆಸ್ತಿ ಮಾಡಿಕೊಳ್ಳುವುದು ಎಂಬ ಆಸೆಯ ಪಾಶಕ್ಕೆ ಸಿಲುಕಿ ಒಂದು ಮಗುವನ್ನು ಹೆರಲು ಕೂಡ ಮನಸ್ಸು ಮಾಡುವುದಿಲ್ಲ. ಇನ್ನೂ ಕೆಲವರು “ಅಯ್ಯೋ.. ಈಗಿನ ಖರ್ಚು ದುಬಾರಿ ಜೀವನಕ್ಕೆ ಒಂದೇ ಮಗು ಸಾಕಪ್ಪ… ಎರಡೆರಡು ಮಕ್ಕಳನ್ನು ಯಾರು ನೋಡಿಕೊಳ್ತಾರೆ…”ಎಂದು ರಾಗ ಎಳೆಯುತ್ತಾರೆ. ಒಂದು ಮಗು ಮಗುವಲ್ಲ, ಒಂದು ಕಣ್ಣು ಕಣ್ಣಲ್ಲ ಎಂಬ ನಾಣ್ನುಡಿಯಂತೆ ನಿಮ್ಮ ಮಗುವನ್ನು ಒಕ್ಕುಂಟಿಯಾಗಿ ಬೆಳಸದಿರಿ. ಹಂಚಿ ಬದುಕುವ ಕಲೆಯೇ ಅರಿಯದೇ ಒಂದೇ ಮಗು ಬೆಳೆಯುವುದು ವಿಪರ್ಯಾಸ. ಮುಂದೆ ಬರುವ ಸಂಗಾತಿಯ ಮೇಲೆ ಹಾಗೆಯೇ ಅವರ ಸಾಂಸಾರಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇದರ ನಡುವೆಯು ಎರಡು ಮಕ್ಕಳನ್ನು ಹೆತ್ತು ಪ್ರೀತಿಯಿಂದ ಬೆಳೆಸುವ ಪೋಷಕರು ಇದ್ದಾರೆ. ಆದರೆ ಎರಡು ಮಕ್ಕಳನ್ನು ಸಾಕಿ ಸಲಹುವುದು ಅಷ್ಟು ಸುಲಭವೇ.? ಇಲ್ಲಿ ಹಣದ ಮಾತಲ್ಲ. ಪ್ರೀತಿಯ ಬಗ್ಗೆ ಹೇಳುತ್ತಿರುವೆ. ಎರಡನೇ ಮಗು ಹೊಟ್ಟೆಯೊಳಗಿದ್ದಾಗ “ನಿನಗೆ ಮುಂದೆ ತಮ್ಮ ಬರುತ್ತಾನೆ? ಅವನ ಜೊತೆ ಆಟವಾಡಬಹುದು ಎಂದೆಲ್ಲ ಆಸೆ ತೋರಿಸಿದಾಗ ಮೊದಲ ಮಗುವಿಗೂ ಒಂದು ಕನಸು ಮೂಡಿರುತ್ತದೆ. ನನ್ನ ತಮ್ಮ ಇಲ್ಲ ತಂಗಿ ಬರುವಳು. ಅವನ/ಳ ಜೊತೆ ಆಡಬಹುದು ಎಂದು. ಅದೇ ಹೆರಿಗೆಯಾಗಿ, ತಾಯಿ ಎರಡನೇ ಮಗುವಿನ ಜೊತೆಗೆ ಮನೆಗೆ ಬಂದಾಗ….. ಅದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಗಮನ ವಹಿಸಬೇಕಾದ ಸಮಯದಲ್ಲಿ, ಮೊದಲ ಮಗುವಿಗೆ ಒಂದು ರೀತಿಯ ಅಸಮಧಾನ, ಬೇಸರ, ಮತ್ಸರ ಎಲ್ಲವೂ ಮೂಡುತ್ತದೆ.
ತನ್ನ ಕಡೆ ಗಮನ ಕೊಡುವುದು ಕಡಿಮೆಯಾಗುತ್ತಿದೆ ಎಂದು ಹೇಳಿ ಕೋಪ ಮಾಡಿಕೊಳ್ಳುತ್ತದೆ. ದೂರ ಇರಲು ಪ್ರಯತ್ನಿಸುತ್ತದೆ. ಕೆಲವು ಮಕ್ಕಳು ಮೌನಕ್ಕೆ ಶರಣಾಗುತ್ತಾರೆ. ಬೇಕಂತಲೇ ಹಟಮಾಡಲು ಪ್ರಾರಂಭಿಸುತ್ತಾರೆ.

ಹಾಗಾಗದರೆ ಎರಡನೇ ಮಗುವಿನ ಆಗಮನದ ನಂತರ ಮೊದಲ ಮಗುವಿನ ಬಗ್ಗೆ ಹೇಗೆ ಕಾಳಜಿ ವಹಿಸಬಹುದು?
೧) ಮೊದಲ ಮಗುವನ್ನು ಪ್ರತಿಯೊಂದಕ್ಕೂ ” ನೀನು ದೊಡ್ಡವನು/ಳು ಎಂದು ಗದರಿಸುತ್ತಾ ಇರಬಾರದು.
೨) ಎರಡನೇ ಮಗುವಿಗೆ ಹಾಲುಡಿಸುವುದು, ನಿದಿರೆ ಮಾಡಿಸುವುದು ಹಾಗೆಯೇ ಅದಕ್ಕೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸುವಾಗ ಪೌಡರ್, ಕಾಡಿಗೆ ಹಚ್ಚುವಾಗೆಲ್ಲ ಮೊದಲ ಮಗುವನ್ನು ಹತ್ತಿರ ಕುಳ್ಳಿರಿಸಿಕೊಳ್ಳಬೇಕು. ಇಲ್ಲ ಆ ಮಗುವಿಗೂ ಮಾಡಲು ಹೇಳಬೇಕು.
೩) ಎರಡನೇ ಮಗು ನಿದ್ದೆ ಮಾಡಿದಾಗ ಮೊದಲ ಮಗುವನ್ನು ಮುದ್ದಿಸಿ ಕತೆ ಹೇಳಿ ಪ್ರೀತಿಯಿಂದ ನೋಡಿಕೊಳ್ಳಬೇಕು. ಶಾಲೆಗೆ ಹೋಗುವ ಮಗುವಾದರೆ ಓದಿಸುವುದು, ಮನೆಕೆಲಸ ಬರೆಸುವುದು ಮಾಡಬೇಕು.
೪) ಏನೇ ನಡೆದರು ಮೊದಲ ಮಗುವೇ ಕಾರಣ ಎಂದು ಒಂದು ಸಣ್ಣ ತಪ್ಪು ಮಾಡಿದರೂ ಶಿಕ್ಷೆ ಕೊಡಲು ಮುಂದಾಗಬಾರದು. ತಿದ್ದಿ ತಿಳಿಹೇಳಬೇಕು.
೫) ಮೊದಲ ಮಗುವಿನ ಹತ್ತಿರವೇ ನಿನ್ನ ತಮ್ಮ ಇಲ್ಲ ತಂಗಿಗೆ ಓದಿಸು, ಜೊತೆಗೆ ಆಟವಾಡಿ ಎಂದೆಲ್ಲ ಕೆಲಸ ನೀಡಿ. ಜೊತೆಗೆ ಇರಲು ಅನುವು ಮಾಡಿಕೊಡಿ.

ಎರಡೂ ಮಕ್ಕಳನ್ನು ಜೊತೆ-ಜೊತೆಯಾಗಿ ಪ್ರೀತಿಯಿಂದ ನಡೆಸಿಕೊಂಡು ಹೋಗುವುದು ಹೆತ್ತ ತಾಯಿಗೆ ಸವಾಲೇ ಸರಿ. ಬಹಳ ನಾಜೂಕಾದ ಮನಸ್ಸಿರುವ ಮೊದಲ‌ ಮಗುವಿನ ಬಗೆಗೂ ಕಾಳಜಿ ವಹಿಸಿರಿ. ಅಲ್ಲದೆ ಸಣ್ಣಪುಟ್ಟ ಕೆಲಸವನ್ನು ಆ ಮಗುವೇ ಮಾಡಲು ತಿಳಿಸಿಕೊಡಿ. ಎಲ್ಲ ಸಂಗತಿಗಳಿಗೂ ಮೊದಲ ಮಗುವೇ ಕಾರಣ ಎಂದು ಬೈದು ಎರಡನೇ ಮಗು ಇನ್ನೂ ಸಣ್ಣದು ಎಂದು ಅದರೆದುರೇ ಕ್ಷಮಿಸಿ ಮುದ್ದಿಸಬೇಡಿ. ತಪ್ಪು ಯಾವ ಮಗು ಮಾಡಿದರೂ ತಿಳಿಹೇಳಿ. ಹೆತ್ತವರಿಗೆ ಎರಡೂ ಮಕ್ಕಳೂ ಸಮಾನರು ಎಂದು ಮಕ್ಕಳಿಗೆ ತಿಳಿಸಿ. ಸಣ್ಣ ವಯಸ್ಸಿನಲ್ಲಿ ಅರ್ಥವಾಗದಿದ್ದರೂ ಆಮೇಲಾಮೇಲೆ ಅರಿವಿಗೆ ಬರುತ್ತದೆ. ಅವರಿಗಾಗಿಯೇ ಅರ್ಥವಾಗಿ ಹೆತ್ತವರ ಮೇಲೆ ಪ್ರೀತಿ ಹೆಚ್ಚುತ್ತದೆ.

-ಸಿಂಧು ಭಾರ್ಗವ್


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply