“ದ ಹಿಡನ್ ಸೀಕ್ರೇಟ್ಸ್ ಆಫ್ ಟ್ರೀಸ್”: ಅಖಿಲೇಶ್ ಚಿಪ್ಪಳಿ

Akhilesh chippali column1
ಪೀಟರ್ ಹೋಲ್‍ಮನ್
ರೋಲ್ಡ್ ದಾಲ್ ಬರೆದ “ದ ಸೌಂಡ್ ಮಶಿನ್” ಎಂಬ ಸಣ್ಣ ಕತೆಯಲ್ಲಿ ಒಬ್ಬ ಮನುಷ್ಯ ಒಂದು ಯಂತ್ರವನ್ನು ಕಂಡು ಹಿಡಿಯುತ್ತಾನೆ. ಕಿವಿಗೆ ಹಾಕಿಕೊಳ್ಳುವ ಈ ಯಂತ್ರದ ವಿಶೇಷವೆಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಸ್ವಾಭಾವಿಕವಾಗಿ ಕೇಳಲಾರದ ಶಬ್ಧಗಳು ಕೇಳಿ ಬರುತ್ತವೆ. ಆ ಯಂತ್ರವನ್ನು ಕಿವಿಗೆ ಹಾಕಿಕೊಂಡು ಲಾನ್‍ನಲ್ಲಿ ಅಡ್ಡಾಡುತ್ತಾನೆ. ಅಲ್ಲಿ ಬೆಳೆದ ಸೇವಂತಿಗೆ ಹೂವನ್ನು ಕೀಳುತ್ತಾನೆ. ಆಶ್ಚರ್ಯವೆಂಬಂತೆ ಗಿಡದಿಂದ ವಿಚಿತ್ರವಾದ ಸದ್ದು ಬರುತ್ತದೆ. ಅದೇನು ಅಳುವೇ, ನೋವಿನ ಆಕ್ರಂದನವೇ? ಅಥವಾ ಪ್ರತಿಭಟಿಸುವ ಚರ್ಯೆಯೇ ಅವನಿಗದು ಅರ್ಥವಾಗುವುದಿಲ್ಲ. ಸಸ್ಯಗಳಿಗೆ ನೋವು ಆಗುವುದಿಲ್ಲವೆಂಬ ಅವನ ಪ್ರಾಥಮಿಕ ತಿಳುವಳಿಕೆ ಹುಸಿಯಾಗುತ್ತದೆ. 1949ರಲ್ಲೇ ಮುದ್ರಣಗೊಂಡ ಈ ಕಿರುಕತೆ ಅತ್ಯಂತ ಪ್ರಸಿದ್ಧಿ ಪಡೆದ ಕೆಲವೇ ಕತೆಗಳಲ್ಲಿ ಒಂದಾಗಿದೆ. ಈ ಕಾಲ್ಪನಿಕ ಕತೆಯೇ ನಿಜವೂ ಹೌದು ಎಂದು ನಿರೂಪಿಸುವ ಪ್ರಯತ್ನವನ್ನು ಪೀಟರ್ ಹೋಲ್‍ಮನ್ ಎಂಬ ಜರ್ಮನ್ ದೇಶದ ಅರಣ್ಯ ಅಧಿಕಾರಿ ತನ್ನ “ಹಿಡನ್ ಲೈಫ್ ಆಫ್ ಟ್ರೀಸ್” ಎಂಬ ಕೃತಿಯಲ್ಲಿ ಮಾಡಿದ್ದಾನೆ.

ಜರ್ಮನಿಯ ಅರಣ್ಯ ಆಯೋಗದಲ್ಲಿ ಕೆಲಸಕ್ಕೆ ಸೇರಿದ ಪೀಟರ್ 20 ವರ್ಷದ ತನ್ನ ಸೇವಾ ಅವಧಿಯ ಬಹಳಷ್ಟು ಸಮಯವನ್ನು ಮರ ಕಡಿಯಲೇ ವಿನಿಯೋಗಿಸಿದ. ಯಾವುದೇ ಕೆಲಸವನ್ನು ಅತೀವ ತನ್ಮಯತೆಯಿಂದ ಮಾಡುವ ಗುಣ ಪೀಟರ್‍ನದಾಗಿತ್ತು. ಮರ ಕಡಿಯುವ ಕೆಲಸವನ್ನೂ ಕಟುಕತನದಿಂದಲೇ ನಿರ್ವಹಿಸುತ್ತದ್ದ ದಿನಗಳವು. ಅದೇಕೋ ಒಂದು ದಿನ ಮರ ಕಡಿಯುವ ನಿರ್ಧಾರದಿಂದ ಅಚಾನಕ್ ಆಗಿ ಹಿಂದೆ ಸರಿದು, ಮರಗಳನ್ನು ಅಭ್ಯಾಸ ಮಾಡ ತೊಡಗಿದ. ದಟ್ಟಡವಿಯಲ್ಲಿ ತಿರುಗುತ್ತಾ, ಮರಗಳನ್ನು ಅಭ್ಯಸಿಸ ತೊಡಗಿದ ಪೀಟರ್‍ಗೆ ದಿನಕ್ಕೊಂದು ವಿಧವಾದ ಅಚ್ಚರಿ ಗೋಚರಿಸತೊಡಗಿದವು. ಶ್ರವಣಾತೀತ ತರಂಗಗಳನ್ನು ಹೊರಡಿಸುವ ಮರಗಳು ಪರಸ್ಪರ ಸಂವಹನೆಯನ್ನು ಮಾಡಿಕೊಳ್ಳುವ ಶಕ್ತಿ ಹೊಂದಿವೆ ಎಂದು ಗುರುತಿಸಿದ. ಅತ್ಯಂತ ಗಹನವಾದ ಹಾಗೂ ಸಂಕೀರ್ಣವಾದ ಮರವಿಜ್ಞಾನವನ್ನು ನಾವು ತಿಳಿದುಕೊಂಡಿರುವುದು ಬಹಳ ಕಡಿಮೆ ಹಾಗೂ ಈ ನಿಟ್ಟಿನಲ್ಲಿ ನಮ್ಮ ಅರಿವಿನ ಹರಿವು ಕೂಡ ತುಂಬಾ ನಿಧಾನವಾಗಿ ಸಾಗಿದೆ ಎಂದು ಪದೇ ಪದೇ ತನ್ನ ಪುಸ್ತಕದಲ್ಲಿ ಪೀಟರ್ ಪ್ರಸ್ತಾಪಿಸುತ್ತಾನೆ. ಮರಗಳು ಅಪಾಯವನ್ನು ಗ್ರಹಿಸುವ ರೀತಿ, ಸಹ ಅವಲಂಬಿತ ಜೀವಿಗಳೊಡನೆ ಬದುಕುವ ರೀತಿ, ದೂರದಲ್ಲಿರುವ ಏಕಾಂತ ಬಂಧುವಿನೊಡನೆ ಸಂವಹನ ನಡೆಸುವ ಪ್ರಕ್ರಿಯೆಗಳು ಈಗಿನ ವಿಜ್ಞಾನವನ್ನೂ ಮೀರಿ ಆವರಿಸಿವೆ ಎಂದು ಹೇಳುತ್ತಾನೆ. ಅದರಲ್ಲೂ ನೈಸರ್ಗಿಕವಾಗಿ ಬೆಳೆದ ದಟ್ಟಡವಿಯ ಸಂಕೀರ್ಣತೆಯನ್ನು ಅರಿಯಲು ನಮ್ಮ ಈಗಿನ ತಂತ್ರಜ್ಞಾನದ ಶಕ್ತಿ ಏನೇನು ಸಾಲದು ಎಂಬುದು ಲೇಖಕನ ಅಭಿಪ್ರಾಯವಾಗಿದೆ. 

ಇಡೀ ಪ್ರಪಂಚವನ್ನು ಬೆಸೆಯಲು ನಾವು ಇವತ್ತು ಕಂಪ್ಯೂಟರ್ ಹಾಗೂ ಇಂಟರ್‍ನೆಟ್‍ಗಳನ್ನು ಬಳಸುತ್ತಿದ್ದೇವೆ. ಜಗತ್ತು ಇವತ್ತು ಅಂಗೈಯಲ್ಲೇ ಲಭ್ಯವಿದೆ. ಯಾವುದೇ ಮಾಹಿತಿ ಬೇಕಾದರೂ ವಲ್ರ್ಡ್ ವೈಡ್ ವೆಬ್ ನಮ್ಮ ಸಹಾಯಕ್ಕೆ ಇದೆ. ಇದೇ ರೀತಿ ಮರಗಳು ಕೂಡಾ ನೆಲದಾಳದಲ್ಲಿ ಪರಸ್ಪರ ಸಂವಹನಾ ಕ್ರಿಯೆಗಾಗಿ ಶಿಲೀಂದ್ರಗಳನ್ನು ಬಳಸಿಕೊಳ್ಳುತ್ತವೆ. ಇದಕ್ಕೆ ಲೇಖಕ ವುಡ್ ವೈಡ್ ವೆಬ್ ಎಂದು ಕರೆಯುತ್ತಾನೆ.  ಮರಗಳ ಕುರಿತ ಕೌತುಕ ಸಂಗತಿಗಳನ್ನು ತಿಳಿಯಲು ಅರಣ್ಯದಿಂದ ದೂರವಿರುವ ಯಾರಿಗೂ ಸಾಧ್ಯವಿಲ್ಲ. ಉದಾಹರಣೆಗೆ ಹುಲಗಲ ಎಂಬ ಮರದ ಮೇಲೆ ಬಿದ್ದ ಮಳೆಯು ಥೇಟ್ ನದಿಯ ರೂಪದಲ್ಲೇ ನೆಲಕ್ಕೆ ಸೇರುತ್ತದೆ. ಭೋರ್ಗರೆಯುತ್ತಾ, ನೊರೆಯುಕ್ಕಿಸುತ್ತಾ ರಭಸದಿಂದ ಹರಿದು ಸಮುದ್ರ ಸೇರುವ ನದಿಯ ರೀತಿಯಲ್ಲೇ ಈ ಮರದ ಕಾಂಡಗಳೂ ವರ್ತಿಸುತ್ತವೆ. ಎತ್ತರದ ಚಿಕ್ಕ ಕೊಂಬೆಗಳ ನೀರು ದೊಡ್ಡ ರೆಂಭೆಗಳೆಡೆಗೆ ಹರಿಯುತ್ತದೆ ಹೀಗೆ ಹಲವಾರು ಉಪನದಿಗಳು ಸೇರಿ ನದಿಯ ರೂಪ ತಳೆಯುವಂತೆಯೇ ಮರದ ಈ ಕಿರುನದಿಗಳು ಮುಖ್ಯ ಕಾಂಡ ತಲುಪುತ್ತಿದ್ದಂತೆ ನದಿಯ ರೂಪ ಪಡೆಯುತ್ತವೆ,  ನೆಲ ತಲುಪುತ್ತಿದ್ದಂತೆ ಅಲ್ಲಿ ನೊರೆಯುಕ್ಕಿ ಹರಿಯುತ್ತದೆ.

ಸಾಮಾನ್ಯ ತಿಳುವಳಿಕೆಯಂತೆ ಬೀಜ ಮೊಳಕೆಯಾಗಿ ಬೆಳೆದು ಗಿಡವಾಗುತ್ತದೆ. ವಾತಾವರಣದ ತೇವಾಂಶ ಹಾಗೂ ಇತರ ಅನಿಲಗಳನ್ನು ಬಳಸಿಕೊಂಡು, ಮಣ್ಣಿನ ಸಾರವನ್ನು ಹೀರಿಕೊಂಡು, ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುವ ವಿಶಿಷ್ಠ ಶಕ್ತಿಯುಳ್ಳ ಹಸಿರನ್ನೇ ಗಿಡ-ಮರಗಳೆಂದು ತಿಳಿಯಬಹುದು. ಮಾನವನಿಗೆ ನೇರ ಉಪಯೋಗವಾಗುವಂತಹ ತರಕಾರಿಗಳು, ಹಣ್ಣುಗಳು ಇತ್ಯಾದಿಗಳನ್ನು ಒಂದು ನಿರ್ದಿಷ್ಟ ಉದ್ಧೇಶಕ್ಕಾಗಿಯೇ ಬೆಳೆಯಲಾಗುತ್ತದೆ. ಈ ತರಹದ ಮಾನವನಿಗೆ ನೇರವಾಗಿ ಉಪಯೋಗವಾಗುವಂತಹ ಮರಗಳ ಪಟ್ಟಿಯಲ್ಲಿ ನಾವು ದಿನನಿತ್ಯ ಕಾಣುವ ತೆಂಗಿನ ಮರವೂ ಕೂಡ ಅನೇಕ ವಿಶಿಷ್ಟ ಗುಣಗಳನ್ನು ಹೊಂದಿದ ಮರವಾಗಿದೆ. ತೆಂಗಿನ ಹೆಡ ಎಂದು ಕರೆಯಲಾಗುವ ಎಲೆಗಳು ಸೌರವಿದ್ಯುತ್ ಫಲಕಗಳಂತೆ ಕಾರ್ಯನಿರ್ವಹಿಸುತ್ತವೆ. ತನ್ನ ಆಹಾರವನ್ನು ತಾನೇ ತಯಾರು ಮಾಡಿಕೊಳ್ಳುವುದಲ್ಲದೇ ನೆಲದಾಳದಿಂದ ಬೇರಿನ ಮೂಲಕ ನೂರಾರು ಲೀಟರ್ ನೀರನ್ನು ಹೀರಿ ಎಳನೀರಿನ ರೂಪದಲ್ಲಿ ಮಾನವನಿಗೆ ನೀಡುತ್ತದೆ. ತೆಂಗಿನ ಉತ್ಪಾದನೆಯನ್ನು ಹೆಚ್ಚಾಗಿ ಬಳಸುವ ಕರಾವಳಿ ತೀರದ ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ಹಾಗೆಯೇ ಆಧುನಿಕ ಪ್ರಪಂಚ ಅರಿಯದ ಅನೇಕ ರಹಸ್ಯಗಳು, ವಿಶೇಷಗಳು, ಐಂದ್ರಜಾಲಿಕ ಗುಣಗಳು ಕಾಡಿನಲ್ಲಿನ ನೈಸರ್ಗಿಕ ಜಾತಿಯ ಮರಗಳಲ್ಲಿ ಕಾಣಬಹುದಾಗಿದೆ. ಯಾವುದೇ ಒಂದು ಸಸ್ಯದ ಆಯುಷ್ಯವನ್ನು ಹೀಗೆ ನಿರ್ಧರಿಸಲಾಗುತ್ತದೆ. ಬೀಜ ಮೊಳಕೆಯಾಗುವ ಹಂತ, ಗಿಡದ ಹಂತ, ಕಾಯಿ ಬಿಟ್ಟು ಹಣ್ಣಾಗಿ ಸಂತತಿಯನ್ನು ಮುಂದುವರೆಸುವ ಹಂತ ಹಾಗೂ ವಯಸ್ಸಾಗಿ ಸಾಯುವ ಹಂತ. ಇದರಲ್ಲೂ ಕೆಲವೇ ದಿನಗಳಲ್ಲಿ ತನ್ನ ಜೀವನ ಚಕ್ರವನ್ನು ಪೂರೈಸುವ ಕಳೆ ಗಿಡಗಳಂತಹ ಗಿಡಗಳಿವೆ. ಜೊತೆಗೆ ಮಾನವ ಉದಯಿಸುವುದಕ್ಕಿಂತ ಅಥವಾ ನಾಗರಿಕನಾಗುವುದಕ್ಕಿಂತ ಮುಂಚಿತವಾಗಿ ಹುಟ್ಟಿದ ಸಸ್ಯಗಳೂ ಈಗಲೂ ಇವೆ.  ಕ್ಯಾಲಿಫೋರ್ನಿಯಾದ ಬ್ರಿಸ್ಟಲ್ ಕೋನ್ ಮರಕ್ಕೆ ಹನ್ನೆರೆಡು ಸಾವಿರ ವರ್ಷದ ಇತಿಹಾಸವಿದೆ. ಮರಳುಗಾಡಿನ ಸಸ್ಯಗಳ ಕತೆಯಂತೂ ಇನ್ನೂ ರೋಚಕವಾಗಿ ಕಾಣುತ್ತವೆ. ನೀರಿಲ್ಲದ ಬರಡು ಮರಳಿನಲ್ಲೂ ಜೀವ ತಳೆಯುವ ಕ್ಯಾಕ್ಟಸ್‍ನಂತಹ ಸಸ್ಯಗಳು ಕಡಿಮೆ ನೀರಿನಿಂದ ಬದುಕುವ ಜೊತೆಗೆ ಇನ್ನಿತರ ಜೀವಿಗಳಿಗೆ ಬದುಕಲು ಕಾರಣವಾಗುವ ಗುಣ ಹೊಂದಿವೆ. ನೆಲದಾಳಕ್ಕೆ ಬೇರಿಳಿಸಿ, ಲಭ್ಯವಿರುವ ಅತಿಕಡಿಮೆ ನೀರಿನಿಂದ ಬದುಕುವ ಸಾಮಥ್ರ್ಯವನ್ನು ಅವು ಗಳಿಸಿಕೊಂಡಿವೆ. ತಮ್ಮ ಸಂತತಿಯನ್ನು ಮುಂದುವರೆಸುವ ಹಂತದಲ್ಲೂ ಮರಳುಗಾಡಿನ ಸಸ್ಯಗಳು ಅಗಾಧ ಅನುವಂಶಿಕ ಗುಣಗಳನ್ನು ರೂಡಿಸಿಕೊಂಡಿವೆ. ಬೀಜ ಮೊಳಕೆಯೊಡೆಯಲು ತೇವಾಂಶ ಬೇಕಾಗುತ್ತದೆ. ಮರಳುಗಾಡಿನಲ್ಲಿ ಮಳೆ ಬರುವುದೇ ವಿರಳ. ಸಹರಾ ಮರುಭೂಮಿಯ ಒಂದು ಜಾತಿಯ ಸಸ್ಯದ ಬೀಜ ಉತ್ತಮ ಮಳೆಗಾಗಿ ಕಾಯುತ್ತದೆ. ಜೋರಾಗಿ ಬಿದ್ದ ಮಳೆಯನ್ನೇ ಆಧರಿಸಿ ಮೊಳಕೆಯೊಡೆದು ಸಸಿಯಾಗಿ ಕಾಯಿ ಬಿಟ್ಟು ಹಣ್ಣಾಗಿ, ಬೀಜವುದುರಿಸಿ ತನ್ನ ಬದುಕಿನ ಚಕ್ರವನ್ನು ಮುಗಿಸಿಕೊಳ್ಳುತ್ತದೆ. ಇದಕ್ಕೆ ಅದು ತೆಗೆದುಕೊಳ್ಳುವ ಸಮಯ ಬರೀ 10 ದಿನಗಳು. 

Bird on Silk Cotton Tree

ಕೆಲವು ಕಳೆ ಗಿಡಗಳ ಬೀಜಗಳು ಮೊಳಕೆಯಾಗಲು ಅನುಕೂಲ ಸಮಯಕ್ಕಾಗಿ ನೂರು ವರ್ಷಗಳವರೆಗೆ ಕಾಯಬಲ್ಲವು. ಒಂದು ಪ್ರದೇಶದ ವಾತಾವರಣ ಅಥವಾ ಹವಾಮಾನ ಸಸಿಯಾಗಿ ಬೆಳೆಯಲು ಪ್ರತಿಕೂಲವಾಗಿದ್ದಾಗ ಈ ಗುಣವನ್ನು ಅವು ಪ್ರದರ್ಶಿಸುತ್ತವೆ. ಸೂಕ್ತ ವಾತಾವರಣ ನಿರ್ಮಾಣವಾದಲ್ಲಿ ಕೂಡಲೇ ಸಸಿಯಾಗಿ ತಮ್ಮ ಸಂತತಿಯನ್ನು ಮುಂದುವರೆಸುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಮನುಷ್ಯನಿಗೆ ಹೋಲಿಸಿದಲ್ಲಿ ಸ್ಥಿರವಾಗಿ ನಿಲ್ಲುವ ಮರಗಳು ತಮ್ಮ ಸಂತತಿಯನ್ನು ನೂರಾರು ಮೈಲು ದೂರದ ಸೂಕ್ತ ವಾತಾವರಣದಲ್ಲಿ ಬೆಳೆಸುವ ಅಸಾಧಾರಣ ಬುದ್ಧಿಯನ್ನು ಹೊಂದಿವೆ. ಇದಕ್ಕಾಗಿ ಕೆಲವು ಮರಗಳು ಇತರೆ ಪರಾವಲಂಬಿ ಪ್ರಾಣಿಗಳನ್ನು ಆಶ್ರಯಿಸುತ್ತವೆ. ಹಕ್ಕಿಗಳು, ಪ್ರಾಣಿಗಳು ಇವುಗಳ ಹಣ್ಣನ್ನು ತಿಂದು ಮತ್ತೆಲ್ಲೋ ಹಿಕ್ಕೆಯ ಮೂಲಕವೋ ಅಥವಾ ಸಗಣಿಯ ಮೂಲಕವೋ ಹೊರಹಾಕುತ್ತವೆ. ಅಲ್ಲಿ ಬಿದ್ದ ಬೀಜಗಳು ಸೂಕ್ತ ಸಮಯಕ್ಕಾಗಿ ಕಾಯ್ದು ಮೊಳಕೆಯೊಡೆಯುತ್ತವೆ. ಹೀಗೆ ಪ್ರಾಣಿ-ಪಕ್ಷಿಗಳನ್ನು ತನ್ನ ಸಂತತಿ ವೃದ್ಧಿಗಾಗಿ ಆಕರ್ಷಿಸುವ ಗುಣಗಳನ್ನು ಕಾಡಿನ ಅನೇಕ ಮರಗಳು ಹೊಂದಿವೆ. ಇದನ್ನೆಲ್ಲಾ ಗಮನಿಸಿದಾಗ ತನ್ನ ಸಂತತಿಯನ್ನು ಮುಂದುವರೆಸುವ ತಂತ್ರವಾಗಿ ಮರಗಳು ಈ ತರಹದ ತಂತ್ರಗಳನ್ನು ಯೋಜನಾಬದ್ಧವಾಗಿಯೇ ರೂಪಿಸಿಕೊಂಡಿವೆ ಎಂದು ಹೇಳಬಹುದಾಗಿದೆ.

ಇಷ್ಟೆಲ್ಲಾ ತಂತ್ರಗಳನ್ನು ಹೆಣೆದುಕೊಂಡು ಪ್ರಕೃತಿ ಅಸಮತೋಲನೆಯನ್ನು ಎದುರಿಸಿ ಬದುಕುವ ಗುಣಗಳನ್ನು ಹೊಂದಿದ ಸಸ್ಯಲೋಕವೀಗ ಕಂಡರಿಯದ ಕಂಟಕವನ್ನು ಎದುರಿಸುತ್ತಿದೆ. ಮಾನವ ಕೇಂದ್ರಿತ ಅಭಿವೃದ್ಧಿ ಹಾಗೂ ಕಾಡು-ಅರಣ್ಯಗಳು ಇರುವುದೇ ಮನುಜನ ಅವಶ್ಯಕತೆಗಳನ್ನು ಪೂರೈಸಲು ಎಂಬ ಸಾಮೂಹಿಕ ಭಾವನೆ ಈ ಸ್ಥಿತಿಗೆ ಕಾರಣವಾಗಿದೆ. ಇದಕ್ಕೊಂದು ಸೂಕ್ತ ಸ್ಥಳೀಯವಾದ ಉದಾಹರಣೆಯನ್ನು ನೀಡಿ ಲೇಖನವನ್ನು ಮುಗಿಸುವುದು ಸೂಕ್ತ.

ಸಾಗರದಿಂದ ಬರೀ 20 ಕಿ.ಮಿ.ದೂರದಲ್ಲಿ ಸಿದ್ಧಾಪುರಕ್ಕೆ ತಿರುಗವಾಗ ಎಡಭಾಗಕ್ಕೆ ಒಂದು ಪಾಳುಬಿದ್ದ ಕಾರ್ಖಾನೆಯನ್ನು ನೀವು ಈಗಲೂ ಕಾಣಬಹುದು. ಆ ಕಾರ್ಖಾನೆಯ ಹೆಸರು ವಿಮ್ಕೋ (ವೆಸ್ಟ್ರನ್ ಇಂಡಿಯಾ ಮ್ಯಾಚ್ ಕಂಪನಿ). ಈ ಕಾರ್ಖಾನೆಯ ಆಗಿನ ಮಾಲೀಕ ಮೂಲ ಸ್ವೀಡನ್ ದೇಶದಿಂದ ಬಂದವನು. ಭಾರತದ ಅರಣ್ಯ ಸಂಪತ್ತನ್ನು ಹಾಗೂ ಜನಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ ಕುಖ್ಯಾತಿ ಈ ಕಂಪನಿಗಿದೆ. ಇಡೀ ಪ್ರಪಂಚಕ್ಕೆ ಬೆಂಕಿಪೊಟ್ಟಣಗಳನ್ನು ಪೂರೈಸುವ ಬಹುದೊಡ್ಡ ಕಂಪನಿಯಾದ ಇತಿಹಾಸ ಈ ಕಂಪನಿಗಿದೆ. ಬೆಂಕಿ ಕಡ್ಡಿಗಳನ್ನು ತಯಾರಿಸಲು ಸಾಮಾನ್ಯವಾಗಿ ಬೂರಲದಂತಹ ಮೆದು ಮರವನ್ನೇ ಆಯ್ದುಕೊಳ್ಳಲಾಗುತ್ತದೆ. ಇಡೀ ಪಶ್ಚಿಮಘಟ್ಟಗಳ ಬೂರಲ ಹಾಗೂ ಹೊಳಗೇರಲು ಇತ್ಯಾದಿ ಮೆದು ಮರಗಳನ್ನು ಗುರುತಿಸಿ ಕತ್ತರಿಸಿ ಸಿದ್ಧಾಪುರದ ಕಾರ್ಖಾನೆಗಳಿಗೆ ತರಲಾಗುತ್ತಿತ್ತು. ಬೆಟ್ಟಗಳಲ್ಲಿ ಮರಗಳನ್ನು ಕಡಿದು ಸಾಗಿಸಲು ಕೇರಳಿಗರು ಬಳಕೆಯಾಗುತ್ತಿದ್ದರು. ಮರದ ಎತ್ತರವನ್ನು ಹಾಗೂ ಗರ್ತನ್ನು ಅಂದಾಜಿಸಿ ಎಷ್ಟು ಬೆಂಕಿಕಡ್ಡಿಗಳನ್ನು ಈ ಮರದಿಂದ ತಯಾರಿಸಬಹುದು ಎಂದು ಲೆಕ್ಕ ಹಾಕಲೇ ಒಂದು ತಂಡವಿತ್ತು. ಆ ತಂಡ ಹೋಗಿ ಗುರುತು ಮಾಡಿ ಬಂದ ಮರಗಳನ್ನು ಕಡಿದು ಸಾಗಿಸಲು ಲಾರಿಗಳ ಬಳಕೆಯಾಗುತ್ತಿತ್ತು. 

ಹೀಗೆ ಸ್ವೀಡನ್ ಮೂಲದ ಬೆಂಕಿ ಕಡ್ಡಿ ಮತ್ತು ಪೆಟ್ಟಿಗೆಗಳನ್ನು ತಯಾರಿಸಿ ಲಾಭ ಮಾಡಿಕೊಳ್ಳುವ ಸಲುವಾಗಿ ಇಲ್ಲಿನ ಲಕ್ಷಾಂತರ ಬೂರಲ ಮರಗಳು ಆಹುತಿಯಾದವು. ನಮ್ಮಲ್ಲಿಯ ಸಾಮಾನ್ಯ ಕಲ್ಪನೆಯೆಂದರೆ, ಬೂರಲ ಮರ ಲಡ್ಡು, ಅದು ಯಾವುದಕ್ಕೂ ಉಪಯೋಗವಿಲ್ಲ. ಎಲ್ಲಾ ಮರಗಳನ್ನು ಬೀಟೆ-ಸಾಗುವಾನಿ-ಬಿಲಕಂಬಿ ಇತ್ಯಾದಿ ನಾಟಕ್ಕೆ ಒದಗುವ ಮರಗಳಿಗೆ ಹೋಲಿಸಿ, ಮೆದುಮರಗಳ ನಿರುಪಯೋಗತನವನ್ನು ಹಳಿಯಲಾಗುತ್ತದೆ. ಆದರೆ ಜೀವಜಾಲದ ಸಂಕೀರ್ಣ ಕೊಂಡಿಯಲ್ಲಿ ಪ್ರತಿಯೊಂದು ನೈಸರ್ಗಿಕ ಜೀವವೂ ಅತಿ ಮುಖ್ಯವಾಗಿದೆ. ಬೂರಲ ಮರ ಮಿದುವಾಗಿದ್ದರಿಂದಾಗಿಯೇ ಜೀವಿವೈವಿಧ್ಯಕ್ಕೆ ಹಲವು ಉಪಯೋಗಗಳಿವೆ. ಹಕ್ಕಿಗಳು ಸುಲಭವಾಗಿ ಮರದ ಕಾಂಡವನ್ನು ಕೊರೆದು ಗೂಡು ಮಾಡಿಕೊಳ್ಳುತ್ತವೆ. ಇವು ಹೂ ಬಿಡುವ ಕಾಲಕ್ಕೆ ಕಾಡಿನ ಮಕರಂದ ಹೀರುವ ಎಲ್ಲಾ ರೀತಿಯ ಹಕ್ಕಿಗಳು ಈ ಮರವನ್ನು ಆಶ್ರಯಿಸುತ್ತವೆ. ಬಾಡಿದ ಹೂ ನೆಲಕ್ಕೆ ಬಿದ್ದ ಮೇಲೂ ಜಿಂಕೆಯಂತಹ ಹಲವು ಸಸ್ಯಹಾರಿ ಪ್ರಾಣಿಗಳಿಗೆ ಆಹಾರವಾಗುತ್ತದೆ. ಇದರ ಕಾಯಿ ಒಡೆದು ಹಂಜಿಯಂತಹ ಹತ್ತಿ ಹೂ ಹಕ್ಕಿಗಳಿಗೆ ಗೂಡು ಕಟ್ಟಲು ನೆರವಾಗುತ್ತದೆ. ಈಗ ಕಾಡಿನಲ್ಲಿ ಬೂರಲ ಮರಗಳಿಲ್ಲ, ಹೂ ಹಕ್ಕಿಗಳು ಅನಿವಾರ್ಯವಾಗಿ ಬಿಟಿ ಹತ್ತಿಯ ಹೊಲಗಳಿಗೆ ಬರುತ್ತವೆ. ಇಲ್ಲಿ ಅವಕ್ಕೆ ಸಿಗುವುದು ರಾಸಾಯನಿಕ ಸಿಂಪರಣೆ ಮಾಡಿದ ಹತ್ತಿ. ರಾಸಾಯನಿಕಗಳ ದುಷ್ಪರಿಣಾಮಗಳನ್ನು ತಡೆದುಕೊಳ್ಳುವ ಶಕ್ತಿ ಆ ಪುಟ್ಟ ಹಕ್ಕಿಗಳಿಗಿಲ್ಲ.  ಇದರ ಬೀಜದಲ್ಲಿ ಜಿಡ್ಡಿನಂಶ ಇರುವುದು ಗಿಳಿಗಳಂತಹ ಹಕ್ಕಿಗಳನ್ನು ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಗಾಳಿಗೆ ಸಿಕ್ಕ ಹತ್ತಿಯ ಹಂಜಿ ದೂರದವರೆಗೂ ಹಾರುತ್ತ ತನ್ನೊಳಗೆ ಇರುವ ಒಂದೇ ಬೀಜವನ್ನೇ ಸಂತತಿ ವೃದ್ಧಿಸಲು ದೂರ ಸಾಗಿಸುತ್ತದೆ.

ಸದಾ ಕಾಡಿನ ಗಾತ್ರವನ್ನು ಕುಗ್ಗಿಸುವ ಯೋಜನೆಗಳ ಬೆನ್ನು ಹತ್ತುವ ನಮ್ಮ ಅಭಿವೃದ್ಧಿಯ ಕಲ್ಪನೆಗಳು ಈಗಲಾದರೂ ಬದಲಾಗಬೇಕಿದೆ. ಮುಂದಿನ ಪೀಳಿಗೆಗಾಗಿ ನಾವು ಒಂದಿಷ್ಟು ಕಾಡನ್ನಾದರೂ ಉಳಿಸಬೇಕಿದೆ. ಒಮ್ಮೆ ನಾಶವಾದ ಕಾಡು ಮುಂದೆಂದಾದರೂ ಚಿಗುರೀತು. ಅಳಿದು ಹೋಗಲಿರುವ ಮನುಕುಲದ ಮರುಹುಟ್ಟೇ ಅನುಮಾನ!!!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x