Facebook

ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ: ರೋಹಿತ್ ವಿ. ಸಾಗರ್

Spread the love


ಕರೆಂಟ್ ಅಥವಾ ವಿದ್ಯುತ್ ಎಂಬ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ತರಹೇವಾರಿ ವಿಧಗಳಲ್ಲಿ ನಾವು ಅವಲಂಬಿಸಿರುವ, ಅದಿಲ್ಲದ ಜೀವನವನ್ನು ಊಹಿಸಲೂ ಹೆದರಬೇಕಾಗಿರುವಂತಹ ಅಪೂರ್ವ ಶಕ್ತಿಯ ಆಕರವೇ ಈ ’ವಿದ್ಯುತ್’ ಅಥವಾ ’ಕರೆಂಟ್’.    ಹಗಲು ರಾತ್ರಿಗಳೆನ್ನದೆ ಸೂರ್ಯ ಚಂದ್ರರನ್ನೂ ನಾಚಿಸುವ ಬೆಳಕಿನ ದೀಪಗಳು, ಬೆಳಗ್ಗೆ ಎದ್ದಕೂಡಲೇ ಸುಪ್ರಭಾತ ಹಾಡುವ ರೇಡಿಯೋ, ಎಫ್.ಎಮ್ ಗಳು, ಮುಂದೆ ಕೂತವರ ಕಾಲವನ್ನೇ ಕರಗಿಸಬಲ್ಲ ಮೂರ್ಖರ ಪೆಟ್ಟಿಗೆ ಎಂದೇ ಖ್ಯಾತಿ ಪಡೆದ ಟಿ.ವಿ.ಗಳು, ಜಾಣರ ಪೆಟ್ಟಿಗೆಯಂತಿರುವ ನಮ್ಮ ಕಂಪ್ಯೂಟರ್‌ಗಳು ಇವೆಲ್ಲವೂ ಕೆಲಸ ಮಾಡಬೇಕಾದರೆ ಮತ್ತು ತಯಾರಾಗಬೇಕಾದರೆ ಈ ಕರೆಂಟು ಬೇಕೇ ಬೇಕು. ಬರೀ ಉಪಯೋಗ ಮಾತ್ರ ಅಲ್ಲ ಮಳೆಗಾಲದ ಮೊದಲಿನಲ್ಲಿ ದಿನವೂ ಪತ್ರಿಕೆಗಳಲ್ಲಿ ಓದುತ್ತೇವಲ್ಲ ಗಾಳಿಗೆ ಬಿದ್ದ ವಿದ್ಯುತ್ ಕಂಬ, ವ್ಯಕ್ತಿಗೆ ವಿದ್ಯುತ್ ಸ್ಪರ್ಷ,  ಕೆಳಕ್ಕೆ ಬಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು ಎಂದೆಲ್ಲಾ ಇದು ವಿದ್ಯುತ್ತಿನ ಇನ್ನೊಂದು ರೂಪ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿದ್ಯುತ್‌ನ್ನು ತಿಳಿದು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಸಾಕಿದ ನಾಯಿಯಂತೆ ಮಹದುಪಕಾರಿ ಯಾಮಾರಿ ಆಟವಾಡಿದರೆ ಬೇಟೆನಾಯಿಯಂತೆ ಬಲು ಅಪಾಯಕಾರಿ.

ವಾಸ್ತವವಾಗಿ ಇಂಗ್ಲೀಷಿನ ’ಕರೆಂಟ್’ ಎಂದರೆ ’ಪ್ರವಾಹ’ ಎಂದು ಅರ್ಥ, ಆದ್ದರಿಂದ ’ಎಲೆಕ್ಟ್ರಿಕ್ ಕರೆಂಟ್’ ಎಂಬ ಪದವನ್ನು ನಾವು ಕನ್ನಡದಲ್ಲಿ ವಿದ್ಯುತ್ ಪ್ರವಾಹ ಎಂದು ಕರೆಯುತ್ತೇವೆ. ಒಂದು ಸೆಕೆಂಡಿನಲ್ಲಿ ಒಂದು ವಾಹಕದಲ್ಲಿ ಹರಿಯಬಹುದಾದ ಎಲೆಕ್ಟ್ರಾನ್‌ಗಳ ಒಟ್ಟು ವಿದ್ಯುದಾವೇಶದ ಪ್ರಮಾಣವನ್ನು ವಿದ್ಯುತ್ ಪ್ರವಾಹದ ಒಂದು ಪರಿಮಾಣ (ಆಂಪೇರ್) ಎಂದು ಕರೆಯುತ್ತೇವೆ.
ನಮಗೆಲ್ಲರಿಗೂ ಅರಿವಿರುವಂತೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳೂ ಅತೀ ಚಿಕ್ಕ ಪರಮಾಣುಗಳಿಂದ ಮಾಡಲ್ಪಟ್ಟಿವೆ. ಆ ಪ್ರತಿಯೊಂದು ಪರiಣುವೂ ಎಲೆಕ್ಟ್ರಾನ್‌ಗಳೆಂಬ ಋಣ, ಅದಕ್ಕೆ ಸಮಾನ ಸಂಖ್ಯೆಯ ಪ್ರೋಟಾನ್‌ಗಳೆಂಬ ಧನ ವಿದ್ಯುದಂಶಗಳೊಂದಿಗೆ ಹಾಗೂ ಅವುಗಳ ಜೊತೆ ಕೆಲವಷ್ಟು ವಿದ್ಯುದಾವೇಶರಹಿತ ನ್ಯೂಟ್ರಾನ್‌ಗಳಿಂದ ಮಾಡಲ್ಪಟ್ಟಿದೆ. ವಾಹಕಗಳೆಂದು ಕರೆಯಲ್ಪಡುವ ಕೆಲವು ವಸ್ತುಗಳಲ್ಲಿ ಈ ಎಲೆಕ್ಟ್ರಾನ್‌ಗಳು ಹೆಚ್ಚು ಸ್ವತಂತ್ರವಾಗಿರುತ್ತವೆ ಹಾಗೂ ಅಲ್ಲಿ ಇವುಗಳ ಸಾಂಘಿಕ ಚಲನೆಯನ್ನೇ ನಾವು ವಿದ್ಯುತ್ ಪ್ರವಾಹ ಎಂದು ಕರೆಯುವುದು.

ವಿದ್ಯುತ್ ಪ್ರವಾಹವನ್ನ ಮುಖ್ಯವಾಗಿ ಎರೆಡು ರೀತಿಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ನಾವು ಶೆಲ್ಲುಗಳಲ್ಲಿ ಮತ್ತು ಮೊಬೈಲ್ ಬ್ಯಾಟರಿಗಳಲ್ಲಿ ಸಂಗ್ರಹಿಸಿಡುವ ನೇರ ವಿದ್ಯುತ್ (ಡಿ.ಸಿ.) ಮತ್ತೊಂದು ನಾವು ಮನೆಗಳಲ್ಲಿ ಗೃಹೋಪಯೋಗಿ ಅಥವಾ ಯಾಂತ್ರಿಕ ವಸ್ತುಗಳಲ್ಲಿ ಬಳಸುವ ಪರ್‍ಯಾಯ ವಿದ್ಯುತ್ (ಎ.ಸಿ.). ನೇರ ವಿದ್ಯುತ್  ಅಥವಾ ಏಕಮುಖ ವಿದ್ಯುತ್‌ನಲ್ಲಿ ವಿದ್ಯುದಾವೇಶಗಳು ಯಾವಾಗಲೂ ಒಂದೇ ದಿಕ್ಕಿನಲ್ಲಿ ಪ್ರವಹಿಸಿದರೆ ಪರ್‍ಯಾಯ ವಿದ್ಯುತ್‌ನಲ್ಲಿ ಇವು ನಿಯತಕಾಲಿಕವಾಗಿ ತಮ್ಮ ದಿಕ್ಕನ್ನು ಬದಲಾಯಿಸುತ್ತಿರುತ್ತವೆ ಎಂದು ವೈಜ್ಞಾನಿಕವಾಗಿ ಹೇಳಬಹುದು. 

ನೇರ ಅಥವಾ ಏಕಮುಖ ವಿದ್ಯುತ್ತಿಗಿಂತ, ನಾವು ನಿತ್ಯ ಜೀವನದಲ್ಲಿ ಹೆಚ್ಚಾಗಿ ಯಾಂತ್ರಿಕ ಅಥವಾ ಗೃಹ ಕಾರ್ಯಗಳಿಗೆ ಬಳಸುವ ಪರ್‍ಯಾಯ ವಿದ್ಯುತ್ತಿನ ಬಗ್ಗೆ ತುಸು ಹೆಚ್ಚು ತಿಳಿಯಲೇ ಬೇಕಾಗುತ್ತದೆ. ಹೆಚ್ಚಿನ ಎಲ್ಲಾ ಗೃಹೋಪಯೋಗಿ ವಸ್ತುಗಳು ಬಳಸುವು ಪರ್‍ಯಾಯ ವಿದ್ಯುತ್ತಿನ ವೊಲ್ಟೇಜ್ ಅಂದರೆ ವಾಹಕದೊಳಗಿನ ವಿದ್ಯುತ್ತಿನ ಒತ್ತಡ ಸರಾಸರಿ ೨೨೦ ವೊಲ್ಟ್ ಗಳಷ್ಟಿರುತ್ತದೆ ಮತ್ತು ಅದರ ಆವರ್ತನವು ೫೦ಹರ್ಟ್ಸ್‌ಗಳಷ್ಟಿರುತ್ತದೆ. ದೂರದ ಸ್ಥಳಗಳಿಗೆ ಸಾಗಿಸುವಾಗ ಪರ್‍ಯಾಯ ವಿದ್ಯುತ್ ಏಕಮುಖೀ ವಿದ್ಯುತ್‌ಗಿಂತ ಕಡಿಮೆ ನಷ್ಟವನ್ನುಂಟು ಮಾಡುತ್ತದೆ ಮತ್ತು ಪರ್‍ಯಾಯ ವಿದ್ಯುತ್ತಿನ ವೋಲ್ಟೇಜನ್ನು ಸುಲಭವಾಗಿ ಹೆಚ್ಚಿಸಬಹುದು ಮತ್ತು ಕಡಿಮೆಗೊಳಿಸಬಹುದು ಹಾಗೂ ಸಾಗಿಸುವ ದೂರ ಹೆಚ್ಚಾದಷ್ಟೂ ವೋಲ್ಟೇಜ್ ಹೆಚ್ಚುತ್ತಾ ಹೋದರೆ ವಿದ್ಯುತ್ತಿನ ನಷ್ಟ ಕಡಿಮೆಯಾಗುತ್ತದೆ ಎಂಬ ಅಂಶಗಳು ಪರ್‍ಯಾಯ ವಿದ್ಯುತ್ತಿಗೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ದಾರಿ ಬದಿಗಳಲ್ಲಿ ಐಫೆಲ್ ಟವರ್‍ನಂತಹ ಲೋಹದ ಕಂಬಗಳ ಮಧ್ಯೆ ಸಾಗಿರುವ ಹೈಟೆನ್ಷನ್ ವೈರ್‌ಗಳನ್ನು ನೋಡಿರ ಬೇಕಲ್ಲವೆ, ಅವುಗಳಲ್ಲಿ ಈ ಪರ್‍ಯಾಯ ವಿದ್ಯುತ್‌ನ್ನ ದೂರದೂರುಗಳಿಗೆ ಹರಿಬಿಡಲಾಗಿರುತ್ತದೆ. ಆದರೆ ನೆನಪಿರಲಿ ಆ ವೈರ್‌ಗಳಲ್ಲಿ ಹರಿಯುವ ವಿದ್ಯುತ್ತಿನ ವೋಲ್ಟೇಜು ಸುಮಾರು ೩೦೦೦೦ ದಿಂದ ೬೦೦೦೦ ವೋಲ್ಟ್‌ಗಳವರೆಗಿರುತ್ತವೆ ಹಾಗು ಅವುಗಳನ್ನು  ಉತ್ತಮ ವಾಹಕಗಳಾದ ಅಲ್ಯುಮಿನಿಯಮ್ ಅಥವಾ ತಾಮ್ರದಿಂದ ಮಾಡಿರುತ್ತಾರೆ. ನೀವು ಮನೆಯಲ್ಲಿ ಎಂದಾದರು ಕರೆಂಟ್ ಶಾಖ್ ಹೊಡೆಸಿಕೊಂಡಿದ್ದೀರಾದರೆ ನಿಮಗೆ ೨೨೦ ವೋಲ್ಟ್‌ನ ಬೆಲೆ ಗೊತಾಗಿದೆ ಎಂದರ್ಥ, ಈಗ ಯೋಚಿಸಿ ಹೈಟೆನ್ಷನ್ ವೈರ್ ತಾಗಿ ಶಾಖ್ ಹೊಡೆದರೆ ಏನಾಗಬಹುದೆಂದು..? ಅದಕ್ಕಾಗಿಯೇ ನಗರಗಳ ಹೊರ ವಲಯಗಳಲ್ಲಿ  ಈ ಹೈಟೆನ್ಷನ್ ವೈರುಗಳನ್ನು ಎಳೆಯಲಾಗಿರುತ್ತವೆ. ನಂತರ ನಗರದೊಳಕ್ಕೆ ಅದನ್ನು ಬಳಸುವಾಗ ಕಾರ್ಖಾನೆ ಮುಂತಾದವುಗಳಿಗಾಗಿ ಆ ವೋಲ್ಟೇಜನ್ನು ಸಾವಿರಗಳಿಂದ ೪೪೦ ವೋಲ್ಟಿಗೆ ಇಳಿಸಿಕೊಳ್ಳುತ್ತಾರೆ. ಇನ್ನು ಮನೆಗಳಿಗೆ ಬಳಸುವಾಗ ಅದನ್ನು ೨೨೦ ವೋಲ್ಟಿಗೆ ಇಳಿಸಿಕೊಳ್ಳುತ್ತಾರೆ. ಹೀಗೆ ಬೇಕಾದಾಗ ವೋಲ್ಟೇಜನ್ನು ಕಡಿಮೆ ಮಾಡಲು ಅಥವಾ ಕಡಿಮೆಯಿದ್ದದ್ದನ್ನು ಹೆಚ್ಚು ಮಾಡಲು ಟ್ರಾನ್‌ಫಾರ್ಮರ್ ಅಥವಾ ಪರಿವರ್ತಕಗಳು ಎಂಬ ಸಾಧನಗಳನ್ನು ಬಳಸುತ್ತಾರೆ (ಟಿ. ಸಿ. ಎನ್ನುತ್ತಾರಲ್ಲ ಅದು).

೨೨೦ ವೋಲ್ಟ್ ವಿದ್ಯುತ್ ಒತ್ತಡದೊಂದಿಗೆ ಪ್ರತಿಸೆಕೆಂಡಿಗೆ ೫೦ ಬಾರಿ ದಿಕ್ಕು ಬದಲಿಸುವ ಈ ಪರ್‍ಯಾಯ ವಿದ್ಯುತ್ತು, ವಿದ್ಯುತ್ ಕಂಬದಿಂದ ಎರೆಡು ತಂತಿಗಳ ಮೂಲಕ ನಿಮ್ಮ ಮನೆಯ ಮೀಟರ್ ಬೋರ್ಡಿಗೆ ಬಂದು ಸೇರುತ್ತದೆ. ಅಲ್ಲಿಂದ ನಿಮ್ಮ ಮನೆಯೊಳಗೆ ಫೇಸ್(ಲೈವ್), ನ್ಯೂಟ್ರಲ್ ಮತ್ತು ಗ್ರೌಂಡ್ ಎಂಬ ಮೂರು ತಂತಿಗಳ ಮೂಲಕ ನಿಮಗೆ ಲಭ್ಯವಾಗುತ್ತದೆ.  ವಿದ್ಯುತ್ ಕಂಬದಿಂದ ಲೈವ್ ಅಥವಾ ಫೇಸ್ ತಂತಿಯ ಮೂಲಕ ಮನೆಯ ವಿದ್ಯುತ್ ಮಂಡಲದ ಒಳಬರುವ ಕರೆಂಟು ನ್ಯೂಟ್ರಲ್ ತಂತಿಯ ಮೂಲಕ ಹೊರ ಹೋಗಿ ಮತ್ತೆ ಕಂಬವನ್ನು ಸೇರುತ್ತದೆ. ಅಂದರೆ ನಿಮ್ಮ ವಿದ್ಯುತ್ ಉಪಕರಣಗಳನ್ನು ಫೇಸ್(ಲೈವ್) ಮತ್ತು ನ್ಯೂಟ್ರಲ್ ತಂತಿಗಳ ಮಧ್ಯೆ ಸೇರಿಸಿದಾಗ ಮಾತ್ರ ಅದರೊಳಗೆ ಪ್ರವಹಿಸುವ ವಿದ್ಯುತ್ ಅದು ಕಾರ್‍ಯನಿರ್ವಹಿಸುವಂತೆ ಮಾಡುತ್ತದೆ. ಇನ್ನು ಗ್ರೌಂಡ್ ಎಂಬ ತಂತಿಯು ಮನೆಯೊಳಗಿನ ವಿದ್ಯುತ್ ಮಂಡಲದಲ್ಲಿ ಕೆಲವೊಮ್ಮೆ ಆಘಾತಕಾರಿಯಾಗಿ ಹೆಚ್ಚಾದ ಪರಿಮಾಣದಲ್ಲಿ ಹರಿಯಬಹುದಾದ ವೋಲ್ಟೇಜನ್ನು ಆ ಮಂಡಲದಿಂದ ಹೊರದಬ್ಬಿ ನೆಲದಾಳದಲ್ಲಿ ಏಳೆಂಟು ಅಡಿಗಳ ಆಳದಲ್ಲಿ ತಾಮ್ರದ ತಗಡು, ಉಪ್ಪು, ಇದ್ದಿಲು ಮತ್ತು ಮರಳಿನಿಂದ ಮಾಡಿದ ಗ್ರೌಂಡಿಂಗ್ ಎಂಬ ರಚನೆಯಲ್ಲಿ ಕರಗಿಹೋಗುವಂತೆ ಮಾಡಲು ಬಳಕೆಯಾಗುತ್ತದೆ. ಈ ಗ್ರೌಂಡಿಂಗ್‌ನಲ್ಲೇನಾದರೂ ದೋಷವಿದ್ದರೆ ಆ ಮನೆಯಲ್ಲಿರುವ ಪ್ರತಿ ವಸ್ತುವಿನಲ್ಲಿರುವ ಲೋಹದ ಭಾಗಗಳೆಲ್ಲವೂ ವಿದ್ಯುತ್ ಶಾಕ್ ಹೊಡೆಯತೊಡಗುತ್ತವೆ, ಅದು ಕೆಲವೊಮ್ಮೆ ಮಾರಣಾಂತಿಕವಾಗಿರುತ್ತದೆ. ಕರೆಂಟ್ ಓಕೆ ಈ ಶಾಕ್ ಹೊಡೆಯುವುದು ಏಕೆ ಎಂದು ಯೋಚಿಸಿದ್ದೀರಾ ?

ನಿಮಗೇ ತಿಳಿದಿರುವಂತೆ ಮಾನವನೂ ಸೇರಿದಂತೆ ಎಲ್ಲಾ ಪ್ರಾಣಿ ಪಕ್ಷಿಗಳ ದೇಹರಚನೆಯ ಬಹುಭಾಗ ನೀರು ಮತ್ತು ಖನಿಜಾಂಶಗಳಿಂದ ಕೂಡಿದೆ, ಈ ಖನಿಜಂಶಗಳಿಂದ ಕೂಡಿದ ನೀರು ವಿದ್ಯುತ್ತಿನ ಉತ್ತಮ ವಾಹಕಗಳಲ್ಲೊಂದು, ಅಂದರೆ ಪ್ರಾಣಿ-ಪಕ್ಷಿಗಳ ದೇಹ ವಿದ್ಯುತ್ ಪ್ರವಾಹಕ್ಕೆ ರಾಜ್ಯ ಹೆದ್ದಾರಿಯಿದ್ದಂತೆ. ಅಲ್ಲದೆ ಈ ನಮ್ಮ ಭೂಮಿಗೆ ಕೊಟ್ಟಷ್ಟೂ ವಿದ್ಯುತ್ತನ್ನು ಹೀರಿಕೊಳ್ಳುವ ಗುಣವಿದೆ ಎಂಬುದೂ ಮತ್ತೊಂದು ತಿಳಿಯಲೇಬೇಕಾದ ವಿಷಯ. ಈಗ ಯೋಚಿಸಿ ನೀವೇನಾದರೂ ಬರೀ ಕಾಲಿನಲ್ಲಿ ನೆಲದ ಮೇಲೆ ನಿಂತು ವಿದ್ಯುತ್ ಹರಿಯುತ್ತಿರುವ ತಂತಿಯ ತುದಿಯನ್ನು ಹಿಡಿದುಕೊಂಡರೆ ಏನಾಗಬಹುದು ಎಂದು ? ತಂತಿಯಲ್ಲಿ ಹರಿಯುತ್ತಿರುವ ವಿದ್ಯುತ್ ಈಗ ನಿಮ್ಮ ದೇಹವನ್ನು ವಿದ್ಯುತ್ ಮಂಡಲ ಎಂದು ಭಾವಿಸಿ ಅದರ ಮೂಲಕ ಸತತವಾಗಿ ಹರಿದು ಭೂಮಿಯನ್ನ ಸೇರತೊಡಗುತ್ತದೆ, ಅದರ ರಭಸಕ್ಕೆ ನಮ್ಮ ನರಮಂಡಲಗಳು ಛಿಧ್ರವಾಗಿ, ರಕ್ತ ಪ್ರವಾಹದೊಡನೆ ಹರಿವ ವಿದ್ಯುತ್ತನ್ನ ಕಂಡ ಹೃದಯ ಕಂಗಾಲಾಗಿ ಕೆಲಸ ನಿಲ್ಲಿಸಿಬಿಡುತ್ತದೆ. ಅದೇ ನೀವೇನಾದರೂ ರಬ್ಬರ್ ಚಪ್ಪಲಿಯನ್ನೋ, ಒಣಗಿದ ಮರದ ಹಲಗೆಯನ್ನೋ ನಿಮ್ಮ ಕಾಲಡಿಗೆ ಇಟ್ಟುಕೊಂಡಿದ್ದಿದ್ದರೆ, ವಿದ್ಯುತ್ ಹರಿಯಲು ಅಡ್ಡಿಯಾಗುವುದರಿಂದ ಆಗ ಶಾಕ್ ಹೊಡೆಯುತ್ತಿರಲಿಲ್ಲ. ಅದಕ್ಕೆ ತಾಮ್ರದಿಂದ ಮಾಡಿದ ವಿದ್ಯುತ್ ತಂತಿಗಳನ್ನು ಪ್ಲಾಸ್ಟಿಕ್‌ನಂತಹ ಅತ್ಯುತ್ತಮ ಅರೆವಾಹಕಗಳಿಂದ ಸುತ್ತಿರುತ್ತಾರೆ. ಇದರ ಹೊರತಾಗ್ಯೂ ಕೆಲವೊಮ್ಮೆ ಆ ಸುತ್ತಿರುವ ಅರೆವಾಹಕದಲ್ಲಿ ಸೀಳು ಅಥವಾ ರಂಧ್ರಗಳಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಆದ್ದರಿಂದ ದೊಡ್ಡವರು ಹೇಳಿದ್ದು ವಿದ್ಯುತ್ತಿನೊಂದಿಗೆ ಚೆಲ್ಲಾಟ ಗ್ರಹಚಾರ ಕೆಟ್ಟರೆ ಪ್ರಾಣಕ್ಕೇ ಸಂಕಟ ಎಂದು.

*****

You can leave a response, or trackback from your own site.

Leave a Reply